“ಒಂದು ಕೆಟ್ಟ ಕನಸು – ದೇವಯಾನಿ”

ನಿನ್ನೆ ರಾತ್ರಿ ನಾ ಬಂದಾಗ ಎಷ್ಟ ಹೊಡದಿತ್ತೊ ಆ ಭಗವಂತಗ ಗೊತ್ತ, ಲಾಸ್ಟ ನಾ ಬಾರನಾಗ ಟೈಮ ನೋಡ್ಕೊಂಡಾಗ ೧೨.೨೦ ಆಗಿತ್ತ, ನಾ ನಮ್ಮ ದೋಸ್ತರಿಗೆ ಹೋಯ್ಕೊಂಡೆ
“ಸಾಕ ಮುಗಸರಲೇ ನಿಮ್ಮೌರ, ಮನ್ಯಾಗ ನನ್ನ ಹೆಂಡತಿ ನನ್ನ ಹೆಸರಿಲಿ ಹೋಯ್ಕೋತಿರ್ತಾಳ” ಅಂತ ಹೇಳಿದರು ಅವರೇನ ಕೇಳಲಿಲ್ಲಾ. ಅವರ ಇನ್ನೊಂದ ಬ್ಲೆಂಡರ್ಸ್ ಪ್ರೈಡ ಬಾಟಲಿದ ಬಾಯಿ ತಗದರು. ಅದರಾಗ ನಾ ಎಷ್ಟ ತೊಗೊಂಡೆನೊ ಬಿಟ್ಟೆನೋ ಗೊತ್ತಿಲ್ಲಾ ಒಟ್ಟ ಅಷ್ಟ ಮುಗಿಸಿ ಊಟಾ ಮಾಡಿ ಹೊರಗ ಬಂದಾಗ ರಸ್ತೇ ಬೀಕೋ ಅನ್ನಲಿಕತ್ತಿತ್ತ. ದಿವಸಾ ‘ಕುಡದ ಗಾಡಿ ಹೋಡಿಯೊರನ’ ಹಿಡಿಯೋ ಪೋಲಿಸರ ಸಹಿತ ತಮ್ಮ ತಮ್ಮ ಹೆಂಡಂದರಿಗೆ ಹೆದರಿ ಒಂದ ಥರ್ಟಿ ಥರ್ಟಿ ಹೊಡದ ಮನಿಗೆ ಹೋಗಿದ್ದರು.

ನಡರಾತ್ರ್ಯಾಗ ನಾ ಮನಿದ ಇನ್ನೂ ಗೇಟ ತಗಿಯೊ ಪುರಸತ್ತ ಇಲ್ಲದ ನನ್ನ ಹೆತ್ತ ಕರಳ ಎದ್ದ ಬಂದ ಬಾಗಲ ತಗದ
“ಸ್ವಲ್ಪ ಲಗೂನ ಬರಬೇಕಪಾ, ನಡ ರಾತ್ರ್ಯಾಗ ಎಲ್ಲರ ಏನರ ಆದರ ಏನ ಮಾಡೋದ, ಮೊದ್ಲ ಕಾಲಮಾನ ಸರಿ ಇಲ್ಲಾ” ಅಂತ ಕೇಳಿ ಒಳಗ ಹೋಗಿ ನಾ ಊಟಾ ಮಾಡೇನಿಲ್ಲೋ ಕೇಳಿ ಆಮ್ಯಾಲೆ ಮಲ್ಕೊಂಡಳು. ಅದಕ್ಕ ಅಕಿಗೆ ಹೆತ್ತ ಕರಳು ಅನ್ನೋದ.

