ಹಳೆ ಹನಿಮೂನ

ಇವತ್ತಿಗೆ (೨೮.೧೧.೨೦೧೨) ನನ್ನ ಮದುವಿ ಆಗಿ ಕರೆಕ್ಟ ಹನ್ನೇರಡ ವರ್ಷ ಆತ. ಹಂಗ ಈ ಹನ್ನೇರಡ ವರ್ಷದಾಗ ನಾ ಎಷ್ಟ ಸಾಧಸೇನಿ, ಎಷ್ಟ ಸವದೇನ ಅನ್ನೋದ ನನಗ ಗೊತ್ತ. ಆದ್ರೂ ಹನ್ನೇರಡ ವರ್ಷ ಹೆಂಗ ಹೋತ ಗೊತ್ತಾಗಲಿಲ್ಲಾ. ನಾ ವರ್ಷಾ ಅನಿವರ್ಸರಿ ಮುಂದ ನನ್ನ ಮದುವಿದ ಮತ್ತ ಹನಿಮೂನದ್ದ ಅಲ್ಬಮ ತಗದ ನೋಡಿ ಧೂಳಾ ಝಾಡಿಸಿ ಮತ್ತ ಕಪಾಟನಾಗ ಇಡತೇನಿ. ಹಂಗ ಹನ್ನೇರಡ ವರ್ಷದಿಂದ ಹೆಂಡ್ತಿನ್ನ ಇಷ್ಟ ಅಲ್ಲಾ ಅಲ್ಬಮ್ ಸಹಿತ ಕಾಯಕೊಂಡ ಬಂದೇನಿ ಆ ಮಾತ ಬ್ಯಾರೆ.
ಮೊನ್ನೆ ಹನಿಮೂನ ಅಲ್ಬಮ ನೋಡಬೇಕಾರ ಹಳೇದ ಎಲ್ಲಾ ನೆನಪಾದ್ವು ಹಂಗರ ನಿಮ್ಮ ಜೊತಿ ಹಂಚಗೊಂಡರಾತು, ಹೆಂಗಿದ್ದರು ಚಳಿಗಾಲ ಅಂತ ಈ ವಿಷಯ ತಗದೆ ಇಷ್ಟ.
ಹಂಗ ನಾ ಮೊದ್ಲ ಮದವಿಕಿಂತಾ ಜಾಸ್ತಿ ಹನಿಮೂನ ಬಗ್ಗೆನ ಭಾಳ ತಲಿಕೆಡಸಿಕೊಂಡಿದ್ದೆ. ಆವಾಗ ಮಿಡಲ್ ಕ್ಲಾಸ್ ಮಂದಿ ಹನಿಮೂನ ಅಂದರ ನಿರ್ಮಲಾ ಟ್ರಾವೇಲ್ಸ್ ಹನಿಮೂನ ಪ್ಯಾಕೇಜ ಫಿಕ್ಸ್ ಮಾಡೋದು ಮೈಸೂರ-ಊಟಿ-ಕೊಡೈಕೆನೆಲ್ ಹೋಗಿ ಬರೋದ ಅಗದಿ ಕಾಮನ್ ಆಗಿತ್ತ. ಹಿಂಗಾಗಿ ನಾ ಹನಿಮೂನಗೆ ಹೋದರ ಕೇರಳಾ ಇಲ್ಲಾ ನಾರ್ಥ ಇಂಡಿಯಾಕ್ಕ ಹೋಗಬೇಕು ಇಲ್ಲಾಂದರ ಇಲ್ಲಾ ಅಂತ ವಿಚಾರ ಮಾಡಿದ್ದೆ. ಇನ್ನ ನಾರ್ಥ್ ಇಂಡಿಯಾಕ್ಕ ಹೋಗಬೇಕಂದರ ಟ್ರೇನನಾಗ ಹೋಗಲಿಕ್ಕೆ-ಬರಲಿಕ್ಕೆ ಮೂರ-ಮೂರದಿವಸ, ಅರ್ಧಾ ಹನಿಮೂನ ಒಂದs ಬರ್ಥನಾಗ ಮುಗಿತಿತ್ತ. ಇನ್ನ ನಮಗಂತೂ ವಿಮಾನದಾಗ ಹೋಗಲಿಕ್ಕೆ ಕ್ಯಾಪಿಸಿಟಿ ಇಲ್ಲಾ, ಹಾಸಿಗೆ ಇದ್ದಷ್ಟ ಕಾಲ ಚಾಚಬೇಕು ಅದರಾಗ ಈಗ ಮದುವಿ ಬ್ಯಾರೆ ಆಗೇದ ಒಂದ ಹಾಸಾಗ್ಯಾಗ ಇಬ್ಬಿಬ್ಬರ ಕಾಲ ಚಾಚೋರು, ಸುಮ್ಮನ ಇಲ್ಲೇ ಕೇರಳಾಕ್ಕ ಹೋದರಾತು ಅಂತ ಡಿಸೈಡ ಮಾಡಿದೆ.
ಹಂಗರ ನನ್ನ ಜೊತಿ ಮತ್ತ್ಯಾರರ ಬರತಾರೇನು ಅಂತ ಹುಡಕ್ಯಾಡಲಿಕತ್ತೆ. ಅಲ್ಲಾ ಹಂಗ ಹನಿಮೂನಗೆ ಹೆಂಡತಿ ಒಬ್ಬಕಿ ಇದ್ದರ ಸಾಕ ಖರೆ ಆದರ ಇನ್ನೊಂದ ಜೋಡಿ ಜೊತಿಗೆ ಇದ್ದರ ಅಷ್ಟ ಅನಕೂಲ ಆಗ್ತದ, ಮೊದ್ಲ ಹೆಂಡತಿ ಅಂದರ ಆವಾಗಿನ್ನೂ ಫಾರೆನ್ ಬಾಡಿ ಇದ್ದಂಗ ಹೋದಲ್ಲೆ ಬಂದಲ್ಲೇ ಏನರ ಹೆಚ್ಚು ಕಡಿಮಿ ಆಗಲಿ ಬಿಡಲಿ, ಒಂದರ ಬದಲಿ ಎರಡ ಜೋಡಿ ಇದ್ದರ ಛಲೋ ಅಂತ ನನ್ನ ವಿಚಾರ ಇತ್ತು. ಅಷ್ಟರಾಗ ನಮ್ಮ ದೋಸ್ತ ಒಬ್ಬವಂದ ಲಗ್ನ ನವೆಂಬರ ೩೦ಕ್ಕ ಫಿಕ್ಸ್ ಆಗಿತ್ತ. ಅಂವಾ ನಮ್ಮ ಮನಿಗೆ ಕಾರ್ಡ ಕೊಡಲಿಕ್ಕೆ ಬಂದಾಗ ಹಂಗ ಸಹಜ ‘ಮತ್ತ ಹನಿಮೂನಗೆ ಎಲ್ಲೇ ಪ್ಲ್ಯಾನ ಮಾಡಿಲೆ’ ಅಂತ ನಾ ಕೇಳಿದೆ
” ಏ, ನಾ ಮುನ್ನಾರಿಗೆ ಹೋಗ ಬೇಕಂತ ಮಾಡೇನಿ” ಅಂದಾ. ನಾ ಈ ಮಗಾನೂ ಮುನ್ನಾರ ಪ್ಲ್ಯಾನ ಮಾಡ್ಯಾನಲಾ ಅಂತ ಖುಷಿ ಆಗಲಿಲ್ಲ ಗಾಬರಿ ಆತ. ಯಾಕಂದರ ಅವನ ಜನರೆಲ್ ನಾಲೆಜ್/ಕಾಮನ್ ಸೆನ್ಸ್ ಭಾಳ ಕಡಿಮೆ ಇತ್ತ ಹಂತಾವ ಇವತ್ತ ಫಾರೇನ್ ಬಾಡಿ ಕರಕೊಂಡ ಮುನ್ನಾರಿಗೆ ಹನಿಮೂನ ಪ್ಲ್ಯಾನ ಮಾಡ್ಯಾನ ಅಂದರ ಭಾರಿ ಶ್ಯಾಣಾ ಆಗ್ಯಾನ ಬಿಡ ಅಂತ ನಾ ಅವಂಗ
” ಲೇ, ಮುನ್ನಾರ ಎಲ್ಲೆ ಅದ ಅದರ ಗೊತ್ತಿನ?” ಅಂತ ಕೇಳಿದೆ.
