ಕಡಿಮನಿ ಕಡಕೋಳ ’ಕಡಾ’ ಮಾಮಿ…

“ರ್ರಿ, ಕಡಕೋಳ ಮಾಮಿ ಬಂದರು, ನನ್ನ ಕೇಳಿದರ ಈಗ ಜಸ್ಟ ಸ್ನಾನಕ್ಕ ಹೋಗೇನಿ ಅಂತ ಹೇಳರಿ” ಅಂತ ಹೇಳಿದೋಕಿನ ನನ್ನ ಹೆಂಡತಿ ಬಚ್ಚಲಮನಿಗೆ ಜಿಗದ ಡಬಕ್ಕನ ಬಾಗಲಾ ಹಕ್ಕೊಂಡ್ಲು. ನಂಗರ ಒಂದು ತಿಳಿಲೇ ಇಲ್ಲಾ. ಈಗರ ಸ್ನಾನ ಮುಗಿಸಿಕೊಂಡ ಹೊರಗ ಬಂದ ’ಶಾಂತಕಾರಮ…ಭುಜಗ ಶಯನಮ್’ ಹೇಳಲಿಕತ್ತೋಕಿ ಒಮ್ಮಿಂದೊಮ್ಮಿಲೆ ಗೇಟ ಸಪ್ಪಳಾದ ಕೂಡಲೇ ಖಿಡಿಕ್ಯಾಗ ಹಣಿಕೆ ಹಾಕಿ ನೋಡಿ ಮತ್ತ ಬಚ್ಚಲಮನಿಗೆ ಓಡಿ ಹೋಗಿ ಬಿಟ್ಟಳು. ನಾ ಇಕಿ ಹಿಂಗ್ಯಾಕ ಮಾಡಿದ್ಲು ಅಂತ ವಿಚಾರ ಮಾಡಬೇಕ ಅನ್ನೋದರಾಗ ಕಡಕೋಳ ಮಾಮಿ ನಡಮನಿತನಕ ಬಂದ ಬಿಟ್ಟಿದ್ದರು.
“ಎಲ್ಲೇ ಇದ್ದಾಳಪಾ ನಿನ್ನ ಹೆಂಡತಿ, ಕಾಣಲಿಕತ್ತಿಲ್ಲಲಾ, ಇನ್ನು ಎದ್ದಾಳೊ ಇಲ್ಲೋ?” ಅಂತ ಮಾಮಿ ತಮ್ಮ ರಾಗಾ ತಗದ ಬಿಟ್ಟಳು.
“ಏ, ಎದ್ದ ಭಾಳೊತ್ತ ಆತ ಮಾಮಿ, ಈಗ ಜಸ್ಟ ಸ್ನಾನಕ್ಕ ಹೋದಲು ಯಾಕ ಏನರ ಕೆಲಸ ಇತ್ತೇನ?” ಅಂತ ನಾ ಅಂದರ.
“ಅಯ್ಯ, ಈಗ ಜಸ್ಟ ಸ್ನಾನಕ್ಕ ಹೋದಲಾ, ಆತ ತೊಗೊ ಇನ್ನ ಅಕಿ ಬರಲಿಕ್ಕೆ ಒಂದ ತಾಸ ಬೇಕ” ಅಂತ ಮಾಮಿ ಅಂದರು. ಅಲ್ಲಾ ಕೆಲಸ ಏನಿತ್ತ ಹೇಳ್ರಿ ಅಂತ ನಾ ಕೇಳಿದರ
“ಏನಿಲ್ಲಪಾ, ನಿಮ್ಮ ಮಾವಗ ಮೆತ್ತಗನಿ ಉಪ್ಪಿಟ್ಟ ಬೇಕಂತ, ಮನ್ಯಾಗ ಕೇಸರಿ ರವಾ ಇರಲಿಲ್ಲಾ,ಹಿಂಗಾಗಿ ಒಂದ ವಾಟಗಾ ಕೇಸರಿ ರವಾ ಕಡಾ ಇಸ್ಗೊಂಡ ಹೋದರಾತು ಅಂತ ಬಂದಿದ್ದೆ” ಅಂತ ಅಂದರು.
