“ರ್ರಿ..ಎಲ್ಲಿದ್ದೀರಿ?”
“ಲೇ, ಇಲ್ಲೇ ಇದ್ದೇನಿ ಹಾಸ್ಪಿಟಲನಾಗ…ಅದೇಷ್ಟ ಸರತೆ ಫೋನ್ ಮಾಡ್ತಿ…ICUದಾಗ ಫೋನ ಎತ್ತಲಿಕ್ಕೆ ಕೊಡಂಗಿಲ್ಲಾ.. ತಿಳಿಯಂಗಿಲ್ಲಾ” ಅಂತ ನಾ ಅಕಿ ಐದನೇ ಸರತೆ ಫೋನ ಮಾಡಿದ ಮ್ಯಾಲೆ ಸಿಟ್ಟಲೇ ಹೇಳಿದೆ.
“ಅಲ್ಲರಿ ಯಾವಾಗ ಒಂದ ಆರ ಗಂಟೆಕ್ಕ ಹೋಗಿರಿ, ಒಂಬತ್ತಾತು….. ಮತ್ತ ಅಜ್ಜಾ ಹೆಂಗಿದ್ದಾರ ಅಂತ ಕೇಳಲಿಕ್ಕೆ ಫೋನ ಮಾಡಿದೆ” ಅಂತ ಅಂದ್ಲು.
“ಏ, ಗಾಬರಿ ಆಗೋದ ಏನಿಲ್ಲಾ..ಅಜ್ಜಾ ICUದಾಗ ಇದ್ದಾನ, ಸ್ಟೇಬಲ್ ಇದ್ದಾನ…24ತಾಸ್ ವಾಚ್ ಮಾಡಬೇಕಂತ ಡಾಕ್ಟರ ಹೇಳ್ಯಾರ” ಅಂತ ನಾ ಅಂದೆ.
“ಅಲ್ಲಾ, ನಾನೂ ಬರಲೇನ ಬೇಕಾರ”
“ಏ, ನೀ ಬಂದ ಏನ್ಮಾಡ್ತಿ?… ಇಲ್ಲೇ ಯಾರನು ಒಳಗ ಬಿಡಂಗಿಲ್ಲಾ.. ಹಂಗೇನರ ಎಮರ್ಜನ್ಸಿ ಆದರ ನಾ ಹೇಳ್ತೇನಿ….ಹಂಗ ನಾ ಬರೋದು ಲೇಟ್ ಆಗಬಹುದು, ದಾರಿ ಕಾಯಬ್ಯಾಡಾ…ಹಗಲಗಲಾ ಫೋನ ಮಾಡಿ ಜೀವಾನೂ ತಿನ್ನಬ್ಯಾಡಾ” ಅಂತ ಹೇಳಿ ಫೋನ್ ಇಟ್ಟೆ.
ಅದ ಏನ ಆಗಿತ್ತಂದರ ಒಂದ ಹದಿನೈದ ದಿವಸದ ಹಿಂದ ಮಟಾ ಮಟಾ ಮಧ್ಯಾಹ್ನ ನಮ್ಮ ದೋಸ್ತ ದೇಸಾಯಿ ಫೊನ ಮಾಡಿ ’ಅಜ್ಜ ಭಾಳ ಸಿರಿಯಸ್ ಇದ್ದಾನ, ತಿಳವಳ್ಳ್ಯಾಗ ಡಾಕ್ಟರ ಹೇಳಲಿಕ್ಕೆ ಬರಂಗಿಲ್ಲಾ, ಹುಬ್ಬಳ್ಳಿಗೆ ಒಯ್ಯಿರಿ ಅಂತ ಹೇಳಿದ್ದಕ್ಕ ಇಲ್ಲೆ ಲೈಫ್ ಲೈನದಾಗ ಅಡ್ಮಿಟ್ ಮಾಡೇವಿ. ನಾವು ಇವತ್ತ ಬೆಳಿಗ್ಗೆ ಬೆಂಗಳೂರಿಂದ ಬಂದೇವಿ’ ಅಂತ ಹೇಳಿದಾ.
