ಜೀರಗಿ ಗಂಟ ಕಳ್ಳಿ

ಇದ ಒಂದ ದೀಡ ತಿಂಗಳ ಹಿಂದಿನ ಮಾತ ಇರಬೇಕ ನಮ್ಮ ಮೌಶಿ ಮಗಂದ ಮದ್ವಿ ಇತ್ತ, ಅದನ್ನ ತಪ್ಪಸಲಿಕ್ಕೆ ಬರಂಗಿಲ್ಲಾ ಮೌಶಿ ಮಗಂದ ಬ್ಯಾರೆ ಅದರಾಗ ನಮ್ಮ ಮೌಶಿ ದೇವರ ಊಟಕ್ಕ ’ಹಿತ್ತಲಗೊರ್ಜಿ ಮುತ್ತೈದಿ’ ಅಂತ ನನ್ನ ಹೆಂಡತಿಗೆ ಕರದ ಹೊಟ್ಟಿ ತುಂಬ ಊಟಕ್ಕ ಹಾಕಿ ಒಂದ ಆರವಾರಿ ಪಾಲಿಸ್ಟರ್ ಪತ್ಲಾ ಬ್ಯಾರೆ ಕೊಟ್ಟ ಕಳಸಿದ್ಲು. ಅಲ್ಲಾ ಮ್ಯಾಲೆ ಲಗ್ನ ಪತ್ರಾ ಕೊಡಲಿಕ್ಕೆ ಬಂದಾಗ ರಿಟರ್ನ್ ಗಿಫ್ಟ ಅಂತ ಅಂತಾರಲಾ ಅದನ್ನ ಬ್ಯಾರೆ ಕೊಟ್ಟ ಹೋಗಿದ್ಲು. ಹಂಗ ಅದರಾಗೂ ಒಂದ ನಮ್ಮವ್ವಗ, ಒಂದ ನನ್ನ ಹೆಂಡತಿಗೆ ಅಂತ ಆರವಾರಿ ( ಕಲರ್ ಚೆಂಜ್, ಪ್ಯಾಟರ್ನ್ ಸೇಮ್) ಪತ್ಲಾ ಕೊಟ್ಟ ನನಗ, ನಮ್ಮಪ್ಪಗ ಒಂದೊಂದ ಸ್ಲೀವ್ ಲೇಸ್ ಹಾಫ್ ಶರ್ಟ ಆಗೊ ಹಂತಾ ಶರ್ಟ್ ಪೀಸ್ ಬ್ಯಾರೆ ಕೊಟ್ಟ ಹೋಗಿದ್ಲು. ಅಲ್ಲಾ ಹಂಗ ಮಂದಿ ಗಿಫ್ಟ ಕೊಟ್ಟದ್ದಕ್ಕ ಹೆಸರ ಇಡಬಾರದ ಖರೆ ಆದರ ಅವು ಮತ್ತೊಬ್ಬರಿಗೆ ಕೊಡೊ ಹಂಗರ ಇರಬೇಕ ಬಿಡ್ರಿ.

ಅನ್ನಂಗ ಯಾರಿಗೆ ’ಹಿತ್ತಲಗೊರ್ಜಿ ಮುತ್ತೈದಿ’ ಅಂದರ ಗೊತ್ತಿಲ್ಲಾ ಅವರಿಗೆ ಇನ್ನೊಮ್ಮೆ ಹೇಳಿ ಬಿಡ್ತೇನಿ……’ಹಿತ್ತಲಗೊರ್ಜಿ ಮುತ್ತೈದಿ’ ಅಂದರ ‘ಯಾ ಮುತ್ತೈದಿಗೆ ( ಮುತ್ತೈದಿ ಅಂದ ಮ್ಯಾಲೆ ಗಂಡ ಅಂತೂ ಇರಬೇಕ ಆ ಮಾತ ಬ್ಯಾರೆ) ತವರಮನ್ಯಾಗ ಅವ್ವಾ-ಅಪ್ಪಾ ಇನ್ನೂ ಇರ್ತಾರೋ, ಅತ್ತಿಮನ್ಯಾಗ ಅತ್ತಿ-ಮಾವಗ ಅಕಿ ಇನ್ನೂ ಜೀವಂತ ಇಟ್ಟಿರತಾಳೋ ಹಂತಾಕಿಗೆ ಹಿತ್ತಲಗೊರ್ಜಿ ಮುತ್ತೈದಿ’ ಅಂತ ಕರಿತಾರ. ಹಿಂತಾ ಮುತ್ತೈದಿಯರು ಸಾವಿರಕ್ಕ ಒಬ್ಬರ ಸಿಗತಾರ. ಹಂತಾದರಾಗ ನನ್ನ ಹೆಂಡತಿನೂ ಒಬ್ಬೋಕಿ ಹಿಂಗಾಗಿ ಇಕಿಗೆ ಭಾರಿ ಡಿಮಾಂಡ್ ಅದ. ಇನ್ನ ಇದ ಚಾನ್ಸ ತಡಿ ಅಂತ ನನ್ನ ಹೆಂಡ್ತಿ ಅಂತೂ ಸೀರಿ ಕೊಟ್ಟರ ಇಷ್ಟ ನಾ ಬರ್ತೇನಿ ಅಂತ ಕರಾರ ಮಾಡಿನ ’ಹಿತ್ತಲ ಗೊರ್ಜಿ ಮುತ್ತೈದಿ’ ಆಗಿ ಹೋಗ್ತಾಳ.

