ನಮ್ಮ ಮನೆಯವರ ಬಚ್ಚಲದಾಗ ಗುಳಗಿ ತೊಗೊತಾರ

ನನ್ನ ಲಗ್ನ ಆಗಿ ಎರಡ ಮೂರ ತಿಂಗಳಾಗಲಿಕ್ಕೆ ಬಂದಿತ್ತ, ಒಂದ ದಿವಸ ನಂಗ ಒಮ್ಮಿಂದೊಮ್ಮಿಲೆ ಊಟ ಸೇರಲಾರದಂಗ ಆಗಿ ಏನ ಉಂಡರು ವೈಕ್ ವೈಕ ಅನ್ನೊಂಗ ಆಗಲಿಕತ್ತ, ನಮ್ಮವ್ವ ಅದನ್ನ ನೋಡಿ

’ಅಯ್ಯ..ನಮ್ಮಪ್ಪ, ಇದೇನ ಕಾಲ ಬಂತೊ ಮಾರಾಯ? ಲಗ್ನ ಆಗಿ ಮೂರ ತಿಂಗಳ ಆಗೋ ಪುರಸತ್ತ ಇಲ್ಲದ ನಿನ್ನ ಹೆಂಡ್ತಿ ಬದ್ಲಿ ನೀ ವಾಂತಿ ಮಾಡ್ಕೋಳಿಕತ್ತಿಯಲಾ, ಯಾಕ ಕೇಸ ಏನರ ಉಲ್ಟಾ ಆಗೇದೇನ?’ ಅಂತ ನಂಗ ಚಾಷ್ಟಿ ಮಾಡಿದ್ಲು.

ಹಂಗ ನಂದ ಮೊದ್ಲಿಂದ ಪಿತ್ತ ಪ್ರಕೃತಿ, ಹಿಂಗಾಗಿ ಅಸಿಡಿಟಿ ಆವಾಗ ಇವಾಗ ಆಗ್ತಿತ್ತ. ಅದರಾಗ ಲಗ್ನ ಆದ ಮ್ಯಾಲೆ ಪಿತ್ತ ಇನ್ನೂ ಜಾಸ್ತಿ ಆತ ಕಾಣ್ತದ ಅನ್ನಾ ಕಂಡರ ವಾಕರಿಕೆ ಬರಲಿಕತ್ತ. ಕಡಿಕೆ ಪಾಪ ನನ್ನ ಹೆಂಡ್ತಿ ಗಂಡಂದ ಪಿತ್ತ ಜಾಸ್ತಿ ಆಗೇದ ಅಂತ ಬಿಸಿ ನೀರಿನ ಪಾನಕ ಮಾಡಿ ಕೊಟ್ಟ ಮೂರ ಹೊತ್ತ ಮೂಗ ಹಿಡದ ಎರಡೆರಡ ಚಮಚಾ ಜೆಲೊಸಿಲ್ ಕೊಟ್ಟಳು. ಆದರು ಆ ಪಿತ್ತ ಏನ ಕಡಮಿ ಆಗೊ ಹಂಗ ಕಾಣಲಿಲ್ಲಾ. ಕಡಿಕೆ ಡಾಕ್ಟರ ಕಡೆ ಹೋಗೊ ಪಾಳೆ ಬಂತ. ನನ್ನ ಹೆಂಡ್ತಿ ತಾನು ನನ್ನ ಜೊತಿಗೆ ಬರ್ತೇನಿ ಅಂತ ಹಟಾ ಹಿಡದ್ಲು. ಹೊಸಾ ಹೆಂಡ್ತಿ, ಅದರಾಗ ಹೊಸ್ತಾಗಿ ಲಗ್ನ ಬ್ಯಾರೆ ಆಗಿತ್ತ ಹಿಂಗಾಗಿ ಎಲ್ಲೆ ಹೋದರು ಗಂಡನ ಜೊತಿ ಬಾಲಂಗಸಿಗತೆ ಬರ್ತಿದ್ಲು. ನಮ್ಮವ್ವ ನನ್ನ ಹೆಂಡ್ತಿ ಹಿಂಗ ಎಲ್ಲಾ ಕಡೆ ತಾನೂ ಬರ್ತೇನಿ ಅಂತ ಹಟಾ ಮಾಡೋದ ನೋಡಿ

