ದಂಪತ್ ಬ್ಲಡ್ ಬಾಗಣ ಕೊಡ್ಲಿಕ್ಕೆ ಬಂದೇವಿ…

ಈಗ ಒಂದ ಮೂರ ವರ್ಷದಿಂದ ನಾ ರಕ್ತಾ ಕೊಡಲಿಕ್ಕೆ ಶುರು ಮಾಡೇನಿ, ಹಂಗ ನಲವತ್ತೈದ ವರ್ಷದ ತನಕಾ ಒಟ್ಟ ರಕ್ತಾ ಕೊಟ್ಟಿದ್ದಿಲ್ಲಾ, ಹಂತಾವ ಒಮ್ಮಿಂದೊಮ್ಮಿಲೇ ಅದು ಕೋರೊನಾ ಟೈಮನಾಗ ರಕ್ತಾ ಕೊಡಲಿಕ್ಕೆ ಶುರು ಮಾಡಿದೆ. ರಕ್ತಾ ಕೊಡಬೇಕಂದರ 45kg ವೇಟ್ ಇರಬೇಕ ಅಂತ ಕಂಪಲ್ಸರಿ ಇತ್ತ ಮ್ಯಾಲೆ ನನ್ನ ವೇಟ ನಲವತ್ತೈದ ದಾಟಲಿಕ್ಕೆ ನಂಗ ನಲವತ್ತ ವರ್ಷ ಹಿಡಿತ ಅನ್ನರಿ. ಅದು ಎರಡ ಹಡದ ಹೆಂಡ್ತಿದ ಆಪರೇಶನ್ ಆದಮ್ಯಾಲೆ ಮತ್ತ.
ಇನ್ನ ನಾ ರಕ್ತಾ ಕೊಡ್ತೇನಿ ಅಂತ ಅಂದಾಗ ಮೊದ್ಲ ಖುಶಿ ಆದೋಕಿ ನನ್ನ ಹೆಂಡ್ತಿ, ಅದರಾಗ ನಾ ಲಾಕಡೌನ್ ಒಳಗ ಮನ್ಯಾಗ ಕೂತ ತಿಂದ-ತಿಂದ ಒಂಚೂರ ಗಡತರ ಆಗಿದ್ದ ಅಕಿಗೆ ನೋಡ್ಲಿಕ್ಕೆ ಆಗ್ತಿದ್ದಿಲ್ಲಾ, ಹಿಂಗಾಗಿ ನನಗ donate blood save lives ಅಂತ ಗಂಟ ಬಿದ್ದ ತಾನ ಕರಕೊಂಡ ಹೋದ್ಲು.
ಹಿಂಗ ನಾವಿಬ್ಬರೂ ಹೋಗೊದಕ್ಕ ಬ್ಲಡ್ ಕ್ಯಾಂಪ್ ಆರೆಂಜ್ ಮಾಡಿದ್ದ ದತ್ತಮೂರ್ತಿಯವರ ನಾ ನನ್ನ ಹೆಂಡ್ತಿನ ರಕ್ತಾ ಕೊಡಸಲಿಕ್ಕೆ ಕರಕೊಂಡ ಬಂದೇನಿ ಅಂತ ತಿಳ್ಕೊಂಡ
’ವೈನಿ…ಬರ್ರಿ..ಬರ್ರಿ…ಮೊದ್ಲ ನೀವು ಹೊಟ್ಟಿ ತುಂಬ ಸೀರಾ ಉಪ್ಪಿಟ್ಟ ತಿಂದ ಗಟ್ಟಿ ಆಗರಿ, ಆಮ್ಯಾಲೆ ರಕ್ತಾ ಕೊಟ್ಟಿರಂತ’ ಅಂತ ಅಂದರ.
ಅಲ್ಲಾ ಯಾರ ಆತ ನಮ್ಮಿಬ್ಬರನೂ ಒಟ್ಟಿಗೆ ನೋಡಿದ್ರ ರಕ್ತಾ ಕೊಡಲಿಕ್ಕೆ ಎಲಿಜಿಬಲ್ ಅಕಿನ ಅಂತ ತಿಳ್ಕೋತಾರ ಬಿಡ್ರಿ. ಅದ ಸಹಜ, ಪಾಪ ಅದರಾಗ ಅವರದೇನ ತಪ್ಪ ಇದ್ದಿದ್ದಿಲ್ಲಾ.
