ಸ್ಟೇಟಸ್ ಗಳ ಸಮಾರಾಧನೆ…..

ಇದ ಒಂದ ವರ್ಷದ ಹಿಂದಿನ ಮಾತ, ನಮ್ಮ ಪಮ್ಯಾ ಮುಂಜ-ಮುಂಜಾನೆ ಫೋನ ಮಾಡಿ ’ನಾಡದ ನಮ್ಮಪ್ಪನ ಸೀಮ ಇಟ್ಗೋಳೊದ ಅದ ನಿಮ್ಮವ್ವನ ಕರಕೊಂಡ ಬಾ’ ಅಂದಾ. ನಂಗ ಒಮ್ಮಿಕ್ಕಲೇ ಗಾಬರಿ ಆತ, ನಂಗ ಅವರಪ್ಪ ಹೋಗಿದ್ದ ಗೊತ್ತ ಇದ್ದಿದ್ದಿಲ್ಲಾ, ಇಂವಾ ಡೈರೆಕ್ಟ ವೈಕುಂಠ ಸಮಾರಾಧನಿಗೆ ಕರದನಲಾ ಅಂತ
’ಏ,..ನಿಮ್ಮಪ್ಪ ಯಾವಾಗ ಹೋದಾ ನಂಗ ಗೊತ್ತ ಇಲ್ಲಲಾ’ ಅಂತ ನಾ ಅಂದರ
’ಏ, ಇವತ್ತಿಗೆ ಹನ್ನೊಂದ ದಿವಸ ಆತ..ನಿಂಗ ಗೊತ್ತಾಗಿಲ್ಲೇನ, ನಾ ನೀ ಅವತ್ತ ಬಂದಿ ಅಂತ ತಿಳ್ಕೊಂಡ ಕರದೆ’ ಅಂತ ಅಂದಾ. ಅಲ್ಲಾ ಪಾಪ ಅಂವಾ ಅವರಪ್ಪ ಸತ್ತಾಗ ಬ್ಯುಸಿ ಇದ್ದಾ ಹಿಂಗಾಗಿ ಯಾರ ಬಂದಿದ್ದರು ಯಾರ ಬಿಟ್ಟಿದ್ದರು ಅಂತ ಗೊತ್ತಾಗಿದ್ದಿಲ್ಲಾ. ಅಂವಾ ನಾನೂ ಅವತ್ತ ಬಂದ ಹೆಗಲ ಕೊಟ್ಟೇನಿ ಅಂತ ತಿಳ್ಕೊಂಡ ಆ ಭಿಡೆಕ್ಕ ವೈಕುಂಠ ಸಮಾರಾಧನಿಗೆ ಕರದಿದ್ದಾ.
ಹಂಗ ಅಂವಾ ನಮಗ ದೂರಿಂದ ರಿಲೇಟಿವ್, ಆದರ ಇದ್ದೂರಾಗ ಇದ್ವಿ. ಅದರಾಗ ಅವರಪ್ಪಾ ನಮ್ಮಪ್ಪನ ದೋಸ್ತ ಬ್ಯಾರೆ. ನಾ ನನಗ ಯಾಕ ಯಾರೂ ಹೇಳೇಲಾ ಅಂತ ಒಂದ ಮೂರ-ನಾಲ್ಕ ಮಂದಿಗೆ ಕೇಳಿದರ
’ಏ….ನಮಗೂ ಏನ ಹೇಳಿದ್ದಿಲ್ಲಾ. ಅಂವಾ ಏನ ಅವರಪ್ಪ ಸತ್ತಾಗ ವಾಟ್ಸಪ್ ಸ್ಟೇಟಸ್ ಇಟ್ಟಿದ್ದನಲಾ ನಾವ ಅದನ್ನ ನೋಡೆ ಹೋಗಿದ್ವಿ, ನೀ ಸ್ಟೇಟಸ್ ನೋಡಲಿಲ್ಲೇನ?’ ಅಂದ ಬಿಟ್ಟರ. ನಂಗ ತಲಿ ಗರಮ್ ಆತ.
ಅಲ್ಲರಿ ಹೆಂತಾ ಜನಾ ಅಂತೇನಿ, ಅಂವಾ ’ನಮ್ಮಪ್ಪ ಸತ್ತಾನ’ ಅಂತ ಸ್ಟೇಟಸ್ ಇಟ್ಟಿದ್ದನಂತ ನಾವ ಅದನ್ನ ನೋಡಿ ಹೋಗಬೇಕಂತ. ಏನ ಕಾಲ ಬಂತ ಅಂತೇನಿ.
ನಾ ಒಟ್ಟ ವಾಟ್ಸಪ್ ಒಳಗ ಸ್ಟೇಟಸ್ ನೋಡಂಗಿಲ್ಲಾ, ಇಡಂಗಿಲ್ಲಾ. ಆದರ ಮಂದಿಗೆ ಈ ಸುಡಗಾಡ ಸ್ಟೇಟಸ್ ಇಡೋದ ನೋಡೊದ ಅದ ಒಂದ ಸ್ಟೇಟಸ್ ಆಗೇದ.
ಇನ್ನ ನಂದೇನಿದ್ದರು ಫೇಸಬುಕ್ ಸ್ಟೇಟಸ್ ಇಷ್ಟ. ಅದು ಆವಾಗ ಇವಾಗ ಇಷ್ಟ, ಹುಚ್ಚುಚಾಕಾರ ಸ್ಟೇಟಸ್ ಹಾಕಿ ಕಾಂಟ್ರೋವರ್ಸಿ ಮಾಡ್ಕೊತೇನಿ ಆ ಮಾತ ಬ್ಯಾರೆ. ಇವತ್ತ ನಿಮ್ಮ ಜೊತಿ ಒಂದಿಷ್ಟ ನನ್ನ ಫೇಸಬುಕ್ ಸ್ಟೇಟಸ್ ಹಂಚಗೋತೇನಿ ಓದರಿ.

ಒಂದ ಸರತೆ ನನ್ನ ಹೆಂಡತಿ ಫೋನ ಮಾಡಿದ್ದ ವಿಷಯ ಸ್ಟೇಟಸ್ ಹಾಕಿದ್ದೆ, ಆ ಸ್ಟೇಟಸ್ ಏನಿತ್ತಂದರ

“ರ್ರಿ, ಎಲ್ಲಿದ್ದೀರಿ”?
“ಆಫೀಸನಾಗ, ಯಾಕ ಏನಾತ?”
“ಏನಿಲ್ಲಾ, ಮಂಗಳಸೂತ್ರ ಕಟಗರಸ್ತ, ಅದಕ್ಕ ಆರಾಮ ಇದ್ದಿರೀಲ್ಲೊ ಅಂತ ಕೇಳಲಿಕ್ಕೆ ಫೋನ ಮಾಡಿದೆ”
“ಭಾಳ ಶಾಣ್ಯಾಕಿದ್ದಿ, ಫೋನ್ ಇಡ”
“ರ್ರೀ,ಅನ್ನಂಗ ಬರಬೇಕಾರ ಮಂಗಳಸೂತ್ರಾ ಪೋಣಸಲಿಕ್ಕೆ ನೈಲನ್ ದಾರ ತೊಗಂಡ ಬರ್ರೀ”
“ಲೇ, ಮೂರ ತಿಂಗಳ ಹಿಂದ ಒಂದ ದೊಡ್ಡ ದಾರದುಂಡಿನ ತಂದ ಕೊಟ್ಟಿದ್ನೇಲಾ”

“ಏ,ಅದ ಖಾಲಿ ಆಗೇದ. ನೀವು ಗಟಾಯಿಸಿದ್ದ ಮಂಗಳಸೂತ್ರ ಮಾಡಸೊತನಕ ಇದ ಹಿಂಗ ಕಟಗರಸ್ಕೋತ ಇರೋದ”.

ಇದ ನನ್ನ ಸ್ಟೇಟಸ್ ಇತ್ತ. ಇದಕ್ಕ ಕೆಳಗ ಹೆಂತಿಂತಾ ಕಮೆಂಟ್ ಬಂದ್ವ ಅಂದರ
’ಅಲ್ಲಾ ಎರಡ ಮಕ್ಕಳ ಆಗಿ ಆಪರೇಶನ್ ಆದರೂ ಇನ್ನೂ ಮಂಗಳಸೂತ್ರ ಕಟಗರಸೋದ ನಿಲ್ಲವಲ್ತಲೋ’
ಅಂತ ನಮ್ಮ ಅತ್ಯಾ ಕಮೆಂಟ್ ಮಾಡಿದರ,
’ಹೆಂಡ್ತಿಗೆ ಒಂದ ಗಟಾಯಿಸಿದ್ದ ಮಂಗಳಸೂತ್ರ ಮಾಡಸಲಿಕ್ಕೆ ಆಗಂಗಿಲ್ಲಾ ಅಂದರ ನೀ ಹೆಂತಾ ಗಂಡ(ಸ)ಲೇ’
ಅಂತ ಬೀಗರ ಕಡೆದವರ ಕಮೆಂಟ್ ಮಾಡಿದರ.
ಏನ್ಮಾಡ್ತೀರಿ, ಯಾಕರ ಫೇಸಬುಕ್ ನಾಗ ಸ್ಟೇಟಸ್ ಹಾಕಿದ ಅನ್ನೊ ಹಂಗ ಆತ.