’ಕರಕೊಂಡ ಹೋಗಪಾ ಹೆಂಡ್ತಿನ್ನೂ ಕರಕೊಂಡ ಹೋಗ, ಸಂಡಾಸಕ್ಕೊಂದ ಅಕಿನ್ನ ಬಿಟ್ಟ ಹೋಗ್ತಿ ಅದ ನಮ್ಮ ಪುಣ್ಯಾ’ ಅಂತ ಟಾಂಟ್ ಹೊಡದ್ಲು. ನಾ ನಮ್ಮವ್ವನ ಮಾತ ಕಿವಿ ಮ್ಯಾಲೆ ಹಾಕೊಳಲಾರದ ನನ್ನ ಹೆಂಡ್ತಿನ್ನ ನಮ್ಮ ಫ್ಯಾಮಿಲಿ ಡಾಕ್ಟರ ಕಡೆ ಕರಕೊಂಡ ಹೋಗಿ ಡಾಕ್ಟರಗೆ ನನ್ನ ಪ್ರಾಬ್ಲೇಮ್ ಎಲ್ಲಾ ಹೇಳಿ
’ಇನ್ನ ಮುಂದ ಇದು ಒಂದ ಹೊಸಾ ಗಿರಾಕಿರಿ ನಿಮಗ’ ಅಂತ ಹೆಂಡ್ತಿನ್ನ ಪರಿಚಯ ಮಾಡಿಸಿಸಿದೆ. ಅವರ
’ಏ, ಭಾಳ ಛಲೋ ಆತ…ಅನ್ನಂಗ ನನ್ನ ಹೆಂಡ್ತಿ ಗೈನಾಕೊಲಿಜಿಸ್ಟ ಇದ್ದಾಳ, ಮುಂದ ನಿಮಗೇನರ ವಾಂತಿ ಬಂದರ ನಮ್ಮ ಮನಿಯವರ ಕಡೆ ಬರ್ರಿ’ ಅಂತ ಅವರ ತಮ್ಮ ಹೆಂಡ್ತಿ ವಿಸಿಟಿಂಗ್ ಕಾರ್ಡ ನನ್ನ ಹೆಂಡ್ತಿ ಕೈಯಾಗ ಕೊಟ್ಟರು.

ಆಮ್ಯಾಲೆ ನನ್ನ ಚೆಕ್ ಮಾಡಿ ನನಗ ’ನಿನ್ನ ಪಿತ್ತದ್ದ ಲೇವಲ್ ಭಾಳ ಹೈ ಆಗೇದ, ಇದ ಹೈಪರ್ ಅಸಿಡಿಟಿ’ ಅಂತ ಒಂದ ಇಂಜೆಕ್ಷನ್ ಮಾಡ್ತೇನಿ ಅಂದರು, ಹಂಗ ನನ್ನ ರಟ್ಟಿ ಭಾಳ ಸಣ್ಣವ ಅವ ಅಂತ ನಾ ಯಾವಾಗಲೂ ಅಂಡಿನ ಮ್ಯಾಲೆ ಇಂಜೆಕ್ಷನ್ ತೊಗೊಳೊದ ಹಿಂಗಾಗಿ ನಾ ಪಟಕ್ಕನ ಬೆಲ್ಟ ತಗದ ಪ್ಯಾಂಟ ಇಳಸಿದೆ. ನನ್ನ ಹೆಂಡತಿ ಅದನ್ನ ನೋಡಲಿಕ್ಕೆ ಆಗಂಗಿಲ್ಲಾ ಅಂತ ಎದ್ದ ಹೊರಗ ಹೋಗಿ ಬಿಟ್ಟಳು. ನಾ ಪ್ಯಾಂಟ ತಗದದ್ದ ನೋಡಲಿಕ್ಕೆ ಆಗಂಗಿಲ್ಲಾ ಅಂತ ಅಲ್ಲಾ, ಇಂಜೆಕ್ಷನ್ ಮಾಡೋದ ನೋಡಲಿಕ್ಕೆ ಆಗಂಗಿಲ್ಲಾಂತ. ಅಲ್ಲಾ, ನೀವೇಲ್ಲರ ಅಪಾರ್ಥ ಮಾಡ್ಕೊಂಡ ಗಿಡ್ಕೊಂಡೀರಿ ಅಂತ ಕ್ಲ್ಯಾರಿಫಿಕೇಶನ್ ಕೊಟ್ಟೆ ಇಷ್ಟ.

