ಹ್ಯಾವೇಲ್ಸ್ ಅಪ್ಲೈಯನ್ಸಿಸ್..ರಿಸ್ಪೆಕ್ಟ್ wooಮೆನ್

(ಟಿ.ವಿ. ಒಳಗ ಜಾಹಿರಾತುಗಳನ್ನ ನೋಡವವರಿಗಾಗಿ ಮಾತ್ರ)
ಏನ ಸುಡಗಾಡ ಅಡ್ವರ್ಟೈಸಮೆಂಟ್ ಬರತಾವರಿಪಾ ಟಿ.ವಿ. ಒಳಗ, ನನಗ ಅನಸ್ತದ ಅರ್ಧಾ ನಮ್ಮ ಸಂಸಾರ ಹಾಳಾಗೋದ ಈ ಟಿ.ವಿ. ಸಂಬಂಧ ಅದು ಈ ಅಡ್ವರ್ಟೈಸನಿಂದನ ಅಂತ.
ಅಲ್ಲಾ, ಈಗ ಎಲ್ಲಾ ಬಿಟ್ಟ ಈ ಟಿ.ವಿ. ಅಡ್ವರ್ಟೈಸಮೆಂಟ ಮ್ಯಾಲೆ ಯಾಕ ಬಂತ ನನ್ನ ಸಿಟ್ಟ ಅನ್ನಲಿಕ್ಕೆ ನಿನ್ನೆ ಬೆಳಿಗ್ಗೆ ಎದ್ದ ಸೋಲಾರನಾಗ ಬಿಸಿನೀರ ಬರವಲ್ವು, ಗೀಸರ್ ಬ್ಯಾರೆ ಕೆಟ್ಟ ಹೋಗೇದ ಮೊದ್ಲ ಮಳೇಗಾಲ ಅಂತ ನನ್ನ ಹೆಂಡತಿಗೆ ಸ್ನಾನಕ್ಕ ಗ್ಯಾಸ ಮ್ಯಾಲೆ ಒಂದ ತಪ್ಪೇಲಿ ನೀರ ಎಸರ ಮಾಡಿ ಕೊಡ ಅಂತ ಬಚ್ಚಲದಾಗಿಂದ ಒದರಿದರ, ಅಕಿ ಅಡಿಗಿ ಮನ್ಯಾಗಿಂದ
“ಗ್ಯಾಸ ಖಾಲಿ ಇಲ್ಲಾ, ಅರ್ಜೆಂಟ್ ಇದ್ದರ ಬೇಕಾರ ತಣ್ಣೀರ ಮಾಡಿ ಹೋಗ್ರಿ ಇಲ್ಲಾ ಗ್ಯಾಸ ಮ್ಯಾಲಿನ ಕೆಲಸಾ ಮುಗಿಯೋತನಕಾ ಬಚ್ಚಲದಾಗ ಹಂಗ ನಿಂತಿರ್ರಿ. ನಾ ಒಂದ ಹತ್ತ ಸರತೆ ಹೇಳಿದೆ ಆ ಸುಡಗಾಡ ಗೀಸರ್ ಹೊರಗ ಒಗದ ಹ್ಯಾವೆಲ್ಸ್ ಗೀಸರ ತೊಗೊರಿ ಅಂತ, ನನ್ನ ಮಾತ ಎಲ್ಲೆ ಕೇಳ್ತೀರಿ” ಅಂತ ಅಡಿಗಿಮನ್ಯಾಗಿಂದನ ಒದರಿದ್ಲು.
ಏನ್ಮಾಡ್ತೀರಿ, ನಾ ನೋಡಿದರ ಬಚ್ಚಲ ಮನ್ಯಾಗ ಎಲ್ಲಾ ಅರಬಿ ಕಳದ ಅಭ್ಯಂಗ ಸ್ನಾನಕ್ಕ ರೆಡಿ ಆಗಿ ನಿಂತರ ಈಕಿ ಥಣ್ಣಿರ ಮಾಡಿ ಹೋಗರಿ ಇಲ್ಲಾ ಥಂಡ್ಯಾಗ ನಾ ನೀರ ಕಾಸಿ ಕೊಡೊತನಕ ನಿಲ್ಲರಿ ಅಂದ್ಲು.
