‘ಕಮಲೇ ಕಲಹೋತ್ಪತ್ತಿಃ’

ನಿನ್ನೆ ಮುಂಜ-ಮುಂಜಾನೆ ಎದ್ದೋವನ ನಮ್ಮಪ್ಪ
“ಆ ಕಿಲ್ಲೆದಾಗಿನ ರಾಮಭಟ್ಟರಿಗೆ ಫೊನ್ ಮಾಡಿ ಮನಿಗೆ ಬಾ ಅಂತ ಹೇಳು” ಅಂದಾ.
ಆಷಾಡ ಮಾಸದಾಗ ನಮ್ಮಪ್ಪನ ತಲ್ಯಾಗ ಏನ ಹೊಕ್ಕತಪಾ, ಇಂವಾ ಏನರ ಯಡಿಯೂರಪ್ಪಗ ಜೇಲ್ ಬದ್ಲಿ ಬೇಲ್ ಸಿಕ್ಕತಂತ ಮನ್ಯಾಗ ಶ್ರೀಸತ್ಯನಾರಯಣ ಪೂಜಾ ಮಾಡಸೋಂವನೋ ಇಲ್ಲಾ ವಿಧಾನಸಭಾದ್ದ ಕಲಾಪಕ್ಕ ಅರವತ್ತ ತುಂಬೇದಂತ ಶಾಂತಿ ಮಾಡಸೊಂವನೊ ಅನಸಲಿಕತ್ತು. ಹೇಳಲಿಕ್ಕೆ ಬರಂಗಿಲ್ಲಾ, ನಮ್ಮಪ್ಪಾ ಕಟ್ಟಾ ಬಿಜೇಪಿ ಮನಷ್ಯಾ, ಅದರಾಗ ಯಡಿಯೂರಪ್ಪನ ಪೈಕಿ ಬ್ಯಾರೆ, ತನ್ನ ತಲ್ಯಾಗ ತಿಳದಿದ್ದ ಮಾಡೋಂವಾ. ಯಾರಿಗೂ ಹೇಳಂಗಿಲ್ಲಾ ಕೇಳಂಗಿಲ್ಲಾ.
“ಯಾಕಪಾ, ಈಗ್ಯಾಕ ರಾಮ ಭಟ್ಟರ ನೆನಪಾದ್ರ, ನೀ ಏನ್ ಕಲಾಪಕ್ಕ ಅರವತ್ತ ತುಂಬತಂತ ಮನ್ಯಾಗ ಷಷ್ಟಬ್ದಿ ಸಮಾರಂಭ ಮಾಡೊಂವೇನ್?” ಅಂತ ಅಂದೆ.
“ಲೇ, ದನಾ ಕಾಯೋವನ ಹೇಳಿದಷ್ಟ ಮಾಡ. ಎಲ್ಲಿ ಕಲಾಪಲೆ, ಪಾರ್ಟಿ ಒಳಗ ಪ್ರಲಾಪ ಜಾಸ್ತಿ ಆಗಿ ಎಲ್ಲಾರೂ ಸೇರಿ ನಮ್ಮ ಪಾರ್ಟಿದ ವರ್ಷಾಂತಕ ಮಾಡಲಿಕ್ಕೆ ಹೊಂಟಾರ. ನಂಗ ಒಂದ ಹೋಮಾ ಮಾಡಸೋದ ಅದ, ನೀ ಭಟ್ಟರಿಗೆ ಬಾ ಅಂತ ಹೇಳ” ಅಂದಾ. ಇಂವಾ ಈಗ ಯಾ ಹೋಮಾ ತಗದನಪಾ ? ಎರಡ ವರ್ಷದ ಹಿಂದ ತನ್ನ ಎಪ್ಪತ್ತ ವರ್ಷದ ಶಾಂತಿ ಒಳಗ ತನಗ ತನ್ನ ಪಾರ್ಟಿಗೆ ಕೂಡೇ ‘ಧೀರ್ಘ ಆಯುಷ್ಯ’ ಇರಲಿ ಅಂತ ‘ಮೃತ್ಯಂಜಯ ಹೋಮಾ’ ಮಾಡಿಸ್ಗೊಂಡಾನ, ಈಗ ಮತ್ತೇನ ಮಾಡ್ಸೋಂವನೊ?
