ಇವತ್ತ ಮುಂಜಾನೆ ಒಮ್ಮಿಂದೊಮ್ಮಿಲೇ ನನ್ನ ಹೆಂಡ್ತಿ ’ರ್ರಿ, ಈ ತಿಂಗಳ ನಿಂಬದ ಬ್ಲೂ ಕಾಲಮ್ ಏನ್ರಿ?’ ಅಂತ ಕೇಳಿದ್ಲು. ನಾ ಒಮ್ಮಿಕ್ಕಲೇ ಗಾಬರಿ ಆದೆ. ಅಲ್ಲಾ ನಾ ಬರೇಯೋದ ತಿಂಗಳಿಗೆ ಎರಡ ಕಾಲಮ್ ಇನ್ನ ಅದರಾಗ ಇಕಿ ಎಲ್ಲಿ ಬ್ಲೂ ಕಾಲಮ್ ತಂದಳಲೇ ಅಂತ ಅಕಿನ್ನ ಹಿಡದ ಸೈಡಿಗೆ ಕರದ
’ಲೇ..ಹುಚ್ಚಿ ಹಂಗಂದರ ಏನಲೇ…ಏನೇನರ ಮಾತಾಡ್ತಿ ಅಲಾ’ ಅಂತ ನಾ ಅಂದರ ಅಕಿ
’ಅಲ್ಲರಿ, ನೀವ ಹೇಳಿದ್ದರಲಾ ಹನಿಮೂನಗೆ ಹೋದಾಗ, ಒಂದ ತಿಂಗಳದಾಗ ಎರಡ ಹುಣ್ಣಮಿ ಬಂದರ ಎರಡನೇ ಹುಣ್ಣಮಿಗೆ ಅಂದರ full moon day ಕ್ಕ blue moon day ಅಂತಾರ ಅಂತ ಹಂಗ ನಾ ನಿಂಬದ ಈ ತಿಂಗಳ ಮೂರ ಆರ್ಟಿಕಲ್ ಬರ್ತಾವ ಅಲಾ ಅದಕ್ಕ ಮೂರನೇದ ಬ್ಲೂ ಕಾಲಮ್ ಏನ ಅಂತ ಕೇಳಿದೆ ಇಷ್ಟ’ ಅಂದ್ಲು.
ಏನರ ತಿಳಿತಿನ ಅಕಿ ಲಾಜಿಕ್, ಇಲ್ಲ ಹೌದಲ್ಲ..ಅಲ್ಲಾ ಹಂಗ ಹದಿನೆಂಟ ವರ್ಷಾತ ಕಟಗೊಂಡ ನನಗ ತಿಳಿಯಂಗಿಲ್ಲಾ ಇನ್ನ ನಿಮಗೇನ ತಿಳಿಬೇಕ ಬಿಡ್ರಿ. ಅಕಿ ಲಾಜಿಕ ಏನಪಾ ಅಂದರ, ನಾ ಹದಿನೈದ ದಿವಸಕ್ಕೊಮ್ಮೆ ಶನಿವಾರಕ್ಕೊಮ್ಮೆ ಇಷ್ಟ ಗಿರಮಿಟ್ ಕಾಲಮ್ ಬರಿತೇನಿ ಅಂತ ನಿಮಗ ಗೊತ್ತಿದ್ದ ವಿಷಯ, ಆದರ ಈ ತಿಂಗಳ ನನ್ನವು ಮೂರ ಕಾಲಮ್ ಬರ್ತಾವ. ಅಂದರ ಹದಿನೈದ ದಿವಸಕ್ಕೊಮ್ಮೆ ಬರದರು ಈ ತಿಂಗಳ ನನ್ನವು ಮೂರ ಸರತೆ ಕಾಲಮ್ ಬರ್ತಾವ ಅದಕ್ಕ ಆ ಎಕ್ಸ್ಟ್ರಾ ಕಾಲಮಗೆ ಇಕಿ ಬ್ಲೂ ಕಾಲಮ್ ಅಂತ ಹೆಸರ ಇಟ್ಟಾಳ. ಏನ್ಮಾಡ್ತೀರಿ ಇಕಿ ಲಾಜಿಕಗೆ? ಅಲ್ಲಾ ಹಂಗ ಅಕಿದ ಬ್ಲೂ ಮೂನ್ ಲಾಜಿಕ್ ಕರೆಕ್ಟ ಅನ್ನರಿ ಆದರ ಅದನ್ನ ಎಲ್ಲೇ ಬೇಕ ಅಲ್ಲೆ ಹಚ್ಚೋದ?