ಅಂವಾ ಅಗದಿ ಖಾಸ ದೋಸ್ತ ಅದರಾಗ ನಾನೂ ಹೆಂಗಿದ್ದರು ಖಾಲಿ ಇದ್ದೆ ಅಂತ ಹಾಸ್ಪಿಟಲಗೆ ಹೋಗಿದ್ದೆ.
ಡಾಕ್ಟರ ಅಜ್ಜನ ಕಂಡೀಶನ್ ಸಿರಿಯಸ್ ಇದ್ದರು ಸ್ಟೇಬಲ್ ‘nothing to worry, ಒಂದೆರಡ ದಿವಸ ನೋಡೋಣ’ ಅಂತ ಹೇಳಿ ಅಡ್ಮಿಟ್ ಮಾಡ್ಕೊಂಡಿದ್ದರು.
ನಾ ಒಂದ ತಾಸ ಅಲ್ಲೇ ಇದ್ದೆ. ಹಂಗ ಅಲ್ಲೇನೂ ಕೆಲಸ ಇದ್ದಿದ್ದಿಲ್ಲಾ ಮ್ಯಾಲೆ ಅವರ ಪೈಕಿ ಮಂದಿನೂ ಇದ್ದರು. ನಾ ನಮ್ಮ ದೇಸಾಯಿಗೆ ಸೈಡಿಗೆ ಕರದ
’ದೋಸ್ತ..ಭಾಳ ಕಾಳಜಿ ಮಾಡ ಬ್ಯಾಡ, ನಿಮ್ಮಜ್ಜ 85 ದಾಟ್ಯಾನ, ಜೀವನದಾಗ ಏನ ನೋಡಬೇಕ ಅದನ್ನೇಲ್ಲಾ ನೋಡ್ಯಾನ….ಎಲ್ಲಾರ ಜೀವ ಹೆಂಗಿದ್ದರೂ ಇವತ್ತಿಲ್ಲಾ ನಾಳೆ ಹೋಗೊದ” ಅಂತ ಸಮಾಧಾನ ಮಾಡಿ
“ಭಾಳ ದಿವಸಾದ ಮ್ಯಾಲೆ ಹುಬ್ಬಳ್ಳಿಗೆ ಬಂದಿ, ಸಾವಜಿ ಖಾನಾವಳಿಗೆ ಹೋಗೊಣ ನಡಿ” ಅಂತ ಅವಂಗ ಸೀದಾ ಚೆನ್ನಪೇಟ ಅಂಬಿಕಾ ಸಾವಜಿ ಖಾನಾವಳಿಗೆ ಕರಕೊಂಡ ಹೋಗಿದ್ದೆ. ಅದರಾಗ ಇನ್ನೊಂದ ನಾಲ್ಕ ದಿವಸಕ್ಕ ಶ್ರಾವಣಾ ಬ್ಯಾರೆ ಶುರು ಆಗೋದಿತ್ತ. ಮುಂದ ಅನ್ನಾ- ತವಿ- ಕಟ್ಟಿನಸಾರು ಬಿಟ್ಟರ ಗತಿ ಇರಂಗಿಲ್ಲಾ. ಮ್ಯಾಲೆ ಇವಂಗೂ ಸಾವಜಿ ಅಂದರ ಪಂಚಪ್ರಾಣಾ ಅಂತ ಇಬ್ಬರೂ ಹೋಗಿದ್ವಿ.
ನಂಬದ ಊಟ ಒಂದ ರೌಂಡ ಮುಗದಿತ್ತ ಮತ್ತ ನನ್ನ ಹೆಂಡತಿದ ಫೋನ ಬಂತ..ಏ..ಇಕಿ ಏನ ಕಾಡ್ತಾಳಲೇ.. ಹಗಲಗಲಾ ಫೋನ ಮಾಡಬ್ಯಾಡ ಅಂದರು ಮತ್ತ ಫೋನ ಮಾಡಿದ್ಲಲಾ ಅಂತ ಬೈಕೋತ ಫೋನ ಎತ್ತಿದೆ..
