ಅಧಿಕ ಪ್ರಹಸನ – 1
ಮೊನ್ನೆ ನನಗ , ನಮ್ಮವ್ವಗ ಇಬ್ಬರಿಗೂ ಪಿತ್ತ ನೆತ್ತಿಗೇರೆದ ಅಂತ ನನ್ನ ಹೆಂಡ್ತಿ ಹೆಸರ ಬ್ಯಾಳಿ ಪಾಯಸ ಮಾಡಿದ್ಲು….
ಪಾಯಸ ಯಾಕೋ ಒಂಚೂರ ಬಣ್ಣದಾಗ ಖರ್ರಗ ಆಗಿತ್ತ.
’ಪಾಯಸ ಯಾಕ ಖರ್ರಗ ಆಗೇದ’ ಅಂತ ನಾ ಅಂದೆ…ಅಕಿ
’ಬೆಲ್ಲ ಕಪ್ಪ ಅದ…ಅದಕ್ಕ ನಾ ಏನ ಮಾಡ್ಲಿ’ ಅಂದ್ಲು…..
’ಯಾ ಬೆಲ್ಲಾ’ ಅಂತ ನಾ ಅಂದೆ…ಅಕಿ
’ನಿಂಬದ ಬೆಲ್ಲಾ’ ಅಂದ್ಲು…
ನಾ ಅಕಿಕಿಂತಾ ಖರ್ರಗ ಇದ್ದೇನಿ ಖರೆ .. ಅಲ್ಲಾ ಹಂಗ ನಾ ತರೋದ organic ಬೆಲ್ಲಾ..ಸ್ವಲ್ಪ ಕಪ್ಪ ಇರ್ತದ..
ಅಕಿದ..ಅಂದರ ಅಕಿ ತರೋ ಬೆಲ್ಲಾ inorganic ಬೆಲ್ಲಾ ….ಬೆಳ್ಳಗ ಮೆಕಪ್ ಮಾಡ್ಕೊಂಡಂಗ ಇರ್ತದ.
ಆದರ ನನ್ನ ಬೆಲ್ಲಾ…ಅಂದರ ನಾ ತಂದಿದ್ದ ಬೆಲ್ಲನೂ ಕಪ್ಪ್ ಅದಕ್ಕ ಪಾಯಸ ಕಪ್ಪ್ ಆಗೇದ ಅಂದರ ಏನ ಹೇಳ್ಬೇಕ ಹೇಳ್ರಿ….
ಏನ ಹೇಳಂಗಿಲ್ಲಾ…ಬಾಯಿ ಮುಚಗೊಂಡ ಎರಡ ಬಟ್ಟಲಾ ಪಾಯಸ ಪಿತ್ತ ಹರಾ ಅಂತ ಹೊಡದೆ ಇಷ್ಟ….
ಇನ್ನ ನನಗ ನಮ್ಮವಗ ಇಬ್ಬರಿಗೂ ಯಾಕ ಹಗಲಗಲಾ ಪಿತ್ತ ನೆತ್ತಿಗೇರತದ ಅಂತ ಬಾಯಿ ಬಿಟ್ಟ ಏನ ಹೇಳ್ಬೇಕಾಗಿಲ್ಲಲಾ….
ಅಧಿಕ ಪ್ರಹಸನ – 2
ಮೊನ್ನೆ ಸ್ನಾನಕ್ಕ ಹೋಗಬೇಕಾರ ನನ್ನ ಹೆಂಡ್ತಿ ನಮ್ಮವ್ವಗ
’ಮ್ಯಾಲೆ ಟ್ಯಾಂಕಿಂದ ಮೋಟರ್ ಚಾಲೂ ಮಾಡೇನಿ…ತುಂಬಿ ಹರದರ ಬಂದ ಮಾಡ್ರಿ’ ಅಂತ ಹೇಳಿ ಮ್ಯಾಲೆ ನಮ್ಮ ರೂಮನಾಗಿನ ಬಾಥರೂಮಗೆ ಹೋಗಿದ್ಲು.
