ಯಾರಿಗೂ ಕೊಡಲಾರದಂತಾ ಸೀರಿ ನಮಗ ಯಾರ ಕೊಟ್ಟರು….

ಈಗ ಒಂದ ಹದಿನೈದ ದಿವಸದ ಹಿಂದ ನನಗ ಮನಿ ಸ್ವಚ್ಛ ಮಾಡೋ ಹುಚ್ಚ ಹೊಕ್ಕಿತ್ತ. ಮನಿ ಒಳಗಿನ ಸಾಮಾನ ಎಲ್ಲಾ ತಗದ ಕ್ಲೀನ್ ಮಾಡಿ, ಬೇಕಾಗಿದ್ದ ಬ್ಯಾಡಾಗಿದ್ದ ಸಪರೇಟ್ ಮಾಡಿ ಯಾವದ ಬ್ಯಾಡಾ ಅದನ್ನ ದಾನಾ ಮಾಡಿದರಾತ ಅಂತ ನಾ ಸ್ವಚ್ಛ ಮಾಡ್ಕೋತ ಹೊಂಟೆ. ನನ್ನ ಹಳೇ ಅರಬಿ, ಸಾಮಾನ, even ನಾವ ಉಪಯೋಗ ಮಾಡಲಾರದ ಮುಂದ ಬರ್ತಾವ ಅಂತ ನಮ್ಮವ್ವ-ನನ್ನ ಹೆಂಡ್ತಿ ತಗದ ಇಟ್ಟಿದ್ದ ಎಷ್ಟೊ ಐಟೆಮ್ಸ್, ಮಂದಿ ರಿಟರ್ನ್ ಗಿಫ್ಟ ಕೊಟ್ಟಿದ್ದ ನಮಗ ಉಪಯೋಗ ಇಲ್ಲಾ ಅಂತ ಗೊತ್ತ ಇದ್ದರೂ ಮನ್ಯಾಗ ಇಟಗೊಂಡಿದ್ದ ಸಾಮಾನ ಎಲ್ಲಾ ತಗದ ನಾ ದಾನಾ ಮಾಡಿದೆ.
ಮುಂದ ನನ್ನ ಹೆಂಡತಿಗೂ ನಿನ್ನ ಅರಬಿ ತಗದ ನೋಡ, ಯಾವದ ಉಡಂಗಿಲ್ಲಾ, ಯಾವದ ಉಡಲಿಕ್ಕೆ ಬರಂಗಿಲ್ಲಾ ಹಂತಾವನೇಲ್ಲಾ ದಾನಾ ಮಾಡಿ ಪುಣ್ಯಾ ಕಟ್ಗೊ, ಹಿಂಗರ ನಿಂಗ ಒಂದ ನಾಲ್ಕ ಮಂದಿ ನೆನಸಲಿ ಅಂದೆ.
ಅಲ್ಲಾ ಖರೇ ಹೇಳ್ತೇನಿ ಮನ್ಯಾಗ ಅಕಿವು ನಾಲ್ಕ ಕಪಾಟ ಸೀರಿ ಅವ, ಅಕಿ ನೋಡಿದ್ರ ವಾರಕ್ಕ ಒಂದ ಸರತೆನೂ ಸೀರಿ ಉಡಂಗಿಲ್ಲ ಮತ್ತ.
ನಾ ನೋಡಿದರ 26 ವರ್ಷದಿಂದ ಒಂದ ಕಪಾಟ ಅರಬಿ ಒಳಗ ಸಂಸಾರ ಮಾಡ್ಲಿಕತ್ತೇನಿ, ಒಂದ ಹೊಸಾ ಶರ್ಟ ತಂದರ ಎರೆಡ ಹಳೇ ಶರ್ಟ್ ಯಾರಿಗರ ಕೊಟ್ಟ ಬಿಡ್ತೇನಿ. ಇದ ನನ್ನ ಪದ್ಧತಿ.