“ರ್ರಿ..ಎಲ್ಲೇ ಇದ್ದೀರಿ” ಅಂತ ಮತ್ತ ಅದನ್ನ ಕೇಳಿದ್ಲು
“ಯಪ್ಪಾ ಎಷ್ಟ ಸರತೆ ಹೇಳಬೇಕು, ಹಾಸ್ಪಿಟಲನಾಗ ಇದ್ದೇನಿ ಅಂತ, ಇನ್ನೂ ಒಂದ ತಾಸ ಆಗ್ತದ ನಂಗ ಬರಲಿಕ್ಕೆ, ಡಾಕ್ಟರ ರೌಂಡ್ಸಗೆ ಬಂದ ಹೋದ ಮ್ಯಾಲೆ ಬರ್ತೇನಿ, ನನ್ನ ದಾರಿ ಕಾಯಬ್ಯಾಡ” ಅಂತ ನಾ ಅನ್ನೋದಕ್ಕ..
“ಹಾಸ್ಪಿಟಲದಾಗ ಇದ್ದೀರಿ?..ಒಂದ ಕೆಲಸಾ ಮಾಡ್ರಿ ಅಲ್ಲಿಂದ ಒಂದ ಸೆಲ್ಫಿ ಹೊಡ್ಕೊಂಡ ನಂಗ ವಾಟ್ಸಪ್ ಮಾಡ್ರಿ” ಅಂದ್ಲು..ನಂಗ ಪಿತ್ತ ನೆತ್ತಿಗೇರತ.
“ಏ, ನಾ ಸುಳ್ಳ ಹೇಳ್ತೇನಿ ಏನಲೇ……ಬೇಕಾರ ಬಾ ನೀನ ಹಾಸ್ಪಿಟಲಗೆ” ಅಂತ ಅಂದ ಬಿಟ್ಟೆ
“ಬಂದೆ ತಡೀರಿ..ಬರ್ತೇನಿ…ಇಲ್ಲೇ ಅಜ್ಜಗ ರವಾ ಗಂಜಿ ಮಾಡಲಿಕ್ಕೆ ಇಟ್ಟೇನಿ ಅದ ಆದ ಕೂಡ್ಲೇ ಅಲ್ಲೇ ಬರ್ತೇನಿ” ಅಂತ ಫೋನ್ ಕಟ್ಟ ಮಾಡಿದ್ಲು…ನಂಗ ಎದಿ ಧಸಕ್ಕಂತ.
