ಜೀವನೋತ್ಸಾಹದ ಉತ್ಸವ ಮೂರ್ತಿ- ನರಸಿಂಹ

ನಮ್ಮ ವಿದ್ಯಾರ್ಥಿ ಪರಿಷತ್ ನ ಹಿರಿಯ ಕಾರ್ಯಕರ್ತರು, ಅತ್ಯಂತ ಆತ್ಮೀಯರು ಆದ ಶ್ರೀ ನರಸಿಂಹ ರಾಯಚೂರ ಅವರ ಷಷ್ಠಿ ಪೂರ್ತಿ ಸಂಭ್ರಮಾಚರಣೆಯ ಈ ಶುಭ ಸಂದರ್ಭದಲ್ಲಿ ಪ್ರಕಟವಾಗುತ್ತಿರುವ ಅಭಿನಂದನಾ ಸಂಚಿಕೆಯಲ್ಲಿ ಶ್ರೀ ನರಸಿಂಹ ರಾಯಚೂರ್ ಅವರ ಬಗ್ಗೆ ನಾ ಬರೆದ ಒಂದ ಪ್ರಹಸನ ನಿಮ್ಮೊಂದಿಗೆ…..

ಜೀವನೋತ್ಸಾಹದ ಉತ್ಸವ ಮೂರ್ತಿ- ನರಸಿಂಹ
ನಮ್ಮ ಗುಂಡಣ್ಣ ಮಾಮಾ ತನಗ ಎಂಬತ್ತ ತುಂಬಿದಾಗ ’ ನನ್ನ ಬದಕು’ ಅಂತ ಒಂದ ಬುಕ್ ಬರದಿದ್ದಾ. ಆ ಬುಕ್ಕಿಗೆ ನಾ ಮುನ್ನಡಿ ಬರದಿದ್ದೆ.
ಆ ಮುನ್ನಡಿ ಓದಿ ಈ ನಮ್ಮ ನರಸಿಂಹ ಸಾಹೇಬರ ನಂಗೊಂದ ಬುಕ್ ತಂದ ಕೊಡ ನಿಮ್ಮ ಮಾಮಾಂದ ಅಂತ ಅಂದರು.
ನಾ ಮುಂದ ಬಾಹುದ್ದೂರ ದೇಸಾಯರ ಸಹಸ್ರ ಚಂದ್ರ ದರ್ಶನ ಕಾರ್ಯಕ್ರಮದಾಗ ಇವಂಗ ಒಂದ ಬುಕ್ ಕೊಟ್ಟೆ
ಮುಂದ ಮೂರ ದಿವಸ ಬಿಟ್ಟ ಇಂವಾ ಸೀದಾ ನಮ್ಮ ಗುಂಡಣ್ಣಗ ಫೋನ್ ಮಾಡಿ
’ಗುಂಡುರಾವ ದೇಶಪಾಂಡೆ ಅವರ ಬಿಜಾಪುರದಿಂದ ನರಸಿಂಹ ರಾಯಚೂರ ಅಂತ ಮಾತಾಡ್ಲಿಕತ್ತೇನಿ.. ನಿಮ್ಮ ಪುಸ್ತಕ ಸಂಪೂರ್ಣ ಓದಿ ಮುಗಿಸಿದ್ವಿ, ಸಿಕ್ಕಾ ಪಟ್ಟೆ ಪ್ರಿಂಟ್ ಮಿಸ್ಟೇಕ್ ಅವ…ನಿಮ್ಮ ಬಾಲ್ಯ, ಯೌವನ, ಸಂಸಾರ, ನಿವೃತ್ತಿ ಜೀವನಾ, ವೃದ್ಧ್ಯಾಪ್ಯ ಒಂದೂ ಆರ್ಡರ ಒಳಗ ಇಲ್ಲಾ’ ಅಂತ ಡೈರೆಕ್ಟ ಹೇಳಿದಾ.
