ಲಕ್ಷ್ಮೀ ಬಾರಮ್ಮಾ…ಮಂದಿ ಮನಿ ಸುದ್ದಿ ತಾರಮ್ಮಾ….

ಮೊನ್ನೆ ನಾ ಮುಂಜಾನೆ ಆಫೀಸಿಗೆ ಹೋಗೊ ಪುರಸತ್ತ ಇಲ್ಲದ ನಮ್ಮ ಅಕೌಂಟೆಂಟ್ ಮಂಜುಳಾ
’ಏನ್ ಸರ್ ನಿನ್ನೆ ಪಾರ್ಟಿ ಜೋರ್ ಇತ್ತೇನ’ ಅಂದ್ಲು. ನಂಗ ನೋಡಿದರ ಇನ್ನೂ ಹಿಂದಿನ ದಿವಸದ ಪಾರ್ಟಿ ಹ್ಯಾಂಗ್ ಒವರ್ ಇಳದಿದ್ದಿಲ್ಲಾ ಅಷ್ಟರಾಗ ಇಕಿಗೆ ಹೆಂಗ ಗೊತ್ತಾತ ಅಂತ ಕೇಳಿದರ
’ನಿಮ್ಮ ಮಗಳ ಪಾರ್ಟಿ ಫೋಟೊ ಎಲ್ಲಾ ಸ್ಟೇಟಸ್ ಇಟ್ಟಿದ್ಲು, ಎಲ್ಲೇ ಮತ್ತ ಡೆನಿಸನ್ಸ್ ಗೆ ಹೋಗಿದ್ದರೇನ?’ ಅಂತ ಕೇಳಿದ್ಲು.
ನಾ ಎಷ್ಟ ಸರತೆ ನನ್ನ ಮಗಳಿಗೆ ’ಹಿಂಗ ಹೋದಲ್ಲೇ-ಬಂದಲ್ಲೇ ಉಂಡದ್ದ-ತಿಂದದ್ದ ಎಲ್ಲಾ ಫೋಟೊ ಹೊಡದ ವಾಟ್ಸಪನಾಗ ಸ್ಟೇಟಸ್ ಇಡಬ್ಯಾಡ, ಮಂದಿ ದೃಷ್ಟಿ ಹತ್ತತದ. ಅದಕ್ಕ ನನಗ ಮರದಿವಸ ಅಸಿಡಿಟಿ ಆಗೋದ’ ಅಂತ ಹೇಳಿದರು ಅಕಿ ಏನ ಕೇಳಂಗಿಲ್ಲಾ. ಹಿಂಗಾಗಿ ನಾವೇಲ್ಲರ ಅಕಿ ಜೊತಿ ಹೋದರ ಸಾಕ ಅದ ಊರ ಮಂದಿಗೆಲ್ಲಾ ಗೊತ್ತಾಗತದ. ಇದ ದರ ಸರತೆ ನಾವ ಫ್ಯಾಮಿಲಿ ಪಾರ್ಟಿಗೆ ಹೋದಾಗೊಮ್ಮೆ ಎಲ್ಲಾರಿಗೂ ಗೊತ್ತ ಆಗೋದ.
ಅದ ಹಿಂಗ ಆಗೇದ ಅಂದರ ಒಮ್ಮೇಮ್ಮೆ ಮನ್ಯಾಗ ಹೆಂಡ್ತಿ ಮಕ್ಕಳು
’ಭಾಳ ದಿವಸ ಆತ ಊಟಕ್ಕ ಹೊರಗ ಕರಕೊಂಡ ಹೋಗೇಲಲಾ’ ಅಂತ ಕೇಳದಿದ್ದರು ಆಫೀಸನಾಗ ಮಂಜುಳಾ
’ಯಾಕ ಸರ್ ಭಾಳ ದಿವಸ ಆತ ಫ್ಯಾಮಿಲಿ ಕರಕೊಂಡ ಎಲ್ಲೂ ಹೊರಗ ಹೋಗಿಲೇನ್ರಿ , ನಿಮ್ಮ ಮಗಳ ಸ್ಟೇಟಸ್ ಇಟ್ಟಿಲ್ಲಲಾ?’ ಅಂತ ಕೇಳ್ತಾಳ.
