ನಮ್ಮ ಮಾವಂದ ಮೇ 31ಕ್ಕ ಮುಗಿತ…..

ಇದ ಒಂದ ಹತ್ತ ಹದಿನೈದ ವರ್ಷದ ಹಿಂದಿನ ಮಾತ ಇರಬೇಕ, ಒಂದ ದಿವಸ ನಮ್ಮ ಕ್ಲಾಸಮೇಟ್ ಪಚ್ಯಾ ದುರ್ಗದಬೈಲನಾಗ ಭೆಟ್ಟಿ ಆಗಿದ್ದಾ. ಹಿಂಗ ಅದ ಇದ ಮಾತಾಡ್ತ ಮಾತಾಡ್ತ ಒಮ್ಮಿಕ್ಕಲೇ
’ನಮ್ಮ ಮಾವಂದ ಮೊನ್ನೆ ಮೇ ಮುವತ್ತೊಂದಕ್ಕ ಮುಗಿತಪಾ’ ಅಂದಾ.
ನಾ ಒಮ್ಮಿಕ್ಕಲೇ ಗಾಬರಿ ಆಗಿ
’ಯಾಕಲೇ…ಹೆಂತಾ ಗಟ್ಟೆ ಮನಷ್ಯಾ ಇದ್ದಾ, ದಿನಾ ಬೆಳಗಾದರ ಮನಿ-ಅಂಗಳಾ ಕಸಾ ಹುಡಗಿ ಥಳಿ ಹೊಡದ ರಂಗೋಲಿ ಹಾಕತಿದ್ದಾ, ಒಮ್ಮಿಂದೊಮ್ಮಿಲ್ಲೇ ಹಂತಾದೇನ ಆಗಿತ್ತೊ ಪಾಪಾ?’ ಅಂತ ನಾ ಅಂದರ.
’ಲೇ….ಮಗನ ಅವಂಗೇನೂ ಆಗಿಲ್ಲಲೇ… ಈಗ ಮನಿ – ಅಂಗಳಾ ಕಸದ ಜೊತಿ ಎಂಜಲಾ-ಗ್ವಾಮಾನೂ ಅವನ ಮಾಡ್ತಾನ. ನಾ ಹೇಳಿದ್ದ ಮೊನ್ನೆ ಮೇ 31ಕ್ಕ ನಮ್ಮ ಮಾವಾ ರಿಟೈರ್ಡ್ ಆದಾ’ ಅಂತ ಕ್ಲ್ಯಾರಿಫ್ಯೈ ಮಾಡಿದಾ.
ಅಲ್ಲಾ, ಒಮ್ಮಿಕ್ಕಲೇ ’ನಮ್ಮ ಮಾವಂದ ಮೇ ಮುವತ್ತೊಂದಕ್ಕ ಮುಗಿತ’ ಅಂದರ ಜನಾ ಏನ ತಿಳ್ಕೋಬಾರದ ಅಂತೇನಿ. ಹಂಗ ಅಂವಾ ಅಗದಿ ಗಟ್ಟಿ ಮನಷ್ಯಾ, ನಾ ಸಣ್ಣಂವ ಇದ್ದಾಗಿಂದ ತೊರವಿಗಲ್ಲಿ ಒಳಗ ನೋಡ್ಕೊತ ಬಂದೇನಿ ಹಂತಾಂವಂದ ಒಮ್ಮಿಕ್ಕಲೇ ಮುಗಿತ ಅಂದಿದ್ದಕ್ಕ ನಂಗ ಖರೇನ ಗಾಬರಿ ಆಗಿತ್ತ.