ನಮ್ಮ ರಾಜ್ಯದಾಗ ಬಿಜೇಪಿ ಅಧಿಕಾರಕ್ಕ ಬಂದಾಗಿಂದ ನಮ್ಮಪ್ಪಂದ ಹಿಂಗ ನಡದ ಬಿಟ್ಟದ. ಮನ್ಯಾಗ ಎಲ್ಲಾ ತಂದ ನಡಿಬೇಕು, ಅಂವಾ ಹೇಳಿದಂಗ ಕೇಳಬೇಕು. ನಂಗ ಸುಮ್ಮನ ಮನಿ ನಡಿಸಲಿಕ್ಕೂ ಬಿಡಂಗಿಲ್ಲಾ. ಒಂಥರಾ ಆ ಯಡಿಯೂರಪ್ಪಾ, ಸದಾನಂದ ಗೌಡ್ರಿಗೆ ಕಾಡಿದಂಗ ಕಾಡತಾನ, ಅದರಾಗ ಅವನ ಮಾತ ಏನರ ಕೇಳಲಿಲ್ಲಾ ಅಂದ್ರ “ನಾ ಮನಿ ಬಿಟ್ಟ ‘ವೃದ್ಧಾಶ್ರಮಕ್ಕ’ ಹೊಗ್ತೇನಿ ನೋಡ” ಅಂತ ಧಮಕಿ ಬ್ಯಾರೆ ಕೊಡ್ತಾನ. ಸುಮ್ಮನ ಅಂವಾ ತನ್ನ ಜೊತಿ ಆ ಯಡಿಯೂರಪ್ಪನ್ನೂ ಕರಕೊಂಡ ವೃದ್ಧಾಶ್ರಮಕ್ಕ ಹೋದರ ಅವರಿಬ್ಬರಿಗೂ ಪುಣ್ಯಾ ಬರ್ತದ ಅನಸ್ತದ.
“ಯಾಕಪಾ ಹೋಮಾ, ಈಗ ಏನರ ಜಗದೀಶ ಶೆಟ್ಟರ ಸಿ.ಎಮ್. ಆಗಲಿ ಅಂತ ‘ರಾಜಸೂಯ ಯಾಗ’ ಮಾಡಸೋಂವನೊ ಇಲ್ಲಾ ಗೌಡ್ರ ಸರ್ಕಾರ ಬೀಳಲಿ ವಾಮಾಚಾರ ಮಾಡ್ಸೋಂವನೋ?” ಅಂತ ಅಂದೆ.
“ಏ, ಎಲ್ಲಿ ರಾಜಸೂಯಲೇ, ನಮ್ಮ ಪಕ್ಷದಾಗ ಅಸೂಯೆ ಜಾಸ್ತಿ ಆಗಲಿ ಅಂತ ಯಾರೊ ಮಾಟಾ ಮಾಡ್ಶಾರ, ಈಗ ನಮ್ಮ ಪಕ್ಷ ಉಳದರ ಸಾಕಾಗೇದ, ಅದಕ್ಕ ಒಂದ ನವಗ್ರಹ ಹೋಮಾ ಮಾಡಸಬೇಕಂತ ಮಾಡೇನಿ” ಅಂದಾ. ಅದಕ್ಕ ರೊಕ್ಕಾ ಯಾರ ಈಶ್ವರಪ್ಪ ಕೊಡ್ತಾನೇನ್ ಅನ್ನೋವ ಇದ್ದೆ, ಸುಮ್ಮನ ಇನ್ನ ಅವನ ಜೊತಿ ಏನ ವರಟ ಹರಿಯೋದ ಬಿಡ ಅಂತ ಸುಮ್ಮನಾದೆ.
ಇತ್ತೀಚಿನ ಬಿಜೇಪಿ ಪರಿಸ್ಥಿತಿ ನೋಡಿ, ನಮ್ಮಪ್ಪನಂಗ ತಮ್ಮ ಜೀವಾ ತೇಯದ ಕಷ್ಟ ಪಟ್ಟ ಪಕ್ಷ ಕಟ್ಟಿದ್ದ ಎಷ್ಟೋ ಮಂದಿಗೆ ಭ್ರಮ ನಿರಸ ಆಗಿ ಅರುವು-ಮರುವು ಆಗೇದ. ನಾ ನಮ್ಮಪ್ಪಗ ವಯಸ್ಸಾತು ಅದಕ್ಕ ಇಂವಾ ಹಿಂಗ ಮಾಡಲಿಕತ್ತಾನ ಅಂತ ಅನ್ಕೋಂಡಿದ್ದೆ, ಆದ್ರ ಪಾಪ ಅದ್ವಾನಿಯವರಿಗೂ ಪಕ್ಷದ್ದ ಪರಿಸ್ಥಿತಿ ನೋಡಿ ಹಿಂಗ ಆಗೇದಂತ. ಅದರಾಗ ನಮ್ಮ ಕರ್ನಾಟಕದ ಬಿಜೇಪಿ ಹಣೇಬರಹ ನೋಡಿ ಅಂತೂ ಎಲ್ಲಾರಿಗು ಸಾಕ ಸಾಕಾಗೇದ.