ಅದೇನ ಆಗಿತ್ತಂದರ ನಾನೂ ನಮ್ಮ ದೋಸ್ತ ಅತ್ತಲಾಗ ಸಾವಜಿ ಖಾನಾವಳಿಗೆ ಹೋಗೊದಕ್ಕ ದೇಶಪಾಂಡೆ ಡಾಕ್ಟರ ರಾತ್ರಿ ಸಲೈನ ಏನ ಬ್ಯಾಡ, ಅರ್ದಾ ವಾಟಗಾ ರವಾ ಗಂಜಿ ಕುಡಿಸಿ ಬಿಡರಿ ಅಂತ ಹೇಳಿದ್ದರಂತ. ಅದಕ್ಕ ನಮ್ಮ ದೇಸಾಯಿ ಹೆಂಡ್ತಿ ವೀಣಾ ರವಾ ಗಂಜಿ ಮಾಡಿಸ್ಗೊಂಡ ಹೋಗಲಿಕ್ಕೆ ನಮ್ಮ ಮನಿ ಹತ್ತರ ಆಗತದ ಅಂತ ಸೀದಾ ನಮ್ಮನಿಗೆ ಹೋಗಿ ಬಿಟ್ಟಿದ್ಲು. ಅದರಾಗ ಈ ನಮ್ಮ ದೋಸ್ತ ಹೆಂಡ್ತಿಗೆ ಹೇಳಲಾರದ ಒಂದಕ್ಕೂ ಹೋಗಂಗಿಲ್ಲಾ ಈ ಮಗಾ ನಾನು ಆಡ್ಯಾ ಸಾವಜಿಗೆ ಹೊಂಟೇವಿ ಅಂತ ಅಕಿ ಕಿವ್ಯಾಗ ಹೇಳಿ ಬಂದಿದ್ದಾ. ಅಕಿ ಸೀದಾ ನನ್ನ ಹೆಂಡತಿಗೆ
’ಅಯ್ಯ..ಏಳ ಗಂಟೇಕ್ಕ ಇಬ್ಬರು ಸಾವಜಿಗೆ ಜಿಗದಾರ, ಅವರೇಲ್ಲೆ ICU ಒಳಗ ಇದ್ದಾರ..ಚೆನ್ನಪೇಟದಾಗ ತಾವ ಮಲ್ಯಾನ saline ಹಚ್ಚಿಸಿಗೊಳ್ಳಿಕ್ಕೆ ಹೋಗ್ಯಾರ, ಅವರಿದ್ದಿದ್ದರ ನಾ ಯಾಕ ಬರ್ತಿದ್ದೆ ಮಳ್ಯಾಗ ಗಂಜಿ ವಯಲಿಕ್ಕೆ’ ಅಂತ ನನ್ನ ಹೆಂಡತಿಗೆ ಬೆಂಕಿ ಹಚ್ಚಿ ಅದರಾಗ ಗಂಜಿ ಕುದಿಸಿಗೊಂಡ ಹೋಗಿದ್ಲು.
ಏನ್ಮಾಡ್ತೀರಿ ಹಿಂತಾವರಿಗೆ. ಒಟ್ಟ ಯಾರದರ ಸಂಸಾರ ಛಂದ ನಡದದ ಅಂದರ ಮಂದಿಗೆ ನೋಡಲಿಕ್ಕೆ ಆಗಂಗಿಲ್ಲಾ ಬಿಡ್ರಿ, ಅಲ್ಲಾ ಪಾಪ ಆ ವೀಣಾಂದ ಏನ ತಪ್ಪ ಇಲ್ಲ ಬಿಡ್ರಿ ಅಜ್ಜಗ ಗಂಜಿ ಕೊಡ್ರಿ ಅಂತ ಡಾಕ್ಟರ ಹೇಳಿದ್ರು, ಅಕಿ ಭಡಾ ಭಡಾ ನಮ್ಮನಿ ಹತ್ತರ ಅದ ಅಂತ ಸೀದಾ ಹೋಗಿ ಬಿಟ್ಟಳು.
ಅಲ್ಲಾ ನನಗ ಫೋನ ಮಾಡಿದ್ದರ ನಾ ಗಂಜಿ ಏನ್ ಸಾವಜಿ ಖಾನಾವಳಿಯಿಂದ ಶೇರವಾ’( ಗ್ರೇವಿ) ನ ತಂದ ಕೊಡ್ತಿದ್ದೆ. ಹೆಂಗಿದ್ದರೂ ಅಜ್ಜಾಂದ ಎರಡ ದಿವಸದಿಂದ ಮೋಶನ್ ಬ್ಯಾರೆ ಕ್ಲೀಯರ್ ಆಗಿದ್ದಿಲ್ಲಾ ಎರಡ ಚಮಚಾ ಖೀಮಾ ಶೇರವಾ ಕುಡದಿದ್ದರ ಎಲ್ಲಾ ಸ್ವಚ್ಛ ಆಗ್ತಿತ್ತ, ಎನಿಮಾ ಕೊಡದ ಬ್ಯಾಡ.