” ಎಲ್ಲೆ ಅದ ಅಂದರ? ತಮಿಳನಾಡನಾಗ ಹೌದಲ್ಲ?” ಅಂದಾ
” ದನಾ ಕಾಯೊನ ಮುನ್ನಾರ ಎಲ್ಲೇದ ಗೊತ್ತಿಲ್ಲಾ, ಮುನ್ನಾರಕ್ಕ ಹೊಂಟಿ. ಲೇ, ಅದ ಇರೋದ ಕೇರಳಾದಾಗ ನಾನೂ ಅಲ್ಲೇ ಹೊಂಟೇನಿ, ನನ್ನ ಜೊತಿ ಬರ್ತಿದ್ದರ ಡಿಸೆಂಬರ ೧೧ಕ್ಕ ಮಂಗಳೂರ ರೇಲ್ವೇ ಸ್ಟೇಶನಗೆ ಕೋಚಿನದ ಟಿಕೇಟ ತೊಗಂಡ ಬಾ” ಅಂತ ಹೇಳಿದೆ.
ಏನೋ ಪುಣ್ಯಾ, ನನ್ನ ಮುಂದ ಹೇಳ್ಯಾನ ಛಲೋ, ಅವನ ಹೆಂಡತಿ ಮುಂದ ಹೇಳಿದ್ದರ ಈ ಮಗಂದ ಜನರಲ್ ನಾಲೇಜ್ ಇಷ್ಟ, ತಮಿಳನಾಡ ಎಲ್ಲೇ ಅದ ಕೇರಳಾ ಎಲ್ಲೇದ ಅದ ಗೊತ್ತಿಲ್ಲಾ, ಇನ್ನ ಲಗ್ನಾ ಆದ ಮ್ಯಾಲೆ ಸಂಸಾರ ಹೆಂಗ ಮಾಡ್ತಾನ ಅಂತ ಅಕಿ ಮದುವಿ ಮುರ್ಕೊಂಡ ಬಿಡ್ತಿದ್ಲು ಅನಸ್ತು. ಸರಿ ಅಂವಾ ನಾ ವಿಚಾರ ಮಾಡಿ ಅಂದರ ಹೆಂಡತಿನ ಕೇಳಿ ಹೇಳ್ತೇನಿ ಅಂತ ಹೋದಾ.
ಇತ್ತಲಾಗ ನಮ್ಮಿಬ್ಬರ ಮಾರವಾಡಿ ದೋಸ್ತರದು ನವೆಂಬರದಾಗ ಲಗ್ನ ಆಗಿತ್ತ ಆದರ ಹನಿಮೂನ ವಿಷಯದಾಗ ಒಬ್ಬಾಂವ ಕುಲು-ಮನಾಲಿ ಅಂತ ಇನ್ನೊಬ್ಬಾಂವ ಸಿಲಿಗುರಿ ಅಂತ ಜಗಳಾಡಲಿಕತ್ತಿದ್ದರು. ಹೇಳಿ ಕೇಳಿ ಮಾರಾವಾಡಿ ಮಂದಿ, ರೊಕ್ಕಕ್ಕ ಅಂತೂ ಏನ ಕಡಿಮಿ ಇದ್ದಿದ್ದಿಲ್ಲಾ, ಅವರದೇನರ ಪಾಸಪೋರ್ಟ ಇದ್ದ ಒಂದ ಚೂರ ಕಮ-ಕಮ ಅಂತ ಇಂಗ್ಲೀಷ್ ಮಾತಡಲಿಕ್ಕೆ ಬಂದಿದ್ದರ ಸ್ವಿಟ್ಜರಲ್ಯಾಂಡಿಗೂ ಹೋಗೊ ಪೈಕಿ. ನಾ ಅವರಿಗೆ ಸುಮ್ಮನ ನನ್ನ ಜೊತಿ ಮುನ್ನಾರಕ್ಕ ಬರ್ರಿ ಅಂದೆ. ಕಡಿಕೆ ಅವರು ನಾವ ಡಿಸೈಡ ಮಾಡಿ ಬರೋದಿದ್ದರ ಮಂಗಳೂರ ಸ್ಟೇಶನ್ನಿಗೆ ಬರತೇವಿ ಅಂತ ಹೇಳಿದರು.
ಅಡ್ದಿಯಿಲ್ಲಾ ಒಂದ ಬಿಟ್ಟ ನಾಲ್ಕ ಜೋಡಿ ಬಂದರ ಛಲೋ ಅನಸ್ತು. ಅಲ್ಲಾ ಹಂಗ ಎಲ್ಲಾರದೂ ಹನಿಮೂನ ಫಸ್ಟ ಟೈಮ, ಯಾರೇನ ಭಾಳ ಇದರಾಗ ಶಾಣ್ಯಾರಲ್ಲಾ, ನಾವೇನ ಒಬ್ಬರಿಗೊಬ್ಬರ ಕಾಪಿ ಹೊಡಿತೇವಿ ಅನ್ನೊಂಗಿಲ್ಲಾ, ಆದರು ಕಂಪನಿ ಇರತದ ಅಂತ ನನ್ನ ವಿಚಾರ ಇತ್ತು.
