ಯಾವದರ ಒಂದ ISO standard ಗಂಡ ಇದ್ದರ ನೋಡ್ರಿ………

ಮೊನ್ನೆ ಬೆಂಗಳೂರಿಂದ ರಾಜಾ ಬಂದಿದ್ದಾ, ಪಾಪಾ ಭಾಳ ದಿವಸಾದ ಮ್ಯಾಲೆ ಕನ್ಯಾ ಫಿಕ್ಸ್ ಆಗಿತ್ತ ನಮಗೇಲ್ಲಾ ಪಾರ್ಟಿ ಗಿರ್ಟಿ ಕೊಡ್ತಾನ ತಡಿ ಅಂತ ಕೇಳಿದರ ಮಗಾ ’ಏ, ಎಲ್ಲೆ ಪಾರ್ಟಿ ಹೋಗರಲೇ’ ಅಂತ ನಮಗ ಜೋರ್ ಮಾಡಿದಾ.
ಇಂವಾ ಯಾಕ ಈ ಪರಿ ಬರೇ ಕನ್ಯಾ ಫಿಕ್ಸ್ ಆಗಿದ್ದಕ್ಕ ಬೇಜಾರ ಆಗ್ಯಾನ, ಇನ್ನೂ ಲಗ್ನ ಆಗಬೇಕು, ಹಂಡ್ತಿ ಕೈಯಾಗ ಸಿಕ್ಕೊಂಡ ಒದ್ಯಾಡಬೇಕು, ಒಂದ್ಯಾರಡ ಹಡಿಬೇಕು ಆಮ್ಯಾಲೆ ಸಂಸಾರದಾಗ ಜಿಗೂಪ್ಸೆ ಹೊಂದಿ ನಮ್ಮಂಗ ಬೇಜಾರ ಆದ್ರ ಆ ಮಾತ ಬ್ಯಾರೆ ಇತ್ತ.
ನಾ ಇವಂದ ಏನ ಹಕೀಕತ್ ಕೇಳಿದರಾತ ತಡಿ ಅಂತ
’ಯಾಕಲೇ ಫಿಕ್ಸ್ ಆಗಿದ್ದ ಕನ್ಯಾ ಏನ ನಿನಗ ಮನಸ್ಸಿಗೆ ಬಂದಿಲ್ಲೇನಲೇ?’ ಅಂತ ನಾ ಕೇಳೋದ ತಡಾ ಒಂದ ದೊಡ್ಡ ಕಥಿನ ಶುರು ಮಾಡಿದಾ.
ಅವರ ಮನ್ಯಾಗ ಇವಂಗ ಕನ್ಯಾ ನೋಡಿ ನೋಡಿ ಸಾಕಾಗಿ ಕಡಿಕೆ ಒಂದ ಯಾವದೋ ಹುಡಗಿ ಇದ್ದಿದ್ದರಾಗ ಇವಂಗ ’ಹೂಂ’ ಅನ್ನೋದ ತಡಾ ಇವನ ಮದ್ವಿ ನಿಕ್ಕಿ ಮಾಡಿ ಬಿಟ್ಟಿದ್ದರು. ಆ ಹುಡಗಿ ಬೆಂಗಳೂರಾಗ ಒಂದ ಕಂಪನಿ ಒಳಗ ಮ್ಯಾನೇಜಮೆಂಟ್ ರೆಪ್ರೆಸೆಂಟೇಟಿವ್ (management representative) ಅಂತ ಕೆಲಸಾ ಮಾಡ್ತಿದ್ದಳು. ಅಕಿ ದಿವಸಾ ಬೆಳಕ ಹರದರ ಸಾಕ ISO standards ಬಗ್ಗೆನ ಮಾತಾಡ್ತಿದ್ದಳಂತ. ಪ್ರತಿಯೊಂದಕ್ಕು ಒಂದ ಸ್ಟ್ಯಾಂಡರ್ಡ್ ಇರಬೇಕು ಇದ್ದದ್ದೇಲ್ಲಾ ಸ್ಟ್ಯಾಂಡರ್ಡ್ ಇರಬೇಕು ಅನ್ನೋ ಲೆಕ್ಕದ ಹೆಣ್ಣಮಗಳ. ಇನ್ನ ಹಂತಾಕಿ ಲಗ್ನಾ ಮಾಡ್ಕೊಳಿಕತ್ತಾಳ ಅಂದರ ಸ್ಟ್ಯಾಂಡರ್ಡ್ ಗಂಡನ್ನ ಇಲ್ಲಾ ಗಂಡನೊಳಗ ಸ್ಟ್ಯಾಂಡರ್ಡ್ ನೋಡೊದ ಸಹಜ.