ನಾ ಆಮ್ಯಾಲೆ ಹಿಂಗ ವಿಚಾರ ಮಾಡಿದಾಗ ನೆನಪಾತ, ಅಲ್ಲಾ ಈ ಮಗಾ ತನ್ನ ಮಾವಂದ ಅರವತ್ತ ವರ್ಷದ ಶಾಂತಿ ಅಂದರ ಷಷ್ಟಬ್ದಿ ಕಾರ್ಯಕ್ರಮ ಅಂತ ಒಂದ ಆರ ತಿಂಗಳ ಹಿಂದ ತೊರವಿಗಲ್ಲಿ ರಾಯರ ಮಠದಾಗ ಮಾಡಿ ನಮ್ಮನ್ನೇಲ್ಲಾ ಕರದಿದ್ದಾ, ಹಂಗ ನಮ್ಮಲ್ಲೇ ನೋಡಿದರ ಅರವತ್ತ ಮುಗದ ಅರವತ್ತೊಂದರಾಗ ಬಿದ್ದ ಮ್ಯಾಲೆ ಷಷ್ಟಬ್ದಿ ಮಾಡ್ತಾರ, ಇಂವಾ ನೋಡಿದರ ಮೊನ್ನೆ ಮೇ 31ಕ್ಕ ನಮ್ಮ ಮಾವಂದ ರಿಟೈರ್ಡ್ ಆತ ಅಂತಾನ. ಇವರ ಹೆಂಗ ಇನ್ನೂ ಅರವತ್ತ ತುಂಬೋಕಿಂತ ಆರ ತಿಂಗಳ ಮೊದ್ಲ ಷಷ್ಟಬ್ದಿ ಮಾಡಿದರು, ಎಲ್ಲೇರ ಮಂದಿ ಗಿಫ್ಟ ಆಶಾಕ್ಕ ಮಾಡಿದರೋ ಏನೋ ಅಂತ ಕೇಳಿದರ ಅದ ಒಂದ ದೊಡ್ಡ ಕಥಿನ ಇತ್ತ.
ಅವರ ಮಾವ actually ಹುಟ್ಟಿದ್ದ official date of birth ಕಿಂತಾ ಒಂದ ಒಂಬತ್ತ ತಿಂಗಳ ಮೊದ್ಲ ಅಂತ. ಆದರ ಸಾಲ್ಯಾಗ ಹೆಸರ ಹಚ್ಚಬೇಕಾರ ಡೇಟ್ ಅಡ್ಜಸ್ಟ ಮಾಡಿ ಮುಂದ ಬರೋ ಜೂನ್ ಒಂದ ಅಂತ ಹುಟ್ಟಿದ್ದ ಡೇಟ್ ಬರಿಸಿಸಿ ಸಾಲಿಗೆ ತುರಿಕಿದ್ದರ. ಅಲ್ಲಾ ಆವಾಗಿನ ಕಾಲದಾಗ ಅದ ಕಾಮನ್ ಇತ್ತ ಬಿಡ್ರಿ. ಕರೆಕ್ಟ ಸಾಲಿಗೆ ಹೆಸರ ಹಚ್ಚಬೇಕಂದರ ಐದ ವರ್ಷ ಹತ್ತ ತಿಂಗಳ ಆಗಿರಬೇಕ ಅಂತ ಇರ್ತಿತ್ತ. ಹಿಂಗಾಗಿ ಎಲ್ಲಾರೂ ಜೂನ್ ಒಂದ ಅಂತ ಬರಿಸಿ ಬಿಡ್ತಿದ್ದರು. ಯಾರಿಗೆ ತಮ್ಮ ಮಕ್ಕಳ ಶಾಣ್ಯಾರಿದ್ದಾರ ಅಂತ ಅನಸ್ತಿತ್ತ ಅವರ ಮುಂದಿನ ಜೂನ್ ಒಂದ ಅಂತ ಬರಸ್ತಿದ್ದರು, ಯಾರ ಮಕ್ಕಳ ಅಷ್ಟ ಶಾಣ್ಯಾ ಇರ್ತಿದ್ದಿಲ್ಲಾ ಅವರ ಒಂದ ವರ್ಷ ಹಿಂದಿನ ಜೂನ್ ಒಂದ ಅಂತ ಬರಸ್ತಿದ್ದರು, ಮುಂದ ಒಂದ ವರ್ಷ ಫೇಲ್ ಆದರು ಅಡ್ಜಸ್ಟ ಆಗ್ತದ ಅಂತ. ಅದರಾಗ ಆವಾಗೇನ ಬರ್ಥ ಸರ್ಟಿಫಿಕೇಟ್ ಇರ್ತಿದ್ದಿಲ್ಲಾ ಏನಿಲ್ಲಾ, ಹಡದೋರ ಬಂದ ಇಂವಾ ನನ್ನ ಮಗಾ, ಹಿಂತಾ ದಿವಸ ನಮ್ಮ ಜೀವಾ ತಿನ್ನಲಿಕ್ಕೆ ಹುಟ್ಟ್ಯಾನ ಅಂತ ಹೇಳಿ ಬಿಟ್ಟರ ಮುಗದ ಹೋಗ್ತಿತ್ತ.