ಇನ್ನ ದೇವರ ಊಟಕ್ಕ ಹೋಗಿ ಸೀರಿ ತೊಗೊಂಡ ಬಂದೇವಿ, ಮ್ಯಾಲೆ ಅವರ ರಿಟರ್ನ್ ಗಿಫ್ಟ ಬ್ಯಾರೆ ಕೊಟ್ಟ ಹೋಗಿದ್ರು ಅಂದ ಮ್ಯಾಲೆ ನಾವ ಲಗ್ನಕ್ಕ ಹೋಗಿ ಗಿಫ್ಟ ಕೊಡಬೇಕಲಾ. ಲಗ್ನ ಆಡ್ ಡೇ ಅಂದರ ಗುರುವಾರ ಇತ್ತ ಹಿಂಗಾಗಿ ನಾ ಕರೆಕ್ಟ ಸಾರ್ವಜನಿಕ ಅಕ್ಕಿಕಾಳ ಟೈಮಕ್ಕ ಹೋದೆ. ಅಲ್ಲೇ ನೋಡಿದ್ರ ಇನ್ನೂ ಮೊದ್ಲನೇ ಮದುವಿನ ಮುಗದಿದ್ದಿಲ್ಲಾ, ಆ ಹುಡಗ ಇನ್ನೂ ಧೋತ್ರಾ ಶೆಲ್ಲೆದ ಮ್ಯಾಲೆ ಇದ್ದಾ.

’ ಏ ಭಾಳ ಲೇಟಾತಲಾ ಇನ್ನ ಯಾವಾಗ ಹುಡಗ ಡ್ರೇಸ್ ಚೇಂಜ್ ಮಾಡಿ ಸ್ಟೇಜಿಗೆ ಬರಬೇಕು, ಯಾವಾಗ ಸಾರ್ವಜನಿಕ ಅಕ್ಕಿಕಾಳು’ಅಂತ ಕೇಳಿದರ ಹಕೀಕತ್ ಗೊತ್ತಾತು ಆ ಹುಡಗಿ ತಂಗಿ ಒಬ್ಬೋಕಿ ಲಗ್ನ ಪ್ರಥಾ ನಡದಾಗ ಜೀರಗಿ ಗಂಟ ಕಳುವು ಮಾಡ್ತಾರಲಾ ಹಂಗ ಕಳುವು ಮಾಡಿದೋಕಿ ಒಂದ ತಾಸ ತನಕ ಕಾಡಿಸಿ ಕಾಡಿಸಿ ಜೀರಗಿ ಗಂಟ ವಾಪಸ ಕೊಟ್ಟಿದ್ಲಂತ. ಹಿಂಗಾಗಿ ಎಲ್ಲಾ ಕಾರ್ಯಕ್ರಮ ನಮ್ಮ ನಿಜಾಮುದ್ದೀನ ಟ್ರೇನಗತೆ ಲೇಟ ನಡದಿದ್ದವು.

ಅಲ್ಲಾ ಹಂತಾದೇನ ಕೇಳಿದ್ಲಪಾ ಇಕಿ ನಮ್ಮ ತಮ್ಮ ಅದನ್ನ ಕೊಡಲಿಕ್ಕೆ ಇಷ್ಟ ಮೀನಾ ಮೇಷ ಮಾಡಿದಾ?ಯಾಕಂದರ ನಮ್ಮ ಮೌಶಿ ಮಗಾ ಮೂರ ವರ್ಷದಿಂದ ಕನ್ಯಾ ಹುಡಕಿ ಹುಡಕಿ ಈಗ ಮದುವಿ ಆಗಲಿಕತ್ತಾನ ಇನ್ನ ಹಂತಾ ಮದ್ವಿ ಒಂದ ಜೀರಗಿ ಗಂಟಿನ ಸಂಬಂಧ ಲೇಟ ಆಗಲಿಕ್ಕೆ ಬಿಡಂವಾ ಅಲ್ಲಾ ಅಂತ

’ಏ, ಯಾಕ ಆ ಜೀರಗಿ ಗಂಟ ಕಳುವು ಮಾಡಿದೋಕಿ, ಬಿ.ಜೆ.ಪಿ ’ಬಿ” ಫಾರ್ಮ್ ಕೇಳಿದ್ಲೊ ಇಲ್ಲಾ ಮುಂದ ಎಮ್ ಎಲ್ ಸಿ ಸೀಟ ಕೇಳಿದ್ಲೋ?…ಏನ ಕೇಳಿದ್ಲ ಅದನ್ನ ಕೊಟ್ಟ ಭಡಾ ಭಡಾ ಮದ್ವಿ ಮುಗಸ ಬೇಕಿಲ್ಲ’ ಅಂತ ನಾ ಅಂದರ

