ರ್ರೀ…ನಾ ತವರಮನಿಗೆ ಹೋಗೊಕಿ..

“ರ್ರಿ… ಮಾರ್ಚ ಒಳಗ ನಿಮ್ಮ ಮಗಳದ exam ಮುಗದ ಮ್ಯಾಲೆ ಸೂಟಿಗೆ ನಾ ಒಂದ ಹತ್ತ ದಿವಸ ತವರಮನಿಗೆ ಹೋಗೊಕಿ ನೋಡ್ರಿ….”
“ಲೇ…ನಿನ್ನ ಮಗಳನ ಅತ್ತಿ ಮನಿಗೆ ಕಳಸೋ ವಯಸ್ಸಾತ ನಿನಗ.. ಇನ್ನೂ ಏನ ತಲಿ ತವರಮನಿ ತವರಮನಿ ಅಂತಿ”
“ಅಯ್ಯ…ತವರಮನಿ ತವರಮನಿನ….ನಿಮಗೇನ ತಲಿ ತಿಳಿತದ …ನೀವ ನೋಡಿದರ ಮುದಕರಾದರು ಇನ್ನೂ ನಿಮ್ಮವ್ವನ್ನ ದುಬಟಿ ಹೊತಗೊಂಡ ಮಲ್ಕೋತಿರಿ…ನಾ ತವರ ಮನಿಗೆ ಹೋಗ್ತೇನಿ ಅಂದರ ದೊಡ್ಡ ಇಶ್ಯೂ ಮಾಡ್ತಿರಲಾ”
“ಲೇ….ನೀ ಹತ್ತ ದಿವಸ ಗಟ್ಟಲೇ ತವರಮನಿಗೆ ಹೋದರ ನಮ್ಮವ್ವನ ನೋಡೊರ ಯಾರ… ಮೊದ್ಲ ವಯಸ್ಸಾದೋಕಿ, ಮ್ಯಾಲೆ ಕಿವಿ ಕೇಳಸಂಗಿಲ್ಲಾ…..ಅಕಿ ಗತಿ ಏನ?”
“ನಮಗೂ ಆಸರಕಿ-ಬ್ಯಾಸರಕಿ ಇರ್ತದ ಇಲ್ಲ?….ಹತ್ತ ದಿವಸ ನಿಮ್ಮವ್ವನ್ನ ಸಂಬಾಳಸರಿ…ಇಲ್ಲಾ ಕರಸರಿ ನಿಮ್ಮ ತಂಗಿನ್ನ ತವರಮನಿಗೆ”
“ಅಲ್ಲಾ…ನೀ ತವರಮನಿಗೆ ಹೊಂಟಿ ಖರೇ…..ಅಲ್ಲೇ ನಿಮ್ಮ ವೈನಿ ಇರ್ತಾಳಲಾ….ಅಕಿ ಮೊದ್ಲ ವೈಷ್ಣೋರೊಕಿ…ನೂರಾಎಂಟ ಮಡಿ-ಹುಡಿ ಅನ್ನೋಕಿ…ನೀ ನೋಡಿದರ ಏಕಾಕಾರ ಗೋತ್ರದೋಕಿ ನಿಂಗ ಬಗಿ ಹರಿಬೇಕಲಾ”
“ಏ ಅಕಿನೂ ತವರಮನಿಗೆ ಹೊಂಟಾಳ….ರಾಮನವಮಿ ಮುಗದಮ್ಯಾಲೆ ಬರೋಕಿ…ಅದಕ ನಾ ಅಕಿ ಇಲ್ಲದಾಗ ಹೊಂಟೇನಿ”
“ಹಕ್ಕ್…ಅಕಿನೂ ತವರಮನಿಗೆ ಹೊಂಟಾಳ…..ಆದರು ಒಂದ ಮಾತ ನಿಮ್ಮವ್ವಗ ಕೇಳಿ ನೋಡ…. ನಿಮ್ಮವ್ವನು ಎಲ್ಲೇರ ತವರಮನಿಗೆ ಹೊಂಟಿದ್ದರ ಏನ್ಮಾಡ್ತಿ?”
“ಅಯ್ಯ…ನಮ್ಮ ಅಜ್ಜಿ ಮನಿ ಅಲ್ಲೇ ಹಿಂದಿನ ಓಣ್ಯಾಗ ಅದ ತೊಗೊರಿ….ನಾ ಹೋದಮ್ಯಾಲೆ ನಾನು ನಮ್ಮವ್ವ ಇಬ್ಬರು ಅಜ್ಜಿ ಮನಿಗೆ ಹೋಗೋರ ಇದ್ದೇವಿ”

