(ನಮ್ಮ ಗುಂಡಣ್ಣ ಮಾಮಾ ತಮ್ಮ 80ನೇ ವರ್ಷದ ಹುಟ್ಟು ಹಬ್ಬದ ಶುಭಸಂದರ್ಭಕ್ಕೆ ಬರೆದ ಪುಸ್ತಕ ’ ನನ್ನ ಬದುಕು- 80′ ಬಿಡುಗಡೆಯಾಗುತ್ತಿದ್ದು, ಆ ಪುಸ್ತಕಕ್ಕೆ ನಾ ಬರೆದ)
ಮುನ್ನುಡಿ
ನಮ್ಮ ಗುಂಡಣ್ಣ ಮಾಮಾ ತನ್ನ ಈ ’ ನನ್ನ ಬದುಕು- 80’ ಪುಸ್ತಕದೊಳಗ ಇಡೀ ದೇಶಪಾಂಡೆ ಮನೆತನದ ಬಗ್ಗೆ ಮತ್ತ ಆ ಮನೆತನಕ ಬೀಗತನಾ ಮಾಡಿದವರ ಬಗ್ಗೆ ಎಲ್ಲಾ ತನಗ ನೆನಪ ಇದ್ದಷ್ಟ ಅಗದಿ ಛಂದ ಬರದಾನ. ಇದ ಪೂರ್ತಿ ಅವನ ಮೊದ್ಲಿನ ಮೂರ- ನಾಲ್ಕ ತಲಿಮಾರನಿಂದ ಹಿಡದ ಅವನ ಮುಂದಿನ ಮೂರ ನಾಲ್ಕ ತಲಿದ ವಂಶಾವಳಿ ಅಂದರು ತಪ್ಪೇನಿಲ್ಲಾ. ಏನಿಲ್ಲಾಂದರು ಒಂದ ನೂರು- ನೂರಾ ಇಪ್ಪತ್ತ ವರ್ಷದ ಸಂಬಂಧಗಳ ಬಳ್ಳಿ ಈ ಪುಸ್ತಕದೊಳಗ ಚಿಗತಾವ, ಬೆಳದಾವ, ಬಲತಾವ ಒಂದಿಷ್ಟ ಬಾಡ್ಯಾವ. ಅದ ಅಲ್ಲದ ಅಂವಾ ಈ ಬುಕ್ ಒಳಗ ತನ್ನ ವೃತ್ತಿ ಬದಕಿನ ಬಗ್ಗೆ ವಿಸ್ತಾರವಾಗಿ ಬರದಾನ. ಒಟ್ಟಾರೆ ಈ ಪುಸ್ತಕ ಅವನ ಜೀವನ ಪಥದ ದಾರಿಯನ್ನ ಓದುಗರ ಜೊತಿ ಹಂಚಗೊತದ.
ಖರೇ ಹೇಳ್ಬೇಕಂದರ ಗುಂಡಣ್ಣ ಮಾಮಾ ನಮ್ಮವ್ವನ ಸೋದರ ಮಾವಾ….ಹಂಗ ನಮ್ಮವ್ವನ ಕಿಂತಾ ಒಂದ ವರ್ಷ ಇಷ್ಟ ದೊಡ್ದೊಂವ ಆದರೂ ನಮ್ಮವ್ವಗ ಸೋದರಮಾವನ ಆ ಮಾತ ಬ್ಯಾರೆ. ಅದ ಹೆಂಗ ಅಂತ ಕೇಳಿಕ್ಕೆ ಹೋಗಬ್ಯಾಡ್ರಿ, ಮತ್ತ ನಾ ಅದನ್ನ ಹೇಳಲಿಕತ್ತೆ ಅಂದರ ಅದ ಒಂದ ಬುಕ್ ಆಗ್ತದ. ಅಂವಾ ನಮ್ಮವ್ವನ ಅವ್ವನ ತಮ್ಮಾ ಹಿಂಗಾಗಿ ಅಕಿಗೆ ಸೋದರ ಮಾವಾ. ನಮ್ಮಜ್ಜಿ ಇವಂಗ ಯಾವಾಗಲೂ ತಮ್ಮಾ…ತಮ್ಮಾ ಅಂತನ ಕರಿಯೋಕಿ, ನಮ್ಮವ್ವ- ನಮ್ಮಪ್ಪಾ ಇಬ್ಬರೂ ಇವಂಗ ಗುಂಡಣ್ಣಾ ಅಂತನ ಕರಿತಿದ್ದರು. ಮುಂದ ನನಗ ತಿಳವಳಕಿ ಬಂದಾಗಿಂದ ನಾ ಇಂವಂಗ ’ಗುಂಡಣ್ಣ ಮಾಮಾ’ನ ಅಂತ ಕರಿಲಿಕ್ಕೆ ಶುರು ಮಾಡಿದೆ. ಇನ್ನೊಂದ ಮಜಾ ಅಂದರ ಇಂವಾ ಮಾಡ್ಕೊಂಡಿದ್ದ ಅವನ ಅಕ್ಕನ ಮಗಳನ…ಇನ್ನ ಅವರಕ್ಕನ ಮಗಳ ಅಂದರ ನಮ್ಮಜ್ಜಿಗೂ ಅಕ್ಕನ ಮಗಳ…ಇನ್ನ ಅಕಿ ನಮ್ಮವ್ವಗ ತಂಗಿ ಆದಂಗ. ಆ ಸಂಬಂಧದ ಪ್ರಕಾರ ಹೋದರ ಗುಂಡಣ್ಣ ನನಗ ಮೌಶಿ ಗಂಡ ಆಗ್ತಾನ…ಅದರ ಅಂವಾ ಹಡದಿದ್ದ ಒಂದ, ಮ್ಯಾಲೆ ಹೆಣ್ಣ ಬ್ಯಾರೆ, ಸುಮ್ಮನ ಯಾಕ ’ ಕಾಕಾ’ ಅಂದ ರಿಸ್ಕ ತೊಗೊಬೇಕ, ಮುಂದ ನಾ ದೊಡ್ಡೊಂವ ಆದ ಮ್ಯಾಲೆ ಹೊರಗಿನ ಕನ್ಯಾ ಸಿಗಲಿಲ್ಲಾ ಅಂದರ ಏನ ಮಾಡೋದ ಅಂತ ನಾ ಸಣ್ಣಂವ ಇದ್ದಾಗಿಂದ ಅವಂಗ ಮಾಮಾ ಅಂತ ಕರಿಲಿಕ್ಕೆ ಶುರು ಮಾಡಿದ್ದೆ ಅನ್ನರಿ.
ಇನ್ನ ಈ ಪುಸ್ತಕಕ್ಕ ನಾ ಮುನ್ನಡಿ ಬರಿಲಿಕ್ಕೆ ಭಾಳ ಇಂಪಾರ್ಟೆಂಟ್ ಕಾರಣ ಅಂದರ. ನಾ ಹುಟ್ಟಿದ್ದ ಶಿವಮೊಗ್ಗಾ ಒಳಗ, ಆವಾಗ ಇಂವಾ ಶಿವಮೊಗ್ಗಾ ಒಳಗ ಪಿ.ಡಬ್ಲು.ಡಿ ಒಳಗ ಕೆಲಸಾ ಮಾಡ್ತಿದ್ದಾ. ನಮ್ಮಜ್ಜಿ ತನ್ನ ಮಗಳ ಡಿಲೇವರಿ ಅಂದರ ನಮ್ಮವ್ವನ ಡಿಲೇವರಿ ಸಂಬಂಧ ತನ್ನ ತವರಮನಿ ಕೆರಹಳ್ಳಿಗೆ ಕರಕೊಂಡ ಹೋಗಿದ್ಲು. ಇನ್ನ ಕೆರಹಳ್ಳಿ ಭಾಳ ಸಣ್ಣ ಹಳ್ಳಿ, ಮ್ಯಾಲೆ ನಮ್ಮವ್ವ ಭಾಳ ನಾಜೂಕ ಹೆಣ್ಣಮಗಳು, ಅದರಾಗ ಒಂದನೇದ ಬ್ಯಾರೆ, ಯಾಕ ಸುಮ್ಮನ ರಿಸ್ಕ್ ತೊಗೊಬೇಕು ಹೆಂಗಿದ್ದರು ಗುಂಡಣ್ಣಾ ಶಿವಮೊಗ್ಗಾದೊಳಗ ಇದ್ದಾನ , ದೊಡ್ಡ ಊರ, ಸರ್ಕಾರಿ ದವಾಖಾನೆ ( ಮೇಗಾನ್ ಹಾಸ್ಪಿಟಲ್- ಬ್ರಿಟೀಷರ ಕಾಲದ್ದ) ಅದ ಅಂತ ನಮ್ಮಜ್ಜಿ ನಮ್ಮವ್ವನ್ನ ದಿಂದಾಗ ಇದ್ದಾಗ ಚಕ್ಕಡಿ ಒಳಗ ಕೆರಹಳ್ಳಿ ಇಂದ ಶಿವಮೊಗ್ಗಾಕ್ಕ ಕರಕೊಂಡ ಹೋದ್ಲಂತ. ಮುಂದ ಶಿವಮೊಗ್ಗಾ ಜಿಲ್ಲಾ ಆಸ್ಪತ್ರೆ ಒಳಗ ನಮ್ಮವ್ವ ಒಂದನೇದ ಅದು ಗಂಡಸ ಮಗನ ಹಡದ್ಲು. ಅಂದರ ನನ್ನ ಹಡದ್ಲು….