ಮತ್ತೇನಪಾ..ನಿನ್ನ ಜೆಂಡರ್ ರೀವೀಲ್ ಆತಿಲ್ಲ….

ಒಂದ ತಿಂಗಳ ಹಿಂದ ನಮ್ಮ ಸುಮ್ಯಾಂದ ಐರ್ಲೇಂಡನಿಂದ ಫೋನ್ ಬಂದಿತ್ತ..ಹಂಗ ಮಾತಾಡ್ತ-ಮಾತಾಡ್ತ ಮುಂದಿನ ವಾರ ಜೆಂಡರ್ ರೀವಿಲ್ ಪಾರ್ಟಿ ಇಟಗೊಂಡೇನಿ ಅಂದಾ…
ನಂಗ ಒಮ್ಮಿಕ್ಕಲೇ ’ ಜೆಂಡರ್ ರೀವೀಲ್ ಪಾರ್ಟಿ ’ ಅಂದರ ಏನಂತ ತಿಳಿಲಿಲ್ಲಾ. ನಾ
’ಯಾರ ಜೆಂಡರ್ ರೀವೀಲ್’ ಅಂತ ಕೇಳಿದೆ
’ನನ್ನ ಹೆಂಡ್ತಿದಲೇ’ ಅಂದಾ..
’ಯಾಕ ಇಷ್ಟ ದಿವಸ ಆದರೂ ನಿಂಗ ನಿನ್ನ ಹೆಂಡ್ತಿ ಜೆಂಡರ್ ಗೊತ್ತ ಆಗಿಲ್ಲೇನ’ ಅಂತ ನಾ ಕೇಳಿದೆ
’ಲೇ…ನಿನ್ನೌನ…ನನ್ನ ಹೆಂಡ್ತಿ ಕನ್ಸೀವ್ ಇದ್ದಾಳ..ಹುಟ್ಟೊ ಕೂಸಿಂದ ಜೆಂಡರ್ ರೀವಿಲ್ ಪಾರ್ಟಿ ಇಟಗೊಂಡೇವಿ’ ಅಂದಾ…
’ಓಹ್..ಐ..ಸಿ….ನಂಗ ನೀ ಒಮ್ಮಿಕ್ಕಲೇ ಜೆಂಡರ್ ರೀವಿಲ್ ಪಾರ್ಟಿ ಅಂದರ ಹೆಂಗ ಗೊತ್ತಾಗಬೇಕ ಮಗನ …ನಮ್ಮಲ್ಲೇ ಕನ್ಸೀವ್ ಆಗೇದ ಅಂದ ಮ್ಯಾಲೆ ಕಳ್ಳ ಕುಬಸಾ ಮಾಡ್ತಾರ, ತವರ ಮನಿ ಕುಬಸಾ ಆಮ್ಯಾಲೆ ಸಾರ್ವಜನಿಕ ಕುಬಸಾ, ಸೀಮಂತಾ ಎಲ್ಲಾ ಮಾಡ್ತರ… ಹಿಂತಾ ಜೆಂಡರ್ ರೀವಿಲ್ ಪಾರ್ಟಿ ಗೀರ್ಟಿ ನಮ್ಮ ಕಡೆ ಇರಂಗಿಲ್ಲಾ. ಅಲ್ಲಾ, ನಮ್ಮಲ್ಲೇ ನಾವ ದೂರ ಉಳಿತ ಡಾಕ್ಟರ್ ಸಹಿತ ಜೆಂಡರ್ ರೀವಿಲ್ ಮಾಡಂಗಿಲ್ಲಾ…’ ಅಂತ ನಾ ಅಂದೆ.
ಅಲ್ಲಾ ಹಂಗ ನಮ್ಮಲ್ಲೇ ಹಡೆಯೊತನಕ ನಾರ್ಮಲ್ ಆಗ್ತದೋ ಇಲ್ಲಾ ಸಿಜರಿನ್ ಆಗ್ತದ ಅನ್ನೋದ ಹಡೆಯೋರಿಗೆ ಗೊತ್ತ ಇರಂಗಿಲ್ಲಾ ಇನ್ನ ಹೆಣ್ಣ ಗಂಡ ದೂರ ಉಳಿತ ಬಿಡ್ರಿ…ಮ್ಯಾಲೆ ನಮ್ಮಲ್ಲೇ ಹಿಂಗ ಮೊದ್ಲ ನನ್ನ ಹೆಂಡ್ತಿ ಗಂಡ ಹಡಿಯೋಕಿ ಇದ್ದಾಳ ಅಂತ ನೂರ ಮಂದಿ ಕರದ ಡಂಗರಾ ಹೊಡೆಯೋದ illegal.
ಆದರೂ ಏನ ಅನ್ನರಿ ಈ ಫಾರೇನ್ ಮಂದಿಗೆ ಒಟ್ಟ ಪಾರ್ಟಿ ಮಾಡಲಿಕ್ಕೆ ಏನರ ನೇವಾ ಬೇಕ ಇಷ್ಟ. ಹೆಂಡ್ತಿ ಕನ್ಸೀವ್ ಆದ್ಲು ಅಂತ ಒಂದ ಪಾರ್ಟಿ, ಮುಂದ ಐದ ತುಂಬಿದ ಮ್ಯಾಲೆ ಕುಬಸಾ ಅಂದರ baby shower ಮತ್ತ ಒಂದ ಸರತೆ ಅಲ್ಟ್ರಾಸೌಂಡ ಮಾಡಿಸ್ಗೊಂಡ ಬಂದ ಮ್ಯಾಲೆ ಈ ಜೆಂಡರ್ ರೀವಿಲ್ ಪಾರ್ಟಿ ಅಂತ….ಅಲ್ಲಾ ಹಂಗ ಈ ಪಾರ್ಟಿಗೆ ಹೋಗೊರ ಗಿಫ್ಟ ಕೊಡೋದು, ಅರಿಷಣ ಕುಂಕಮ ಹಚ್ಚಿ ಜಂಪರ್ ಪೀಸ್ ಉಡಿ ತುಂಬೋದ ಇರಂಗಿಲ್ಲಾ ಅದ ಒಂದ ಛಲೋ ಅನ್ನರಿ.
