ಆಂಟೀ…. ಒಬಿಸಿಟಿ ಡೇ

ಮೊನ್ನೆ ನಮ್ಮ ಮನಿ ಆಂಟೀ “ರ್ರಿ, ನಮ್ಮ ಮಹಿಳಾ ಮಂಡಳದಾಗ ನಂಗ ‘ಒಬಿಸಿಟಿ ಡೇ’ ಕ್ಕ ಭಾಷಣಾ ಮಾಡಲಿಕ್ಕೆ ಕರದಾರ, ಒಂದ ಭಾಷಣಾ ಬರದ ಕೊಡ್ರಿ” ಅಂದ್ಲು. ಅಲ್ಲಾ, ಈ ಮಹಿಳಾ ಮಂಡಳದವರಿಗೇನ ತಲಿ-ಗಿಲಿ ಕೆಟ್ಟದನ, ಬ್ಯಾರೆ ಯಾರ ಸಿಗಲಿಲ್ಲೇನ ಭಾಷಣಕ್ಕ, ಎಲ್ಲಾ ಬಿಟ್ಟ ನಮ್ಮ ಆಂಟೀನ ಕರದಾರಲಾ ಅನಸಲಿಕತ್ತು. ಅಲ್ಲಾ ಅದಿರಲಿ, ಈ ಒಬಿಸಿಟಿ ಡೇ ಎಲ್ಲಿಂದ ಬಂತಲೇ ಅಂತ ನಾ ವಿಚಾರ ಮಾಡಲಿಕತ್ತೆ.

ಅದೇನ ಆಗಿತ್ತಂದರ ಈಕಿಗೆ ಆ ಮಹಿಳಾ ಮಂಡಳದವರ ಬಂದ ‘anti-ಒಬಿಸಿಟಿ ಡೇ’ದ ಮ್ಯಾಲೆ ಒಂದ ಭಾಷಣಾ ಮಾಡರಿ’ ಅಂತ ಹೇಳ್ಯಾರ. ಆದರ ನಮ್ಮ ಆಂಟೀ ‘anti-obesity’ ಇದ್ದದ್ದನ್ನ ‘ಆಂಟೀ, ಒಬಿಸಿಟಿ ಡೇ’ ಅಂತ ತಿಳ್ಕೋಂಡಿದ್ಲು.

” ಲೇ, ಹುಚ್ಚಿ ಅವರ ಹೇಳಿದ್ದು ‘ಆಂಟೀ ಒಬಿಸಿಟಿ ಡೇ’ ಅಲ್ಲಲೇ, anti-ಒಬಿಸಿಟಿ ಡೇ” ಅಂತ ತಿಳಿಸಿ ಹೇಳಿದೆ.
ಅಲ್ಲಾ, ಈ ಮಹಿಳಾ ಮಂಡಳದವರು ಭಾರಿ ಶಾಣ್ಯಾ ಇದ್ದಾರ, ‘anti-ಒಬಿಸಿಟಿ ಡೇ’ ಕ್ಕ ಅಗದಿ ಛಲೋ ಒಬೀಸ್ ಗಿರಾಕಿನ ಓಣ್ಯಾಗೆಲ್ಲಾ ಹುಡಕ್ಯಾಡಿ, ಕಡಿಕೆ ನಮ್ಮ ಆಂಟೀನ ಮ್ಯಾಲಿಂದ ಕೆಳಗ ಒಂದ ಸರತೆ ಬಿಟ್ಟ ಹತ್ತ ಸರತೆ ನೋಡಿ ಭಾಷಣಕ್ಕ ಫಿಕ್ಸ್ ಮಾಡ್ಯಾರ ಅಂತ ನನಗ ಗ್ಯಾರಂಟೀ ಆತ.

” ಅಲ್ಲಲೇ, ದಿನಂಪ್ರತಿ ಸುಟ್ಟು ಸುಡಗಾಡ ಗಾರ್ಬೇಸ್ ತಿಂದ ತಿಂದ ಆನೆ ಆದಂಗ ಆಗಿ, ಇನ್ನ ಅಲ್ಲೆ ‘ಆಂಟಿ-ಒಬಿಸಿಟಿ ಡೇ’ಕ್ಕ ಹೋಗಿ ನೀ ಏನ್ ತಲಿ ಮಾತಾಡೋಕಿ, ನಿನ್ನ ಬದ್ಲಿ ನನ್ನರ ಕರದಿದ್ದರ ಒಂದ ಮಾತ ಬ್ಯಾರೆ” ಅಂದೆ.