ನಾ ಅಕಿಗೆ
“ಏ,ಇಲ್ಲೆ ನೋಡಿಲ್ಲೇ, ನೀ ಹಿಂಗ ಯಾರಿಗರ ನಮ್ಮ ಮನೆಯವರದ ಈ ಸರತೆ ಬ್ಲೂ ಕಾಲಮ್ ಅಂತ ಹೇಳಿದರ ಓದೊ ನಾಲ್ಕ ಮಂದಿನೂ ಓದಂಗಿಲ್ಲಾ, ಅದರಾಗ ಅರ್ಧಕ್ಕ ಅರ್ಧಾ ಮಂದಿಗೆ ಮೊದ್ಲ ನಾ ಬರದಿದ್ದ ಹುಬ್ಬಳ್ಳಿ ಭಾಷಾ ತಿಳಿಯಂಗಿಲ್ಲಾ. ಒಂದಿಷ್ಟ ಮಂದಿ ಅಂತು ಅಂವಾ ಬರಿತಾನೋ ಇಲ್ಲಾ ಮಾತಾಡ್ತಾನೋ ಅಂತಾರ ಇನ್ನ ಹಂತಾದರಾಗ ನೀ ’ನಮ್ಮ ಮನೇಯವರದ ಈ ಸರತೆ ನೀಲಿ ಕಾಲಮ್’ ಅಂದರ ನನ್ನ ಕಥಿ ಮುಗದ ಹೋತ” ಅಂತ ಬೈದೆ.
ಅಲ್ಲಾ ಜನಾ ಇಕಿ ಬ್ಲೂ ಕಾಲಮ್ ಅಂತ ಅಂದರ ಇದ A+ (only for adults) ಕಾಲಮ್ ಅಂತ ಓದೊದ ಬಿಟ್ಟರ ಏನ ಗತಿ ಅಂತೇನಿ? ಇಕಿ ಹಿಂಗ ಏನೇನರ ಮಾತಾಡಿ ನನ್ನ ರೆಪ್ಯೂಟೇಶನ್ ಎಲ್ಲರ ಹಳ್ಳಾ ಹಿಡಸಿದರು ಹಿಡಿಸಿದ್ಲ ಹೇಳಲಿಕ್ಕೆ ಬರಂಗಿಲ್ಲಾ. ಅಲ್ಲಾ ಬ್ಲೂ ಮೂನಕ್ಕ, ಬ್ಲೂ ಕಾಲಮಕ್ಕ ಏನ ಸಂಬಂಧರಿಪಾ, ಒಟ್ಟ ಒಂದ ಏನರ ಲಾಜಿಕ್ ಹಚ್ಚಿ ಮಾತಾಡ್ತಾಳ ಬಿಡ್ರಿ. ಹಂಗ ನನ್ನ ಹೆಂಡ್ತಿಗೆ ಈ ಬ್ಲೂ ಮೂನ್ ಬಗ್ಗೆ ಹೇಳಿದಂವ ನಾನ, ಇಲ್ಲಾಂದರ ಇಕಿಗೆ ಹನಿಮೂನ ಬಿಟ್ಟ ಬ್ಯಾರೆ ಮೂನ ಗೊತ್ತ ಇರಲಿಲ್ಲ.