ಏನ್ಮಾಡ್ತೀರಿ?
ಯಾವಾಗಿಂದ ಮಂದಿಗೆ ಈ ಸುಡಗಾಡ ಸ್ಟೇಟಸ್ ಇಡೋದ-ನೋಡೋದ ಚಟಾ ಸ್ಟಾರ್ಟ್ ಆಗೇದ ಆವಾಗಿಂದ ಎಲ್ಲಾರ ಮನಿ ವಿಷಯ ಎಲ್ಲಾರಿಗೂ ಗೊತ್ತ ಆಗ್ಲಿಕತ್ತಾವ. ಏನ್ಮಾಡ್ಲಿಕ್ಕೆ ಬರಂಗಿಲ್ಲಾ, ಅದರಾಗ ಮಂದಿಗೂ ಮಂದಿ ಮನಿ ವಿಷಯನ ಬೇಕಾಗಿರ್ತಾವ.
ಎಲ್ಲಾ ಬಿಟ್ಟ ಇವತ್ತ ಈ ವಿಷಯ ಯಾಕ ಬಂತ ಅಂದರ ನಮ್ಮ ಓಣ್ಯಾಗ ಒಬ್ಬೊಕಿ ಲಕ್ಷ್ಮೀ ಅಂತ ಕೆಲಸದೋಕಿ ಇದ್ದಾಳ. ಅಕಿ ನಮ್ಮ ಓಣ್ಯಾಗಿನ ಒಂದ ನಾಲ್ಕೈದ ಮನಿ ಕೆಲಸಾ ಮಾಡ್ತಾಳ. ಅಕಿ ಕಡೆ ಎಲ್ಲಾರ ಮನಿ ಸುದ್ದಿ ಇರ್ತಾವ. ಆ ಸುದ್ದಿ ವಿಶೇಷ ಏನ ಅಂದರ ಅವು ವಾಟ್ಸಪ್ ಸ್ಟೇಟಸ್ ಇಡಲಾರದಂತಾವ ಇರ್ತಾವ.
ಅಲ್ಲಾ, ಅದ ಸಹಜ ಅನ್ನರಿ, ನಾಲ್ಕ ಮನಿ ಕೆಲಸಾ ಮಾಡ್ತಾಳ ಅಂದರ ಯಾರ-ಯಾರ ಮನ್ಯಾಗ ಏನ ನಡದದ ಅದ ಅಕಿಗೆ ಗೊತ್ತಾಗೆ ಆಗ್ತದ. ಅಕಿಗೆ ಗೊತ್ತಾತ ಅಂದರ ಅಕಿ ಎಲ್ಲೇಲ್ಲೆ ಕೆಲಸಾ ಮಾಡ್ತಾಳ ಅವರಿಗೇಲ್ಲಾ ಆ ಸುದ್ದಿ ಗೊತ್ತ ಆಗ್ತದ. ಆಮ್ಯಾಲೆ ನಾ ಮೊದ್ಲ ಹೇಳಿದೆ ಅಲ್ಲಾ, ಎಲ್ಲಾರಿಗೂ ಮಂದಿ ಮನಿ ಸುದ್ದಿ ಬಗ್ಗೆ ಭಾಳ ಇಂಟರೆಸ್ಟ ಅಂತ. ಅಕಿ ಹೇಳಲಿಲ್ಲಾ ಅಂದರು ಕೆದಕಿ ಕೇಳೊರ ಇರ್ತಾರ.
