International ಮುತ್ತೈದೀಯರು ?

ಅಂತರರಾಷ್ಟ್ರೀಯ ಮಹಿಳಾ ದಿವಸದ ಅಂಗವಾಗಿ ಬರದದ್ದು

ನಿನ್ನೆ ಸಂಜಿಗೆ ನಾ ಮನಿಗೆ ಬರೋದ ತಡಾ ನನ್ನ ಹೆಂಡತಿ ತಯಾರ ಆಗಿ ನಿಂತಿದ್ದಳು, “ಯಾಕವಾ, ಎಲ್ಲೊ ಹೊಂಟಿಯಲ್ಲಾ ? ” ಅಂತ ಕೇಳಿದೆ, “ನಮ್ಮ ಮಹಿಳಾ ಮಂಡಳದವರ ಜೋತಿಗೆ ಹೊರಗ ಹೊಂಟೇನಿ ” ಅಂದ್ಲು.

ಅಲ್ಲಾ ಮನ್ಯಾಗ ಮೊದ್ಲ ನಮ್ಮವ್ವಗ ಮೂರ ದಿವಸದಿಂದ ಆರಾಮ ಇಲ್ಲಾ, ಹಂತಾದರಾಗ ಇಕಿ ತಿರಗಲಿಕ್ಕೆ ಹೊಂಟಾಳಲಾ ಅಂತ ಸಿಟ್ಟಲೆ
“ಹಂತಾದ ಏನ ವಿಶೇಷದ , ಯಾರರ ಹಡದಾರೊ ಏನ ಮ್ಯಾಲೆ ಹೋಗ್ಯಾರೋ?” ಅಂತ ಕೇಳಿದೆ.

“ಏ….., ಈ ಸುಡಗಾಡ ಗಂಡಸರಿಗೆ ಒಂದೂ ನೆನಪ ಇರಂಗಿಲ್ಲಾ. ಅಲ್ರಿ , ಮಾರ್ಚ ೮ ಕ್ಕ ಅಂತರ ರಾಷ್ಟ್ರೀಯ ಮಹಿಳಾ ದಿವಸ ಅದ ಅಂತ ಎಷ್ಟ ಸರತೆ ಹೇಳಬೇಕ ನಿಮಗ, ಅದಕ್ಕ ಒಂದಿಷ್ಟ ಸೀರಿ-ಬ್ಲೌಸ್ ಪೀಸ್ ತರಲಿಕ್ಕೆ ಹೊಂಟೇನಿ” ಅಂದ್ಲು.

ಯಪ್ಪಾ ದೇವರ ಇದೇನ ಬಂತಪಾ, ಮನ್ಯಾಗ ಮಗನ ಮುಂಜವಿ ಮಾಡಿದರ ಅಕ್ಕ-ತಂಗ್ಯಾರಿಗೆ ಸೀರಿ ಉಡಸ್ಬೇಕಾಗತದ ಅಂತ ನಾ ಮುಂಜವೀ ಮಾಡವಲ್ಲೆ, ಈಕಿ ನೋಡಿದ್ರ ‘International women’s day’ ಕ್ಕ ಸಿರಿ ತೊಗಂಡ ನಾಲ್ಕ ಮಂದಿಗೆ ಹಂಚಲಿಕತ್ತಾಳಲಾ ಅನಸ್ತು.

“ಲೇ, ಸೀರಿಗೂ ಅಂತರರಾಷ್ಟ್ರೀಯ ಮಹಿಳೆಯರಿಗೂ ಏನ ಸಂಬಂಧಲೇ, ಯಾವದರ ಅಂತರರಾಷ್ಟ್ರೀಯ ಮಹಿಳೆ ಬ್ಲೌಸ್-ಸೀರಿ ಹಕ್ಕೊಂಡಿದ್ದ ನೋಡಿ ಏನ ” ಅಂತ ಅಂದೆ

“ರ್ರೀ, ನೀವು ಸುಮ್ಮನ ಏನೇನರ ಅಸಂಯ್ಯ ಮಾತಾಡ ಬ್ಯಾಡರಿ, ನಾ ಮಹಿಳಾ ಮಂಡಳದಾಗಿಂದ ನಾಲ್ಕೈದ ಮುತ್ತೈದಿಯರಿಗೆ ಇಷ್ಟ ಸೀರಿ ಕೊಡೋದು, ಉಳದವರಿಗೆ ಬರೆ ಜಂಪರ್ ಪಿಸ್ ಕೊಟ್ಟ ಉಡಿ ತುಂಬಿಸಿ ಕಳಸ್ತೇನಿ” ಅಂದ್ಲು.