” ರ್ರಿ, ಸಾಕ ಸುಮ್ಮನಿರ್ರಿ, ನಿಮ್ಮನ್ನ ಸ್ಟೇಜ ಮ್ಯಾಲೆ ನಿಲ್ಲಿಸಿ ನಮ್ಮಂತಾ ನಾಲ್ಕ ಮಹಿಳಾ ಮಣಿಗಳ ಉಬಿದರ ಹಾರಿ ಹೋಗೊ ಹಂಗ ಇದ್ದೀರಿ, ಭಾಷಣಾ ಮಾಡ್ತಾರಂತ ಭಾಷಣಾ” ಅಂದ್ಲು.
ಅಲ್ಲಾ ಅಕಿ ಹೇಳೋದು ಖರೇನ, ನಾ ಭೂಮಿಗೆ ಇಷ್ಟ ಅಲ್ಲಾ, ಕಟಗೊಂಡ ಹೆಂಡತಿಗೂ ಭಾರ ಆಗಬಾರದು ಅಂತ ಬದಕಲಿಕತ್ತೊಂವಾ. ಹಿಂಗಾಗಿ ನಂದ ಸಮಾಜದಾಗ, ಸಂಸಾರದಾಗ ತೂಕ ಸ್ವಲ್ಪ ಕಡಮಿನ ಅಂದ್ರು ಅಡ್ಡಿಯಿಲ್ಲಾ. ಅದರಾಗ ನಾ ನಮ್ಮ ಆಂಟೀ ಎರಡ ಹಡದ ಮ್ಯಾಲೇ ಅಕಿ ಜೋಡಿ ಎಲ್ಲೆರ ಹೊರಗ ಹೊಂಟರ ‘ನಾ ನಮ್ಮ ಮೌಶಿ ಜೊತಿ ಹೊಂಟಂಗ’ ಕಾಣತದ ಅಂತ ಓಣಿ ಮಂದಿ ಅಂತಾರ. ಅಂದರ ನಾ ಇನ್ನೂ ಹುಡಗ ಕಂಡಂಗ ಕಾಣತೇನಿ ಅಂತ ಅಲ್ಲಾ, ನನ್ನ ಹೆಂಡತಿ ನನ್ನ ಮೌಶಿ ಕಂಡಂಗ ಕಾಣತಾಳ ಅಂತ ಅರ್ಥ. ಹಿಂಗಾಗಿ ನಾ ಅಕಿಗೆ ಪ್ರೀತಿಲೆ ‘ಆಂಟೀ’ ಅಂತ ಕರೆಯೋದು.
ಅಲ್ಲಾ ನಾ ಮದುವಿ ಮಾಡ್ಕೊಂಡಾಗ ಹೆಂಗ ಇದ್ಲು, ಈಗ ಹೆಂಗ ಆದ್ಲು ಅಂತೇನಿ. ಆವಗ ಅಕಿನ್ನ ನೋಡಿದ್ರ ಅಕಿ ತವರಮನಿ ಒಳಗ ಎರಡ ಹೊತ್ತ ಊಟಾ ಮಾಡ್ತೋಳೊ ಇಲ್ಲೋ ಅನ್ನೋ ಹಂಗ ಇದ್ದಳು. ಈಗ ನೋಡ್ರಿ, ಗಂಡನ ಮನಿಗೆ ಬಂದ ಮ್ಯಾಲೆ ಗಂಡನ ಜೀವಾ ತಿಂದ ತಿಂದ ಹೆಂಗ ಗುಂಡಕಲ್ ಆದಂಗ ಆಗ್ಯಾಳ. ಎಲ್ಲಾ ಸುಖಾರಿ, ಗಂಡನ ಮನಿ ಸುಖಾ, ಮತ್ತೇನಿಲ್ಲಾ.

ಈ ಸುಡಗಾಡ ಸುಖಾನ ಮನಷ್ಯಾಗ ಒಬಿಸಿಟಿಗೆ ಮೂಲ ಕಾರಣ ಅನಸ್ತದ.

ಮೊನ್ನೆ ಹುಬ್ಬಳ್ಳಿ ಹೊಸಾ ರೇಲ್ವೆ ಸ್ಟೇಶನದಾಗ ತಂದ ತೂಕಾ ನೋಡ್ತೇನಿ ಅಂತ ಹೋದ್ಲು, ನಾ ಬ್ಯಾಡ ಅವು ಹೊಸಾ ಮಶೀನ, ಅವನ್ಯಾಕ ಹಾಳ ಮಾಡ್ತಿ ಅಂದರು ಕೇಳಲಿಲ್ಲಾ. ಇಕಿ ಒಂದ ತೂಕದ ಮಶೀನ್ ಮ್ಯಾಲೆ ನಿಂತ ಒಂದ ರೂಪಾಯಿ ಹಾಕಿದರ ಅದ ಸ್ಕ್ರೀನ ಮ್ಯಾಲೆ to be continued ಅಂತ ತೊರಸ್ತ, ಈಕಿ ಎಷ್ಟ ನಿಂತರು ಅದ ಹಂಗ ತೊರಸ್ತ. ಕಡಿಕೆ ತಲಿಕೆಟ್ಟ ಆ ಮಶೀನ್ ಕೆಟ್ಟಿರಬೇಕು ಅಂತ ಮತ್ತೊಂದ ವೇಯಿಂಗ ಸ್ಕೇಲ್ ಮ್ಯಾಲೆ ನಿಂತರ ಅದು please come one by one ಅಂತ ತೊರಸ್ತ. ಎನ್ಮಾಡ್ತೀರಿ!

