ವಿದ್ಯುದ್ದಾಲಿಂಗನಕೆ’ ಸಿಕ್ಕಿದೆ ಜೀವಾ…….. ಸಾಯಲಿಕ್ಕೂ ಕರೆಂಟ ಇಲ್ಲಾ

ನಿನ್ನೆ ರಾತ್ರಿ ಮಲಕೋಬೇಕಾರ ನನ್ನ ಹೆಂಡತಿ ಮಾರಿ ನೋಡಿ ಮಲ್ಕೋಂಡಿದ್ದೇನೋ ಏನೋ ? ನಡ ರಾತ್ರ್ಯಾಗ ಗಬಕ್ಕನ ಎಚ್ಚರ ಆತು. ಕಿವ್ಯಾಗ ಗುಂಗಾಡ ಗುಂಯ್ಯ ಅನ್ನಲಿಕತ್ತಿದ್ವು, ಸುಡಗಾಡ ಕರಂಟ ಯಾವಾಗೋ ಹೋಗಿ ಫ್ಯಾನ ಬಂದ ಆಗಿತ್ತು. ಒಂದ ಕಡೆ ಗೊಡೆ, ಒಂದ ಕಡೆ ಹೆಂಡತಿ, ನಡಕ ನಾ ಸಿಕ್ಕೊಂಡ ಸಾಯಲಿಕತ್ತಿದ್ದೆ. ಬೆಳಕಾಗೋದನ್ನ ಕಾಯಕೋತ ಅಂಗಾತ ಬಿದ್ದೆ,
ಅಂತೂ ಬೆಳಕಾತ, ಹೀಂಗ ಬಾಥರೂಮ ಒಳಗ ಇನ್ನೇನ ಮುಂಜಾನಿ ಕಾರ್ಯಕ್ರಮ ಮುಗಸಬೇಕ ಅನ್ನೊದ್ರಾಗ ನೀರ ಬಂದಾತು
“ಲೇ ಕರೆಂಟ ಬಂದಾವ ಏನ ನೋಡ, ನೀರ ಮ್ಯಾಲೇ ಏರಸ, ಇಲ್ಲಾ ಒಂದ ತಂಬಗಿ ನೀರರ ಹಾಕ ಬಾ ” ಅಂತ ನನ್ನ ಹೆಂಡತಿಗೆ ಒದರಿದೆ .
ನನ್ನ ಪುಣ್ಯಾಕ್ಕ ಕರೆಂಟ ಬಂದಿತ್ತು , ಯಾರು ನೀರ ಹಾಕೋ ಪ್ರಸಂಗ ಬರಲಿಲ್ಲ.
ಹಾಳ ಕರೆಂಟ ಯಾವಾಗ ಇರ್ತದ ಯಾವಾಗ ಇಲ್ಲಾ ಗೊತ್ತ ಆಗಂಗಿಲ್ಲಾ ಅಂತ ಬೈಕೋತ ಸ್ನಾನ ಮಾಡಿ ತಿಂಡಿ ತಿನ್ನಲಿಕ್ಕೆ ಕೂತೆ. ಇಡ್ಲಿಗೆ ತುಪ್ಪಾ ಸಕ್ಕರಿ ಹಚ್ಚಿ ಹಾಕಿದರು.
” ಇದೇನಲೇ ಚಟ್ನಿ-ಗಿಟ್ನಿ ಮಾಡಿಲ್ಲಾ ಏನ್ ” ಅಂತ ವದರಕೊಂಡೆ .
” ಎಲ್ಲಿ ಚಟ್ನಿ, ಕರೆಂಟ ಇದ್ದರ ಅಲಾ ಚಟ್ನಿ ಮಿಕ್ಸಿಗೆ ಹಾಕೋದು, ಈಗ ಮತ್ತ ಕರೆಂಟ ಹೋಗೇದ, ನಾನರ ಏನ ಮಾಡಲೀ ” ಅಂತ ಒಳಗಿನಿಂದ ನನ್ನ ಹೆಂಡತಿ ಒದರಿದ್ಲು.