ಹಂಗ ಡಿಲೇವರಿ ಕಾಂಪ್ಲಿಕೇಟೆಡ್ ಆಗಿ, ನಮ್ಮವ್ವಗ ಹತ್ತರಾಗ ಬಿದ್ದರು ನಾ ಹೊರಗ ಬರವಲ್ಲನಾಗಿದ್ದೆನಂತ. ಇನ್ನ ಆಗಿನ ಕಾಲದಾಗ ಸಿಜರಿನ್ ಬ್ಯಾರೆ ಇರಲಿಲ್ಲಾ ಹಿಂಗಾಗಿ ನನ್ನ ಶಸ್ತ್ರಾ ಅಂದರ ಇಕ್ಕಳಾ ಹಾಕಿ ’ ಬರ್ತಿ ಇಲ್ಲ ಮಗನ ಹೊರಗ’ ಅಂತ ಎಳದ ಹೊರಗ ತಗದರ. ಆ ತ್ರಾಸಿಗೆ ನಮ್ಮವ್ವ ಎರೆಡ ಮೂರ ದಿವಸ ಎಚ್ಚರ ಇದ್ದಿದ್ದಿಲ್ಲಾ ಅಂತ ಹೇಳ್ತಾರ. ಇನ್ನ ಅಷ್ಟ ಸರಳ ಹುಟ್ಟಲಾರದ ಆ ಗಂಡ ಹುಡಗನ್ನ ಅಂದರ ನನ್ನ, ನಮ್ಮಪ್ಪ ನಮ್ಮವ್ವನ ಕಿಂತ ಮೊದ್ಲ ನೋಡಿದವರ ಪೈಕಿ ಈ ಗುಂಡಣ್ಣನೂ ಒಬ್ಬಂವ ಅನಬೇಕ…ಬಹುಶಃ ನಾನು ನಮ್ಮಪ್ಪನ ಕಿಂತ ಮೊದ್ಲ ಇವಂಗ ನೋಡಿರಬೇಕ…ನಂಗೇನ ಈಗ ನೆನಪಿಲ್ಲಾ…ಅಲ್ಲಾ ಆ ಮಾತಿಗೆ ಈಗ 52 ವರ್ಷ ಆತ ಅನ್ನರಿ, ಆಮ್ಯಾಲೆ ನಾ ಹುಟ್ಟಿದ್ದ ದಿವಸ ಸಹಿತ ಏನೇನ ಆಗಿತ್ತ, ಯಾರ ಯಾರ ಬಂದಿದ್ದರು ಇದನ್ನೇಲ್ಲಾ ನೆನಪ ಇಡೋ ಅಷ್ಟ ಶಾಣ್ಯಾ ಅಂತೂ ನಾ ಅಲ್ಲಾ. ಸೊ ..ಹಿಂಗಾಗಿ ನಂಗ ಮೊದ್ಲಿಂದ ಗುಂಡಣ್ಣ ಆತ್ಮೀಯನ…ಹಿಂಗಾಗಿ ಅಂವಾ ತನ್ನ ಎಂಬತ್ತನೇ ಹುಟ್ಟು ಹಬ್ಬದ ಈ ಶುಭಸಂದರ್ಭದೊಳಗ ಒಂದ ತಮ್ಮ ವಂಶಾವಳಿ ಕುರಿತು ದಿಡನೂರ ಪೇಜ ಬರದಾನ ಅಂತ ಕೇಳಿದ ಕೂಡ್ಲೇನ ನಂಗ ಭಾರಿ ಖುಷಿ ಅನಸ್ತ….ಮತ್ತ ಆ ಪುಸ್ತಕಕ್ಕ ಒಂದ ನಾಲ್ಕ ಲೈನ್ ಮುನ್ನಡಿ ಬರೆಯೋ ಸೌಭಾಗ್ಯ ನಂಗ ಸಿಕ್ಕದ್ದ ಹೆಮ್ಮೆಯ ವಿಷಯ ಅನ್ನರಿ.