’ಏ, ಆ ಹುಡಗಿ ಭಾಳ ಜೋರಿದ್ದಾಳೋ ಮಾರಾಯಾ, ಅಕಿಗೇನೋ activa honda 3g ಬೇಕಂತ’ ಅಂತ ನಮ್ಮ ಇನ್ನೊಬ್ಬ ಕಜೀನ್ ಹೇಳಿದಾ. ಹಕ್ಕ್ ಅವನೌನ….ಏನಪಾ ಇದ, ನಮ್ಮ ಮೌಶಿ ಮಾತು ಕತಿ ಟೈಮ ಒಳಗ ಎಷ್ಟ ಬಡ್ಕೊಂಡ್ಲು ’ಇರೊಂವ ಒಬ್ಬ ಮಗಾ ಇದ್ದಾನ, ಅದು ಬೆಂಗಳೂರಾಗ ಸಾಫ್ಟವೇರ್ ಇಂಜೀನಿಯರ.. ವರದಕ್ಷಿಣಿ ಒಳಗ ಒಂದ ನ್ಯಾನೋ ಕೇಳಲಿಲ್ಲಾ ಅಂದರ ಹೆಂಗ’ ಅಂತ, ನಾವೇಲ್ಲಾ ಬೈದ..ನಿನ್ನ ಮಗ್ಗ ಕನ್ಯಾ ಸಿಕ್ಕದ್ದ ದೊಡ್ಡದ ಹಂತಾದರಾಗ ಕಾರ್ ಕೇಳಿ ಎಲ್ಲೇರ ಮುರಕೊಂಡ ಗಿರಕೊಂಡಿ ಸುಮ್ಮನ ಕೂಡ ಅಂತ ಅಕಿನ್ನ ಮಾತುಕತಿಗೆ ಬಿಟ್ಟ ಹೋಗಿ ಬರೇ ಮೂರ ತೊಲಿ ಬಂಗಾರ, ಮುವತ್ತ ಸಾವಿರ ಮ್ಯಾಲೆ ಲಗ್ನ ಹುಬ್ಬಳ್ಳಿ ಭವಾನಿ ರಾಯರ ಮಠದಾಗ ಆಗಬೇಕ ಅಂತ ಫಿಕ್ಸ ಮಾಡ್ಕೊಂಡ ಬಂದಿದ್ವಿ, ಇಲ್ಲಿ ನೋಡಿದ್ರ ಹೆಣ್ಣಿನವರ ಜೀರಗಿ ಗಂಟ ಕಳುವು ಮಾಡಿ ಯಾಕ್ಟೀವಾ ೩ಜಿ ಕೇಳಿದ್ರ ಏನ್ಮಾಡ್ತೀರಿ?

ಅಲ್ಲಾ ಈ ಜೀರಗಿ ಗಂಟ ಪದ್ದತಿ ಯಾರ ಕಂಡ ಹಿಡದಾರ ಅಂತೇನಿ..ನಮ್ಮಪ್ಪಂತು ಯಾರರ ಜೀರಗಿ ಗಂಟ ಕಳುವು ಮಾಡಿದರ ಹಿಂಗ ಬೈತಾನ
’ಲೇ…ಇದ ಬ್ರಾಹ್ಮರ ಪದ್ಧತಿ ಅಲ್ಲಾ, ನಾರ್ಥ ಇಂಡಿಯಾದ್ದ ಪದ್ಧತಿ…ಸುಳ್ಳ ಸುಳ್ಳ ರೊಕ್ಕದ ಆಶಾಕ್ಕ ಏನರ ಮಾಡಬ್ಯಾಡ್ರಿ’ ಅಂತ ಬೈದ ಜೀರಗಿ ಗಂಟ ಕಸಗೊಂಡ ಬಂದ ಬಿಡ್ತಿದ್ದಾ.

ಹಂಗ ೧೯೭೨ರಾಗ ನಮ್ಮವ್ವನ ಲಗ್ನದಾಗ ಇದ ನಮ್ಮ ಮೌಶಿನ ಜೀರಗಿ ಗಂಟ ಕದ್ದ ನೂರ ರೂಪಾಯಿ ಕೇಳಿದ್ಲಂತ ಆವಾಗ ನಮ್ಮಪ್ಪಾ ನೂರ ರೂಪಾಯಿ ಇಲ್ಲಾ, ಇಪ್ಪತ್ತ ಕೊಡ್ತೇನಿ ಬೇಕಾರ ತೊಗೊ ಇಲ್ಲಾ ನಿಮ್ಮ ಅಕ್ಕನ್ನ ವಾಪಸ ತೊಗೊಂಡ ಹೋಗ ಅಂತ ಹೇಳಿದ್ನಂತ…ಅಲ್ಲಾ ಹಂಗ ಅವತ್ತ ಅಂವಾ ನಮ್ಮವ್ವನ್ನ ವಾಪಸ ಕೊಟ್ಟಿದ್ದರ ಇವತ್ತ ನಾ ಹುಟ್ಟಿ ಇದನ್ನ ಬರಿತಿದ್ದಿಲ್ಲ ಬಿಡ್ರಿ…ಅಲ್ಲಾ ಆವಾಗ ಬಂಗಾರ ೧೮೦ ರೂಪಾಯಿಕ್ಕ ತೊಲಿ ಇತ್ತಂತ ಹಂತಾದರಾಗ ನಮ್ಮಪ್ಪಾ ಇಪ್ಪತ್ತ ರೂಪಾಯಿ ಜೀರಗಿ ಗಂಟ ಕದ್ದೋಕಿ ಕೊಟ್ಟಿದ್ದಾ ಅಂದರ ದೊಡ್ಡ ಮನಸ ಬಿಡ್ರಿ ನಮ್ಮಪ್ಪಂದ.