ಹಂಗ ಅಕಿ ಎಲ್ಲಾ ಬಿಟ್ಟ ಹ್ಯಾವೆಲ್ಸ್ ಗೀಸರ ಯಾಕ ತೊಗೊ ಅಂದ್ಲು, ಅಕಿ ತವರಮನಿಯವರ ಪೈಕಿ ಯಾರರ ಹ್ಯಾವೇಲ್ಸದ್ದ ಎಜೆನ್ಸಿ ತೊಗೊಂಡಾರೇನ ಅಂತ ತಲಿಕೆಡಸಿಗೊಳ್ಳಿಕ್ಕೆ ಹೋಗಬ್ಯಾಡರಿ, ಅದ ಹಂಗೇನಿಲ್ಲಾ.
ಯಾವಾಗಿಂದ ಈ ಟಿ.ವಿ. ಒಳಗ ಆ ಹ್ಯಾವೆಲ್ಸದ್ದ ’ಹ್ಯಾವೆಲ್ಸ್ ಅಪ್ಲೈಯನ್ಸಿಸ್ – ರಿಸ್ಪೆಕ್ಟ ವುಮೆನ್’ಅಂತ ಅಗದಿ ಕ್ರೀಯೇಟಿವ್ ಅಡ್ವರ್ಟೈಸಮೆಂಟ್ಸ್ ಅಗೇನೆಸ್ಟ ಮೆನ್ ಬರಲಿಕತ್ತಾವಲಾ ಆವಾಗಿಂದ ನನ್ನ ಹೆಂಡತಿಗೆ ಏನ ತೊಗೊಂಡರು ಹ್ಯಾವೆಲ್ಸ್ ತೊಗೊಬೇಕಂತ ತಲ್ಯಾಗ ಹೊಕ್ಕ ಬಿಟ್ಟದ. ಹಂಗ ಒಂದ ಹದಿನೈದ ವರ್ಷದ ಹಿಂದ ಆಗಿದ್ದರ ಈಕಿ ಗಂಡನ್ನು ಹ್ಯಾವೆಲ್ಸನವರ ಕಡೆನ ತೊಗೊತಿದ್ಲೊ ಏನೊ ಅನ್ನೊ ಅಷ್ಟ ಇಕಿಗೆ ಆ ಅಡ್ವರ್ಟೈಸಮೆಂಟ ಕಂಡರ ಪ್ರೀತಿ.
ಇತ್ತೀಚಿಗೆ ಆ ಅಡ್ವರ್ಟೈಸಮೆಂಟ ನೋಡಿ ನನ್ನ ಹೆಂಡತಿ ನನ್ನ ಅರಬಿ ಇಸ್ತ್ರೀ ಮಾಡೋದಂತು ಬಿಟ್ಟ ಬಿಟ್ಟಾಳ, ’ಬೇಕಾರ ನೀವ ಇಸ್ತ್ರೀ ಮಾಡ್ಕೋರಿ ಇಲ್ಲಾಂದರ ಮುದಡಿ ಆಗಿದ್ದ ಅರಬಿ ಹಂಗ ಹಾಕೊಂಡ ಹೋಗ್ರಿ. ನಂಗೇನ ಪಿಸ್ಸಾ… ನಾ ಸ್ತ್ರೀ, ಇಸ್ತ್ರೀ ಅಲ್ಲಾ’ ಅಂತ ಆ ಟಿ.ವಿ ಒಳಗಿನ ಡೈಲಾಗ ಹೊಡಿತಾಳ.
ಮೊನ್ನೆ ಚಟ್ನಿಪುಡಿ ತೀರಿ ಒಂದ ವಾರ ಆಗಲಿಕ್ಕೆ ಬಂತ ಇನ್ನು ಹೊಸಾ ಚಟ್ನಿಪುಡಿ ಯಾಕ ಮಾಡಿಲ್ಲಾ ಅಂದರ
’i am your ಪತ್ನಿ…not ಚಟ್ನಿ. ನಂಗ ಆದಾಗ ನಾ ಮಾಡೋಕಿ, ನೀ ಬೇಕಾರ ನಿಮ್ಮವ್ವನ್ನ ಕಡೆ ಚಟ್ನಿಪುಡಿ ಮಾಡಿಸ್ಗೊ ಇಲ್ಲಾ ರೊಕ್ಕಾ ಕೊಟ್ಟ ಹೊರಗಿಂದ ತೊಗಂಡ ಬಂದ ತಿನ್ನ’ ಅಂತ ಅಂದಳು, ಏನ್ಮಾಡ್ತೀರಿ?
