ಇದ ಭಾಳ ಹಳೇ ಕಥಿ, ನಾವು ಕಾಲೇಜ ಕಲಿಬೇಕಾರ ನಮ್ಮ ಜೊತಿ ಮನ್ಯಾ ಅಂತ ದೋಸ್ತ ಇದ್ದಾ. ಅಂವಾ ಭಾರಿ ದೇವರು, ದಿಂಡರು ಅಂತಿದ್ದಾ. ದಿವಸಕ್ಕ ಎರಡ ಸರತೆ ಸಂಧ್ಯಾವಂದನಿ, ಮುಂಜಾನೆ ದಿವಸಾ ರಾಯರ ಮಠಕ್ಕ, ಶನಿವಾರಕ್ಕೊಮ್ಮೆ ನುಗ್ಗಿಕೇರಿ ಹನಮಪ್ಪ, ಮಂಗಳವಾರಕ್ಕೊಮ್ಮೆ ದಾಜಿಬಾನಪೇಟ್ ಗಣಪತಿ, ಮ್ಯಾಲೆ ಏಕಾದಶಿ, ದ್ವಾದಶಿ…ಹಿಂಗ ಒಂದ ಎರಡ ಅವನ ಪದ್ಧತಿ.
ಅದನ್ನೇಲ್ಲಾ ನೋಡಿ ನಮ್ಮ ಮನ್ಯಾಗ ನಮ್ಮಪ್ಪಾ
’ಅವನ್ನ ನೋಡಿ ಕಲಿ……ನಿಂಗಂತೂ ದೇವರಿಲ್ಲಾ, ದಿಂಡ್ರಿಲ್ಲಾ…..ಹೋಗಿ ಅವನ ಉಚ್ಚಿನರ ದಾಟ’ ಅಂತ ಬೈತಿದ್ದಾ. ಅಲ್ಲಾ, ಹಂಗ ನಾ ಎಲ್ಲೇ ಅವನ್ನ ಮುಂಜ ಮುಂಜಾನೆ ಹಿಡದ ದಾಟಬೇಕ, ಆ ಮಗಾ ನೋಡಿದರ ಏಳೋ ಪುರಸತ್ತ ಇಲ್ಲದ ತಾಮ್ರದ ತಂಬಗಿ ಹಿಡಕೊಂಡ ಗೋಮೂತ್ರ ದಾಟಕೋತ ಅಡ್ಡಾಡತಿದ್ದಾ.
ಈ ಮನ್ಯಾ ಇಷ್ಟ ದೇವರ ದಿಂಡ್ರ ಅಂತಿದ್ನಲಾ ಮಗಂದ ಈ ಮಠಾ, ಗುಡಿ, ಪ್ರದಕ್ಷೀಣಿ ಚಕ್ಕರದೊಳಗ ಪಿ.ಯು.ಸಿ ಒಳಗ ಎರಡ ಸಬ್ಜೆಕ್ಟ ವೆಂಕಟರಮಣ ಗೋವಿಂದಾ…..ಗೋವಿಂದಾ… ಅಂದ್ವು. ಅಲ್ಲಾ ಹೋಗಲಾರದ ಏನ್ರಿ. ಅಭ್ಯಾಸ ಬಿಟ್ಟ ಗುಡಿ ಗುಂಡಾರ ಅಂತ ಅಡ್ಡಾಡಿದರ ದೇವರೇನ ಕಾಪಿ ಚೀಟ್ ತಂದ ಕೋಡ್ತಾನ ಇಲ್ಲಾ ಪೇಪರ್ ಚೆಕ್ ಮಾಡ್ತಾನ?
ಏನೋ ಪುಣ್ಯಾ ಮುಂದ ಅಕ್ಟೋಬರ ಸಪ್ಲಿಮೆಂಟರಿ ಒಳಗ ದೇವರ ಕೈ ಹಿಡದಾ, ಮಗಾ ಮುಂದ ಡಿಗ್ರಿ ಹಚ್ಚಿ ಕಾಂಪಿಟೇಟಿವ್ ಎಕ್ಸಾಮ ಕಟ್ಟಿ ಕಲಿಯೋದ ಮುಗಿಯೋದಕ್ಕ ಕರ್ನಾಟಕ ಬ್ಯಾಂಕ್ ಒಳಗ ನೌಕ್ರಿ ಹೊಡದಾ.
