ದೋಸ್ತ cheers!!!

(friendship day ಮತ್ತು international beer day ಎರೆಡೂ ಒಂದ ದಿವಸ ಬಂದಾಗ ಬರೆದದ್ದು)
ನಿನ್ನೆ ರಾತ್ರಿ ಹನ್ನೇರಡುವರಿ ಒಂದ ಆಗಿತ್ತ ನಂಗ ಮೊಬೈಲನಾಗ ಫೋನ್ ಬಂತ. ನಾ ಜಸ್ಟ ವೀಕೆಂಡ ಪಾರ್ಟೀ ಮುಗಿಸಿಕೊಂಡ ಬಂದ ಮಲ್ಕೋಂಡಿದ್ದೆ, ಅದರಾಗ ನನ್ನ ಹೆಂಡತಿಗೆ ಮೊದ್ಲ ನಾ ಲೇಟಾಗಿ ಬಂದ ಬಾಗಲ ಬಡದ ಎಬ್ಬಿಸಿದ್ದ ಒಂದ ಸಿಟ್ಟ ಇತ್ತ, ಇನ್ನ ಅಕಿ ಹಿಂಗ ನಿದ್ದಿ ಹಚ್ಚಬೇಕ ಅನ್ನೋದರಾಗ ಫೋನ್ ಬ್ಯಾರೆ ಬಂತ. ಅಕಿ ನಿದ್ದಿ ಗಣ್ಣಾಗ
“ರ್ರಿ, ಯಾರದರಿ ಅದು ಸುಡಗಾಡ ಫೋನ್, ಕುಡದ ನಶೆದಾಗ ದೋಸ್ತರೇಲ್ಲಾ ಬಿಲ್ಲ್ ಕೊಡಲಾರದ ಹಂಗ ಬಂದೀರಿ ಕಾಣತದ, ಬಾರನವರು ಫೋನ ಮಾಡ್ಯಾರೀನ ನೋಡ್ರಿ” ಅಂತ ಒದರಿದ್ಲು.
“ಲೇ, ನೀ ಸುಮ್ಮನ ಮಲ್ಕೊ, ಹಂಗ ಬಿಲ್ಲ ಕೊಟ್ಟಿದ್ದಿಲ್ಲಾ ಅಂದ್ರ ನಂಗ ಮನಿಗೇ ಬಿಡತಿದ್ದಿಲ್ಲಾ, ಅಲ್ಲೇ ಟೇಬಲ್ ವರಸಲಿಕ್ಕೆ ಹಚ್ಚತಿದ್ದರು” ಅಂತ ಎದ್ದ ಮೊಬೈಲ ನೋಡಿದೆ, ನಮ್ಮ ಪವ್ಯಾನ ಫೊನ್ ಇತ್ತ, ‘ಅವನೌನ ಇವಂಗ ಕುಡದ ಗಾಡಿ ಹೊಡಿಬೇಕಾರ ಎಲ್ಲರ ಪೋಲಿಸರ ಹಿಡದಿರಬೇಕು’ ಅಂತ ಬಯ್ಕೋತ ಫೋನ ಎತ್ತಿದೆ. ಅಂವಾ ನಾ ಫೋನ್ ಎತ್ತೋ ಪುರಸತ್ತ ಇಲ್ಲದ
“ಲೇ, ಆಡ್ಯಾ ನಿನ್ನೌನ happy friendship dayಲೇ” ಅಂದಾ, ಅವನ ಧ್ವನಿ ಕೇಳಿದರ ಅಂವಾ ಯಾವದೋ ಬಾರನಿಂದ ಮಾತಡಲಿಕತ್ತಾನಂತ ಗೊತ್ತಾತ. ನಾ ಮೊಬೈಲದಾಗ ಡೇಟ ನೋಡಿದೆ ‘ಅಗಸ್ಟ 5’ ಆಗಿತ್ತ. ಏ ಈ ಮಗಾ ಭಾರಿ ನೆನಪ ಇಟ್ಟಾನ ಫ್ರೇಂಡಶಿಪ್ ಡೇ ಅನಸ್ತ. ಇಂವಾ ಏನಿಲ್ಲದ ದಿವಸಾ ನಾಲ್ಕೈದ ಫ್ರೇಂಡ್ಸ್ ಕಟಗೊಂಡ ಕುಡಿಯೋಂವಾ, ಇನ್ನ ಅದರಾಗ ಫ್ರೇಂಡಶಿಪ್ ಡೇ ಅಂತ ನೆವಾ ಸಿಕ್ಕರ ಮುಗದಹೋತ ಬೆಳತನಕ ಬಾರನಾಗ ಕೂತರು ಕೂತನ ಅಂತ ನಾ ” ಸೇಮ್ ಟು ಯು ಲೆ, ನೀ ಏನ್ ಫ್ರೇಂಡಶಿಪ್ ಡೇ ಹನ್ನೇರಡ ಗಂಟೆಯಿಂದ ಸೆಲೆಬ್ರೇಟ್ ಮಾಡಲಿಕ್ಕೆ ಶುರು ಮಾಡಿ ಏನ್ಲೇ, ಮನಿಗೆ ಹೋಗಿ ಮಲ್ಕೋ ಮಗನ ಮತ್ತ ಮುಂಜಾನೆ ಸೆಲೆಬ್ರೇಟ್ ಮಾಡೋಣಂತ” ಅಂತ ಅಂದ ಫೋನ್ ಇಟ್ಟ ವಾಪಸ ಮಲ್ಕೊಂಡೆ.