ಒಮ್ಮೆ ಒಂದ ದಿವಸ ಮುಂಜ-ಮುಂಜಾನೆ ನಾ ವಾಕಿಂಗ್ ಹೊಂಟಿದ್ದೆ, ಎರೆಡ ಮನಿ ದಾಟೋದಕ್ಕ ಮಠದ ಅಂಟಿ
’ಏನಪಾ…ಗಂಡಾ ಹೆಂಡತಿ ಎಲ್ಲೋ ತಿರಗ್ಯಾಡ್ಲಿಕ್ಕೆ ಹೊಂಟಿರಂತಲಾ…ಇಬ್ಬರೂ ಮಸ್ತ ಚೈನಿ ಹೋಡಿತೀರಿ ನೋಡ’ ಅಂದರು. ನಾ ಗಾಬರಿ ಆದೆ. ಅಲ್ಲಾ ನಾವ ಗಂಡ ಹೆಂಡತಿ ಇಬ್ಬರೂ ಹೋಗೊದನ್ನ ನಮ್ಮವ್ವಗ ಹೇಳಿದ್ದ ನಿನ್ನೆ ಮುಂಜಾನೆ, ಇಷ್ಟ ಲಗೂನ ಆ ಸುದ್ದಿ ಎರೆಡ ಮನಿ ಹೆಂಗ ದಾಟತ ಅಂತೇನಿ. ಅದರಾಗ ನಾವ ನಮ್ಮ ಅವ್ವನ ಒಬ್ಬೋಕಿನ ಬಿಟ್ಟ ಹೋಗಬೇಕಾರ ಆಜು-ಬಾಜುದವರಿಗೆ ಇಷ್ಟ
’ನಮ್ಮವ್ವನ ಕಡೆ ಸ್ವಲ್ಪ ಲಕ್ಷ ಇರಲಿ’ ಅಂತ ಹೇಳಿ ಹೋಗಿರ್ತೇವಿ. ಅಗದಿ ಆ ಸುದ್ದಿ ನಾಲ್ಕ ಮನಿ ದಾಟಬಾರದಂತ. ಯಾಕಂದರ ಎಲ್ಲೇ ಓಣಿ ತುಂಬ ನಮ್ಮ ಮನ್ಯಾಗ ಯಾರಿಲ್ಲಾ, ಬರೇ ಮುದಕಿ ಅಂದರ ನಮ್ಮವ್ವ ಒಬ್ಬೋಕಿನ ಇರ್ತಾಳ ಅಂತ ಗೊತ್ತಾಗಿ ಯಾರರ ಕಳವು-ಪಳುವು ಮಾಡಿದರ ಹೆಂಗ ಅಂತ ನಮ್ಮವ್ವನ ತರ್ಕ. ಹಿಂಗಾಗಿ ಅಕಿ ’ನೀವ ಹೊಂಟಿದ್ದ ಯಾರಿಗೂ ಹೇಳಬ್ಯಾಡ್ರಿ’ ಅಂತ ತಾನ ತಾಕಿತ ಮಾಡೋಕಿ. ಹಂಗ ಮುಂದ ನಾವೇಲ್ಲೇ ಹೋದರು ಅಲ್ಲಿ ಸ್ಟೇಟಸ್ ಮಗಳ ಹಾಕೇ ಹಾಕ್ತಾಳ ಆವಾಗ ಇಡಿ ಊರಿಗೆ ಗೊತ್ತಾಗತದ ಆ ಮಾತ ಬ್ಯಾರೆ.
ಇನ್ನ ಈ ಸುದ್ದಿ ಹೆಂಗ ಮಠದ ಅಂಟಿಗೆ ಗೊತ್ತಾತು ಅಂತ ವಿಚಾರ ಮಾಡಿದ್ರ, ನಮ್ಮವ್ವ ನಾವು ಹೋಗೊದ ಕನಫರ್ಮ್ ಆಗೋದ ತಡಾ ಆ ಕೆಲಸದ ಲಕ್ಷ್ಮೀಗೆ
’ನೀ ಇನ್ನ ಮೂರ ದಿವಸ ಲಗೂನ ಬಾ. ಮನಿ ಕಸಾನೂ ನೀನ ಹೊಡಿಬೇಕ ನಮ್ಮ ಕೆಸದೋಕಿ ಅಂದರ ಪ್ರೇರಣಾ ಊರಿಗೆ ಹೊಂಟಾಳ’ ಅಂತ ಹೇಳಿದ್ಲು.
ಆ ಲಕ್ಷ್ಮೀ ಮಠದ ಅಂಟಿಗೆ
’ನಾಳಿಂದ ಮೂರ ದಿವಸ ನಿಮ್ಮನಿಗೆ ಲಗೂನ ಬರ್ತೇನಿ, ಪ್ರೇರಣಾನ ಮನಿ ಕಸಕ್ಕ ಬಂದಾಗ ನಿಮ್ಮ ಮನಿ ಭಾಂಡೆ ತಿಕ್ಕಿ ಹೋಗ್ತೇನಿ. ಅವರ ಮೂರ ದಿವಸ ಗಂಡಾ ಹೆಂಡತಿ ತಿರಗ್ಯಾಡ್ಲಿಕ್ಕೆ ಹೊಂಟಾರ ’ ಅಂತ ಹೇಳಿದ್ಲು. ಏನ್ಮಾಡ್ತೀರಿ?