ಇನ್ನ ನಮ್ಮಪ್ಪ ಗುಂಡಣ್ಣಾ ಇಬ್ಬರೂ ಹಾನಗಲ್ ಒಳಗ ಒಂದ ಓಣ್ಯಾಗ ಆಡಿ ಬೆಳದವರ, ಹಂಗ ನೋಡಿದರ ನಮ್ಮಜ್ಜಿ ಅಂದರ ನಮ್ಮಪ್ಪನ ಅವ್ವಾ ಗುಂಡಣ್ಣನ ಅವ್ವ ವೆಂಕಕ್ಕಾ..ನಂಗ ಮುತ್ತಜ್ಜಿ ಆಗಬೇಕ..ಅಕಿ ಅಣ್ಣನ ಮಗಳ ಅಂತ. ಹಿಂಗಾಗಿ ನಮ್ಮ ಅವ್ವಾ ಅಪ್ಪಾ ಲಗ್ನಾ ಆಗೋಕಿಂತಾ ಮೊದ್ಲ ಒಬ್ಬರಿಗೊಬ್ಬರ ಸಂಬಂಧಿಕರ ಇದ್ದರ. ಆದರ ಆ ಸಂಬಂಧ ಗೊತ್ತ ಆಗಿದ್ದ ಕುಂಡ್ಲಿ ಕೂಡಿಸಿ ನೋಡಿ ಮಾತು ಕತಿ ಎಲ್ಲಾ ಆಗಿ ಲಗ್ನ ಫಿಕ್ಸ್ ಆದ ಮ್ಯಾಲೆ ಆ ಮಾತ ಬ್ಯಾರೆ. ಇನ್ನ ನಮ್ಮ ಶೋಭಾ ಮೌಶಿ ಉರ್ಫ್ ಮಾಮಿ ಇಕಿ ನಾ ಲಗ್ನಾ ಮಾಡ್ಕೋಬೇಕಾರ ನೋಡಿದ್ದ ಒಂದನೇ ಕನ್ಯಾ, ಅಲ್ಲಾ ಒಂದ ಕನ್ಯಾ ಅನ್ನರಿ ಅದನ್ನ ನನ್ನ ಜೀವಾ ತಿಂದ ಹೂಂ ಅನಿಸಿಸಿದೊರಳಗ ಒಬ್ಬೋಕಿ. ಅದ ಏನ ಆಗಿತ್ತಂದರ ನಾ ಕನ್ಯಾ ನೋಡಿ ನಾಲ್ಕೈದ ತಿಂಗಳಾದರು ಹೂಂ ನೂ ಅಂದಿದಿಲ್ಲಾ ಉಂಹೂಂ ನೂ ಅಂದಿದ್ದಿಲ್ಲಾ ಆವಾಗ ಒಂದ ಸರತೆ ಶೋಭಾ ಮೌಶಿ, ಶಶಿಕಲಾ ಮೌಶಿ ಇಬ್ಬರೂ ನಮ್ಮ ಮನಿಗೆ ಬಂದಿದ್ದರು. ಆವಾಗ ನಮ್ಮವ್ವಾ
’ನೀವರ ಹೇಳ್ರೀವಾ ಹೆಂತಾ ಛಲೋ ಹುಡಗಿ ಅದ, ಹೂಂ ಅನ್ನ ಅಂತ ಹೇಳ್ರಿ…ನಾವ ಹೇಳಿದ್ದ ಒಂದ ಮಾತು ಕೇಳೋದಿಲ್ಲಾ ನೀವ ಒಂದ ಸ್ವಲ್ಪ ಜೋರ್ ಮಾಡಿ ಕೇಳ್ರಿ’ ಅಂತ ಬೆಂಕಿ ಹಚ್ಚಿದ್ಲು. ಇನ್ನ ನಮ್ಮ ಇಬ್ಬರೂ ಮೌಶಿಗಳು ಜೋರ್ ಇದ್ದರು. ನೋಡ್ಲಿಕ್ಕೆ ಇಷ್ಟ ಅಲ್ಲಾ ಆವಾಜ ಒಳಗೂ ಹಂಗ ಇದ್ದರ. ನಮ್ಮ ಶೋಭಾ ಮೌಶಿ ಊಟಕ್ಕ ಕೂತಾಗ