ಅಕಿ ಇವನ ಜೊತಿ ಹಿಂಗ ಲಗ್ನ ಫಿಕ್ಸ ಆಗೋದ ಗ್ಯಾರಂಟೀ ಅನ್ನೋದಕ್ಕ ಇವನ ತಲಿ ತಿನ್ನಲಿಕತ್ತಳಂತ. ಮಾತ ಮಾತಿಗೆ NC (non-conformance) , rework , ok product, quality management ಅಂತೇಲ್ಲಾ ISO terminology ಒಳಗ ಇವನ ಜೊತಿ ಮಾತಾಡೋಕಿ. ಇವಂಗರ ಯಾಕರ ಇಕಿ ಜೊತಿ ಲಗ್ನ ಫಿಕ್ಸ್ ಆತೊ ಅನಿಸಿ ಪಾಪ ಅಂವಾ ಒಂದ ಹತ್ತ ಸರತೆ ತಮ್ಮ ಮನಿ top management meeting ಕರದ ನಂಗ ಈ ಕನ್ಯಾ ಬ್ಯಾಡ, ಕನ್ಯಾ ಬ್ಯಾಡಾ ಅಂತ ಗೋಳಿಟ್ಟರೂ ಅವರ ಮನ್ಯಾಗ ಕೇಳಲಿಲ್ಲಾ.
ಯಾಕಂದರ, ಒಂದು ಇವಂಗ ಕನ್ಯಾ ಸಿಗೋದ ಏಳೂ ಹನ್ನೇರಡ ಆಗಿತ್ತ ಮ್ಯಾಲೆ ಆ ಹೆಣ್ಣಿನವರದ resource management ಭಾರಿ ಇತ್ತ, ಬೊಮ್ಮನಳ್ಳಿ ಒಳಗ ಆ ಹುಡಗಿ ಹೆಸರಿಲೇ ಒಂದ ಹತ್ತ ಎಕರೆ ಹೊಲಾ, ಪೂಣಾದಾಗ ಒಂದ ಆರನೇ ಅಂತಸ್ತಿನಾಗ ಫ್ಲ್ಯಾಟ ಹಿಂಗಾಗಿ ಇವರ ಮನ್ಯಾಗ ಆ ಹುಡಗಿನ್ನ ಅಕಿ ಹಂಗ ನೋಡಲಿಕ್ಕೆ ಛಂದ ಇಲ್ಲಾ ಅಂದರು deviation ಮ್ಯಾಲೆ accept ಮಾಡ್ಕೊಂಡಿದ್ದರು.
ಪಾಪ ಇವನ ಹಣೇಬರಹ ನೋಡ್ರಿ ಇಂವಾ ಎಷ್ಟ ಜೀವನದಾಗ customer satisfaction important ಅಂದರು ಯಾರು ಅವನ ಮಾತ ಕೇಳಲಿಲ್ಲಾ.
ಇವಂಗೇನೊ ಕನ್ಯಾ ತೊರಸಲಿಕ್ಕೆ ಬಂದಾಗ ಆ ಹುಡಗಿ ನಿಂದ six sigma ಆಗೇದನ ಅಂತ ಕೇಳಿದ್ಲಂತ? ಪಾಪ ಇವರ ಮನ್ಯಾಗಿನವರ ಇಕೇನ ಹಿಂಗ ಅಸಂಯ್ಯ ಅಸಂಯ್ಯ ಮಾತಾಡ್ತಾಳಾ ಅನ್ಕೊಂಡಿದ್ದರಂತ. ಆಮ್ಯಾಲೆ ಅದ sex ಅಲ್ಲಾ six Sigma ಅಂತ ತಿಳಿಸಿ ಹೇಳೋದರಾಗ ಪಾಪ ಆ ಹುಡಗಿಗೆ ರಗಡ ಆಗಿತ್ತಂತ. ಅಷ್ಟಕ್ಕ ಮುಗಿಲಿಲ್ಲಾ ಗಂಡಗ 5 S Concept of house keeping ಬರ್ತದೋ ಇಲ್ಲೊ, MIS ( management information system) reporting ಬರ್ತದೋ ಇಲ್ಲೋ ಅಂತೇಲ್ಲಾ ಜೀವಾ ತಿಂದಾಗ ಅಂವಾ ನಂಗ ಯಾ ಸುಡಗಾಡ concept ಗೊತ್ತಿಲ್ಲಾ. ಆದರ ನಿಂಗ ಮಾತ್ರ ಒಂದ concept clear ಇರಲಿ ಒಂದ ಗಂಡು ಒಂದ ಹೆಣ್ಣು ಲಗ್ನಾಗಿ ಮೂರ ವರ್ಷದಾಗ ರೆಡಿ ಆಗಬೇಕು ಅಂತ ಅಂದ ಅಕಿ ಆಮ್ಯಾಲೆ ಇವಂಗ ’ಮೊದ್ಲ ನೀ ಛಂದಾಗಿ production flowchart ಬರದ ತೊರಸ, ಆಮ್ಯಾಲೆ ಮಕ್ಕಳ ಮಾತ’ ಅಂತ ಬೈಸಿಗೊಂಡಿದ್ನಂತ.