ನಾ ತಲಿಕೆಟ್ಟ” ಲೇ ನಿಂಗೇನ ಹುಚ್ಚ-ಗಿಚ್ಚ ಹಿಡದದ ಏನ, ಅಂತರರಾಷ್ಟ್ರೀಯ ಮಹಿಳಾ ದಿವಸಕ್ಕ ಯಾರರ ಉಡಿ ತುಂಬತಾರ? ಇದ ಏನ international ಮುತ್ತೈದೀಯರ ದಿವಸ ಅಂತ ತಿಳ್ಕೊಂಡಿ ಏನ ? ಅಲ್ಲಲೇ ನೇಕಾರ ನಗರದಾಗ ಹುಟ್ಟಿ ಬೆಳದ ರೇಣುಕಾನಗರಕ್ಕ ಲಗ್ನಾ ಮಾಡ್ಕೋಂಡ ಬಂದಿ, ಹುಬ್ಬಳ್ಳಿ ಎಷ್ಟ ದೊಡ್ಡದು ಅಂತನೂ ನಿನಗ ಗೊತ್ತಿಲ್ಲಾ , international women’s day ಮಾಡ್ಲಿಕ್ಕೆ ಹೊಂಟಿ. ಅಲ್ಲಾ ಇದ ಏನ ನಮ್ಮ ಸಂಪ್ರದಾಯ ,ಸಂಸ್ಕೃತಿನ? ನಾವು ಸ್ವದೇಶಿ ಮಂದಿ, ನೀ ಹಿಂಗೇಲ್ಲಾ ಹುಚ್ಚುಚಾಕಾರ ಮಾಡ ಬ್ಯಾಡಾ ” ಅಂದೆ.

” ಅಯ್ಯ, ಕಂಡೇನಿ ನಿಮ್ಮ ಸ್ವದೇಶಿ, ಸಾಕ ಬಾಯಿ ಮುಚ್ಚರಿ. ಟಿ.ವಿ ಒಳಗ ಛಂದ-ಛಂದನ ಫಾರೆನ್ ಹುಡಗ್ಯಾರ ಬಂದಾಗ ಬಾಯಿ ತಕ್ಕೊಂಡ ನೋಡ್ತೀರಿ , ಬಾಜುಕ ಹೆಂಡ್ತಿ ಇದ್ದುದ್ದು ಖಬರ ಇರಂಗಿಲ್ಲಾ.” ಅಂದ್ಲು.

ನಾ ಸ್ವಲ್ಪ ಶಾಂತ ಆಗಿ ” ಅಲ್ಲಾವಾ ನಮ್ಮ ದೇಶದಾಗ ಹೆಣ್ಣ ಮಕ್ಕಳು ತಾಯಿ ರೂಪ ಇದ್ದಂಗ ‘ನಾವು ಹೆಂಡತಿನ್ನ ಒಬ್ಬಕಿನ ಬಿಟ್ಟ’ ಬಾಕಿ ಎಲ್ಲಾರನೂ ತಾಯಿ ರೂಪದಾಗ ನೋಡ್ತೇವಿ, ಇನ್ನ ಹಂತಾದರಾಗ ಗಂಡಸರ ಎಂದರ ಹೆಣ್ಣಮಕ್ಕಳನ್ನ ಶೋಷಣೆ ಮಾಡಿದ್ದ ನೋಡಿ ಏನ? ನನ್ನ ಆಣಿ ಮಾಡಿ ಹೇಳ, ಸುಳ್ಳ ಯಾಕ ಊರ ತುಂಬ international women’s day ಹೆಸರಿಲೆ ಗಂಡಸರ ಮರ್ಯಾದಿ ಹರಾಜ ಹಾಕತೀ, ಮನ್ಯಾಗ ಇದ್ದ ನಿಮ್ಮ ಅತ್ತಿನ್ನ international woman ಅಂತ ತಿಳ್ಕೋಂಡ ಅಕಿ ಸೇವಾ ಮಾಡ ಹೋಗ ಪುಣ್ಯಾ ಬರತದ ” ಅಂದೆ