ನಾ ಹುಬ್ಬಳ್ಳಿಯಿಂದ ಮೊದಲ ಕಾರವಾರಕ್ಕ ಹೋಗಿ ಅಲ್ಲೆ ನಮ್ಮ ದೋಸ್ತನ ಹೆಂಡತಿ ಒಬ್ಬಾಕಿ ಹಡದಿದ್ಲು ಅಕಿನ್ನ- ಅಕಿ ಮಗಳನ ನೋಡ್ಕೊಂಡ ಅಲ್ಲಿಂದ ಮುಂದ ಮಂಗಳೂರಿಗೆ ಹೋಗೊ ಪ್ಲ್ಯಾನ ಮಾಡಿದ್ದೆ. ಹಂಗ ಹನಿಮೂನಗೆ ಹೋಗಬೇಕಾರ ಯಾರರ ಹಡದವರದ (ಬಾಣಂತಿ) ಮಾರಿ ನೋಡ್ಕೊಂಡ ಹೋಗಬೇಕಂತ ಅಂದರ ವರ್ಷ ತುಂಬೊದರಾಗ ನಾವ ಯಾರನ ಹನಿಮೂನಗೆ ಕರಕೊಂಡ ಹೋಗಿರ್ತೇವಿ ಅವರು ಹಡಿತಾರಂತ ಕೇಳಿದ್ದೆ. ಅಲ್ಲೆ ಕಾರವಾರದಾಗ ನನ್ನ ಹೆಂಡತಿಗೆ ನಮ್ಮ ದೋಸ್ತನ ಹೆಂಡತಿದ ಒಂದ ತಿಂಗಳದ ಕೂಸ ತೋರಿಸಿ, ಇವತ್ತಿಲ್ಲ ನಾಳೆ ನೀನು ಹಿಂತಾದ ಹಡಿಯೋಕಿ ಅಂತ ಹೇಳಿ, ಅಲ್ಲಿಂದ ಒಂದ ರೌಂಡ ಗೋವಾ ಬಾರ್ಡರ ತನಕ ಹೋಗಿ ಬರೋಣ ಅಂತ ಕಾರನಾಗ ಹೋದೆ. ದಾರಿ ಒಳಗ ಅಕಿಗೆ ಕಾರವಾರ ಸ್ಯುಸೈಡ ಬ್ರಿಡ್ಜ್ ತೊರಿಸಿ ‘ಸಂಸಾರದಾಗ ಬ್ಯಾಸರಾದ ಮ್ಯಾಲೆ ಬಿದ್ದ ಸಾಯೋದ ಇದ ಬ್ರಿಡ್ಜ್ ಮ್ಯಾಲಿಂದ’ ಅಂತ ಹೇಳಿ ಅಲ್ಲಿಂದ ಗೋವಾ ಚೆಕ್ ಪೋಸ್ಟ ದಾಟಿ ಹೋಗಿ ಅಕಿನ್ನ ಅಲ್ಲೆ ಗಾಡ್ಯಾಗ ಕೂಡಿಸಿ ನಾ ಹೊರಗ ಹೋಗಿ ಬಂದೆ. ಅಕಿ ಬಹುಶಃ ನಾ ಕಾಡಿನಾಗ ಒಂದಕ್ಕ ಹೋಗಿರಬೇಕು ಬಿಡ ಅಂತ ಸುಮ್ಮನ ಕಾರನಾಗ ಕೂತಿದ್ಲು. ಮುಂದ ನಾ ಒಂದ ಕ್ಯಾರಿ ಬ್ಯಾಗನಾಗ ಬಾಟ್ಲಿ ಹಿಡಕೊಂಡ ಬಂದೆ.
” ಅದ ಏನರಿ ಬಾಟಲಿ?” ಅಂತ ಕೇಳಿದ್ಲು.
” ಅದು ವೊಡ್ಕಾ, ಇಲ್ಲೆ ಗೋವಾದಾಗ ಸಸ್ತಾ ಸಿಗತದ ಅಂತ ತೊಗೊಂಡೆ” ಅಂದೆ
” ವೊಡ್ಕಾ ಅಂದರ?” ಅಂದ್ಲು, ನಂಗೇನ ಹೇಳಬೇಕ ತಿಳಿಲಿಲ್ಲಾ,
” ಇದು ರಶಿಯನ್ ಡ್ರಿಂಕ ಹೆಣ್ಣಮಕ್ಕಳು ಕುಡಿಬಹುದು” ಅಂದೆ. ಅಕಿ ಒಮ್ಮಿಂದೊಮ್ಮಿಲೆ ಗಾಬರಿ ಆಗಿ
” ಅಂದರ ನೀವು ಕುಡಿತೀರಿ?” ಅಂದ್ಲು. ನಾ
” ಇಲ್ಲಲೇ, ಇದ ವೊಡ್ಕಾ, ಲೇಡೀಸ್ ಡ್ರಿಂಕ್, ಇದನ್ನ ಕುಡದರ ಏನು ಆಗಂಗಿಲ್ಲಾ, ನೀನೂ ಕುಡಿಬಹುದು” ಅಂದೆ. ಆದರು ಅಕಿ ಏನ ಕೇಳಲಿಲ್ಲಾ, ನೀವ ಕುಡಿತೇನಿ ಅಂತ ಮೊದ್ಲ ಹೇಳಲೇ ಇಲ್ಲಾ, ಹಂಗ ಹಿಂಗ ಅಂತ ಶುರು ಮಾಡಿದ್ಲು. ನಾ ತಲಿಕೆಟ್ಟ ‘ಏನಾತ ಈಗ ನಾ ಕುಡಿತೇನ ನೋಡ, ನೀ ಏನ ವಾಪಸ ಹುಬ್ಬಳ್ಳಿಗೆ ಹೋಗೊಕೇನ’ ಅಂತ ಅನ್ನೋವ ಇದ್ದೆ, ಆದರ ಹೋಗಲಿ ಬಿಡ ಮತ್ತೇಲ್ಲರ ಖರೇನ ಹೋಗಿ ಗಿಗ್ಯಾಳಂತ ಅಕಿಗೆ ಸಮಾಧಾನಲೇ ತಿಳಿಸಿ
“ನೋಡಿಲ್ಲೆ, ಇದ ಹಂಗಲ್ಲಾ, ನಾ ಕುಡಿತೇನಿ ಅಂದರ ಕುಡದ ಗಟರನಾಗ ಬಿಳೊ ಹಂಗ ಕುಡಿಯಂಗಿಲ್ಲಾ, ಆವಾಗ ಇವಾಗ ಸ್ವಲ್ಪ ತೊಗೊತೇನಿ, ಅದು ಬರೇ ವೊಡ್ಕಾ ಇಷ್ಟ ಕುಡಿತೇನಿ” ಅಂದೆ. ಆದರ ಅಕಿ ನನ್ನ ಮಾತ ಕೇಳಲಿಲ್ಲಾ,
“ನೀವು ಈಗ ಹಿನಿಮೂನಗೆ ಹೋಗಬೇಕಾರ ಯಾಕ ಕುಡಿತೀರಿ, ಅದು ಒಂದ ದೊಡ್ಡ ಬಾಟಲಿನ ತೊಗೊಂಡೀರಿ” ಅಂತ ವಟಾ-ವಟಾ ಹಚ್ಚಿದ್ಲು. ನಾ ಮತ್ತ ಸಮಾಧಾನದಲೇ.
” ಇಲ್ಲ ನೋಡ, ನಾ ಹೇಳೋದನ್ನ ಕರೆಕ್ಟ ಕೇಳ. ಜೀವನದಾಗ ಗಂಡ ಹುಡುಗರಿಗೆ ಅಗದಿ ದೊಡ್ಡ ನಶಾ ಅಂದರ ಹುಡುಗ್ಯಾರದ, ಹಂಗ ಒಮ್ಮೆ ಲಗ್ನ ಆದ ಮ್ಯಾಲೆ ಅವಂಗ ಏನೋ ಜೀವನದಾಗ ಸಾಧಿಸಿದಂಗ ಅನಿಸಿ, ಕಂಡೇನೊ ಇಲ್ಲೊ ಅನ್ನೊರಂಗ ಮಾಡೋದು ಈ ಹನಿಮೂನ ಪಿರಿಯಡನಾಗ. ಇನ್ನ ಹಂತಾ ಹೊತ್ತಿನಾಗ ಉಳದದ್ದ ಸಣ್ಣ-ಪುಟ್ಟ ಅಮಲ ಬರಸೋ ಚಟದ ಬಗ್ಗೆ ತಲಿಕೆಡಸಿಕೊಳ್ಳಬಾರದ. ಲೈಫ್ ಎಂಜಾಯ ಮಾಡ್ಬೇಕಲೇ ಹುಚ್ಚಿ, ನಿನ್ನ ನಶಾದ ಮುಂದ ಇದನೇಲೇ” ಅಂತ ಏನೇನೋ ಹೇಳಿ ಕನ್ವಿನ್ಸ್ ಮಾಡಿದೆ.
