ಅಲ್ಲಾ…ಒಂದ ಸ್ವಲ್ಪ ದಿವಸದ ಹಿಂದ ಹೆಂಡ್ತಿ ತವರಮನಿಗೆ ಹೋಗೊ ಕಥಿ ಬರದಿದ್ದೆ, ಮತ್ತೇಲ್ಲರ ನೀವ ನಾ ಅಕಿಗೆ ತವರಮನಿಗೆ ಹೋಗಬೇಕಾರ
’ಮತ್ತ ಬರ್ರಿ..’ ಅಂತ ರಿಕ್ವೆಸ್ಟ ಮಾಡಿ ಕಳಸಿದ್ದೆ ಅಂತ ತಿಳ್ಕೊಬ್ಯಾಡ್ರಿ….. ಹಂಗ ಅಕಿ ವಾಪಸ ಬರಲಾರದ ಎಲ್ಲೇ ಹೋಗ್ತಾಳ….ಮನಿಗೆ ಗ್ಯಾಸ ಸಿಲೆಂಡರ್ ಬಂದ ಮ್ಯಾಲೆ ನಾ ವಾಪಸ ಕರಸಿದೆ ಬಂದ್ಲ ಆ ಮಾತ ಬ್ಯಾರೆ.
ಇವತ್ತ ನಾ ಹೇಳಿಕತ್ತಿದ ವಿಷಯ ನಮ್ಮವ್ವಂದ….
ಹಂಗ ಮನಿಗೆ ಯಾರ ಗೆಸ್ಟ ಬಂದ ವಾಪಸ ಹೋಗಬೇಕಾರ ’ ಮತ್ತ ಬರ್ರಿ…ಬರ್ಕೋತಿ ಇರ್ರಿ’ ಅಂತ ಹೇಳೋದ ಒಂದ ಕಾಲದಾಗ ಸಂಪ್ರದಾಯ ಇತ್ತ.
ಈಗೂ ಸಂಪ್ರದಾಯಸ್ಥರ ಇರೋ ಮನಿಗೆ ಹೋದರ ವಾಪಸ ಹೋಗಬೇಕಾರ ’ ಮತ್ತ ಬರ್ರಿ’ ಅಂತ ಫಾರ್ಮ್ಯಾಲಿಟಿಗರ, ಕಾಟಾಚಾರಕ್ಕರ ಅಂದ ಅಂತಾರ ಆ ಮಾತ ಬ್ಯಾರೆ.
ಆದರ ನಮ್ಮವ್ವಗ ಈ ’ಮತ್ತ ಬರ್ರಿ’ ಅನ್ನೋದ ಒಂದ ಚಟಾ. ಮೊದ್ಲ ಎಂಬತ್ತರ ಹತ್ತರ ಬಂದಾಳ, ಅರವು-ಮರವು …ಮನಿಗೆ ಬಂದವರಿಗೇಲ್ಲಾ ಮತ್ತ ಬರ್ರಿ ಅನ್ನೋಕಿ….ಅಲ್ಲಾ ಈ ತುಟ್ಟಿ ಕಾಲದಾಗ ಬಂದೋರಿಗೇಲ್ಲಾ ಮತ್ತ ಬರ್ರಿ ಅಂದರ ಹೆಂಗ ಅಂತ ನನ್ನ ಹೆಂಡ್ತಿ….ನಾ ’ಅವರೇನ ನಮ್ಮವ್ವ ಕರದದ್ದಕ್ಕ ಬಂದ ಬಿಡ್ತಾರೇನ…ನೀ ಯಾಕ ಟೆನ್ಶನ್ ತೊಗೊತಿ’ ಅಂತ ಸಮಾಧಾನ ಮಾಡೊಂವಾ.
ಇನ್ನ ನಮ್ಮ ಏರಿಯಾದಾಗ ವಾರಕ್ಕ ಒಬ್ಬರಿಲ್ಲಾ ಒಬ್ಬರ
’ನಾ ಗುಡ್ಡಕ್ಕ ಜಾತ್ರಿಗೆ ಹೊಂಟೇನಿ, ಗಾಡಿ ಖರ್ಚಿಗೆ ಕೊಡ್ರಿ’ ಅಂತ ’ ಏಳ ಮಕ್ಕಳ ತಾಯಿ ಜಾತ್ರಿ ಅನ್ನ ಸಂತರ್ಪಣೆ ಅದ, ಇನ್ನ ನಿಮ್ಮ ಕಡೆ ಆದಷ್ಟ ಕೊಡ್ರಿ’ ಅಂತ, ಒಮ್ಮೋಮ್ಮೆ ಜೋಗಮ್ಮಗೊಳ, ದುರ್ಗ ಮುರ್ಗ್ಯಾರ, ಗೋರಪ್ಪಗೊಳ…ಹಿಂಗ ನೂರಾ ಎಂಟ ಜನಾ ಬರ್ಕೋತ ಇರ್ತಾರ. ನಮ್ಮವ್ವಂದ ಮನಿ ಬಾಗಲಕ್ಕ ಬಂದೋರನ ಹಂಗ ಕಳಸಂಗಿಲ್ಲಾ ಅನ್ನೋದ ಸಂಪ್ರದಾಯ.