ಅಲ್ಲಾ, ನನಗ ತಲಿ ಕೆಟ್ಟಿದ್ದ ನನ್ನ ಹೆಂಡ್ತಿ ಮ್ಯಾಲೆ, ಇಕಿ ನನಗ ನಾ ಎಲ್ಲೇರ ಹೋದಾಗ ಸುಳ್ಳ ಹೇಳಲಿಕತ್ತೇನಿ ಅಂತ ಡೌಟ ಬಂದರ ಸಾಕ ಒಂದ ಸೆಲ್ಫಿ ತೊಗೊಂಡ ಅಲ್ಲಿಂದ whatsapp ಮಾಡ್ರಿ ಅಂತ ಗಂಟ ಬಿಳ್ತಾಳ. ಈ ಸುಡಗಾಡ technology ಬಂದ ಮ್ಯಾಲೆ ಈ ಗಂಡಂದರ ಜೀವ ಅಂತೂ ಇಷ್ಟ miserable ಆಗೇದಲಾ. ಅಲ್ಲಾ as it is ಗಂಡಂದರ ಲೈಫ್ miserable ಇರ್ತದ ಈಗ ಅದ ಇನ್ನಿಷ್ಟ ಹಳ್ಳಾ ಹಿಡದ ಹೋಗೆದ.
ಈ ’ಗಂಡ ಎಲ್ಲಿದ್ದಾನ ಅಲ್ಲಿಂದ ಸೆಲ್ಫಿ whatsapp ತರಿಸ್ಗೊಳೊ’idea ನನ್ನ ಹೆಂಡತಿಗೆ ಹೇಳಿ ಕೊಟ್ಟೋಕಿ ನಮ್ಮ ದೋಸ್ತ ಸಂಜ್ಯಾನ ಹೆಂಡ್ತಿ, ಆ ಮಗಾ ಮೂರ ತಿಂಗಳಿಗೊಮ್ಮೆ ಬಂಡಿಪುರಕ್ಕ ಫೋಟೊಗ್ರಾಫಿಗೆ ಅಂತ ಬ್ಯಾಂಕಾಕ್ ಹೋಗ್ತಿದ್ದಾ, ಒಂದ ಸರತೆ ಬ್ಯಾಂಕಾಕನಿಂದ selfie ತೊಗೊಂಡ ಯಾರಿಗೋ ಕಳಸಲಿಕ್ಕೆ ಹೋಗಿ ತನ್ನ ಹೆಂಡ್ತಿಗೆ ಕಳಿಸಿ ಸಿಕ್ಕೊಂಡಾ, ಆವಾಗಿಂದ ಅಕಿ ಅವಂಗ ದಿನಕ್ಕ ಮೂರ ಸರತೆ ಅವಂದ ಸೆಲ್ಫಿ whatsapp ಮಾಡಿಸ್ಗೊತಾಳ.
ಗುರವಾರಕ್ಕೊಮ್ಮೆ ಸಾಯಿ ಗುಡಿಗೆ ಹೊಂಟೇನಿ ಅಂತ ಅಂದರ
’ಅಲ್ಲಿಂದ ಒಂದ selfie whatsapp ಮಾಡ್ರಿ’ ಅಂತಿದ್ಲು. ಅಂವಾ ತಲಿಕೆಟ್ಟ
’ನಂದ ಕಳಸಲೋ ಇಲ್ಲಾ ಸಾಯಿಬಾಬಾಂದ ಕಳಸಲೋ’ ಅಂತ ಕೇಳ್ತಿದ್ದಾ.
’ಏ, ಬಾಬಾನ ಜೋತಿನ ಕಳಸರಿ, ಇಬ್ಬರದು ದರ್ಶನ ಆಗ್ತದ’ ಅಂತಿದ್ಲು.