ಇತ್ತಲಾಗ ಡಾಕ್ಟರ ಇಂಜೆಕ್ಷನ ಮಾಡಿ ಗುಳಗಿ ಬರದ ಕೊಡಲಿಕತ್ತರು. ನಾ
’ಏ, ಇಂಜೆಕ್ಷನ್ ಮಾಡಿದ ಮ್ಯಾಲೆ ಮತ್ತ ಗುಳಗಿ ಯಾಕ್ರಿ, ನಂಗ ಗುಳಗಿ ನುಂಗಲಿಕ್ಕೆ ಬರಂಗಿಲ್ಲಾ, ನಿಮಗ ಗೊತ್ತದಲಾ’ ಅಂತ ಅಂದೆ.
’ಏ, ಹಂಗ ಬರೆ ಇಂಜೆಕ್ಷನಗೆ ಕಡಿಮಿ ಆಗಂಗಿಲ್ಲಾ, ಮೂರ ದಿವಸ ಒಂದ ಕೊರ್ಸ್ ಗುಳಗಿ ತೊಗೊಳ್ರಿ, ಅವೇನ ಸಣ್ಣವ ಇರ್ತಾವ. ಈಗ ಲಗ್ನ ಬ್ಯಾರೆ ಆಗೇದ ಇನ್ನರ ಗುಳಗಿ ನುಂಗಲಿಕ್ಕೆ ಕಲೀರಿ’ ಅಂತ ಅಂದ ನಕ್ಕರು.

ಅಲ್ಲಾ ಲಗ್ನ ಆದರ ನಾ ಯಾಕ ಗುಳಗಿ ನುಂಗೋದ ಕಲಿಬೇಕ ಅಂತೇನಿ, ನನ್ನ ಹೆಂಡ್ತಿಗೆ ನುಂಗಲಿಕ್ಕೆ ಬಂದರ ಸಾಕ. ಹಂಗ ಮೂರ ತಿಂಗಳದಿಂದ ಪಾಪ ದಿವಸಾ ಅಕಿ ಗುಳಗಿ ನುಂಗೆ ನುಂಗತಾಳ ಆ ಮಾತ ಬ್ಯಾರೆ.

ಕಡಿಕೆ ಡಾಕ್ಟರ ಬರದ ಕೊಟ್ಟಿದ್ದ ಅಸಿಡಿಟಿ ಗುಳಗಿ ತೊಗೊಂಡ ಮನಿಗೆ ಬಂದೆ. ಒಂದ ತುತ್ತ ಮೆತ್ತನಿ ಹಾಲು ಅನ್ನಾ ವೈಕ ವೈಕ್ ಅನ್ಕೋತ ಉಣ್ಣೊದರಾಗ ಏಳೊ ಹನ್ನೆರಡ ಆತ. ನಂದ ಊಟ ಮುಗಿಯೋದ ತಡಾ ನನ್ನ ಹೆಂಡತಿ ಗುಳಗಿ ತಂದ ಟೇಬಲ್ ಮ್ಯಾಲೆ ಇಟ್ಟಳು. ನಮ್ಮವ್ವ
’ಏ, ನೀ ಬಚ್ಚಲಕ್ಕ ಹೋಗಿ ಗುಳಗಿ ತೊಗೊಪಾ, ಇಲ್ಲೆ ಬ್ಯಾಡ’ ಅಂದ್ಲು. ನಾ ಗುಳಗಿ, ಒಂದ ತಂಬಗಿ ನೀರ ಹಿಡಕೊಂಡ ಬಚ್ಚಲಕ್ಕ ಹೋದೆ. ನನ್ನ ಹೆಂಡ್ತಿ ಗಾಬರಿ ಆದ್ಲು, ಪಾಪ ಅಕಿಗೆ ನಂಗ ಗುಳಗಿ ನುಂಗಲಿಕ್ಕೆ ಬರಂಗಿಲ್ಲಾ ಅಂತ ಗೊತ್ತ ಇದ್ದಿದ್ದಿಲ್ಲಾ. ಅಲ್ಲಾ ಹಂಗ ಅದೇನ ಅಷ್ಟ ಇಂಪಾರ್ಟೆಂಟ ವಿಷಯ ಅಲ್ಲಾ ಅಂತ ನಾ ಏನ ಅದರ ಬಗ್ಗೆ ಮೊದ್ಲ ಹೇಳಿದ್ದಿಲ್ಲ, ಅದನ್ನೇನ ನನ್ನ ಕುಂಡ್ಲಿ ಒಳಗ ಬರದಿದ್ದಿಲ್ಲಾ ಬಿಡ್ರಿ. ಹಿಂಗಾಗಿ ಅಕಿ ಗಾಬರಿ ಆಗಿ ’ಬಚ್ಚಲದಾಗ ಯಾಕ ಗುಳಗಿ ತೊಗೊತಿರಿ’ ಅಂತ ಕೇಳಿದ್ಲು. ಅಷ್ಟರಾಗ ನಮ್ಮವ್ವ ಸುಮ್ಮನ ಕೂಡಬೇಕೊ ಬ್ಯಾಡೊ