ಇತ್ತಲಾಗ ಆ ಹುಡಗಿ ಅಕ್ಕಾ ಒಂದ ಸರತೆ ಇವರ ಮನಿಗೆ appraisal form ತೊಗೊಂಡ ಬಂದ ಈಡಿ ಮನೆತನದ್ದ appraisal ಮಾಡ್ಕೊಂಡ ಹೋಗಿದ್ಲಂತ. ಪಾಪ ನಮ್ಮ ರಾಜಂದ ಸಿಕ್ಕಾಪಟ್ಟೆ audit ಮಾಡಿ ಕಡಿಕೆ ಅವನ ಹಣಿ ಮ್ಯಾಲೆ tested OK ಅಂತ ಒಂದ ಹಸಿರ ಶರ್ಟ ಪೀಸ ಉಡಿ ತುಂಬಿ ಕೆಂಪ ಸ್ಟಿಕರ್ ಹಚ್ಚಿ ಹೊದ ಮ್ಯಾಲೆ ಈ ಹುಡಗಿ ಫಿಕ್ಸ್ ಆಗಿದ್ದ.
ಒಂದ ಸರತೆ ರಾಜಾನ ಅಪ್ಪನ ಫ್ರೆಂಡ್ ಒಬ್ಬರ ಬಂದ ಇವರ ಮನಿದ third party inspection ಬ್ಯಾರೆ ಮಾಡಿ ಹೋಗಿದ್ದರಂತ. ಅವರ ಆ ಹೆಣ್ಣಿನವರಿಗೆ ದೂರಿಂದ ಬಳಗ ಆಗಬೇಕ ಹಿಂಗಾಗಿ ಇಲ್ಲೆ ಬೆಂಗಳೂರಿಗೆ ಬಂದಿದ್ದೆ ನಿಮನ್ನ ಮಾತಾಡಿಸಿಗೊಂಡ ಹೋದರಾತು ಅಂತ ಬಂದೆ ಅಂತ ಸುಳ್ಳ ಸುಳ್ಳ ನೆಪಾ ಹೇಳಿ ಇವರ ಕುಂಡಲಿ ಅಳಗ್ಯಾಡಸ್ಕೊಂಡ valuation ಮಾಡ್ಕೊಂಡ ಹೊಗಿದ್ದರಂತ.
