ಮುದಕರಾದ್ರು…ಮ್ಯಾಚುರಿಟಿ ಬರಲಿಲ್ಲಾ.

ನಾ ಖರೇ ಹೇಳ್ತೇನಿ ಇತ್ತೀಚಿಗೆ ವಾರಕ್ಕ ಏನಿಲ್ಲಾಂದರೂ ಒಂದ ಐದ ಆರ ಸರತೆ ನನ್ನ ಹೆಂಡ್ತಿ ಕಡೆ ’ಮುದಕರಾದ್ರು ಮ್ಯಾಚುರಿಟಿ ಬರಲಿಲ್ಲಾ…ಬುದ್ಧಿ ಎಲ್ಲೆ ಇಟ್ಟೀರಿ’ ಅಂತ ಬೈಸ್ಗೋತಿರ್ತೇನಿ. ಹಂಗ ವಾರಕ್ಕ ಒಂದ ಎರಡ ಸರತೆ ನಮ್ಮವ್ವನೂ ಅಂತಿರ್ತಾಳ ಆ ಮಾತ ಬ್ಯಾರೆ ಆದರ ಹಡದ ಅವ್ವನ ಕಡೆ ಅನಿಸ್ಗೊಳೊದಕ್ಕೂ ಮತ್ತ ಕಟಗೊಂಡ ಹೆಂಡ್ತಿ ಕಡೆ ಅನಿಸ್ಗೊಳೊದಕ್ಕೂ ಭಾಳ ಫರಕ ಅದ. ಅಕಿ ಎಂದೂ ಹಡದ ಮಗಗ ಮುದಕಾದಿ ಅನ್ನಂಗಿಲ್ಲಾ, ಭಾಳಂದರ
’ಬರ ಬರತ ವಯಸ್ಸ ಹೋಗ್ತೋದು ಇಲ್ಲಾ ಬರ್ತದೋ’ ಅಂತ ಬೈತಾಳ ಇಷ್ಟ.
ಹಂಗ ಒಂದ ಹತ್ತ-ಇಪ್ಪತ್ತ ವರ್ಷದಿಂದ ಯಾವಾಗ ನಾ ಹೆಂಡ್ತಿ ಕೈಯಾಗ ಸವಿಲಿಕತ್ತೇನಿ ಅಂತ ಕನಫರ್ಮ್ ಆತ ಆವಾಗಿಂದ ನಮ್ಮವ್ವ ಮಾತ ಮಾತಿಗೆ ನನಗ
’ಬರ ಬರತ ವಯಸ್ಸ ಹೋಗ್ತದೋ ಇಲ್ಲಾ ಬರ್ತದೋ….’ ಅಂತ ಅಂದ ಅನ್ನಲಿಕತ್ತಾಳ ಆ ಮಾತ ಬ್ಯಾರೆ. ಅಕಿ ಅಂದರ ಅಷ್ಟ ಅನಸಂಗಿಲ್ಲಾ, ಆದರ ಅದ ಮಾತ ಹೆಂಡ್ತಿ ಅಂದರ ಸಿಟ್ಟ ಬರ್ತದ. ’ಅಲ್ಲಲೇ ಖಾಸ ಹೆಂಡ್ತಿ ಆಗಿ ನೀನ ಗಂಡಗ ಮುದಕರಾದ್ರಿ….ಬರ ಬರತ ವಯಸ್ಸ ಹೋಗ್ತೋದು ಇಲ್ಲಾ ಬರ್ತದೋ ಅಂತ ಅಂದರ ಮಂದಿ ಏನ ತಿಳ್ಕೊ ಬೇಕ…ನಂದ ಇನ್ನೂ ಆಗೋದ ಹೋಗೊದ ರಗಡ ಅದ’ ಅಂತ ಅಂದರೂ ನಮ್ಮಕಿ ಏನ ಕೇಳಂಗಿಲ್ಲಾ.
ಹಂಗ ಮಂದಿ ಹೆಂಡಂದರ ತಮ್ಮ- ತಮ್ಮ ಗಂಡಂದರ ವಯಸ್ಸ ಸುಳ್ಳ-ಸುಳ್ಳ ಕಡಮಿ ಹೇಳಿದರ ನಮ್ಮಕಿ ಉಲ್ಟಾ ಇದ್ದಾಳ. ಅಲ್ಲಾ ಹೋದವಾರ ಬರದಿದ್ನೇಲಾ ಕಂಡ ಕಂಡವರ ಜೊತಿ ನನ್ನ ಕಂಪೇರ್ ಮಾಡಿ ’ ರ್ರಿ….ನೀವು ಅವರು ಒಂದ ವಾರ್ಗಿ ಏನ?’ ಅಂತ ಕೇಳೊದ ಇದ ಅದರದ next episode ಇದ್ದಂಗ ಅಂತ ತಿಳ್ಕೋರಿ.
