ಜೋ ಜೋ- ಜೋ ಜೋ, ಮಲಗಿರು ಕಂದಾ…….

ನಿನ್ನೆ ಶುಕ್ರವಾರ ‘ವರ್ಲ್ಡ ಸ್ಲೀಪ ಡೇ’ ಇತ್ತು, ಅಂದರ ‘ವಿಶ್ವ ಮಲ್ಕೋಳೊ ದಿವಸ’. ವರ್ಷಾ ಪ್ರತಿ ಮಾರ್ಚ ತಿಂಗಳದ ಮೂರನೇ ಶುಕ್ರವಾರ ‘ವರ್ಲ್ಡ ಸ್ಲೀಪ ಡೇ’ ಇರತದ. ಹಂಗ ಇದರ ಬಗ್ಗೆ ನಮ್ಮ ದೇಶದಾಗ ಭಾಳ ಮಂದಿಗೆ ಗೊತ್ತಿರಲಿಕ್ಕಿಲ್ಲಾ ಆದರ ನಮ್ಮ ದೋಸ್ತ ಒಬ್ಬಂವಾ ಮಾತ್ರ ವರ್ಷಾ ಇದನ್ನ ಮರಿಲಾರದ ಆಚರಸ್ತಾನ. ವರ್ಷಾ ಆಚರಸ್ತಾನ ಏನ, ವರ್ಷಾನ ಗಟ್ಟಲೇ ಮಲ್ಕೊಂಡ ಆಚರಸ್ತಾನ ಅಂದ್ರು ಅಡ್ಡಿಯಿಲ್ಲಾ.

ಹಿಂದ ತ್ರೇತಾಯುಗದಾಗ ಕುಂಬಕರ್ಣ ಆಗಿದ್ದನೋ ಏನೋ ಇಂವಾ ಮಾತ್ರ ಹಿಂತಾ ಕಲಿಯುಗದಾಗೂ, ಜನಾ ಸಾಯಿಲಿಕ್ಕು ಟೈಮ ಸಿಗವಲ್ತು ಅನ್ನಬೇಕಾರ ದಿವಸಾ ೧೨-೧೪ತಾಸ ಮಲ್ಕೊಂಡ ಇರತಾನ. ಇವರಜ್ಜಿ ಇಂವಾ ಸಣ್ಣ ಹುಡಗ ಇದ್ದಾಗ ‘ಮಲ್ಕೋಳಿ ಬಿಡ ಕೂಸ, ಕೂಸ ಮಲ್ಕೊಂಡಾಗ ಬೆಳಿತಾವ’ ಅಂತಿದ್ಲಂತ, ಹಿಂಗಾಗಿ ಇವಂಗ ಸಣ್ಣಂವಾ ಇದ್ದಾಗಿಂದ ಮಲ್ಕೊಳೊ ಚಟಾ. ಹಂಗ ಇಂವಾ ಅವರಜ್ಜಿ ಹೇಳಿದಂಗ ಮಲ್ಕೊಂಡಾಗ ಒಮ್ಮೆ ಬೆಳಕೊತ ಹೋಗಿದ್ದರ ಖರೇನ ಇವತ್ತ ಕುಂಬಕರ್ಣನ ಗತೆ ಬೆಳದಿರತಿದ್ದಾ ಮತ್ತ ಇನ್ನು ಬೆಳಕೋತ ಇರತಿದ್ದಾ ಆ ಮಾತ ಬ್ಯಾರೆ, ಆದರ ದೇವರ ದಯದಿಂದ ಹಂಗೇನ ಆಗಲಿಲ್ಲಾ. ಈಗ ಇವನ ಬೆಳವಣಿಗೆ ನಿಂತ ಇಪ್ಪತ್ತೈದ ವರ್ಷ ಆತ ಆದರ ಮಲ್ಕೋಳೋದು ಮಾತ್ರ ಇನ್ನೂ ನಿಂತಿಲ್ಲಾ.

