ಎಲ್ಲೆ ಬಿದ್ದದ್ದ ಪಾರಿಜಾತ ತಂದೀರಿ…

ಮೊನ್ನೆ ಮುಂಜಾನೆ ವಾಕಿಂಗ ಮಾಡಿ ಮನಿಗೆ ಬರಬೇಕಾರ ಒಂದ ಬೊಗಸಿ ಪಾರಿಜಾತ ಹೂವ ತಂದ ನಮ್ಮಕಿಗೆ
’ನಿನ್ನ ಸಂಬಂಧ ಪಾರಿಜಾತ ಹೂ ತಂದೇನ ನೋಡ’ ಅಂತ ಪ್ರೀತಿಲೆ ಅಂದೆ….
ಇಕಿ ಮನಿ ಗೇಟ ಮುಂದ ಕಡ್ಡಿ ಕಸಬರಗಿ ಹಿಡ್ಕೊಂಡ ಕ್ಯಾಗಸ ಹೊಡಿಲಿಕತ್ತಿದ್ಲು…ಒಂದ ಸರತೆ ನನ್ನ ಮಾರಿ ಒಂದ ಸರತೆ ನನ್ನ ಬೊಗಸ್ಯಾಗಿನ ಪಾರಿಜಾತ ಹೂವ ನೋಡಿ
’ಎಲ್ಲೆ ಬಿದ್ದಿದ್ದ ಪಾರಿಜಾತ ಹೂವು ಆರಿಸಿಗೊಂಡ ಬಂದೀರಿ’….ಅಂತ ಸಿಡಿ ಹಾಯದ್ಲು.. ಬಹುಶಃ ಅಕಿಗೆ ಇನ್ನೂ ಹಿಂದಿನ ದಿವಸ ರಾತ್ರಿದ ನನ್ನ ಮ್ಯಾಲಿಂದ ಸಿಟ್ಟ ಇಳದಿಲ್ಲಾ ಅಂತ ನನಗ ಅನಸ್ತ.
’ಲೇ ಬಿದ್ದದ್ದಲ್ಲಲೇ…ಜೋಶಿ ಅಂಟಿ ಮನಿ ಮುಂದ ಪಾರಿಜಾತ ಮರ ಅದ ಅಲಾ, ಅದರಾಗಿಂದ ನಿನ್ನ ಸಂಬಂಧ ಫ್ರೇಶ್ ಹರಕೊಂಡ ಬಂದೇನಿ’ ಅಂತ ನಾ ಅಂದೆ….
’ಅಯ್ಯ…ಮರದಾಗಿನ ಪಾರಿಜಾತ ಹರಕೊಂಡ ಬಂದಾರಂತ..ಪಾರಿಜಾತ…..ಸಂಕಷ್ಟಿ ದಿವಸ ನೆಲದಾಗಿನ ಕರಕಿ ಹರಕೊಂಡ ಬರ್ರಿ ಅಂದರ ಬರಂಗಿಲ್ಲಾ…ಇನ್ನ ಮರಾ ಹತ್ತಿ ಹೂ ತರೋ ಪೈಕಿ ಏನ ನೀವ’ ಅಂತ ಜೋರ ಮಾಡಿದ್ಲು.
ಹೋಗ್ಲಿ ಬಿಡ ಇಕಿಗೆ ನಾ ಎಷ್ಟ ಮಾಡಿದರು ಅಷ್ಟ. ಪಾರಿಜಾತ ಹೂ ಏನ ಪಾರಿಜಾತ ಮರ ತಂದರು ನಮ್ಮ ಮನಿ ಸತ್ಯಭಾಮಾನ ಹಣೇಬರಹ ಇಷ್ಟ ಅಂತ ಸುಮ್ಮನಾದೆ.
ಮುಂದ ಸಂಜಿ ಮುಂದ ಹಂಗ ಮಾತಾಡ್ತ ಮಾತಾಡ್ತ ಬಾಯಿ ತಪ್ಪಿ
’ಜೋಶಿ ಅಂಟಿ ಮಗಳ ಎರಡನೇದ ಕ್ಯಾರಿಂಗ್ ಇದ್ದಾಳೇನ’ ಅಂತ ಕೇಳಿದೆ……..