ಆವಾಗ ನಂಗ ಎಲ್ಲಾ ಕ್ಲೀಯರ್ ಆತ, ಯಾಕ ನನ್ನ ಹೆಂಡತಿ ಇವರ ಗೇಟ ತಗಿಯೋ ಪುರಸತ್ತ ಇಲ್ಲದ ಸ್ನಾನ ಮಾಡಿ ಬಂದೋಕಿ ಮತ್ತ ವಾಪಸ ಬಚ್ಚಲಕ್ಕ ಜಿಗದ್ಲು ಅಂತ.
ನಮ್ಮ ಕಡಕೋಳ ಮಾಮಿಗೆ ಇಡಿ ಓಣ್ಯಾಗಿನ ಮಂದಿ ’ಕಡಾ’ ಮಾಮಿ ಅಂತ ಕರಿತಾರ. ಅದರಾಗ ಅವರ ಮನಿ ಲಾಸ್ಟಿಗೆ ಇದ್ದದ್ದಕ್ಕ ಅಕಿ ’ಕಡಿಮನಿ ಕಡಕೋಳ ಮಾಮಿ’ ಅಂತ ಫೇಮಸ್ ಆಗಿದ್ದ. ಇನ್ನ ಅಕಿ ಮುಂಜಾನೆ ಎದ್ದ ಕೂಡಲೇ ಬಂದಾಳ ಅಂದ ಕೂಡಲೇ ನನ್ನ ಹೆಂಡತಿಗೆ ಅಕಿ ಏನೋ ಕಡಾ ಕೇಳಲಿಕ್ಕೆ ಬಂದಾಳ ಅಂತ ಗ್ಯಾರಂಟಿ ಇತ್ತ ಹಿಂಗಾಗಿ ಇಕಿ ಅಕಿನ್ನ ನೋಡಿದ ಕೂಡಲೇ ಬಚ್ಚಲಕ್ಕ ಜಿಗದದ್ದು. ಹಂಗ ನಮ್ಮವ್ವ ಮನ್ಯಾಗ ಇದ್ದಿದ್ದಿಲ್ಲಾ ನಮ್ಮ ಪುಣ್ಯಾ ಇಲ್ಲಾಂದರ ನಮ್ಮವ್ವ ಒಂದ ವಾಟಗಾ ಕೇಸರಿ ರವಾ ಕೊಟ್ಟ ಚಹಾ ಮಾಡಿ ಕೊಟ್ಟ ಮ್ಯಾಲೆ ಮುತ್ತೈದಿ ಅನಾಯಸ ದ್ವಾದಶಿ ದಿವಸ ಬಂದಿರಿ ಅಂತ ದ್ವಾದಶಿ ಬಾಗಣಾನೂ ಕೊಟ್ಟ ಕಳಸೋಕಿ.
ಇನ್ನ ನನಗ ಮನ್ಯಾಗ ಯಾವ ಸಾಮಾನ ಎಲ್ಲೆ ಇರ್ತಾವ ರವಾ ಯಾವದು ನುಚ್ಚ ಯಾವದು ಗೊತ್ತಾಗಂಗಿಲ್ಲಾ ಅಂತ ಕಡಕೋಳ ಮಾಮಿಗೆ ಗೊತ್ತ ಆದರು ಒಂದ ಚಾನ್ಸ ತೊಗೊಳೊಣು ಅಂತ
“ನಿಂಗೇನರ ಗೊತ್ತೇನ, ನಿಮ್ಮವ್ವ ರವಾ ಎಲ್ಲಿ ಇಟ್ಟಿರ್ತಾಳ ಅಂತ ಹೇಳಿ” ಅಂತ ಅಡಿಗೆ ಮನಿ ಕಡೆ ಹೆಜ್ಜಿ ಹಾಕೋತ ಒಂದ ಸರತೆ ಕೇಳಿ ನೋಡಿದ್ಲು. ಆದರ ನಾ ಅಕಿನ್ನ ನಡಮನಿ ದಾಟಿ ಮುಂದ ಹೋಗಲಿಕ್ಕೆ ಬಿಡಲೇ ಇಲ್ಲಾ
“ಏ, ನಮ್ಮ ಮನ್ಯಾಗು ಕೇಸರಿ ರವಾ ಇದ್ದಂಗಿಲ್ಲ ಬಿಡ ಮಾಮಿ, ಯಾಕಂದರ ನಿನ್ನೆ ನನ್ನ ಹೆಂಡತಿ ದಪ್ಪ ರವಾದ್ದ ಉದರಬುಕಣಿ ಉಪ್ಪಿಟ್ಟ ಮಾಡಿದ್ದಳು” ಅಂತ ಹೇಳಿ ಅಕಿನ್ನ ನಮ್ಮ ಮನಿಯಿಂದ ರೈಟ ಹೇಳಿ ಕಳಸಿದೆ.