“ನೋಡ, ಎಷ್ಟ ಶಾಣ್ಯಾ ಅದ ಆ ಹುಡಗಾ, ಡಿಗ್ರಿ ಮುಗಿಯೋ ಪುರಸತ್ತ ಇಲ್ಲದ ಕರದ ನೌಕರಿ ಕೊಟ್ಟರು, ಎಲ್ಲಾ ಆ ರಾಯರ ಆಶೀರ್ವಾದ” ಅಂತ ನಮ್ಮಪ್ಪಾ ಕರ್ನಾಟಕ ಬ್ಯಾಂಕಿನ ಪಾಸ್ ಬುಕ್ ನೋಡಿದಾಗೊಮ್ಮೆ ನನ್ನ ಮಾರಿಗೆ ತಿವಿತಿದ್ದಾ. ಅಲ್ಲಾ ಹಂಗ ಅಂವಾ ಹೇಳೋದು ಖರೆ ಇತ್ತ ಬಿಡ್ರಿ.
ಇಂವಾ ದಿವಸಾ ಮಠಕ್ಕ ಹೋಗೊದಲ್ಲದ ವರ್ಷಕ್ಕ ಒಂದ ನಾಲ್ಕ ಸರತೆ ಮಂತ್ರಾಲಯಕ್ಕ ಬ್ಯಾರೆ ಹೋಗ್ತಿದ್ದಾ. ಅದರಾಗ ಒಂದ ಸರತೆ ಕಂಪಲ್ಸರಿ ನಡ್ಕೋತ ಬ್ಯಾರೆ ಹೋಗ್ತಿದ್ದಾ.
ಇನ್ನ ಅವಂದ ಮಂತ್ರಾಲಯಕ್ಕ ಹೋಗೊದೊಂದ ದೊಡ್ಡ ಕಥಿ. ಕಾಲೇಜಿನಾಗ ಇದ್ದಾಗ ಇಂವಾ ಒಂದ ವಾರದಿಂದ ಎಲ್ಲಾ ದೋಸ್ತರಿಗೆ ’ನಾ ಮುಂದಿನ ವಾರ ಮಂತ್ರಾಲಯಕ್ಕ ಹೊಂಟೇನಿ…ಮತ್ತ ರಾಯರ ಹುಂಡಿಗೆ ಏನರ ಕೊಡೊದಿದ್ದರ ಕೊಡ್ರಿ’ ಅಂತ ಒಂದ ಹತ್ತ ಸರತೆ ಹೇಳೋಂವಾ. ಅಂವಾ ಹೇಳಿದ್ದ ಕೇಳಿ ಕೇಳಿ ನಮಗ ಬಿಡಲಿಕ್ಕೂ ಬರಂಗಿಲ್ಲಾ ಕೊಡಲಿಕ್ಕೂ ಬರಂಗಿಲ್ಲಾ ಆಗಿ ಕಡಿಕೆ ತಲಿ ಕೆಟ್ಟ ತೊಗೊ ನಂಬದೊಂದ ಹತ್ತ ರೂಪಾಯಿ ಹಾಕ ಅಂತ ನಮ್ಮ ಪಾಕೇಟ್ ಮನಿ ಒಳಗಿನ ರೊಕ್ಕಾ ಕೊಡೋರ. ಅಂವಾ ಹಿಂಗ ಒಂದ ಹತ್ತ ಹದಿನೈದ ದೋಸ್ತರ ಕಡೆ ’ನಾ ಮಂತ್ರಾಲಯಕ್ಕ ಹೊಂಟೇನಿ, ಹುಂಡಿ ಒಳಗ ಏನರ ಹಾಕೋದಿದ್ದರ ಕೊಡ್ರಿ’ ಅಂತ ಇಸ್ಗೊತಿದ್ದಾ.