ಇತ್ತಲಾಗ ಮದ್ವಿ ಮನ್ಯಾಗ ಆ ಹುಡಗಿ ತಂಗಿ ಜೀರಗಿ ಗಂಟ ಕಳುವು ಮಾಡಿದ್ದ ಕೇಳಿ ಪಾಪ ನಮ್ಮ ಮೌಶಿ ಗಾಬರಿ ಆಗಿ ಅಲ್ಲೇ ಛತ್ರದಾಗ ಮೂರ್ಚಿ ಹೋಗಿ ಬಿಳೋದ ಒಂದ ಬಾಕಿ ಇತ್ತಂತ. ಅಲ್ಲಾ ಅಕಿ ಗಂಡನ ಇಪ್ಪತ್ತ ವರ್ಷದಿಂದ tvs champ ಮ್ಯಾಲೆ ಅಡ್ಡಾಡಲಿಕತ್ತಾನ ಹಂತಾದರಾಗ ಇನ್ನ ಅಕಿ ಮಗನ ಜೀರಗಿ ಗಂಟ ಕದ್ದೋಕಿಗೆ activa honda ಕೊಡಸ ಅಂದರ, ಅಲ್ಲಾ ಹುಡಗ ಸಾಫ್ಟವೇರ್ ಇಂಜೀನಿಯರ, ನಮ್ಮ ಕಡೆ ಕನ್ಯಾ ಕಡಮಿ ಅವ ಅದೇಲ್ಲಾ ಖರೆ…ಆದ್ರ ಹಂಗ ಅಂತ ಈ ಹೆಣ್ಣಿನವರ ತಾವ ಏನ ಕೇಳಿದರ ಕೊಡ್ತಾರ ಅಂತ ತಿಳ್ಕೊಂಡಾರೇನ ಮತ್ತ?

ಕಡಿಕೆ ನಡಕ ಆದೋರ ಆ ಹುಡಗಿಗೆ ಹಿಂಗೇಲ್ಲಾ ಹಟಾ ಮಾಡಬಾರದ ಮೂಹೂರ್ತ ಮೀರಿ ಹೋಗ್ತದ ಆಮ್ಯಾಲೆ ಮತ್ತ ಮುಂದಿನ ಎಲ್ಲಾ ಕಾರ್ಯಕ್ರಮ ಲೇಟ್ ಆಗ್ತದ ಛತ್ರಾ ನಾಲ್ಕ ಗಂಟೇಕ್ಕ ಖಾಲಿ ಮಾಡ್ಬೇಕು, ಮುಂದ ಕನ್ಯಾ ಕರಕೊಂಡ ಬೀಜಾಪುರಕ್ಕ ಹೋಗ ಬೇಕು ಕಡಿಕೆ ಎಲ್ಲರ ಫಸ್ಟ ನೈಟ ಹೋಗಿ ಫಸ್ಟ ಡೇ ಆಗಬಾರದು, ಏನಿಲ್ಲದ ಬೀಜಾಪುರದಾಗ ಎಂಟ ಗಂಟೇಕ್ಕ ಮುವತ್ತೆಂಟ್ ಟೆಂಪರೇಚರ್ ಇರ್ತದ ಅಂತ ತಿಳಿಸಿ ಹೇಳಿ ಹತ್ತ ಸಾವಿರ ರೂಪಾಯಕ್ಕ ಡೀಲ್ ಮುಗಿಸಿ ಜೀರಗಿ ಗಂಟ ಇಸಗೊಂಡ ಬಂದಿದ್ದರಂತ. ಏನ್ಮಾಡ್ತೀರಿ?

ಅಲ್ಲಾ ಹಂಗ ನನ್ನ ಲಗ್ನದಾಗೂ ಜೀರಗಿ ಗಂಟ ಕಳುವು ಮಾಡಿದ್ರು, ಹಂಗ ನಮ್ಮ ಹೆಂಡತಿ ಮನೆ ಕಡೆ ಒಬ್ಬಕ್ಕಿ ಇದ್ದಾಳ ಅಕಿ ಪ್ರೋಫೆಶನ್ ಜೀರಗಿ ಗಂಟ ಕಳುವು ಮಾಡೋದ. ಅಕಿಗೆ ಎಲ್ಲಾರೂ ಜೀರಗಿ ಗಂಟ ಕಳ್ಳಿನ ಅಂತಾರ, ಈಗ ಏನಿಲ್ಲಾಂದರ ಅಕಿಗೆ ೩೬-೩೮ ವಯಸ್ಸ ಆದರ ಅಕಿ ಹತ್ತ ವರ್ಷದೋಕಿ ಇದ್ದಾಗಿಂದ ಕಳ್ಳತನಾ ಶುರು ಮಾಡ್ಯಾಳ. ಇವತ್ತಿಗೂ ನನ್ನ ಹೆಂಡತಿ ಪೈಕಿ ಯಾರದರ ಲಗ್ನ ಇದ್ದರ ಅಕಿಗೆ ಒಂದ ಮದ್ವಿ ಕಾರ್ಡ ಜೊತಿ ಪತ್ಲಾ ಬಡದ ಜೀರಗಿ ಗಂಟ ಕಳುವ ಮಾಡಲಿಕ್ಕೆ ಗುತ್ತಲದಿಂದ ಗಾಡಿ ಖರ್ಚ್ ಕೊಟ್ಟ ಕರಸ್ತಾರ. ಏನ ಮಾಡ್ತೀರಿ? ಅಲ್ಲಾ ಅಕಿ ರೆಪ್ಯೂಟೇಶನ್ ಹೆಂಗ ಅದ ನೋಡ್ರಿ.