ಅದೇನಾಗಿತ್ತಂದರ ಹದಿನೆಂಟ ವರ್ಷದ ಹಿಂದ ನಾ ಒಂದನೇ ಹನಿಮೂನಗೆ ಹೋಗೊ ಟೈಮ ಒಳಗ ಬ್ಲೂ ಮೂನ್ ಬಂದಿತ್ತ ಆವಾಗ ನಾ ಇಕಿಗೆ
’ನೋಡ ನಾವು ಹನಿಮೂನಗೆ ಹೊಂಟದ್ದಕ್ಕ ಈ ಸರತೆ ಒಂದ ತಿಂಗಳದಾಗ ಎರಡೆರಡ ಹುಣ್ಣಮಿ ಬಂದಾವ, ಅದರಾಗ ನನ್ನ ಜೊತಿ ನೀ ಬ್ಯಾರೆ ಇದ್ದಿ..ನೀ ಅಂತೂ ಅಮವಾಸಿ ಕಾಣಲಾರದ ಹುಣ್ಣಮಿ ಇದ್ದಂಗ’ ಅಂತ ಹವಾ ಹಾಕಿ ಒಂದ ಕ್ಯಾಲೆಂಡರ ತಿಂಗಳದಾಗ ಎರಡ ಸರತೆ ಹುಣ್ಣಮಿ ಬಂದರ ಎರಡನೇ ಹುಣ್ಣಮಿಗೆ ಬ್ಲೂ ಮೂನ್ ಡೇ ಅಂತಾರ ಅಂತ ತಿಳಿಸಿ ಹೇಳಿದ್ದೆ. ಹಂಗ ಇಕಿ ಅದನ್ನ ಇಲ್ಲಿ ತನಕ ನೆನಪ ಇಟಗೊಂಡಿದ್ದ ಗ್ರೇಟ್ ಆ ಮಾತ ಬ್ಯಾರೆ. ಅಲ್ಲಾ ಹಂಗ ನಂಗಂತೂ ಹನಿಮೂನ್, ಬ್ಲೂ ಮೂನ್ ಏನ ಫುಲ್ ಮೂನ್ ಸಹಿತ ಮರತ ಹೋಗಿ ಎಷ್ಟೋ ವರ್ಷಾತ. ಅಲ್ಲಾ ಲಗ್ನಾದ ಮ್ಯಾಲೆ ಗಂಡಗ ಹೆಂಡ್ತಿ ನಕ್ಕರ ಹುಣ್ಣಮಿ…ಸಿಡಕಿದರ ಅಮವಾಸಿ…ಸಿಂಪಲ್ ಲಾಜಿಕ್.
ಇನ್ನ ಅಕಿ ಲಾಜಿಕ ಪ್ರಕಾರ ನಂದ ಈ ತಿಂಗಳ monthly quota ಎರಡ ಕಾಲಮ್ ಬಿಟ್ಟ ಮೂರ ಕಾಲಮ್ ಬರ್ತಾವ ಅದಕ್ಕ ಇಕಿ extra column ಗೆ ನಿಲಿ ಕಾಲಮ್ ಅಂತ ಹೆಸರ ಇಟ್ಟಾಳ ಇಷ್ಟ.
ಅಲ್ಲಾ ಹಂಗ ನಾ ಆವಾಗ ಇವಾಗ ಬ್ಲಾಗ ಬರೇಯೋದು, ಅದರಾಗ ಎರಡ ಬುಕ್ ಬ್ಯಾರೆ ಬರದೇನಿ ಅಂತೇಲ್ಲಾ ಮೊದ್ಲ ನಮ್ಮ ಹೊಸಾ ಓಣ್ಯಾಗ ಗೊತ್ತಿರಲಿಲ್ಲಾ, ಹಂಗ ಯಾರರ ನಮ್ಮ ಮನಿಗೆ ಬಂದ ಹೋಗಬೇಕಾರ ಇಕಿ ಅರಿಷಣ ಕುಂಕಮಾ ಹಚ್ಚಿ ಮನ್ಯಾಗ ಜಂಪರ್ ಪೀಸ್ ಇರಲಿಲ್ಲಾ ಅಂದರ ಅದರ ಬದ್ಲಿ ನನ್ನ ’ಕುಟ್ಟವಲಕ್ಕಿ’ ಇಲ್ಲಾ ’ಗೊಜ್ಜವಲಕ್ಕಿ’ಬುಕ್ ಉಡಿ ತುಂಬಿ ಕಳಸ್ತಿದ್ದಳು.