ಅಕಿ ಅತ್ತಲಾಗ ಗೇಟ ತಕ್ಕೊಂಡ ಹೊರಗ ಹೋಗದ ತಡಾ ನನ್ನ ಹೆಂಡತಿ ಬಚ್ಚಲ ಮನ್ಯಾಗಿಂದ ಟಣ್ಣ ಅಂತ ಜಿಗದ ಹೊರಗ ಬಂದ್ಲು.
“ಏನ ಜನಾರಿ, ಕಡಾ ಕೇಳೊದಕ್ಕು ಒಂದ ಲಿಮಿಟ ಇರ್ತದ, ಕೇಳಿದಾಗೊಮ್ಮೆ ಕೊಡ್ತೇವಿ ಅಂತ ವಾರದಾಗ ಮೂರ ಮೂರ ಸರತೆ ಕಡಾ ಕೇಳಿದರ ಹೆಂಗ. ಎಲ್ಲಾ ನಿಮ್ಮವ್ವನ ಕೇಳಿದಾಗ ಒಮ್ಮೆ ಕೊಟ್ಟ ಕೊಟ್ಟ ಚಟಾ ಹಚ್ಚಿಸಿದ್ದ” ಅಂತ ನಮ್ಮವ್ವನ್ನ ಕಡಕೋಳ ಮಾಮಿನ್ನ ಇಬ್ಬರನೂ ನನ್ನ ಹೆಂಡತಿ ಬೈಲಿಕತ್ಲು.
ಹಂಗ ಅಕಿ ಹೇಳೋದು ಖರೇನ. ನಮ್ಮವ್ವಗ ಯಾರ ಏನ ಕಡಾ ಕೇಳಿದ್ರು ಇಲ್ಲಾ ಅಂದ ಗೊತ್ತ ಇಲ್ಲಾ.
“ಅಯ್ಯ, ಪಾಪ, ಇಲ್ಲಾ ಅಂತ ಹೆಂಗ ಅನ್ನಲಿಕ್ಕೆ ಬರತದ, ಕಡಾ ತೊಗೊ ಮತ್ತ ವಾಪಸ ಕೊಡ್ತಾರ” ಅಂತ ನಮಗ ಜೋರ ಮಾಡ್ತಿದ್ದಳು. ನಮ್ಮಪ್ಪಂತೂ ’ಅಕಿ ಯಾರರ ಗಂಡನ್ನ ಕಡಾ ಕೇಳಿದ್ರು ಕೊಡ್ಪ್ ಪೈಕಿನ’ ಅಂತ ಬೈತಿದ್ದಾ.