ಕಡಿಕೂ ನನ್ನ ಹೆಂಡ್ತಿ ನನ್ನ ಕಾಟಾ ತಡಿಲಾರದ ಒಂದ ಇಡಿ ದಿವಸ ನಮ್ಮವ್ವಂದು ತಂದೂ ಕಪಾಟ ಸ್ವಚ್ಛ ಮಾಡಿದಂಗ ಮಾಡಿ ಎರೆಡ ಅಲ್ಟ್ರಾಟೆಕ್ ಸಿಮೇಂಟ್ ಚೀಲದ ತುಂಬ ಸೀರಿ ಕಟ್ಟಿ ಇಟ್ಟ
’ಇವನ್ನ ಯಾರಿಗರ ಕೊಡ್ಕೋರಿ…ಇಷ್ಟ extra ಇರೋವು ಮನ್ಯಾಗ’ ಅಂತ ಅಂದ್ಲು.
ನಂಗ ಖರೇನ ಎರೆಡ ಚೀಲ ಸೀರಿ ಇಕಿ ಕೊಡ್ಲಿಕತ್ತಾಳ ಅಂದ ಕೂಡಲೆ ಭಾರಿ ಖುಶಿ ಆತ ಅನ್ನರಿ. ಅಕಿ ಎರೆಡ ಚೀಲಾ ಸೀರಿ ಕೊಟ್ಟಿದ್ದ ಒಂಥರಾ ಕರ್ಣ ತನ್ನ ಕವಚ ಕುಂಡಲಾ ತಗದ ನನ್ನಂಥಾ ಒಬ್ಬ ಬಡ ಬ್ರಾಹ್ಮಣಗ ದಾನಾ ಕೊಟ್ಟಂಗ ಆತ ಆ ಮಾತ ಬ್ಯಾರೆ.
ಆದರ ಆಮ್ಯಾಲೆ ಗೊತ್ತಾತ ಇಕಿ ತನ್ನ ಒಂದ ಸೀರಿನೂ ಕೊಟ್ಟಿದ್ದಿಲ್ಲಾ, ನಮ್ಮವ್ವನೂ ಒಂದ ಸೀರಿ ಕೊಟ್ಟಿದ್ದಿಲ್ಲಾ. ಅವರಿಬ್ಬರೂ ಸೇರಿ ನಮಗ ಗಿಫ್ಟ and ರಿಟರ್ನ್ ಗಿಫ್ಟ ಬಂದಿದ್ದ ಸೀರಿ ಒಳಗ ಆರಿಸಿ, ಆರಿಸಿ ಒಂದ ಮೂವತ್ತ ಮೂರ ಸೀರಿ ತಗದ ಇಟ್ಟಿದ್ದರು.
ನಾ ಇವನ್ನರ ಯಾಕ ಕೊಡ್ತಿರಿ ಅವನ್ನೂ ಇಟ್ಗೊಂಡ ಬಿಡ್ರಿ, ನಿಮ್ಮಿಬ್ಬರಿಗೂ ಮುಂದಿನ ಜನ್ಮಕ್ಕ ಬೇಕಾಗ್ತಾವ ಅಂತ ಸಿಟ್ಟಲೇ ಒದರಿದರ
“ರ್ರಿ, ಅವ ಉಡಲಿಕ್ಕೂ ಬರಂಗಿಲ್ಲಾ, ಯಾರಿಗೂ ಗಿಫ್ಟ ಅಂತ ಕೊಡಲಿಕ್ಕೂ ಬರಂಗಿಲ್ಲಾ…ಅವನ್ನ ನೀವ ಯಾರಿಗರ ದಾನ ಮಾಡ್ರಿ’ ಅಂದ್ಲು
ನನಗ ಉಡಲಿಕ್ಕೂ ಬರಂಗಿಲ್ಲಾ ಯಾರಿಗೂ ಕೊಡ್ಲಿಕ್ಕ ಬರಲಾರದಂತ ಸೀರಿ ಅಂದರ ಏನೂ ಅಂತ ತಿಳಿಲಿಲ್ಲಾ…ಅಲ್ಲಾ ಹಂಗ ಅವು ಅಷ್ಟ ಸುಮಾರ ಸೀರಿ ಇದ್ದರ ಮತ್ತ ಮಂದಿ ಯಾಕ ನಮಗ ಅಂದರ ಇಕಿಗೆ ’ಯಾರಿಗೂ ಕೊಡಲಾರದಂತಾಹದ, ಉಡಲಾರದಂತಾ’ ಸೀರಿ ಕೊಟ್ಟರು ಅಂತ ವಿಚಾರ ಬಂತ.