ಇನ್ನ ಹಿಂಗ ದೇವರ ಸಂಬಂಧ ಸಾಕ್ಷಾತ ದೇವ ಮಾನವನ ಬಾಯಿ ಬಿಟ್ಟ ಕೇಳಿದರ ಯಾರ ಇಲ್ಲ ಅಂತಾರ ಹೇಳ್ರಿ? ಅರ್ಧಕ್ಕ ಅರ್ಧಾ ಮಂದಿ ಅಂವಾ ಕೇಳಿದ ಮ್ಯಾಲೆ ಇಲ್ಲಾ ಅನಬಾರದು ಅಂತ ದೈವ ಸಂಕಟದ್ಲೇ ಕೊಡ್ತಿದ್ದರು. ಅಲ್ಲಾ ಅದು ಯಾವಾಗರೊಮ್ಮೆ ಕೇಳಿದರ ಛಂದರಿಪಾ. ವರ್ಷದಾಗ ಮೂರ-ನಾಲ್ಕ ಸರತೆ ‘ನಾ ಮಂತ್ರಾಲಯಕ್ಕ ಹೋಗ್ತೇನಿ….’ ಅಂತ ಅಂದರ ಹೆಂಗ?….. ನಮಗ ಇತ್ತಲಾಗ ಡೈರಕ್ಟ ಕೊಡಂಗಿಲ್ಲಾ ಅನಲಿಕ್ಕೆ ಬರಂಗಿಲ್ಲಾ. ಕೊಟ್ಟಿಲಿಲ್ಲಾ ಅಂತ ಅಂದರ ಪಾಪ ಹತ್ತಿದರ ಏನ್ಮಾಡ್ತೀರಿ?
ಹಂಗ ಖರೇ ಹೇಳ್ಬೇಕಂದರ ನನಗಂತೂ ಕೊಡಲಿಕ್ಕೆ ಕಿಸೆದಾಗ ರೊಕ್ಕನ ಇರ್ತಿದ್ದಿಲ್ಲಾ. ಅಲ್ಲಾ ಆವಾಗ ನನ್ನ ಪಾಕೇಟ್ ಮನಿನ ತಿಂಗಳಿಗೆ ಹದಿನೈದ ರೂಪಾಯಿ ಇತ್ತ.
ನಾ ಒಂದ ಸರತೆ ತಲಿ ಕೆಟ್ಟ
’ಏ, ಹೋಗಲೇ..ನಾವ ಸ್ಮಾರ್ಥರ, ರಾಯರ ಮಠಕ್ಕ ರೊಕ್ಕಾ ಕೊಡಂಗಿಲ್ಲಾ, ನಂಬದೇನ ಇದ್ದರು ಶಂಕರ ಮಠ’ ಅಂತ ಅಂದ ಬಿಟ್ಟೆ. ತೊಗೊ ಅದನ್ನ ನಮ್ಮ ಮನಿ ಬಂದ ನಮ್ಮಪ್ಪಗ ಹೇಳಿ ಅವನ ಕಡೆ
’ರಾಯರಿಗೆ ಹಿಂಗ ಅಂತಿ ಏನಲೇ ದನಾಕಾಯೋನ…ವಳತ ಅನ್ನ….ನೂರ ಸರತೆ ಪೂಜ್ಯಾಯ ರಾಘವೇಂದ್ರಾಯ ಹೇಳ’ ಅಂತ ನನಗ ಛೀ..ಥೂ..ಅನಿಸಿಸಿ ಕಡಿಕೆ ನಮ್ಮಪ್ಪನ ಕಡೆ ಇಪ್ಪತ್ತ ರೂಪಾಯಿ ಇಸ್ಗೊಂಡ ಹೋದಾ.
ನಂಗ ಪಿತ್ತ ನೆತ್ತಿಗೇರತ, ನಾ ಆಗಿದ್ದರ ಹತ್ತ ರೂಪಾಯಿದಾಗ ಮುಗಸ್ತಿದ್ದೆ, ಈ ಮಗಾ ನಮ್ಮಪ್ಪಗ ರಿಲಿಜಿಯಸ್ ಬ್ಲ್ಯಾಕ್ ಮೇಲ್ ಮಾಡಿ ಇಪ್ಪತ್ತ ರೂಪಾಯಿ ಕೆತ್ತಿದ್ನಲಾ ಅಂತ ಅವಂಗ ನಾ ಮರದಿವಸ ಕರದ
’ನಮ್ಮಪ್ಪ ಹೇಳ್ಯಾನ, ಆ ಇಪ್ಪತ್ತ ರೂಪಾಯಿ ಒಳಗ ಜೋಡ ಕಾಯಿ ಒಡಿಸಿ, ಮಹಾ ಮಂಗಳಾರತಿ, ಕುಂಕುಮಾರ್ಚನಿ ಮಾಡಿಸಿ, ನಾಲ್ಕ ಕಲಸಕ್ಕರಿ ಪಾಕೇಟ್ ಪ್ರಸಾದ ತೊಗೊಂಡ ಉಳದದ್ದನ್ನ ಹುಂಡಿಗೆ ಹಾಕಬೇಕಂತ’ ಅಂತ ಹೇಳಿದೆ. ನಾ ಅಷ್ಟ ಹೇಳಿದ್ದ ತಡಾ ಅವಂಗ ತಲಿ ಕೆಟ್ಟ ಹೋತ.