’ಏ, ನಾ ಒಬ್ಬೋಕಿನ ಅಲ್ಲಾ, ಈ ಸರತೆ ನಮ್ಮ ಮನೇಯವರದು ರಕ್ತಾ ತೊಗೊರಿ, ನಾವ ದಂಪತ್ ಬ್ಲಡ್ ಬಾಗಣಾ ಕೊಡ್ಲಿಕ್ಕೆ ಬಂದೇವಿ’ ಅಂತ ನನ್ನ ಹೆಂಡ್ತಿ ಅಂದದ್ದಕ್ಕ ಅವರಿಗೆ ಒಂದ ಸರತೆ ಏನ ಮಾತಡ್ಬೇಕ ತಿಳಿಲಿಲ್ಲಾ.
’ವೈನಿ ಅದಕ್ಕ ಬ್ಲಡ್ ಬಾಗಣಾ ಅನ್ನಂಗಿಲ್ಲಾ, ಬ್ಲಡ್ ದಾನಾ ಅಂತಾರ’ ಅಂತ ಅಕಿಗೆ ತಿಳಿಸಿ ಹೇಳೋದರಾಗ ಅವರಿಗೆ ರಗಡ ಆತ. ಕಡಿಕೆ ಅವರ ಒಂದ ಸರತೆ ನನ್ನ ಮಾರಿ ನೋಡಿ ’ದಣೇಯಿನ ಹುಡುಗ ಒಂದ ಸ್ವಲ್ಪ ನೋಡೊ ಹಂಗ ಆಗಿತ್ತ ಇಲ್ಲೇ ನೋಡಿದರ ಅವನ ಹೆಂಡ್ತಿ ಮನ್ಯಾಗ ಅವನ ರಕ್ತಾ ಹಿರೋದ ಅಲ್ಲದ ಮತ್ತ ಇಲ್ಲೆ ಹಿಡಕೊಂಡ ರಕ್ತಾ ಕೊಡಸಲಿಕ್ಕೆ ಬಂದಾಳಲಾ’ ಅಂತ ಮನಸಿನಾಗ ಅನ್ಕೊಂಡ
’ಏ…ಅವನೂ ರಕ್ತಾ ಕೊಡಲಿಕ್ಕೆ ರೆಡಿ ಆಗ್ಯಾನ, ಭಾಳ ಛಲೋ ಆತ, ಅಂವಾ ಕೊಡೊದ ಹೆಚ್ಚೊ ನಾವ ತೊಗೊಳೊದ ಹೆಚ್ಚೊ’ ಅಂತ ಇಬ್ಬರದು ರಕ್ತಾ ತೊಗೊಂಡರ.
ಸರಿ ಇಬ್ಬರೂ ರಕ್ತಾ ಕೊಟ್ಟ ಬಂದ ’ದಂಪತ್ ರಕ್ತದಾನಿಗಳು’ ಅಂತ ಅನಿಸ್ಗೊಂಡವಿ. ಹಂಗ ಅದನ್ನ ಮಾರ್ಕೇಟ್ ಮಾಡ್ಕೊಂಡೊಕಿ ನಮ್ಮಕಿ, ಅಕಿ ಹಂತಾದರಾಗ ಭಾಳ ಶಾಣ್ಯಾಕಿ ಬಿಡ್ರಿ ಆ ಮಾತ ಬ್ಯಾರೆ.
ಮೊದ್ಲ ಸ್ಟೇಟಸ್ ಒಳಗ ತಂದ ಒಬ್ಬೊಕಿದ ರಕ್ತಾ ಕೊಡೊ ಫೋಟೊ ಹಾಕ್ಕೊಂಡ ’ today ದಂಪತ್ blood ದಾನಾ’ ಅಂತ ಬರ್ಕೊಂಡಿದ್ಲು, ನಮ್ಮವ್ವ ’ಏ….ದಂಪತ್ ಅಂತಿ ಗಂಡನ ಜೊತಿ ಇದ್ದದ್ದ ಫೋಟೊ ಹಾಕ್ಕೊ….apple juice ಜೊತಿ ಅಲ್ಲಾ ’ ಅಂತ ಬೈದ ಮ್ಯಾಲೆ ಫೋಟೊ ಚೇಂಜ್ ಮಾಡಿದ್ಲು.
ನಂಗ ಅಕಿ ಎಲ್ಲೆ ಸ್ಟೇಟಸ್ ಹಾಕಲಿಕ್ಕೆ ಒಂದ ಫೋಟೊ ಸಿಗ್ತದ ಅಂತ ರಕ್ತಾ ಕೊಟ್ಟಳೊ ಅಂತ ಡೌಟ ಬರಲಿಕತ್ತ. ಒಂದ ಸ್ಟೇಟಸ್ ಫೋಟೊ ಸಂಬಂಧ ಅಕಿ ಏನ ಬೇಕಾದ ಮಾಡ್ತಾಳ.