ಹಂಗ ಮೊದ್ಲ ಸಾಯಿಬಾಬಾನ ಗುಡಿಯಿಂದ ಪ್ರೂಫ್ ಅಂತ ಮನಿಗೆ ಬರ್ತ ದೊನ್ನಿ ಒಳಗ ಪ್ರಸಾದ ತೊಗೊಂಡ ಬರ್ತಿದ್ದಾ ಆದರ ಇಂವಾ ಒಮ್ಮೋಮ್ಮೆ ರಾತ್ರಿ ಹನ್ನೇರಡ ಗಂಟೆಕ್ಕ ಬರೋದ ನೋಡಿ ಅಕಿ selfie is must ಅಂತಿದ್ಲು. ಹಂಗ ಅಂವಾ ಅಲ್ಲಿಂದ ಮತ್ತ ಎಲ್ಲೆ ಹೋಗಿರ್ತಿದ್ದಾ ಅದೇಲ್ಲಾ ಬ್ಯಾಡ ಈಗ.
ಅವನ ಹಣೇಬರಹ ಹಿಂಗ ಆಗಿತ್ತಂದರ ಅಕಿನ್ನ ಬಿಟ್ಟ ಎಲ್ಲೇರ ಒಂದ ತಾಸ ಹೊದರ ಸಾಕ selfie whatsapp ಮಾಡ ಅಂತಿದ್ಲು, ಒಮ್ಮೊಮ್ಮೆ live location share ಮಾಡ ಅಂತ ಹೇಳ್ತಿದ್ಲು. ಅಲ್ಲಾ ಮೊದ್ಲ ಕಲತೊಕ್ಕಿನ್ನ ಮಾಡ್ಕೊಂಡ ತಪ್ಪ ಮಾಡ್ಯಾನ ಮ್ಯಾಲೆ ಅಕಿಗೆ ಸ್ಮಾರ್ಟ ಫೋನ ಬ್ಯಾರೆ ಕೊಡಸಿ ಈಗ ಅನಭವಸಲಿಕತ್ತಾನ ಇಷ್ಟ.
ಇನ್ನ ಅಕಿದ ನೋಡಿ ಈಗ ನನ್ನ ಹೆಂಡ್ತಿನೂ ಕಲತಾಳ.
ಏನ ಹಣೇಬರಹನೋ ಏನೋ ಗಂಡಂದರದ ICUದಾಗ ಇದ್ದರು ಬಿಡಂಗಿಲ್ಲಾ ICE CUBEದಾಗ ಇದ್ದರೂ ಬಿಡಂಗಿಲ್ಲಾ.
ನಾ ಇತ್ತಲಾಗ ಸಾವಜಿ ಖಾನಾವಳಿಯಿಂದ ಮನಿಗೆ ಬರೋದರಾಗ ಹನ್ನೊಂದುವರಿ ಆಗಿತ್ತ, ನನ್ನ ಹೆಂಡತಿ ಮಲ್ಕೊಂಡಿದ್ಲು..ಆದರೂ safetyಗೆ ಇರಲಿ ಅಂತ ನಾ ಬೆಡರೂಮ್ ಒಳಗ ಅಕಿ ಬಾಜುಕ ಮಲ್ಕೊಂಡ ಒಂದ selfie ತೊಗೊಂಡ ಅಕಿಗೆ ಕಳಸಿ ನನ್ನ ಪಾಡಿಗೆ ನಾ ಮಲ್ಕೊಂಡೆ…
ಅಲ್ಲಾ ಮುಂಜಾನೆ ಎದ್ದ
“ರ್ರಿ..ನಿನ್ನೆ ರಾತ್ರಿ ಎಲ್ಲೇ ಇದ್ದರಿ….ಯಾರ ಜೊತಿ ಇದ್ದರಿ…ಅಲ್ಲಿಂದ selfie ಕಳಸಿರೇನ?” ಅಂತ ಕೇಳಿದ್ರ ಏನ ಮಾಡ್ತೀರಿ?