ಮುಂಜಾನೆ ಎದ್ದ ನೀರಿನ ಮೋಟರ್ ಚಾಲೂ ಮಾಡಿ ಕರೆಕ್ಟ over head tank ತುಂಬಿದ ಮ್ಯಾಲೆ ಬಂದ ಮಾಡ ಅಂತ ಅಕಿ ಹೇಳಿರ್ತಾಳ ಅಂತ ಅನ್ಕೋರಿ, ಅದ ಮ್ಯಾಲಿನ ಟಾಕಿ ತುಂಬಿ overflow ಆಗಿ ಬಾಜು ಉಮಾ ಅಂಟಿಯವರ ಮನಿ ಅಂಗಳಕ್ಕ ಥಳಿ ಹೊಡದ ಕಡಿಕೆ ಅವರ ಇನ್ನ ತಮ್ಮ ಮನಿ ಮುಂದ ರಾಡಿ ಆಗ್ತದ ಅಂತ
’ಏ..ಪ್ರೇರಣಾ, ನಿನ್ನ ಗಂಡಗ ಮೋಟರ್ ಬಂದ ಮಾಡ ಅಂತ ಹೇಳ…ಟ್ಯಾಂಕ್ ತುಂಬೇತಿ’ ಅಂತ ಒದರಿ ಹೇಳಿದ ಮ್ಯಾಲೆ ಇಕಿ ಅದನ್ನ ನನಗ ರಿಪೀಟ್ ಮಾಡ್ತಾಳ. ಲಾಸ್ಟಿಗೆ
’ಹೇಳಿದ್ದ ಒಂದ ಕೆಲಸಾನೂ ಛಂದಾಗಿ ಮಾಡ್ಲಿಕ್ಕೆ ಆಗಂಗಿಲ್ಲಾ, ಕೆಲಸದ ಕಡೆ ಲಕ್ಷನ ಇರಂಗಿಲ್ಲಾ….ಮುದಕರಾದರೂ ಮ್ಯಾಚುರಿಟಿ ಬರಲಿಲ್ಲಾ’ ಅಂತ ಶುರು.
ಅಲ್ಲಾ ಮೋಟರ್ ಬಂದ ಮಾಡೋದಕ್ಕೂ ಮ್ಯಾಚುರಿಟಿಗೂ ಏನ ಸಂಬಂಧ ಅಂತೇನಿ.
ಮತ್ತ ಈ ಡೈಲಾಗ್ ಏನ ಅದ ಅಲಾ ಕುಕ್ಕರ ಸೀಟಿ ಹೊಡದ ಮ್ಯಾಲೆ ಗ್ಯಾಸ ಬಂದ ಮಾಡಲಿಲ್ಲಾ ಅಂದರೂ ಲಾಗೂ, ಗ್ಯಾಸ್ ಮ್ಯಾಲೆ ಹಾಲ ಇಟ್ಟ ಉಕ್ಕಿಸಿದರೂ ಲಾಗೂ, ಟಿ.ವಿ. ಹಚ್ಚಿ ಮೋಬೈಲ್ ಹಿಡ್ಕೊಂಡ ಕೂತಾಗೂ ಲಾಗೂ. ಅಲ್ಲಾ ಹಂಗ ಯಾರದರ ತಪ್ಪ ಹುಡ್ಕಬೇಕ ಅಂತ ಡಿಸೈಡ ಮಾಡಿದರ ಬೇಕಾದಷ್ಟ ತಪ್ಪ ಸಿಗ್ತಾವ. ಇನ್ನ ಗಂಡನ ತಪ್ಪ ಹುಡುಕಿ ಹುಡಕಿ ಇಲ್ಲಾ ಹುಟ್ಟಿಸಿ ಹುಟ್ಟಿಸಿ ಅನ್ನೋರಿಗೇನ ಏನ ಹೇಳ್ಬೇಕ? ಅದಕ್ಕೇನ ಮ್ಯಾಚುರಿಟಿ ಅಂತಾರೇನ್?