’ಅಯ್ಯ…ಅಂವಾ ನಿಂಗ ಹೇಳಿಲ್ಲೇನ? ನಿನ್ನ ಗಂಡಗ ಮುದಕ ಆದರೂ ಇನ್ನೂ ಗುಳಗಿ ನುಂಗಲಿಕ್ಕೆ ಬರಂಗಿಲ್ವಾ, ಬಾಯಾಗ ಗುಳಗಿ ಹಾಕ್ಕೊಂಡ ಒಂದ ತಂಬಗಿ ನೀರ ಸುರ್ಕೋತಾನ. ಗುಳಗಿ ಹೋದರ ಹೋತ ಇಲ್ಲಾಂದರ ಪಚಕ್ ಅಂತ ಮನಿ ತುಂಬ ಉಗಳಿ ಬಿಡ್ತಾನ. ಆಮ್ಯಾಲೆ ಆ ಗುಳಗಿ ಹುಡಕೋದು, ಈಡಿ ಮನಿ ಒರಸೋದ ಎಲ್ಲಾ ನಮ್ಮ ಹಣೆಬರಹ ಹಿಂಗಾಗಿ ನಾ ಬಚ್ಚಲದಾಗ ಗುಳಗಿ ತೊಗೊ ಅಂತೇನಿ. ಹಂಗ ಬಚ್ಚಲದಾಗ ಗುಳಗಿ ತೊಗೊಂಡರ ಒಂದು ಗುಳಗಿ ಅವನ ಗಂಟಲದಾಗರ ಇಳಿತದ ಇಲ್ಲಾ ಬಚ್ಚಲ ಮೊರಿ ಒಳಗರ ಹೋಗ್ತದ. ಏನ್ಮಾಡ್ತಿ ಹಿಂತಾವಂಗ. ಇಲ್ಲಾ ನಾವ ಆ ಗುಳಗಿ ಪುಡಿ ಮಾಡಿ ನೀರಾಗ ಇಲ್ಲಾ ಜೇನತುಪ್ಪದಾಗ ಹಾಕಿ ಕಲಿಸಿ ನೆಕ್ಕಸಬೇಕ. ಹೆಂಗಿದ್ದರೂ ನೀ ಬಂದಿಯಲಾ ಈಗ ನೋಡ ಏನ್ಮಾಡ್ತಿ? ನುಂಗುಸ್ತೀಯೋ,ನೆಕ್ಕಸ್ತಿಯೋ? ಏನೋ ಪುಣ್ಯಾ ಆ ಮಕ್ಕಳಾಗಲಾರಾದ್ದ ಗುಳಗಿ ದಿವಸಾ ತೊಗೊತಾರಲಾ ಅದನ್ನ ಹೆಣ್ಣ ಮಕ್ಕಳ ತೊಗೊಳದ ಅದ ಅಂತ ಛಲೋ ಹಂಗ ಗಂಡಸರ ತೊಗೊಳೊ ಹಂಗ ಇತ್ತಂದರ ನಿನ್ನ ಗಂಡ ವರ್ಷಕ್ಕ ಮೂರ ಹಡಿತಿದ್ದಾ’ ಅಂತ ನಮ್ಮವ್ವ ಒಂದ ಉಸಿರನಾಗ ನನ್ನ ಗುಳಗಿ ಪಾರಾಯಣ ಹೇಳಿ ಬಿಟ್ಟಳು.

ಅಲ್ಲಾ, ಇದ ನಮ್ಮವ್ವನಂತಾವರ ಮಾತೊಡ ಮಾತರ ಮಾತ, ಹಿರೇ ಮನಷ್ಯಾಳಾಗಿ ಹೆಂಗ ಮಾತಾಡ್ತಾಳ ನಮ್ಮವ್ವ ಅಂತೇನಿ. ನಮ್ಮವ್ವನ್ನ ಮಾತ ಕೇಳಿ ನನ್ನ ಹೆಂಡ್ತಿ ಮತ್ತಿಷ್ಟ ಗಾಬರಿ ಆಗಿ
’ಹೌದೇನ್ರಿ, ಖರೇನ ನಿಮಗ ಗುಳಗಿ ನುಂಗಲಿಕ್ಕೆ ಬರಂಗಿಲ್ಲಾ?’ಅಂತ ಕೇಳಿದ್ಲು.