“ಲೇ, ಇಪ್ಪತ್ತ ರೂಪಾಯಿ ಒಳಗ ಏನೇನ ಮಾಡಬೇಕಲೇ. ತೊಗೊ ನಿಮ್ಮಪ್ಪನ ರೊಕ್ಕಾ, ಇಲ್ಲೇ ಗುರುವಾರ ಮಠದಾಗ ಅಪ್ಪಾ-ಮಗಾ ಎಷ್ಟ ಬೇಕ ಅಷ್ಟ ಕಾಯಿ ಒಡಿಸಿಗೊಂಡ ಉಳದದ್ದ ಹುಂಡ್ಯಾಗ ಹಾಕೋರಿ” ಅಂತ ಆ ಇಪ್ಪತ್ತ ರೂಪಾಯಿ ನನ್ನ ಮಾರಿಗೆ ಬಡದ ಹೋದಾ. ನಾ ಮತ್ತ ಗುರವಾರ ತನಕಾ ವೇಟ್ ಮಾಡಿ ಅಲ್ಲಿ ತನಕಾ ನನ್ನ ಕಡೆ ಉಳದದ್ದ ಎರಡ ರೂಪಾಯಿ ಒಳಗ ಒಂದ ರೂಪಾಯಿ ಹುಂಡಿಗೆ ಹಾಕಿ ಇನ್ನೊಂದ ರೂಪಾಯಿದ್ದ ಕಲಸಕ್ಕರಿ ಪಾಕೇಟ್ ತೊಗೊಂಡ
’ಮನ್ಯಾ ಮಂತ್ರಾಲಯದ ಪ್ರಸಾದ ಅಂತ ಇಷ್ಟ ಕೊಟ್ಟಾನ ನೋಡ್ ’ ಅಂತ ನಮ್ಮಪ್ಪಗ ಕೊಟ್ಟ ರಾಯರ ಪುಣ್ಯಾ ಕಟ್ಕೊಂಡಿದ್ದೆ.
ಅಲ್ಲಾ, ಒಂದ ಮೆಚ್ಚಬೇಕಂದರ ಅಂವಾ ಯಾರ ಕಡೆ ಮಂತ್ರಾಲಯಕ್ಕ ಹೋಗಬೇಕಾರ ಹುಂಡಿಗೆ ಹಾಕಲಿಕ್ಕೆ ಅಂತ ರೊಕ್ಕಾ ಇಸ್ಗೊಂಡ ಹೋಗಿರ್ತಿದ್ದಾ ಅವರಿಗೇಲ್ಲಾ ವಾಪಸ ಬಂದ ಮ್ಯಾಲೆ ಕಲಸಕ್ಕರಿ ಪಟ್ನಾ- ಅಕ್ಷತಾ ತಂದ ಕೊಡ್ತಿದ್ದಾ.