ಇನ್ನ ಇದ್ದ ಹಕಿಕತ್ ಹೇಳ್ಬೇಕಂದರ ಈಗ ನಮಗ ಇರೋ ವಯಸ್ಸ ಹಂತಾದ. ಇತ್ತಲಾಗ ಮಕ್ಕಳ ಎದಿ ಉದ್ದ ಬೆಳಿತಿರ್ತಾರ ಆದರೂ ನಾವ ಇನ್ನೂ ನಮ್ಮ ಹುಡುಗತನಾ ಬಿಟ್ಟಿರಂಗಿಲ್ಲಾ. ಬ್ರಾಡ್ ವೇ ಒಳಗ ಇಬ್ಬರೂ ಒಂದ ಹುಡಗಿನ್ನ ದಿಟ್ಟೀಸಿ ನೋಡ್ತಿರ್ತೇವಿ. ಮುಂದ ಮಗಾ ಅವರಪ್ಪ ಹಿಂಗ ದೃಷ್ಟಿ ಹತ್ತೊ ಹಂಗ ಆ ಹುಡಗಿನ್ನ ನೋಡೊದ ನೋಡಿ ತಲಿಕೆಟ್ಟ ಅವನ ಹೇಳ್ಬೇಕ ” ಪಪ್ಪಾ…ಅಕಿ ನಮ್ಮ ಸೀನಿಯರ್” ಅಂತ……ಅಲ್ಲಾ ಟೀಚರ್ ಅಂತ ಅಂದಿದ್ದರರ ನಮ್ಮ ವಾರ್ಗಿ ಆಗ್ತಿದ್ಲು ಇನ್ನ ಸೀನಿಯರ್ ಅಂದರ ಆತ ಬಿಡ ಅಕಿ ಮಗನ ವಾರ್ಗಿ ಅಂತ ನಾವ ಸುಮ್ಮನಾಗೋದ. ಇದನ್ನೇಲ್ಲಾ ಅಗದಿ ಕಣ್ಣ ಪಿಳಕಸಾಲರದ ನೋಡ್ಲಿಕತ್ತ ಹೆಂಡ್ತಿ ಮತ್ತ ಅದ ಡೈಲಾಗ್….’ ಮುದಕರಾದ್ರು ಮ್ಯಾಚುರಿಟಿ ಬರಲಿಲ್ಲಾ…’.
ಹೋದ ವರ್ಷ ನ್ಯೂ ಇಯರ್ ಪಾರ್ಟಿ ಒಳಗ ನೋರಾ ಫತೇಹ್ ಕುಣದಿದ್ದ ’ಏಕ್ ತೊ ಕಮ್ ಜಿಂದಗಾನಿ….ಉಸ್ ಸೆ ಭಿ ಕಮ್ ಹೈ ಜವಾನಿ’ ಹಾಡಿಗೆ ತಂದಿ ಮಗಾ ಇಬ್ಬರೂ ಡ್ಯಾನ್ಸ್ ಮಾಡಿದ್ದ ನೋಡಿ ನನ್ನ ಹೆಂಡ್ತಿ ನನಗ ’ಸಾಕ ಬಿಡ್ರಿ…ಮೊದ್ಲ ನಿಮ್ಮ ಟೊಂಕ ನಿಂತಿಲ್ಲಾ….ಎಲ್ಲೇರ ಒಂದ ಹೋಗಿ ಒಂದ ಮಾಡ್ಕೊಂಡೀರಿ…..ನಿಮ್ಮ ಹಣೇಬರಹ ನೋಡಿದ್ರ ’ಬಚಾ ಹಿ ಕಮ್ ಜಿಂದಗಾನಿ, ಉಸ್ ಮೆ ಕಂಹಾ ಹೈ ಜವಾನಿ’ ಅನ್ನೊ ಹಂಗ ಆಗೇದ’ ಅಂತ ಅಂದ ಮತ್ತ ಮ್ಯಾಲೆ ಅದ ಡೈಲಾಗ್ ’ ಮುದಕರಾದ್ರಿ…ಮ್ಯಾಚುರಿಟಿ ಬರಲಿಲ್ಲಾ….ವಯಸ್ಸಿಗೆ ಬಂದ ಮಗನ ಜೊತಿ ಆ ಸುಡಗಾಡ ನೋರಾ ಫತೇಹನ ಹಾಡಿಗೆ ಡ್ಯಾನ್ಸ ಮಾಡ್ತಿರಲಾ’ ಅಂದ ಬಿಡಿಸಿದ್ಲು. ಏನ ಮಾಡ್ತೀರಿ?