“ಅದೇನ ಫಿಲಾಸಫಿ ಹೇಳ್ತಿರೊ ಏನೋ ನಾ ಅಷ್ಟ ಕಲತಿದ್ದರ ನಿಮ್ಮನ್ಯಾಕ ಲಗ್ನಾ ಮಾಡ್ಕೋತಿದ್ದೆ, ಒಟ್ಟ ನೀವು ಏನು ಚಟಾ ಇಲ್ಲಾ ಚಟಾ ಇಲ್ಲಾ ಅನ್ಕೋತ ಎಲ್ಲಾ ಮಾಡ್ತಿರ ತೊಗೊ” ಅಂತ ಅಂದ ಸುಮ್ಮನಾದ್ಲು. ನಂಗು ಅಷ್ಟ ಧೈರ್ಯ ಬಂತ. ಅದರಾಗ ಅಕಿಗೆ ಎರಡ ದಿವಸದ ಹಿಂದ ನಾ ಪಾನ್ ಪರಾಗ ತಿನ್ನೋದ ಒಂದ ಗೊತ್ತಾಗಿಬಿಟ್ಟಿತ್ತ. ನಂಗ ನಾ ತಿನ್ನೊ ಪಾನ ಪರಾಗದಾಗ ತಂಬಾಕ ಇರಂಗಿಲ್ಲಾ ಅಂತ ತಿಳಿಸಿ ಹೇಳೋದರಾಗ ಸಾಕ-ಸಾಕಾಗಿತ್ತ. ಹಂಗೇನರ ಅಕಿ
‘ತಂಬಾಕ ಇಲ್ಲಾ ಅಂದರ ನನಗು ಕೊಡ್ರಿ’ ಅಂತ ಅಂದಿದ್ದರ ನಾ ಸಾಯ್ತಿದ್ದೆ. ಮುಂದ ಅದನ್ನ ತಿಂದ ಅಕಿ ಸಾಯ್ತಿದ್ಲ ಆ ಮಾತ ಬ್ಯಾರೆ, ಏನೋ ಆ ವಿಷಯ ಅದು-ಇದು ಹೇಳಿ ಅಲ್ಲಿಗೆ ಮುಗಿಸಿದ್ದೆ.
ನಾವು ಮುಂದ ಕಾರವಾರದಿಂದ ಮಂಗಳೂರಿಗೆ ಹೋದ್ವಿ. ಅಲ್ಲೆ ರೇಲ್ವೇ ಸ್ಟೇಶನದಾಗ ಇನ್ನ ಉಳದದ್ದ ಮೂರು ಪೇರ ಬಂದಿದ್ವು. ಎರಡ ಬ್ರಾಹ್ಮಣರದ ಪೇರ ಎರಡ ಮಾರವಾಡಿ ಪೇರ, ನಾಲ್ಕು ಜೋಡಿ ಸೇರಿ ಹನಿಮೂನ ಯಾತ್ರಾ ಶುರು ಮಾಡಿದ್ವಿ.
ನಾವು ಮರುದಿವಸ ಮುಂಜಾನೆ ೫.೩೦ರ ಸುಮಾರಿಗೆ ಕೊಚ್ಚಿನ್ ರೇಲ್ವೆ ಸ್ಟೇಶನದಾಗ ಇಳದ್ವಿ, ಕೇರಳಾದಾಗ ಕ್ಲೈಮೇಟ ಅಗದಿ ಹನಿಮೂನಗೆ ಹೇಳಿ ಮಾಡಿಸಿದಂಗ ಇತ್ತ. ನಮ್ಮ ಲಗೇಜ ಹೊತಗೊಂಡ ಮ್ಯಾಲೆ ನಮ್ಮ-ನಮ್ಮ ಹೆಂಡತಿದ ಕೈ ಹಿಡಕೊಂಡ ಹೊರಗ ಬಂದ್ವಿ. ಇನ್ನ ನಮಗ ರೂಮ ಬೇಕಲಾ, ಅದು ಒಂದಲ್ಲಾ ಎರಡಲ್ಲಾ ನಾಲ್ಕ ಬೇಕ, ಒಂದs ಹೊಟೇಲನಾಗ ಬೇಕ, ಒಂದs ಟೈಪ್ ಬೇಕ. ತೊಗೊ ಇನ್ನ ರೂಮ ಹುಡಕೋದ ಒಂದ ದೊಡ್ಡ ಸಾಹಸ ಅಂತ ಗ್ಯಾರಂಟೀ ಆತ. ಅದರಾಗ ಈ ಮಾರವಾಡಿಗೊಳಿಗೆ ಹೊಟೇಲದಾಗ, ಅದರ ಆಜು ಬಾಜು ಬಾರ್ ಇರಬಾರದು, ನಾನ್ ವೆಜ್ ಇರಬಾರದು ಅಂತ ಕಂಡಿಶನ ಬ್ಯಾರೆ. ಹೋದಲ್ಲೆ ಬಂದಲ್ಲೆ ರೊಕ್ಕಾ ಉಳಸಲಿಕ್ಕೆ ಧರ್ಮಶಾಲಾದಾಗ ಇರೊ ಮಂದಿ, ಇನ್ನ ಹನಿಮೂನ ಅಂತು ಧರ್ಮಶಾಲಾದಾಗ ಮಾಡಲಿಕ್ಕೆ ಬರಂಗಿಲ್ಲಾ. ಹಿಂಗಾಗಿ ರೂಮ ಹಿಡಿಯಬೇಕಿತ್ತ. ಹಂಗ ಚಾನ್ಸ ಕೊಟ್ಟರ ಡಾರ್ಮಿಟ್ರಿ ಒಳಗ ಹನಿಮೂನ ಮಾಡೋ ಪೈಕಿನ ಬಿಡ್ರಿ ಈ ಮಂದಿ.
ನಾ ಕಡಿಕೆ ಇಬ್ಬರ ಗಂಡಂದರನ ನಾಲ್ಕ ಹೆಂಡಂದರ ಜೊತಿ ಅಲ್ಲೇ ಸ್ಟೇಶನದಾಗ ಬಿಟ್ಟ ಇನ್ನೊಬ್ಬವನ ಕರಕೊಂಡ ಆಟೋ ತೊಗಂಡ ಹೊಟೇಲ- ಹೊಟೇಲ ಅಡ್ಯಾಡಲಿಕತ್ತೆ, ಆವಾಗ ಮೊಬೈಲ ಬ್ಯಾರೆ ಇರಲಿಲ್ಲಾ, ಹೊಸಾ ಹೆಂಡ್ತಿನ ಹಂಗ ಹಳಿ ಬಾಜುಕ ಬಿಟ್ಟ ಹೋಗಲಿಕ್ಕೆ ಧೈರ್ಯ ಇರಲಿಲ್ಲಾ ಆದರ ಅನಿವಾರ್ಯ ಇತ್ತ. ಕಡಿಕೆ ನಮಗ ಸೆಟ್ ಆಗೊ ಹಂತಾ ಒಂದ ಹೊಟೇಲನಾಗ ನಾಲ್ಕ ರೂಮ ಹುಡಕೊಂಡ ಬಂದ ನಮ್ಮ ಲಗೇಜ ಹೊತಗೊಂಡ ಹೊಟೇಲಗೆ ಹೋದ್ವಿ. ನಮ್ಮ ಈ ಹೊಟೇಲ ಹುಡಕೋ ಪ್ರಹಸನ ನಾವ ಪ್ರತಿ ಊರಿಗೆ ಹೋದಾಗೂ ರಿಪೀಟ ಆಗ್ತಿತ್ತ.