ಅಕಿ ಸ್ಟೇಟಸ್ ಕೆಳಗ ಜನಾ
’ಅಯ್ಯ, ರಗಡ ಗಂಡನ ರಕ್ತಾ ಹೀರಿ ತೊಗೊ ನೀ ಎಷ್ಟ ಕೊಟ್ಟರು ಕಡಮಿ’ ಅಂತ ಒಬ್ಬರ ಬರದರ ಮತ್ತೊಬ್ಬರ
’ರಕ್ತಾ ಕೊಟ್ಟರ ನೀ ಮತ್ತ ದಪ್ಪ ಆಗ್ತಿ ನೋಡ’ ಅಂತ ಹೆದರಸಿದರ. ಅಲ್ಲಾ ಹಂಗ ನಾ ರಕ್ತಾ ಕೊಡಲಿಕ್ಕೆ ಡಿಸೈಡ ಮಾಡಿದ್ದೂ ಹಿಂಗರ ದಪ್ಪ ಆದರ ಆಗಲಿ ಅನ್ನೊ ಕಾರಣಕ್ಕ. ಆದರ ನಾ ಏನ ದಪ್ಪ್ ಆಗಲಿಲ್ಲಾ ಆ ಮಾತ ಬ್ಯಾರೆ.
ಮುಂದ ಇದ ವರ್ಷಾ ಕಂಟಿನ್ಯೂ ಆತ. ಹಂಗ ಈ ವರ್ಷ ಕೊಟ್ಟಿದ್ದ ಮೂರನೇ ವರ್ಷ. ಅದರಾಗ ಈ ಸರತೆ ಅವರ ರಕ್ತದಾನದ ಜೊಡಿ, organ donation registrationದ್ದ ಇತ್ತ. ಅಂದರ ಅಂಗಾಂಗಳನ್ನ ಮುಂದ ದಾನಾ ಕೊಡೋರ ಈಗ ರೆಜಿಸ್ಟ್ರೇಶನ್ ಮಾಡಸಬಹುದಿತ್ತ. ಅಂಗಾಂಗ ಅಂದರ ಕಣ್ಣ, ಕಿಡ್ನಿ ಅದು ಇದು…ನನ್ನ ಹೆಂಡತಿ ಅದನ್ನ ನೋಡಿ
“ರ್ರೀ ನೀವು ಕೊಡ್ರಿ ಅಂದ್ಲು, ಲೇ ಅದ ಈಗ ಕೊಡೊದಲ್ಲಾ, ಮುಂದ ಕೊಡೋದು, ಈಗ ರೆಜಿಸ್ಟ್ರೇಶನ್ ಮಾಡ್ಸೋದ ಇಷ್ಟ’ ಅಂತ ಅಂದರ
’ನಾಳೆ ಮಾಡೋ ಕೆಲಸ ಇವತ್ತ ಮಾಡೋದ ಛಲೋ. ಹೆಂಗಿದ್ದರೂ ಇಲ್ಲಿ ತನಕ ಬಂದೇವಿ ಕೊಟ್ಟ ಬಿಡರಿ’ ಅಂತ ಅಂದ್ಲು. ಆಮ್ಯಾಲೆ ಡಿಟೇಲ್ಸ್ ಎಲ್ಲಾ ಓದಿ ಇದ ಇದ್ದಾಗ ಕೊಡೊದಲ್ಲಾ, ಮ್ಯಾಲೆ ಹೋದಮ್ಯಾಲೆ ಕೊಡೊದು ಅಂತ ಖಾತ್ರಿ ಆದ ಮ್ಯಾಲೆ ವಳತ ಅಂದ್ಲ ಆ ಮಾತ ಬ್ಯಾರೆ.
ಇನ್ನ ನಾವ ದಂಪತ್ತ್ ರಕ್ತಾ ಕೊಡ್ತೇವಿ ಅಂದರ ನಮ್ಮ ಜೊತಿ ನಿಂತ ಆರ್ಗನೈಜರ್ಸ ಸಹಿತ ಫೋಟೊ ಹೊಡಿಸ್ಗೊಂಡ ಸ್ಟೇಟಸ್ ಇಟ್ಗೊಳೊರ, ನಮ್ಮ ದೋಸ್ತ ಕಿರಣ
’ಹೋದ ಸರತೆನೂ ಇದ ವೈನಿ ಜೊತಿನ ರಕ್ತಾ ಕೊಟ್ಟಿದ್ದೇನಲೇ’ ಅಂದಾ.
