ನಿಂದ ಛೊಲೋ ಬಿಡ್ವಾ.. ನಿಂಗ ಪೆನ್ಶನ್ ಬರತದ

ಮೊನ್ನೆ ಹಾನಗಲದಿಂದ ನನ್ನ ಹೆಂಡತಿ ಶಕ್ಕು ಮೌಶಿ ಬಂದಿದ್ಲು, ಹಂಗ ಅಕಿ ಹುಬ್ಬಳ್ಳಿಗೆ ಬಂದು ಹೋಗಿ ಮಾಡೇ ಮಾಡತಿರ್ತಾಳ. ಆದ್ರ ಇತ್ತೀಚಿಗೆ ಸ್ವಲ್ಪ ಬರೋದ ಕಡಿಮೆ ಆಗಿತ್ತ. ಬಂದೋಕಿನ ಸೀದಾ ನನ್ನ ಹೆಂಡತಿಗೆ
“ಏನ್ವಾ, ಮಗನ ಮುಂಜ್ವಿ ತಗದಿ ಅಂತ, ಏನ ಹೇಳೆ ಇಲ್ಲಾ” ಅಂತ ಶುರು ಮಾಡೆ ಬಿಟ್ಟಳು. ಆತ ತೊಗೊ ಇನ್ನ ಇಕಿಗೆ ಸುದ್ದಿ ಮುಟ್ಟೇದ ಅಂದ್ರ ನಾವ ಒಂದ ಐವತ್ತ ಕಾರ್ಡ ಕಡಮಿ ಮಾಡಸಲಿಕ್ಕೆ ಅಡ್ಡಿಯಿಲ್ಲಾ ಅನಸ್ತ. ಏನಿಲ್ಲದ ಬಾಯಿ ಬಡಾಯಿ ಹೆಣ್ಣ ಮಗಳ, ಹಿಂಗ ಏನರ ಒಂದ ಸುದ್ದಿ ಸಿಕ್ಕ ಬಿಟ್ಟರ ಮುಗದ ಹೋತ ಹತ್ತ ಊರಿಗೆ ಸುದ್ದಿ ಹಬ್ಬಸ್ತಾಳ ಅಂತ ಗ್ಯಾರಂಟೀ ಆತ.
ಹಂಗ ಇಕಿ ಇಲ್ಲೆ ಧಾರವಾಡ ಕಾಮನಕಟ್ಟಿ ಒಳಗ ಹುಟ್ಟಿ ಬೆಳದೋಕಿ ಅದರಾಗ ಇತ್ತೀಚಿಗೆ ಅಕಿ ಅತ್ತಿ ಮನಿ ಬಳಗ, ತವರ ಮನಿ ಬಳಗಾ ಎಲ್ಲಾ ಇರೋದ ಇಲ್ಲೆ ಧಾರವಾಡ ಹುಬ್ಬಳ್ಳಿ ಸುತ್ತ-ಮುತ್ತಲನ ಹಿಂಗಾಗಿ ಹುಬ್ಬಳ್ಳಿ-ಧಾರವಾಡ ಅಂದ್ರ ವಾರಕ್ಕೊಮ್ಮೆ ಹಾಜರ.
ಅಕಿದ ಮದುವಿ ಹಾನಗಲ್ ರಾಮಣ್ಣ ಮಾಸ್ತರ ಮಗನ ಜೊತಿಗೆ ಗೊತ್ತ ಮಾಡಿದಾಗ ‘ನಾ ಆ ಹುಡಗನ್ನ ಒಲ್ಲೇ, ಹುಬ್ಬಳ್ಳಿ ಧಾರವಾಡ ಹುಡಗ ಇದ್ದರ ಇಷ್ಟ ಮಾಡ್ಕೋತೇನಿ’ ಅಂತ ಹೇಳಿ ಹಟಾ ಹಿಡದ ಅವರಪ್ಪನ ಜೊತಿ ಜಗಳಾ ಮಾಡಿ ಒಂದ ವಾರ ಮಾತ ಬಿಟ್ಟಿದ್ಲಂತ. ಆದರ ಅವರಪ್ಪ ಅಕಿ ಹೆದರಕಿಗೆ ಬಗ್ಗಲಿಲ್ಲಾ
“ಸುಮ್ಮನ ಬಾಯಿಮುಚಗೊಂಡ ಲಗ್ನಾ ಮಾಡ್ಕೋ, ರಾಮಣ್ಣನ ಮಗಾ ಸಿಂಡಿಕೇಟ ಬ್ಯಾಂಕಿನಾಗ ಕೆಲಸಾ ಮಾಡ್ತಾನ, ಮ್ಯಾಲೆ ಹಾನಗಲ್ಲಾಗ ಸ್ವಂತ ಮನಿ, ಆನವಟ್ಟಿ ರೋಡಿಗೆ ನಾಲ್ಕ ಎಕರೆ ಹೊಲಾ, ಇತ್ತಲಾಗ ಅವರವ್ವನ ತವರ ಮನಿ ಕಡೆ ಗಂಡಸ ಮಕ್ಕಳ ಬ್ಯಾರೆ ಇಲ್ಲಾ ಹಿಂಗಾಗಿ ಬೊಮ್ಮನಳ್ಳ್ಯಾಗಿಂದ ಒಂದ ಐದ ಎಕರೆ ಹೊಲಾನೂ ಇವನ ಹೆಸರಿಗೆ ಬಂದರು ಬರಬಹುದು. ಅದರಾಗ ಅಂವಾ ನೌಕರಿ ಮನಷ್ಯಾ, ಇವತ್ತ ಅಕ್ಕಿ ಆಲೂರಾಗ ಇದ್ದರ ಏನಾತು ನಾಳೆ ಎಲ್ಲರ ದೊಡ್ಡ ಊರಿಗೆ ಟ್ರಾನ್ಸಫರ ತೊಗೊಂಡ ತೊಗೊತಾನ, ಅವರ ಅವ್ವಾ ಅಪ್ಪನು ವಯಸ್ಸಾದವರ ಇದ್ದಾರ, ಅವರರ ಇನ್ನೇಷ್ಟ ದಿವಸ ಇರತಾರ” ಅಂತ ಹತ್ತ ಸರತೆ ತಿಳಿಸಿ ಹೇಳಿದ ಮ್ಯಾಲೆ ಸೊಟ್ಟ ಮಾರಿ ಮಾಡ್ಕೊಂಡ ಮದುವಿ ಮಾಡ್ಕೊಂಡಿದ್ಲಂತ.
