ಸೆನ್ಸೆಕ್ಸ ಬಿತ್ತ್………ಇವನ ಶುಗರ್ ಎತ್ತ್

ನಾಳೆ ಗಣಪತಿ ಹಬ್ಬ, ನಮ್ಮ ಎಲ್ಲಾ ಹುಬ್ಬಳ್ಳಿ ಹಳೇ ದೋಸ್ತರಿಗೆ ತಮ್ಮ ಊರು, ಅವ್ವಾ-ಅಪ್ಪಾ, ಹಳೇ ದೋಸ್ತರು ,ತಮ್ಮ ಹಳೇ ಓಣಿ, ತಮ್ಮ ಮಾಜಿ ಇವೆಲ್ಲಾ ನೆನಪಾಗೋದ ಹಿಂತಾ ಹಬ್ಬ ಬಂದಾಗ ಇಲ್ಲಾ ಅವರ ಪೈಕಿ ಯಾರರ ಇಲ್ಲೇ ಗೊಟಕ್ ಅಂದಾಗ. ಇಲ್ಲಾಂದರ ಇಲ್ಲೇನ ಅದ ಹುಬ್ಬಳ್ಯಾಗ ಮಣ್ಣು ಅಂತ ದೊಡ್ಡ-ದೊಡ್ಡ ಊರಾಗ ದೊಡ್ಡ ನೌಕರಿ ಹಿಡದ ಕಿಸೆತುಂಬ ಪಗಾರ, ಮ್ಯಾಲೆ ಅಪಾರ್ಟಮೆಂಟನಾಗ ಒಂದ ಮನಿ, ಬುಡಕ ನಾಲ್ಕ ಗಾಲಿ ಕಾರು, ಬಗಲಾಗ ಒಂದ ಹೆಂಡತಿ, ಹೊರಗ ಒಂದ ಸ್ಟೆಪಣಿ ( ಕಾರಿನ ಗಾಲಿಗೆ ಮತ್ತ ) ಇಷ್ಟ ಕಟಗೊಂಡ ಲೈಫ ಒಳಗ ಸೆಟ್ಲ ಆಗೇವಿ ಅಂತ ಇದ್ದವರ ಭಾಳ ಮಂದಿ , ನಮ್ಮ ದೋಸ್ತರ ಒಳಗ ನನ್ನಂತಾ ಒಂದ ನಾಲ್ಕ-ಐದ ಮಂದಿ ದೊಡ್ಡ ಊರಾಗ ಒಂದ ದೊಡ್ಡ ನೌಕರಿ ಹಿಡಿಲಾರದ (ಸಿಗಲಾರದ), ಹುಟ್ಟ ಊರು , ಹಡದ ತಂದಿ -ತಾಯಿ ಅಂತ ಅವರನ್ನ ಬಿಡಲಾರದ ಇಲ್ಲೇ ಒಂದ ಕಟಗೊಂಡ, ಎರಡ ಹಡದ, ಮೂರಕ್ಕ ಇಳಿಲಾರದ – ನಾಲ್ಕಕ್ಕ ಏರಲಾರದ ಹುಬ್ಬಳ್ಳ್ಯಾಗ ನಮ್ಮ ಸರ್ವಸ್ವ ಅಂತ ಜೀವನ ನಡಸಲಿಕ್ಕತ್ತೇವಿ.
ನಮ್ಮ ಹಂಗ , ನಮ್ಮ ಜೋತಿನ ಹುಬ್ಬಳ್ಳಿ ಸೆಟ್ಲಮೆಂಟ ಸರ್ಕಾರಿ ಸಾಲ್ಯಾಗ ಕಲತ ಇವತ್ತ ದೊಡ್ಡ ನೌಕರಿ ಹಿಡದ ‘ಏನೋ ಬೆಂಗಳೂರಾಗ ಹುಟ್ಟಿ ಬೆಳೆದವರಗತೆ ‘ “ಏನ ಕಣೋ, ಹೇಗಿದ್ದಿಯಮ್ಮಾ, ಮನೆಯಲ್ಲಿ ಎಲ್ಲಾ ಸೌಖ್ಯಾನಾ?” ಅಂತೇಲ್ಲಾ ಬುಕನಾಗ್ ಬರದಂಗ ಮಾತಾಡೋ ಭಾಳ ಮಂದಿ ಗೆಳೆಯಾರ ಒಳಗ ನಮ್ಮ ರಾಘ್ಯಾನೂ ಒಬ್ಬಾಂವ. ವರ್ಷಾ ರಾಯರ ಆರಾಧನಿಗೆ ‘ಮಠದ ಹುಳಿ’ ಉಣ್ಣಲಿಕ್ಕೆ ಬರೊಂವಾ ಈ ಸಲ ಬಂದಿದ್ದಿಲ್ಲಾ, ಹಂಗರ ಗಣೇಶಚೌತಿಗರ ಬರತಾನೊ ಇಲ್ಲೋ ಕೇಳೋಣ ಅಂತ ಫೋನ್ ಹಚ್ಚಿದೆ. ಮೂರ ಸಲ ರಿಂಗ್ ಆಗಿ ಕಟ್ಟ ಆತು, ಯಾರೂ ಎತ್ತಲಿಲ್ಲಾ, ಅದರಾಗ ಇವತ್ತ ರಮ್ಜಾನ ಸೂಟಿ ಬ್ಯಾರೆ, ಬಹುಶಃ ಇನ್ನೂ ಹೆಂಡತಿ ಬುರಕಾದಾಗ ಮಲ್ಕೊಂಡಿರಬೇಕ ಬಿಡು ಅಂತ ಬಿಟ್ಟೆ. ಮುಂದ ಸ್ವಲ್ಪ ಹೊತ್ತಿಗೆ ಅಲ್ಲಿಂದನ ಫೋನ್ ಬಂತು, ಎತ್ತಿದರ ಅವನ ಹೆಂಡತಿ ಮಾತಾಡಿದ್ಲು,
” ಯಾಕವಾ ಎಲ್ಲಿ ಹೊಗ್ಯಾನಾ ನಿನ್ನ ಗಂಡ, ಹೆಂಡತಿ ಜೊತಿ ಮೂಬೈಲು ಮರತು ಹೋಗ್ಯಾನ ಎನ್?” ಅಂದೆ.