’ಏ ಅದನ್ಯಾಕ ಕೊಟ್ಟಿ’ ಅಂತ ಕೇಳಿದರ
’ಅಯ್ಯ….ಮನ್ಯಾಗ ರಗಡ ಬಿದ್ದಾವ ತೊಗೊರಿ, ಹಿಂಗರ ಖಾಲಿ ಆಗಲಿ’ ಅಂತ ಕೊಟ್ಟ ಕಳಸೋಕಿ, ಅವರೇನರ
’ಏ, ನಿನ್ನ ಗಂಡ ಬರಿತಾನೇನ?’ ಅಂತ ಕೇಳಿದರ
’ಏ ಅವರೆನ ಹಂತಾ ದೊಡ್ಡ ರೈಟರ್ ಅಲ್ಲಾ…..ಹುಣ್ಣಮಿಗೊಮ್ಮೆ- ಅಮವಾಸ್ಸಿಗೊಮ್ಮೆ ಬರಿತಾರ ಬಿಡ್ರಿ, ಹಂತಾವನೇಲ್ಲಾ ಸೇರಿಸಿಸಿ ಎರಡ ಬುಕ್ ಆಗ್ಯಾವ ತೊಗೊಂಡ ಹೋಗ್ರಿ’ ಅಂತ ಕೊಟ್ಟ ಕಳಸ್ತಿದ್ಲು.
ನಂಗರ ತಲಿ ಕೆಡ್ತಿತ್ತ ಖರೆ ಆದರ ಅಕಿ ಹೇಳಿದ್ದು ಖರೆ ಇತ್ತ…ನಾ ಖರೇನ ನಂಗ ತಿಳದಾಗೊಮ್ಮೆ ಬರೇಯೊಂವಾ ಅಂತ ಸುಮ್ಮನ ಇರ್ತಿದ್ದೆ.
ಒಮ್ಮೊಮ್ಮೆ ಅನಸ್ತದ ಹಿಂಗ ನನ್ನ ಹೆಂಡ್ತಿ ಎಲ್ಲಾರ ಮುಂದ ’ನಮ್ಮ ಮನೆಯವರೇನ ಹುಣ್ಣಮಿಗೊಮ್ಮೆ ಅಮವಾಸ್ಸಿಗೊಮ್ಮೆ ಬರಿತಾರ’ ಅಂತ ಅಂದದ್ದ ಎಲ್ಲಾರಿಗೂ ಗೊತ್ತಾಗಿನ ನನಗ ನಮ್ಮ ಪೇಪರನವರು ’ನೀ ಹದಿನೈದ ದಿವಸಕ್ಕೊಮ್ಮೆ ಇಷ್ಟ ಬರೀ ತಮ್ಮಾ ಸಾಕ’ ಅಂತ ಹೇಳಿರಬೇಕು ಅಂತ.
ಅಲ್ಲಾ ಹಂಗ ಇಕಿ ನಮ್ಮ ಮನೆಯವರಿಗೆ ಕೆಲಸ ಇಲ್ಲಾ ಬೊಗಿಸಿಲ್ಲಾ ವಾರ ಏನೇನರ ಸುಟ್ಟು ಸುಡಗಾಡ ಬರೀತಾರ ಅಂತ ಅಂದಿದ್ದರ ನಂದೂ ವಾರಾ ಕಾಲಮ್ ಬರ್ತಿತ್ತೋ ಏನೋ?