ಹಂಗ ಅಕಿ ಪ್ರತಿ ಸರತೆ ಹುಬ್ಬಳ್ಳಿಗೆ ಬಂದಾಗ ಒಮ್ಮೆ ನಮ್ಮ ಅವ್ವಕ್ಕ ಏನ ಅಂತಾಳ, ಅಕಿ ಗಂಡ ಏನ ನಡಸ್ಯಾನ ಅಂತ ಕಾರಬಾರ (ಹೀರೇತನ) ಮಾಡಲಿಕ್ಕೆ ನಮ್ಮ ಮನಿ ಹೊಕ್ಕ ಒಂದ ಹೊತ್ತ ಊಟಾ ಹೊಡದ ಊರ ಮಂದಿ ಉಸಾಬರಿ ನನ್ನ ಹೆಂಡತಿ ಮುಂದ ಹೇಳಿ ಕಡಿಕೆ ನಮ್ಮವ್ವ ” ಅಯ್ಯ, ಚಹಾ ಕುಡದs ಹೋಗರಿ” ಅಂತ ಹೇಳಿ ಸಂಜಿ ಚಹಾ ಮಧ್ಯಾಹ್ನನ ಮಾಡಿ ಕೊಟ್ಟ ಅಟ್ಟೊ ತನಕ ಅಕಿ ಏನ ಹೋಗೊದರ ಬಗ್ಗೆ ಚಕಾರ ಎತ್ತೋಕೆಲ್ಲಾ.
ಹಂಗ ಅಕಿ ನನ್ನ ಹೆಂಡತಿಗೆ ದೂರಿಂದ ಮೌಶಿ ಆಗಬೇಕ. ವಯಸ್ಸಿನಾಗ ಅಕಿಗಿಂತಾ ಒಂದ ಹದಿಮೂರ-ಹದಿನಾಲ್ಕ ವರ್ಷ ದೊಡ್ಡೊಕಿ, ಬುದ್ದಿ ಮಟ್ಟದಾಗ ಇಬ್ಬರದು ಒಂದ ಲೆವೆಲ್, ಹಿಂಗಾಗಿ ನನ್ನ ಹೆಂಡತಿ ಜೊತಿ ಭಾಳ ಹಚಗೊಂಡಿದ್ಲು. ಶಕ್ಕು ಮೌಶಿ ಮೈನಾರದಾಗ ನನ್ನ ಹೆಂಡತಿ ಹುಟ್ಟಿದ್ಲಂತ ಅದಕ್ಕ ಅಕಿ ಹಗಲಗಲಾ ನನ್ನ ಹೆಂಡತಿಗೆ “ನಾ ದೊಡ್ಡೊಕಿ ಆದಾಗ ನೀ ಹುಟ್ಟಿ” ಅಂತಿದ್ಲು. ಏನ ಇಕಿ ಮೈನಾರದಿದ್ದಿಲ್ಲಾ ಅಂದರ ನನ್ನ ಹೆಂಡತಿ ಹುಟ್ಟs ತಿದ್ದಿಲ್ಲೋ ಅನ್ನೋರಗತೆ.
ನನ್ನ ಹೆಂಡತಿನು ಅಕಿನ್ನ ಭಾಳ ಹಚಗೊಂಡಿದ್ಲು, ಅಕಿ ಜೊತಿ ಭಿಡೆ ಬಿಟ್ಟ ತನ್ನ ಮನಸ್ಸಿನಾಗಿಂದ ಎಲ್ಲಾ ಹೇಳ್ಕೋತಿದ್ಲು. ಹಿಂಗಾಗಿ ನಮ್ಮ ಮನ್ಯಾಗ ನಾವ ಹೆಪ್ಪ ಹಾಕಲಿಕ್ಕೆ ನಮ್ಮಜ್ಜಿ ಮನ್ಯಾಗಿಂದ ಮಸರ ಇಸಗೊಂಡ ಬಂದಿದ್ದ ಸುದ್ದಿ ಇಡಿ ಜಗತ್ತೀಗೆ ಗೊತ್ತಾತು ಅಂದರ ಅದ ಶಕ್ಕು ಮೌಶಿ ಬ್ರಾಡ ಕಾಸ್ಟಿಂಗ ಕಾರ್ಪೋರೇಶನ್ ಅಂತ ನಂಗ ಗೊತ್ತಿತ್ತ. ಅದರಾಗ ಈ ಸುಡಗಾಡ ಮೊಬೈಲ್ ಬಂದಾಗಿಂದ ನನ್ನ ಹೆಂಡತಿ ಅಕಿ ದಿವಸಾ ಒಂದ ತಾಸ ಹರಟಿ ಹೋಡೆಯೋರು. ಇಬ್ಬರಿಗೂ ಹೇಳೊರಿಲ್ಲಾ ಕೇಳೊರಿಲ್ಲಾ ಅನ್ನೊ ಹಂಗ ಆಗಿ ಹೋಗಿತ್ತ. ಶಕ್ಕು ಮೌಶಿ ಅತ್ತಿ ಮಾವಾ ಅಂತೂ ಅಕಿ ಕಾಲ್ಗುಣದ್ಲೇ ಭಾಳ ಲಗೂನ ಕಣ್ಣ ಮುಚ್ಚಿ ಬಿಟ್ಟಿದ್ದರು. ಇನ್ನ ನನ್ನ ಹೆಂಡತಿ ಅಂತೂ ಅತ್ತಿ-ಮಾವಾ ಇದ್ದರು ಅಕಿ ಅವರ ಬಗ್ಗೆ ತಲಿ ಕೆಡಸಿಗೊಳ್ಳೊದ ಅಷ್ಟರಾಗ ಇತ್ತ.