ಅದರಾಗ ನಮ್ಮವ್ವನ್ನ ನೆನಪಿನ ಶಕ್ತಿ ಒಂದ ಭಾಳ ಕಡಿಮಿ ಇತ್ತ ಹಿಂಗಾಗಿ ಯಾರಿಗರ ಅಕಿ ಏನರ ಕಡಾ ಕೊಟ್ಟರ ಅವರಾಗೆ ವಾಪಸ ಕೊಟ್ಟರ ಇಷ್ಟ ಅದು ರಿಟರ್ನ್ ಆಗತಿತ್ತ. ತಾನಾಗಿ ಎಂದೂ ಯಾರಿಗೂ ವಾಪಸ ಕೊಡ್ರಿ ಅಂತ ಕೇಳಿದೋಕಿ ಅಲ್ಲಾ. ಇನ್ನ ಕಡಕೋಳ ಕಡಾ ಮಾಮಿ ಅಂತು ಮಾತಿನ ಮಲ್ಲಿ, ಹಂಗ ನಮ್ಮವ್ವೇನರ ಒಂದ ಸ್ವಲ್ಪ ಭಿಡೆ ಬಿಟ್ಟ “ಮೊನ್ನೆ ಅಷ್ಟಮಿಗೆ ಶಾಸ್ತ್ರಕ್ಕ ಏನರ ಕರಿಬೇಕು, ಬುರಬುರಿ ಮಾಡಲಿಕ್ಕೆ ಒಂದ ವಾಟಗಾ ಕಡ್ಲಿಹಿಟ್ಟ ಕೊಡ ಅಂತ ಇಸಗೊಂಡ ಹೋಗಿದ್ದರೇಲಾ….” ಅಂತ ಅಂದರ ಸಾಕ
“ಅಯ್ಯ, ನಾ ಕೊಟ್ಟಂಗಿತ್ತ ನೋಡ ಸಿಂಧು, ನಿನ್ನ ಸೊಸಿನ ಒಂದ ಮಾತ ಕೇಳಿ ನೋಡ, ನನ್ನ ಸೊಸಿ ಏನರ ಕೊಟ್ಟಾಳೇನಂತ, ನಾ ಮರದಿವಸ ಕೊಡಂತ ಹೇಳಿದ್ದೆ” ಅಂತ ಜೋರ ಬಾಯಿ ಮಾಡಿ ಅಂದ ಬಿಡೋಕಿ. ನಮ್ಮವ್ವ ಅಕಿ ಧ್ವನಿಗೆ ಹೆದರಿ
“ಏ, ಹಂಗರ ಕೊಟ್ಟಿರಬೇಕ ತೊಗೊರಿ, ನನಗ ಮನ್ಯಾಗ ಆ ಕಡ್ಲಿ ಹಿಟ್ಟಿನ ವಾಟಗಾ ಕಾಣಲಿಲ್ಲಾ ಅದಕ್ಕ ಕೇಳಿದೆ” ಅಂದ ಗಪ್ಪ ಆಗಿ ಬಿಡೋಕಿ. ಅದರಾಗ ಈ ಕಡಾ ಮಾಮಿ ಭಾಳಷ್ಟ ಸರತೆ ಖಾಲಿ ಕೈಲೆ ಬಂದ ನಮ್ಮ ಮನಿ ಪಾತೇಲಿ, ನಮ್ಮ ಮನಿ ವಾಟಗದಾಗ ಕಡಾ ಒಯ್ಯೋಕಿ, ನನ್ನ ಹೆಂಡತಿಗೆ ಆ ಕಡಾ ವಾಪಸ ಬರಲಿ ಬಿಡಲಿ, ನಮ್ಮ ಮನಿ ಪಾತ್ರಿನರ ವಾಪಸ ಕೊಡ ಅಂತ ಹೇಳ್ರಿ ಅಂತ ಅಕಿ ನಮ್ಮವ್ವಗ ಅನ್ನೋಕಿ. ನಾ ನಿಮಗ ಖರೇ ಹೇಳ್ತೇನಿ ವರ್ಷಕ್ಕ ಎರೆಡ ಡಜನ್ ವಾಟಗಾ ಆರ ಬಟ್ಲಾ ನಮ್ಮ ಮನ್ಯಾಗಿಂದ ಗಾಯಬ ಆಗಿರ್ತಾವ.