ಅಲ್ಲಾ ಹಂಗ ನಮ್ಮ ಮಾವ ನಮ್ಮ ಮನಿ ಬಾಗಲತನಕ ತಮ್ಮ ಮಗಳನ ಕರಕೊಂಡ ಬಂದ ನಿಮ್ಮ ಹುಡಗನ್ನ ಕೊಡ್ರಿ ಅಂತ ಕೇಳಿದಾಗ
’ಪಾಪಾ..ಮನಿ ಮಟಾ ಬಂದಾರ ಹೆಂಗ ಇಲ್ಲಾ ಅನಬೇಕ’ ಅಂತ ತನ್ನ ಚೊಚ್ಚಲ ಗಂಡಸ ಮಗನ ಕೊಟ್ಟೊಕಿ ಇನ್ನ ಗುಡ್ಡಕ್ಕ ಗಾಡಿ ಖರ್ಚಿಗೆ, ಅನ್ನಸಂತರ್ಪಣೆಗೆ ಅಕ್ಕಿ ಕೇಳಲಿಕ್ಕೆ ಬಂದರ ಕೊಡಲಾರದ ಇರ್ತಾಳ.
ಮಜಾ ಅಂದರ ಅವರಿಗೆ ಕೊಡೊದ ಎಲ್ಲಾ ಕೊಟ್ಟ ಲಾಸ್ಟಿಗೆ ಮತ್ತ ಬರ್ರಿ ಅನ್ನೋಕಿ.
ಇವತ್ತಿಗೂ ನಮ್ಮ ಮನಿಗೆ ಮಂಗಳವಾರ ಶುಕ್ರವಾರ ಒಂದಿಷ್ಟ ಜೋಗಮ್ಮಗೊಳ ಬರ್ತಾರ. ಅಕಸ್ಮಾತ ನಮ್ಮವ್ವನ ಬದ್ಲಿ ನನ್ನ ಹೆಂಡ್ತಿ ಬಾಗಲ ತಗದ ಅವರನ ನೋಡಿದ್ಲಂದರ ಮುಗದ ಹೋತ…
’ಏ ಮೊನ್ನೇರ ಬಂದಿದ್ದರಿ ಮತ್ತ ಬಂದಿರಲಾ’ ಅಂತ ಇಕಿ ಅಂದರ
“ಅಯ್ಯ…ನಿಮ್ಮ ಅತ್ತಿನ ಮತ್ತ ಬರ್ರಿ ಅಂತ ಕರದಾರ ನಮ್ಮವ್ವಾ….ನೀ ಯಾಕ ಮೈಯಾಗ ದೇವರ ಬಂದಂಗ ಮಾಡ್ತಿ….ನಿಮ್ಮ ಅತ್ತಿನ್ನ ಕರಿ” ಅಂತ ಜೋರ ಮಾಡಿ ಕಡಿಕೆ ನಮ್ಮವ್ವನ ಕಡೆ ಇಸ್ಗೊಂಡ ಹೋಗೊರ.
ನಮ್ಮಕಿಗೆರ ತಲಿ ಕೆಟ್ಟ ಹೋಗ್ತಿತ್ತ.
“ನೀವು ಹಿಂಗ ಮನಿಗೆ ಬಂದೋರಿಗೇಲ್ಲಾ…ಮತ್ತ ಬರ್ರಿ..ಮತ್ತ ಬರ್ರಿ…ಅನ್ಕೋತ ಕೂತರ ಮಂದಿ ನಮ್ಮ ಮನಿ ಮುಂದ ಗ್ಯಾಸ ಅಂಗಡಿ ಮುಂದ ಸಿಲೆಂಡರ್ ಗೆ ಪಾಳೆ ಹಚ್ಚಿದಂಗ ಪಾಳೆ ಹಚ್ಚತಾರ ಇಷ್ಟ’ ಅಂತ ನಮ್ಮವ್ವಗ ಅನ್ನೋಕಿ.