ಈಗ ಒಂದ ಐದ ವರ್ಷದ ಹಿಂದ ಶಕ್ಕು ಮೌಶಿ ಗಂಡ ಪಾಪ ಸಣ್ಣ ವಯಸ್ಸಿನಾಗ ಸತ್ತ ಹೋದಾ. ಸಾಯೋತನಕ ಅವಂಗ ಶುಗರ್ ಇತ್ತಂತ ಗೊತ್ತ ಇದ್ದಿಲ್ಲಾ, ಒಮ್ಮಿಂದೊಮ್ಮೇಲೆ ಹಾನಗಲ್ಲಿಂದ ವಿವೇಕಾನಂದ ಹಾಸ್ಪಿಟಲಕ್ಕ ತಂದಾಗ ಅವಂಗ ಶುಗರ್ ಅದ ಅಂತ ಗೊತ್ತಾಗಿದ್ದ. ದಾವಾಖಾನಿಗೆ ತಂದ ಎರಡ-ಮೂರ ಲಕ್ಷ ರೂಪಾಯಿ ಖರ್ಚ ಮಾಡಿದರು ಅವನ ಜೀವ ಏನ ಉಳಿಲಿಲ್ಲಾ. ಡಾಕ್ಟರ ಮಲ್ಟಿ ಆರ್ಗನ್ಸ್ ಫೇಲ್ಯುರ್ ಅಂತ ಹೇಳಿ ಬಿಟ್ಟರು. ಏನೋ ಪುಣ್ಯಾ ಅಷ್ಟರಾಗ ಮಗಾ ಬೆಂಗಳೂರಾಗ ಇಂಜೀನಿಯರಿಂಗ ಸೇರಿದ್ದಾ. ಆವಾಗಿಂದ ಶಕ್ಕು ಮೌಶಿ ಒಬ್ಬಕೀನ ಆಗಿ ಬಿಟ್ಟಳು.
ಇನ್ನ ಹಾನಗಲ್ಲಾಗ ಇಕಿ ಗಂಡನ ಪೈಕಿ ಯಾವ ತಲಿನೂ ಉಳದಿದ್ದಿಲ್ಲಾ, ಆದರೂ ಅಕಿ ಗಂಡ ಸತ್ತ ಮ್ಯಾಲೆ ಹಾನಗಲ್ ಬಿಟ್ಟ ಬರಲಿಲ್ಲಾ. ‘ನನ್ನ ಗಂಡನ ಹಳೇ ಮನಿ ಇಲ್ಲೇ ಅದ, ಅದನ್ನ ಬೀಳಿಸಿ ಹೊಸಾ ಮನಿ ಕಟಗೊಂಡ ಇಲ್ಲೇ ಇರತೇನಿ’ ಅಂತ ಡಿಸೈಡ ಮಾಡಿದ್ಲು. ಅಕಿಗೆ ಎಲ್ಲೆ ಊರ ಬಿಟ್ಟರ ಗಂಡನ್ನ ಹೆಸರಿನ ಹೊಲಾ ಯಾರರ ಹೊಡ್ಕೋತಾರ ಅಂತ ಹೆದರಕಿ ಬ್ಯಾರೆ ಇತ್ತ.
ಹಂಗ ಒಂದ ರೀತಿಯಿಂದ ಅಕಿ ಗಂಡಾ ಸಾಯೋದ ತಡಾ ಫುಲ್ ಫ್ರೀ ಆಗಿದ್ಲು, ಏನಿಲ್ಲದ ಹೇಳೋರಿಲ್ಲಾ ಕೇಳೊರಿಲ್ಲಾ, ಇರೋ ಒಬ್ಬ ಗಂಡನೂ ಹೋದಮ್ಯಾಲೆ ಅಕಿ ಒಮ್ಮೆ ಹುಬ್ಬಳ್ಳಿ ಕಡೆ ಬಂದಳು ಅಂದರ ವಾರ ಗಟ್ಟಲೇ ಅವರ ಮನಿ ಇವರ ಮನಿ ಅಂತ ಸುತ್ತಾಡಿ ತನಗ ತಿಳದಾಗ ವಾಪಸ ಹಾನಗಲ್ಲಿಗೆ ಹೋಗೊಕಿ. ಅದರಾಗ ಯಾರದರ ಮನ್ಯಾಗ ಫಂಕ್ಶನ್ ಇದ್ದರ ಮುಗದ ಹೋತ ಒಂದ ವಾರ ಮೊದ್ಲ ಹಾಜರ, ಮುಂದ ಫಂಕ್ಶನ್ ಮುಗದ ಒಂದ ವಾರಕ್ಕs ಅಲ್ಲಿಂದ ಗುಡಚಾಪಿ ಕಿತ್ತೋಕಿ. ಅದರಾಗ ಅಕಿದ ಮಾತ ಒಂದ ಮುಂದ ಇದ್ದಿದ್ದಿಲ್ಲಾ, ಕೆಲಸದಾಗೂ ಹಂಗ ಇದ್ದಳು. ಹಿಂಗಾಗಿ ಮಂದಿ ಅಕಿಗೆ ಹಿರೇತನ ಕೊಟ್ಟ ಬಿಟ್ಟರ ಅರ್ಧಾ ಕೆಲಸ ಮುಗದಂಗ ಅಂತ ಅಕಿನ್ನ ಮುದ್ದಾಂ ಕರೀತಿದ್ದರು.
