ಇಂವಾ ಯಾರು?….. ಇಂವಾ ಕಳಸಗಿತ್ತಿ ಗಂಡಾ…

ಇದ ಒಂದ ತಿಂಗಳ ಹಿಂದಿನ ಮಾತ ನನ್ನ ಹೆಂಡ್ತಿ ಮೌಶಿ ಮಗಂದ ಮದ್ವಿ ಇತ್ತ. ಇನ್ನ ಅವರು ಇದ್ದೂರೂರ, ಮ್ಯಾಲೆ ನನ್ನ ಹೆಂಡ್ತಿ ಮೌಶಿ ಅಂದರ ನಮ್ಮಕಿ ಅವರಿಗೆ ಮಗಳ ಆಗಬೇಕ, ಹಿಂಗಾಗಿ ಮದ್ವಿ ಗೊತ್ತಾಗೊ ಪುರಸತ್ತ ಇಲ್ಲದ
’ನಿನ್ನ ತಮ್ಮನ ಮದ್ವಿವಾ, ನೀನ ನಿಂತ ಮಾಡ್ಬೇಕ’ ಅಂತ ಇಕಿದ ಅನಕೂಲ-ಅನಾನುಕೂಲಾ ಎಲ್ಲಾ ನೋಡಿ ಮದ್ವಿ ಡೇಟ್ ಫಿಕ್ಸ್ ಮಾಡಿದ್ದರ ಬಿಡ್ರಿ. ಇನ್ನ ಅಕಿನ್ನ ಕಟಗೊಂಡಿದ್ದ ಭಿಡೇಕ್ಕ
’ನೀವು ಎಲ್ಲಾ ಕಾರ್ಯಕ್ರಮ್ಮಕ್ಕ ಬರ್ರಿ ಮತ್ತ’ ಅಂತ ನನಗ ನಮ್ಮವ್ವಗ ಹೇಳಿದ್ದರ.
ಇನ್ನೂ ಲಗ್ನ ಒಂದ ತಿಂಗಳ ಇರತ ಒಂದ ದಿವಸ ನಮ್ಮಕಿ ಮುಂಜ-ಮುಂಜಾನೆ ತಯಾರ ಆಗ್ಲಿಕತ್ತಿದ್ಲು, ನಾ ಎಲ್ಲೆ ಸವಾರಿ ಅಂತ ಕೇಳಿದರ
’ಇವತ್ತ ಮೌಶಿ ಮನ್ಯಾಗ ಸಜ್ಜಗಿ ಮೂಹೂರ್ತ ಅದ, ಅದಕ್ಕ ಮೌಶಿ ಲಗೂನ ಬಾ ಅಂದಾಳ’ ಅಂದ್ಲು. ಅಲ್ಲಾ ಸಜ್ಜಗಿ ಮೂಹೂರ್ತ ಮನಿ ಪೂರ್ತೇಕ ಇರ್ತದ ನಿಂದ ಏನ ಕೆಲಸ ಅಂತ ನಾ ಅಂದರ.
’ಅಯ್ಯ…ನಾನ ಕಳಸಗಿತ್ತಿ…ಹಿಂಗಾಗಿ ನೀ ಎಲ್ಲಾ ಫಂಕ್ಶನಗೂ ಬರಬೇಕ ಅಂತ ಮೌಶಿ ಹೇಳ್ಯಾಳ’ ಅಂತ ನಂಗ ಜೋರ ಮಾಡಿದ್ಲು. ನನ್ನೇನ ಕರಿಲಿಲ್ಲ ಆ ಮಾತ ಬ್ಯಾರೆ.