ಅಕಿ ನನ್ನ ಲಗ್ನದಾಗು ಜೀರಗಿ ಗಂಟ ಕಳುವು ಮಾಡಿದ್ಲು, ನಂಗರ ಮೊದ್ಲ ಟೇನ್ಶನ್, ಮೊದ್ಲನೇ ಮದ್ವಿ ಬ್ಯಾರೆ ಅದೂ ಇದ್ದೂರಾಗ, ಸಾವಿರ ಗಟ್ಟಲೇ ಜನಾ ಬಂದಿದ್ದರು, ಅದರಾಗ ಮುಂಜಾನೆ ಟಿಫಿನಗೆ ಬರೇ ಅವಲಕ್ಕಿ ಇಷ್ಟ ತಿನಬೇಕ ಅಂತ ಹಚ್ಚಿದ ಅವಲಕ್ಕಿ ಮೊಸರು ತಿನಸಿಸಿ ಅಸಿಡಿಟಿ ಏರಿಸಿ ಇಟ್ಟಿದ್ದರು. ನಾ ಖರೇ ಹೇಳ್ತೇನಿ ನಂಗ ಮದ್ವಿ ಯಾವಾಗ ಮುಗಿತದೋ ಅಂತ ಅನಿಸಿತ್ತ ಹಂತಾದರಾಗ ಇಕಿ ಜೀರಗಿ ಗಂಟ ಕಳುವು ಮಾಡಿ ನನ್ನ ಜೀವಾ ತಿನ್ನಲಿಕ್ಕತ್ಲು. ಪಾಪ ಇತ್ತಲಾಗ ನನ್ನಷ್ಟ ನನ್ನ ಹೆಂಡತಿನೂ ಹೈರಾಣ ಆಗಿದ್ಲು, ಇಬ್ಬರಿಗೂ ಒಟ್ಟ ಲಗ್ನ ಮುಗದ ಮನಿಗೆ ಹೋಗಿ ಮಲ್ಕೊಂಡರ ಸಾಕಾಗಿತ್ತ…ಅಂದರ ರೆಸ್ಟ ತೊಗೊಬೇಕಾಗಿತ್ತ. ನನ್ನ ಹೆಂಡತಿ ಸೂಕ್ಷ್ಮ ಆ ಜೀರಗಿ ಗಂಟ ಕಳ್ಳಿ ರೆಪ್ಯೂಟೇಶನ್ ಹೇಳಿದ್ಲು ನಾ ಅಕಿನ ಕರದ ಭಡಾ ಭಡಾ ಏನ ಬೇಕ ಹೇಳ ಅಂದೆ ಅಕಿ ಐದ ಸಾವಿರ ಅಂದ್ಲು……ಹೂಂ !!! ೨೦೦೦ನೇ ಇಸ್ವಿ ಒಳಗ, ಆವಾಗ ಸೆನ್ಸೆಕ್ಸ್ ಇನ್ನೂ ಐದ ಸಾವಿರ ದಾಟಿದ್ದಿಲ್ಲಾ ಹಂತಾದರಾಗ ಇಕಿ ಐದ ಸಾವಿರ ಕೇಳಿದ್ಲು, ಅಲ್ಲಾ ನಾ ವರದಕ್ಷಣಿ ತೊಗೊಂಡಿದ್ದ ಹದಿನೈದ ಸಾವಿರ ಅದರಾಗ ಐದ ಸಾವಿರ ವಾಪಸ ಕೊಡಲಿಕ್ಕೆ ನಂಗೇನ ಹುಚ್ಚ ಹಿಡದದ, ನಾ ಐದ ಸಾವಿರ ಭಾಳ ಆಗ್ತದ ಐದನೂರ ಕೊಡ್ತೇನಿ ನೋಡ ಅಂದೆ ಕಡಿಕೆ ಹಂಗೂ ಹಿಂಗೂ ಮಾತುಕತಿ ಮಾಡಿ ಸಾವಿರಕ್ಕ ಮುಗಿಸಿ ಐದನೂರ ಈಗ ಐದನೂರ ನಿಮ್ಮಕ್ಕ ಒಂದನೇ ಹಡದ ಹೆತ್ತಿಬಣಾ ಬಂದ ಮ್ಯಾಲೆ ಅಂತ ಉದ್ರಿ ಹೇಳಿ ಲಗ್ನಾ ಮಾಡ್ಕೊಂಡ ಬಂದಿದ್ದೆ. ಹಂಗ ನಾ ಭಾಳ ಸಸ್ತಾಗ ಪಾರ ಆಗೇನಿ ತೊಗೊರಿ ಅಕಿ ಕೈಯಾಗ, ಅಕಿ ನಂಗ ಸಾಲಿ ಬ್ಯಾರೆ ಯಾಕೋ ನನ್ನ ಮ್ಯಾಲೆ ಭಾಳ ಜೀವ ಇದ್ಲು ಹಿಂಗಾಗಿ ನಂದ ಭಾಳ ಜೀವಾ ತಿನ್ನಲಿಲ್ಲಾ, ಅಲ್ಲಾ ಮುಂದ ಜೀವನ ಪರ್ಯಂತ ಜೀವಾ ತಿನ್ನಲಿಕ್ಕೆ ಅವರಕ್ಕನ ಕೊಟ್ಟಿದ್ಲು ಆ ಮಾತ ಬ್ಯಾರೆ.