ನಮ್ಮ ಮಾಮಾಗ ಇಂವಾ ಯಾರ ಅಂತ ಗೊತ್ತ ಇಲ್ಲಾ. ಹಿಂಗ ಗೊರ್ತ ಇಲ್ಲಾ-ಖೂನ್ ಇಲ್ಲದ ಮನಷ್ಯಾ ಸೀದಾ ಫೋನ್ ಮಾಡಿ ತಾ ಬರದಿದ್ದ ಬುಕ್ಕಿಗೆ ಹಿಂಗ ಅಂದನಲಾ ಅಂತ ನಮ್ಮ ಮಾಮಾಗ ಕೆಟ್ಟ ಅನಸಲಿಲ್ಲಾ. ಅಂವಂಗ ತಾ ಬರದಿದ್ದ ಬುಕ್ ಯಾರೋ ಒಬ್ಬರರ ಪೂರ್ತಿ ಓದಿದರಲಾ ಅಂತ ಸಂತೋಷ ಪಟ್ಟ
’ನಿಮಗ ಬುಕ್ ಎಲ್ಲೇ ಸಿಗ್ತು’ ಅಂತ ಕೇಳಿದಾ. ಇಂವಾ
’ಬಾಹದ್ದೂರ ದೇಸಾಯರ ಸಹಸ್ರ ಚಂದ್ರ ದರ್ಶನ ಫಂಕ್ಷನ್ ದಾಗ ಪ್ರಶಾಂತ ತಂದ ಕೊಟ್ಟಾ’ ಅಂತ ಹೇಳಿದಾ.
ಅಷ್ಟ ಹೇಳಿ ಸುಮ್ಮನ ಬಿಡಬೇಕಿಲ್ಲ..
’ಮತ್ತ ಬುಕ್ ಒಳಗ ನೀವೂ ಬಾಹುದ್ದೂರ ದೇಸಾಯರು ಹಾನಗಲ್ ಒಳಗ ಕ್ಲಾಸ್ ಮೇಟ್ ಅಂತ ಬರದೀರಿ.. ಆದರ ದೇಸಾಯರ ಕಾರ್ಯಕ್ರಮದಾಗ ಕಾಣಲೇ ಇಲ್ಲಲಾ’ ಅಂತ ತಾ ಏನ ದೇಸಾಯರ ಅಬಚಿ ಮಗಾ ತಮ್ಮಾ ಅನ್ನೋರಗತೆ ಕೇಳಿದಾ. ಅದನ್ನ ಕೇಳಿ ನಮ್ಮ ಗುಂಡಣ್ಣಾ
’ಏ, ಹೌದ ದೇಸಾಯಿ ನನ್ನ ಕ್ಲಾಸ್ ಮೇಟ್..ನಂಗ ಕರದೇಲ ನೋಡ್ರಿ’ ಅಂತ ಅಂದಾ.
ಅಲ್ಲಾ, ಎದಕ್ಕ ಬೇಕಾಗಿತ್ತ ಈ ಹಿರೇತನ ನಮ್ಮ ನರಸಿಂಹಗ ಅಂತೇನಿ.
ತಾ ಬುಕ್ ಕೇಳಿದಾ, ನಾ ಕೊಟ್ಟೆ, ಓದಿ..ಬುಕ್ ಛಲೋ ಅದ ಅಂತ ಭಿಡೇಕ್ಕರ ಅಂದ ಸುಮ್ಮನಾಗಿದ್ದರ ಮುಗದ ಹೋಗ್ತಿತ್ತ ಇಲ್ಲ…
ಮುಂದಿನ ಮಜಾ ಕೇಳ್ರಿ ಇಲ್ಲೇ ಇವನ ಮಾತ ಕೇಳಿ ನಮ್ಮ ಮಾಮಾ ಸೀದಾ ದೇಸಾಯರಿಗೆ ಫೋನ್ ಮಾಡಿ
’ಏನೋ ಬಾಲಚಂದ್ರಾ ಎಂಬತ್ತ ವರ್ಷದ ಶಾಂತಿ ಮಾಡ್ಕೊಂಡಿ ನಂಗ ಕರದೇಲಲಾ…ಕರದ್ದಿದರ ನಾನೂ ಬರ್ತಿದ್ದೆನಲಾ’ ಅಂತ ಕೇಳಿ ಬಿಟ್ಟಾ….ಏನ್ಮಾಡ್ತೀರಿ?