ಇನ್ನ ಮತ್ತೊಂದ ಸ್ಟೇಟಸ್ ನೋಡ್ರಿ

ಮುಂಜಾನೆ ಹಾಸಗಿಂದ ಎದ್ದ ಕೂಡಲೇ ಹೆಂಡತಿ ಗಂಡಗ ನಮಸ್ಕಾರ ಮಾಡಿ ಮುಂದಿನ ಕೆಲಸಕ್ಕ ಹೋಗಬೇಕು ಅಂತ ಪದ್ಧತಿ…ಯಾಕ ಗೊತ್ತನ?
ಯಾಕಂದರ ಹೆಂಡ್ತಿ ರಾತ್ರಿ ಬೆಳತನಕ ಗಂಡಗ ಹಾಸಿಗ್ಯಾಗ ಹಾಕಿ ಒದ್ದಿರತಾಳ ಅದಕ್ಕ.
ಹಿಂಗ ಬೆಳತನಕ ಒದ್ದ ಮುಂಜಾನೆ ಎದ್ದ ನಮಸ್ಕಾರ ಮಾಡೋ ಹೆಂಡ್ತಿಗೆ ಆದರ್ಶ ಹೆಂಡ್ತಿ ಅಂತ ಕರಿತಾರ.

ಹಂಗ ಯಾರದರ ಹೆಂಡ್ತಿ ಮುಂಜಾನೆ ಎದ್ದ ಗಂಡಗ ನಮಸ್ಕಾರ ಮಾಡಂಗಿಲ್ಲಾ ಅಂದರ ಅಕಿ ಆದರ್ಶ ಅಲ್ಲಾ ಅಂತ ಅಲ್ಲ ಮತ್ತ…ಅದರ ಅರ್ಥಾ ಅಕಿ ರಾತ್ರಿ ಗಂಡಗ ಒದ್ದಿಲ್ಲಾ ಅಂತ ….

ಇದ ಒಂದ ಸ್ಟೇಟಸ್. ಇದನ್ನ ನೋಡಿ ಜಗ್ಗೆ ಮಂದಿ ಕಮೆಂಟ್ ಮಾಡಿದರ, ಕಮೆಂಟ ಏನ
’ಮುಂಜಾನೆ ಎದ್ದ ಕೂಡಲೇ ಹೆಂಡತಿ ಗಂಡಗ ನಮಸ್ಕಾರ ಮಾಡಬೇಕೊ ಇಲ್ಲೋ’ ಅಂತ ಡಿಬೇಟ್ ಮಾಡಿದರ. ಅಲ್ಲಾ ಇದ ಕಲಿಯುಗ ಯಾ ಹೆಂಡ್ತಿ ಗಂಡಗ ಎದ್ದ ಕೂಡಲೇ ನಮಸ್ಕಾರ ಮಾಡ್ತಾಳ ಹೇಳ್ರಿ, ನಾ ದೊಡ್ಡಿಸ್ತನಾ ಮಾಡಿ ಏನ ದಿವಸಾ ನನ್ನ ಹೆಂಡ್ತಿ ಎದ್ದ ಕೂಡಲೇನ ನಮಸ್ಕಾರ ಮಾಡ್ತಾಳ ಅನ್ನೋರಗತೆ ಸ್ಟೇಟಸ್ ಹಾಕಿ ಹಚಾ-ಹುಚಾ ಅನಿಸ್ಗೊಂಡೆ

ಮುಂದ ಒಂದ ಸರತೆ october 4ಕ್ಕ ನನ್ನ ಹೆಂಡ್ತಿದ ಮೂವತ್ತ ನಾಲ್ಕನೇ ಬರ್ಥಡೇ ಇತ್ತ, ಅವತ್ತ ಮಹಾಲಯ ಅಮವಾಸಿ ಬ್ಯಾರೆ ಬಂದಿತ್ತ, ಅವತ್ತ ಹೆಂಡ್ತಿಗೆ ವಿಶ್ ಮಾಡ್ಲಿಕ್ಕೆ ಈ ಸ್ಟೇಟಸ್ ಹಾಕಿದ್ದೆ.