ನಾ ಸೀದಾ ಬೆಡ್ ರೂಮಿಗೆ ಹೋಗಿ ಹಾಕ್ಕೊಂಡಿದ್ದ ಪ್ಯಾಂಟ ಶರ್ಟ ಸಹಿತ ಕಳಿಲಿಕ್ಕೆ ಆಗಲಾರದ ಹಾಸಗಿ ಮ್ಯಾಲೆ ಉರಳಿದೆ. ಎಡಗಡೆ ನನ್ನ ಗುಡ್ಡದಂತಾ ಹೆಂಡತಿ ಗುರಕಿ ಹೊಡಿಲಿಕತ್ತಿದ್ಲು, ಇಕಿದ electromagnetic ಕರಳ, ಕರೆಂಟ ಪಾಸ ಆದಾಗ ಇಷ್ಟ ಆ ಕರಳಿಗೆ ಗಂಡನ ಬಗ್ಗೆ ಕನಿಕರ ಬರೋದು.

ಬಲಗಡೆ ಪಲ್ಲಂಗದ ತುದಿ ದಾಟಿದರ ಕೆಳಗ ದೊಡ್ಡ ಪ್ರಪಾತ ಇದ್ದಂಗ ಅನಸ್ತು. ನಾ ಎಡಕ್ಕ ಬಲಕ್ಕ ಸರಿಲಾರದ ಅಂಗಾತ ಬಿದಕೊಂಡರ ಮ್ಯಾಲೆ ಫ್ಯಾನ ತಿರಗಲಿಕತ್ತದೋ ಇಲ್ಲಾ ತಲಿ ತಿರಗಲಿಕತ್ತದೊ ಗೊತ್ತಾಗವಲ್ತಾಗಿತ್ತ. ಅಷ್ಟರಾಗ ದಪ್ಪಂತ ನನ್ನ ಹೆಂಡತಿ ಕೈ ನನ್ನ ಎದಿಮ್ಯಾಲೆ ಬಿತ್ತ, ನನ್ನ ಎದಿ ಧಸಕ್ಕ್ ಅಂತ. ಅಕಿಗೆ ನನ್ನ ರಿಬ್ಸ್ ನಟ್ಟವ ಕಾಣತದ ಅಕಿ ಎಚ್ಚರಾಗಿ ನಿದ್ದಿ ಗಣ್ಣಾಗ
“ರ್ರೀ, ಯಾವಾಗ ಬಂದರಿ?” ಅಂದ್ಲು.
“ಏ, ನಾ ಬಂದ ಭಾಳೊತ್ತ ಆತ, ನೀ ಏನ ಇವತ್ತ ಭಾಳ ಲಗೂ ಮಲ್ಕೊಂಡಿದಿ” ಅಂದೆ.

“ಎಲ್ಲಿದರಿ, ಹನ್ನೊಂದರತನಕ ನಿಮ್ಮ ದಾರಿ ನೋಡಿ ನಾ ಆಮ್ಯಾಲೆ ಮಲ್ಕೊಂಡೇನಿ” ಅಂದ್ಲು.
“ಏ, ಹಂಗರ ನೀ ಹಿಂಗ ಮಲ್ಕೊಂಡಿ, ನಾ ಬಂದೇನಿ ತೊಗೊ” ಅಂತ ನಾ ಅಕಿ ಕಡೆ ಹೊಳ್ಳಿ ಅಕಿ ಮೈ ಮ್ಯಾಲೆ ಕೈ ಹಾಕಿದೆ
“ರ್ರಿ, ನಂಗ ಸಾಕಾಗೇದ, ಸುಮ್ಮನ ಕೈ ತಗದ ಮಲ್ಕೋರಿ, ನಂಗ ಮುಟ್ಟಬ್ಯಾಡರಿ” ಅಂತ ಆ ಕಡೆ ಮಗ್ಗಲ ಮಾಡಿ ಮಲ್ಕೊಂಡ್ಲು.