ಅಲ್ಲಾ ಇಷ್ಟೇಲ್ಲಾ ಕಥಿ ನನಗ ಫೋನ ಮಾಡಿ ಹೇಳಿದ್ದು ಇವನ ಮತ್ತ…..ಮ್ಯಾಲೆ ಮತ್ತ ನನಗ
’ನಿಮ್ಮ ಮಾಮಾ ಬುಕ್ ಕರೆಕ್ಷನ್ ಮಾಡ ಅಂದರ ಬರೇ ಮುನ್ನುಡಿ ಬರದ ಕೊಟ್ಟಿ ಅಂತಲಾ…ಬುಕ್ ತುಂಬ ಮಿಸ್ಟೇಕ್ ಅವ’ ಅಂತ ಜೋರ ಮಾಡಿ….
’ಅನ್ನಂಗ ನಿಮ್ಮ ಮಾಮಾನ ತಮ್ಮ ಒಬ್ಬೊಂವ ಮದ್ವಿ ಆಗಲಾರದಂವಾ ಇದ್ದಾನಂತ ಬುಕ್ ಒಳಗ ಬರದಾರಲಾ, ಅಂವಾ ಎಲ್ಲೇ ಇರ್ತಾನ ಈಗ?’ ಅಂತ ಕೇಳಿದಾ. ನನಗ ಇಂವಾ ಇಷ್ಟ ಎಲ್ಲಾ ಹಿರೇತನಾ ಮಾಡಿದ್ದ ಕೇಳಿ ಮೊದ್ಲ ಪಿತ್ತ ನೆತ್ತಿಗೇರಿತ್ತ ..
’ಅಂವಾ ಜಡೆದ ಹತ್ತರ ಕೆರಳ್ಳಿ ಒಳಗ ಇರ್ತಾನ, ನೀ ಏನ ಅವಂಗ ಈಗ ಕನ್ಯಾ ನೋಡೊವನೋ ಇಲ್ಲಾ ಇಬ್ಬರೂ ಕೂಡಿ ಒಂದ ಸಂಘ ಕಟ್ಟೋರೋ’ ಅಂತ ಅಂದ ಫೋನ್ ಇಟ್ಟೆ….ಇದ ನಮ್ಮ ನರಸಿಂಹನ ಒಂದ ಅವತಾರ.
ಹಿಂತಾ ಪ್ರಹಸನಗಳು ನಮ್ಮ ನರಸಿಂಹನ ಜೊತಿ ಇದ್ದರ ವಾರಕ್ಕೊಂದ ಆಗ್ತಾವ. ಅಂವಾ ಮೊದ್ಲಿಂದ ಹಿಂಗ… ಗೊರ್ತ ಇರಲಿ ಬಿಡ್ಲಿ ಎಲ್ಲಾರನೂ ಅಳಗ್ಯಾಡಸಿ ಅಳಗ್ಯಾಡಸಿ ಮಾತಾಡ್ಸೊಂವಾ.
ಹಂಗ ನಾ ಎ.ಬಿ.ವಿ.ಪಿ ಗೆ ಜಸ್ಟ ಎಂಟರ್ ಆದಾಗ ಇಂವಾ ಆಗಲೇ ಹಿರಿಯರ ಪಟ್ಟಿ ಸೇರಿದ್ದಾ…ಅಲ್ಲೆ ನನ್ನ ಜೊತಿ ಒಡನಾಟ ಅಷ್ಟ ಇರಲಿಲ್ಲಾ…ಇನ್ನ ಎ.ಬಿ.ವಿ.ಪಿ ಒಳಗಿನ ನರಸಿಂಹನ ಬಗ್ಗೆ ಈ ಬುಕ್ ಒಳಗ ಭಾಳ ಮಂದಿ ಬರದಾರ…ಹಿಂಗಾಗಿ ನಾ ಅದರ ಬಗ್ಗೆ ಜಾಸ್ತಿ ಬರೆಯಂಗಿಲ್ಲ.