ಇವತ್ತ ಮಹಾಲಯ ಅಮವಾಸ್ಯೆ, ಸರ್ವ ಪಿತೃ ಅಮವಾಸ್ಯೆ. ನಮ್ಮ ಪೂರ್ವಜರನೇಲ್ಲಾ ನೆನಪ ಮಾಡ್ಕೊಂಡ ಮಾಡ್ಕೊಂಡ ಪಕ್ಷ ಮಾಡಿ ನೀರ ಬಿಡೋದು………
ಮ್ಯಾಲೆ ನನ್ನ ಹೆಂಡತಿ ಪ್ರೇರಣಾನ 34ನೇ birthday….ಇದನ್ನೇನ ನೆನಪ ಮಾಡ್ಕೋಳೊ ಪ್ರಸಂಗ ಬರಂಗಿಲ್ಲಾ. ಅಲ್ಲಾ ಅಕಿ ಮರಿಲಿಕ್ಕೆ ಬಿಡಂಗಿಲ್ಲಾ. ಅದ ಅಲ್ಲದ ಇವತ್ತ world animal day ಬ್ಯಾರೆ….
ನನಗರ ಏನ celebrate ಮಾಡ್ಬೇಕು ಏನ ಬಿಡಬೇಕು ತಿಳಿವಲ್ತು.
ಹಂಗ ಹೆಂಡತಿ birthday celebrate ಮಾಡಿದರ ನಮ್ಮ ಪೂರ್ವಜರ ತಪ್ಪ ತಿಳ್ಕೋತಾರ…
ಇನ್ನ ಹೆಂಡ್ತಿ ಬರ್ಥಡೇ ದಿವಸ world animal day celebrate ಮಾಡಿದರ ಹೆಂಡತಿ ತಪ್ಪ ತಿಳ್ಕೋತಾಳ…
ಹಂಗ ಹೆಂಡತಿ birthday ಮತ್ತ world animal day ಎರಡು ಕ್ಲಬ್ ಮಾಡಿ celebrate ಮಾಡಬಹುದು ಆದರ ಪೂರ್ವಜರ ಪಕ್ಷ ಮಾತ್ರ seperate ಮಾಡಬೇಕು.

i am really confused.