ನಮ್ಮವ್ವಂದ ತಪ್ಪೋ ಆ ಕೆಲಸದೋಕಿದ ತಪ್ಪೋ ಒಂದೂ ತಿಳಿಲಿಲ್ಲಾ.
ಹೆಂಗಿದ್ದರೂ ನಾವ ಹೊಂಟಿದ್ದ ಖರೆ ಇತ್ತ. ನಾ ಮಠದ ಆಂಟಿಗೆ ’ಹೌದರಿ…ನಾವ ಇರಲಾರದಾಗ ಒಂದ ಸ್ವಲ್ಪ ಮನಿ ಕಡೆ ಲಕ್ಷಾ ಇಡ್ರಿ …ನಮ್ಮವ್ವ ಒಬ್ಬೊಕಿನ ಇರ್ತಾಳ’ ಅಂದ ಸುಮ್ಮನಾದೆ.
ಈಗ ಒಂದ ಎರಡ ವರ್ಷದ ಹಿಂದ ನಮ್ಮ ಓಣ್ಯಾಗ ಒಂದ ವರ್ಷದಾಗ ಮೂರ ಮದ್ವಿ ಆಗಿದ್ವು. ನಮ್ಮವ್ವ ಮುಂದ ಒಂದ ಆರ-ಏಳ ತಿಂಗಳಾಗಿತ್ತ ಕಾಣ್ತದ ಆ ಲಕ್ಷ್ಮೀ ಮುಂದ
’ಇನ್ನೂ ಯಾರದೂ ವಿಶೇಷ ಇಲ್ಲ ಕಾಣ್ತದ, ಏನ ಸುದ್ದಿನ ಇಲ್ಲ. ಲಗ್ನಾ ಮಾಡ್ಕೊಂಡ ಆರೇಳ ತಿಂಗಳಾದರೂ ಒಬ್ಬರದೂ ಬಯಕಿ ಊಟನ ಬಂದಿಲ್ಲ ನೋಡ’ ಅಂತ ಅಂದ್ಲು. ಅದರಾಗ ಆ ಲಕ್ಷ್ಮೀ ನಮ್ಮ ಮನ್ಯಾಗ ಭಾಂಡಿ ತಿಕ್ಕಲಿಕ್ಕೆ ಕೂತಲ ಅಂದರ ಅಕಿ ಮುಂದ ನಮ್ಮವ್ವ ಒಂದ ಸ್ಟೂಲ್ ಹಾಕ್ಕೊಂಡ ಕೂತ ಬಿಡೋಕಿ. ಒಂದೂ ಇಕಿ ಮುಂದ ಇದ್ದಾಳಂತ ಅಕಿ ಕೆಲಸಾ ಸ್ವಚ್ಛ ಮಾಡ್ತಾಳ ಅಂತ ನಮ್ಮವ್ವ ತಿಳ್ಕೊಂಡಿರ್ತಾಳ ಮ್ಯಾಲೆ ಓಣಿ ಸುದ್ದಿ ಎಲ್ಲಾ ಅಕಿ ಕಡೆಯಿಂದ ಗೊತ್ತಾಗ್ತಾವ.
ಮುಂದ ಒಂದ ನಾಲ್ಕ ದಿವಸಕ್ಕ ಆ ಲಕ್ಷ್ಮೀ
’ಅಜ್ಜಿ..ಏನ ಬಾಯಿ ಐತಿರಿ ನಿಂಬದ…ನೀವ ಮೊನ್ನೇನ ನೆನಸಿದರಿ ನೀವ ಅಂದಂಗ ಆತ ನೋಡ್ರಿ, ಆ ಲಾಸ್ಟ ಮನಿ ಕಣ್ಣೂರರ ಮಗಳದ ವಿಶೇಷ ಅಂತ ನಾಳೆ ಅವರ ಮಗಳಿಗೆ ಬಯಕಿ ಊಟಾ ತೊಗೊಂಡ ಹೊಂಟಾರ’ ಅಂತ ಹೇಳಿದ್ಲು.