ಹಂಗ ಈಗ ಒಂದ ಎಂಟ ಹತ್ತ ವರ್ಷದಿಂದ ನಂದ mid life ನಡದದ ಅನ್ನರಿ. ಇದ ಎಲ್ಲಾರ ಜೀವನದಾಗ ಬರೋದ, ಇರೋದ ಮುಂದ ಹೋಗೊದ… ಜೀವನದ ಸಹಜ ಪ್ರಕ್ರೀಯೆ ಅನ್ನರಿ.
ಅದರಾಗ ನನ್ನ ಹೆಂಡ್ತಿ ಹಂಗ ಒಂದ ಹತ್ತ ವರ್ಷದ ಹಿಂದ ನಮ್ಮ ಮನೆಯವರಿಗೆ mid life crisis ಅಂತ ಊರ ತುಂಬ ಒಂದ ದೊಡ್ಡ ಸುದ್ದಿ ಹಬ್ಬಿಸಿ ಬಿಟ್ಟಿದ್ಲು. mid life crisis ಅಂದರ ಏನ ಅಂತ ಗೊತ್ತ ಇರಲಾರದ ಒಂದಿಷ್ಟ ಮಂದಿ ಅಂತೂ ನನಗೇನೋ ದೊಡ್ಡ ಜಡ್ಡ ಬಂದದ ಅಂತ
’ಪಾಪ ಇಷ್ಟ ಸಣ್ಣ ವಯಸ್ಸಿನಾಗ ಪ್ರೇರಣಾನ ಗಂಡಗ ಹಿಂಗ ಆಗಬಾರದಿತ್ತ’ ಅಂತ ಮಾತಾಡಸಲಿಕ್ಕೆ ಮನಿಗೆ ಬ್ರೆಡ್, ಹಣ್ಣ ಹಿಡ್ಕೊಂಡ ಬರೋರ. ನಂಗ ಹಂಗ ಬಂದ ಬಂದೋರಿಗೆ ನನಗೇನ mid life crisis ಆಗಿಲ್ಲಾ ನಂಗ ಇರೋದ ಮಿಡ್ ಎಜಡ್ ವೈಫ ಕ್ರೈಸಿಸ್ ಅಂತ ತಿಳಿಸಿ ಹೇಳೋದರಾಗ ಸಾಕ ಸಾಕಾಗಿ ಹೋತ.
ಈಗ ಒಂದ ಎರಡ ವರ್ಷದಿಂದ ಆವಾಗ ಮಾತ ಮಾತಿಗೆ ಏನ ನಿಮಗ mid life crisis ಅಂತ ಅನ್ನೋಕಿ ಈಗ ಮುದಕರಾಗಿರಿ…ಇನ್ನೂ ಮ್ಯಾಚುರಿಟಿ ಬಂದಿಲ್ಲಾ ಅಂತ ಶುರು ಹಚ್ಗೊಂಡಾಳ ಇಷ್ಟ.
ಅಲ್ಲಾ ಒಂದ ಗೊತ್ತ ಇರಲಿ, ಗಂಡಸರಿಗೆ ಇಡಿ ಜೀವನ adulthood ಅಂತ ತಿಳದವರ ಒಬ್ಬರ ಹೇಳ್ಯಾರ… Pre Adulthood: ವಯಸ್ಸ 0-22, Early Adulthood: ವಯಸ್ಸ 17-45 Middle Adulthood: ವಯಸ್ಸ 40-65 ಇನ್ನ ಲಾಸ್ಟಿಗೆ Late Adulthood: 60-85 ವರ್ಷದ ತನಕ ಅಂತ. ಇದರಾಗ ಕಾಮನ್ ಇರೋದ ಯಾವದರೀಪಾ…Adulthood ಅನ್ನೋದ ಒಂದ. So Adur is always Adult.