ಮುಂದ ಒಂದ ಹದಿನೈದ ದಿವಸಕ್ಕ ’ಇವತ್ತ ಮೌಶಿ ಮನ್ಯಾಗ ಸೋಡ ಮುಂಜವಿ’ ಅಂತ ತಯಾರಾಗಿ ನಿಂತ್ಲು…
’ಮಧ್ಯಾಹ್ನ ಊಟ ನಿಮ್ಮ ಹೊತ್ತಿಗೆ ರೆಡಿ ಆದರ ಫೋನ್ ಮಾಡ್ತೇನಿ, ನೀವು ಅಲ್ಲೇ ಬರ್ರಿ. ಇಲ್ಲಾಂದರ ಹೆಂಗಿದ್ದರೂ ನಿನ್ನಿ ಹುಳಿ ಉಳದದ, ನೀವು ನಿಮ್ಮವ್ವ ಒಂದ ಕುಕ್ಕರ್ ಇಟಗೊಂಡ ಮನ್ಯಾಗ ಊಟಾ ಮಾಡ್ರಿ’ ಅಂತ ಹೇಳಿ ಹೋದ್ಲು. ಅಲ್ಲೆ ಇದ್ದ ನಮ್ಮವ್ವ ಒಂದ ಸರತೆ ನನ್ನ ಮಾರಿ ನೋಡಿ
’ಎಲ್ಲೇರ ಯಾರರ ಜಗತ್ತಿನಾಗ ಕಳಸಗಿತ್ತಿ ಆಗ್ಯಾರೋ ಇಲ್ಲೋ ಅನ್ನ ಹಂಗ ಮಾಡ್ತಾಳ ಬಿಡ ನಿನ್ನ ಹೆಂಡ್ತಿ, ಇನ್ನ ಅವರ ಮನ್ಯಾಗಿನ ಲಗ್ನ ಮುಗಿಯೋತನಕಾ ನೀ ಹೆಂಡ್ತಿನ ಮರತ ಬಿಡ ಮಗನ’ ಅಂತ ಸೂಕ್ಷ್ಮ ಹೇಳಿ ಬಿಟ್ಟಳ. ಹಂಗ ಕಳಸಗಿತ್ತಿ ಅಂದರ ಏನ ಅಂತ ಗೊತ್ತ ಇರಲಾರದೋರಿಗೆ ಹೇಳ್ಬೇಕಂದರ ನಮ್ಮಲೇ ಲಗ್ನಾ ಮಾಡ್ಕೋಳೊರ ಅಕ್ಕ ತಂಗಿಗೆ ಕಳಸಗಿತ್ತಿ ಅಂತ ಒಂದ ಪಟ್ಟಾ ಕೊಟ್ಟ ಅವರ ಕೈಯಾಗ ಒಂದ ಕಳಸಾ ಕೊಟ್ಟ ಎಲ್ಲಾ ಪೂಜಾ-ಪುನಸ್ಕಾರದಾಗ ಇಟ್ಕೊಂಡ ಲಾಸ್ಟಿಗೆ ಒಂದ ಆರವಾರಿ ಪತ್ಲಾ ಕೊಟ್ಟ ಕಳಸ್ತಾರ. ಇನ್ನ ನನ್ನ ಹೆಂಡ್ತಿ ಮೌಶಿಗೆ ಒಬ್ಬನ ಗಂಡಸ ಮಗಾ, ಅಕ್ಕಾ ತಂಗಿ ಯಾರ ಇರಲಿಲ್ಲಾ, ಹಿಂಗಾಗಿ ಇಕಿನ್ನ ಕಳಸಗಿತ್ತಿ ಮಾಡಿದರ ಉಮೇದಿಲೇ ಲಗ್ನ ಮನ್ಯಾಗಿನ ಒಂದ ನಾಲ್ಕೈದ ಕೆಲಸಾ ಹೆಚಗಿ ಮಾಡ್ತಾಳ ಅಂತ ಇಕಿನ್ನ ಫಿಕ್ಸ್ ಮಾಡಿದ್ದರ ಅನ್ನರಿ.