ಮುಂದ ಒಂದ ಅರ್ಧಾ ತಾಸಿಗೆ ಟ್ಯಾಂಕ್ ತುಂಬಿ ಹರಿಲಿಕತ್ತ…ಇತ್ತಲಾಗ ನನ್ನ ಹೆಂಡ್ತಿಗೆ ಮ್ಯಾಲಿನ ಬಚ್ಚಲ ಮನಿ ಒಳಗ ಟ್ಯಾಂಕ್ ತುಂಬಿ ಹರಿಲಿಕತ್ತಿದ್ದ ಕೇಳಸ್ತ…ಅಕಿ ಬಚ್ಚಲದಾಗಿಂದ
’ರ್ರಿ..ಮ್ಯಾಲೆ ಟ್ಯಾಂಕ್ ತುಂಬೇದ ಮೋಟರ್ ಬಂದ ಮಾಡ್ರಿ’ ಅಂತ ಒದರಿದ್ಲು..
ನಾ ಅಲ್ಲೇ ಮ್ಯಾಲೆನ ರೂಮ ಒಳಗ ಪೇಂಟಿಂಗ್ ಮಾಡ್ಲಿಕತ್ತಿದ್ದೆ….ಒಂದ ಕೈಯಾಗ ಬ್ರಶ್ ಹಿಡ್ಕೊಂಡ ಕೆಳಗ ಹೋಗಿ ಬಂದ ಮಾಡಿ ಬಂದೆ…
ನಮ್ಮವ್ವಗ ಮೊದ್ಲ ಕಿವಿ ಕೇಳಸಂಗಿಲ್ಲಾ.. ಕೆಳಗ ಹಾಲ್ ಒಳಗ ಅಕಿ ಅಲ್ಲೇ ಕುರ್ಚಿ ಮ್ಯಾಲೆ ಟಿ.ವಿ. ನೋಡ್ಕೋತ ಕೂತೋಕಿ ನಿದ್ದಿ ಹಚ್ಚಿದ್ಲು.
ಮುಂದ ಹತ್ತ ನಿಮಿಷಕ್ಕ ಮತ್ತ ನನ್ನ ಹೆಂಡ್ತಿ
’ರ್ರಿ…ಮೋಟರ್ ಬಂದ ಮಾಡ್ರಿ..ಎಷ್ಟ ಹೇಳ್ಬೇಕ ನಿಮ್ಮ ತಾಯಿ ಮಗಗ’ ಅಂತ ಬಚ್ಚಲದಾಗಿಂದ ಒದರಿದ್ಲು…
ನಾ ಮತ್ತ ಕೆಳಗ ಹೋಗಿ ಬಂದ ಮಾಡಿ ಬಂದೆ…
ಅದ ಹೆಂಗ ನಾ ಎರಡ ಸರತೆ ಬಂದ ಮಾಡಿದೆ ಅಂತ ನಂಗ ತಿಳಿಲಿಲ್ಲಾ ಆಮ್ಯಾಲೆ ಗೊತ್ತ ಆತ…ಪಾಪ ಆ ಕಿವಿ ಕೇಳಸಲಾರದ ನಮ್ಮವ್ವ ನನ್ನ ಹೆಂಡ್ತಿ ಇತ್ತಲಾಗ ಮ್ಯಾಲಿನ ರೂಮ ಒಳಗಿನ ಬಚ್ಚಲದಾಗಿಂದ ಒದರಿದಾಗ, ಅಕಿಗೆ ಕನಸನಾಗ ಸೊಸಿ ಒದರಿದಂಗ ಆಗಿ ಹೆದರಿ ಎದ್ದ ಹೋಗಿ ಬಂದ ಮಾಡಿ ಬಂದ ಮತ್ತ ಮಲ್ಕೊಂಡಿದ್ಲು….ನಾ ಅಕಿ ಶಾಣ್ಯಾ ಮಗಾ, ಮ್ಯಾಲಿಂದ ಊದೋ ಅಂತ ಕೆಳಗ ಇಳದ ಬಂದ ಮೋಟರ್ ಚಲೂ ಇದ್ದದ್ದ- ಬಂದ ಇದ್ದದ್ದ ಒಂದೂ ನೋಡಲಾರದ, ಆ ಬಟನ್ ಮ್ಯಾಲೆ ಕೆಳಗ ನೋಡಲಾರದ ಅದ ಏನ ಇತ್ತ ಅದನ್ನ ಉಲ್ಟಾ ಮಾಡಿ ಬಂದಿದ್ದೆ…ಅಂದರ ಬಂದ ಆಗಿದ್ದ ಮೋಟರ್ ಮತ್ತ ಚಾಲೂ ಮಾಡಿ ಬಂದಿದ್ದೆ ಆಮ್ಯಾಲೆ ಮತ್ತ ಹೋಗಿ ಬಂದ ಮಾಡಿದೆ ಆ ಮಾತ ಬ್ಯಾರೆ….