ಅದಕ್ಕ ಮತ್ತ ಇವತ್ತೂ ನಾವ ನಮ್ಮ ಕಾಲೇಜ್ ದೋಸ್ತರ ಇಷ್ಟ ಭೇಟ್ಟಿ ಆದರ ನಮ್ಮಕ್ಕಳ ನಾಚಬೇಕ ಹಂತಾ ಉಡಾಳತನಾ ಮಾಡ್ತಿರ್ತೇವಿ, ಅವನ್ನೇಲ್ಲಾ ಬರಿಲಿಕ್ಕೂ ಬರಂಗಿಲ್ಲಾ ಹೇಳಲಿಕ್ಕೂ ಬರಂಗಿಲ್ಲಾ, ಅಲ್ಲಾ ಹೇಳಿ ಮತ್ತ ನಿಮ್ಮ ಕಡೆನೂ ’ ಇನ್ನೂ ಮ್ಯಾಚುರಿಟಿ ಬಂದಿಲ್ಲಾ ನಿನಗ ’ ಅಂತ ಅನಿಸ್ಗೊಳೊದ ಯಾಕ ಬಿಡ್ರಿ.
ಇನ್ನ ಎಲ್ಲಾ ಬಿಟ್ಟ ಇವತ್ತ ಯಾಕ ನಾ ಮುದಕಾಗಿದ್ದ ವಿಷಯ, ನಂಗ ಇನ್ನೂ ಮ್ಯಾಚುರಿಟಿ ಬರಲಾರದ ವಿಷಯ ಬಂತಂದರ ಇನ್ನ ಒಂದ ಐದ ದಿವಸಕ್ಕ ಅಂದರ ಅಕ್ಟೋಬರ್ 13ಕ್ಕ ನನಗ ಕರೆಕ್ಟ ಐವತ್ತ ಮುಗದ ಐವತ್ತೊಂದರಾಗ ಬೀಳ್ತಾವ. ಹಂಗ ನೋಡಿದರ ಐವತ್ತ ವರ್ಷ ಆಗ್ಯಾವ ಅಂದರ ಮುದಕ ಅನ್ನಲಿಕ್ಕ ಅಡ್ಡಿ ಇಲ್ಲಾ ಅನ್ನರಿ ಆದರ ಮನಸ್ಸ ಒಪ್ಪಗೊವಲ್ತ ಬಿಡ್ರಿ. ಇನ್ನ ನಾ ಇನ್ನೂ ಮನಸ್ಸಿಲೇ ಯಂಗ್ ಇದ್ದೇನಿ ನೀ ಹಗಲಗಲಾ ಮುದಕರಾದ್ರಿ ಬುದ್ಧಿ ಎಲ್ಲೆ ಇಟ್ಟಿ ಅನಬ್ಯಾಡ ಅಂದರ ನಮ್ಮಕಿ
“ಅಯ್ಯ…ಯಂಗ್ ಅಂತ ಯಂಗ್…ಮೆಂಟಲಿ ಯಂಗ್ ಅನ್ಕೊಂಡರ ಅಲ್ಲಾ, mentally maturity ಬರಬೇಕ…’ ಅಂತ ನನಗ ಅಂತಾಳ.
ಇರಲಿ ಅಕಿ ಏನರ ಅನ್ಕೋವಳ್ಳಾಕ ನೀವ ಮಾತ್ರ ಮುದಕಾದಿ ಇನ್ನೂ ನೋರಾ ಫತೇಹ್ ಅಂತಿ ಅಲಾ ಅಂತ ಅನಬ್ಯಾಡ್ರಿ…ನಂಗ ಈಗ ದಣೇಯಿನ ಐವತ್ತ ಮುಗದ ಐವತ್ತೊಂದರಾಗ ಬೀಳಲಿಕತ್ತಾವ…lifeದ second innings ಶುರು ಆಗೋದ ಈಗ….ಅಸಲಿ ಜಿಂದಗಿ ತೋ ಅಬ್ ಶುರು ಹೋಗಿ…ಏನಂತೀರಿ?
ಹಂಗ ನಿಮ್ಮ ಆಶೀರ್ವಾದ ಇತ್ತಂದರ ಖರೇನ ಮುದಕ ಆದರೂ ಹಿಂತಾ ಆರ್ಟಿಕಲ್ ಬರಕೋತ life enjoy ಮಾಡ್ಕೋತ ಇರ್ತೇನಿ. after all ‘Age is an issue of mind over matter. If you don’t mind, it doesn’t matter.

One thought on “ಮುದಕರಾದ್ರು…ಮ್ಯಾಚುರಿಟಿ ಬರಲಿಲ್ಲಾ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