ಮುಂದ ನಾಲ್ಕ ದಿವಸಕ್ಕ ದೇವರ ಊಟ ಅಂದರ ದೇವರ ಕಾರ್ಯಾ, ಮತ್ತ ಅದ ಹಣೇ ಬರಹ…ಅದರಾಗ ದೇವರ ಊಟಾ ಸಂಡೇ ಇತ್ತ. ಹಿಂಗಾಗಿ ಅವರ ಮೌಶಿ
’ನಿನ್ನ ಗಂಡಗೂ ಊಟದ ಹೊತ್ತಿಗೆ ಬಾ ಅನ್ನ ಹೆಂಗಿದ್ದರೂ ಸೂಟಿ ಅದ’ ಅಂತ ಹೇಳಿದ್ದರ ಅಂತ ಅದಕ್ಕ ಇಕಿ
’ಮಧ್ಯಾಹ್ನ ಮಕ್ಕಳನ ಕರಕೊಂಡ ಊಟಕ್ಕ ಅಲ್ಲೇ ಬರ್ರಿ’ ಅಂತ ಹೇಳಿ ಹೋದ್ಲು.
ಇನ್ನ ಸಂಡೆ ಬ್ಯಾರೆ, ಹೋಗ್ಲಿ ಪಾಪ ಅವರು ಎಲ್ಲಾ ಕಾರ್ಯಕ್ರಮಕ್ಕೂ ಕರದ ಕರದಿದ್ದರು ಇವತ್ತರ ಹೋದರಾತು ’ ಊಟ ಹೋದರ ಕೋಟಿ ಲಾಭ’ ಅಂತಾರ ಅಂತ ಮಕ್ಕಳನ ಕಟಗೊಂಡ ಹೋದೆ.
ನಾ ಹೋಗೊದಕ್ಕ ಇನ್ನೇನ ಒಂದ ಹತ್ತ ನಿಮಿಷಕ್ಕ ಪಡ್ಲಗಿ ತುಂಬಸೋದ ಮುಗಿತದ ಅದ ಮುಗದ ನೈವಿದ್ಯ ಆದಮ್ಯಾಲೆ ಎಲಿ ಹಾಕ್ತಾರ ಅಂತ ನಮ್ಮಕಿ ಅಂದ್ಲು. ಅದರಾಗ ಅಕಿ
’ಅಸಂಯ್ಯ ಅಗದಿ ಎಲಿ ಹಾಕೋದಕ್ಕ ಬಂದ ಉಂಡ ಹೋಗೊದ ಸರಿ ಕಾಣಸಂಗಿಲ್ಲಾ…ಒಂದ ಹತ್ತ ನಿಮಿಷ ಮೊದ್ಲ ಬಂದ ನಾಲ್ಕೈದ ಮಂದಿ ಜೊತಿ ಮಾತಾಡ್ರಿ’ ಅಂತ ಹೇಳಿದ್ಲು. ಹಿಂಗಾಗಿ ನಾ ಒಂದ ಸ್ವಲ್ಪ ಮೊದ್ಲ ಹೋಗಿದ್ದೆ.
ಇನ್ನ ಅಲ್ಲೇ ಹಂಗ ನನಗ ಪರಿಚಯದೋರ ಭಾಳ ಮಂದಿ ಇದ್ದಿದ್ದಿಲ್ಲಾ ಮತ್ತ ಭಾಳ ಮಂದಿಗೆ ನಾನೂ ಪರಿಚಯನೂ ಇರಲಿಲ್ಲಾ. ನಂಗ ಗೊತ್ತಿದ್ದ ಒಂದಿಬ್ಬರ ಜೊತಿ ಮಾತಾಡ್ಕೋತ ನಿಂತಿದ್ದೆ ಅಷ್ಟರಾಗ ಒಬ್ಬರ ಹಿರೇ ಮನ್ಯಷ್ಯಾರ ’ಇವರ ಯಾರು?’ ಅಂತ ನನ್ನ ಬಾಜು ಇದ್ದೋರಿಗೆ ಕೇಳಿದರು. ನನ್ನ ಬಾಜು ಇದ್ದೊಂವಾ ನನ್ನ ಹೆಂಡ್ತಿ ಮೌಶಿ ಗಂಡನ ಅಕ್ಕನ ಮಗಾ ಅವಂಗೂ ನಾ ಅಷ್ಟಕ್ಕ ಅಷ್ಟ ಪರಿಚಯ ಅನ್ನರಿ, ಅವಂಗ ಒಮ್ಮಿಕ್ಕಲೇ ಇವರ ಯಾರು ಅಂತ ಕೇಳಿದಾಗ ಅವಂಗ ಏನ ಹೇಳಬೇಕ ನನ್ನ ಬಗ್ಗೆ ತಿಳಿಲಿಲ್ಲಾ, ಅಂವಾ ಭಡಕ್ಕನ್ ’ ಇವರ…. ಅದ ಅಲ್ಲೇ ಒಳಗ ಒಂಬತ್ತವಾರಿ ಸೀರಿ ಉಟಗೊಂಡ ಮನಿತುಂಬ ಅಡ್ಡಾಡಲಿಕತ್ತಾರಲಾ ಕಳಸಗಿತ್ತಿ, ಅವರ ಗಂಡಾ’ ಅಂತ ಅಂದ ಬಿಟ್ಟಾ. ’ಹೌದಾ….ಇಂವಾ ಕಳಸಗಿತ್ತಿ ಗಂಡ ಏನ’ ಅಂತ ನನಗ ಕೈ ಕೊಟ್ಟ ’ನಾ ಶ್ರೀನಿವಾಸ ಜೋಶಿ ಅಂತ ಬೊಮ್ಮನಹಳ್ಳಿಯಂವಾ….ಲಗ್ನಾ ಮಾಡ್ಕೊಳಿಕತ್ತಾನಲಾ ಆ ಹುಡಗನ ಅಪ್ಪನ ಅಬಚಿ ಮಗಾ ಅಂತ ತಾವ ಪರಿಚಯ ಮಾಡ್ಕೊಂಡ ಹರಟಿ ಹೊಡಿಲಿಕತ್ತರ. ಮುಂದ ಹಿಂಗ ಹರಟಿ ಹೊರಡಿಬೇಕಾರ ಮತ್ತೊಂದಿಬ್ಬರ ’ಇವರ ಯಾರು’ ಅಂತ ನನ್ನ ಬಗ್ಗೆ ಕೇಳಿದಾಗ ಹತ್ತ ನಿಮಿಷದ ಹಿಂದ ಪರಿಚಯ ಆಗಿದ್ದ ಜೊಶಿಯವರ ನಾ ಏನ ಅವರ ಮುಂದ ಹುಟ್ಟಿ ಬೇಳೆದೇನಿ ಅನ್ನೋರಗತೆ ’ಏ..ಇಂವಾ…. ಆ ಕಳಸಗಿತ್ತಿ ಗಂಡಾ’ ಅಂತ ಪರಿಚಯ ಮಾಡಿಸಿ ಕೊಟ್ಟರು.
ಒಂದ ಮಜಾ ಕೇಳ್ರಿಲ್ಲೇ…ನಾ ಅರ್ಧಾ ತಾಸಾ ಹರಟಿ ಹೊಡದರು ಒಬ್ಬರೂ ನನ್ನ ಹೆಸರ ಕೇಳಲಿಲ್ಲಾ..ಎಲ್ಲಾರೂ ಕಳಸಗಿತ್ತಿ ಗಂಡಾ ಅಂತ ಪರಿಚಯ ಮಾಡ್ಕೊಂಡ ಹರಟಿ ಹೊಡದರು. ನಂಗ ಒಮ್ಮಿಕ್ಕಲೇ identity crisis ಆದಂಗ ಆತ. ನನ್ನ ಪುಣ್ಯಾಕ್ಕ ಒಬ್ಬರ ಯಾರೋ ’ನಿಮ್ಮನ್ನ ಎಲ್ಲೋ ನೋಡಿದಂಗ ಅದ’ ಅಂತ ಅನ್ನೋದಕ್ಕ ನನ್ನ ಹೆಂಡ್ತಿ ಕಜೀನ್ ಒಮ್ಮಿಕ್ಕಲೇ ವಿಜಯವಾಣಿ ಒಳಗ ಗಿರಮಿಟ್ ಅಂತ ಬರ್ತದ ಅಲಾ, ಅದನ್ನ ಇವರ ಬರೇಯೋದ ಅಂತ ಹೇಳಿ ಬಿಟ್ಟಾ. ಓ…ಹೌದಾ..