’ಹೂಂನೋ ಯಪ್ಪಾ, ಹೋದ ಸರತೆ ಮಾಸ್ಕ ಹಾಕ್ಕೊಂಡಿದ್ಲು ನೀ ಗೊತ್ತ ಹಿಡದಿಲ್ಲಾ, ಸುಮ್ಮನ ಕೂಡ ಎಲ್ಲೇರ ಗಂಡಾ ಹೆಂಡತಿ ನಡಕ ಜಗಳಾ ಹಚ್ಚಿ-ಗಿಚ್ಚಿ’ ಅಂತ ಅವಂಗ ಬೈದ ಗಪ್ ಕೂಡಸಿದೆ. ಅಲ್ಲಾ ಇಷ್ಟ ಕ್ಲೀಯರ್ ಆಗಿ ಹೇಳಲಿಕತ್ತೇವಿ ದಂಪತ್ ರಕ್ತ್ ದಾನ ಅಂತ ಮತ್ತ ಖಾಸ ಹೆಂಡ್ತಿ ಜೊತಿನ ಏನ ಅಂತ ಕೇಳ್ತಾರ. ಹಂಗ ಅಪ್ಪಿ-ತಪ್ಪಿ ಬ್ಯಾರೆಯವರನ ಕರಕೊಂಡ ಹೋದರ ಅದಕ್ಕ ದಂಪತ್ ಅಂತಾರ? ಬೈ ಮಿಸ್ಟೇಕ್ ಕರಕೊಂಡ ಹೋದರು ಅದನ್ನೇನ ಸ್ಟೇಟಸ್ ಇಟ್ಟ ಮಾರ್ಕೇಟ್ ಮಾಡ್ಕೊಳಿಕ್ಕೆ ಬರತದ, ಏನ ಜನಾನೋ ಏನೊ.
ಇನ್ನ ಹಿಂಗ ನಮಗ ಎಲ್ಲಾರೂ ’ ದಂಪತ್ ರಕ್ತ ದಾನಾ ಮಾಡೊರ ಬಂದರು’ ಅಂತ ಅನ್ನೋದ ನೋಡಿ ನಾ ಮಷ್ಕೀರಿಗೆ
’ಅಲ್ಲಾ ನಾವ ಮೂರ ವರ್ಷ ಆತ ದಂಪತ್ ರಕ್ತಾ ಕೊಡಲಿಕತ್ತ ನಮಗ ಸಪರೇಟ್ ಸಿಂಗಲ್ ಬೆಡ್ ಮ್ಯಾಲೆ ದೂರ ದೂರ ಮಲಗಿಸಿ ರಕ್ತಾ ತೊಗೊತಿರಿ, ಹಂಗ ಮಾಡಿದರ ದಂಪತ್ ಕೊಟ್ಟಂಗ ಹೆಂಗ ಆಗ್ತದ ನಮಗ ಡಬಲ್ ಬೆಡ್ ಕೊಡಬೇಕ’ ಅಂದೆ.
ಅದಕ್ಕ ದತ್ತಮೂರ್ತಿಯವರ ಸಿರಿಯಸ್ ಆಗಿ
’ನಮ್ಮ ಕಡೆ ಡಬಲ್ ಬೆಡ್ ಇಲ್ಲಾ ಆದರ ನಿಮ್ಮಿಬ್ಬರದು ಸಿಂಗಲ್ ಬೆಡ್ ಜೋಡಿಸ್ತೇವೆ ತೊಗೊಳೊ ಮಾರಾಯಾ’ ಅಂತ ಬೆಡ್ ಜೋಡಿಸಿ ಬ್ಲಡ್ ತೊಗೊಂಡರ. ಅಗದಿ ಉಳದ ರಕ್ತಾ ಕೊಡೊ ಮಂದಿ ನಮನ್ನ ನೋಡೊ ಹಂಗ.
ಇನ್ನ ನನ್ನ ಹೆಂಡ್ತಿ ನನಗ ಜಬರದಸ್ತಿ ಜೀವನದಾಗ ಒಮ್ಮೇರ ರಕ್ತಾ ಕೊಡಬೇಕ ಅಂತ ಒಂದನೇ ಸರತೆ ಕರಕೊಂಡ ಹೋಗಲಿಕ್ಕೆ ಇನ್ನೊಂದ ಕಾರಣ ಇತ್ತ.