ಹಂಗ ಅರ್ಧಾ ಈ ಕಡಿ ಮನಿ ಕಡಕೋಳ ಮಾಮಿ ಮನ್ಯಾಗ ಇರ್ತಾವ ಆ ಮಾತ ಬ್ಯಾರೆ. ಆದರೂ ಇಕಿ ಏನೇನ ಕಡಾ ಕೇಳತಿದ್ಲು ಅಬ್ಬಬ್ಬಾ..ಅನಾಹುತ ಹೆಣ್ಣಮಗಳ ಬಿಡ್ರಿ.
ಒಂದೊಂದ ದಿವಸ ಕರೆಕ್ಟ ಮಧ್ಯಾಹ್ನ ಊಟದ ಟೈಮ ಒಳಗ ಬಂದ “ಅಯ್ಯ, ಒಂದ ಅರ್ಧಾ ವಾಟಗಾ ಸಾರ ಇದ್ದರ ಕೊಡ್ವಾ, ನಮ್ಮ ಮನಿಯವರದ ಇಷ್ಟ ಊಟ ಇವತ್ತ, ನಂಬದೇಲ್ಲಾ ಏಕಾದಶಿ ಹಿಂಗಾಗಿ ಬ್ಯಾಳಿ ಬೇಯಸಲಿಕ್ಕೆ ಹೋಗಲಿಲ್ಲಾ” ಅಂತ ಸಾರ ಇಸ್ಗೊಂಡ ಹೋಗೊಕಿ. ಅಕಿ ತೊಗರಿ ಬ್ಯಾಳಿ ಇಸ್ಗೊಂಡರ ಒಂದ ರೀತಿಯಿಂದ ಛಲೋ ಇರ್ತಿತ್ತ, ವಾಪಸ ಬಂದರ ಬರ್ತಿತ್ತ. ಇನ್ನ ಸಾರ ಹೆಂಗ ಇಸ್ಗೋಳ್ಳಿಕ್ಕೆ ಬರತದ. ಅದರಾಗ ನಮ್ಮ ಮನ್ಯಾಗ ಎಲ್ಲಾರೂ ಪಿಸಿ ಮಂದಿ, ನಮ್ಮವ್ವ ನನ್ನ ಹೆಂಡತಿ ಮಾಡಿದ್ದ ಸಾರಿಗೆ ನೂರಾ ಎಂಟ ಹೆಸರ ಇಡೋರ ಇನ್ನ ಮಂದಿ ಮನಿ ಸಾರ ಉಣ್ಣೊರ.
ವಾರದಾಗ ಮಿನಿಮಮ್ ಒಂದ ಸರತೆ ಹೆಪ್ಪಿಗೆ ಮಸರ ಬೇಕ ಅನ್ನೋಕಿ, ಹಂಗ ಮಸರಿಲ್ಲಾ ಮಜ್ಜಿಗೆ ಅದ ಅಂದ್ರ ಒಯ್ತಿದ್ದಿಲ್ಲಾ ಮತ್ತ, ಅಕಿಗೆ ಹೆಪ್ಪಿಗೆ ಮಸರ ಬೇಕಾಗ್ತಿತ್ತ.
ಇನ್ನ ಆವಾಗ ಇವಾಗ ” ಒಂದ ನಾಲ್ಕ ಎಳಿ ಕೊತಂಬರಿ, ಕರಿಬೇವು ಕೋಡ್ವಾ” ಅಂತ ಬರೋಕಿ. ಕೆಲವೊಮ್ಮೆ ನನ್ನ ಹೆಂಡತಿ ತಲಿ ಕೆಟ್ಟ ನಮ್ಮವ್ವ ’ಅದಕ್ಯಾಕ ಅಷ್ಟ ಭಿಡೆ ತೊಗೊಂಡ ಹೋಗ್ರಿ’ ಅನ್ನೊಕಿಂತ ಮುಂಚೆ ’ಅಯ್ಯ ಮಾಮಿ ನಮ್ಮ ಮನ್ಯಾಗೂ ಕೊತಂಬರಿ ಇಲ್ಲಾ’ಅಂತ ಅಂದ ಬಿಡೋಕಿ. “ಯಾಕ ನಿನ್ನೆನ ಸಂತಿಗೆ ಹೋಗಿದ್ದೆ, ಕೊತಂಬರಿ ತಂದಿಲ್ಲಾ” ಅಂತ ನನ್ನ ಹೆಂಡತಿಗೆ ಜೋರ ಮಾಡೋಕಿ. ಅದರಾಗ ಇನ್ನೊಂದ ಮಜಾ ಅಂದರ ವಾರಾ ಕಡಕೋಳ ಮಾಮಿ ಸೊಸಿ ನನ್ನ ಹೆಂಡತಿ ಇಬ್ಬರು ಕೂಡೆ ಸಂತಿಗೆ ಹೋಗೊರ ಹಿಂಗಾಗಿ ನಮ್ಮ ಮನ್ಯಾಗ ಏನೇನ ತಂದಾರ ಏನೇನ ಇಲ್ಲಾ ಎಲ್ಲಾ ಕಡಕೋಳ ಮಾಮಿಗೆ ಗೊತ್ತ ಇರ್ತಿತ್ತ.