ಗಂಡ ಸತ್ತ ಎರಡ ವರ್ಷಕ್ಕ ತಾರಕೇಶ್ವರ ಗುಡಿ ಹಿಂದಿಂದ ಹಳೇ ಮನಿ ಬಿಳಿಸಿ ಹೊಸಾ ಮನಿ ಕಟ್ಟಸಲಿಕ್ಕೆ ಶುರು ಮಾಡಿದ್ಲು. ತಾನ ನಿಂತ ಸಾಮಾನ ತಂದ ಕೊಟ್ಟ ಮನಿ ಕಟ್ಟಸಿದ್ಲು. ಹಂಗ ಮನಿ ಸಾಮಾನ ತೊಗೊಳಿಕ್ಕೆ ಹುಬ್ಬಳ್ಳಿಗೆ ಬಂದಾಗ ನಮ್ಮ ಮನಿ ಹೊಕ್ಕ ಹೋಗ್ತಿದ್ಲು. ಒಂದ ಸರತೆ ಬಂದಾಗ ನನ್ನ ಹೆಂಡತಿ ತಲ್ಯಾಗ
“ನಿನ್ನ ಗಂಡಗ ಮನಿ ಕಟ್ಟಸಂತ ಹೇಳ, ಕಾಲ ತುಟ್ಟಿ ಅದ, ಮುಂದ ಇನ್ನೂ ತುಟ್ಟಿ ಆಗತದ” ಅಂತ ತಲ್ಯಾಗ ತುಂಬಿದ್ಲು.
ಅಕಿಗೆ ಅಕಿ ಗಂಡಂದು ಸತ್ತ ಮ್ಯಾಲೆ ಛಲೋ ರೊಕ್ಕ ಬಂದಿತ್ತು ಮನಿ ಕಟ್ಟಸಲಿಕ್ಕೆ ಶುರು ಮಾಡಿದ್ಲು, ಹಿಂಗಾಗಿ ಅದು ಭಾಳ ತ್ರಾಸ ಆಗಲಿಲ್ಲಾ. ಮ್ಯಾಲೆ ಅಕಿಗೆ ಕೈತುಂಬ ಗಂಡನ್ನ ಪೆನ್ಶನ್ ಬ್ಯಾರೆ ಬರತಿತ್ತು. ಆದರ ನಮ್ಮ ಪರಿಸ್ಥಿತಿ ಹಂಗ ಇರಲಿಲ್ಲಾ ಅದು ನನ್ನ ಹೆಂಡತಿಗೆ ತಿಳಿತಿದ್ದಿಲ್ಲಾ, ಮಾತ ಮಾತಿಗೆ
“ರ್ರಿ, ಶಕ್ಕು ಮೌಶಿ ಹೇಳ್ಯಾಳ ನಾವು ಮನಿ ಕಟ್ಟೋಣರಿ” ಅಂತ ಶುರು ಮಾಡೇ ಬಿಡ್ತಿದ್ದಳು.
ನನ್ನ ಹೆಂಡತಿಗೆ ನಾ
“ನೀ ಅಕಿ ಹೇಳಿದಂಗ ಕುಣಿ ಬ್ಯಾಡ, ಅಕಿಗೇನ ಪೆನ್ಶನ್ ಬರತದ ಮ್ಯಾಲೆ ಗಂಡಾ ಮಾಡಿಟ್ಟ ಹೋಗ್ಯಾನ. ನಂದ ಹಂಗಲ್ಲಾ, ಮೊದ್ಲ ಸಣ್ಣ ಪಗಾರ ನಾಳೆ ನಾ ಮನಿ ಕಟ್ಟಲಿಕ್ಕೆ ಲೋನ ಮಾಡಿದರ ಕಂತ ತುಂಬಲೋ ಇಲ್ಲಾ ಮನಿ ನಡಸಲೋ” ಅಂತ ತಿಳಿಸಿ ಹೇಳಿ ಹೇಳಿ ಸಾಕಾಗಿ ಬಿಟ್ಟಿತ್ತ.
ಮುಂದಿನ ಸರತೆ ಶಕ್ಕು ಮೌಶಿ
“ನಿನ್ನ ಗಂಡಾ ಮನಿ ಕಟ್ಟೋದರ ಬಗ್ಗೆ ಏನ ವಿಚಾರ ಮಾಡಿದಾ” ಅಂದರ ನನ್ನ ಹೆಂಡತಿ ಅಕಿಗೆ
“ಎಲ್ಲಿದ್ವಾ, ನಮ್ಮ ಹಣೇಬರಹದಾಗ ಭಾಡಗಿ ಮನ್ಯಾಗ ಸಾಯೋದ ಬರದದ, ನಮ್ಮ ಮೌಶಿ ಹೆಣ್ಣಾಗಿ ಮನಿ ಕಟ್ಟಲಿಕತ್ತಾಳ ನಿಮಗೇನ ಧಾಡಿರಿ ಅಂದರ ನನ್ನ ಗಂಡ ‘ನಿಮ್ಮ ಮೌಶಿಗೆ ಪೆನ್ಶನ್ ಬರತದ, ಮನಿನು ಕಟ್ಟಸ್ತಾಳ ಮಠಾನು ಕಟ್ಟಸ್ತಾಳ. ಅಕಿಗೆ ಸಂಸಾರದ ಚಿಂತಿ ಇಲ್ಲಾ, ಸುಡಗಾಡ ಇಲ್ಲಾ’ ಅಂದರು” ಅಂತ ಹೇಳಿ ಬಿಟ್ಟಳು.