“ಇಲ್ಲಾರೀ ಹಾಗೇನ ಇಲ್ಲಾ ,ಅವರಿಗೆ ಸ್ವಲ್ಪ ಹುಷಾರ ಇಲ್ಲಾ ಆಸ್ಪತ್ರೆಯಲ್ಲಿ ಅಡ್ಮಿಟ್ಟ ಆಗಿದಾರೆ” ಅಂತ ಅಗ್ದಿ ಈಕಿನೂ ಬೆಂಗಳೂರ ಬಮ್ಮಸಂದ್ರದಾಗ ಹುಟ್ಟಿದವರ ಗತೆ ಕಸ್ತೂರಿ ಕನ್ನಡದಾಗ ಹೇಳಿದ್ಲು,
“ಅರೇ ಏನಾತ ಒಮ್ಮಿಂದೊಮ್ಮೆಲೆ, ಒಂದ ತಿಂಗಳ ಹಿಂದ ಮಾತಾಡಿದಾಗ ‘ಪಟಾಯಾ-ಮಲೇಶಿಯಾ’ಕ್ಕ ಮಸಾಜ ಮಾಡಿಸಿಗೊಳ್ಳಾಕ ಹೊಂಟೇನಿ ಅಂತಿದ್ದಾ” ಅಂದೆ.
ಇಷ್ಟ ಅಂದಿದ್ದ ತಡಾ ಸೀದಾ ಅವನ ಹೆಂಡತಿ ಬಮ್ಮಸಂದ್ರದಿಂದ ತನ್ನ ಬೈಲಹೊಂಗಲ ಮಾತೃ (ತವರಮನಿ) ಭಾಷಾಕ್ಕ ಬಂದ ಇಳದಳು.
” ಹೂಂ, ಮಾಡಿಸ್ಕೊತಾನ ಮಸಾಜ , ಮನ್ಯಾಗ ನಾ ಮಾಡಿದ್ದ ಸಾಕಾಗಲಾರದ ಊರಮಂದಿ ಕಡೆಯಲ್ಲಾ ಮಾಡಿಸ್ಕೊಂಡ, ಬಿ.ಪಿ, ಶುಗರ್ ಏರಿಸಿಕೊಂಡ ಈಗ ದವಾಖಾನ್ಯಾಗ ನರ್ಸಗೊಳ ಕಡೆ ಮಾಡಿಸಿಗೊಳ್ಳಿಕತಾನ” ಅಂತ ತನ್ನ ಬಿ.ಪಿ. ಏರಿಸಿಕೊಂಡ ಹೇಳಿದ್ಲು.
ನಾ ಒಮ್ಮಿಂದೊಮ್ಮೆಲೆ ಗಾಬರಿ ಆದೆ, ರಾಘ್ಯಾಗ ಶುಗರ್ ಇದ್ದದ್ದ ನನಗ ಗೊತ್ತಿದ್ದಿದ್ದಿಲ್ಲಾ, ಅವಂಗ ಸಿಹಿ ಕಂಡ್ರ ಮೊದ್ಲಿಂದ ಅಷ್ಟ-ಕಷ್ಟ. ‘ನಂದ ಇನ್ನೂ ಉಪ್ಪು, ಖಾರಾ,ಹುಳಿ ತಿನ್ನೋ ವಯಸ್ಸು ಅಂತ’ ಮನ್ಯಾಗಿಂದ ತಿಂದ ಸಾಲಲಾರದ ವಾರಕ್ಕ ಎರಡ ಸಲಾ ಹೊರಗು ತಿಂದ ಚಟಾ ತೀರಿಸಿಕೊಳ್ಳೋ ಮಗಾ, ಅವಂಗ ಅದ ಹೆಂಗ ಶುಗರ್ ಬಂತು , ಯಾಕ ಬಂತು ಅಂತಾ ವಿಚಾರ ಮಾಡ್ಲಿಕತ್ತೆ, ಅವನ ಹೆಂಡತಿಗೆ ಬಂದಿದ್ದರ ಬಹುಶ್: ಎರಡನೇದ ಬಸರ ಇರಬಹುದು ಅದಕ್ಕ ಬಂದಿರಬಹುದು ಅನ್ಕೊಬಹುದಿತ್ತು. ಆದರ ಇವಂಗ ಯಾಕ ಬಂತು ? ವಯಸ್ಸ ನೋಡಿದ್ರ ನನಕಿಂತ ಒಂದ ವರ್ಷ ಇಷ್ಟ ದೊಡ್ಡಾಂವ ,ಇನ್ನ ಅವಂಗ ಜೀವನದಾಗ ಸಿಹಿ ಅಂದರ ಅವನ ಹೆಂಡತಿ ಉಪ್ಪಾ ಇಷ್ಟ ಗತಿ ಆತು ಅನಸ್ತು.