ಇನ್ನ ನಮಗ ಮಂದಿ ಕೊಟ್ಟಾರ ಅಂದ ಮ್ಯಾಲೆ ನಾವ ಯಾಕ ಕೊಡಬಾರದು ಅನ್ನೋದ ನನ್ನ ಲಾಜಿಕ್. ಆದರ ನಮ್ಮಕಿ
’ಹೋಗ್ರಿ …ಅವನ್ನೇನ ಅಸಂಯ್ಯ ಕೊಡ್ತೀರಿ…ನಾಳೆ ಯಾರರ ಪ್ರಶಾಂತನ ಹೆಂಡ್ತಿ ಹೆಂತಾ ಸೀರಿ ಕೊಟ್ಟಾಳ ನೋಡ ಅಂತ ಅಂದರ ನಿಂಬದ ಮರ್ಯಾದಿ ಹೋಗೊದ ನೋಡ್ರಿ ಮತ್ತ’ ಅಂತ ನನ್ನ ಮ್ಯಾಲೆ ಬಂದ್ಲು.
ಅಲ್ಲಾ, ಪ್ರಶಾಂತನ ಹೆಂಡ್ತಿಗೆ ಹಿಂತಾ ಸೀರಿ ಕೊಟ್ಟೊವರ ಕೊಡಬೇಕಾರ ವಿಚಾರ ಮಾಡಿಲ್ಲಾ ಅಂದರ ಪ್ರಶಾಂತನ ಹೆಂಡ್ತಿ ಯಾಕ ಅವನ್ನ ಮತ್ತೊಬ್ಬರಿಗೆ ಕೊಡಬೇಕಾರ ವಿಚಾರ ಮಾಡಬೇಕು ಅಂತ ನಾ ಅಕಿಗೆ ತಿಳಿಸಿ ಕನ್ವಿನ್ಸ್ ಮಾಡಿ
’ಒಂದ ಕೆಲಸಾ ಮಾಡ ಹೆಂಗ ಇದ್ದರು ಇನ್ನೊಂದ ಹದಿನೈದ ದಿವಸಕ್ಕ ಅಧಿಕ ಮಾಸ ಬರ್ತದ ಆ ಮೂವತ್ತ ಮೂರ ಸೀರಿ ಮುತ್ತೈದಿಗೆ ಅಧಿಕ ಮಾಸದ ಬಾಗಣ ಅಂತ ದಾನಾ ಮಾಡಿ ಬಿಡ, ಅವರ ಉಟ್ಟರ ಉಡ್ಲಿ ಇಲ್ಲಾ ಬ್ಯಾರೆಯವರಿಗೆ ಕೊಟ್ಟರ ಕೊಡ್ಲಿ …’ ಅಂದೆ.
ಅಲ್ಲಾ ಹೆಂಗಿದ್ದರೂ ’ ದಾನಕ್ಕ ಕೊಟ್ಟಿದ್ದ ಆಕಳದ್ದ ಹಲ್ಲ ಹೆಣಸಬಾರದು, ಉಡಿ ತುಂಬಿದ್ದ ಸೀರಿ ಸೆರಗ ನೋಡಬಾರದು’ ಅಂತ ಗಾದಿ ಮಾತ ಅದ. ಒಟ್ಟ ಸೀರಿ ದಾಟಿಸಿದರ ಸಾಕ ಅಂತ ನಂದ ವಿಚಾರ ಇತ್ತ. ನಾ ಹಂಗ ಅಂದಿದ್ದಕ್ಕ
ಅಕಿ ಒಂದ ಹೊಡ್ತಕ್ಕ
’ಹೌದ ನೋಡ್ರಿ..ಭಾರಿ ಛಲೋ ಐಡಿಯಾ ಕೊಟ್ಟರಿ… ನಮ್ಮ ನಾವಳ್ಳಿ ಕಾಕೂಗ ಕೊಟ್ಟರಾತು ಹೆಂಗಿದ್ದರು ಹಿರೇಮನಷ್ಯಾರ ಇದ್ದಾರ…ಮ್ಯಾಲೆ ನಮ್ಮ ಕಾಕೂ ಅಂತೂ ಎದಕ್ಕೂ ಯಾವದಕ್ಕೂ ಒಟ್ಟ ಹೆಸರ ಇಡಂಗಿಲ್ಲಾ’ ಅಂತ ಅಂದ್ಲು.