ಅವರಿಬ್ಬರದು ಹಂಗ ಎಲ್ಲಾ ಮನ್ಯಾಗಿನ ಸಣ್ಣ- ಸಣ್ಣ ವಿಷಯಕ್ಕೂ ಡಿಸ್ಕಶನ್ ಇದ್ದ ಇರತಿದ್ವು. ನಾ ಅದನ್ನ ತೊಗೊಂಡೆ, ಇದನ್ನ ತೊಗೊಂಡೆ ಅಂತ ಅಕಿ ಫೋನ್ ಮಾಡಿ ಮಾಡಿ ಹೇಳ್ಕೋತ ಹೋಗೊಕಿ ಅಕಿ ಹಂಗ ಹೇಳಿದಾಗ ಒಮ್ಮೆ ನನ್ನ ಹೆಂಡತಿ “ನಿಂದ ಛಲೊ ಬಿಡ್ವಾ, ನಿಂಗ ಪೆನ್ಶನ್ ಬರತದ” ಅನ್ನಲಿಕ್ಕೆ ಶುರುಮಾಡಿದ್ಲು.
ಒಂದ ಸರತೆ ಹಳೇ ಬಿಲ್ವಾರ ಪಾಟಲಿ ಕೊಟ್ಟ ಹೊಸಾ ಪ್ಯಾಟರ್ನದ್ದ ಮಾಡಸಲಿಕ್ಕೆ ಹುಬ್ಬಳ್ಳಿ ಕರಿ ಅಂಗಡಿಗೆ ಬಂದಾಗ ನನ್ನ ಹೆಂಡತಿನ್ನ ಕರಕೊಂಡ ಹೋಗಿದ್ಲು. ಎಲ್ಲಾ ಹಳೇ ಬಂಗಾರ, ಅವರತ್ತಿ ಅವಲಕ್ಕಿ ಸರಾ ಹಾಕಿ ಮ್ಯಾಲೆ ಒಂದ ಲಕ್ಷ ಇಪ್ಪತ್ತ ಸಾವಿರ ಬಡದ ತನಗ ಹೆಂತಾದ ಬೇಕ ಅದನ್ನ ಮಾಡಿಸಲಿಕ್ಕೆ ಹಾಕಿದ್ಲು. ತನಗೇನ ಬೇಕ ಅಷ್ಟ ಮಾಡಿಸಿಗೊಂಡ ಸುಮ್ಮನ ಕೂಡೋದ ಬಿಟ್ಟ ನನ್ನ ಹೆಂಡತಿಗೆ
“ಅಲ್ಲ, ನಮ್ಮವ್ವಾ ನಿಂದ ಲಗ್ನಾಗಿ ಹನ್ನೆರಡ ವರ್ಷ ಆಗಲಿಕ್ಕೆ ಬಂತ ನಿನ್ನ ಗಂಡ ನಿಂಗ ಏನೂ ಮಾಡಸಿಲ್ಲಾ? ಅಲ್ಲಾ, ನೀನರ ಹೆಂತಾಕಿ ಇದ್ದೀಯ? ಹೆಂಗ ಸುಮ್ಮನಿದ್ದೀಯ ನಮ್ಮವ್ವಾ” ಅಂತ ನನ್ನ ಹೆಂಡತಿ ತಲ್ಯಾಗ ತುಂಬಿದ್ಲು.
ನನ್ನ ಹೆಂಡತಿ
“ಅಯ್ಯ, ಅದಕ್ಕ ನಮ್ಮವ್ವಾ ಮುಂದ ಗಂಡನ ಮನ್ಯಾಗ ಮಗಳು ಬಂಗಾರ ಕಾಣಲಿ ಬಿಡಲಿ ಅಂತ ಲಗ್ನದಾಗ ಎಲ್ಲಾ ಮಾಡಸೆ ಅಟ್ಟ್ಯಾಳ” ಅಂತ ಅಂದಳು
“ಆದರೂ ಗಂಡಾ ಅನ್ನೋ ಪ್ರಾಣಿ ಒಂದ ಗುಂಜಿ ಬಂಗಾರ ಮಾಡಸಲಿಲ್ಲಾ ಅಂದರ ಅದ ಹೆಂತಾ ಗಂಡಸ ನಮ್ಮವ್ವಾ, ಒಪ್ಪತ್ತ ಗಂಜಿ ಕುಡದರು ಅಡ್ಡಿಯಿಲ್ಲಾ ಮೈಮ್ಯಾಲೆ ಗುಂಜಿ ಬಂಗಾರ ಬೇಕs ಬಿಡ್ವಾ” ಅಂತ ಅಂದ್ಲಂತ.