ಗಿರ್ಮಿಟ್ ಬರೆಯೋ ಪ್ರಶಾಂತ ಆಡೂರ ನೀವ ಏನ…..ಅದಕ್ಕ ಅಂತೇನಿ ಎಲ್ಲೇ ನೋಡಿದಂಗ ಅದ ಅಂತ ಮತ್ತೊಂದ ಸರತೆ ನಕ್ಕ ಕೈ ಕೊಟ್ಟರ. ನಾ ಮುಂದ ಊಟಾ ಮುಗಿಸಿಕೊಂಡ ಎಲಿ ಆಡಕಿ ಹಾಕೋಳತನಕಾ ಏನಿಲ್ಲಾಂದರ ಒಂದ ಹತ್ತ ಮಂದಿಗೆ ’ ಇಂವಾ ಕಳಸಗಿತ್ತಿ ಗಂಡಾ’ ಅಂತನ ಪರಿಚಯ ಆತ ಅನ್ನರಿ.
ಹಂಗ ಇದ ಮೊದ್ಲನೇ ಸಲಾ ಏನ ಅಲ್ಲಾ, ನನ್ನ ಹೆಂಡ್ತಿ ತವರಮನಿ ಪೈಕಿ ಲಗ್ನ, ಮುಂಜವಿ ಇತ್ತಂದರ ಯಾವಾಗಲೂ ನಂದ ಇದ ಹಣೇಬರಹ. ಅವರ ಪೈಕಿ ಗಂಡ ಸಂತಾನ ಇದ್ದೋರ ಜಾಸ್ತಿ, ಹಿಂಗಾಗಿ ಯಾರದ ಮನಿ ಒಳಗ ಲಗ್ನ ಕಾರ್ಯ ಇತ್ತ ಅಂದರ ಸಾಕ ಇಕಿ ಕಾಯಂ ಕಳಸಗಿತ್ತಿ ಮತ್ತ ಇಕಿ ಕಳಸಗಿತ್ತಿ ಆಗಿ ಹೋದ ಫಂಕ್ಶನ್ ಒಳಗ ಎಲ್ಲಾ ನಾ ಕಾಯಂ ಕಳಸಗಿತ್ತಿ ಗಂಡ ಅನ್ನರಿ.
ಹಂಗ ಒಂದ ಹತ್ತ ವರ್ಷದ ಹಿಂದ ಇಕಿನ್ನ ಹಿತ್ತಲಗೊರ್ಜ ಮುತ್ತೈದಿ ಅಂತ ಬ್ಯಾರೆ ಕರಿತಿದ್ದರ, ಅಂದರ ಯಾ ಮುತ್ತೈದಿಗೆ ಅತ್ತಿ ಮನ್ಯಾಗ ಅತ್ತಿ ಮಾವಾ ಮತ್ತ ತವರ ಮನಿ ಒಳಗ ಅವ್ವಾ-ಅಪ್ಪಾ ಇರ್ತಾರ ಹಂತಾಕಿನ್ನ ದೇವರ ಊಟದ್ದ ದಿವಸ ಪೂಜಾ ಮಾಡಸಲಿಕ್ಕೆ ಹಿತ್ತಲಗೊರ್ಜ್ ಮುತ್ತೈದಿ ಅಂತ ಕರಿತಾರ. ಹಂತಾವರಿಗೆ ಭಾರಿ ಡಿಮಾಂಡ್ ಇರ್ತದ. ಇನ್ನ ಆವಾಗ ನಮ್ಮಪ್ಪಾ ಅಕಿ ಅಪ್ಪಾ ಇಬ್ಬರೂ ಇದ್ದರು ಹಿಂಗಾಗಿ ಇಕಿ ಆವಾಗ ಹಿತ್ತಲಗೊರ್ಜ ಮುತ್ತೈದಿ ಆಗಿ ಹೋಗ್ತಿದ್ಲು. ಸಂಬಂಧ ಇದ್ದೋರ ಇಲ್ದೋರ ಎಲ್ಲಾ ಇಕಿನ್ನ ಆವಾಗ ಹುಡಕ್ಯಾಡ್ಕೊಂಡ ಬಂದ ಕರಿತಿದ್ದರ ಬಿಡ್ರಿ. ಇನ್ನ ಸಂಬಂಧಿಕರ ಒಳಗ ಅಂತೂ