ಇನ್ನ ಇಕಿ ದಾನಾ ಮಾಡಿದರು ತಮ್ಮ ತವರಮನಿಯವರಿಗೆ ದಾನಾ ಮಾಡೋಕಿ ಅಂತ ನಂಗ ಗ್ಯಾರಂಟೀ ಆತ. ಹೋಗ್ಲಿ ಬಿಡ ನನಗ ಒಟ್ಟ ಆ ಸೀರಿ ಚೀಲಾ ದಾಟಿಸಿದ್ದರ ಸಾಕಾಗಿತ್ತ ಹಿಂಗಾಗಿ ಮತ್ತ ನಿಮ್ಮ ತವರಮನಿಯವರಿಗೆ ಇಷ್ಟ ಯಾಕ ದಾನಾ ಕೊಡ್ತಿ ಅಂತ ಅಂದ ಅದನ್ನೊಂದ ಇಶ್ಯೂ ಮಾಡಲಿಕ್ಕೆ ಹೋಗಲಿಲ್ಲಾ.
ಇನ್ನ ನಮ್ಮಿಬ್ಬರದು ಡಿಸ್ಕಶನ್ ಅಗದಿ ಲಕ್ಷಗೊಟ್ಟ ಕೇಳ್ಕೋತ ’ ಕೇಳಿಸಿದರೂ ಕೇಳಸಲಾರದಂಗ’ ಕೂತಿದ್ದ ನಮ್ಮವ್ವ ಒಮ್ಮಿಕ್ಕಲೇ ನಡಕ ಬಾಯಿ ಹಾಕಿ
’ಅಯ್ಯ ಒಬ್ಬರಿಗೆ ಮೂವತ್ತ ಮೂರ ಸೀರಿ ಏನ ಕೊಡ್ತಿರಿ ಹುಚ್ಚರಂಗ …..ಹೆಂಗಿದ್ದರು ಅಧಿಕ ಬಾಗಣ, ಮೂವತ್ತ ಮೂರ ಮಂದಿ ಮುತ್ತೈದಿಯರಿಗೆ ಕರದ ಕೊಡ್ರಿ…ಪುಣ್ಯಾ ಬರ್ತದ ’ ಅಂತ ಅಂದ್ಲು….
ಯಪ್ಪಾ ಇನ್ನ ಮೂವತ್ತ ಮೂರ ಮುತ್ತೈದಿಯರಿಗೆ ಸೀರಿ ಅಂದರ ’ಬರೇ ಸೀರಿ ಇಷ್ಟ ಹೆಂಗ ಕೊಡ್ತಿರಿ ಅಸಂಯ್ಯ….ಒಂದ ಜಂಪರ್ ಪೀಸ್ ಇಟ್ಟ ಕೊಡ್ರಿ’ ಅಂತ ನಮ್ಮವ್ವಾ ಗಂಟ ಬಿಳೋಕಿ ಅಂತ ಖಾತ್ರಿ ಆತ. ಮುಂದ ಅಕಿ
’ಜಂಪರ್ ಪೀಸ್ ಹೊಲಿಸಿಗೊಳ್ಳಿಕ್ಕೆ ಬರಲಾರದ್ವು, ಯಾರಿಗೂ ಕೊಡ್ಲಿಕ್ಕೆ ಬರಲಾರದ್ವು ಕೊಟ್ಟ ಗಿಟ್ಟಿ, ಅವನ್ನರ ಛಲೋವ ಕೊಡ’ ಅಂತ ನಮ್ಮಕಿಗೆ ಹೇಳಿದ್ಲು.