ಮತ್ತ ನನ್ನ ಹೆಂಡತಿ ಯಥಾ ಪ್ರಕಾರ “ನಿಂದೇನ್ವಾ ಪೆನ್ಶನ್ ಬರತದ” ಅಂತ ಅಂದ ಸುಮ್ಮನ ಕೂತ್ಲು. ಅಷ್ಟ ಅಂದ ಸುಮ್ಮನ ಕೂಡಲಿಲ್ಲಾ, ಅದನ್ನ ರಾತ್ರಿ ಮತ್ತ ನನ್ನ ಮುಂದ ಹೇಳಿದ್ಲು. ರ್ರಿ ಶಕ್ಕು ಮೌಶಿ ಹಿಂಗ ಅಂದ್ಲು ನಾ ಅಕಿಗೆ ಹಿಂಗ ಅಂದೆ ಅಂತ. ನಾ
“ಲೇ, ನಿಮ್ಮ ಶಕ್ಕು ಮೌಶಿ ಮಾತ ಏನ ಕೇಳತಿ, ಹೇಳಿ ಕೇಳಿ ಅಕಿ ಬಂಗಾರ ಭಾಗಕ್ಕನ ಮೊಮ್ಮಗಳು, ಅಕಿ ಕಾಪರ್-ಟೀ ನೂ ಬಂಗಾರದ ಮಾಡಿಸಿ ಹಾಕೋ ಅನ್ನೋಕಿ, ಅಕಿ ಮಾತ ಕೇಳಿ ನನ್ನ ಜೀವಾ ತಿನ್ನಬ್ಯಾಡಾ, ಬಂಗಾರದಂಥಾ ಗಂಡ ಇದ್ದೇನಿ, ಗುಂಜಿ ಬಂಗಾರ ಮಾಡಸಲಿಲ್ಲಾ ಅಂದ್ರು ಗುಂಡ-ಗುಂಡನ್ವು ಎರಡ ಮಕ್ಕಳನ ಹಡದ ಕೊಟ್ಟೇನಿ ಸುಮ್ಮನ ಕೂಡ” ಅಂತ ಹೇಳಿ ಅಕಿನ್ನ ಸಮಾಧಾನ ಮಾಡೋದರಾಗ ನಂಗ ಸಾಕ ಸಾಕಾಗಿ ಹೋತ.
ಪ್ರತಿಯೊಂದ ವಿಷಯಕ್ಕೂ ಹಿಂಗ ಅಕಿ ತಾ ಮಾಡಿದ್ದ ತೊರಿಸ್ಗೋತ ಹೋಗೊಕಿ ನನ್ನ ಹೆಂಡತಿ ತಲಿ ಕೆಟ್ಟ
“ನಿಂದ ಛಲೋ ಬಿಡ, ನಿಂಗ ಪೆನ್ಶನ್ ಬರತದ” ಅಂತ ಅನ್ನೋಕಿ ಆಮ್ಯಾಲೆ ರಾತ್ರಿ ಆದ ಕೂಡಲೇನ ನನ್ನ ತಲಿ ತಿನ್ನೋಕಿ.
ಒಂದ ಆರ ತಿಂಗಳ ಹಿಂದ ಶಕ್ಕು ಮೌಶಿ ಕಾಶಿ, ಬದರಿ, ಹರಿದ್ವಾರ ಎಲ್ಲಾ ಹೋಗಿ ಬಂದಳು. ನಾನು ನನ್ನ ಹೆಂಡತಿ ಹಚ್ಚಿದ ಅವಲಕ್ಕಿ ಗಂಟ ಕಟ್ಟಿಕೊಟ್ಟ ಅಕಿಗೆ ಸ್ಟೇಶನ್ನಾಗ ಗಾಡಿ ಹತ್ತಿಸಿ ಕಳಸಿ, ಅಕಿ ಜೊತಿ ಹೊಂಟೀದ್ದ ಇನ್ನ ಉಳದ ಭಜನಿ ಮಂಡಳದ ಮಂದಿಗೆ ನಮ್ಮ ಮೌಶಿದ ಕಾಳಜಿ ತೊಗೊಳ್ರಿ ಅಂತ ಹೇಳಿ ಬಂದಿದ್ವಿ. ವಾಪಸ ಕಾಶಿಯಿಂದ ಬಂದ ಮ್ಯಾಲೆ ಮೂರ ದಿವಸ ನಮ್ಮ ಮನ್ಯಾಗ ಇದ್ದ ಅಲ್ಲಿ ಸಡಗರ ಎಲ್ಲಾ ಹೇಳಿ,
“ನಾ ಬದರಿಗೆ ೫೦೦೦ ಸಾವಿರ ರೂಪಾಯಿ ಕೊಟ್ಟ ಹೆಲಿಕಾಪ್ಟರನಾಗ ಹೋಗಿದ್ದೇವಾ, ನನ್ನ ಜೀವನದಾಗ ವಿಮಾನ ಹತ್ತತೇನೋ ಇಲ್ಲೊ ಅಂತ ತಿಳ್ಕೊಂಡಿದ್ದೆ ಆದರ ನಾರಾಯಣ ಹೆಲಿಕಾಪ್ಟರ ಹತ್ತಸಿದಾ” ಅಂತ್ ಎರಡು ಕಣ್ಣಮುಚ್ಚಿ ಮ್ಯಾಲೆ ನೋಡಿದ್ಲು. ನನ್ನ ಹೆಂಡತಿ ಅದಕ್ಕೂ ಪ್ರತಿ ಸಲಾ ಅನ್ನೊಹಂಗ
“ನಿಂದ ಛಲೋ ಬಿಡ್ವಾ, ನಿಂಗ ಪೆನ್ಶನ್ ಬರತದ” ಅಂದ್ಲು.