ಮತ್ತ ಇನ್ನ ಈ ಜೆಂಡರ್ ರೀವಿಲ್ ಮಾಡ್ಲಿಕ್ಕೆ ನೂರಾ ಎಂಟ ಐಡಿಯಾ ಇರ್ತಾವ. ಪಿಂಕ್ ಬಲೂನ್, ಇಲ್ಲಾ ಕೇಕ್ ಮಾಡ್ಸಿದರ ಹೆಣ್ಣ, ಅದ ನೀಲಿ ಇತ್ತಂದರ ಗಂಡ..ಹಿಂಗ ಏನೇನೋ ಹುಚ್ಚುಚಾಕಾರ ಮಾಡ್ತಾರ. ಇನ್ನೊಂದ ಮಜಾ ಅಂದರ ಈ ಜೆಂಡರ್ ರೀವೀಲ್ ಯಾರರ ಮತ್ತೊಬ್ಬರ ಕಡೆ ಮಾಡಸ್ತಾರಂತ. ಅಂದರ ಬ್ಯಾರೆ ಯಾರರ ಥರ್ಡ್ ಪಾರ್ಟಿ ಈ ಹಡೆಯೊರಿಗೆ
’ನಿಮಗ ಗಂಡ ಹುಟ್ಟತದ..ಇಲ್ಲಾ ಹೆಣ್ಣ ಹುಟ್ಟತದ’ ಅಂತ ಅನೌನ್ಸ ಮಾಡಬೇಕಂತ. ಹಂಗ ನನ್ನ ಕೇಳಿದರ ಸುಮ್ಮನ ಡಿಲೇವರಿ ಮಾಡೋ ಡಾಕ್ಟರ ಕಡೆನ ಜೆಂಡರ್ ರೀವೀಲ್ ಮಾಡ್ಸೋದ ಛಲೋ ಅನ್ನರಿ.
ಹೋಗ್ಲಿ ಬಿಡ್ರಿ ನಮ್ಮಲ್ಲೇ ಈ ಪದ್ಧತಿ ಇಲ್ಲಾ ಛಲೋ ಆತ..ಇಲ್ಲಾಂದರ ನಮ್ಮಲ್ಲೇ ಏನ ಸೋದರ ಮಾವನ ಜೆಂಡರ್ ರೀವೀಲ್ ಮಾಡ್ಬೇಕ, ಜೆಂಡರ್ ರೀವೀಲ್ ಪಾರ್ಟಿ ಖರ್ಚ ಹೆಣ್ಣ ಬೀಗರದ ಅಂತ ನಿಯಮ ಮಾಡಿರ್ತಿದ್ದರ….ಅಗದಿ ಒಂಥರಾ ಚೊಚ್ಚಲ ಗಂಡಸ ಮಗನ ನಿಯಮಾ ಹೆಣ್ಣ ಬೀಗರ ಮುರಸಬೇಕ ಅಂತಾರಲಾ ಹಂಗ.
ಕಡಿಕೆ ಹೋದ ವಾರ ನಾ ಸುಮ್ಯಾಗ ಫೋನ್ ಮಾಡಿ ’ ಮತ್ತೇನಪಾ …..ನಿನ್ನ ಜೆಂಡರ್ ರೀವೀಲ್ ಆತಿಲ್ಲ..’ ಅಂತ ಕೇಳಿದೆ. ಅಂವಾ
’ಲೇ..ನಿನ್ನೌನ ..ನಂದ ಅಲ್ಲಾ ನನ್ನ ಹೆಂಡ್ತಿದ ಜೆಂಡರ್ ರೀವೀಲ್ ಪಾರ್ಟಿ ಇತ್ತ…ನನ್ನ ಹೆಂಡ್ತಿ ಹಡಿಯೊಕಿಂತಾ ಮುಂಚೆನ ಈಗ ಚೊಚ್ಚಲ ಗಂಡಸ ಮಗನ ನಿಯಮಾ ಹಿಡಿಯೋದ ಡಿಸೈಡ ಮಾಡ್ಯಾಳ’ ಅಂತ ಅಂದಾ.
eom/-330 words

One thought on “ಮತ್ತೇನಪಾ..ನಿನ್ನ ಜೆಂಡರ್ ರೀವೀಲ್ ಆತಿಲ್ಲ….

Leave a Reply

Your email address will not be published. Required fields are marked *


The reCAPTCHA verification period has expired. Please reload the page.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