’ಅಲ್ಲಾ ಸೀರಿನ ಉಟಗೊಳ್ಳಂಗಿಲ್ಲಾಂದರ ಮತ್ತ ಮ್ಯಾಲೆ ಜಂಪರ್ ಯಾಕ? ’ ಅಂತ ನಾ ನಡಕ ಬಾಯಿ ಹಾಕಿ ಅಂದ
’ಅಯ್ಯ ನಮ್ಮಪ್ಪಾ..ಬರೇ ಸೀರಿ ಕೊಡಬಾರದ, ಸೀರಿ ಜೊತಿ ಜಂಪರ್ ಪೀಸ್ ಇಟ್ಟ ಕೊಡೊದ ಪದ್ಧತಿ….ನೀ ಅಪ್ಪಿ ತಪ್ಪಿ ವೈದಿಕರ ಮನ್ಯಾಗ ಹುಟ್ಟಿ ನೋಡ’ ಅಂತ ಬೈಸ್ಗೊಂಡೆ.
ಇನ್ನ ಮೂವತ್ತಮೂರ ಮುತ್ತೈದಿಯರನ ಮನಿಗೆ ಕರದರ ಮಿನಿಮಮ್ ಮೂವತ್ತ ಮೂರ ಕಪ್ ಚಹಾ….ಕೆಲವೊಮ್ಮೆ ಅವಲಕ್ಕಿ ಚಹಾನೂ ಆಗಬಹುದು… ಯಪ್ಪಾ ಇದೇನ ಒಂದ ಹೋಗಿ ಒಂದ ಆಗಲಿಕತ್ತಲಾ ಅಂತ ನನಗ ಟೆನ್ಶನ್ ಆಗಲಿಕತ್ತ.
ಕಡಿಕೆ ನನ್ನೆ ಹೆಂಡ್ತಿ ಮೂರನೂರ ಮುವತ್ತ ರೂಪಾಯಿದ್ದ ಪೇಟ್ರೋಲ್ ಹಾಕಿಸ್ಗೊಂಡ ಮುತ್ತೈದಿಗೊಳ ಮನಿಗೆ ಖುದ್ ನಾನ ಹೋಗಿ ಉಡಿ ತುಂಬಿ ಬರತೆನಿ ಅಂದ ಮ್ಯಾಲೆ ಸಮಾಧಾನ ಆತ ಅನ್ನರಿ.
ಹಂಗ ನಂದ ಈ ಮನಿ ಸ್ವಚ್ಛ ಮಾಡೋ ಹುಚ್ಚ ಆವಾಗ ಇವಾಗ ಬರಲಿಕ್ಕೆ ಕಾರಣ ಅಂದರ ಜೊಸೆಫ ನ್ಯೂಟನ್ನ್ ನ ’principle of emptiness’ (ಶೂನ್ಯತೆಯ ತತ್ವ)
ಅಂವಾ ತನ್ನ ಪ್ರಿನ್ಸಿಪಲ್ ಒಳಗ
’ನಮ್ಮ ಜೀವನದಾಗ ಹೊಸ ಸಮೃದ್ಧಿ ಮತ್ತು ಅವಕಾಶ ಬರಬೇಕೆಂದರ, ಮೊದಲು ನಾವು ಹಳೆ ಮತ್ತು ಅನಗತ್ಯ-unwanted ಸಾಮಾನ ಹೊರಹಾಕಬೇಕು.
ನಾವು ಜಾಗ ಖಾಲಿ ಮಾಡಿದಾಗ ಮಾತ್ರ ನಮಗೆ ಹೊಸದನ್ನು ಇಡಲಿಕೆ ಸಾಧ್ಯ’ ಅಂತ ಹೇಳಿದ್ದನ್ನ ನಾ ಸಿರಿಯಸ್ ತೊಗೊಂಡ ಸಾದಸಿದ್ದ ಏನಪಾ ಅಂದರ 33 ಸೀರಿ ಯಾರೂ ಉಡಲಾರದಂತಾವು, ಯಾರಿಗೂ ಕೊಡಲಾರದಂತಾವನ್ನ ಮನಿಯಿಂದ ಹೊರಗ ಹಾಕಲಿಕ್ಕೆ ಹೊಂಟಿದ್ದ .