ಅಕಿ ಹಿಂಗ ತಮ್ಮ ಮಂದಿ ಪೈಕಿ ಲಗ್ನದಾಗ ಜೀರಗಿ ಗಂಟ ಕದ್ದ ಏನೇನ ಕೇಳಿ ತೊಗೊಂಡಾಳ ಒಂದ ರೌಂಡ ಕೇಳಿ ಬಿಡ್ರಿ …….

ನನ್ನ ಹೆಂಡತಿ ಅತ್ಯಾನ ಮಗಳ ಮದ್ವಿ ಒಳಗ ನಾಲ್ಕ ಎಳಿ ಬೆಳ್ಳಿ ಗೆಜ್ಜಿ ಕೇಳಿದ್ಲು..ಯಾಕ ಅಂದರ ’ ನಂಬದ ಬನಶಂಕರಿ ವಕ್ಕಲಾ, ನಾವು ಗೆಜ್ಜಿ ತೊಗೊಳಲಿಕ್ಕೆ ಬರಂಗಿಲ್ಲಾ ಹಿಂಗಾಗಿ ಯಾರರ ಕೊಡಸಬೇಕು’ ಅಂತ ಹಟಾ ಹಿಡದ ಆ ಗಂಡಿನವರ ಕಡೆ ಗೆಜ್ಜಿ ರೊಕ್ಕಾ ವಸೂಲ ಮಾಡಿದ್ಲು, ಪಾಪ ಆ ಹುಡಗ ತನ್ನ ಖಾಸ ಹೆಂಡತಿಗೆ ಎರಡ ಎಳಿ ಗೆಜ್ಜಿ ಹಾಕಿದ್ದಾ ಆದರ ಇಕಿಗೆ ನಾಲ್ಕ ಎಳಿ ಗೆಜ್ಜಿ ರೊಕ್ಕಾ ಬಡದಾ

ಇನ್ನ ನಮ್ಮ ದೊಡ್ಡ ಮಾವನ ಮಗಳ ಲಗ್ನದಾಗ ಎಸ್. ಟಿ. ಭಂಡಾರಿ ಒಳಗಿನ ಕಾಂಚಿಪುರದ ಸಿಲ್ಕ ಸಾರೀ ಕೇಳಿದ್ಲು
ಮತ್ತೊಬ್ಬರ ಲಗ್ನದಾಗ ಸ್ಯಾಮಸಂಗ್ ಗ್ಯಾಲೆಕ್ಸಿ ನೋಟ್ ಟು, ಇನ್ನೊಬ್ಬರ ಲಗ್ನದಾಗ ಬ್ಲೂ ಟೂಥ್ ಹೆಡ್ ಫೋನ್..ಹಿಂಗ ಅಕಿ ಎದರಗಿನ ವರನ ಕ್ಯಾಪ್ಯಾಸಿಟಿ ನೋಡಿ ಜಗ್ಗತಿದ್ಲು…

ಇನ್ನ ತನ್ನ ಲಗ್ನದಾಗ ಏನ ಮಾಡಿದ್ಲ ಗೊತ್ತ…ತನ್ನ ಲಗ್ನದಾಗ ನನ್ನ ಹೆಂಡತಿಗೆ ಕಳಸಗಿತ್ತಿ ಮಾಡಿದ್ರು, ಇಕಿ ನಮ್ಮಕಿಗೆ ಜೀರಗಿ ಗಂಟ ಕಳುವು ಮಾಡಲಿಕ್ಕೆ ಹಚ್ಚಿಸಿಸಿ ಏನ ಕೇಳಬೇಕಂತ ಹೇಳಿ ಕೊಟ್ಟಿದ್ಲು, ಅಷ್ಟರಾಗ ನನ್ನ ಹೆಂಡತಿದ ಲಗ್ನಾಗಿ ಎರಡ ವರ್ಷ್ ಬ್ಯಾರೆ ಆಗಿತ್ತ ಇಕಿಗೂ ಗಂಡನ ಕಿಸೆದಾಗಿಂದ ರೊಕ್ಕಾ ಕಳುವು ಮಾಡಿ ರೂಡಾ ಆಗಿತ್ತ ಅನ್ನರಿ ಇಬ್ಬರು ಸೇರಿ ಪಾಪ ಆ ಹುಡಗನ ಜೀರಗಿ ಗಂಟ ಕಳುವು ಮಾಡಿ ’ಲ್ಯಾಪ್ ಟಾಪ್ ಕೊಡಸ್ತೇನಿ’ ಅಂದರ ಇಷ್ಟ ಜೀರಗಿ ಗಂಟ ವಾಪಸ್ಸ ಕೋಡ್ತೇವಿ ಅಂತ ಹಟಾ ಹಿಡದರ. ಅಲ್ಲಾ ಕಳುವು ಮಾಡಿದೋಕಿ ನನ್ನ ಹೆಂಡ್ತಿ, ಅಕಿನರ ಒಂದ ದಿವಸ windows97 ನೋಡಿದೋಕಿ ಅಲ್ಲಾ, ms-dos ಬಿಟ್ಟರ ಬ್ಯಾರೆ ಕಂಪ್ಯೂಟರ್ ನಾಲೇಜ್ ಇಲ್ಲಾ ಹಂತಾಕಿ ’ಲ್ಯಾಪ್ ಟಾಪ್’ ಕೇಳ್ಯಾಳ ಅಂದ ಕೂಡ್ಲೇ ಆ ಹುಡಗನಕಿಂತಾ ನನಗ ಜಾಸ್ತಿ ಗಾಬರಿ ಆತ. ಅದರಾಗ ನನ್ನ ಹೆಂಡ್ತಿದ ಅಕಿ ತವರ ಮನಿ ಕಡೆ ಭಾರಿ ಒಳ್ಳೇ reputation ಇತ್ತ, ಅವರಿಗೆಲ್ಲಾ ಅವ್ವಕ್ಕ ( ನನ್ನ ಹೆಂಡ್ತಿ ತವರಮನಿ ನಿಕ್ ನೇಮ್) ಅಂದರ ಮುಗದ ಹೋತ, ಹಂತಾಕಿ ಹಿಂಗ ಬುದ್ಧಿ ಇಲ್ಲದವರಗತೆ ಜೀರಗಿ ಗಂಟ ಕಳುವು ಮಾಡಿ ಲ್ಯಾಪ್ ಟಾಪ್ ಕೇಳ್ಯಾಳ ಅಂದ ಕೂಡಲೇ ಅವರಿಗೂ ಶಾಕ್ ಆತ. ನಾ ನನ್ನ ಹೆಂಡ್ತಿಗೆ ಸೈಡಿಗೆ ಕರದ