ನಿನ್ನೆ ‘ವರ್ಲ್ಡ ಸ್ಲೀಪ ಡೇ’ ಕ್ಕ ಒಂದ ನಾಲ್ಕ ಮಂದಿ ದೋಸ್ತರ ಸೇರಿ ಅವಂಗ ಸನ್ಮಾನ ಮಾಡೋಣು, ಅಂವಾ ಭಾಳ ಪುಣ್ಯಾ ಮಾಡ್ಯಾನ, ನಮಗ ರಾತ್ರಿ ನೈಂಟಿ ಹೊಡದರು ನಿದ್ದಿ ಹತ್ತಂಗಿಲ್ಲಾ ಹಂತಾದ ಇಂವಾ ಹಗಲ ಹೊತ್ತಿನಾಗ ಸಹಿತ ಗಡದ್ದ ನಿದ್ದಿ ಮಾಡ್ತಾನ ಅಂತ ಮುಂಜಾನೆ ಹತ್ತ ಗಂಟೆ ಸುಮಾರ ಒಂದ ಚೆಂಡ ಹೂವಿನ ಮಾಲಿ ತೊಗೊಂಡ ಅವರ ಮನಿಗೆ ಹೋದ್ವಿ. ಅಂವಾ ಅಷ್ಟರಾಗ ಎದ್ದ ಹಲ್ಲ ತಿಕ್ಕೋಳಿಕತ್ತಿದ್ದಾ.

“ಏನಲೇ, ಎಷ್ಟ ಲಗೂ ಎದ್ದಿಯಲಾ, ದಿವಸಾ ಎರಡರ ತನಕಾ ಮಲ್ಕೋಳೋಂವಾ, ಇವತ್ತs, ಅದು ‘ವರ್ಲ್ಡ ಸ್ಲೀಪ ಡೇ’ ದಿವಸ ಲಗೂನ ಎದ್ದಿ ಅಲಾ” ಅಂತ ನಾ ಅಂದೆ. ಅಂವಾ ಬಾಯಗ ಬ್ರಶ್ ಇಟಗೊಂಡ ‘ಊಂ..ಊಂ’ ಮಾಡಲಿಕತ್ತಾ ಅಷ್ಟರಾಗ ಅವನ ಹೆಂಡತಿ ಅಡಿಗಿ ಮನ್ಯಾಗಿಂದ ಬಂದ
“ಎಲ್ಲಿದರಿ, ನಿನ್ನೆ ಮಧ್ಯಾಹ್ನ ಏಳಬೇಕಾದವರ ಇಪ್ಪತ್ತ ತಾಸ ಲೇಟಾಗಿ ಈಗ ಎದ್ದಾರ. ನೀವ ಏನರ ಲಗು ಎದ್ದಿ ಅಂದರ ಮತ್ತ ಹೋಗಿ ಮಲ್ಕೊಂಡ-ಗಿಲ್ಕೊಂಡಾರ ಸುಮ್ಮನಿರ್ರಿ” ಅಂತ ನಂಗ ಒದರಿದ್ಲು.

ಹಕ್ಕ ಅವನೌನ ಏನ ನಸೀಬಲೇ ಮಗಂದ, ಇಪ್ಪತ್ತ ತಾಸ ಲೇಟಾಗಿ ಎದ್ದರು ಹೆಂಡತಿ ಸುಮ್ಮನಿರತಾಳ ಅಂದ್ರ, ನಮ್ಮ ಮನ್ಯಾಗ ನಾ ಏನರ ಇಪ್ಪತ್ತ ನಿಮಿಷ ಲೇಟಾಗಿ ಎದ್ದರ ನನ್ನ ಹೆಂಡತಿ ನಾ ಸತ್ತೇನಿ ಅಂತ ನಾಲ್ಕ ಮಂದಿಗೆ ಫೋನ ಮಾಡಿ ನನ್ನ ಹೆಣಾ ಹೊರಲಿಕ್ಕೆ ರೆಡಿ ಆಗತಾಳ, ಖರೇನ ಭಾಳ ನಸೀಬವಾನ ಇದ್ದಾನ ಬಿಡ ಇಂವಾ ಅಂತ ಅನ್ಕೊಂಡೆ.