ನಾ ಮುಂದ ನಿಮ್ಮಜ್ಜಿನೂ ತವರಮನಿಗೆ ಹೋಗೊಕಿ ಇದ್ದರ ಅಂತ ಕೇಳಲಿಲ್ಲಾ….ಯಾಕಂದರ ಅವರಜ್ಜಿಗೆ ಈಗ ಎಂಬತ್ತೈದ ಮುಗದ ಎಂಬತ್ತಾರ ಒಳಗ ಬಿದ್ದಾವ….
ಅಲ್ಲಾ…ಹಂಗ ಅಜ್ಜಿ ಅವ್ವ ಇದ್ದಿದ್ದರ ಅವರು – ಇವರೂ ಸೇರಿ ಮುತ್ತಜ್ಜಿ ಮನಿಗೆ ಹೋಗೊರ ಅನ್ನರಿ…….
ಆದರೂ ಮುದಕರಾದರು ನಮ್ಮಕಿಗೆ ಇನ್ನೂ ತವರಮನಿ ಚಟಾ ಹೋಗಿಲ್ಲಾ…..ಇನ್ನ ನಾ ಹೂಂ ಅನ್ನೋತನಕ ನನ್ನ ಜೀವಾ ತಿನ್ನೋದ ಬಿಡಂಗಿಲ್ಲಾ ಅಂತ ನಾ ತಲಿಕೆಟ್ಟ

“ಅನ್ನಂಗ ಪ್ರಶಸ್ತಿ exam ಯಾವಾಗ ಮುಗಿತದ…?”
“ಯಾಕ…?”
“ಅಲ್ಲಾ….ನೀ ತವರ ಮನಿಗೆ ಹೋಗ್ತೇನಿ ಅಂದೇಲಾ…..ಹೋಗಿ ಪುಣ್ಯಾ ಕಟ್ಗೊ….ಒಂದ ಹತ್ತ ದಿವಸ ನಾವರ ಆರಾಮ ಇರ್ತೇವಿ..”
“ಗೊತ್ತಾತ ತೊಗೊರಿ ಒಟ್ಟ ನಾ ತವರಮನಿಗೆ ಹೋಗೊದ ಕಾಯತೀರ್ತೀರಿ….ಏನ ನಾವ ದಿವಸಾ ಕಾಟ ಕೋಡ್ತೇವಿ ಅನ್ನೋರಗತೆ ಮಾತಾಡ್ತೀರಿ”
“ಯಪ್ಪಾ ತವರಮನಿಗೆ ಹೋಗಬ್ಯಾಡಾ ಅಂದರೂ ಅಂತೀ….ತವರಮನಿಗೆ ಹೋಗ ಅಂದರೂ ಅಂತಿ…ನಿನ್ನ ಸಂಬಂಧ ಜೀವಾ ಸಾಕ-ಸಾಕಾಗಿ ಹೋಗೆದ…ಏನರ ಹಾಳ ಗುಂಡಿ ಬೀಳ”

ಅಲ್ಲಾ…ಏನ್ಮಾಡ್ತೀರಿ ಹಿಂತಾವರಿಗೆ……ಹೋಗ್ಲಿ ಬಿಡ್ರಿ ಅಕಿ ಏನರ ಮಾಡವಳ್ಳಾಕ ….
ಸುಮ್ಮನ ನಮ್ಮವ್ವನ್ನೂ ತವರಮನಿಗೆ ಕಳಸಿ ಒಬ್ಬೋನ ಆರಾಮ ಇದ್ದಾರಾತು ಅಂದರ ಒಂದೂ ನಮ್ಮಜ್ಜಿ ಜೀವಂತ ಇಲ್ಲಾ….ಇನ್ನ ನಮ್ಮ ಮಾಮಿನೂ ತನ್ನ ತವರಮನಿಗೆ ಹೋಗೋಕಿ….ಪಾಪ ಅಲ್ಲೇ ನಮ್ಮವ್ವ ಹೋಗಿ ಏನ್ಮಾಡಬೇಕ?
ತಾಯಿ ಮಗಾ ಇಬ್ಬರೂ ಒಂದ ಕುಕ್ಕರ ಇಟಗೊಂಡ ಅನ್ನಾ ತವಿ ಮಾಡ್ಕೊಂಡ ರಾಮ- ರಾಮಾ ಅಂತ ಆರಾಮ ಇರ್ತೇವಿ…..ಅಲ್ಲಾ ಹಿಂಗ ಹೆಣ್ಣಮಕ್ಕಳ ಹಗಲಗಲಾ ತವರಮನಿಗೆ ಹೋಗೊದಕ್ಕ ಹಳೇ ಕಾಲದಾಗ ಗಂಡಸರ ಒಂದ ಬಿಟ್ಟ ಎರಡ ಮೂರ ಮಾಡ್ಕೋತಿದ್ದರ ಕಾಣ್ತದ……..ಹೋಗ್ಲಿ ಬಿಡ್ರಿ…ವಳತ ಅನ್ನರಿ…ಇಲ್ಲೆ ಒಂದ ಸಂಬಾಳಸಲಿಕ್ಕೆ ಆಗವಲ್ತ…..
eom/-

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