ಒಂದ ವಾರದ ಹಿಂದ ರಾತ್ರಿ ಮಲ್ಕೊಂಡಾಗ ನಮ್ಮಪ್ಪ ಒಮ್ಮಿಂದೊಮ್ಮಿಲೆ ಗಾಬರಿ ಆಗಿ ಎದ್ದ ಕೂತಾ,ಯಾಕಪಾ ,ಏನಾತು ಅಂತ ಕೇಳಿದರ “ಇಲ್ಲಾ, ಕನಸಿನಾಗ ಯಡಿಯೂರಪ್ಪಗ ಸಿ.ಬಿ.ಐ ದವರು ಬಂದ ಹಿಡಕೊಂಡ ಹೋದರು” ಅಂದಾ. ನಾ ಅವಂಗ ” ಭಾಳ ಛಲೋ ಆತ ನೋಡ, ಅದಕ್ಯಾಕ ಅಷ್ಟ ಗಾಬರಿ ಆಗತಿ, ಇನ್ನರ ನಿಶ್ಚಿಂತಿಯಿಂದ ಮಲ್ಕೊ ?” ಅಂತ ಅಂದೆ. “ಇಲ್ಲಾ, ಹಂಗೇನರ ಆದರ ಅಂವಾ ಸರ್ಕಾರನ ಬಿಳಿಸಿ ಬಿಡ್ತಾನ ಅಂತ ಹೆದರಕಿ ಆತು” ಅಂದಾ.” ಏ, ಯಡಿಯೂರಪ್ಪಾ ಹಂಗ ಹೆದರಸ್ತಾನ ತೊಗೊ, ನೀ ಯಾಕ ತಲಿ ಕೆಡಿಸ್ಗೋತಿ, ಸರ್ಕಾರಕ್ಕ ಏನು ಆಗಂಗಿಲ್ಲಾ” ಅಂತ ನಾ ಸಮಾಧಾನ ಮಾಡಿದ ಮ್ಯಾಲೆ ಮತ್ತ ಮಲ್ಕೊಂಡಾ. ನಾ ಅಂತೂ ಆ ಯಡೆಯೂರಪ್ಪಾ ಪ್ರೆಸಮೀಟ್ ಮಾಡಿದಾಗ ಒಮ್ಮೆ ನಮ್ಮಪ್ಪನ ಬಿ.ಪಿ. ಚೆಕ್ ಮಾಡಿಸಿಗೊಂಡ ಬರತೇನಿ. ಇನ್ನ ಅಂವಾ ಏನರ ಪಾರ್ಟಿ ಬಿಟ್ಟ ಸರ್ಕಾರ ಕೆಡವಿದರ ಇ.ಸಿ.ಜಿ ನೂ ಮಾಡಸೊ ಪ್ರಸಂಗ ಬರಬಹುದು.
ಅಲ್ಲಾ, ಈಗ ನಮ್ಮಪ್ಪ ನವಗ್ರಹ ಶಾಂತಿ ಮಾಡಸಲಿಕ್ಕೆ ಪಕ್ಷ ಉಳದದರ ಎಲ್ಲೆ ಅಂತೇನಿ?
ಹಿಂಗ ‘ಕಮಲೇ ಕಲಹೋತ್ಪತ್ತಿಃ’ ಆಗಿ ಪಕ್ಷನ ಹೊತ್ತಿ ಉರದರ, ಜನಾ ‘ಶ್ರೂಯತೇ ನ ಚ ದೃಶ್ಯತೇ’ ಅಂತ ಸುಮ್ಮನ ಕೂಡಂಗಿಲ್ಲಾ. ಇವತ್ತಿಲ್ಲಾ ನಾಳೆ ಇಲೆಕ್ಷನ್ ಬಂತಂದರ ಪಕ್ಷಕ್ಕ ನೀರ ಬಿಟ್ಟ ‘ಉದಕ ಶಾಂತಿ ‘ ಮಾಡೇ ಮಾಡ್ತಾರ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