ಹಿಂಗ ಕೊಚ್ಚಿನದಿಂದ ನಮ್ಮ ಆಫಿಸಿಯಲ್ ಹನಿಮೂನ ಶುರು ಆತ. ಎರಡ ದಿವಸ ಕೋಚ್ಚಿನ, ಮುಂದ ಅಲ್ಲಿಂದ ಅಲ್ಲೇಪಿ ( ಅಲಪುಝಾ),ಕೊಟ್ಟಯಮ್ ಅಲ್ಲಿಂದ ತೆಕ್ಕಡಿ, ಪೆರಿಯಾರ, ಇಡುಕ್ಕಿ, ಮುನ್ನಾರ ಎಲ್ಲಾ ಮುಗಿಸಿಕೊಂಡ ಹುಬ್ಬಳ್ಳಿಗೆ ವಾಪಸ ಬಂದ್ವಿ. ಹಂಗ ಹನಿಮೂನದ ಭಾಳ ಇಂಟಿರಿಯರ್ ಡಿಟೇಲ್ಸ್ ಅಂತು ಬರಿಲಿಕ್ಕೆ ಬರಂಗಿಲ್ಲಾ, ಎಲ್ಲಾ ಅನುಭವ ಹಂಚಗೊಳ್ಳಿಕ್ಕೂ ಬರಂಗಿಲ್ಲಾ. ಇನ್ನ ಮ್ಯಾಲಿಂದ ಮ್ಯಾಲಿಂದ ಇಷ್ಟ ಹೇಳಬೇಕಪಾ ಅಂದರ…..
ನನ್ನ ಕಡೆ ವೊಡ್ಕಾ ಬಾಟಲಿ ಇದ್ದದ್ದ ನಮ್ಮ ಉಳದ ಹನಿಮೂನ ಮೇಟ್ಸಗೆ ಗೊತ್ತಾಗಲಿಕ್ಕೆ ಎರಡ ದಿವಸ ಹಿಡಿತ. ಅದರಾಗ ನಮ್ಮ ದೋಸ್ತರ ನಾ ಬಾಟಲಿ ತಂದೇನಿ ಅಂದಾಗ ನನ್ನ ಹೆಂಡತಿಕಿಂತ ಜಾಸ್ತಿ ಗಾಬರಿ ಆಗಿ,
“ಲೇ, ಇದ ನನ್ನ ಹೆಂಡತಿಗೆ ಗೊತ್ತಾಗಬಾರದು, ನೀ ಕುಡಿತಿ ಅಂತನೂ ಗೊತ್ತಾಗ ಬಾರದು. ಮತ್ತೇಲ್ಲರ ಅಕಿ ಕುಡಕರ ಜೊತಿಗೆ ಹನಿಮೂನಗೆ ಕರಕೊಂಡ ಹೋಗಿದ್ದರು ಅಂತಾಳ” ಅಂತ ಹೇಳಿದರು. ಹಂಗ ಇದ್ದ ನಾಲ್ಕ ಗಂಡಸರ ಒಳಗ ನಾನ ಸ್ವಲ್ಪ ಉಡಾಳ ಇದ್ದೆ, ಉಳದವರ ಏನಿಲ್ಲದ ಸಾಚಾ ನನ್ನ ಮಕ್ಕಳು. ಇನ್ನ ಹೊಸಾ ಹೆಂಡತಿ ಮುಂದ ಮತ್ತಿಷ್ಟ ಸಾಚಾನಗತೆ ನಾಟಕ ಮಾಡ್ತಿದ್ದರು. ಸರಿ ನಾ ನನ್ನ ಬಾಟಲಿ ನನ್ನ ರೂಮನಾಗ ಇಟಗೊಂಡ ಇದ್ದೆ, ನನಗು ಅದನ್ನ ಎರಡ ಮೂರ ದಿವಸಾದರು ಒಪನ ಮಾಡಲಿಕ್ಕೆ ಟೈಮ ಸಿಕ್ಕಿದ್ದಿಲ್ಲಾ. ಅಲ್ಲಾ ಹಂಗ ಹನಿಮೂನದಾಗ ಅದ ಪ್ರಿಯಾರಿಟಿನೂ ಅಲ್ಲ ಬಿಡ್ರಿ, ಸುಮ್ಮನ ಇರಲಿ ಅಂತ ಇಟ್ಕೊಂಡ ಹೋಗಿದ್ದೆ. ಮುಂದ ಒಂದ ದಿವಸ ಒಬ್ಬ ಮಾರವಾಡಿ ಹಗರಕ
“ನಿನ್ನ ಕಡೆ ವೊಡ್ಕಾ ಇತ್ತಲಾ” ಅಂದಾ.
“ಅದ ಅಲಾ, ಅದನ್ನ ಇನ್ನು ನಾ ತಗದಿಲ್ಲಾ” ಅಂದೆ.
“ಹಂಗರ ಇವತ್ತ ಸಂಜಿಗೆ ಒಪನ್ ಮಾಡಿ ನನ್ನ ರೂಮಿಗೆ ಫೊನ ಮಾಡಿ ನನಗ ಸೂಕ್ಷಂ ಕರಿ” ಅಂದಾ. ಅಂವಾ ಧೈರ್ಯಾ ಮಾಡಿದ್ದ ನೋಡಿ ಇನ್ನೊಬ್ಬ ಮಾರವಾಡಿ ತಾನೂ ಬರ್ತೇನಿ ಅಂದಾ.
ಸರಿ ನಾ ಅವರಿಗೆ ಕರದ ಒಂದ ಥರ್ಟಿ-ಥರ್ಟಿ ಮಿಕ್ಸ್ ಮಾಡಿ ಮ್ಯಾಲೆ ಸ್ಪ್ರೈಟ ಬಿಸ್ಲೇರಿ ಹಾಕಿ ಕೊಟ್ಟೆ, ಅವರ ಗಬಾ-ಗಬಾ ಕುಡದ ಬಿಟ್ಟರು.”ಲೇ, ಸವಕಾಶ, ಅದು ವೊಡ್ಕಾ, ಆರಾಮ ತೂಗೊಬೇಕ, ಅದು ಸವಕಾಶ ಏರತದ” ಅಂತ ಹೇಳಿದ್ರು ಕೇಳಲಿಲ್ಲಾ. ಅಲ್ಲೆ ರೂಮಿನಾಗ ಹೆಂಡಂದರ ಕಾಯಿತಿರತಾರ ಅಂತ ಹೋಗೆಬಿಟ್ಟರು. ಪಾಪ, ನಮ್ಮ ಬ್ರಾಹ್ಮಣ ದೋಸ್ತಗ ಬರಲಿಕ್ಕೆ ಧೈರ್ಯ ಇರಲಿಲ್ಲಾ, ಬಿಡಲಿಕ್ಕೆ ಮನಸ್ಸಿರಲಿಲ್ಲಾ. ರಾತ್ರಿ ಊಟಕ್ಕ ಹೋದಾಗ ಹಗರಕ ನನ್ನ ಹತ್ತರ ಬಂದ
“ವೋಡ್ಕಾ ಎಲ್ಲಾ ಖಾಲಿ ಆತೇನ” ಅಂತ ಕೇಳಿದಾ
“ಏ, ಇನ್ನೂ ರಗಡ ಅದ, ಯಾಕ?” ಅಂದೆ.