ನನಗ ಹಂಗ ನರಸಿಂಹ ಆತ್ಮೀಯ ಆಗಿದ್ದ ಹತ್ತ-ಹದಿನೈದ ವರ್ಷದಿಂದ. ಸದಾ ಹಸನ್ಮುಖಿ. ಸ್ವಭಾವದಲೆ, ಮಾತಿನಾಗ ಅಗದಿ ನೇರ…ಹಾಸ್ಯ ಪ್ರವೃತ್ತಿ ನಿರಂತರ…ಯಾರದು ಭಿಡೆ ಇಲ್ಲದ, ಹಂಗ ಇಲ್ಲದ ನೀರ್ಭೀತಿ ಬದಕು…ಬರೇ ಮಾತಿನ ಕಣಜ ಅಲ್ಲಾ ಮಾಹಿತಿ ಕಣಜನೂ ಹೌದು. ಪಾದರಸದಂಗ ಲವ-ಲವಿಕೆಯಿಂದ ತುಂಬಿದ ಜೀವನಾ…..’ನಾ ಏನಪಾ ಎತ್ಗೊಂಡವರ ಬಗಲಾಗಿನ ಕೂಸು’ ಅಂತ ಇವತ್ತ ಇಲ್ಲೇ ನಾಳೆ ಮತ್ತೊಂದ ಕಡೆ ಇರ್ತಾನ
ಒಂದ ಮಾತನಾಗ ಹೇಳ್ಬೇಕಂದರ ಕೈ ಬಿಟ್ಟ ಆಡ್ತಾನ, ಅಷ್ಟ ಅಲ್ಲಾ ಒಮ್ಮೊಮ್ಮೆ ತನ್ನ ಜೊತಿ ನಮ್ಮನ್ನೂ ಆಡಸ್ತಾನ….ಅವಂದ ಇನ್ನೊಂದ ಊರ ಉಸಾಬರಿ ಕಥಿ ಹೇಳ್ತೇನಿ ಕೇಳ್ರಿ…
ಇದ ಒಂದ ಐದ ವರ್ಷದ ಹಿಂದಿನ ಕಥಿ ಇರಬೇಕ ನಮ್ಮ ಎ.ಬಿ.ವಿ.ಪಿ ರಘು ಅಕ್ಕಮಂಚಿ ಸರ್ ಮಗಳದ ಮದ್ವಿ ಫಿಕ್ಸ್ ಆಗಿತ್ತ, ಎಲ್ಲಾರಿಗೂ ಆಮಂತ್ರಣ ಪತ್ರಿಕೆ ಕೊಟ್ಟಿದ್ದರು ಒಮ್ಮಿಂದೊಮ್ಮಿಲೇ ಕೋರೊನಾ ಸಂಬಂಧ ಲಾಕ್ ಡೌನ್ ಆಗಿ ಬಿಡ್ತ, ಮುಂದ ಹಂಗೇನರ ಮದ್ವಿ ಮಾಡಿದರು 50-60 ಮಂದಿ ಒಳಗ ಮಾಡಬೇಕು ಅಂತ ಗವರ್ಮೆಂಟ್ ಆರ್ಡರ್ ಆತ. ಪಾಪ ಸರ್, ಮಗಳ ಮದ್ವಿ ಆಗದಿ ಗ್ರ್ಯಾಂಡ್ ಮಾಡಬೇಕ ಅಂತ ಶ್ರೀನಿವಾಸ ಗಾರ್ಡನ್ ಬುಕ್ ಮಾಡಿದ್ದರು ಇನ್ನ ಹಂತಾದ 50-60 ಮಂದಿ ಒಳಗ ಏನ ಮದ್ವಿ ಮುಗಸೋದ ಅಂತ ಅವರ ಮದ್ವಿ ಪೋಸ್ಟ್-ಪೋನ್ ಮಾಡಿದರು. ಇನ್ನ ಕಾರ್ಡ ಕೊಟ್ಟವರಿಗೇಲ್ಲಾ ಮದ್ವಿ ಮುಂದ ಹಾಕೇವಿ ಅಂತ ಹೇಳೋದ ಒಂದ ಕೆಲಸ ಹತ್ತತ. ಅವರ ನಮ್ಮ ಎ.ಬಿ.ವಿ.