ಒಮ್ಮೊಮ್ಮೆ “ಅನ್ನಂಗ ನಿಮ್ಮ ಸೊಸಿ ಮರಗಿನ ಚಟ್ನಿ (ಪುದಿನಾ ಚಟ್ನಿ) ಭಾಳ ಛಳೊ ಮಾಡ್ತಾಳ ಬಿಡ್ರಿ, ನಂಬದಕ್ಕ ಏನೂ ಬರಂಗೇಲಾ” ಅಂತ ಒಂದ ಹತ್ತ ಸರತೆ ಅಂದ ಕಡಿಕೆ ಹೋಗಬೇಕಾರ ಒಂದ ಬಟ್ಲದಾಗ ಇಸ್ಗೊಂಡ ಹೋಗೊಕಿ.
ಇನ್ನ ಅವರ ಮನಿಗೆ ಅಚಾನಕ ಯಾರರ ಮಧ್ಯಾಹ್ನದ ಹೊತ್ತಿನಾಗ ಬಂದ್ರ ಪಾನಕಕ್ಕ ಲಿಂಬೆಹಣ್ಣ ನಮ್ಮ ಮನ್ಯಾಗಿಂದ ಮತ್ತ. ನನ್ನ ಹೆಂಡತಿ ಅಂತೂ ’ನಾ ಬೇಕಾರ ಒಂದ ವಾಟಗಾ ಪಾನಕಾ ಕಡಾ ಕೊಡ್ತೇನಿ, ಲಿಂಬೆ ಹಣ್ಣ ಕೊಡಂಗಿಲ್ಲಾ, ಇಪ್ಪತ್ತ ರೂಪಾಯಕ್ಕ ಐದ ಲಿಂಬೆ ಹಣ್ಣ ಆಗ್ಯಾವ’ ಅಂತ ಒದರೋಕಿ. ಮತ್ತ ನಮ್ಮವ್ವನ ಹಂಗಂದರ ಹೆಂಗ ವಾಪಸ ಕೊಡ್ತಾರ ತೊಗೊ ಅಂತ ಕೊಟ್ಟ ಕಳಸೋಕಿ. ಹಂಗ ಲಿಂಬೆ ಹಣ್ಣ ಬಂದರು ಅವು ಹತ್ತರೂಪಾಯಕ್ಕ ಐದರ ಲಿಂಬೆ ಹಣ್ಣ ವಾಪಸ ಬರತಿದ್ದವು.