ಅಲ್ಲಾ ಮೊದ್ಲ ಹೇಳಿದ್ನೆಲಾ, ನಮ್ಮವ್ವಗ ಎಂಬತ್ತ ತುಂಬಲಿಕ್ಕೆ ಬಂತ ಅರವು-ಮರವು ಅಂತ…ಏನ ಮಾಡ್ಲಿಕ್ಕೆ ಬರಂಗಿಲ್ಲಾ. ಒಮ್ಮೋಮ್ಮೆ ಅಂತೂ ಆ ರದ್ದಿ ಪೇಪರ ತೊಗೊಳೊವಂಗ, ಹಳೇ ಮೊಡ್ಕಾ ಸಾಮಾನ ಖರೀದಿ ಮಾಡೊವಂಗ, ನಳಾ ರಿಪೇರಿ, ಇಲೆಕ್ಟ್ರಿಸಿಯನ್ ಯಾರ ಬಂದರು ’ಮತ್ತ ಬರ್ರಿ ಅನ್ನೋಕಿ’…
ಆ ಭಾಂಡೆ ಓಗ್ಯಾಣ ಮಾಡೋಕಿ ಹೋಗಬೇಕಾರ ’ ಅಮ್ಮಾರ ಬಾಗಲ ಹಾಕೋರಿ…ನಾ ಹೋಕ್ಕೇನಿ ’ ಅಂದಾಗ ಸಹಿತ ಅಕಿಗೂ ಮತ್ತ ಬರ್ರಿ ಅಂದ ಕಳಸ್ತಾಳ.
ಅದ ಬಿಡ್ರಿ ಮೊನ್ನೆ ಏನ ಮಜಾ ಆತ ಅಂದರ ಮುಂಜಾನೆ ಎದ್ದ ನಾನು ನನ್ನ ಹೆಂಡ್ತಿ ವಾಕಿಂಗ್ ಹೊಂಟಿದ್ವಿ…ನಮ್ಮಕಿ ಹೋಗಬೇಕಾರ ನಮ್ಮವ್ವಗ ಕಿವಿ ಕೇಳಂಗಿಲ್ಲಾ ಅಂತ ಜೋರಾಗಿ ಒದರಿ, ’ಬಾಗಲಾ ಹಾಕೋರಿ…ನಾವ ವಾಕಿಂಗ ಹೋಗಿ ಬರ್ತೇವ” ಅಂದರ ನಮ್ಮವ್ವ ನಮಗೂ ಮತ್ತ ಬರ್ರಿ….ಅಂದ್ಲು. ನನಗೇನ ಹೇಳಬೇಕ ತಿಳಿಲಿಲ್ಲಾ. ನನ್ನ ಹೆಂಡ್ತಿಗೆರ ಪಿತ್ತ ನೆತ್ತಿಗೇರತ…
’ಬರಲಾರದ ಮತ್ತ ಎಲ್ಲೇ ಹೋಗಬೇಕ…ಈ ಮನಿ ಮಗಾ-ಸೊಸಿ ಇದ್ದೇವಿ…ನೀವೇನ ಮನಿ ಮಂದಿಗೂ ಮತ್ತ ಬರ್ರಿ ಅಂತ ಗಂಟ ಬೀಳ್ತಿರೇಲಾ” ಅಂತ ಓಣಿ ಮಂದಿಗೆ ಕೇಳ್ಸೊ ಹಂಗ ಅಂದ ನನ್ನ ಜೊತಿ ವಾಕಿಂಗ ಬಂದ್ಲು…..
ನೋಡ್ರಿ ಹಂಗ ನೀವು ಯಾರರ ಇತ್ತಲಾಗ ಬಂದರ ನಮ್ಮ ಮನಿ ಕಡೆ ಬರ್ರಿ ಮತ್ತ….
ಹಂಗ ನೀವ ಒಮ್ಮೆ ಬಂದರ ಸಾಕ ಮುಂದ ನಮ್ಮವ್ವ ’ ಮತ್ತ ಬರ್ರಿ’ ಅಂತ ಕರದ ಕರಿತಾಳ…ಅದನ್ನೇನ ನೀವು ಸಿರಿಯಸ್ ತೊಗೊಳಿಕ್ಕೆ ಹೋಗಬ್ಯಾಡ್ರಿ ಮತ್ತ….
ಇಷ್ಟ ಏನ, ಈಗ ಸಿಕ್ಕಾಪಟ್ಟೆ ಮದ್ವಿ, ಮನಿ ಒಪನಿಂಗ್ ಸೀಜನ್, ನಾವ ಮನ್ಯಾಗ ಇದ್ದೇವೋ ಇಲ್ಲೋ ಅನ್ನೊದನ್ನ ಕನಫರ್ಮ್ ಮಾಡ್ಕೊಂಡ ಬರ್ರಿ….ನಾವ ಇಲ್ಲಾ ಅಂತ ಅಂದರ..ಮತ್ತ ಬಂದೀರಂತ.