ಅಂತ ಸ್ಟೇಟಸ್ ಹಾಕಿದ್ದೆ, ಈ ಸ್ಟೇಟಸ್ ನೋಡಿ ಮಂದಿ ನನ್ನ ಹೆಂಡ್ತಿಗೆ ವಿಶ್ ಮಾಡಿದರ ಖರೆ ಆದರ ಕೆಳಗ ಹೆಂತಿಂತಾ ಕಮೆಂಟ್ ಮಾಡಿದರ ಅಂದ್ರಿ
ಯಾರೊ ಹಿರೇಮನಷ್ಯಾರ
’ಏನಪಾ ಹೆಂಡ್ತಿ ಬರ್ಥಡೇ ದಿವಸ ಪಿತೃ ಪಕ್ಷದ ಬಗ್ಗೆ ಬರದಿ ಅಲಾ, ವಳತ ಅನ್ನ’ ಅಂತ ಅಂದರು, ಅಲ್ಲಾ ಅಕಿ ಬರ್ಥಡೇ ದಿವಸ ಸರ್ವ ಪಿತೃ ಅಮವಾಸಿ ಬಂದರ ನಾ ಏನ್ಮಾಡಬೇಕ.
ಮತ್ತೊಬ್ಬರ
’ ಏ..ಹೆಂಡ್ತಿ ಬರ್ಥಡೇ ಕ್ಕ world animal day ಅಂತ ಬರದಿ ಅಲಾ’ ಅಂದರು.
ಅಲ್ಲಾ october 4th is world animal day. ಅವತ್ತ ಅಕಿ ಹುಟ್ಟಿದರ ಪಾಪ ಅದರಾಗ ಅಕಿದೇನ ತಪ್ಪ?
ಇನ್ನ ಭಾಳ ಮಂದಿಗೆ ಸಿಟ್ಟ ಬಂದದ್ದ ಹೆಂಡ್ತಿ ವಯಸ್ಸ್ ಓಪನ್ ಆಗಿ 34 ಅಂತ ಬರದ ಕಾಟ ಹೊಡದ ಹಾಕಿದ್ದ. ಹಂಗ ಹೆಣ್ಣ ಮಕ್ಕಳಿಗೆ ವಯಸ್ಸ ಕೇಳಬಾರದಂತ ಅದರಾಗ ನಾ ಡೈರೆಕ್ಟ ಫೇಸಬುಕ್ ಒಳಗ ಹಾಕಿ ಅಕಿ ಫ್ರೇಂಡ್ಸ್ ಕಡೆ ಎಲ್ಲಾ ಛೀ..ಥೂ…ಅನಿಸ್ಗೊಂಡೆ. ಅಲ್ಲಾ ಅವತ್ತ ಲಾಸ್ಟ ಬಿಡ್ರಿ, ಹಂಗ ಆ ಮಾತಿಗೆ ಈಗ ಎಂಟ ವರ್ಷ ಆತ ನಾ ಮತ್ತೊಬ್ಬರದ ಬಿಡ್ರಿ ನನ್ನ ಹೆಂಡ್ತಿ ವಯಸ್ಸ ಸಹಿತ ಕೇಳಲಿಕ್ಕೆ ಹೋಗಿಲ್ಲಾ.
ಹಿಂಗೇಲ್ಲಾ ಹುಚ್ಚುಚಾಕಾರ ಫೇಸಬುಕ್ ಸ್ಟೇಟಸ್ ಹಾಕಿ ನಾ ಏನೇನರ ಕಂಟ್ರೋವರ್ಸಿ ಮಾಡ್ಕೋತಿರ್ತೇನಿ. ಆದರೂ ನಾ ಏನ ಇವತ್ತು ಫೇಸಬುಕ್ ನಾಗ ಸ್ಟೇಟಸ ಹಾಕೋದ ಬಿಟ್ಟಿಲ್ಲ ಮತ್ತ.
ಆದರೂ ಜನಾ ಏನ ಅನ್ನರಿ ತಮಗೊಂದ ಸ್ವಂತ ಸ್ಟೇಟಸ್ ಇರಲಿ ಬಿಡಲಿ ಫೇಸಬುಕ್, ವಾಟ್ಸಪ್ ಒಳಗ ಸ್ಟೇಟಸ್ ಹಾಕೋದ ಬಿಡಂಗಿಲ್ಲಾ. ನನ್ನ ಹಿಡಕೊಂಡ ಹೇಳಲಿಕತ್ತೇನಿ ಮತ್ತ. ಇದು ಒಂದ ಚಟಾ ಆಗೇದ ಅಂದರೂ ಅಡ್ಡಿಯಿಲ್ಲಾ. ಮುಂಜಾನೆ ಎದ್ದ ಕೂಡ್ಲೇನ ಮಂದಿ ಸ್ಟೇಟಸ್ ನೋಡೊದ, ಕಮೆಂಟ್ ಮಾಡೋದು.
ಒಂಥರಾ ದಿವಸಾ ಬೆಳಕ ಹರದರ ಈ ಸ್ಟೇಟಸಗೊಳದ್ದ ಸಮಾರಾಧನೆ ಶುರು ಆಗ್ತದ.
ಎಲ್ಲಾ ಬಿಟ್ಟ ಇವತ್ತ ಈ ಸ್ಟೇಟಸ್ ವಿಷಯ ಬರಿಲಿಕ್ಕೆ ಎರಡ ಕಾರಣ ಒಂದೂ ಈ ಫೇಸಬುಕ್, ವಾಟ್ಸಪ್ ಎರೆಡು ಬಂದಿದ್ದ ಈ ಫೆಬ್ರುವರಿ ತಿಂಗಳ ಒಳಗ.
ಇನ್ನೊಂದ ಆ ಪಮ್ಯಾನ ಅಪ್ಪಂದ ಮೊನ್ನೆ ವರ್ಷಾಂತಕ ಇತ್ತಂತ, ಅಂವಾ invitation card ಸ್ಟೇಟಸ್ ಇಟ್ಟಿದ್ದನಂತ, ಇನ್ನ ನಾ ವಾಟ್ಸಪ್ ಸ್ಟೇಟಸ್ ನೋಡಂಗಿಲ್ಲಾ ಹಿಂಗಾಗಿ ನಾ ಹೋಗಲಿಲ್ಲಾ.
ಸ್ಟೇಟಸ್ ನೋಡಲಾರದ ತಪ್ಪಿಗೆ ರವಾ ಪಾಯಸ, ಕುಂಬಳಕಾಯಿ ಘಾರ್ಗಿ ತಪ್ಪಿಸ್ಗೊಂಡೆ ಅನ್ನರಿ.

One thought on “ಸ್ಟೇಟಸ್ ಗಳ ಸಮಾರಾಧನೆ…..

Leave a Reply to Prashant Sattigeri Cancel reply

Your email address will not be published.

This site uses Akismet to reduce spam. Learn how your comment data is processed.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