ಪಿ ವಾಟ್ಸಪ್ ಗ್ರೂಪ್ ಒಳಗ ಹಿಂಗ ಅನಿವಾರ್ಯ ಕಾರಣದಿಂದ ಮದ್ವಿ ಮುಂದ ಹಾಕೇವಿ ಅಂತ ಒಂದ ಮೆಸೆಜ್ ಹಾಕಿದರು. ಎಲ್ಲಾರೂ ಪಾಪ ಸರ್ ಮಗಳ ಮದ್ವಿ ಮುಂದ ಹೋತ, ಎಷ್ಟ ತಯಾರ ಮಾಡಿದ್ದರು ಅಂತ ಅನ್ಕೊಂಡರ ಈ ನಮ್ಮ ನರಸಿಂಹ
’ಮದ್ವಿ ಮುಂದ ಹೋಗೇದ ಗಡಿಗಿ ನೀರ ಮಾಡೋರ ಮಾಡ ಬಹುದು’ ಅಂತ ಗ್ರೂಪ್ ಒಳಗ ಬರದ ಬಿಟ್ಟಾ. ಏನ್ಮಾಡ್ತೀರಿ?
ಮದ್ವಿ ಸಂಬಂಧ ಪಾಪ ತಯಾರಿ ಮಾಡ್ಕೊಂಡವರ ರಘು ಸರ್, ಮದ್ವಿ ಮುಂದ ಹೋಗಿದ್ದಕ್ಕ ತ್ರಾಸ್ ಆಗಿದ್ದ ರಘು ಸರ್ ಗೆ…ಇವಂಗ್ಯಾಕ ಗಡಿಗಿ ನೀರ ಉಸಾಬರಿ ಅಂತೇನಿ….ಇಂವಾ ಏನ ಬೀಜಾಪುರಕ್ಕ ಅವರನ ಕರದ ಗಡಿಗೆ ನೀರ ಮಾಡೋದ ಅಷ್ಟರಾಗ ಇತ್ತ, ಇನ್ನ ನಾವ ಯಾರರ ಮದ್ವಿ ಮುಂದ ಹೋಗೇದ ಅಂತ ಗಡಿಗಿ ನೀರ ಮಾಡಿದರ ಇವನ್ನ ಕರಿಯೋದ ಅಷ್ಟರಾಗ ಇತ್ತ…ಇಂವಾ ನೋಡಿದರ ಗ್ರೂಪ್ ಒಳಗ ಅಗದಿ ಹಿರೇಮನಷ್ಯಾರಗತೆ ಗಡಿಗೆ ನೀರ ಮಾಡೋರ ಮಾಡ ಬಹುದು ಅಂತ ಬರದ ಬಿಟ್ಟ. ಆಮ್ಯಾಲೆ ಎಷ್ಟ ಮಂದಿ ಗಡಿಗೆ ನೀರ ಮಾಡಿದರು- ಬಿಟ್ಟರು ಅದ ರಘು ಸರ್ ಗೆ ಗೊತ್ತ. ಆದರ ನಾ ಇಂವಾ ಹಂಗ ಬರದಿದ್ದನ್ನ ಓದಿ…ಅಲಲಾ…ನಮ್ಮ ನರಸಣ್ಣ ಒಂದ ಹೊಸಾ ಟಾಪಿಕ್ ಕೊಟ್ಟ ತಡಿ ಅಂತ ಮುಂದಿನ ವಾರ ಪೇಪರ ಒಳಗ ನನ್ನ ಗಿರಮಿಟ್ ಅಂಕಣದಾಗ ’ಲಾಕ್ ಡೌನ್ ಒಳಗ ಗಡಿಗಿನೀರ ಮಾಡೋರ ಮಾಡಬಹುದು…’ಅಂತ ಒಂದ ಪ್ರಹಸನನ ಬರದ ಬಿಟ್ಟೆ. ಅಲ್ಲಾ ಆ ಐಡಿಯಾ ಬಂದಿದ್ದ ಇವನಿಂದ. ನಾ ಅದ ಹೇಳಿದ್ನೇಲಾ…ಇವನ ಜೊತಿ ಇದ್ದರ ವಾರಕ್ಕೊಂದ ಪ್ರಹಸನ ಬರಿಬಹುದು ಅಂತ.