“ಹಂಗರ ರಾತ್ರಿ ನೀ ನಂಗ ಸ್ಪ್ರೈಟ ಉಳದದ ಬೇಕಾರ ತೊಗಂಡ ಹೋಗ ಅಂತ ನನ್ನ ಕರಿ, ಆ ಸ್ಪ್ರೈಟ ಒಳಗ ಮಿಕ್ಸ್ ಮಾಡಿ ನಂಗ ಕೊಟ್ಟ ಕಳಸು” ಅಂದಾ. ಸರಿ ನಾ ಸ್ಪ್ರೈಟ ಒಳಗ ಮಿಕ್ಸ್ ಮಾಡಿ ಇಟ್ಟ ಅವನ ರೂಮಿಗೆ ಫೋನ ಮಾಡಿದೆ.
ಅವನ ಹೆಂಡತಿ ಫೊನ್ ಎತ್ತಿ
“ಯಾಕ್ರಿ ಮತ್ತ ಕೊಬ್ಬರಿ ಎಣ್ಣಿ ಬೇಕಿತ್ತಿನ” ಅಂತ ಕೇಳಿದ್ಲು.
ಅದರ ಹಿಂದಿನ ದಿವಸ ನಾ ಹೀಟ ಭಾಳ ಆಗೇದ, ತಲಿಗೆ ಎಣ್ಣಿ ಹಚಗೊಳ್ಳಲಾರದ ಭಾಳ ದಿವಸಾತು ಅಂತ ಅಕಿ ಕಡೆ ಕೊಬ್ಬರಿ ಎಣ್ಣಿ ಪಾಕೇಟ ಒಂದ ಕಡಾ ಇಸಗೊಂಡಿದ್ದೆ, ಅದಕ್ಕ ಹಂಗ ಕೇಳಿದ್ಲು.
“ಏ, ಅದೇನ ಬ್ಯಾಡ. ನನ್ನ ಕಡೆ ಒಂದ ಸ್ಪ್ರೈಟ ಉಳದಿತ್ತ, ನಿನ್ನ ಗಂಡಗ ಬೇಕಾರ ಬಂದ ತೊಗಂಡ ಹೋಗಂತ ಹೇಳು” ಅಂತ ನಾ ಫೊನ ಇಟ್ಟೆ.
ಮುಂದ ಒಂದ ಹತ್ತ ನಿಮಿಷಕ್ಕ ಈ ಮಗಾ ಬಂದಾ ಬಾಟಲಿ ಒಯ್ಯಲಿಕ್ಕೆ.
“ಲೇ, ಇಲ್ಲೇ ಕುಡದ ಹೋಗ, ಮೊದ್ಲ ನಿನ್ನ ಹೆಂಡತಿ ಖತರನಾಕ ಇದ್ದಾಳ, ಆಮ್ಯಾಲೆ ಒಂದ ಹೋಗಿ ಒಂದ ಆದರ ಏನ ಮಾಡ್ತಿ” ಅಂದೆ.
ಅಂವಾ ‘ಏ, ಇಲ್ಲಾ ಅಕಿ ಸಿಟ್ಟಾಗತಾಳ’ ಅಂತ ಹೆದರಿ ಬಾಟಲಿ ಹಿಡಕೊಂಡ ರೂಮಿಗೆ ಓಡಿ ಹೋದಾ. ಮುಂದ ಅದನ್ನೇನ ಕುಡದ್ನೋ ಇಲ್ಲಾ ಛೆಲ್ಲಿದ್ನೋ ಅಂತ ನಾನು ತಲಿ ಕೆಡಸಿಗೊಳ್ಳಿಕ್ಕೆ ಹೋಗಲಿಲ್ಲಾ.
ಮರುದಿವಸ ಮುಂಜಾನೆ ಟಿಫಿನ್ನಿಗೆ ಕೂತಾಗ
” ಆಡೂರ, ನಿನ್ನೆ ನೀ ಸ್ಪ್ರೈಟ ಒಳಗ ಎಷ್ಟ ಮಿಕ್ಸ ಮಾಡಿದ್ದ್ಯೋ” ಅಂದಾ.
ನಾ ನನ್ನ ನಶಾದಾಗ ಅವಂಗ ಒಂದ ನೈಂಟಿ ಮಿಕ್ಸ್ ಮಾಡಿಬಿಟ್ಟಿದ್ದೆ ಕಾಣತದ
” ಯಾಕ್, ಏನಾತು?” ಅಂದೆ.
” ಇಲ್ಲಾ ನಾ ಸ್ಪ್ರೈಟ ಸ್ಲೊ ಕುಡಿಯೋದ ನೋಡಿ ನನ್ನ ಹೆಂಡತಿ ‘ಎಷ್ಟೊತ್ತ ಅದ ಒಂದ ಸ್ಪ್ರೈಟ ಕುಡಿಲಿಕ್ಕೆ, ಲಗೂನ ಮುಗಿಸಿ ಬರ್ರಿ’ ಅಂತ ಜೋರ ಮಾಡಿದ್ಲು, ನಾ ಒಂದ ಹೊಡತಕ್ಕ ಎಲ್ಲಾ ಕುಡದ ಬಿಟ್ಟೆ” ಅಂದಾ.
“ಮುಂದ” ಅಂದೆ.
“ಮುಂದೇನ ಮಗನ, ನಡರಾತ್ರ್ಯಾಗ ನಾ ಒಂದಕ್ಕ ಎದ್ದಾಗ ಫ್ಯಾನ ನಿಂತಿತ್ತು, ಸೀಲಿಂಗ ತಿರಗಲಿಕತ್ತಿತ್ತು. ನಾ ಗೊಡೆ ಹಿಡಕೊಂಡ ಬಾಥರೂಮಿಗೆ ಹೋಗಿ ಬಂದೆ” ಅಂದಾ.
‘ಎಲ್ಲೆ, ವಾಶ್ ಬೇಸಿನದಾಗ ಹೋಯ್ದ ಬಂದಿನ’ ಅಂತ ಕೇಳೊಂವ ಇದ್ದೆ ಹೋಗಲಿ ಬಿಡ ಅಂತ ಬಿಟ್ಟೆ. ನನ್ನ ಪುಣ್ಯಾಕ್ಕ ರಾತ್ರಿ ಒಂದ ಹೋಗಿ ಇನ್ನೊಂದ ಆಗಿದ್ದಿಲ್ಲಾ.
ಆದ್ರ ಮರುದಿವಸ ತನಕಾ ಅಂದರ ಎಲ್ಲಾ ಹೆಂಡಂದರಿಗೂ ನಾ ವೊಡ್ಕಾ ಬಾಟಲಿ ತಂದಿದ್ದ ಕನ್ಫರ್ಮ ಆಗಿತ್ತ. ಮುಂದ ಹಿಂಗ ಆತಲಾ ನನ್ನ ವೊಡ್ಕಾ ಖಾಲಿ ಆದರು ಯಾ ಹೆಂಡಂದರು ತಮ್ಮ ಗಂಡಂದರನ ನನ್ನ ರೂಮಿಗೆ ಕಳಸ್ತಿದ್ದಿಲ್ಲಾ…..ಇದು ಅಲ್ಲೇಪಿ ಒಳಗ ಆಗಿದ್ದ ಮಾತ.