ನಾ ಏನ ಅಡಿಗಿ ಮನ್ಯಾಗಿನ ಕೆಲಸಾ ಹೇಳಿದರು i am not a kitchen appliances, respect women ಅಂತಾಳ.
ಖರೇ ಹೇಳ್ಬೇಕಂದರ ಅಡಿಗಿ ಮನ್ಯಾಗಿಂದ ಅರ್ಧಾ ಕೆಲಸ ಮಾಡೋದ ನಮ್ಮವ್ವನ, ಇನ್ನ ಇಕಿನ ಏನರ ಎಲ್ಲಾ ಕೆಲಸಾ ಮಾಡ್ತಿದ್ದರ ಅಂತು ಮುಗದ ಹೋಗತಿತ್ತ.
ನಾನು ಸುಮ್ಮನ ಇವತ್ತಿಲ್ಲಾ ನಾಳೆ ಈ havels ಹವಾ ಬದಲಾಗತದ ಅಂತ ನೋಡೆ ನೋಡಿದೆ. ಆದರ ಬರಬರತ ಹ್ಯಾವೆಲ್ಸ್ ಹವಾ ಜಾಸ್ತಿನ ಆಗಲಿಕತ್ತದ ಹೊರತು ಕಡಿಮಿ ಆಗೋ ಲಕ್ಷಣ ಏನ ಕಾಣವಲ್ವು ಬಿಡ್ರಿ, ಮನ್ಯಾಗ ಮಾತ ಮಾತಿಗೆ ’ಹ್ಯಾವೆಲ್ಸ್ ಅಪ್ಲೈಯನ್ಸಿಸ್- ರಿಸ್ಪೆಕ್ಟ ವುಮೆನ್’ ಅಂತ ಅಂದ ನಂಗ ದಮ್ಮ ಕೊಡಕೋತ ಅಡ್ಡಾಡತಾಳ. ಅಲ್ಲಾ ನಾ ಸಿರಿಯಸ್ ಆಗಿ ಹೇಳ್ತೇನಿ ಈ ಹ್ಯಾವೆಲ್ಸ್ ಹವಾ ಹಿಂಗ ನಡಿತಂದರ ಆ havells wire may not catch fire ಆದರ ಅದನ್ನ ನೋಡಿ ನೋಡಿ ನಮ್ಮ ಸಂಸಾರಕ್ಕಂತು ಬೆಂಕಿ ಹತ್ತೋದ ಗ್ಯಾರಂಟಿ ಅನಸಲಿಕತ್ತದ.
ಅಲ್ಲಾ ಆದರೂ ಅವ ಹೆಂತಾ ಜಾಹಿರತು ಏನತಾನ ಅಂತೇನಿ, ಒಂದ ಚೂರರ ಗಂಡಸರ ಮರ್ಯಾದಿ ಉಳಸಬೇಕೋ ಬ್ಯಾಡೊ. ’ಹವಾ ಬದಲೇಗಿ’ ಅಂತ ಗಂಡ ಲಗ್ನ ಆದ ಮ್ಯಾಲೆ ಹೆಂಡತಿ ಬದ್ಲಿ ಮ್ಯಾರೇಜ ರೆಜಿಸ್ಟ್ರೇಶನ್ ಬ್ಯೂರೋ ಒಳಗ ತಂದ ಹೆಸರ ಚೇಂಜ್ ಮಾಡ್ಕೊತಾನಂತ, ಎಲ್ಲೆ ಹಿಂಗ ಹವಾ ಬದಲಾಗಕೋತ ಎಲ್ಲೆ ಇವರ ಹವಾ ಬದಲೇಗಿ ಅಂತ ಗಂಡಸರ ಕಡೆ ಹಡಸಿಸಿ ಆಮ್ಯಾಲೆ ಹೆಂಡ್ತಿ ಬಾಯಿಲೆ ’i am not delivery machine- respect women’ ಅಂತ ಅನಸ್ತಾರೊ ಅಂತ ನಂಗ ಖರೇನ ಚಿಂತಿ ಹತ್ತಿ ಬಿಟ್ಟದ. ಗಂಡಸರ ಹಡೇಯೊದ ಜಾಹಿರಾತನಾಗ ಇಷ್ಟsನ ಮತ್ತ ಖರೇ, ಖರೇ ಅಲ್ಲಾ. ಹ್ಯಾವೇಲ್ಸ್ ಹೆಣ್ಣಮಕ್ಕಳ ಹವಾ ಬದಲ ಮಾಡಬಹುದು ಗಂಡಸರ ನೇಚರ್ ಅಲ್ಲಾ.