ಹಿಂಗಾಗಿ ನಮ್ಮ ಪಚ್ಯಾನ ಮಾವ ಅರವತ್ತ ತುಂಬಿ ಅರವತ್ತೊಂದರಾಗ ಬಿದ್ದ ಷಷ್ಟಬ್ದಿ ಆದರು ರಿಟೈರ್ಡ ಆಗಿದ್ದಿಲ್ಲಾ. ಅಲ್ಲಾ, ಅವನ ಅರವತ್ತ ವರ್ಷದ ಶಾಂತಿಗೆ AE, JE, JEE ಎಲ್ಲಾರು ಬಂದ ಹೊಟ್ಟಿ ತುಂಬ ಉಂಡ ಗಿಫ್ಟ ಕೊಟ್ಟ ಹೋಗಿದ್ದರು. ಅಲ್ಲಾ, ಈ ಷಷ್ಟಬ್ದಿ ಏನ ಅದ ಅಲಾ ಅದನ್ನ ಪಂಚಾಂಗ ನೋಡಿ ತಿಥಿ ಪ್ರಕಾರ ಮಾಡೋದ ಆದರೂ ಒಬ್ಬರು ಬಾಯಿ ಬಿಟ್ಟ
’ನೀ ಇನ್ನೂ ರಿಟೈರ್ಡಮೆಂಟ್ ಯಾಕ ಆಗಿಲ್ಲಪಾ ಮತ್ತ ಅರವತ್ತ ತುಂಬಿ ಅರವತ್ತೊಂದರಾಗ ಬಿದ್ದರು’ ಅಂತ ಕೇಳಲಿಲ್ಲಾ. ಯಾಕಂದರ ಅವರಿಗೆ ಗೊತ್ತ ಇತ್ತ ಅಂವಾ ಖರೆ ಹುಟ್ಟಿದ್ದ ಡೇಟ್ ಬ್ಯಾರೆ ಸರ್ಕಾರಿ ಹುಟ್ಟಿದ್ದ ಡೇಟ್ ಬ್ಯಾರೆ ಅಂತ. ಅದರಾಗ ಅರವಪ್ಪ ಇವಂಗ ಸಾಲಿ ಸೇರಸಬೇಕಾರ ಜೂನ್ ಒಂದಕ್ಕ ಹುಟ್ಟ್ಯಾನ ಅಂತ ಅಡ್ಜಸ್ಟ ಮಾಡಿ ಬರಿಸ್ಯಾನ ಅಂತ ಎಲ್ಲಾರಿಗೂ ಗೊತ್ತ ಇದ್ದದ್ದ. ಅಲ್ಲಾ ಆಗಿನ ಕಾಲನ ಹಂಗ ಇತ್ತ. ನಾ ಸುಳ್ಳ ಹೇಳಂಗಿಲ್ಲಾ ಬೇಕಾರ ನೀವ ರಿಕಾರ್ಡ್ ಚೆಕ್ ಮಾಡಿ ನೋಡ್ರಿ ಒಂದ ಇಪ್ಪತ್ತ ವರ್ಷದ ಹಿಂದ ಸರ್ಕಾರಿ ನೌಕರಿ ಒಳಗ ಇದ್ದೋರೊಳಗ ಅರ್ಧಕ್ಕಾ ಅರ್ಧಾ ಮಂದಿ ಹುಟ್ಟಿದ್ದ ಜೂನ್ 1ಕ್ಕನ.
ಇನ್ನ ಜೂನ್ ಒಂದಕ್ಕ ಹುಟ್ಟಿದವರೇಲ್ಲಾ ರಿಟೈರ್ಡ್ ಆಗೋದ ಮೇ 31ಕ್ಕ. ಹಿಂಗಾಗಿ ನಮ್ಮ ಪಚ್ಯಾನ ಮಾವನೂ ಮೇ 31ಕ್ಕ ರಿಟೈರ್ಡ್ ಆಗಿದ್ದ. ಅಲ್ಲಾ ನಿಮ್ಮ ಪೈಕಿ ಯಾರ- ಯಾರ ಮೇ 31ಕ್ಕ ರಿಟೈರ್ಡ್ ಆಗ್ಯಾರ ಅವರನ ಕೇಳಿ ನೋಡ್ರಿ, ಒಂದೂ ಅವರ ಬರ್ಥಡೇ ಅಂತು ಜೂನ್ 1 ಇರಬೇಕ ಆದರ ಅದರಾಗ ನೂರಕ್ಕ ತೊಂಬತ್ತೊರೊಂಬತ್ತ ಬಂಡಲ್ ಜೂನ್ 1ಕ್ಕ ಹುಟ್ಟಿದ್ವ ಇರ್ತಾವ. ಅದಕ್ಕ ನಾ ಹೇಳಿದ್ದ ಜೂನ್ 1, ನಮ್ಮ ದೇಶದ್ದ national birth date ಮಾಡ್ಬೇಕ ಅಂತ.