“ಲೇ,ಹೋಗಲಿ ಬಿಡ, ಅದರ ಕ್ಯಾಪಿಸಿಟಿ ಕಡಿಮೆ ಅದ, ಮನಿಗೆ ಹೋಗ್ಬೇಕಾರ ದಾರಿ ಒಳಗ ಯಾವದರ ವೆಬ್ರಿಡ್ಜ ಒಳಗ ಚೆಕ್ ಮಾಡೋಣು” ಅಂದರು ಕೇಳಲಿಲ್ಲಾ, ಕಡಿಕೆ ಒಂದ ರೂಪಾಯಿ ಬದ್ಲಿ ಎರಡ ರೂಪಾಯಿ ಹಾಕಿದ್ಲು ನೋಡ್ರಿ, ಬಂತಲಾ ಸ್ಕ್ರೀನ ಮ್ಯಾಲೆ 88 kgs only ಅಂತ.

“ನೋಡ್ರಿ, ನಿಮ್ಮ ಕಡೆ ಬೈಯಿಸಿಗೊಂಡ-ಬೈಯಿಸಿಗೊಂಡ ನಂದ 7kg ತೂಕ ಕಡಿಮಿ ಆಗೇದ” ಅಂತ ದಾರಿಗುಂಟ ನಂಗ ಬೈಕೋತ ಬಂದ್ಲು.

ಹಿಂದಕೊಮ್ಮೆ ಪಾಸಪೋರ್ಟ ಸೈಜ್ ಫೋಟೊ ತಗಸಲಿಕ್ಕೆ ಹೋದಾಗ ಆ ಫೋಟೋ ಅಂಗಡಿಯಂವಾ ಒಂದ ಸರತೆ ಇಕಿ ಆಕಾರ ನೋಡಿ” ಇವರದ ಪೂರ್ತಿ ಮಾರಿ ಬರಬೇಕಂದರ ಮಿನಿಮಮ್ ಪೊಸ್ಟ ಕಾರ್ಡ ಸೈಜ್ ಫೊಟೊ ತಗಿಬೇಕು” ಅಂದಿದ್ದಾ.

ಅಲ್ಲಾ, ಹಿಂತಾಕಿನ್ನ anti-obesity dayಕ್ಕ ಭಾಷಣಕ್ಕ ಕರದಾರ ಅಂದ್ರ ಆ ಮಹಿಳಾ ಮಂಡಳದ ಉಳದ ಆಂಟೀಗೊಳ ಹೆಂಗ ಇರಬೇಕು ಅಂತೇನಿ.
ಅನ್ನಂಗ ನಾಳೇರಿಪಾ (november 26th) ಆಂಟಿ-ಒಬಿಸಿಟಿ ಡೇ, ನಿಮ್ಮ ಪೈಕಿ ಯಾರದರ ಒಬಿಸಿಟಿ ಇದ್ದರ ವಿಶ್ ಮಾಡಿಬಿಡರಿ ಮತ್ತ.

ಇನ್ನೊಂದ ಭಾಳ ಇಂಪಾರ್ಟೇಂಟ್ ಹೇಳೊದ ಮರತೆ ಈ ಒಬಿಸಿಟಿ ಅನ್ನೋದ ಖಾಂದಾನಿ, ಹೆರೆಡಿಟರಿ ಅಂತ ಅದನ್ನ ಅಷ್ಟ ಲೈಟಾಗಿ ತೊಗೊ ಬ್ಯಾಡರಿ, ಅಲ್ಲಾ ಹಂಗ ಒಬಿಸಿಟಿ ಭಾಳ ಹ್ಯಾವಿ ಇರತದ ಖರೆ ಆದ್ರೂ ಈ ವಿಷಯ ಅಷ್ಟ ಹಗರಾಗಿ ನೆಗ್ಲೆಕ್ಟ ಮಾಡಬ್ಯಾಡರಿ.

ಒಂದ ಮಾತ ನೆನಪಿಡ್ರಿ The obesity does not run in the family.. the problem is no one runs in the family.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