’ಏ..ನಿಮ್ಮವ್ವ ನೋಡಿದ್ದ ಆ ಹುಡಗಿಗೆ ಏನ ಆಗೇದ…ಸುಮ್ಮನ ನಿಮ್ಮವ್ವನ ಜೀವಾ ತಿನ್ನಬ್ಯಾಡಾ…ಹೂಂ ಅಂದ ಭಡಾ ಭಡಾ ಬಾಯಿಮುಚಗೊಂಡ ಲಗ್ನಾ ಮಾಡ್ಕೊ’ ಅಂತ ಜೋರ ಮಾಡಿದ್ಲು. ನಾ ಅರ್ಧಾ ಅಕಿಗೆ ಹೆದರಿ ಮುಂದ ಇನ್ನೊಂದ ಎರಡ ಕನ್ಯಾ ನೋಡೊ ವಿಚಾರ ಕೈ ಬಿಟ್ಟ ಅದ ಕನ್ಯಾಕ್ಕ ಲಗ್ನ ಮಾಡ್ಕೊಳಿಕ್ಕೆ ಹೂಂ ಅಂದೆ ಅನ್ನರಿ. ಹಿಂಗ ನನ್ನ ಲಗ್ನದ ವಿಷಯದೊಳಗು ನಮ್ಮ ಗುಂಡಣ್ಣನ ಮಾಮಾಂದು ಮಾಮಿ ಕಮ್ ಮೌಶಿದು ಕೈವಾಡ ಅದ. ಇವತ್ತ ಅಕಿ ಇಲ್ಲಾ…ನೆನಪ ಮಾತ್ರ. ಆದರ ನಾ ಅಂತೂ ಮರಿಲಿಕ್ಕೆ ಸಾಧ್ಯ ಇಲ್ಲಾ, ಯಾಕಂದರ ಇವತ್ತ ನಾ ಕಟಗೊಂಡ ಹುಡಗಿಗೆ ಹೂಂ ಅಂದಿದ್ದಕ್ಕ ಅಕಿನೂ ಒಂದ ಸಾಕ್ಷಿ ಇದ್ಲು.
ಹಂಗ ಒಬ್ಬ ಮನಷ್ಯ ತನ್ನ ಬಗ್ಗೆ ತಾ ಒಂದ ಬುಕ್ ಬರಿ ಬೇಕು ಅಂದರ ಅಂವಾ ಏನ ಜಗತ್ತಿನೊಳಗ ನಾಲ್ಕ ಮಂದಿ ಹೂಂ ಅನ್ನಬೇಕ ಅನ್ನೊ ಹಂಗ ದೊಡ್ಡ ಸಾಧನೆ ಮಾಡಬೇಕು ಅಂತೇನ ಇಲ್ಲಾ. ಒಬ್ಬ ಸಾಮಾನ್ಯ ವ್ಯಕ್ತಿನೂ ತನ್ನ ಕುರಿತು ತಾ, ತನಗ ತಿಳದಂಗ ನಾಲ್ಕ ಅಕ್ಷರ ಬರಿಬಹುದು..ಬರಿಲಿಕ್ಕೆ ಬರ್ತಿರಬೇಕ ಇಷ್ಟ. ಇಂಗ್ಲೀಷ್ ಒಳಗ ಒಂದ ಮಾತ ಅದ.’ well documented life is well lived one’ ಅಂತ. ಹಂಗ…..ಇದ ನನ್ನ ಜೀವನ, ಇವರ ನನ್ನ ಬಂಧು-ಬಳಗ, ಇದ ನಾ ಜೀವನದೊಳಗ ನಡೆದ ಬಂದ ದಾರಿ ಅಂತ ತನ್ನ ಜೀವನದ ಪಥವನ್ನ ನಮ್ಮ ಗುಂಡಣ್ಣ ಮಾಮಾ ಬರದಿದ್ದರೊಳಗ ಏನ ತಪ್ಪಿಲ್ಲಾ. ಅಲ್ಲಾ ನಮ್ಮವ್ವನ ಅವ್ವನ ಪೈಕಿ ಬಳಗ ಇಷ್ಟ ದೊಡ್ಡದ ಅದ ಅಂತ ನನಗ ಗೊತ್ತ ಆಗಿದ್ದ ಈ ಬುಕ್ ಓದಿದ ಮ್ಯಾಲೆ ಅನ್ನರಿ.