ಹಂಗ ಅದನ್ನ ಜೂನ್ ಒಂದಕ್ಕ ಹುಟ್ಟಿದವರ ಬಗ್ಗೆ ಹೋದ ವರ್ಷ ’ ಜೂನ್ ಒಂದಕ್ಕ ಹುಟ್ಟಿದವರ ಕೈ ಎತ್ತರಿ ಅಂತ ’ ಒಂದ ಪ್ರಹಸನದಾಗ ಬರದಿದ್ದೆ ಬಿಡ್ರಿ.
ಇನ್ನ ಜೂನ್ ಒಂದಕ್ಕ ಹುಟ್ಟಿದ್ದವರ ಬಗ್ಗೆ ಪ್ರಹಸನ ಬರದ ಮೇ 31ಕ್ಕ ರಿಟೈರ್ ಆಗಿದ್ದರ ಬಗ್ಗೆ ಬರಿಲಿಲ್ಲಾ ಅಂದರ ಹೆಂಗ ಸರಿ ಅನಸ್ತದ. ಅದಕ್ಕ ಈ ಸರತೆ ಈ ಮೇ 31ಕ್ಕ ರಿಟೈರ್ ಆಗೋರ ಬಗ್ಗೆ ಬರದಿದ್ದ ಅನ್ನರಿ.
ಇನ್ನೊಂದ ಈ ಸರ್ಕಾರಿ ನೌಕರಿ ಮಾಡಿ ಮೇ 31ಕ್ಕ ರಿಟೈರ್ಡ್ ಆದೋರದ ಮಜಾ ಕಥಿ ಹೇಳ್ಬೇಕಂದರ ನಮ್ಮಪ್ಪನ ಸೋದರ ಮಾವ ಒಬ್ಬ ಇದ್ದಾ, ರಂಗಣ್ಣ ಮಾಮಾ ಅಂತ. ಅಂವಾ ಸೆಂಟ್ರಲ್ ಎಕ್ಸೈಜ್ ಒಳಗ ಸುಪರ ಇಂಡೆಂಟೇಂಟ್ ಆಗಿ ರಿಟೈರ್ ಆಗಿದ್ದಾ. ಅಂವಂದು ಹಿಂಗ ಅವರಪ್ಪಾ ಜೂನ್ ಒಂದ ಅಂತ ಡೇಟ್ ಆಫ್ ಬರ್ಥ್ ಬರಿಸಿಸಿ ಸಾಲಿ ಕಲಸಿದ್ದಾ, ಮ್ಯಾಲೆ ಅಂವಾ ಶಾಣ್ಯಾ ಬ್ಯಾರೆ ಇದ್ದಾ, ಆಗಿನ ಕಾಲದಾಗ ಡಿಗ್ರಿ ಕಲತಿದ್ದಾ. ಹಿಂಗಾಗಿ ಸಣ್ಣ ವಯಸ್ಸಿನಾಗ ಅವಂಗ ಮುಂದ ಸೆಂಟ್ರಲ್ ಎಕ್ಸೈಜ್ ಒಳಗ ನೌಕರಿ ಸಿಕ್ಕ ಬಿಟ್ಟಿತ್ತ. ಮುಂದ ಹುಡಗಗ ಛಲೋ ನೌಕರಿ ಅದ ಹಿಂತಾ ವರಾ ಬ್ಯಾರೆಯವರ ಮನಿಗೆ ಹೋಗಬಾರದ ಅಂತ ಅವರಪ್ಪಾ ತನ್ನ ಮೊಮ್ಮಗಳಿಗೆ ಅಂದರ ಹುಡಗನ ಅಕ್ಕನ ಮಗಳಿಗೆ ಕೊಟ್ಟ ಮೊದ್ವಿ ಮಾಡಿ ಕೈ ತೊಳ್ಕೊಂಡಿದ್ದಾ. ಅಂವಾ ಪೂರ್ತಿ ಸರ್ವೀಸ್ ಮಾಡಿ ಮುಂದ ಒಂದ ವರ್ಷ ಮೇ ಮುವತ್ತೊಂದಕ್ಕ ರಿಟೈರ್ಡ್ ಆದಾ. ಆವಾಗ ಸೆಂಟ್ರಲ್ ಗವರ್ಮೆಂಟ್ ನೌಕರಿ ಮಾಡೋರದ ರಿಟೈರ್ಡಮೆಂಟ್ 58 ವರ್ಷಕ್ಕ ಇತ್ತ.