ಏನ ಬಂತಪಾ ಹಣೇ ಬರಹ, ಗುಂಡಕಲ್ಲನಂತಾ ಹೆಂಡತಿಗೆ ಕೈಲೆ ಚಟ್ನಿ ರುಬ್ಬಿ ಹಾಕಲಿಕ್ಕೂ ಆಗಂಗಿಲ್ಲಾ ಅಂತ ಸುಮ್ಮನ ಬಾಯಿ ಮುಚಗೊಂಡ ತಿಂದ ಆಫೀಸಗೆ ಹೋಗಲಿಕ್ಕೆ ಅರಬಿ ಹಾಕೋಳಿಕ್ಕೆ ಹೋದರ ಅರಬಿ ಇಸ್ತ್ರಿ ಆಗಿದ್ದಿಲ್ಲಾ. ಯಾಕ ಅಂತ ಏನ ಕೇಳಲಿಲ್ಲಾ, ಪಾಪ ‘ಕರೆಂಟ ಇದ್ದರ ಹೌದಲ್ಲೋ ಅಕಿ ಇಸ್ತ್ರಿ ಮಾಡೋದು?’ ಎಲ್ಲಾದಕ್ಕು ಕರೆಂಟ ಬೇಕ ಅಲಾ.
” ಕರೆಂಟ ಇದ್ದಾಗ ಎಲ್ಲಾ ಕೆಲಸಾ ಮದ್ಲ ತಲಿ ಓಡಿಸಿ ಮಾಡ್ಕೋಬೇಕು ” ಅಂದೆ.
” ಅದನ್ನ ಮದ್ಲ ನಿಮ್ಮ ಸರ್ಕಾರದವರಿಗೆ ಹೇಳರಿ. ಅವರ ತಲಿ ಓಡಿಸಿ ಛಂದಾಗಿ ಇದ್ದದ್ದ ಕರೆಂಟ ಪ್ಲ್ಯಾನ ಮಾಡಿದ್ದರ ಇಷ್ಟ ಯಾಕ ಆಗತಿತ್ತು ?” ಅಂದ್ಲು.
ಅದು ಖರೇನ ಅನಸ್ತು. ‘ಹಿರೇ ಅಕ್ಕನ ಚಾಳಿ ಮನಿ ಮಂದಿಗೆಲ್ಲಾ’ ಅಂತಾರಲ ಹಂಗ, ಮ್ಯಾಲೆ ಶೋಭಕ್ಕನ ಪ್ಲ್ಯಾನ ಮಾಡವಳ್ಳು ಇನ್ನ ನಮ್ಮಕಿ ಮಾಡತಾಳಾ? ಸುಮ್ಮನ ಇದ್ದದ್ದರಾಗ ಛಲೋ ಮಡಚಿ ಇಟ್ಟಿದ್ದ ಅರಬಿ ಹಾಕ್ಕೊಂಡ ಫ್ಯಾಕ್ಟರಿ ದಾರಿ ಹಿಡದೆ.
ನಮ್ಮ ಫ್ಯಾಕ್ಟರಿ ಮುಂದ ಯಾಕೋ ೮-೧೦ ಕೆಲಸಗಾರರ ಸೇರಿದ್ರ, ಹಂಗರ ಇವತ್ತ ಏನರ ಸ್ಟ್ರೈಕ ಇರಬೇಕು ಅಂತ ಖುಶಿಲೇ
“ಯಾಕಲೇ ಸಂಕ್ರಮಣ ಬೋನಸ್ ಸಂಬಂಧ ಧರಣಿ ಹೂಡಿರೇನ? ” ಅಂತ ಕೇಳಿದೆ
“ಎಲ್ಲಿ ಧರಣಿರಿ ಸರ್, ನಮ್ಮ ಮಶಿನ್ ಶಾಪ್ ಪ್ರಭ್ಯಾಗ ರಾತ್ರಿ ಪಾಳೆದಾಗ ಕೆಲಸ ಮಾಡಬೇಕಾರ ಶಾಕ್ ಹೊಡದೈತಿ, ಕೆ.ಎಮ್.ಸಿ ಒಳಗ ಸಾಯಕತ್ತಾನ ” ಅಂದರು .
” ಅಲಾ ಇವನ , ಇಂವಾ ರಾತ್ರಿ ಶಿಫ್ಟನಾಗ ಬರೇ ಮಲಕೊತಾನ ಅಂತ ಕಂಪ್ಲೆಂಟ್ ಇತ್ತ, ಎಲ್ಲಾ ಬಿಟ್ಟ ನಿನ್ನೆ ಯಾಕ ಕೆಲಸ ಮಾಡಾಕ ಹೋಗಿದ್ದಾಲೇ?”