ನನಗ ಈ ಮಗಾ ನಮ್ಮ ಕಡೆ ರೊಕ್ಕಾ ಇಸಗೊಂಡ ಅದನ್ನ ಪೂರ್ತಿ ಹುಂಡಿಗೆ ಹಾಕಿದ್ದ ಖರೇ ಇದ್ದರ ಇಷ್ಟಮಂದಿಗೆ ಕಲಸಕ್ಕರಿ ಪಾಕೇಟ ತರಲಿಕ್ಕೆ ರೊಕ್ಕ ಎಲ್ಲಿಂದ ಬಂತು? ಅಂವಾ ಏನ ತನ್ನ ಕೈಲೇ ರೊಕ್ಕಾ ಹಾಕ್ಯಾನೋ ಇಲ್ಲಾ ನಮ್ಮ ರೊಕ್ಕದಾಗ ಅಡ್ಜಸ್ಟ ಮಾಡಿ ತಂದಾನೋ ಅಂತ ಡೌಟ್ ಬರಲಿಕತ್ತ. ಹಂಗ ನಮ್ಮ ರೊಕ್ಕದಾಗ ಅಡ್ಜಸ್ಟ ಮಾಡಿದ್ದರ ಅಂವಾ ನಮ್ಮ ರೊಕ್ಕಾ ಹುಂಡಿ ಹೆಸರಿಲೇ ಯಾಕ ಹೊಡಕೊಂಡಿರಬಾರದು ಅಂತನೂ ಸೌಂಶಯ ಬರಲಿಕತ್ತ.
ಇತ್ತಲಾಗ ಅವಂದ ಮಂತ್ರಾಲಯಕ್ಕ ಹೋಗ ಬೇಕಾರ ಪಟ್ಟಿ ಕೆತ್ತೋದ ಮುಂದ ನೌಕರಿ ಹತ್ತಿದ ಮ್ಯಾಲೇನೂ ಕಂಟಿನ್ಯೂ ಇತ್ತ. ಅದರಾಗ ಅಂವಾ ಲಗೂ ಸೆಟ್ಲ ಆಗಿದ್ದ ನೋಡಿ ಮಂದಿ ’ಪಾಪ ಹುಡುಗ ರಾಯರಿಗೆ ಭಾಳ ನಡ್ಕೋತದ..ರಾಯರ ಕೈ ಬಿಡಲಿಲ್ಲ…ನಮಗ ಮಂತ್ರಾಲಯಕ್ಕ ಹೋಗಲಿಕ್ಕೆ ಆಗದಿದ್ದರೂ ಅಡ್ಡಿಯಿಲ್ಲಾ ಅವನರ ಹೋಗ್ತಾನಲಾ’ ಅಂತ ಅಂವಾ ಕೇಳಿದಾಗೊಮ್ಮೆ ರೊಕ್ಕಾ ಕೊಟ್ಟ ಕೊಡ್ತಿದ್ದರು. ಅದರಾಗ ನಮ್ಮಪ್ಪ ಅಂತು ಅಂವಾ ಮಂತ್ರಾಲಯಕ್ಕ ಹೋಗಬೇಕಾರೊಮ್ಮೆ ಕಂಪಲ್ಸರಿ ನೀ ಹುಂಡಿಗೆ ರೊಕ್ಕಾ ಕೊಡಬೇಕ ಅಂತ ನಂಗ ಸ್ಟ್ಯಾಂಡಿಂಗ್ ಇನಸ್ಟ್ರಕ್ಶನ್ ಬ್ಯಾರೆ ಕೊಟ್ಟ ಬಿಟ್ಟಿದ್ದಾ.
ಅಂವಾ ಹಿಂಗ ಮಂತ್ರಾಲಯಕ್ಕ ಹೋಗಬೇಕಾರೊಮ್ಮೆ ರೊಕ್ಕಾ ಕೇಳ್ತಿದ್ನಲಾ ಅದಕ್ಕ ನಾವ ದೋಸ್ತರ ಅವಂಗ ಭೇಟ್ಟಿ ಆದಾಗೊಮ್ಮೆ ’ಮತ್ತೇನಲೇ ಮಂತ್ರಾಲಯಕ್ಕ ಯಾವಾಗ ಹೊಂಟಿ’ ಅಂತ ಮೊದ್ಲಿಂದ ಚಾಷ್ಟಿ ಮಾಡ್ತಿದ್ದವಿ. ಅದು ಇವತ್ತೂ ಮುಂದವರದದ. ಅಂವಾ ಏನ ಮಂತ್ರಾಲಯಕ್ಕ ಹೋಗ ಬೇಕಾರೊಮ್ಮೆ ಕೇಳೋದ ಬಿಟ್ಟಿಲ್ಲಾ ನಾವ ದೋಸ್ತರ ಕೋಡೊದು ಬಿಟ್ಟಿಲ್ಲಾ…ಕಾಡಸೋದು ಬಿಟ್ಟಿಲ್ಲಾ.