ಹಿಂಗ ಆ ಹುಡಗಿದ ಇಡಿ ಫ್ಯಾಮಿಲಿ ಮಂದಿ ಬಂದ ನಮ್ಮ ರಾಜಾನ್ನ ಗೋಳ ಹೊಯ್ಕೊಂಡ ಹೋಗಿ ಕಡಿಕೆ ’ವರಾ’ conforming to our standards ಅಂತ ಹೇಳಿದ್ದರಂತ. ಪಾಪ ನಮ್ಮ ರಾಜಾ ’ಈಗ ಹಿಂಗ..ಮುಂದ ಮದುವಿ ಆದಮ್ಯಾಲೆ ಹೆಂಗೋ’ ಅಂತ ಹೆದರಿ ಬಿಟ್ಟಾನ. ಏನ್ಮಾಡ್ತೀರಿ ಇತ್ತಲಾಗ ಕನ್ಯಾ ಒಲ್ಲೆ ಅನ್ನಲಿಕ್ಕೆ ಬರಂಗಿಲ್ಲಾ, ಅಪರೂಪಕ್ಕ ಸಿಕ್ಕದ್ದ ಕನ್ಯಾ, ಅದರಾಗ ಇವರ ಮನಿ top management ಅಂತೂ ’ನೀ ಸುಮ್ಮನ ಬಾಯಿ ಮುಚಗೊಂಡ ಲಗ್ನಾ ಮಾಡ್ಕೋಕೊ, ಆ ಹುಡಗಿ ಹೂಂ ಅಂದಿದ್ದ ಗ್ರೇಟ್’ ಅಂತ ಎಂಗೇಜಮೆಂಟ್ ಡೇಟ್ ಬ್ಯಾರೆ ಫಿಕ್ಸ್ ಮಾಡಿ ಬಿಟ್ಟಾರ. ಅದರಾಗ ನಮ್ಮ ರಾಜಾ ಮೊದ್ಲ ರಾಜಾ ಮನಷ್ಯಾ ತಿಳದಾಗ ಏಳೋಂವಾ, ತಿಳದಾಗ ಸ್ನಾನ, ಸಂಧ್ಯಾವಂದನಿ, ಒಂದಕ್ಕೂ ಟೈಮ ಇಲ್ಲಾ schedule ಇಲ್ಲಾ, ನಮ್ಮ ಗತೆ ಮಹಾ ಮುಗ್ಗಲಗೇಡಿ. ಇನ್ನ ಹಂತಾವ ಹಿಂಗ ISO standard ಹುಡಗಿನ್ನ ಕಟಗೊಂಡ ಹೆಂಗ ಸಂಸಾರ ಮಾಡ್ತಾನೋ ಏನೊ ಆ ದೇವರಿಗೆ ಗೊತ್ತ.
ಅಲ್ಲಾ, ಹಂಗ ಈ ಗಂಡಂದರಿಗೂ ಯಾರರ ISO ಕೊಡ್ತಾರೇನ? ಯಾಕಂದರ ಇವತ್ತ ಈ ಕನ್ಯಾಗೊಳ ಡಿಮಾಂಡ್ ನೋಡಿದರ ನಾಳೆ ನಂಗ ISO standard ಗಂಡನ ಬೇಕು ಅವಂಗ ISI Hallmark ಇರಬೇಕು ಅಂತ ಗಂಟ ಬಿದ್ದರ ಏನ ಮಾಡೋದು. ಅಲ್ಲಾ ಹಂಗ ಜಗತ್ತಿನಾಗ ಎಲ್ಲಾದಕ್ಕೂ ಒಂದೊಂದ standard ಮಾಡ್ಯಾರ ಅಂದಮ್ಯಾಲೆ ನಾಳೆ ಈ ಗಂಡಂದರಿಗೆ ಮಾಡಲಾರದ ಇರ್ತಾರ?
ಹೋಗಲಿ ಬಿಡ್ರಿ ನಾವ ಯಾಕ ಅಷ್ಟ ತಲಿಕೆಡಸಿಗೊಳ್ಳೊದು, ನಂಬದಂತು ISO/ISI ಇಲ್ಲದ ಮದುವಿ ಆಗಿ ಬಿಟ್ಟದ. ಇನ್ನ ಮುಂದ ಮದ್ವಿ ಮಾಡ್ಕೋಳೊರ ಅದರ ಬಗ್ಗೆ ತಲಿಕೆಡಸಿಗೊ ಬೇಕ ಇಷ್ಟ.
ಅನ್ನಂಗ ನಮ್ಮ ರಾಜನ್ನ ಎಂಗೇಜಮೆಂಟ್ ಡೇಟ ಅಕ್ಟೋಬರ ೧೪ಕ್ಕ ಫಿಕ್ಸ್ ಆಗೇದ, ಅವತ್ತ ಯಾಕ ಹೇಳ್ರಿ…ಯಾಕಂದರ ಅವತ್ತ world standard day ಅಂತ ಅವನ ಹೆಂಡ್ತಿ ಅವತ್ತ ಇಟಗೊಂಡಾಳ.
ಏನ್ಮಾಡ್ತೀರಿ ಈ ಪರಿ ಸ್ಟ್ಯಾಂಡರ್ಡ್ ಹೆಣ್ಣಮಗಳಿಗೆ? ನಾಳೆ ಮದುವಿ ಆದಮ್ಯಾಲೆ ರಾಜಾನ ಹೆಣೇಬರಹ ಏನ ಅದನೋ ಏನೋ?
eom/-

Leave a Reply

Your email address will not be published. Required fields are marked *

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