ಅಲ್ಲಾ, ಅದರಾಗ ಅವನ ಮದುವಿ ಮುಂದ ಅವನ ಹೆಂಡ್ತಿಗೆ ಮೊದ್ಲ ಹೇಳಿ ಬಿಟ್ಟಿದ್ದರಂತ
‘ನಮ್ಮ ಹುಡಗಾ ದಿವಸಾ ೧೨-೧೪ ತಾಸ ಮಲ್ಕೋತಾನ, ಸ್ವಲ್ಪ ಸಂಭಾಳಿಸಿಗೊಂಡ ಹೋಗ್ವಾ ತಂಗಿ’ ಅಂತ ಅದಕ್ಕ ಅಕಿ ‘ಯಾಕ ಆಗವಲ್ತಾಕ ತೊಗರಿ, ಭಾಳ ಛಲೋ ಆತು, ಅವರ ಮಲ್ಕೊಂಡಷ್ಟ ನಾನು ಆರಾಮ ಇರತೇನಿ. ಒಟ್ಟ ಮನ್ಯಾಗ ಮಲ್ಕೊಂಡರ ಸಾಕು’ ಅಂತ ಖುಶಿಲೇ ಲಗ್ನಾ ಮಾಡ್ಕೋಳಿಕ್ಕೆ ಹೂಂ ಅಂದಿದ್ಲಂತ ಹಿಂಗಾಗಿ ಅಕಿ ಅಂವಾ ಎಷ್ಟ ಮಲ್ಕೊಂಡರು ತಲಿ ಕೆಡಸಿಗೊತಿದ್ದಿಲ್ಲಾ.

ಇನ್ನ ನಮಗೇಲ್ಲಾ ಅವನ ಮಲ್ಕೊಳೊ ಚಟಾ ಕಾಮನ್ ಆಗಿ ಬಿಟ್ಟಿತ್ತ. ನಾವ ಅದರ ಬಗ್ಗೆ ಎಷ್ಟ ಕಾಡಿದರು ಅಂವಾ ತಲಿ ಕೆಡಸಿಗೊಳ್ಳಲಾರದ ಆರಾಮ ಇರತಿದ್ದಾ/ ಮಲ್ಕೋತಿದ್ದಾ ಆ ಮಾತ ಬ್ಯಾರೆ.

ಅವನ ಎಂಗೇಜಮೆಂಟ ಟೈಮನಾಗ ಒಂದ ಮಜಾ ಆಗಿತ್ತ. ನಮಗೇಲ್ಲಾ ‘ನೀವು ಎಲ್ಲಾರು ನಸೀಕಲೇ ನಮ್ಮ ಮನಿಗೆ ೬ ಗಂಟೇಕ್ಕ ಬಂದ ಬಿಡರಿ, ೬.೩೦ ಕ್ಕ ಗಾಡಿ ಮಾಡೇವಿ, ಒಂಬತ್ತರ ಒಳಗ ನಾವ ಬೆಳಗಾಂವನಾಗ ಇರಬೇಕು, ಮುಂದ ರಾಹುಕಾಲ ಅದ’ ಅಂತ ಹೇಳಿದ್ದಾ.

ಆದರ ನಾ ಒಂದ ಸ್ವಲ್ಪ ಲೇಟಾಗಿ ೭.೧೦ಕ್ಕ್ ಅವರ ಮನಿಗೆ ಹೋದೆ, ಮನಿ ಕಡೆ ಯಾ ಗದ್ಲನು ಇದ್ದಿದ್ದಿಲ್ಲಾ, ಮನಿ ಬಾಗಲ ಹಾಕಿತ್ತ. ಆವಾಗ ಮೊಬೈಲ ಬ್ಯಾರೆ ಇದ್ದಿದ್ದೀಲ್ಲಾ ಹಿಂಗಾಗಿ ಒಬ್ಬರಿಗೊಬ್ಬರಿಗೆ ಕಮ್ಯುನಿಕೇಶನ್ ಅಷ್ಟ ಸರಳ ಇದ್ದಿದ್ದಿಲ್ಲಾ. ನಾ ಇವರೇಲ್ಲಾ ಹೋಗಿ ಬಿಟ್ಟಾರ ಇನ್ನ ನಾ ಗಾಡಿ ಖರ್ಚ ಮೈ ಮ್ಯಾಲೆ ಹಾಕ್ಕೊಂಡ ಅವನ ಎಂಗೇಜಮೆಂಟಗೆ ಹೋಗಬೇಕಾತಲಾ ಅಂತ ಅನಕೊಳೊದರಾಗ ಅವರ ಮನಿ ಹಿತ್ತಲದಾಗಿಂದ ಅವರ ಕಾಕಾ ಹಲ್ಲತಿಕ್ಕೋತ ಬಂದಾ. ನಾ ಅವರ ಕಾಕಾಗ ಮನಿ ಕಾಯಲಿಕ್ಕೆ ಬಿಟ್ಟ ಹೋಗಿರಬೇಕ ಅಂತ