ನಾವ ಅಲ್ಲೆ ಇದ್ದಾಗ ಒಂದ ದಿವಸ ಬೋಟ್ ಮಾಡ್ಕೊಂಡ ‘ಪಾಥಿರಮನಲ್’ ಅನ್ನೋ ದ್ವೀಪಕ್ಕ ಹೋಗಿದ್ವಿ, ವೆಂಬನಾಡ ಬ್ಯಾಕ ವಾಟರ ಲೇಕ ಒಳಗ ಒಂದ ೫ ಕಿಮಿ ಏರಿಯಾದಾಗ ಆ ದ್ವೀಪ ಇತ್ತ, ಅಲ್ಲೆ ಏನೂ ಸಿಗಂಗಿಲ್ಲಾ, ಯಾರೂ ಇದ್ದಿದ್ದಿಲ್ಲಾ. ನಾವ ಅಲ್ಲಿ ಹೋಗಿ ಮುಟ್ಟಿದಾಗ ಮಧ್ಯಾಹ್ನ ಆಗಿತ್ತ. ಇಡಿ ದ್ವೀಪದಾಗ ನಾವ ಎಂಟ ಮಂದಿ, ಬೋಟಮನ ಬೋಟನಾಗ ಉಳಕೊಂಡಿದ್ದಾ. ನಾವ ಆ ಕಾಡ ದ್ವೀಪದಾಗ ಕಾಲ ದಾರಿ ಹಿಡದ ಎಲ್ಲೆ ಬೇಕಲ್ಲೆ ನಮ್ಮ ಹೆಂಡಂದರನ ಹಿಡ್ಕೊಂಡ ತಿರಗಲಿಕತ್ವಿ. ನಾವ ಇಷ್ಟ ಇರೋದ ಈ ದ್ವೀಪದಾಗ ಅನ್ನೊ ಖಬರ ಸಹಿತ ನಮಗ ಇರಲಿಲ್ಲಾ, ಹೆದರಕಿನೂ ಇರಲಿಲ್ಲಾ. ಹಂಗ ಗಿಡಾ-ಮರಾ-ನೀರು ನೋಡ್ಕೋತ ಎಲ್ಲಾರು ಒಂದೊಂದ ದಿಕ್ಕಿನಾಗ ಹೊಂಟಿದ್ವಿ.
ನಮ್ಮ ಮಾರವಾಡಿ ದೋಸ್ತ ಒಬ್ಬಂವಾ ಅಲ್ಲಿ ಸುನಸಾನ ಕಾಡು, ವಾತಾವರಣ ನೋಡಿ ಒಮ್ಮಿಂದೊಮ್ಮಿಲೆ
“ಅದಕ್ಕ ಮಲಯಾಳಿ ಒಳಗ ಸೆಕ್ಸ್ ಪಿಕ್ಚರ ಜಾಸ್ತಿ ಆಗ್ತಾವ. ಇಲ್ಲೆ ಯಾರ ಏನ ಮಾಡಿದರು ಯಾರು ಹೇಳೊರಿಲ್ಲಾ, ಕೇಳೊರಿಲ್ಲಾ, ನೋಡೊರಿಲ್ಲಾ” ಅಂದಾ.
” ಲೇ, ನಿನ್ನೌನ ಭಾಳ ಶಾಣ್ಯಾ ಇದ್ದೆ, ನೀ ಒಂದ ಪಿಕ್ಚರ ಮಾಡಬ್ಯಾಡ. ಸುಮ್ಮನ ಎದಕ್ಕ ಬಂದಿ ಅದನ್ನ ಮುಗಿಸಿಕೊಂಡ ಹೋಗ” ಅಂದೆ.
“ಮತ್ತ ನಾನು ಅದನ್ನ ಹೇಳಿದ್ದಲೇ” ಅಂದಾ. ಹಂಗ ಅಂವಾ ಹೇಳಿದ್ದ ಖರೆ ಇತ್ತ, ನಮ್ಮ ಹುಬ್ಬಳ್ಳಿ ಗಣೇಶ ಟಾಕೀಸನಾಗ ಆವಾಗ ಬರೇ ಮಲಯಾಳಿ ಪಿಕ್ಚರ ಬರತಿದ್ವು. ಅದಕ್ಕ ಈ ಮಗಾ ಕೇರಳಾಕ್ಕ ಬರಲಿಕ್ಕೆ ಹೂಂ ಅಂದಿರಬೇಕ ಅನಸಲಿಕತ್ತ. ಆದರ ಇಲ್ಲೇ ಮಾತ್ರ ಖರೇನ ಯಾರ ಏನ ಬೇಕಾದ ಮಾಡಿದರು ಕೇಳೋರಿದ್ದಿದ್ದಿಲ್ಲಾ, ನೋಡವರಿದ್ದಿದ್ದಿಲ್ಲಾ.
ಹಂಗ ನಾವ ಜೋಡಿ ಜೋಡಿ ನಮಗೆಲ್ಲ ಬೇಕ ಅಲ್ಲೆ ಅಡ್ಯಾಡಕೋತ ಕಾಡಿನಾಗ ಹೋದ್ವಿ. ಒಂದ ತಾಸಿಗೆ ಎಲ್ಲಾರೂ ಒಂದ ಗಿಡದ ಹತ್ರ ಸೇರೋದು ಅಂತ ಮೊದ್ಲ ಡಿಸೈಡ ಮಾಡಿದ್ವಿ. ಮುಂದ ಒಂದ ತಾಸಿಗೆ ಎಲ್ಲಾರೂ ಕರೆಕ್ಟ ಬಂದ್ವಿ ಆದ್ರ ನಮ್ಮ ಆ ಗಣೇಶ ಟಾಕೀಸ ಮಾರವಾಡಿ ಬರಲಿಲ್ಲಾ, ಅವನ ಹೆಂಡತಿನೂ ಬರಲಿಲ್ಲಾ, ನಾ ಅವನೌನ ಇಂವಾ ಎಲ್ಲೇರ ಖರೇನ ಯಾವದರ ಪಿಕ್ಚರ ಶೂಟಿಂಗ ನೋಡ್ಕೋತ ಇಲ್ಲಾ ಮಾಡ್ಕೋತ ನಿಂತನೇನ ಅಂತ ಅವನ ಹೆಸರಲೇ ಜೋರಾಗಿ ಕಾಡನಾಗ ಒದರಲಿಕತ್ತೆ.
ನಂಗ ಖರೇನ ಭಾಳ ಟೆನ್ಶನ್ ಶುರು ಆತ, ಗಂಡಾ ಹೆಂಡತಿ ಇಬ್ಬರ, ಎಲ್ಲೆ ಕಳಕೊಂಡರೊ, ಎಲ್ಲೆ ಏನರ ಆತೋ ಏನೋ? ಏನಪಾ ಇದ ಒಂದ ಹೋಗಿ ಒಂದ ಆದರ ಏನ ಮಾಡೋದ ಮೊದ್ಲ ಕಾಡು, ನೀರು, ಅರೇದ ಊರು ತಿಳಿಲಾರದ ಭಾಷಾ ಅದರಾಗ ಇಲ್ಲಂತೂ ಯಾರು ಇಲ್ಲಾ ಅಂತ ಏನೇನೋ ಕೆಟ್ಟ ವಿಚಾರ ಬರಲಿಕತ್ವು ಅಷ್ಟರಾಗ ಆ ದೋಸ್ತ ಒಬ್ಬನ ಬಂದಾ. ಬಂದವನ
“ಲೇ, ನನ್ನ ಹೆಂಡತಿನ ನೋಡಿದರೇನ್?” ಅಂದಾ.