ಇರಲಿ ಆಗಿದ್ದೇಲ್ಲಾ ಒಳ್ಳೆದ ಆಗತದ ಅಂತಾರ. ಹಿಂಗಾಗಿ ಹದಿನೈದ ದಿವಸಕ್ಕೊಮ್ಮೆ ಬರಕೋತ ಹೋಂಟೇನಿ ಆದರ ಹಂಗ ಹದಿನೈದ ದಿವಸಕ್ಕೊಮ್ಮೆ ಬರದರು ಈ ತಿಂಗಳ ನನ್ನ ಪಾಳಿ ಮೂರ ಸರತೆ ಬರ್ತದ.
ಯಾವಾಗ ನಾ ಪೇಪರನಾಗ ಬರಿಲಿಕತ್ತೆ ಆವಾಗ ಯಾರರ
’ನಿಮ್ಮ ಮನೆಯವರ ವಿಜಯವಾಣಿ ಒಳಗ ಬರಿತಾರಂತ…ಯಾವಾಗ ಬರೀತಾರ ಸ್ವಲ್ಪ ನಮಗೂ ಹೇಳ್ರಿ?’ ಅಂತ ಅಂದರ ಇಕಿ
’ನಮ್ಮ ಮನೇಯವರ ಬ್ಯಾಂಕ ಸೂಟಿ ಇದ್ದಾಗಿಷ್ಟ ಬರೀತಾರ’ ಅಂತಿದ್ಲು…. ಯಾಕಂದರ ನನ್ನ ಕಾಲಮ್ ಸ್ಟಾರ್ಟಿಂಗಗೇ ಸೆಕಂಡ್ ಶನಿವಾರ ಮತ್ತ ನಾಲ್ಕನೇ ಶನಿವಾರ ಇಷ್ಟ ಬರ್ತಿತ್ತ.
ಅದನ್ನ ಕೇಳಿ
’ನಿಮ್ಮ ಮನೆಯವರ ಬ್ಯಾಂಕಿನಾಗ ನೌಕರಿ ಮಾಡ್ತಾರೇನ್?’ ಅಂತ ಬಾಜು ಮನಿ ಊಮಾ ಅಂಟಿ ಕೇಳಿದರ. ಇಕಿ
“ಏ, ಹೋಗರಿ ಅವರದೇಲ್ಲ ಬ್ಯಾಂಕ ನೌಕರಿ…. ಇಲ್ಲೇ ಇಂಡಸ್ಟ್ರೀಯಲ್ ಎಸ್ಟೇಟ್ ನಾಗ ಒಂದ ಮಾರಾವಾಡಿ ಕಂಪನ್ಯಾಗ ಮ್ಯಾನೇಜರ್ ಅಂತ ಕೆಲಸಾ ಮಾಡ್ತಾರ’ ಅಂತ ಅಂದ್ಲು.
ಅದನ್ನ ಕೇಳಿ ನಂಗ ತಲಿಕೆಟ್ಟತ…ಅಲ್ಲಾ ಗಂಡಗ ಈ ಪರಿ ಅಸಂಯ್ಯ ಮಾಡೋದ? ಅದು ಮಂದಿ ಮುಂದ. ನಾ ಸಿಟ್ಟಿಗೆದ್ದ
“ಲೇ, ನಂದ ಬ್ಯಾಂಕ ನೌಕರಿ ಇತ್ತಂದರ ನಿನ್ಯಾಕ ಕಟಗೊತ್ತಿದ್ದೆ, ಒಂದ ಬಿಟ್ಟ ಎರಡ ಕನ್ಯಾ ಅಗದಿ ನಮ್ಮ ಮನಿ ಮುಂದ ಬಂದ ಪಾಳೆ ಹಚ್ಚಿ ಕೊಟ್ಟ ಹೋಗ್ತಿದ್ದರು’ ಅಂತ ಅಂದ ಮುಂದ ಅಕಿ ಕಡೆ
’ನಿಮ್ಮ ಮಾರಿಗೆ ಒಂದ ಬಿಟ್ಟ ಎರಡ ಕನ್ಯಾ ಕೊಡ್ತಿದ್ದರಂತ ಕನ್ಯಾ……ಕಟಗೊಂಡಿದ್ದ ಒಂದನ್ನ ಛಂದಾಗಿ ಸಂಬಾಳಸರಿ ಮೊದ್ಲ ಸಾಕ’ ಅಂತ ತಿವಿಸಿಗೊಂಡ ಸುಮ್ಮನ ಕೂತೆ.