ನಾ ಖರೇ ಹೇಳ್ತೇನಿ ನನ್ನ ಹೆಂಡತಿ ಹಿಂಗ ಹ್ಯಾವೆಲ್ಸ್ ಹೆಸರಿಲೆ ಹಾರಡೋದನ್ನ ನೋಡಿದರ ಅವರ ಹೆಂಗ ಟಿ.ವಿ. ಒಳಗ ಹವಾ ಬದಲೇಗಿ ad ಒಳಗ ಪೇರೆಂಟ್ಸನ್ನ adopt ಮಾಡೋದರ ಬಗ್ಗೆ ತೋರಸ್ತಾರಲಾ ಹಂಗ ನಾವು ಇದ್ದ ಒಂದ ಹೆಂಡ್ತಿನ್ನ ’ಹವಾ ಬದಲೇಗಿ’ ಅಂತ ಮತ್ತೊಬ್ಬರಿಗೆ adopt ಕೊಟ್ಟಬಿಡೋದ ಛಲೋ ಅನಸ್ತದ, ಹೌದ ಅಲ್ಲ ಮತ್ತ ? ಈ ಪರಿ ಕಾಡಲಿಕತ್ತರ ಏನ ಮಾಡ್ತೀರಿ ಮಾರಾಯರ. ಅಲ್ಲಾ ಹಂಗ ಹೆಂಡ್ತಿನ್ನ adopt ತೊಗೊಳೊರ ಸಿಗಂಗಿಲ್ಲಾ ಆ ಮಾತ ಬ್ಯಾರೆ, ಆದರೂ ಮಾತ ಹೇಳ್ತೇನಿ.
ನಂಗಂತು ಈ ಹೆಂಡಂದರ ನಮ್ಮಂತಾ ಗಂಡಸರ ಜೀವನದಾಗ wooಮೆನ್ ಇದ್ದಂಗ, ನಾವು ಯಾವಾಗಲು ಅವರನ ವೂ (ಮಸ್ಕಾ ಹೊಡ್ಕೋತ) ಮಾಡ್ಕೋತ ಇರಬೇಕ ಅದಕ್ಕ ಅವರಿಗೆ wooಮೆನ್ ಅನ್ನೋದ ಅಂತ ಅನಸ್ತದ.
ಒಂದ ಸ್ವಲ್ಪ ದಿವಸದ ಹಿಂದ ಅಂದರ ಈ ಹ್ಯಾವೆಲ್ಸ ಹವಾ ಬದಲಾಗೋದಕಿಂತ ಮೊದ್ಲ ಇಕಿ ನನ್ನ ಕ್ಯಾಮಾರಾ, ಬ್ಯಾಡ್ಮಿಂಟನ್ ಬ್ಯಾಟ, ಜಾಗಿಂಗ ಶೂ ಎಲ್ಲಾ ಅಕಿಗೆ ಕಣ್ಣಿಗೆ ಕಂಡಾಗೊಮ್ಮೆ ನನಗ ಅಸಂಯ್ಯ ಮಾಡಲಿಕ್ಕೆ ’ಬಡಿ..ಬಡಿ ಬಾತೆ..ಹುಂ..ಹೂಂ..ಕರತೆಥೆ’ಅಂತ ಅಣಗಿಸಿ “ರ್ರಿ, ಇವನ್ನೇಲ್ಲಾ olx ನಾಗ ಮಾರೆರ ಮಾರ್ರಿ, ಸುಳ್ಳ ಮನ್ಯಾಗ ವಜ್ಜ ಆಗ್ಯಾವ, ನೀವ ಅಂತು ಒಂದ ದಿವಸ ನಸೀಕಲೇ ಎದ್ದ ಜಾಗಿಂಗ ಹೋಗಿದ್ದ ನೋಡ್ಲಿಲ್ಲಾ, ಬ್ಯಾಡ್ಮಿಂಟನ್ ಕಾಕ್ ಹಿಡದದ್ದ ನೋಡ್ಲಿಲ್ಲಾ, ದೊಡ್ಡಿಸ್ತನಾ ಮಾಡಿ ಎಲ್ಲಾ ತೊಗೊಂಡ ಬಂದ್ರಿ” ಅಂತ ಬೈತಿದ್ಲು.