’ಯಾಕ ಎಲ್ಲಾ ಬಿಟ್ಟ ಅಕಿ ಮ್ಯಾಲೆ ಕಣ್ಣ ಬಿತ್ತ’ ಅಂತ ಮತ್ತ ರಾವ್ ಆದ್ಲು….
’ಇಲ್ಲಲೇ…ಮುಂಜಾನೆ ನಾ ವಾಕಿಂಗ ಹೋಗಬೇಕಾರ ಅಕಿ ಅವರ ಮನಿ ಮುಂದ ಸಾರಸ-ರಂಗೋಲಿ ಹಾಕಲಿಕತ್ತಿದ್ಲ…ಅಕಿನ್ನ ನೋಡಿ ನಂಗ ಹಂಗ ಅನಸ್ತ ಅದಕ್ಕ ಕೇಳಿದೆ…ನೀ ಅದನ್ನ ಒಂದ ದೊಡ್ಡ ಇಶ್ಯೂ ಮಾಡ್ತಿ ಅಲಾ’ ಅಂತ ಅಂದೆ.
’ಓಹೋ…..ಅದಕ್ಕ ಸಾಹೇಬರ ವಾಕಿಂಗ್ ಹೋದಾಗ, ಅಕಿನ ಕಂಡ, ಅಕಿ ಜೊತಿ ಹರಟಿ ಹೊಡದ, ಅವರ ಮನಿ ಮುಂದ ಬಿದ್ದಿದ್ದ ಪಾರಿಜಾತ ಆರಿಸ್ಗೊಂಡ ಬಂದ ನನಗ ಪ್ರೀತಿಲೇ ತಂದೇನಿ ಅಂತ ಹೇಳಿದ್ದ ಏನ’ ಅಂತ ಜೋರ ಮಾಡಿದ್ಲು. ಏನ ಮಾಡ್ತೀರಿ ಹಿಂತಾವರಿಗೆ.
ಒಟ್ಟ ಗಂಡನ ಮ್ಯಾಲೆ ವಿಶ್ವಾಸ ಇಲ್ಲಾ.
ಅಲ್ಲರಿ ಅವನೌನ ಬೆಳಗ ಹರದರ ಮಗಗ ಕನ್ಯಾ ನೋಡೊ ವಯಸ್ಸಾತ ನಂದ…ಹಂತಾದ ನಾ ಮಂದಿ ಮನಿ ಪಾರಿಜಾತ ಹೂ ಆರಸಲಿಕ್ಕೆ ಹೋಗ್ತೇನ?
ಏನ ಹೇಳ್ಬೇಕ ಹಿಂತಾವರಿಗೆ ಅಂತೇನಿ…
ಪೂಣ್ಯಾಕ್ಕ ನಾ ಅಕಿಗೆ ಜೋಶಿ ಅಂಟಿ ಮಗಳ ನಾ ವಾಕಿಂಗ ಹೋಗಬೇಕಾರ
’ಮತ್ತೇನ ಮಾಮಾ, ಹೆಂಗಿದ್ದಿ’ ಅಂತ ಅಂದಿದ್ದ…ನಾ ನೀ ಯಾವಾಗ ಬಂದಿ ತವರಮನಿಗೆ’ ಅಂತ ಕೇಳಿದ್ದ
ಆಮ್ಯಾಲೆ ಪಾರಿಜಾತ ಗಿಡದಾಗ ಮ್ಯಾಲಿನ ಗೊಂಚಲದಾಗ ಬೆಳದದ್ದ
’ಹೂ ಹರದ ಕೊಡ ಮಾಮಾ, ಡಾಕ್ಟರ ನನಗ ಜೀಗಿ ಬ್ಯಾಡಾ ಅಂದಾರ’ ಅಂತ ಅಕಿ ಹೇಳಿದ್ದ..