ಅಲ್ಲಾ ಹಂಗ ನನ್ನ ಕಾಲಮ್ ಸ್ಟಾರ್ಟಿಂಗಗೆ ಕರೆಕ್ಟ ಸೆಕಂಡ ಸೆಟರ್ಡೆ, ಫೊರ್ಥ್ ಸೆಟರ್ಡೆನ ಬರ್ತ್ತಿತ್ತ ಅದ ಬರ ಬರತ ಚೆಂಜ್ ಆಗಕೋತ first and third ಆತ, ಈ ತಿಂಗಳ ಅಂತೂ first, third and fifth ಮೂರ ಸರತೆ ಬರ್ತದ. ಹಂಗ ಈ ತಿಂಗಳ ಮೂರ ಸರತೆ ಬಂದಿದ್ದಕ್ಕಲಾ ಇಷ್ಟೇಲ್ಲಾ ಕಥಿ ಬರಿ ಬೇಕಾಗಿ ಬಂದದ್ದ.
ಆದರೂ ಏನ ಅನ್ನರಿ ನನಗ ನನ್ನ ಹೆಂಡ್ತಿ ’ಈ ತಿಂಗಳ ನಿಂಬದ ಬ್ಲೂ ಕಾಲಮ್ ಏನ್ರಿ?’ ಅಂತ ಅಂದಿದ್ದ ನೆನಸಿಗೊಂಡರ ನಗೂ ಬರತದ…ಅಲ್ಲಾ ವಯಸ್ಸಿಗೆ ಬಂದ ಮಕ್ಕಳಿದ್ದಾರ ಇಕಿ ಹಿಂಗ ಮಾತಾಡಿದರ ಹೆಂಗ ಅಂತೇನಿ…ನನ್ನ ಪುಣ್ಯಾ ನಾ ಅಕಿಗೆ ಬ್ಲಡ್ ಮೂನ್, ವ್ಯಾಕ್ಸಿಂಗ್ ಮೂನ್, ಹಂಟರ್ ಮೂನ, ರೆಡ್ ಮೂನ ಅದು ಇದು ಅಂತ ಇರೋ ಎಲ್ಲಾ ಮೂನದ್ದ ಡಿಟೇಲ್ಸ್ ಹೇಳಿಲ್ಲಾ, ಇಲ್ಲಾಂದರ ಇಕಿ ಅವಕ್ಕೂ ಒಂದ ಏನರ ಲಾಜಿಕ ಹಚ್ಚಿ ಏನರ ಅನ್ನೋಕಿನ ಆ ಮಾತ ಬ್ಯಾರೆ.
ಇರಲಿ ಹಂಗ ಅಕಿ ಏನರ ಅನ್ನವಳ್ಳಾಕ..ನೀವು ತಪ್ಪ ತಿಳ್ಕೊಬ್ಯಾಡ್ರಿ ಮತ್ತ……ನಾ ಹುಣ್ಣಮಿಗೊಮ್ಮೆರ ಬರೆಯವಲ್ಲನಾಕ, ಅಮವಾಸಿಗೊಮ್ಮೆರ ಬರಿಯವಲ್ಲನಾಕ..ನಾ ಬರದಾಗೊಮ್ಮೆ ನೀವು ಓದತೀರಿ ಮತ್ತ.