“ಲೇ, ಅಕಿ ನನ್ನ ಜೊತಿ ಎಲ್ಲೆ, ನಿನ್ನ ಜೊತಿನ ಹೋಗಿದ್ಲಲಾ” ಅಂದೆ.
“ಏ, ನನ್ನ ಜೊತಿ ನಡಕ ಕಾಡಿನಾಗ ಜಗಾಳಾಡಿ ಯಾಕಡೇನೊ ಹೋದ್ಲು, ನಾ ಅರ್ಧಾ ತಾಸಿನಿಂದ ಹುಡಕಲಿಕತ್ತೇನಿ” ಅಂದಾ. ಅವನೌನ ಅಕಿ ಜಗಳಾಡಿ ಕಾಡಿನಾಗ ಹೋಗೊ ಹಂಗ ಏನ ಮಾಡಲಿಕ್ಕೆ ಹೋಗಿದ್ದನೋ ಏನೋ ದೇವರಿಗೆ ಗೊತ್ತ ಅಂತ ತಲಿಕೆಟ್ಟ ಎಲ್ಲಾರೂ ಕೂಡಿ ಅಕಿನ್ನ ಹುಡಕಲಿಕತ್ವಿ. ಅವನೌನ ಅಕಿ ತನ್ನ ಗಂಡನ ಮ್ಯಾಲಿನ ಸಿಟ್ಟಲೇ, ನಮ್ಮ ಧ್ವನಿ ಕೇಳಿದರು ಕೇಳಲಾರದಂಗ ಕಾಡಿನಾಗ ಇದ್ಲು. ಮುಂದ ಒಂದ ಅರ್ಧಾ ತಾಸಿಗೆ ತಾನ ಕಾಡಿನಾಗಿಂದ ಬಂದ್ಲು, ನಂಗ ಬಿ.ಪಿ. ಏರಿ ಬಿಟ್ಟಿತ್ತು. ನಾ ಅಕಿಗೆ ಹಿಡದ ಝಾಡಿಸಿದೆ, ಹಿಂಗ್ಯಾಕ ಮಾಡಿದಿ ಅಂತ ಕೇಳಿದೊರಾಗ ಅಕಿ ವಾಂತಿ ಮಾಡ್ಕೋಳಿಕತ್ಲು, ನಮಗೇಲ್ಲಾ ಮತ್ತಿಷ್ಟ ಗಾಬರಿ ಆತು. ನಂಗಂತೂ ಅಕಿ ಎಲ್ಲೊ ಕಾಡಿನಾಗ ಏನರ ಕಡಿಸಿಗೊಂಡ್ಲೊ ಇಲ್ಲಾ ಗಂಡ ಕಡದಿದ್ದ ನಂಜ ಇಷ್ಟ ಲಗೂ ಏರಿತ್ತೊ ಗೊತ್ತಾಗಲಿಲ್ಲಾ. ಕಡಿಕೆ ಏನಾತ ಅಂತ ಕೇಳಿದರ ಅಕಿ ಗಂಡ ಮಾಣಿಕಚಂದ( ಗುಟ್ಕಾ) ತಿಂದದ್ದಕ್ಕ ಅವನ ಜೊತಿ ಜಗಳಾಡಿ ಅವನ ಕೈಯಾಗಿಂದ ಚೀಟ ಕಸಗೊಂಡ ಕಾಡಿನಾಗ ಸಿಟ್ಟಲೇ ಹೋಗಿದ್ಲು, ಮುಂದ ಇದರಾಗ ಹಂತಾದ ಏನದ ನೋಡೋಣು ಅಂತ ಆ ಚೀಟ ಹರದ ಬಾಯಾಗ ಹಾಕ್ಕೊಂಡಿದ್ಲು. ಅದು ತಲಿಗೇರಿ ಅಕಿ ತಲಿ ತಿರುಗಿ ಹೊಟ್ಯಾಗ ತಳಮಳಸಿ ಕಡಿಕೆ ನಮ್ಮ ಮುಂದ ಬಂದ ವಾಂತಿ ಮಾಡ್ಕೊಂಡಿದ್ಲು. ಹೆಂತಾ ಹೆಣ್ಣ ಅನಬೇಕ ಅಕಿಗೆ. ಅಕಿ ಮುಂದ ನನ್ನ ಹೆಂಡತಿ ಭಾಳ ಛಲೊ ಅನಿಸಿದ್ಲು. ಒಂದ ಮಾತಿಗೆ ‘ನೀವೇನರ ಹಾಳ ಗುಂಡಿ ಬಿಳ್ಕೋರಿ’ ಅಂತ ನನ್ನ ಕೈಬಿಟ್ಟ ಆಡಲಿಕತ್ತಿದ್ಲು. ಅಲ್ಲಾ ಆ ವಿಷಯದಾಗ ಇವತ್ತು ನನ್ನ ಹೆಂಡತಿ ಹಂಗ ಇದ್ದಾಳ ಬಿಡರಿ, ಸುಳ್ಳ ಯಾಕ ಹೇಳ್ಬೆಕು.
ನಾ ಕಡಿಕೆ ಗಂಡಾ ಹೆಂಡತಿ ಇಬ್ಬರಿಗೂ ಬೈದ, ಅವನ ಕಡೆ ಇದ್ದಿದ್ದ ಅಷ್ಟು ಮಾಣಿಕಚಂದ ಕಸಗೊಂಡ ಅಲ್ಲಿಂದ ಕರಕೊಂಡ ಬಂದೆ. ಆ ದೋಸ್ತ ಇವತ್ತೂ ನಂಗ ಭೆಟ್ಟಿ ಆದಾಗೊಮ್ಮೆ ‘ಅವತ್ತ ನಾವ ಅಕಿನ್ನ ಅಲ್ಲೇ ಕಾಡಿನಾಗ ಬಿಟ್ಟ ಬಂದಿದ್ದರ ಎಷ್ಟ ಛಲೊ ಇತ್ತು’ ಅಂತ ನೆನಸ್ತಾನ, ಪಾಪ. ನಂಗ ಮುಂದ ಎಲ್ಲಾರನೂ ಹುಬ್ಬಳ್ಳಿಗೆ ತಂದ ಮುಟ್ಟಸೋ ತನಕ ಟೇನ್ಶನ್ ಇತ್ತ. ಅಂತೂ ಇಂತೂ ಎಲ್ಲಾರೂ ಸುರಕ್ಷಿತವಾಗಿ ಹುಬ್ಬಳ್ಳಿಗೆ ಬಂದ ಮುಟ್ಟಿದ್ವಿ.
ಸದ್ಯೇಕ ಇಷ್ಟ ಹನಿಮೂನ ಪ್ರಹಸನ ಸಾಕ, ಮತ್ತ ಪ್ರಸಂಗ ಬಂದಾಗ ಹೇಳ್ತೇನಿ. ಅಲ್ಲಾ ಹನ್ನೇರಡ ವರ್ಷದ ಹಿಂದಿನ ಹನಿಮೂನ ಹೆಂಗ ನೆನಪ ಇಟ್ಟಾನ ನೋಡ ಅನಬ್ಯಾಡರಿ, ಹೆಂಡ್ತಿನ ನೆನಪಹಾರಬಹುದು ಆದರ ಒಂದನೇ ಹನಿಮೂನ ಅಲ್ಲಾ. ಹೆಂಡ್ತಿ ಹಳೇಕಿ ಆಗಬಹುದು ಆದ್ರ ಹನಿಮೂನ ಅಲ್ಲಾ.

Leave a Reply

Your email address will not be published.

This site uses Akismet to reduce spam. Learn how your comment data is processed.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