ನಾ ಆವಾಗ ತಲಿ ಕೆಟ್ಟ “ಲೇ, olx ಒಳಗ ಸಬ ಕುಛ್ ಬಿಕ್ತಾ ಹೈ, ಫ್ರೀ ಮೆ ad ಡಾಲೊ ಔರ ಫ್ರೀ ಮೆ ಬೇಚೋ, ಒಂದ ದಿವಸ ನಿನ್ನು ಅದರಾಗ ಮಾರತೇನಿ ಸುಮ್ಮನ ಬಾಯಿಮುಚಗೊಂಡ ಕೂಡ” ಅಂತ ನಾ ಜೋರ ಮಾಡಿದರ
“ಯಾಕ ನಾ ಖರೇ ಹೇಳಿದ್ದ ನಿಮಗ ಸಿಟ್ಟ ಬಂತೇನ, ನಿಮ್ಮನ್ನ ನಾ ಸೀದಾ quickrನಾಗ mspಗೆ ( maximum selling price) ಮಾರತೇನಿ ನೋಡ್ತಿರ್ರಿ” ಅಂತ ತಿರಗಿ ನನಗ ಅಂತಿದ್ಲು.
ನಾ ಒಂದ ಮಾತ ಹೇಳ್ತೇನಿ ಈ ಹ್ಯಾವೆಲ್ಸ ಹವಾ ನಮ್ಮ ಮನ್ಯಾಗ ಏನರ ಬದಲಾಗಲಿಲ್ಲಾ ಅಂದರ ನಾ ಖರೇನ ಅಕಿನ್ನ quickrನಾಗ msp ಬರಲಿಲ್ಲಾ ಅಂದರು ಅಡ್ಡಿಯಿಲ್ಲಾ lsp ( less selling price) ಸಿಕ್ಕರ ಸಾಕ ಮಾರೇ ಬಿಡಬೇಕ ಅಂತ ಡಿಸೈಡ ಮಾಡೇನಿ.
ಅದಕ್ಕ ನಾ ಮೊದ್ಲ ಹೇಳಿದ್ನೇಲ್ಲಾ ಈ ಸುಡಗಾಡ ಟಿ.ವಿ. ad ಸಂಸಾರನ ಹಾಳ ಮಾಡ್ತಾವ ಅಂತ. ಮತ್ತ ನೀವೆಲ್ಲರ ನನ್ನ ಹೆಂಡತಿಗೆ ನಿನ್ನ ಗಂಡ ನಿನ್ನ ಬಗ್ಗೆ ಹಿಂಗ ಅವಧಿ ಒಳಗ ಆರ್ಟಿಕಲ್ ಬರದಿದ್ದಾ ಹೇಳಿ ಗೀಳೀರಿ ಆಮ್ಯಾಲೆ ಅಕಿ ಆ ಹ್ಯಾವೆಲ್ಸ್ ಕುಕ್ಕರ ತೊಗೊಂಡ ನನ್ನ ಜಜ್ಜತಾಳ.
ಆದರು ಏನ ಆಗಲಿ ಒಂದ ಮಾತ ಮರಿಬ್ಯಾಡರಿ ಮತ್ತ
’ಹೆಂಡತಿ kitchen appliances ಅಲ್ಲಾ, you should always respect woo-men’

Leave a Reply

Your email address will not be published. Required fields are marked *

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