’ಲೇ ಬುದ್ಧಿ ಎಲ್ಲೆ ಇಟ್ಟಿ, ಕೇಳಿದ್ದ ಕೊಡ್ತಾರ ಅಂತ ಈ ಪರಿ ಕೇಳೋದ ಎಲ್ಲೇರ, ಐವತ್ತ ಸಾವಿರ ಇಲ್ಲದ ಲ್ಯಾಪ್ ಟಾಪ್ ಬರಂಗಿಲ್ಲಾ’ ಅಂತ ನಾ ಬೈಲಿಕತ್ತರ
’ಏ, ಅವರಿಗೇನ ಕಡಿಮಿ ಆಗೇದ ಬಿಡ್ರಿ ಅಗಡಿ ವಾಡ್ಯಾದಾಗ ಕೂರಗಿ ಗಟ್ಟಲೇ ಹೊಲಾ ಅವ, ಮ್ಯಾಲೇ ಹುಡಗಾ tcsನಾಗ ಕೆಲಸಾ ಮಾಡ್ತಾನ, ಕೋಡ್ತಾನ ನೀವ ಸುಮ್ಮನ ಕೂಡ್ರಿ’ ಅಂತ ನಂಗ ಬಾಯಿ ಬಡದ್ಲು.

ಅತ್ತಲಾಗ ಲಗ್ನ ಪೆಂಡಿಂಗ್ ಉಳಿತು, ಆ ಹುಡಗಿ ಅಂತು ದಿಂದಾಸ್ ’ನಮ್ಮಕ್ಕ ಲ್ಯಾಪ್ ಟಾಪ್ ಕೇಳ್ಯಾಳ್, ನೀ ಕೊಡ್ತೇನಿ ಅಂದರ ಜೀರಗಿ ಗಂಟ ವಾಪಸ ಕೊಟ್ಟ ಮುಂದ ಲಗ್ನ್… ಇಲ್ಲಾರ ಇಲ್ಲಾ… the ball is in your court’ ಅಂತ ಆ ಹುಡಗಗ ಹೇಳಿ ಬಂದ ಮಂದಿ ಜೋತಿ ಹರಟಿ ಹೊಡ್ಕೋತ ಅಡ್ಡಾಡಲಿಕತ್ಲು. ಇತ್ತಲಾಗ ಭಟ್ಟರು ಒಂದ ಸಮನ ಅವಸರ ಮಾಡಲಿಕತ್ತರು, ಪಾಪ ಬೀಗರ ಏನರ logical item ಕೇಳ್ಬೇಕವಾ ಅಂತ ನನ್ನ ಹೆಂಡತಿಗೆ request ಮಾಡ್ಕೊಂಡರೂ ಇಕಿ ಏನ ಜುಪ್ ಅನ್ನಲಿಲ್ಲಾ..ಲ್ಯಾಪ್ ಟಾಪ್ ಅಂದರ ಲ್ಯಾಪ್ ಟಾಪ್..hp ಇಲ್ಲಾಂದರ hcl ನಡಿತದ ಆದರ laptop ಬೇಕ ಅಂತ ಗಂಟ ಬಿದ್ಲು…..ನಾ ಖರೇ ಹೇಳ್ತಿನಿ ಅದ ಫಸ್ಟ ಟೈಮ ನನಗ ನನ್ನ ಹೆಂಡತಿ ಇಷ್ಟ illogical ಇದ್ದಾಳ ಅಂತ ಅನಿಸಿದ್ದ.

ಕಡಿಕೆ ಹಂಗ ಹಿಂಗೂ ಮಾಡಿ ಅವರಿವರ ನಡಕ ಆಗಿ ಆ ಹುಡಗನ ಕಡೆ ’ಲ್ಯಾಪ್ ಟಾಪ್’ಕ್ಕ ಹೂಂ ಅನಿಸಿಸಿದರು. ಏನ್ಮಾಡ್ತೀರಿ? ಅಲ್ಲಾ ಅವರ ದೇಸಾಯರ ವಾಡ್ಯಾದವರು, ಇದ್ದುಳ್ಳೋರ ಅಂತ ಈ ಪರಿ ಕೇಳೋದ ಎಲ್ಲೇರ?