ಇದ ಒಂದ ಅಂತ ಅಲ್ಲಾ, ಅಕಿ ಮನ್ಯಾಗ ಒಂದ LCD ತೊಗೊಂಡ್ರ, ಫರ್ನಿಚರ ಮಾಡಸಿದರ,ಹೊಸಾ ವಾಶಿಂಗ ಮಶೀನ ತೊಗಂಡ್ರ ಒಟ್ಟ ಏನ ತೊಗೊಂಡ್ರು ನನ್ನ ಹೆಂಡತಿಗೆ ಫೋನ ಮಾಡೋದು ತನ್ನ ದೊಡ್ಡಿಸ್ತನ ಬಡೇಯೋದು ಕಾಯಮ ಆಗಿತ್ತ. ಲಾಸ್ಟಿಗೆ ನನ್ನ ಹೆಂಡತಿ ಅಕಿ ಮಾತ ಎಲ್ಲಾ ಕೇಳಿ
“ನಿಂದ ಛಲೋ ಬಿಡ, ನಿಂಗ ಪೆನ್ಶನ್ ಬರತದ” ಅಂತ ಲೊಚಗುಟ್ಟಿ ಎಲ್ಲಾ ಅವರವರ ಹಣೇಬರಹ ಅಂತ ನನ್ನ ಸುತ್ತ ವಟಗುಡಕೋತ ಇರೋಕಿ. ಬರಬರತ ಅದ ಅತಿ ಆಗಲಿಕತ್ತ. ಒಂದ ಸರತೆ ನನ್ನ ಮುಂದ
“ನೋಡ್ರಿ ಅಕಿ ಒಂದ ಪೆನ್ಶನ್ನಾಗ ಹೆಂತಾ ಮನಿ ಕಟ್ಟಿದ್ಲು, ಮನಿಗೆ ಏನೇಲ್ಲಾ ಸಾಮಾನ ಮಾಡೀದ್ಲು, ಕಾಶಿ ಯಾತ್ರಾಕ್ಕ ಸಹಿತ ಹೋಗಿ ಬಂದ್ಲು. ಎಲ್ಲಾ ಒಂದ ಪೆನ್ಶನ್ನಾಗ” ಅಂದ ಬಿಟ್ಟಳು.
ನಾನು ನೋಡೇ ನೋಡಿದ್ದೆ, ಅಕಿ ಹಿಂಗ ಅನ್ನೋದ ತಡಾ ತಲಿಕೆಟ್ಟ
“ಲೇ, ನಿನ್ನೌನ, ಅಕಿ ಗಂಡ ಸತ್ತಿದ್ದಕ್ಕ ಅಕಿಗೆ ಪೆನ್ಶನ್ ಬರತದ. ಹಂಗ ಅಕಿ ಗಂಡ ಏನ ಸ್ವಾತಂತ್ರ್ಯಹೋರಾಟಗಾರ ಇದ್ದಿದ್ದಿಲ್ಲಾ. ನೀ ಎಲ್ಲಾದಕ್ಕೂ ಅಕಿನ್ನ ಕಂಪೇರ ಮಾಡ್ಕೋಬ್ಯಾಡ. ಹಂಗ ನಿಂಗೂ ಪೆನ್ಶನ್ ಬರಬೇಕಂದರ ನಾ ಸಾಯಬೇಕ. ನಿಂಗ ಗಂಡ ಹೆಚ್ಚೊ ಪೆನ್ಶನ್ನ ಹೆಚ್ಚೊ…ಬುದ್ಧಿ ಎಲ್ಲೆ ಇಟ್ಟಿ” ಅಂದೆ.
ಮತ್ತೇಲ್ಲರ ಈಕಿ ಪೆನ್ಶನ್ ಆಶಾಕ್ಕ ಪೆನ್ಶನ್ ಹೆಚ್ಚ ಅಂದ ಗಿಂದಾಳಂತ ಅಕಿ ಮುಂದ ಮಾತೋಡಕಿಂತಾ ಮುಂಚೇನ
“ಹಂಗ ನಾ ಸತ್ತರೂ ನಿಂಗೇನ ಭಾಳ ಪೆನ್ಶನ್ ಬರಂಗಿಲ್ಲ ಮತ್ತ, ವರ್ಷಕ್ಕ ಸಾವಿರ ದಿಡ ಸಾವಿರ ಬಂದರ ರಗಡ. ಮ್ಯಾಲೆ ನಾ ಪ್ರೈವೇಟ ಒಳಗ ಕೆಲಸಾ ಮಾಡೋಂವಾ ಪಿ.ಫ್ ಅಮೌಂಟ ಸಹಿತ ಎರಡ ಲಕ್ಷ ಬಂದರ ರಗಡ. ಇನ್ನ ಇರೋ ಇನ್ಸುರೆನ್ಸ್ ಎಲ್ಲಾ ಸೇರಿ ಅವಂದೊ ಎರಡ ಮೂರ ಲಕ್ಷ ಬಂದರ ಭಾಳ, ಅದರಾಗ ಆ ಇನ್ಸ್ಯುರೆನ್ಸ್ ಮ್ಯಾಲೆ ಸಾಲಾ ತಗಿಸಿದ್ದ ನಿನಗ ಗೊತ್ತ ಅದ. ಈಗ ಹೇಳ ನಿಂಗೂ ಪೆನ್ಶನ್ ಬೇಕಿನ?” ಅಂದೆ.
“ಅಯ್ಯ ನನ್ನ ಹಣೇಬರಹನ, ಇಷ್ಟ ದಿವಸ ನೀವ ನನ್ನ ಹೆಸರಿಲೆ ಮಾಡಿದ್ದ ಇಷ್ಟsನ, ಹೋಗಲಿ ಬಿಡ್ರಿ ಆ ಪೆನ್ಶನಕಿಂತಾ ನೀವ ತಿಂಗಳಾ ತಂದ ಕೊಡೊ ಪಗಾರನ ಜಾಸ್ತಿ ಅದ, ಪೆನ್ಶನ್ ಬಗ್ಗೆ ಮುಂದ ವಿಚಾರ ಮಾಡಿದ್ರಾತು” ಅಂತ ಅವತ್ತೀಗೆ ನನ್ನ ಇದ್ದ ಹಕಿಕತ್ ತಿಳ್ಕೊಂಡ ಆ ಟಾಪಿಕ್ ಮುಗಿಸಿದ್ಲು.