” ಅಲ್ಲವಾ ಏನ ಒಮ್ಮಿಂದೊಮ್ಮೆಲೆ ಶುಗರ್ ಬಂತು , ಸ್ವಲ್ಪ ಮನ್ಯಾಗಿನ ಪ್ರೀತಿ ಕಡಿಮೆ ಮಾಡಬೇಕಿಲ್ಲೊ”
” ಎಲ್ಲಿ ಪ್ರೀತಿ , ಅಂವಾ ನನ್ನ ಕೈಯಾಗ ಸಿಕ್ಕರ ಹೌದಲ್ಲೋ ಪ್ರೀತಿ ಮಾಡೋದು , ೨೪ ತಾಸು ತಲ್ಯಾಗ ಆ ಸುಡಗಾಡ ಶೇರ ಮಾರ್ಕೇಟ ತುಂಬಿರತದ , ಮನ್ನೆ ಮಾರ್ಕೇಟ ದಬ ದಬಾ ಅಂತ ಬಿಳಲಿ ಕತ್ತಲಾ ಆವಾಗ ಇವನ ಎದಿ ಡಬ -ಡಬಾ ಅಂತ ಬಡ್ಕೋಳ್ಳಿಕತ್ತು. ಅದರದ ಟೆನ್ಶನ್ ತೊಗಂಡ ಸ್ಟ್ರೆಸ್ ಮಾಡಕೊಂಡ, ಈಗ ಶುಗರ, ಬಿ.ಪಿ. ಬಂದದ , ಮೂರ ದಿವಸ ಐ. ಸಿ. ಯು. ಒಳಗ ಹಾಕಿ ಇನ್ಸುಲಿನ್ ಕೊಟ್ಟ ಮ್ಯಾಲೆ ಸ್ವಲ್ಪ ಕಂಟ್ರೋಲ ಆಗೇದ ” ಅಂತ ಪೂರ್ತಿ ಒಂದ ತಾಸ ಅವಂದ ಲೇಟೆಸ್ಟ ಶೇರ ಮಾರ್ಕೇಟ್ ಕಥಿ ಹೇಳಿದ್ಲು.
ಈಗ ಗೊತ್ತಾತ ನೋಡ್ರಿ ಮಗಂದ ಯಾಕ ಶುಗರ್ ಬಂದದ ಅಂತ. ಸೆನ್ಸಕ್ಸ ೨೦ ಸಾವಿರ ಇದ್ದಾಗ ದುಡದದ್ದನ್ನೇಲ್ಲಾ ಶೇರ ಮಾರ್ಕೆಟನಾಗ ಹಾಕಿ , ಹೆಂಡತಿಗೆ ‘ನೀನ ಮನ್ಯಾಗ ಬಂಗಾರದಂಗ ಇದ್ದಿ’ ಅಂತ ಸುಳ್ಳ ಹೇಳಿ,’ನಿನ್ನ ಬಂಗಾರ ಮನ್ಯಾಗ ಇಟ್ಟ ಏನ ಮಾಡತಿ, ಈಗ ರೇಟ ಜಾಸ್ತಿ ಯಾಗೇದ’ ಅಂತ ಅದನ್ನೂ ವತ್ತಿ ಇಟ್ಟ ಬಂದ ರೊಕ್ಕಾನು ಮಾರ್ಕೇಟನಾಗ ಹಾಕಿ,ಸಾಲದ್ದಕ್ಕ ಅಪ್ಪಂದ ಎಫ್.ಡಿ ಮುರಿಸಿ, ಅದನ್ನು ಇನ್ವೆಷ್ಟ ಮಾಡಿ , ಅವನ ಪೆನಶನ್ ಎಸ್.ಐ.ಪಿ (ಸಿಸ್ಟಿಮ್ಯಾಟಿಕ್ ಇನ್ವೆಸ್ಟಮೆಂಟ ಪ್ಲ್ಯಾನ) ಮಾಡಿ ಮಾರ್ಕೆಟ ೨೫ ಸಾವಿರ ಮುಟ್ಟತದ ಅಂತ ಹಗಲ ಕನಸ ಕಾಣತ್ತಿದ್ದ , ಹೋದ ತಿಂಗಳ ೨೦ ಸಾವಿರ ಇದ್ದಿದ್ದ ಸೆನ್ಸೆಕ್ಸ ೧೬ ಸಾವಿರಕ್ಕ ಬಂದದ್ದ ತಡಾ ಇವಂದ ಬಿ.ಪಿ. ಜಾಸ್ತೀ ಆಗಿ ಶುಗರ ಹುಟಗೊಂಡತು. ಇಷ್ಟ ದಿವಸ ಬಿ.ಪಿ. ಅಂದರ ‘ಭಾರತ ಪೆಟ್ರೊಲಿಯಮ,’ ಶುಗರ ಅಂದರ ‘ರೇಣುಕಾ ಶುಗರ’ ಅಂತ ತಿಳಕೊಂಡಿದ್ದಾ. ಇವಂಗ ಈಗ ಗೊತ್ತಾಗಿದ್ದ ತಂದು ಸ್ವಂತ ಬಿ.ಪಿ, ಶುಗರ ಅದ ಅಂತ, ಮಾರ್ಕೆಟನಾಗ ” ರೇಣುಕಾಶುಗರ” ಆಲ್ ಟೈಮ್ “ಲೊ” ಆದಾಗ ಇವಂದ ಶುಗರ ಲೈಫ್ ಟೈಮ್ “ಹಾಯ್” ಆಗಿತ್ತು. ಇವಂದ ಮೊದ್ಲಿಂದ ಶೇರ ಮಾರ್ಕೇಟ ಚಟಾ, ಹಿಂದ ಸೆನ್ಸೆಕ್ಸ ೫೦೦೦ ಇದ್ದಾಗ ೧೦೦೦೦ ರೂ ಇನ್ವೆಷ್ಟ ಮಾಡಿದ್ದಾ, ಐದ ವರ್ಷದಾಗ ಆದು ಒಂದ ಲಕ್ಷ ಆಗಿತ್ತು. ಅದನ್ನು ನೋಡಿ ಇದ್ದ ಬಿದ್ದದ್ದನ್ನೇಲ್ಲಾ ಮಾರ್ಕೇಟನಾಗ ಹಾಕೋತ್ತ ಹೊಂಟಿದ್ದಾ, ಇದರಾಗ ಎಷ್ಟಗಳಸ್ಯಾನೋ, ಎಷ್ಟಕಳಕೊಂಡಾನೋ ಆ ದೇವರಿಗೆ ಗೊತ್ತು ಇಲ್ಲಾ ಅವನ ಬ್ರೊಕರ್ ಗೆ ಗೊತ್ತು.