ಹಿಂಗ ನಮ್ಮ ಕಡಕೋಳ ಮಾಮಿ ಕಡಾ ಇಸ್ಗೊಳ್ಳಲಾರದ್ದ ವಸ್ತುನ ಇರಲಿಲ್ಲ. ಚಟ್ನಿಪುಡಿ, ಮೆಂತೆ ಹಿಟ್ಟ, ಕಶಾಯ ಪುಡಿಯಿಂದ ಹಿಡದ ರವಾ, ಸಕ್ಕರಿ, ಗೋದಿ ತನಕಾ ಎಲ್ಲಾ. ಹಂಗ ಅಕಿ ಎಲ್ಲಾ ಕಡಾ ಒಯ್ದದ್ದ ವಾಪಸ ಕೊಡಂಗಿಲ್ಲಾ ಅಂತ ಏನ ಇದ್ದಿದ್ದಿಲ್ಲಾ, ನೀವ ಅಗದಿ ನೆನಪಿಟ್ಟ ಫಾಲೊ ಅಪ್ ಮಾಡಿದರ ಎಲ್ಲಾ ವಾಪಸ ಪಾತ್ರಿ ಸಮೇತ ಬರ್ತಿದ್ವು ಆದರ ನಮ್ಮವ್ವ ಒಂದ್ಯಾರಡ ಸರತೆ ಕೇಳಿ ’ಎಷ್ಟ ಸಲಾ ಅಂತ ಕೇಳೊದ್ವಾ ನಮ್ಮವ್ವಾ, ಅವರಾಗೆ ತಿಳದ ಕೊಡಬೇಕ’ ಅಂತ ಬಿಟ್ಟ ಬಿಡ್ತಿದ್ಲು. ಆದರ ನನ್ನ ಹೆಂಡತಿ ಬಿಡತಿದ್ದಿಲ್ಲಾ. ಹಿಂಗಾಗಿ ಕಡಕೋಳ ಮಾಮಿ ನನ್ನ ಹೆಂಡತಿ ಕಾಟಕ್ಕಾದರು ತೊಗೊಂಡಿದ್ದ ವಾಪಸ ಕೊಡತಿದ್ದಳು. ಆಮ್ಯಾಲೆ ಬರಬರತ ನನ್ನ ಹೆಂಡತಿ ಒಬ್ಬೊಕಿನ ಮನ್ಯಾಗ ಇದ್ದಾಗ ಅಕಿ ಇಕಿಗೆ ಕಡಾ ಕೇಳೋದನ್ನ ಬಿಟ್ಟ ಬಿಟ್ಟಳು. ಯಾಕಂದರ ಅಕಿ ಏನ ಕೇಳಿದರು ಇಕಿ “ನಮ್ಮ ಮನ್ಯಾಗ ಇವತ್ತ ತೀರೇದ’ ಅಂತ ಸ್ಟ್ಯಾಂಡರ್ಡ್ ಜವಾಬ ಕೊಡ್ಲಿ ಕತ್ತ ಬಿಟ್ಟಿದ್ಲು.
ಇದು ನಮ್ಮ ಮನಿದ ಒಂದ ಕಥಿ ಅಲ್ಲಾ, ಹಿಂಗ ಕಡಕೋಳ ಮಾಮಿದ ನಮ್ಮ ಓಣ್ಯಾಗ ಇರೋ ನಾಲ್ಕೈದ ಬ್ರಾಹ್ಮರ ಮನ್ಯಾಗ ಅಕೌಂಟ ಇತ್ತ. ಹಿಂಗಾಗೆ ಅಕಿಗೆ ’ಕಡಿಮನಿ ಕಡಕೋಳ ’ಕಡಾ’ ಮಾಮಿ ಅಂತ ಹೆಸರ ಬಿದ್ದಿದ್ದ.

One thought on “ಕಡಿಮನಿ ಕಡಕೋಳ ’ಕಡಾ’ ಮಾಮಿ…

  1. The Kannada language that I grew up with in my younger days (Primary level) does still exist in North Karnataka to some extent, but in Bangalore region, today’s Kannada is unrecognisable.
    Even in your above piece you have used Hindi & English words like ; Gayab, Pudina, Achanak etc. I am surprised . In Bangalore Kannada, there is so much of intrusion of English & Hindi words and Kannadised Hindi words ( Chalayis Beku, Dabais bidu) , I find quite amusing. I grew up reading Krishnamurthy Puranik, AaNa Kru writings, today I think, that kind of Kannada does not exist. In Official Kannada used by Goverment Bureaucracy & Communications, Heavily Sanskritised Hindi words have been imbibed in modern Kannada.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