ಹಂಗ ನನಗ ಮನಸ್ಸಿನಾಗ ನನ್ನ ಹೆಂಡತಿ ದಯೆಯಿಂದ ಮನಿಗೆ ಒಂದ ಲ್ಯಾಪ್ ಟಾಪ್ ಬಂತ ಅಂತ ಖುಶಿ ಆತ ಖರೇ ಆದರ ಬೀಗರ ಕಡೆದವರ ಎಲ್ಲಾ ನನ್ನ ಹೆಂಡ್ತಿ ಬಗ್ಗೆ ತಪ್ಪ ತಿಳ್ಕೊಳ್ಳೊ ಹಂಗ ಆತ. ನಾ ಖರೇ ಹೇಳ್ತಿನಿ ಇವತ್ತು ಆ ದೇಸಾಯರ ಪೈಕಿ ಯಾರರ ಭೆಟ್ಟಿ ಆದರ ’ಜೀರಗಿ ಗಂಟ ಲ್ಯಾಪ್ ಟಾಪ್ ಏನ ಅಂತದ’ ಅಂತ ನಂಗ ಚಾಷ್ಟಿ ಮಾಡ್ತಾರ.

ಆದರೂ ನೀವ ಏನ ಅನ್ನರಿ ಹಿಂಗ ಖಾಸ ಹೆಂಡ್ತಿನ ಗಂಡನ ಜೀರಗಿ ಗಂಟ ಕಳುವು ಮಾಡಸಿಸಿ ನಿಗೋಶಿಯೆಶನ್ ಮಾಡಿದ್ದ ನಾ ಕೇಳಿದ್ದ ನೋಡಿದ್ದ ಫಸ್ಟ ಟೈಮ ಬಿಡ್ರಿ. ಹಂತಾ ಮಹಾ ಜೀರಗಿ ಗಂಟ ಕಳ್ಳಿ ಅಕಿ. ಒಂದ ಮಾತನಾಗ ಹೇಳ ಬೇಕಂದರ ಅಕಿ ಅವರವ್ವಾ-ಅಪ್ಪನ ಮದ್ವಿ ಒಂದ ಬಿಟ್ಟ ಬಾಕಿ ಎಲ್ಲಾ ಲಗ್ನದಾಗ ಅಕಿನ ಜೀರಗಿ ಗಂಟ ಕಳುವು ಮಾಡ್ಯಾಳ ಮುಂದನು ಮಾಡ್ತಾಳ. ಅಲ್ಲಾ ಹಂಗ ಇನ್ನು ಅಕಿಗೆ ವಯಸ್ಸದ ಇನ್ನೊಂದ ಹತ್ತ ವರ್ಷ ಅಂತೂ ಈ ಪ್ರೋಫೆಶನ್ ಕಂಟಿನ್ಯೂ ಮಾಡ್ತಾಳ ಮುಂದ ಹೆಂಗ ಇದ್ದರು ಅಕಿಗೆ ಒಬ್ಬೊಕಿ ಮಗಳ ಇದ್ದಾಳ ಅಕಿ ಅದನ್ನ ಮುಂದವರಿಸಿಕೊಂಡ ಹೋಗ್ತಾಳ..ಅಲ್ಲಾ ಹಂಗ ನಿಮ್ಮ ಪೈಕಿ ಯಾರಿಗರ ಜೀರಗಿ ಗಂಟ ಕಳುವು ಮಾಡೋರ ಬೇಕಾರ ಹೇಳ್ರಿ ಮತ್ತ ನಾ ಅಕಿದ ಕಂಟ್ಯಾಕ್ಟ ಡಿಟೇಲ್ಸ್ ಶೇರ್ ಮಾಡ್ತೇನಿ.

ಹಂಗ ’ಹಿತ್ತಲಗೊರ್ಜಿ ಮುತ್ತೈದಿ’ ಬೇಕಂದರೂ ನನಗ ಹೇಳ್ರಿ ಮತ್ತ……………..ನನ್ನ ಹೆಂಡ್ತಿ ಇದ್ದಾಳ.

ಅನ್ನಂಗ ಇನ್ನೊಂದ ಹೇಳೋದ ಮರತೆ, ಆ ಜೀರಗಿ ಗಂಟ ಕಳ್ಳಿ ಲಗ್ನದಾಗ ಜೀರಗಿ ಗಂಟ ಕಳುವು ಮಾಡಿ ’ಲ್ಯಾಪ್ ಟಾಪ್’ ಇಸ್ಗೊಂಡಿದ್ಲಲಾ ನನ್ನ ಹೆಂಡತಿ ಅದ ನಮ್ಮನಿ ಮುಟ್ಟಲೇ ಇಲ್ಲಾ….ಆ ಕಳ್ಳಿ ನನ್ನ ಹೆಂಡತಿ ಕಡೆಯಿಂದ ಜೀರಗಿ ಗಂಟ ಕಳುವು ಮಾಡಿಸಿಸಿ ಲ್ಯಾಪ್ ಟಾಪ್ ವಸೂಲಿ ಮಾಡಿಸಿ ತಾನ ಅತ್ತಿ ಮನಿಗೆ ’ನನ್ನ ಗಂಡ ಕೊಡಸಿದ್ದ ತಾ’ ಅಂತ ತೊಗೊಂಡ ಹೋದ್ಲು……ಇಲ್ಲೇ ನಾಲ್ಕ ಮಂದಿ ನಡಕ ಹೆಸರ ಕೆಟ್ಟಿದ್ದ ನನ್ನ ಹೆಂಡ್ತಿದ…ಏನ ಮಾಡ್ತಿರಿ?

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