“ಎಲ್ಲಾರೂ ಹೋಗಿ ಭಾಳೊತ್ತ ಆತೇನ್ರಿ, ನಂದ ಒಂದ ಸ್ವಲ್ಪ ಲೇಟಾತು” ಅಂತ ನಾ ಅವರ ಕೇಳಿದರ
“ಏನ ಲೇಟಾತು, ನೀ ಬಂದಿದ್ದ ಭಾಳ ಲಗೂ ಆತ, ಇನ್ನು ಮನ್ಯಾಗ ಯಾರು ಎದ್ದೆ ಇಲ್ಲಾ, ಆ ಮಗಗ ಹೋಗಿ ಎಬಸ, ಅವಂದs ಎಂಗೇಜಮೆಂಟ ಅದ ಲಗೂ ಏಳ ಅಂತ ಹೇಳ” ಅಂತ ಅವರ ನನಗ ಅನ್ನಬೇಕ?

ಏನ್ಮಾಡ್ತೀರಿ, ಇನ್ನೂ ವರಾನ ಎದ್ದಿಲ್ಲಾ ನಾವರ ಎದ್ದ ಏನ ಮಾಡೋದ ಅಂತ ಮನೆಮಂದಿನೂ ಎದ್ದಿದ್ದಿಲ್ಲಾ.

ಆದ್ರೂ ಏನ ಅನ್ನರಿ ಸುಖ ಪುರಷ ಇದ್ದಾನ. ಹಿಂಗಾಗಿ ಅವಂಗ ಮಲ್ಕೊಂಡಾಗೊಮ್ಮೆ ನಿದ್ದಿ ಹತ್ತತದ. ಬಹುಶಃ ಹಿಂತಾವರ ಸಂಬಂಧ ‘ವರ್ಲ್ಡ ಸ್ಲೀಪ ಡೇ’ ಆಚರಸ್ತಾರ ಅಂತ ಕಾಣತದ.

ನಂಗ ಯಾಕೋ ಇತ್ತೀಚಿಗೆ ಅವನ ದೇಹದಾಗ ಈ ‘ಸ್ಲೀಪಿಂಗ ಸೆಲ್ಸ್’ ಇರತಾವ ಅಲಾ, ಅವ ಒಂದಿಷ್ಟ ಸೋಲಾರದ್ದ ಇರಬೇಕ ಹಿಂಗಾಗಿ ಅವು ಸೂರ್ಯಾನ ಬಿಸಲ ಮೈ ಮ್ಯಾಲೆ ಬಿದ್ದ ಮ್ಯಾಲೆ ವರ್ಕ ಆಗತಾವ ಅದಕ್ಕ ಈ ಮಗಾ ಹಗಲ ಹೊತ್ತಿನಾಗೂ ಗಡದ್ದ ಮಲ್ಕೋತಾನ ಅಂತ ಅನಸಲಿಕತ್ತದ. ಆದ್ರು ಏನ ಆಗಲಿ ಒಂದ ಸರತೆ ಚೆಕ್ ಮಾಡಿಸಿಗೊಂಡ ಬಿಡಲೇ ಅಂದರ ‘ಲೇ, ನಾ ಮಲ್ಕೋಂಡರ ನಿಂಬದೇನ ಗಂಟ ಹೋತಲೆ’ ಅಂತ ನಮಗ ಅಂತಾನ.

ಹೋಗಲಿ ಬಿಡ್ರಿ ಅಂವಾ ಮಲ್ಕೊಂಡರ ಮಲ್ಕೋವಲ್ನಾಕ, ಆದರೂ ಜಗತ್ತಿನಾಗ ಜನಾ ‘ಸ್ಲೀಪ್ ಡೇ’ನು ಆಚರಸ್ತಾರ ಅಂದ್ರ ವಿಚಿತ್ರ ಅನಸ್ತು ಅದಕ್ಕ ನಿಮಗೂ ಗೊತ್ತಿರಲಿ ಅಂತ ಆ ವಿಷಯ ತಗದೆ ಇಷ್ಟ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