ಅಲ್ಲಾ on serious note, ಅಂವಾ ಹೇಳಿದ್ದ ಬರೇ ಹಳೇ ಸಮಾನ, ಸೀರಿಗೆ ಇಷ್ಟ ಅಲ್ಲಾ, ನಮ್ಮ ಮನಸ್ಸಿನೊಳಗಿರುವ ಹಳೇ ವಿಚಾರಗಳನ್ನ, ಚಿಂತನೆಗಳನ್ನ, ಯಾರದೋ ಬಗ್ಗೆ ಇದ್ದ ದ್ವೇಷ, ಅಸೂಯೆಯನ್ನ, ನೆಗೆಟಿವ್ ವಿಚಾರಗಳನ್ನ ತಲಿಯಿಂದ ತಗದ ಹಾಕಿದರ ಹೊಸ ವಿಚಾರ, ಹೊಸ ಚಿಂತನೆ, ಹೊಸ ಸ್ಪೂರ್ತಿಗೆ ಅವಕಾಶ ಸಿಗ್ತದ. ಅದ principle of emptiness.
ನೋಡ್ರಿ ಹಂಗ ನಾಳಿ ಇಂದ ಅಧಿಕ ಮಾಸ ಶುರು ಆಗತದ…
ಈ ಅಧಿಕ ಮಾಸ ಆಧ್ಯಾತ್ಮಿಕ ಸಾಧನೆಗೆ ಅತ್ಯಂತ ಶ್ರೇಷ್ಠ ಅಂತ…ನಮ್ಮ ಹಳೇ ಲೌಕಿಕ- ಅನಾವಶ್ಯಕ- ನೆಗೆಟಿವ್ – ದ್ವೇಶ – ಅಸೂಯೆ ಹಿಂತಾ ವಿಚಾರಗಳನ್ನ ತಗದ ತಲಿ ಸ್ವಚ್ಛ ಮಾಡ್ಕೊಂಡ ಹೊಸ ವಿಚಾರಗಳಿಗೆ ಅವಕಾಶ ಮಾಡಿ ಕೊಡೋಣಂತ.
ಅಧಿಕ ಮಾಸ ಮುಗಿಯೋದರಾಗ ನಮ್ಮ ಮನಿ ಕಡೆ ಏನರ ಬಂದರ ಒಂದ ಸರತೆ ಹಣಕಿ ಹಾಕಿ ಹೋಗರಿ…ಅಲ್ಲಾ ಹೆದರಬ್ಯಾಡ್ರಿ, ನಿಮಗೇನ ಯಾರು ಉಡಲಾರದ, ಯಾರಿಗೂ ಕೊಡಲಾರದ್ದ ಆ ಸೀರಿ ಏನ ಕೊಡಂಗಿಲ್ಲಾ…. ಹಂಗ ಅಪ್ಪಿ ತಪ್ಪಿ ನಮ್ಮನಿ ಸೀರಿ ನಿಮ್ಮನಿ ಮುತ್ತೈದಿಗೆ ಬಂದರು
’ಇದ ಹೆಂತಾ ಸೀರಿ ಕೊಟ್ಟಾರ, ಯಾರು ಉಡಲಿಕ್ಕೆ ಬರಂಗಿಲ್ಲಾ, ಯಾರಿಗೂ ಕೊಡ್ಲಿಕ್ಕೆ ಬರಂಗಿಲ್ಲಾ ಅನಬ್ಯಾಡ್ರಿ…..
ನಾ ಮೊದ್ಲ ಹೇಳಿದಂಗ ’ ದಾನಕ್ಕ ಕೊಟ್ಟಿದ್ದ ಆಕಳದ್ದ ಹಲ್ಲ ಹೆಣಸಬಾರದು, ಉಡಿ ತುಂಬಿದ್ದ ಸೀರಿ ಸೆರಗ ನೋಡಬಾರದು…………ಇನ್ನ ಆ ಸೀರಿಗೆ ಮ್ಯಾಚಿಂಗ್ ಜಂಪರ್ ಪೀಸ್ ಅಂತೂ ಕೇಳಬಾರದ….

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