” ರ್ರಿ, ಸಾಕ ಮುಗಸರಿ ನಿಮ್ಮ ಪುರಾಣ, ನಂಗೊತ್ತಿಲ್ಲೇನ ಈ ಗಂಡಸರಿಗೆಲ್ಲಾ ‘ಛಂದನ ಹುಡಗ್ಯಾರು ದೇವತೆಗಳೂ, ಕಟಗೊಂಡ ಹೆಂಡತ್ಯಾರು ರಾಕ್ಷಸಿಯರು, ಅವರನ ಹಡದ ಅವ್ವ ಒಬ್ಬಕಿನ ಪೂಜನೀಯಳು” ಅಂತ ಅಗ್ದಿ ಅಂತರಾಷ್ಟ್ರೀಯ ಮಹಿಳಾ ಭೂತ ಮೈ ಮ್ಯಾಲೆ ಬಂದಂಗ ಅಂದ್ಲು.

ಈ ಸುಡಗಾಡ globalisation ಆದಾಗಿಂದ ಗುಡಿ-ಗುಂಢಾರಕ್ಕ ಹೋಗಿ ‘ಗಂಡನ ದೇವರು’ ಅಂತಿದ್ದ ನಮ್ಮ ಹೆಣ್ಣಮಕ್ಕಳೆಲ್ಲಾ International women’s day ಬಂದಾಗೊಮ್ಮೆ ಗಂಡಸರ ವಿರುದ್ಧ ಬೀದಿಗೆ ಇಳದ ‘ಹೆಂಗಸರನ್ನು ಶೋಷಿಸುವ ಗಂಡಸರಿಗೆ ಧಿಕ್ಕಾರ ‘ ಅಂತ ಕರೆ ಜಂಪರ್ ಹಾಕ್ಕೊಂಡ ಮೆರವಣಿಗೆ ಮಾಡ್ತಾರ, ಸಮಾಜದಾಗಿನ ಗಂಡಸರ ಮ್ಯಾಲಿನ ಸಿಟ್ಟ ತೊಗಂಡ ಮನಿ ಗಂಡನ ಮ್ಯಾಲೆ ಹಾಕತಾರ. ಇನ್ನ ನಾ ಸುಳ್ಳ ಇಕಿ ಬಾಯಿ ಹತ್ತಿ ಇಕಿ ಕಡೆ ಹಚಾ-ಹುಚಾ ಅನಿಸಿಗೋಳ್ಳೊದಕಿಂತಾ ಸುಮ್ಮನ ಇರೋದ ಛಲೋ ಅಂತ ಬಿಟ್ಟೆ.

” ರ್ರಿ…..ಅನ್ನಂಗ ನಾ ಕುಕ್ಕರ ರೆಡಿ ಇಟ್ಟೇನಿ, ಗ್ಯಾಸ ಹಚ್ಚಿ ನಾಲ್ಕ ಸಿಟಿ ಹೊಡಿಸಿ ಆಮ್ಯಾಲೆ ಗಿರಣಿಗೆ ಹೋಗಿ ಬರ್ರಿ” ಅಂತ ನನ್ನ ಮಾರಿ ತಿವಿದ ಹೋದ್ಲು.

ಇರಲಿ ಅತ್ತಿಗೊಂದ ಕಾಲ, ಸೊಸಿಗೊಂದ ಕಾಲ ಅಂತಾರಲಾ ಹಂಗ ಮುಂದ ಗಂಡಸರಿಗೂ international men’s day ಬಂದ ಬರತದ ಆವಾಗ ಇಕಿನ್ನ ನೋಡ್ಕೋಂಡರಾತು ಅಂತ ಸುಮ್ಮನಾದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