ಮುಂದ ಎರಡ ದಿವಸಕ್ಕ ಅವರ ಮೌಶಿ ಫೋನ ಬಂತ ಅಕಿ ಮತ್ತ ಯಥಾ ಪ್ರಕಾರ ತನ್ನ ಪುರಾಣ ಹೇಳಲಿಕ್ಕೆ ಶುರು ಮಾಡಿದ್ಲು, ನನ್ನ ಹೆಂಡತಿ ಕೇಳೊ ಅಷ್ಟ ಕೇಳಿದ್ಲು ನಾ ಎಲ್ಲೆ ಇಕಿ ಮತ್ತ ‘ನಿಂದ ಛಲೋ ಬಿಡ, ನಿಂಗ ಪೆನ್ಶನ್ ಬರತದ’ ಅಂತಾಳ ಅಂತ ಎರೆಡು ಕಿವಿ ನೆಟ್ಟಗ ಮಾಡ್ಕೊಂಡ ಕೇಳಲಿಕತ್ತಿದ್ದೆ, ಅಷ್ಟರಾಗ ನನ್ನ ಹೆಂಡತಿ ಅಕಿಗೆ
“ಸಾಕ ಮುಗಸ ಮೌಶಿ ನಿನ್ನ ಪುರಾಣ, ನನಗ ಮನ್ಯಾಗ ಗಂಡಾ, ಮಕ್ಕಳು ಇದ್ದಾರ, ಹಿಂಗ ತಾಸ ಗಟ್ಟಲೇ ನಿನ್ನ ಜೊತಿ ಹರಟಿ ಹೊಡಿಲಿಕ್ಕೆ ನಂಗ ಟೈಮ್ ಇಲ್ಲಾ, ಮತ್ತ ನಾನ ಫೋನ ಮಾಡ್ತೇನಿ” ಅಂತ ಫೊನ ಇಟ್ಟ ಬಿಟ್ಟಳು.
ಮಜಾ ಅಂದರ ಮುಂದ ಅಕಿ ಫೊನ ಮಾಡಿದಾಗ ಒಮ್ಮೆ ಇಕಿ ‘ನನಗ ಗಂಡಾ ಮಕ್ಕಳು ಇದ್ದಾರ’, ಅಕಿ ಏನರ ಹೇಳಿದರ ‘ನಮ್ಮ ಮನೇಯವರನ ಒಂದ ಮಾತ ಕೇಳ್ತೆನಿ’, ಎಲ್ಲೇರ ಕರದರ ‘ನಮ್ಮ ಅತ್ತಿ ಮಾವನ್ನ ಬಿಟ್ಟ ಹೆಂಗ ಬರಲೇ ನಮ್ಮವ್ವಾ’ ಅಂತ ಅನ್ನಲಿಕ್ಕೆ ಶುರು ಮಾಡಿದ್ಲು. ಅಕಿ ತನ್ನ ಪೆನ್ಶನ್ ಸುದ್ದಿ ತಗದಾಗೊಮ್ಮೆ ನನ್ನ ಹೆಂಡತಿ ತನ್ನ ಗಂಡನ ಸುದ್ದಿ ಅಂದರ ನನ್ನ ಸುದ್ದಿ ತಗಿಲಿಕತ್ಲು. ಅಕಿ ಪೆನ್ಶನ್ ಮ್ಯಾಲೆ ಗಮಂಡ ತೊರಿಸಿದರ ಇಕಿ ಗಂಡನ ಮ್ಯಾಲೆ ದಿಮಾಕ ಬಡಿಲಿಕತ್ಲು. ಅವರಿಬ್ಬರ ನಡಕ ಗಂಡ ಹೆಚ್ಚೊ ಪೆನ್ಶನ್ ಹೆಚ್ಚೋ ಅಂತ ಅನ್ನೊ ಹಂಗ ಆತ. ಆವಾಗಿಂದ ನಮ್ಮ ಶಕ್ಕು ಮೌಶಿ ಫೋನ ಕಡಿಮೆ ಆಕ್ಕೋತ ಬಂದ್ವು. ಈಗ ಹಬ್ಬ ಹುಣ್ಣಮಿ ಇದ್ದಾಗೊಮ್ಮೆ ಫೊನ. ಯಾವದರ, ಯಾರದರ ಫಂಕ್ಷನ್ ಇದ್ದಾಗ ಇಷ್ಟ ಅಕಿದ ಭೆಟ್ಟಿ. ಈಗ ನಮ್ಮ ಮನ್ಯಾಗ ಮುಂಜವಿ ಅದ ಅಂತ ಎಲ್ಲೊ ವಾಸನಿ ಬಡದದ ಅದಕ್ಕ ಬಂದಾಳ.
ನಾ ಆದರೂ ನನ್ನ ಹೆಂಡತಿಗೆ ಆವಾಗ ಇವಾಗ ಕಾಡಸ್ತಿರ್ತನಿ ‘ನಿಂಗೂ ಪೆನ್ಶನ್ ಬೇಕೇನ?’ ಅಂತ. ಅಕಿ ಸಿಟ್ಟಿಗೆದ್ದ
“ಅದಕ್ಕೂ ಪಡದ ಬರಬೇಕ ತೊಗೊಳ್ರಿ” ಅಂತ ಪ್ರೀತಿಲೇ ಗಲ್ಲಾ ತಿವಿತಾಳ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