ಹಿಂಗ ನಮ್ಮ ನರಸಿಂಹ ತಲ್ಯಾಗ ಏನ ತಿಳಿತದ ತಟ್ಟ ಅಂತ ಅಂದ ಬಿಡೊಂವಾ…ಮನಸ್ಸಿಗೂ ಭಿಡೆ ಇಲ್ಲಾ ಮಾತಿಗೂ ಭಿಡೆ ಇಲ್ಲಾ…ಹಿಂಗಾಗೇ ಬದುಕಿನೊಳಗ ಯಾರ ಹಂಗೂ ಇಲ್ಲದ ಆರಾಮ ಆಡಿಸಿ ನೋಡು ಬೀಳೀಸಿ ನೋಡು ಅಂತ ಜೀವನಾ ಸಾಗಿಸ್ಗೊಂಡ ಹೊಂಟಾನ.
ಹಂಗ ವಿಷ್ಣುವಿನ ಊಗ್ರ ರೂಪ ನರಸಿಂಹ ಅವತಾರ ಅಂತಾರ…ಆದರ ಇಂವಾ ಹೆಸರಿನ ತಕ್ಕ ಮನಷ್ಯಾ ಅಲ್ಲೇ ಅಲ್ಲ್ಲಾ….
ಇಂವಾ ನಗೆ ಹನಿಗಳ ನರಸಿಂಹ…ಉತ್ಸಾಹದ ಚಿಲುಮೆ ನರಸಿಂಹ…. ಸಮಾಜಕ್ಕ ತನ್ನ ಜೀವನವನ್ನ ಮುಡಿಪಾಗಿಟ್ಟ ಸಾರ್ಥಕ ಅರವತ್ತ ವರ್ಷಗಳನ್ನ ಕಳದ ಇನ್ನೂ ತನ್ನಿಂದ ಏನ ಸಾಧ್ಯ ಅದನ್ನ ಸಮಾಜಕ್ಕ ಒಂದಿಲ್ಲಾ ಒಂದ ರೀತಿ ಸಹಾಯ ಮಾಡ್ಕೋತ ಹೊಂಟಾನ.
ಅವನ ಮುಂದಿನ ಜೀವನ ಪೂರ್ತಿ ಹಿಂಗ ಲವಲವಿಕೆಯಿಂದ ಇರಲಿ… ಅವನ ಜೀವನೋತ್ಸಾಹ ನಮಗ ಸದಾ ಸ್ಪೂರ್ತಿ…
ಮುಂದ ಇವನ ’ಸಹಸ್ರ ಚಂದ್ರ ದರ್ಶನಕ್ಕ’ ಇದರಕಿಂತಾ ಒಂದ ದೊಡ್ಡ ಬುಕ್ ಮಾಡೋಣ…ಬುಕ್ ಏನ ಅವನ ಬಗ್ಗೆ ಬರಕೋತ ಹೊಂಟರ ಒಂದ ಗ್ರಂಥನ ಮಾಡಬಹುದ ಬಿಡ್ರಿ.
ಅವಂಗ ನನ್ನ ಕಡೆಯಿಂದ ಈ ಷಷ್ಠಬ್ದಿ ಪೂರ್ತಿ ಸಮಾರಂಭದ ಈ ಶುಭ ಸಂದರ್ಭದೊಳಗ
ज्येष्ठाय नमः श्रेष्ठाय नमः।
दीर्घायुरारोग्यमस्तु सदा भवते,
ईशकृपा सदा तव जीवनं रक्षतु॥ ಅಂತ ಶುಭ ಹಾರೈಸುತ್ತೇನೆ.

Leave a Reply

Your email address will not be published. Required fields are marked *


The reCAPTCHA verification period has expired. Please reload the page.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