ಇತ್ತೀಚಿಗೆ ಅಂತೂ ಮಾತಾಡಿಸಿದ್ರ ಮಾರ್ಕೇಟ ಮೈಯಾಗ ಬಂದೊರಗತೆ ಮಾತಾಡ್ತಿದ್ದಾ. ಎನ ಸಾಮಾನ ತೊಗೊಂಡ್ರು ತಾ ಇನ್ವೆಸ್ಟ ಮಾಡಿದ್ದ ಕಂಪನಿದ ತೊಗೊಳೊಂವಾ. ಹಾಯ್ ಸ್ಕೂಲನ್ಯಾಗ ಇದ್ದಾಗ ಅವರಪ್ಪನ ಬೀಡಿ ಕದ್ದ ಸೇದೊಂವಾ ‘ಐ.ಟಿ.ಸಿ.’ ಶೇರ ತಗೊಂಡ ಮ್ಯಾಲೇ ಐ.ಟಿ.ಸಿ. ಕಿಂಗ್ ಸೇದಲಿಕತ್ತಾ , ದಿವಸಕ್ಕ ಎರಡ ಸೇದೊಂವಾ ಇವತ್ತ ‘ಐ. ಟಿ. ಸಿ.’ ಶೇರ ರೇಟ ಏರಿದಾಗ ಒಂದು ,ಇಳಿದಾಗ ಒಂದು ಅಂತ ಒಂದೂವರಿ ಪ್ಯಾಕಿಗೆ ಬಂದಾನ, ಮಾರ್ಕೆಟ ಏಳಲಿ ಬಿಡಲಿ ದಿವಸಕ್ಕ ಇವಂಗ ದಿಡ ಪ್ಯಾಕೇಟ ಬೇಕ, ಮಾರ್ಕೆಟ ಏರಿದರ ಖುಷಿಯೋಳಗ ಜಗ್ಗತಾನ ಇಳದರ ನಾಳೆ ಏರತದ ತಗೋ ಅಂತ ಹಚ್ಚತಾನ, ದಿನಕ್ಕ ಒಂದ ಇಪ್ಪತ್ತ ಸಲಾ ‘ಲಿಪ್ಟನ’ ಚಹಾ, ರಾತ್ರಿ ಆದರ ‘ಕಂಟ್ರಿ ಕ್ಲಬ್’ ಡಿಮ್ ಲೈಟನಾಗ ‘ಯುನೈಟೆಡ್ ಬೆವರೆಜಿಸ್’ ತೊಗಂಡ ನಾಲ್ಕ ಮಂದಿ ತನ್ನ ಹಂತಾವರನ ಕರಕೊಂಡ ಅವತ್ತಿನ ಮಾರ್ಕೆಟ ಅನಲೈಸೀಸ್, ನಾಳಿ ಮಾರ್ಕೆಟಿಂದ ಪ್ರೆಡಿಕ್ಶನ್ ಶುರು, ಇದ ದಿನಂ ಪ್ರತಿ ಆದರ ಆರೋಗ್ಯ ಹೆಂಗ ನೆಟ್ಟಗ ಇರತದ. ಇವತ್ತ ಹೆಲ್ತ ಹದಗೆಟ್ಟ ಎದ್ಯಾಗ ಹದಗಡ್ಲಿ ಆಗ್ಯಾವ.