ಇವತ್ತ ಪಕ್ಷ ಮಾಸದಾಗ ತಮ್ಮ ಅಪ್ಪನ ಪಕ್ಷ ಮಾಡ್ಲಿಕ್ಕೆ ಹೋಗಬೇಕು ಅಂದಾಗ ಅಜ್ಜಾ, ಮುತ್ತಜ್ಜಾ, ಅಜ್ಜಿ ಮುತ್ತಜ್ಜಿ ಅವರು- ಇವರು, ಒಟ್ಟ ಯಾರ ಯಾರ ನೀರ ಬಿಡಸಿಗೊಳ್ಳಿಕ್ಕೆ ಅರ್ಹರ ಇದ್ದಾರ ಅವರದ ಹೆಸರ – ಗೋತ್ರ ಅವರ -ಇವರನ ಕೇಳ್ಕೊಂಡ ಬರಕೊಂಡ ಹೋಗಿ ನೀರ ಬಿಡೊ ಕಾಲ ಇದ. ಇನ್ನ ಹಂತಾದರ ಸುಮಾರ ಐದ- ಆರ ತಲೆಮಾರಿನ ಪೂರ್ತಿ ವಂಶಾವಳಿನ ನಮ್ಮ ಗುಂಡಣ್ಣ ಮಾಮಾ ಬರದ ಇಟ್ಟಾನ. ಅದು ಏನಿಲ್ಲಾಂದರೂ ಒಂದ ನೂರಾ ಹತ್ತ ವರ್ಷದ ಹಿಂದಿನಿಂದ ಯಾರ, ಯಾರ ಮಕ್ಕಳು, ಯಾರನ ಕಟಗೊಂಡರು ಎಷ್ಟ ಹಡದರು, ಎಷ್ಟ ಉಳದವು… ಉಳದವರ ಎಲ್ಲಿದ್ದಾರ, ಏನ್ಮಾಡ್ಲಿಕತ್ತಾರ ಎಲ್ಲಾ ಅಗದಿ ಛಂದಾಗಿ ಬರದ ಕೊಟ್ಟಾನ. ಇದ ನಮ್ಮ ಮುಂದಿನ ಪೀಳಗಿಗೆ ಅಕಸ್ಮಾತ ಅವರಿಗೇನರ ತಮ್ಮ ಪೂರ್ವಜರ ಬಗ್ಗೆ ತಿಳ್ಕೊಬೇಕು ಅಂದರ ready reckoner ಅಂತಾರಲಾ ಹಂಗ ಅಂದರ ತಪ್ಪ ಆಗಂಗಿಲ್ಲಾ.