’ನೀನ ಹಿತ್ತಲಗೊರ್ಜಿವಾ….ಮತ್ತೇಲ್ಲರ ಬುಕ್ ಮಾಡ್ಕೊಬ್ಯಾಡಾ…ನಿನ್ನ ಡೇಟ್ ಅಡ್ಜಸ್ಟ ಮಾಡ್ಕೊ ಎಲ್ಲೇರ ಆಯ್ತಾವೇಳ್ಯಾದಾಗ ಕೈ ಕೊಟ್ಟ ಗಿಟ್ಟಿ’ ಅಂತ ಅಂದರ ಇಕಿ ಏ ನಾ ಬರ್ತೇನಿ ತೊಗೊರಿ ಆದರ ಕಳಸಗಿತ್ತಿನ್ನೂ ನನಗ ಮಾಡ್ಬೇಕ ಅಂತ ಒಮ್ಮೊಮ್ಮೆ ಕಂಡಿಶನ್ ಹಚ್ಚತಿದ್ದಳು. ಏನ್ಮಾಡ್ತೀರಿ?
ಒಟ್ಟ ನನ್ನ ಹೆಂಡ್ತಿಗೆ ಕಳಸಗಿತ್ತಿ ಆಗೋ ಹುಚ್ಚ ಮೊದ್ಲಿಂದ ಅದ ಬಿಡ್ರಿ, ಅದ ಏನ ಒಂದ ಸೀರಿ ಆಶಾಕ್ಕ ಆಗ್ತಿದ್ಲೊ, ಇಲ್ಲಾ ಕೆಲವೊಬ್ಬರ ಕಳಸಗಿತ್ತಿಗೂ ಗಿಫ್ಟ ಕೊಡ್ತಾರ ಅಂತ ಆಗ್ತಿದ್ಲೊ ಗೊತ್ತಿಲ್ಲಾ.
ಹಂಗ ಇಕಿಗೆ ಭಟ್ಟರ ಅವಕಾಶ ಕೊಟ್ಟಿದ್ದರ ’ ನನಗ ಖಾಸ ಅಕ್ಕ ತಂಗ್ಯಾರ ಯಾರೂ ಇಲ್ಲಾ, ನನ್ನ ಲಗ್ನಕ್ಕ ನಾನ ಕನ್ಯಾ ನಾನ ಕಳಸಗಿತ್ತಿ’ ಅನ್ನೋ ಪೈಕಿ ಅನ್ನರಿ. ಹಂಗೇನರ ಆಗಿತ್ತಂದರ ಆವಾಗ ನಾ ಕಳಸಗಿತ್ತಿ ಗಂಡ ಅಂತ ಅನಿಸ್ಗೊತಿದ್ದೇನೋ ಇಲ್ಲಾ ಮದುಮಗಳ ಗಂಡ ಅನಿಸ್ಗೊತ್ತಿದ್ದೇನೋ ಆ ನನ್ನ ಲಗ್ನ ಮಾಡಿಸಿ ಇಹಲೋಕ ಸೇರಿದ ಹಾವೇರಿ ಲಚ್ಚಣ್ಣ ಭಟ್ಟರಿಗೆ ಗೊತ್ತ.

One thought on “ಇಂವಾ ಯಾರು?….. ಇಂವಾ ಕಳಸಗಿತ್ತಿ ಗಂಡಾ…

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