ಹಿಂಗ ಒಂದ ಹತ್ತ ನಿಮಿಷ ಆಗಿತ್ತ, ಮತ್ತ ಫೋನ ಮಾಡಿದಾ. ನನ್ನ ಹೆಂಡತಿ ತಲಿ ಕೆಟ್ಟ
“ನಿಮ್ಮ ದೋಸ್ತರಿಗೆ ಹೆಂಡ್ರು, ಮಕ್ಕಳು, ಮನಿ-ಮಠಾ ಇಲ್ಲೇನ್ರಿ, ಶನಿವಾರಕ್ಕೊಮ್ಮೆ ಸುಮ್ಮನ ಅಲ್ಲೆ ಬಾರನಾಗ ಬಿದ್ದ ಸಾಯಿರಿ, ಮನಿಗೆ ಬಂದ ನಮ್ಮ ಜೀವಾ ಯಾಕ ತಿಂತೀರಿ” ಅಂತ ಅಂದ್ಲು. ನಾ ಮತ್ತ ಎದ್ದ ಫೊನ ತೊಗೊಂಡ ಹೊರಗ ಬಂದೆ “ಲೇ, ಮತ್ತೇನ ಆತಲೇ ನಿನ್ನೌನ್?” ಅಂದೆ. ” ಲೇ, ಆಡ್ಯಾ,happy beer day ಲೇ, cheers!” ಅಂದಾ. ನಾ ಇಂವಾ ಎಲ್ಲಿ ಬೀಯರ್ ಡೇ ತಂದಪಾ, ಈ ಮಗಾ ಭಾಳ ಟೈಟ್ ಆಗೇನ ಅದಕ್ಕ ಏನೇನರ ಮಾತಾಡಲಿಕತ್ತಾನ, ಇನ್ನೊಂದ ಸ್ವಲ್ಪ ಹೊತ್ತಿಗೆ ಬಿಸ್ಲೇರಿ ಡೇ, ಸೋಡಾ ಡೇ, ಫಿಂಗರ್ ಬೌಲ್ ಡೇ ಅಂತ ಫೋನ ಮಾಡಿದರು ಮಾಡಿದನ ಅಂತ “ಲೇ ಯಾ ಬೀಯರ್ ಡೇ ತಂದಿಲೇ ಮಗನ, ನಿಂಗ ಭಾಳ ಆಗೇದ ಮನಿಗೆ ಹೋಗಿ ಮಲ್ಕೋ, ನಾಳೆ ಮಾತಾಡೊಣಂತ” ಅಂತ ಅಂದೆ. ” ಏ, ಮಗನ ಇವತ್ತ international beer day ಲೇ, ಬೇಕಾರ ಇಂಟರ್ನೆಟನಾಗ ನೋಡ. ಬಾ ಇಲ್ಲೇ ನೀನೂ, ಸೆಲೆಬ್ರೇಟ ಮಾಡೋಣ ” ಅಂತ ಗಂಟ ಬಿದ್ದಾ.
ಹಕ್ಕ ಇವನೌನ, ವಾರಕ್ಕ ಮೂರ ಸರತೆ ಕುಡಿಯೋ ಮನಷ್ಯಾಗ friendship day ದಿವಸ international beer day ಬಂದದ ಅಂದರ ಮುಗದಹೋತ, ಇವತ್ತ ಇಂವಾ ಬಾರನಾಗ ವಸ್ತಿ ಮಾಡಿ ಬೀಯರನಾಗ ಯರಕೊತಾನ ಅಂತ ಗ್ಯಾರಂಟೀ ಆತ. “ಲೇ, ನಾ ಈಗೇನರ ಬಂದ ಸೆಲೆಬ್ರೇಟ ಮಾಡಿದರ ನನ್ನ ಹೆಂಡತಿ ನನಗ ಸಪರೇಟ್ ಮಾಡ್ತಾಳ. ನೀ ಎಂಜಾಯ್ ಮಾಡ ಮಗನ…cheers!!!” ಅಂತ ಹೇಳಿ ಈ ಸರತೆ ಫೋನ ಸ್ವಿಚ್ ಆಫ್ ಮಾಡಿ ಇಟ್ಟೆ.
ಹಿಂದ ಬೆಡರೂಮ್ ಬಾಗಲದಾಗ ನನ್ನ ಹೆಂಡತಿ ನಿಂತಿದ್ಲು. “ಯಾಕ ಏನಾತು, ನಿದ್ದಿ ಬರವಲ್ತೇನ?” ಅಂದೆ. “ನಿಮ್ಮನ್ನ ಹೊರಗ ಅಟ್ಟಿ ಬಾಗಲ ಹಾಕ್ಕೊಂಡ ಬಂದ ಮಲ್ಕೊಂಡರಾತು ಅಂತ ಎದ್ದೆ, ಫ್ರೇಂಡಶಿಪ್ ಡೇ ಅಂತೇರಿ ಅದರಾಗ ಮ್ಯಾಲೆ international beer day ಬ್ಯಾರೆ, ಹೋಗಿ ಕಂಠ ಮಟಾ ಕುಡದ ಸೆಲೆಬ್ರೇಟ್ ಮಾಡ್ರಿ. ಮುಂದ ಅಗಸ್ಟ 15ಕ್ಕ dry day ಇರತದಲಾ ಅವತ್ತ ವಾಪಸ್ಸ ಬರ್ರಿ ಸಾಕು” ಅಂದ್ಲು.
ನಾ ಬೆಡರೂಮಗೆ ಹೋಗಿ ಇವತ್ತ international beer day ಅಂತ ಬಾಯಿ ತಕ್ಕೊಂಡ ಮಲ್ಕೊಂಡೆ.
ಅನ್ನಂಗ ನಿಮಗೇಲ್ಲಾ happy friendship day….& cheers!!!
ಹಂಗ ನಮ್ಮ ಆತ್ಮೀಯ brewer & bartenderಗೆ thank you for your service.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