ದಾವಾಖಾನಿಗೆ ಒಯ್ಯ ಬೇಕಾರ ” ನನಗ ‘ಅಪೊಲೊ’ ದಾಗ ಅಡ್ಮಿಟ ಮಾಡರಿ, ನನ್ನ ಕಡೆ ಅದರ ಶೇರ ಅದಾವ” ಅಂದನಂತ. ಡಾಕ್ಟರಗೆ ಹೇಳಿ ತನ್ನ ಕಡೆ ‘ಸನ್ ಫಾರ್ಮಾ’ದ ಶೇರ ಅವ ಅಂತ ಆ ಕಂಪನಿದ ಗುಳಿಗಿ ಬರಿಸಿಕೊಂಡ ನುಂಗಿದನಂತ. ಅವನ ಹೆಂಡತಿಗೆ ‘ನೀ ಏನ ಕಾಳಜಿ ಮಾಡಬ್ಯಾಡಾ ನಂದ ಯುನಿಟ ಲಿಂಕಡ ಹೆಲ್ತ ಇನ್ಸುರೆನ್ಸ್ ಅದ’ ಅಂತ ಅಂದನಂತ. ಅದಕ್ಕ ಅಕಿ ‘ಭಾಳ ಶಾಣ್ಯಾ ಇದ್ದಿ, ಮೊದಲ ನಿನ್ನ ಯುನಿಟದ ಹೆಲ್ತ ನೋಡ್ಕೋ’ಅಂದ್ಲಂತ. ಈ ಮಗಾ ಮಾರ್ಕೇಟನಾಗಿನ ಗೂಳಿ ಬೆನ್ನ ಹತ್ತಿ ಕರಡಿ ಕಡೆ ಕಟ್ಟ್ಯಾಡಿಸಿಕೊಂಡ ಈಗ ದಾವಾಖಾನ್ಯಾಗ ಬಿದ್ದಾನ.
ನಾ ಭಾಳ ಸಲಾ ಹೇಳತಿದ್ದೆ ‘ಲೇ ನಿನ್ನ ಕ್ಯಾಪ್ಯಾಸಿಟಿ ನೋಡ್ಕಂಡ ಇನ್ವೆಷ್ಟ ಮಾಡ’ ಶೇರ ಮಾರ್ಕೆಟ ಅಂದರ ಜೂಜಾಟ ಇದ್ದಂಗ, ಮಾರ್ಕೆಟನಾಗ ಟೆಂಪ್ಟ ಆಗಿ ಹೊಸಾ ‘ಇಶ್ಯು’ಕ್ಕ ಬೆನ್ನ ಹತ್ತ ಬ್ಯಾಡಾ. ಮನ್ಯಾಗ ಟೆಂಪ್ಟ ಆಗ, ಇನ್ನೊಂದ ಇಶ್ಯುನರ ಆಗತದ. ಸಾಲಾ ಮಾಡಿ ಇನ್ವೆಷ್ಟ ಮಾಡಬ್ಯಾಡಾ, ನಿನ್ನ ಕಡೆ ಹೆಚಗಿ ದುಡ್ಡ ಇದ್ದರ ಇಷ್ಟ ಮಾಡು, ‘ಪಬ್ಲಿಕ್ ಆಫರ್’ ಬಿಡು ‘ಪರಸನಲ್ ಅಫೇರ’ ನೋಡ್ಕೊ, ಮಾರ್ಕೆಟನಾಗ ಬಿಳೋದು ಬಾಳ ಸುಲಭ ಆದರ ಎದ್ದ ಹೊರಗ ಬರೋದು ತ್ರಾಸ, ಶಾರ್ಟಕಟ್ಟ ನಾಗ ಶ್ರೀಮಂತ ಆಗಲಿಕ್ಕ ಹೋಗಬ್ಯಾಡಾ, ದುಡುದು ಗಳಿಸು, ದುಡಕಿ ಅಲ್ಲಾ, ಅಂತೇಲ್ಲಾ ಇಂವಾ ಹುಬ್ಬಳ್ಳಿಗೆ ಬಂದಾಗ ಒಮ್ಮೆ ಕೂಡಿಸಿ ಕುಡಿಸಿ ಹೇಳತಿದ್ದೆ. ಆದರ ಈ ಮಗಾ ಯಾರ ಮಾತು ಕೇಳೋಹಂಗ ಇದ್ದಿದ್ದಿಲ್ಲಾ, ಇತ್ತಿಚಿಗಂತೂ ತನ್ನ ಸೆಕ್ಸ್ ಅಂದರ ಸೆನ್ಸೆಕ್ಸ ಅಂತ ತಿಳ್ಕೊಂಡ ಬಿಟ್ಟಿದ್ದಾ. ಈಗ ತನ್ನ ಕಡೆ ಇದ್ದದ್ದು, ಬ್ಯಾರೆವರ ಕಡೆ ಸಾಲಾಮಾಡಿ ತಂದದ್ದು , ವತ್ತಿ ಇಟ್ಟ ತಂದದ್ದು ಎಲ್ಲಾ ಶೇರ ಮಾರ್ಕೆಟನಾಗ ಹಾಕಿ ಕಳಕೊಂಡ ಶುಗರ, ಬಿ.ಪಿ. ಗಳಿಸ್ಯಾನ. ಬಿ. ಪಿ. ಅನ್ನೋದು ‘ಇಂಟ್ರಾ ಡೆ’ ಸೆನ್ಸೆಕ್ಸ ಗ್ರಾಫ್ ಆಗೇದ, ಒಂದ ಸರತೆ ಏರತದ, ಒಂದ ಸರತೆ ಇಳಿತದ. ತಂದ ಇ.ಸಿ.ಜಿ ಗ್ರಾಫ್ ನೋಡಿ ‘ಮಾರ್ಕೇಟ’ ಭಾಳ ‘ವೊಲಟೈಲ’ ಅದ ಅಂದನಂತ. ಡಾಕ್ಟರ ಇವಂದ ಬಿ. ಪಿ. ಹಿಂಗ ‘ವೊಲಟೈಲ’ ಆಕ್ಕೋತ ಹೊಂಟರ ಒಂದ ದಿವಸ ಇಂವಾ ‘ಇವಾಪೊರೇಟ್’ ಆಗತಾನ ಅಂತನೂ ಹೇಳ್ಯಾರ ಅಂತ.