’ಏ..ಹೌದ….ಭಾಳ ಛಲೋ ಆತ ಬಿಡ್ವಾ’ ಅಂತ ಅಂದ ಮುಂದ ಎರಡ ದಿವಸ ಬಿಟ್ಟ ಸಂಜಿ ಮುಂದ ನಮ್ಮ ಮನಿ ಮುಂದ ಆ ಕಣ್ಣೂರ ಅಂಟಿ ನಾಲ್ಕೈದ ಹೆಣ್ಣಮಕ್ಕಳ ಜೊತಿ ವಾಕಿಂಗ್ ಹೋಗಬೇಕಾರ ನಮ್ಮವ್ವ ಸಡನ್ ಆಗಿ
’ಏನ ಮಗಳದ ವಿಶೇಷ ಅಂತಲಾ, ಆರಾಮ ಇದ್ದಾಳ ಹೌದಲ್ಲ, ಯಾವಾಗ ಕರಕೊಂಡ ಬರ್ತೀರಿ’ ಅಂತ ಕೇಳಿ ಬಿಟ್ಟಳು. ಪಾಪ ಅವರ ಮೂರ ತಿಂಗಳ ಆಗೋತನಕಾ ಓಣ್ಯಾಗ ಯಾರಿಗೂ ಸುದ್ದಿ ಹಚ್ಚಿಕೊಡಬಾರದ ಅಂತ ಕಳುವಿಲೇ ಹೋಗಿ ಮಗಳಿಗೆ ಬಯಕಿ ಊಟಾ ಕೊಟ್ಟ ಕಳ್ಳ್ ಕುಬಸಾ ಮಾಡಿ ಬಂದಿದ್ದರ. ಅದು ಲಕ್ಷ್ಮೀ ಬಾಯಿ ಕೃಪೆಯಿಂದ ನಮ್ಮವ್ವನ ಬಾಯಿಲೇ ಇಡಿ ಓಣಿಗೆ ಗೊತ್ತ ಆತ.
ಇನ್ನೊಬ್ಬರ ಮನಿ ಸೊಸಿದನೂ ಹಂಗ ಆಗಿತ್ತ. ಅವರ ಸೊಸಿದ ವಿಶೇಷ ಅಂತ ಅವರ ಡಾಕ್ಟರಗೆ ತೊರೊಸೊಕಿಂತ ಮುಂಚೆ ಲಕ್ಷ್ಮೀಗೆ ಗೊತ್ತಾಗಿತ್ತ, ಯಾಕಂದರ ಇಕಿ ಕೆಲಸಕ್ಕ್ ಹೋದಾಗ ಅವರ ಸೊಸಿ ವೈಕ್ ವೈಕ್ ಮಾಡೋದ ನೋಡಿ ಡಾಕ್ಟರ್ ಗೆ ತೊರಿಸರಿ ಅಂತ ಇಕಿನ ಹೇಳಿ ಬಂದಿದ್ಲು. ಸಂಜಿಗೆ ಪಾಪ ಅವರ ಡಾಕ್ಟರಗೆ ತೋರಿಸಿ ಬಂದ ಆಟೋ ಇಳಿಯೋ ಪುರಸತ್ತ ಇಲ್ಲದ ನನ್ನ ಹೆಂಡ್ತಿ ಭಡಾ ಭಡಾ
’ಮತ್ತೇನ ನಿಮ್ಮ ಸೋಸಿದ ವಿಶೇಷ ಅಂತಲಾ’ ಅಂತ ಕೇಳಿ ಬಿಟ್ಟಳ.