ನಾ ಅಕಿ ಸಂಬಂಧ ಜಿಗದ ಜಿಗದ ಇಡಿ ಪಾರಿಜಾತ ಟೊಂಗಿನ ಹರದ ಕೊಟ್ಟಿದ್ದ ..ಇದೇಲ್ಲಾ ಪುರಾಣ ಹೇಳಲಿಲ್ಲಾ ಛಲೋ ಆತ….
ಅಲ್ಲಾ ಮತ್ತ ನೀವು ಎಲ್ಲರ ನಮ್ಮಕಿ ಮುಂದ ಬಾಯಿತಪ್ಪಿ ಅಂದ ಗಿಂದಿರಿ….
ಈಗ ನಿಮಗರ ಗೊತ್ತಾತ ಇಲ್ಲ, ನಾ ಖರೇನ ಬಿದ್ದಿದ್ದ ಪಾರಿಜಾತ ಆರಿಸಿಗೊಂಡ ಬಂದಿದ್ದಿಲ್ಲಾ ಅಂತ…
ಇರಲಿ… ಇನ್ನೊಂದ ನಿಮಗ ಗೊತ್ತ ಇರಲಿ ಅಂತ ಹೇಳಲಿಕತ್ತೇನಿ, ಹಂಗ ಪಾರಿಜಾತ ಹೂವು ನಲದ ಮ್ಯಾಲೆ ಬಿದ್ದರು ಅವು ಅಪವಿತ್ರ ಅಥವಾ ಪೂಜೆಗೆ ಅನರ್ಹ ಆಗಂಗಿಲ್ಲ. ಬಿದ್ದಿದ್ದ ಪಾರಿಜಾತ ಹೂವನ್ನ ಸಾಕ್ಷಾತ ಶ್ರೀಹರಿನ ಅತ್ಯಂತ ಪ್ರೀತಿ ಮತ್ತು ಆದರದಿಂದ ಸ್ವೀಕರಿಸ್ತಾನಂತ…..ಅದಕ್ಕ ಸಂಸ್ಕೃತ ಒಳಗ

ಭೂ-ಪತಿತಂ ಪ್ರವಿಜ್ಞಾಯ ನಿರ್ಮಾಲ್ಯಂ ನ ಭವೇತ್ ಕ್ವಚಿತ್ |
ಪಾರಿಜಾತಸ್ಯ ಪುಷ್ಪಾಣಿ ಗೃಹ್ಣಾತಿ ಹರಿರ-ಆದರಾತ್ || ಅಂತ ಒಂದ ಶ್ಲೋಕ.

ನೋಡ್ರಿ ಇಷ್ಟ ಛಂದ ಸಂಸ್ಕೃತ ಒಳಗ ನಿರೂಪಣೆ ಮಾಡೇನಿ ಅಂತ ಅಂದರ ನಾ ಎಷ್ಟ ಸುಸಂಸ್ಕೃತ ಮನಷ್ಯಾ ಇದ್ದೇನಿ ಅಂತ.
ಅಲ್ಲಾ ನನಗ ಇರೋಕಿನ ಒಬ್ಬೋಕಿ..ಅಕಿನ ರುಕ್ಮೀಣಿ, ಅಕಿನ ಸತ್ಯಭಾಮಾ….ಇನ್ನ ಹಂತದರಾಗ ಮಂದಿ ಮನಿ ಪಾರಿಜಾತ ಹೂ ಸಂಬಂಧ ನನ್ನ ಸಂಸಾರ ಯಾಕ ಹಾಳ ಮಾಡ್ಕೋಬೇಕರಿಪಾ….
ಇದ್ದ ಒಬ್ಬೋಕಿನ ’ ಸತ್ಯಭಾಮೆ ಸತ್ಯಭಾಮೆ ಕೋಪವೇಕೆ ನನ್ನಲಿ’ ಅಂತ ಸಂಬಾಳಿಸಿಗೊಂಡ ಹೋಗೊದ ಸಂಸಾರ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