ಆದರ ಒಂದ ಮಾತ ನಾ ಖರೇ ಹೇಳ್ತೇನಿ. ನಾವ ಇಷ್ಟೇಲ್ಲಾ ಅವಂಗ ’ಮತ್ತೇನಲೇ ಮಂತ್ರಾಲಯಕ್ಕ ಯಾವಾಗ ಹೊಂಟಿ’ ಅಂತ ಕಾಡಸ್ತಿದ್ದವಿ ಖರೇ ಆದರ ಒಂದ ದಿವಸನೂ ಅಂವಾ ನಮ್ಮ ಕಡೆ ಇಸ್ಗೊಂಡ ಹುಂಡಿ ರೊಕ್ಕಾ ಮಿಸ್ ಯೂಜ್ ಮಾಡಿದಂವಾ ಅಲ್ಲಾ. ಮತ್ತ ನಾವೂ ಅವನ ಮ್ಯಾಲೆ ರಾಯರ ಮ್ಯಾಲೆ ಭಾರ ಹಾಕಿ ಕೊಡ್ತಿದ್ದವಿ ಬಿಡ್ರಿ ಸುಳ್ಳ ಯಾಕ ಹೇಳ್ಬೇಕ. ಇನ್ನ ಪ್ರಸಾದ ಅಂತೂ ಪಾಪ ತನ್ನ ರೊಕ್ಕದಲೇನ ತಂದ ಊರ ಮಂದಿಗೆಲ್ಲಾ ಹಂಚತಿತ್ತ.
ಅಲ್ಲಾ ಈಗ ಎಲ್ಲಾ ಬಿಟ್ಟ ಅಂವಾ ಯಾಕ ನೆನಪಾದ ಅಂದರ ಹೋದವಾರ ನಾ ನಮ್ಮಪ್ಪನ ಉದಕ ಶಾಂತಿಗೆ ಗೋಮೂತ್ರ ಹಿಡಿಲಿಕ್ಕೆ ಹೋದಾಗ ಅವನು ಬಂದಿದ್ದಾ. ನಾ ಅವನ್ನ ನೋಡಿದವನ ’ಮತ್ತೇನಲೇ ಮಂತ್ರಾಲಯಕ್ಕ ಯಾವಾಗ ಹೊಂಟಿ’ ಅಂತ ಕೇಳಿ ಬಿಟ್ಟೆ
’ಏ, ಮುಂದಿನ ವಾರ ….ರಾಯರ ಆರಾಧನಿಗೆ..’ ಅಂತ ಹೇಳಿ ನಕ್ಕಾ. ನನಗ ನಮ್ಮಪ್ಪನ ಮಾತ ನೆನಪಾಗಿ ಒಂದ ನೂರ ರೂಪಾಯಿ ರಾಯರ ಹುಂಡಿಗೆ ಕೊಟ್ಟ ಬಂದೆ.
ಹಂಗ ನಾ ಅವನ ಬಗ್ಗೆ ಎಷ್ಟ ಆಡಿದರು, ಬರದರು ಅವನ ಪುಣ್ಯಾ ನನಗೇನ ಬರಂಗಿಲ್ಲಾ ಬಿಡ್ರಿ. ಆ ರಾಯರು ನಮ್ಮ ಮನ್ಯಾಗ ಜೀವನ ಪರ್ಯಂತ ಮಂತ್ರಾಲಯಕ್ಕ ಹೋಗೊ ಶಕ್ತಿ ಕೊಡ್ಲಿ. ನನಗ ಹುಂಡಿಗೆ ಹಾಕೋ ಸಾಮರ್ಥ್ಯ ಕೊಡಲಿ, ಇನ್ನ ಅಂವಾ ಮಂತ್ರಾಲಯಕ್ಕ ಹೋಗಬೇಕಾರೊಮ್ಮೆ ಹುಂಡಿಗೆ ನೀ ರೊಕ್ಕಾ ಕೊಡ ಅಂತ ಆರ್ಡರ್ ಮಾಡಿದ ನಮ್ಮಪ್ಪನ ಆತ್ಮಕ್ಕ ಶಾಂತಿ ಸಿಗಲಿ.