ಅಲ್ಲಾ ಇಷ್ಟ ಸಣ್ಣ ವಯಸ್ಸನಾಗ ಶುಗರ, ಬಿ ಪಿ ಬಂದರ ಮುಂದ ಹೆಂಗ ಅಂತೀನಿ, ಇನ್ನೂ ಏನಿಲ್ಲಾ ಅಂದ್ರ ೨೦-೨೫ ವರ್ಷ ಬಾಳಿ ಬದುಕೊ ವಯಸ್ಸು, ಈಗಿಂದನ ‘ಅದನ್ನ ತಿನ್ನಬ್ಯಾಡಾ-ಇದನ್ನ ತಿನ್ನಬ್ಯಾಡಾ’ ಅಂತ ಶುರು ಆದರ ಮುಂದ ಹೊಟ್ಟಿಗೇನ್ ತಿನ್ನ ಬೇಕು ತಿಳಿಲಾರದಂಗ ಆಗತದ. ಅದರಾಗ ಅವನ ಹಂಗ ಚಟಾ ಇದ್ದ ಮಂದಿಗೆ ಅಂತು ಹಿಂಗ ಆಗಿಬಿಟ್ಟರ ಸುಮ್ಮನ ‘ಚಟ್ಟಾ’ ಕಟಕೊಂಡ ಹೋಗೊದು ಛಲೋ ಅಂತ ಅನಸ್ತದ, ಆದರ ಇವತ್ತ ಈ ಪರಿಸ್ಥಿತಿ ತಂದಕೊಂಡವರು ನಾವ ಅನ್ನೋದನ್ನ ಮರಿಬಾರದು. ’ ಹಾಸಿಗೆ ಇದ್ದಷ್ಟು ಕಾಲ ಚಾಚಗೊಂಡು’ ಛಂದಾಗಿ ಸಂಸಾರ ಮಾಡಿ ಬಾಳಿ ಬದಕೋದ ಬಿಟ್ಟ , ದೊಡ್ಡ -ದೊಡ್ಡ ಕನಸ ಬೆನ್ನ ಹತ್ತಿ ಗಳಿಸಿಗೋತ ಹೊಂಟರ ಹೆಲ್ತ್ ಹಳ್ಳಾ ಹಿಡಿಲಾರದ ಮತ್ತೇನಾಗತದ, ಅದಕ ಅಲಾ ದೊಡ್ಡೋರು ‘ಆರೋಗ್ಯವೇ ಭಾಗ್ಯ’ ಅಂತ ಹೇಳಿದ್ದು. ಅದನ್ನ ಬಿಟ್ಟ , ಜೀವನದಾಗ ಇದ ದುಡಿಯೋ ವಯಸ್ಸು ಅಂತ ಕತ್ತಿಗತೆ ಇವತ್ತ ದುಡದರ ಮುಂದ ಅನುಭವಸೋ ವಯಸ್ಸನಾಗ ದೇಹಕ್ಕ ರೋಗ ಮುಕರಿರತಾವ, ಆವಾಗ ಅವನ್ನ ಅನುಭವಸಬೇಕು ಅಷ್ಟ, ಅದು ಅನುಭವಸಲಿಕ್ಕ ನಾವ ಅಲ್ಲಿ ಮಟಾ ಜೀವಂತ ಇದ್ದರ,
ಇವತ್ತ ನಮ್ಮೊಳಗ ನಾವ ಕಲಿಬೇಕಾರ ಇದ್ದದ್ದಕ್ಕಿಂತಾ ಜಾಸ್ತಿ ಸ್ಪರ್ಧಾತ್ಮಕ ಮನೋಭಾವ ಅದ,
” ಅಂವಾ ಕಾರ ತಗೊಂಡಾ…….. ನಾನು ತೊಗಬೇಕು”
” ಅಂವಾ ಬೆಂಗಳೂರಾಗ ಪ್ಲಾಟ ತೊಗೊಂಡಾ………. ನಾ ಹುಬ್ಬಳ್ಯಾಗ ಎರಡರ ತೊಗಬೇಕು”
” ಅಂವಾ ಮನಿಕಟ್ಟಲಿಕ್ಕತ್ತಾನಂತ……….. ನಾನು ಮುಂದಿನ ವರ್ಷ ಪ್ಲ್ಯಾನ ಮಾಡಬೇಕು ”
” ಅವನ ಹೆಂಡತಿ ಗಟಾಯಿಸಿದ್ದ ಮಂಗಳಸೂತ್ರ ಮಾಡಿಸ್ಯಾಳ………. ನಾನು ನಂದ ‘ಘಟಾ’ ಹೋದರು ಅಡ್ಡಿಯಿಲ್ಲಾ ನನ್ನ ಹೆಂಡತಿಗೆ ಗಟಾಯಿಸಿದ್ದ ಮಂಗಳಸೂತ್ರ ಮಾಡಸಬೇಕು ” ಬರೇ ಹಿಂತಾವ ನೋಡಿ ಕಲಿತೇವಿ.