ಹಂಗ ಈ ಲಕ್ಮೀ ಕಡೆ ಬರೇ ಮಂದಿ ಮನ್ಯಾಗ ಯಾರದ ವಿಶೇಷ ಅದ ಆ ಸುದ್ದಿ ಇಷ್ಟ ಇರ್ತಿದ್ದಿಲ್ಲಾ ಯಾರ ಮನ್ಯಾಗ ಅತ್ತಿ ಸೊಸಿ ಜಗಳ ನಡಿತಾವ, ಯಾರ ಮನ್ಯಾಗ ಗಂಡಾ-ಹೆಂಡತಿ ಶಟಗೊಂಡಾರ, ಯಾರ ಮನ್ಯಾಗ ಗಂಡಂದರ ಕದ್ದು- ಮುಚ್ಚಿ ಸ್ಕಾಚ್ ಇಟ್ಟಾರ, ಯಾರ ಮನ್ಯಾಗ ಏನ ಆಡಗಿ ಮಾಡ್ಯಾರ ಎಲ್ಲಾ ಗೊತ್ತ ಇರ್ತಿದ್ದವು. ಆದರ ಒಂದ ಅಕಿ ಗುಣಾ ಏನ ಮೆಚ್ಚಬೇಕಂದರ ಅಕಿ ಎಂದೂ
’ಅವರ ನಿಮಗ ಹಿಂಗ ಅಂದರು, ಇವರ ಹಂಗ ಅಂದರು’ ಅಂತ ಒಬ್ಬೊರಿಗೊಬ್ಬರಿಗೆ ಜಗಳಾ ಹಚ್ಚೊ ಕೆಲಸ ಮಾಡಿಲ್ಲ ಬಿಡ್ರಿ ಸುಳ್ಳಯಾಕ ಹೇಳ್ಬೇಕ. ಅಕಿ ಸುದ್ದಿ ಹೇಳ್ತಿದ್ದಳ ಹೊರತು, ಸುಳ್ಳ ಹೇಳ್ತಿದ್ದಿಲ್ಲಾ. ಇನ್ನ ಅಕಿ ಹಿಂಗ ಸುದ್ದಿ ಹೇಳಿದರು ಯಾರೂ ಏನೂ ಅನ್ನಂಗಿಲ್ಲಾ. ಯಾಕಂದರ ಒಂದು ಕೆಲಸಕ್ಕ ಅಕಿನ್ನ ಬಿಟ್ಟರ ನಮಗ್ಯಾರಿಗೂ ಬ್ಯಾರೆ ಗತಿ ಇಲ್ಲಾ ಇನ್ನೊಂದು ಎಲ್ಲಾರಿಗೂ ಮತ್ತೊಬ್ಬರ ಮನಿ ಸುದ್ದಿ ಬೇಕಾಗಿರ್ತಿದ. ಹಿಂಗಾಗಿ ಅಕಿ ಬಂದ್ಲ ಅಂದರ ’ಲಕ್ಷ್ಮೀ ಬಾರಮ್ಮ…ಮಂದಿ ಮನಿ ಸುದ್ದಿ ತಾರಮ್ಮ’ ಅನ್ನೊ ಹಂಗ ಆಗೇದ.
ಈಗ ನೋಡ್ರಿ ಈ ಸರತೆ ಗಿರಿಮಿಟ್ ಒಳಗ ಅಕಿ ಬರದಿದ್ದನ್ನ ಎಷ್ಟ ಮನಿಗೆ ಹೇಳ್ತಾಳೊ ಆ ದೇವರಿಗೆ ಗೊತ್ತ.

2 thoughts on “ಲಕ್ಷ್ಮೀ ಬಾರಮ್ಮಾ…ಮಂದಿ ಮನಿ ಸುದ್ದಿ ತಾರಮ್ಮಾ….

  1. ತುಂಬ ಮನೋಹರ ಹಾಗೂ ಎಲ್ಲ ಕಾಲನಿಗಳಲ್ಲಿ ಹಾಗೂ ಮನೆಗಳಲ್ಲಿ ಕೆಲಸಮಾಡುವ ಹೆಣ್ಣುಮಕ್ಕಳ ನಿಜ ಕಥೆ ಹಾಸ್ಯಮಯವಾಗಿ ನಿರೂಪಿಸಿದ್ದೀರಿ. ಧನ್ಯವಾದಗಳು.

  2. ಇನ್ನೊಂದ ಮಸ್ತ ಲೇಖನ ಬರೆದೀರಿ ನೋಡ್ರಿ ಸರ್ 😄👍ಈ ಲಕ್ಷ್ಮಿಬಾರವ್ವ ನಮ್ಮ ಅಪಾರ್ಟಮೆಂಟ್ ನ್ಯಾಗ ಪರ್ವೀನ ಬಾರಮ್ಮ ಆಗೇದ 😄

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