’ಏ, ನಾ ಸಣ್ಣವ ಇದ್ದಾಗಿಂದ ನಂಗ ನಮ್ಮವ್ವ ಗುಳಗಿ ನುಂಗಲಿಕ್ಕೆ ಕಲಸಿಲ್ಲಾ, ಹಿಂಗಾಗಿ ನಂಗ ನುಂಗಲಿಕ್ಕೆ ಬರಂಗಿಲ್ಲಾ. ಅದಕ್ಕ ನಾ ಏನ ಜಡ್ಡ ಬಂದರೂ ಡೈರೆಕ್ಟ ಇಂಜೇಕ್ಷನ್ ತೊಗೊತೇನಿ ಇಲ್ಲಾ ಸಿರಪ್ ಕುಡಿತೇನಿ, ಹಂಗ ನನ್ನ ಗಂಟಲದಾಗ ಏನ ಪ್ರಾಬ್ಲೇಮ್ ಇಲ್ಲ ಮತ್ತ, ನನಗ ಒಮಿಟಿಂಗದ್ದ ಸೈಕಾಲಾಜಿಕಲ್ ಫೋಬಿಯಾ ಅದ ಹಿಂಗಾಗಿ ಗುಳಗಿ ನುಂಗಬೇಕಾರ ಅದ ಒಳಗ ಇಳಿಯಂಗಿಲ್ಲಾ’ ಅಂತ ಶಾರ್ಟ ಆಗಿ ಅಕಿಗೆ ತಿಳಸಿ ಹೇಳಿದೆ.

ಅಕಿ ನನ್ನ ಮಾತ ಕೇಳಿ ಹಣಿ ಹಣಿ ಬಡ್ಕೊಂಡ
’ಮುಂದ ಹೆಂಗರಿ ಮತ್ತ?’ ಅಂತ ಅಂದ್ಲು.
’ನಾ ಯಾಕ ಮುಂದ ಗುಳಗಿ ತೊಗೊಬೇಕಲೇ, ನೀ ಇದ್ದಿ ಅಲಾ’ ಅಂತ ನಾ ಅಂದರ
’ಅಲ್ಲರಿ ವಯಸ್ಸಾದ ಮ್ಯಾಲೆ ಬಿ.ಪಿ ಅಂತ ಬರ್ತದ, ಶುಗರ ಅಂತ ಇರ್ತದ ಆವಾಗೇಲ್ಲಾ ಹೆಂಗ ಮಾಡೋರು?’ಅಂದ್ಲು

’ಏ, ಲಗ್ನಾಗಿ ದಣೇಯಿನ ಮೂರ ತಿಂಗಳ ಮುಗದಿಲ್ಲಾ ಈಗ್ಯಾಕ ಆ ಸುಡಗಾಡ ಬಿ.ಪಿ, ಶುಗರ ಬಗ್ಗೆ ಮಾತಾಡ್ತಿ, ಮುಂದಿಂದ ಮುಂದ ನೋಡಿದರಾತ ತೊಗೊ’ ಅಂತ ನಾ ಅಂದ ಸೀದಾ ಬಚ್ಚಲಕ್ಕ ಹೋಗಿ ಮೂರ ನಾಲ್ಕ ಸರತೆ ಪೂರ್ರ್..ಪೂರ್ರ್ ಮಾಡಿ ಕಡಿಕೆ ಒಂದ ಸರತೆ ಗುಳಗಿ ನುಂಗಿ ಬಂದೆ.

ನನ್ನ ಹೆಂಡತಿಗೆ ನಾ ಬಚ್ಚಲದಾಗ ಗುಳಗಿ ತೊಗೊತೇನಿ ಅನ್ನೋದ ಒಂದ ಮಜಾ ಅನಿಸಿ ಬಿಡ್ತ. ನಾ ದಿವಸಾ ಮೂರು ಹೊತ್ತ ಗುಳಗಿ ತೊಗೊಬೇಕಾರ ತಾನು ನನ್ನ ಹಿಂದ ಬಂದ ಬಚ್ಚಲದಾಗ ನಿಲ್ಲೋಕಿ. ಮೊದ್ಲ ಹೇಳಿದ್ನೇಲ್ಲಾ ಹೊಸ್ತಾಗಿ ಲಗ್ನ ಆದಾಗ ಹೆಂಡ್ತಿ ಬಾಲಂಗಸಿಗತೆ ಅಂತ ಹಂಗ ಇಕಿ ಬಚ್ಚಲದಾಗ ಒಂದ ಎಕ್ಸ್ಟ್ರಾ ತಂಬಗಿ ಹಿಡಕೊಂಡ ಬಂದ ನಿಲ್ಲೋಕಿ. ಅಕಿಗೆ ನಾ ಬಚ್ಚಲದಾಗ ಗುಳಗಿ ತೊಗೊಳೊದ ಆಟ ಅನಿಸಿಬಿಟ್ಟಿತ್ತ.