’ ಅಂವಾ ಎರಡ ಹಡದನಾ, ನಾನೂ ಎರಡ ಹಡಿತೇನಿ’……………..ಇಲ್ಲಾ, ಅದನ್ನ ಕೇಳ ಬ್ಯಾಡರಿ
‘ ಅಂವಾ ಅವರ ಅವ್ವಾ-ಅಪ್ಪನ ಬೆಂಗಳೂರಾಗ ತನ್ನ ಜೊತಿನ ಕರಕೊಂಡ ಹೋಗಿ ಇಟಗೊಂಡಾನ ನಾವು ಇಟಗೊತೆವಿ’……ಇಲ್ಲಾ
‘ನಮ್ಮ ಅವ್ವಾ-ಅಪ್ಪಗ ಬೆಂಗಳೂರ ಸೆಟ್ ಆಗಂಗಿಲ್ಲಾ, ಅವರು ಇಲ್ಲೇ ಹುಬ್ಬಳ್ಯಾಗ ಹುಟ್ಟಿ ಬೆಳೆದೋರು, ಇಲ್ಲೇ ಸಾಯೋರು.’
ಜೀವನದಾಗ ನಾವು ಯಾವದನ್ನ ಅನುಸರಿಸಬೇಕು ಅದನ್ನ ಮಾಡಂಗಿಲ್ಲಾ ಯಾವುದು ಬ್ಯಾಡ ಅದನ್ನ ಫಾಲೊ ಮಾಡತೇವಿ. ಈಗ ಅವಂಗ ಡಯಾಬಿಟಿಸ್ ಬಂತು ಅಂತ ನಾವು ಡಯಾಬಿಟಿಸ್ ಮಾಡ್ಕೊಳ್ಳಿಕ್ಕ ಬರತದ ಏನ ? ಇಲ್ಲಾ….. ಭಾಳ ಅಂದರ ನಾವು ಸಕ್ಕರಿ ತಿನ್ನೋದ ಕಡಿಮೆ ಮಾಡತೇವಿ ಅಷ್ಟ, ನಾಳೆ ನಮಗು ಶುಗರ ಬಂದ-ಗಿಂದಿತ್ತು ಅಂತ ಹೇಳಿ, ಅಲ್ಲರಿ ಇವತ್ತ ಇಷ್ಟ ಕಲತ ನಮಗ ಯಾವದಕ್ಕ ಕಾಂಪಿಟೇಶನ್ ಮಾಡಬೇಕು ಯಾವದಕ್ಕ ಬ್ಯಾಡಾ ಅನ್ನೋದ ತಿಳಿಲಾರದಷ್ಟು ಬುದ್ಧಿಗೇಡಿಗಳ ಯಾಕ ಆಗೇವಿ ?
ಈಗಾಗಲೇ ನನ್ನ ದೊಸ್ತರಾಗ ಮೂರ ಮಂದಿ ಮ್ಯಾಲೇ ಹೋಗ್ಯಾರ, ಹಾರ್ಟಫೇಲಾಗಿ. ಇನ್ನೋಂದ ಇಬ್ಬರಿಗೆ ನಿಂಗ ಬ್ಲಾಕ ಅದ ಬೈ ಪಾಸ್ ಮಾಡಿಸಿಗೊ ತಮ್ಮಾ ಅಂತ ಹೇಳ್ಯಾರ. ಒಬ್ಬಾಂವ ಈಗ ಒಂದ ತಿಂಗಳ ಹಿಂದ ಬೆಂಗಳೂರಾಗ ಬೈ ಪಾಸ್ ಮಾಡಿಸಿಕೊಂಡ ಬಂದಾನ, ಮನ್ನೆ ನನಗು ಅಸಿಡಿಟಿ ಆಗಿ ಎದ್ಯಾಗ ಹಿಡದಂಗ ಆದಾಗ ನಂದು ಮುಗಿತು, ಇನ್ನೇನ ಬರೆಯೋದು ಮುಗದಂಗ ಅಂತ ತಿಳ್ಕೊಂಡಿದ್ದೆ. ಆದರ ಹಂಗೇನ ಆಗಲಿಲ್ಲ.
ಏನ ಇದೆಲ್ಲಾ ಅಂತೇನಿ. ಖರೇ ಹೇಳಬೇಕಂದ್ರ ಹಿಂತಾದರ ಬಗ್ಗೆ ವಿಚಾರ ಮಾಡೋ ವಯಸ್ಸು ನಂಬದಲ್ಲಾ ಆದರ ಇವತ್ತ ನಮ್ಮ ಹಾದಿ ತಪ್ಪಿದ್ದ ದೇಹಸ್ಥಿತಿ / ಹತೋಟಿ ಇಲ್ಲದ ಮನಸ್ಥಿತಿ ನಮಗ ಇದನ್ನ ವಿಚಾರ ಮಾಡಸ್ಲಿಕತ್ತದ. ಮನ್ಯಾಗ ನಮಗ ಇನ್ನೂ ಸಣ್ಣ-ಸಣ್ಣ ಮಕ್ಕಳ ಅವ, ನಮ್ಮನ್ನ ಕಟಕೊಂಡ ಬಂದೋಕಿ ಇನ್ನೂ ಇದ್ದಾಳ, ನಮ್ಮನ್ನ ಹಡದ ಅವ್ವಾ-ಅಪ್ಪಾ ಇದ್ದಾರ, ಇನ್ನೂ ಎಷ್ಟೋ ಹೊರಗಿನ ಜವಾಬ್ದಾರಿ ಅವ. ಹಂತಾದ ಇಷ್ಟ ಸಣ್ಣ ವಯಸ್ಸನಾಗ ದೊಡ್ಡ ಜಡ್ಡ ಬಂದ ಬಿಟ್ಟರ ಬದುಕಿನಾಗ ಹತಾಶೆ ಮನೋಭಾವನೆ ಬಂದ ಬಿಡತದ ಅಲಾ?