ಇಕಿಗೆ ಯಾರೋ ಪುಣ್ಯಾತ್ಮರ ರಕ್ತಾ ಕೊಡೊಕಿಂತ 72 ತಾಸ ಮೊದ್ಲ ತೊಗೊಬಾರದ, ಆಮ್ಯಾಲೆ 72 ತಾಸ ತೊಗೊಬಾರದ ಅಂತ ಹೇಳಿದ್ದರ. ಅದ ಏನ ತೊಗೊಬಾರದ ಅನ್ನೋದನ್ನ ಬಾಯಿ ಬಿಟ್ಟ ಹೇಳೋದ ಏನ ಬ್ಯಾಡ ಅಲಾ? ಹಿಂಗಾಗಿ ಇಕಿ
’ಇವರ ರಕ್ತಾ ಕೊಡಲಿಕ್ಕೆ ಹೂಂ ಅಂದರ ಒಂದ ವಾರರ ಇವರದ ಪಾರ್ಟಿ- ಗಿರ್ಟಿ ನಿಲ್ಲತಾವ ಅದರಾಗ ಈ ಲಾಕಡಾನ್ ಆದಾಗಿಂದ ಅಂತೂ ಮನ್ಯಾಗ ಶುರು ಹಚಗೊಂಡ ಬಿಟ್ಟಾರ’ ಅಂತ ನನಗ ಮೊದ್ಲನೇ ಸಲಾ ರಕ್ತಾ ಕೊಡಲಿಕ್ಕೆ ರೆಜಿಸ್ಟ್ರ‍ೇಶನ್ ಮಾಡಿಸಿದ್ಲು.
ಇನ್ನ ಹೂಂ ಅಂದಿದ್ದರ ತಪ್ಪಿಗೆ ವೃತಾ ಪಾಲಸಬೇಕಾತ, ಮ್ಯಾಲೆ ರಕ್ತಾನು ಕೊಡಬೇಕಾತ ಅನ್ನರಿ. ಹಿಂಗ ಒಂದ ಸರತೆ ನಾ ಸ್ಟ್ರಿಕ್ಟ್ ಆಗಿ ಪಾಲಸಿದ್ದ ನೋಡಿ ಇಕಿ
’ರ್ರಿ…ನೀವ ಸುಮ್ಮನ ತಿಂಗಳಾ- ತಿಂಗಳಾ ಯಾಕ ರಕ್ತಾ ಕೊಡಬಾರದು’ ಅಂತ ಗಂಟ ಬಿದ್ದಿದ್ಲು.
’ಏ..ಹುಚ್ಚಿ ತಿಂಗಳಾ ಕೊಟಗೋತ ಹೊಂಟರ ಮಂದಿ ಮತ್ತ ನನಗ ರಕ್ತಾ ಕೊಡೊಹಂಗ ಆಗ್ತದ, ಈಗ ವರ್ಷಕ್ಕೊಮ್ಮೆ ಕೊಡ್ತೇವಲಾ ಅಷ್ಟ ಸಾಕ ತೊಗೊ’ ಅಂತ ಬೈದ ಗಪ್ ಕೂಡಸಿಸಿದೆ.
ಇರಲಿ ಇದೇಲ್ಲಾ ಕಥಿ ಇವತ್ತ ಯಾಕ ಬರದದ್ದ ಅಂದರ ಇನ್ನ ಮೂರ ದಿವಸಕ್ಕ world blood donor day ಬರ್ತದ. ರಕ್ತ ದಾನ ಶ್ರೇಷ್ಟ ದಾನ ಅಂತಾರಲಾ ಅದ ಸುಳ್ಳ ಅಲ್ಲಾ. ಯಾರ ಯಾರ ರಕ್ತಾ ಕೊಡಲಿಕ್ಕೆ ಅರ್ಹ ಇದ್ದೀರಿ ಅವರ 14th ಜೂನಕ್ಕ ರಕ್ತಾ ಕೊಡಲಿಕ್ಕೆ ರೆಡಿ ಆಗರಿ. ಅಲ್ಲಾ ಮೂರ ದಿವಸ ಮೊದ್ಲ ಬರದಿದ್ದ ಯಾಕ ಅಂದರ 72 ತಾಸ ಮೊದ್ಲಿಂದ ಪಾರ್ಟಿ-ಗಿರ್ಟಿ ಬಂದ ಅಂತ ಹೇಳಲಿಕ್ಕೆ ಮತ್ತ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