” ಯಾವಾಂಗ ಗೊತ್ರಿ ಸರ್, ನಸೀಕಲೇ ಲೈಟ್ ಬಂದ ಮಾಡಾಕ ಹೋಗಿ ನಿದ್ದಿ ಗಣ್ಣಾಗ ಇಡಿ ಕಂಟ್ರೋಲ್ ಪ್ಯಾನೆಲಗೇ ಕೈ ಹಾಕ್ಯಾನ ”
” ಅಯ್ಯೋ ಪಾಪ, ಈಗ ಮಣ್ಣ ಎಷ್ಟ ಗಂಟೆಕ್ಕ ಇಟಗೊಂಡಾರ ? ” ಅಂತ ಕೇಳಿದೆ.
” ಅಂವಾ ಇನ್ನೂ ಸತ್ತಿಲ್ಲರಿ ಸರ್, ಪುಣ್ಯಾಕ ಕರೆಂಟ ಸಿಂಗಲ್ ಫೇಸ್ ಆಗಿತ್ತ ಹಿಂಗಾಗಿ ಉಳಕೊಂಡಾನ , ೩ ಫೇಸ್ ಇದ್ದರ ಗೊಟಕ್ ಅಂತಿದ್ದಾ ಅಂತ ಡಾಕ್ಟರ್ ಹೇಳಿದ್ರು ” ಅಂದರು.
ಏನಮಾಡ್ತೀರಿ, ಒಂದ ಮುಂಜಾನಿಂದ ಕರೆಂಟ ಇಲ್ಲಾ ಅಂತ ಹೋಯ್ಕೊಂಡ, ಸರ್ಕಾರಕ್ಕ , ಪಾಪ ನಮ್ಮ ಶೋಭಕ್ಕಗ ಬೈಕೋತ ಬಂದೆ. ಆದ್ರ ಇವತ್ತ ಕರೆಂಟ ೩ ಫೇಸ್ ಇಲ್ಲದ್ದಕ್ಕ ನಮ್ಮ ಪ್ರಭ್ಯಾ ಉಳ್ಕೊಂಡಾ.
ಇವತ್ತ ಕರೆಂಟ ಇಲ್ಲಾ ಅಂದ್ರ ಜೀವನದಾಗ ಬದುಕಲಿಕ್ಕೆ ಇಷ್ಟ ಅಲ್ಲಾ ಕೆಲವಮ್ಮೆ ಸಾಯಲಿಕ್ಕೂ ಆಗಂಗಿಲ್ಲಾ. ಅಕಸ್ಮಾತ ಯಾರರ ಬೆಂಗಳೂರ ಹಂತಾ ಊರಾಗ ಸತ್ತರು ಅಂತ ತಿಳ್ಕೋರ್ರೀ, ಒಮ್ಮೋಮ್ಮೆ ಸುಡಲಿಕ್ಕೂ ಕರೆಂಟ ಇರಂಗಿಲ್ಲಾ. ಮತ್ತ ನೀವ ಕಟಗಿ-ಚಿಮಣಿ ಎಣ್ಣಿ ಆರಿಸಿಕೊಂಡ ಬಂದ ಬೆಂಕಿ ಹಚ್ಚಬೇಕ.
ಏನೂ ಮಾಡಲಿಕ್ಕೆ ಬರಂಗಿಲ್ಲಾ, ಎಲ್ಲಾ ನಮ್ಮ ಹಣೇಬರಹ. ಇದ ಹಿಂಗ ಮುಂದವರದರ ಮುಂದಿನ ಸರತೆ ಇಲೆಕ್ಷನ್ನಾಗ ಜನಾ ಸರ್ಕಾರಕ್ಕ ಶಾಕ್ ಕೊಡೊದು ಗ್ಯಾರಂಟಿ. ಒಮ್ಮೆ ಸರ್ಕಾರನೂ ಮಂದಿ ಕಡೆ ಕರೆಂಟ ಹೋಡಿಸಿಗೊಂಡ ಸಿಂಗಲ್ ಫೇಸ್ ಆಗಲಿ, ಆಮೇಲೆ ಎಲ್ಲಾ ದಾರಿಗೆ ಬರ್ತದ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