ಮುಂದ ಒಂದ ವಾರ ಅನ್ನೊದರಾಗ ಅಕಿ ತವರಮನಿ ಕಡೆ ಎಲ್ಲಾ ಸುದ್ದಿ ಹಬ್ಬಿ ಬಿಟ್ಟಿತ್ತ. ’ಅವ್ವಕ್ಕನ ಗಂಡಗ ಗುಳಗಿ ನುಂಗಲಿಕ್ಕೆ ಬರಂಗಿಲ್ಲಾ, ಅಂವಾ ಬಚ್ಚಲದಾಗ ಗುಳಗಿ ತೊಗೊತಾನ’ ಅಂತ. ಅಲ್ಲಾ ಅದ ನನ್ನ ಹೆಂಡ್ತಿ ಕಿತಬಿ ಬಿಡ್ರಿ, ಅಕಿ ಎಲ್ಲಾರ ಮುಂದು ’ನಮ್ಮ ಮನೆಯವರು ಬಚ್ಚಲದಾಗ ಗುಳಗಿ ತೊಗೊತಾರ’ ಅಂತ ಡಂಗರಾ ಹೊಡದ ಬಿಟ್ಟಿದ್ಲು. ಅಲ್ಲಾ, ಹಂಗ ಜನಾ ಏನ ಅಂದ್ರ ಏನ ಆಗೋದದ. ನಂಗ ಗುಳಗಿ ತೊಗೊಳಿಕ್ಕೆ ಇವತ್ತೂ ಬರಂಗಿಲ್ಲಾ. ಹಂಗ ನನ್ನ ಪುಣ್ಯಾಕ್ಕ ಇತ್ತೀಚಿಗೆ ಭಾಳಿಷ್ಟ ಜಡ್ಡಿಗೆ ಡಿಸ್ಪರ್ಸೆಬಲ್ ಟ್ಯಾಬ್ಲೇಟ್ಸ್ ಬಂದಾವ, ಹಿಂಗಾಗಿ ಗುಳಗಿ ನುಂಗಬೇಕಂತ ಏನ ಇಲ್ಲಾ.

ಅಲ್ಲಾ, ಹಂಗ ಹದಿನೇಳ ವರ್ಷದ ಸಂಸಾರಿಕ ಜೀವನದಾಗ ಹೆಂತಿಂತಾ ಕಷ್ಟ ಕಾರ್ಪಣ್ಯಗಳನ್ನ ನುಂಗೇನಿ ಅಂತ ಈ ಗುಳಗಿ ನುಂಗೋದ ಏನ ದೊಡ್ಡದ ಅಂತ ಅನಸ್ತದ ಖರೇ ಆದರೂ ಇವತ್ತೂ ಈ ಸುಡಗಾಡ ಗುಳಗಿ ಬಾಯಾಗ ಹಾಕೊಳದ ತಡಾ ಯಾಕೊ ವೈಕ್ ಅನಸ್ತದ ಹಿಂಗಾಗೇ ನಾ ಗುಳಗಿ ಉಗಳಿ ಬಿಡ್ತೇನಿ. ಅಲ್ಲಾ ನಂಗೊತ್ತ ಇದ ಸೈಕಾಲಜಿಕಲ್ ಅಂತ ಆದರೂ ತಲ್ಯಾಗಿಂದ ಇನ್ನೂ ನನಗ ಗುಳಗಿ ನುಂಗಲಿಕ್ಕೆ ಬರಂಗಿಲ್ಲಾ ಅನ್ನೋದನ್ನ ತಗಿಲಿಕ್ಕೆ ಆಗವಲ್ತ ಇಷ್ಟ. ಅಲ್ಲಿ ತನಕ ಅದ ಅಲಾ, ತಂಬಗಿ – ನೀರು – ಬಚ್ಚಲಾ – ಹಿಂದ ಬಾಲಂಗಸಿಗತೆ ಹೆಂಡತಿ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