ನಮ್ಮ ಮುತ್ತಜ್ಜಾ-ಮುತ್ತಜ್ಜಿಗೆ ಅಂದರ ಗುಂಡಣ್ಣ ಮಾಮಾನ ಅವ್ವಾ ಅಪ್ಪಗ ಎಷ್ಟ ಗಂಡ ಹುಟ್ಟಿದರು ತಡಿತಿದ್ದಿಲ್ಲ ಅಂತ, ಅಂದರ ಬದಕತಿದ್ದಿಲ್ಲಂತ ಹಿಂಗಾಗಿ ನಮ್ಮ ಮುತ್ತಜ್ಜನ ಬಾಜು ಮನಿ ಒಳಗ ಇದ್ದ ಕುರುಬರ ಒಬ್ಬರ ’ಈ ಸರತೆ ಗಂಡ ಹಡದರ ತಿಪ್ಪ್ಯಾಗ ಇಡ್ರಿ, ನಾವ ನಮ್ಮ ಮನಿಗೆ ತೊಗೊಂಡ ಹೋಗಿ ಒಂದ ದಿವಸ ಇಟಗೊಂಡ ವಾಪಸ ಕೊಡ್ತೇವಿ..ಮತ್ತ ಆ ಹುಡಗನ ಹೆಸರ ’ಗುಂಡಪ್ಪಾ’ ಅಂತ ಇಡ್ರಿ ಅಂದರ ಗುಂಡ ಕಲ್ಲಗತೆ ಆರಾಮ ಇರ್ತಾನ’ ಅಂತ ಹೇಳಿದ್ದರಂತ. ಅದರಂಗ ಇಂವಾ ಗುಂಡಣ್ಣ ಆದ…ಗುಂಡು ರಾವ್ ಆದ. ಗುಂಡಕಲ್ಲ ನಂಗ ಗಟ್ಟಿ ಆಗಲಿಲ್ಲಾ ಅಂದರು ಒನಕೆ ಗತಿ ಸದೃಡವಾಗಿ ಇದ್ದ ಜೀವನ ನಡಿಸಿ ಇವತ್ತ ಎಂಬತ್ತ ವರ್ಷ ಮುಗಿಸಿದಾ.
ಗುಂಡಣ್ಣ ಮಾಮಾ ತನ್ನ ಎಂಬತ್ತ ವರ್ಷದ ತುಂಬು ಜೀವನದ ನೆನಪನ್ನ ಬಳ್ಳಿ ಹಂಗ ಜೋಡಿಸ್ಗೋತ ಆ ಬಳ್ಳಿ ಜೊತಿ ನೆಂಟಸ್ತನ ಬೆಳಸಿದ ಬೇರೆ ಬೇರೆ ಮನೆತನದ ಬಳ್ಳಿಗಳನ್ನು ತನ್ನ ಪಥದೊಳಗ ಪೋಣಿಸ್ಗೊಂಡ ಒಂದ ’ ನನ್ನ ಬದುಕು -80’ ಅಂತ ವಂಶಾವಳಿಯ ಹಂದರಾ ಹಾಕ್ಯಾನ. ಅವನ ನೆನಪಿನ ಶಕ್ತಿ ಆಗಾಧ ಅದ, ಈ ಪುಸ್ತಕ ಒಂದ ನೂರ ವರ್ಷದ ಸಂಬಂದಗಳನ್ನ, ಸಂಬಂಧಿಕರನ್ನ ಜೋಡಣೆ ಮಾಡ್ತದ. ಗುಂಡಣ್ಣ ಮಾಮಾಗ ಎಂಬತ್ತನೇ ವರ್ಷದ ಹುಟ್ಟುಹಬ್ಬದ ಶುಭಾಶಯದೊಂದಿಗೆ ನಮನ ಸಲ್ಲಿಸುತ್ತ, ಈ ಪಯಣ ಹಿಂಗ ಇನ್ನೂ ಮುಂದವರಿಲಿ..ಇನ್ನೊಂದ ಎರಡ ವರ್ಷಕ್ಕ ಅವಂಗೂ ಸ್ವಂತ ಮೊಮ್ಮಕ್ಕಳ ಬರ್ತಾರ ಆವಾಗ ಅವರನು ಈ ಜೀವನ ಪಥದೊಳಗ ಕರಕೊಂಡ ಅವನ ಪಥದ ಈ ರಥ ಸದಾ ಚಲಿಸ್ತಾ ಇರಲಿ ಅಂತ ಆ ದೇವರಲ್ಲಿ ಪ್ರಾರ್ಥಿಸುತ್ತ ಈ ಪುಸ್ತಕಕ್ಕ ನಾಲ್ಕ ಮಾತ ’ಮುನ್ನಡಿ’ ಅಂತ ಬರಿಲಿಕ್ಕೆ ಅವಕಾಶ ಕೊಟ್ಟದ್ದಕ್ಕ ನಮ್ಮ ಗುಂಡಣ್ಣ ಮಾಮಾಗ ಧನ್ಯವಾದ ಹೇಳ್ತೇನಿ.
eom/-