ವಿಚಿತ್ರ ಅಂದರ ಅಂವಾ ದುಡದದ್ದ 33 ವರ್ಷ, ಅಗದಿ ಕೇಂದ್ರ ಸರ್ಕಾರಕ್ಕ ಅಧಿಕ ಬಾಗಣಕ್ಕ ಕೊಟ್ಟಂಗ ತನ್ನ ಸರ್ವೀಸ್ ಕೊಟ್ಟಾ, ಮುಂದ ರಿಟೈರ್ಡ್ ಆಗಿ 35 ವರ್ಷ ಪೆನ್ಶನ್ ತೊಗೊಂಡಾ. ಅಲ್ಲಾ ಆಗಿನ ಮಂದಿ ಭಾಳ ಗಟ್ಟಿ ಇರ್ತಿದ್ದರು, ಹಿಂಗಾಗಿ ಇಪ್ಪತ್ತೈದ-ಮೂವತ್ತ ವರ್ಷ ದುಡಿತಿದ್ದರ ಮ್ಯಾಲೆ ಅಷ್ಟ ವರ್ಷ ಪೆನ್ಶನ್ನೂ ತೊಗೊತಿದ್ದರ ಬಿಡ್ರಿ. ಹಂಗ ಈಗ ನಮ್ಮಜ್ಜಿ cum ಅತ್ಯಾಗ ಇನ್ನೂ ಪೆನ್ಶನ್ ಬರ್ತದ ಆ ಮಾತ ಬ್ಯಾರೆ. ಏನ ಮಾಡ್ತೀರಿ?
ಎಲ್ಲಾ ಬಿಟ್ಟ ಈಗ ಯಾಕ ಇದ ನೆನಪಾತ ಅಂದರ ನಾಳೆ ಬರೋ ಮೇ 31ಕ್ಕ ನಮ್ಮ ಬಾಜೂ ಮನಿ ಕೊಣ್ಣೂರ್ ಅಂಕಲ್ ರಿಟೈರ್ಟಮೆಂಟ್ ಅದ ಅಂತ ಇವತ್ತ ರಾತ್ರಿ ಪಾರ್ಟಿಗೆ ಕರದಾರ.
ಹಂಗ ಈ ಸರ್ಕಾರಿ ಆಫಿಸನಾಗ ಕೆಲಸಾ ಮಾಡೊರ ರಿಟೈರ್ಡಮೆಂಟ್ ಆಗಬೇಕಾರ ಅವರೊಂದ ಪಾರ್ಟಿ ಕೊಡ್ತಾರ. ಮುಂದ actual ರಿಟೈರ್ಡಮೆಂಟ್ ದಿವಸ ಡಿಪಾರ್ಟಮೆಂಟನೋರ ಬ್ಯಾರೆ ಪಾರ್ಟಿ ಕೊಡ್ತಾರ. ಇವ ಎರಡೂ ಅರವತ್ತ ವರ್ಷದ ಶಾಂತಿ ಬಿಟ್ಟ ಮತ್ತ. ಅಲ್ಲಾ, 25-30 ವರ್ಷ ಜೊತಿಗೆ ಕೆಲಸಾ ಮಾಡಿರ್ತಾರ ಮತ್ತ ರಿಟೈರ್ಡ್ ಟೈಮ್ ನಾಗ ಅಷ್ಟು ಮಾಡಲಿಲ್ಲಾ ಅಂದರ ಹೆಂಗ?
ನೋಡ್ರಿ ಹಂಗ ನಾಳೆ ಬರೋ ಮೇ ಮೂವತ್ತೊಂದಕ್ಕ ಯಾರರ ರಿಟೈರ್ಡ್ ಆಗೋರ ಇದ್ದರ ನಮ್ಮನ್ನೂ ಪಾರ್ಟಿಗೆ ಕರಿರಿ ಮತ್ತ. ಒಂದ ಹೂವಿನ ಬೂಕ್ಕೆ ಹಿಡ್ಕೊಂಡ ಬಂದ ಉಂಡ ಗಿಫ್ಟ ಕೊಟ್ಟ ಹೋಗ್ತೇವಿ.
ಆಮ್ಯಾಲೆ ಮರದಿವಸನ ಅಂದರ ಜೂನ್ ಒಂದಕ್ಕ ಬರ್ಥಡೆ ಇರ್ತದ ಅದಕ್ಕ ಬ್ಯಾರೆ ಪಾರ್ಟಿ ಕೊಡಬೇಕ ಮತ್ತ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