ಯಾಕ ಇವತ್ತ ನಾವ ಇಷ್ಟ ಮ್ಯಾಟರಿಯಲಿಸ್ಟಿಕ್ ಆಗೇವಿ, ಲೈಫ್ ಯಾಕ ಕಾಂಪ್ಲಿಕೇಟ ಮಾಡ್ಕೊಳ್ಳಿಕತ್ತೇವಿ ಅನ್ನೋದನ್ನ ವಿಚಾರ ಮಾಡಬೇಕು. ಇದ್ದದ್ದರಾಗ ಸುಖ ಪಡಬೇಕ ವಿನಾಃ ಕೈ ಲೇ ಆಗಲಾರದ್ದನ್ನ ಸಾಧಸಲಿಕ್ಕೆ ತಲಿ ಕೆಡಿಸಿಕೊಂಡ ತಳಾ ಸುಟಗೋಬಾರದು. ನಾಳೆ ನಾವ ಇಲ್ಲಾ ಅಂದ್ರ ಈ ಪ್ಲಾಟ್ , ಕಾರು, ಅಪಾರ್ಟಮೆಂಟ ತೊಗಂಡ ಏನ ಮಾಡೋರು? ಹಾಂ .. ಹೆಂಡತಿ ಮಕ್ಕಳರ ಅನುಭವಸ್ತಾರ, ನಾವ ದುಡ್ಯೊದ ಅವರ ಸಂಬಂದ ಅಂತ ಅಂದ್ರ ಅಡ್ಡಿಯಿಲ್ಲಾ, ಆದರ ಅದನ್ನ ನೋಡಲಿಕ್ಕ ನಾವ ಇರಂಗಿಲ್ಲಾ ಇಷ್ಟ. ನಾವು ಇವತ್ತ ಇಷ್ಟ ಕಷ್ಟಾ ಪಟ್ಟ ಮಾಡೋದ ನಾಳೆ ನಾವ ಸತ್ತ ಮ್ಯಾಲೇ ಮನಿ ಮಂದಿ ಅನುಭವಸಲಿಕ್ಕಾ?
ಜೀವನಾನ ಅರ್ಥ ಮಾಡ್ಕೊಳ್ಳಲಾರದ ಅನರ್ಥ ಮಾಡ್ಕೊಂಡ ಜೀವನಾ ವ್ಯರ್ಥ ಮಾಡ್ಕೋಬಾರದು ಅಂತ ನನಗ ಅನಸ್ತದ, ಜೀವನದ ‘ಫ್ಯುಚರ ‘ನಾಗ ಭಾಳ ‘ಆಪ್ಶನ್’ ಅವ, ಅವನ್ನೆಲ್ಲಾ ಬಿಟ್ಟ ಇವತ್ತ ನಾವು ಶೇರ ಮಾರ್ಕೇಟ ‘ಫ್ಯುಚರ ಆಂಡ ಆಪ್ಶನ್’ ಒಳಗ ಸಿಕ್ಕ ಲೈಫು ‘ಎಕ್ಸಪೈರಿ’ಮಾಡ್ಕೋಬಾರದು, ಇವತ್ತ ನಮ್ಮ ಜೀವನದ ಸಣ್ಣ – ಸಣ್ಣ ಖುಶಿಗಳನ್ನೆಲ್ಲಾ ಎಸ್.ಐ.ಪಿ (ಸಿಸ್ಟಿಮ್ಯಾಟಿಕ್ ಇನ್ವೆಸ್ಟಮೆಂಟ ಪ್ಲ್ಯಾನ) ಮಾಡಿ, ನಾಳೆ ವಯಸ್ಸಾದಮ್ಯಾಲೆ ಅವನ್ನ ಎಸ್.ಡಬ್ಲು.ಪಿ (ಸಿಸ್ಟಿಮ್ಯಾಟಿಕ್ ವಿಥಡ್ರಾವಲ್ ಪ್ಲ್ಯಾನ) ಮಾಡ್ಕೊಂಡ ಖುಶಿಲೆ ರಾಮ- ರಾಮ ಅಂತ ನೆಮ್ಮದಿಯಿಂದ ಬದಕ ಬೇಕು ಅಂತ ಅನಸ್ತದ.
ನಿಮಗ ಏನ ಅನಸ್ತದೊ ಅದನ್ನ ನೀವ ಮಾಡ್ರಿ, ಮತ್ತ ನಂದ ಪ್ರಹಸನ ಓದಿ ಟೆನ್ಶನ್ ತೊಗಂಡ ಶುಗರ, ಬಿ.ಪಿ ಮಾಡ್ಕೊಬ್ಯಾಡ್ರಿ ಇಷ್ಟ. ಅನ್ನಂಗ ಮಾರ್ಕೆಟ ತಳಾ ಮುಟ್ಟೇದರಿಪಾ. ಯಾರರ ಇನ್ವೆಸ್ಟ ಮಾಡೋರಿದ್ದರ ಇದ ರೈಟ ಟೈಮ, ಹಾಕ್ರಿ ರೊಕ್ಕಾ ವರ್ಷದಾಗ ಮತ್ತ ಸೆನ್ಸೆಕ್ಸ ೨೦೦೦೦ ಮುಟ್ಟಲಿಲ್ಲಾ ಅಂದ್ರ ಹೇಳ್ರಿ ನನಗ . ರೊಕ್ಕಾ, ರಿಸ್ಕ್, ಬಿ.ಪಿ, ಶುಗರ ಎಲ್ಲಾ ನಿಂಬದನ ಮತ್ತ.

Leave a Reply

Your email address will not be published. Required fields are marked *

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