ನನ್ನ ಪುಣ್ಯಾ ನಾ ಇಷ್ಟ ಲೇಟಾಗಿ ಬಂದದ್ದ ಅಕಿಗೆ ಗೊತ್ತಾಗಲಿಲ್ಲಾ ಅಂತ ನಾ ಕೈತಗದ ಮಲ್ಕೊಂಡೆ. ತಲಿದಿಂಬ ಬಾಜುಕ ನಾ ಒದಿದ್ದ ‘ಯಯಾತಿ’ ಪುಸ್ತಕ ಇತ್ತ.
ಯಯಾತಿ ಹೆಂತಾ ಕಾದಂಬರಿ, ಏನ್ ಕ್ಯಾರೆಕ್ಟರ್ಸ್ ಅದರಾಗ ಅಂತ ಅದರ ಬಗ್ಗೆ ವಿಚಾರ ಮಾಡ್ಕೋತ ಮಲ್ಕೊಂಡೆ. ಒಮ್ಮಿಕ್ಕಲೆ ಯಯಾತಿ ಹೆಂಡತಿ ದೇವಯಾನಿ ನೆನೆಪಾದ್ಲು. ಅಬ್ಬಾ, ಹೆಂತಾ ಹೆಣ್ಣ ಅದು. ಏನ ಸಿಟ್ಟು, ಏನ ಸಡಗರ, ಏನ ಸೊಕ್ಕು, ಅಕಿ ಶುಕ್ರಾಚಾರಿ ಮಗಳೋ ಇಲ್ಲೊ ಶುಕ್ರಾಚಾರಿ ಅವ್ವನೋ ತಿಳಿಲಾರದಂಗ ಇದ್ಲು. ಅಕಿ ಆರ್ಭಾಟ, ಹ್ಯಾಂವ, ಹೊಟ್ಟಿ ಕಿಚ್ಚ, ಒಂದ ಎರಡ ಅಯ್ಯಯ್ಯ!!! ನಮ್ಮ ಕಲಿಯುಗದ ಹತ್ತ ಹೆಂಡಂದರನ ಅಕಿ ಮುಂದ ನಿವಾಳಿಸಿ ಒಗಿಯೊ ಹಂಗ ಇದ್ಲು. ನಾ ಆ ಪುಸ್ತಕ ಎತ್ತಿ ಖಿಡಕ್ಯಾಗ ಇಟ್ಟ ಕಣ್ಣ ಮುಚ್ಚಿದೆ…………………

ನನ್ನ ಮಾರಿ ಮ್ಯಾಲೆ ಗುಳು-ಗುಳು ಆದಂಗ ಆಗಲಿಕತ್ತ, ನಂಗರ ಮೀಸಿ ಇದ್ದಿದ್ದಿಲ್ಲಾ ಅದರು ಮೂಗ ಹತ್ತರ ಕೂದ್ಲ ಹರದಾಡಿದಂಗ ಆಗಲಿಕತ್ತ. ನನ್ನ ಮೂಗಿನ ಬಾಜುಕ ಮತ್ತೊಂದ ಮೂಗ ಬಡಿಸಿಗೋತ ಹೋದಂಗ ಆತ. ನಂಗ ಕಣ್ಣ ತಗದ ಅದ ಏನ ಅಂತ ನೋಡಲಿಕ್ಕೂ ಆಗಲಾರದಷ್ಟ ಕಣ್ಣ ವಜ್ಜಾ ಆಗಿದ್ವು, ಇನ್ನೇನ ತಡಕೊಳ್ಳಿಕ್ಕೆ ಆಗಲಾರದ ಜೋರಾಗಿ ಸೀನ ಬೇಕು ಅನ್ನೋದರಾಗ ನನ್ನ ಹೆಂಡತಿ
“ರ್ರಿ, ಖರೇ ಹೇಳ್ರಿ, ನೀವ ತೂಗಂಡ ಬಂದಿರ ಹೌದಲ್ಲೊ?” ಅಂದ್ಲು

ನಾ “ಇಲ್ಲಾ, ಖರೇನ ಇಲ್ಲಾ, ನಿನ್ನ ಆಣೆಂದ್ರೂ ಇಲ್ಲಾ” ಅಂದೆ.

“ಇಲ್ಲಾ, ನೀವು ಸುಳ್ಳ ಹೇಳಲಿಕತ್ತೀರಿ, ಪ್ರತಿ ಸಲಾ ಸುಳ್ಳ ಹೇಳಿದಾಗೊಮ್ಮೆ ನನ್ನ ಮ್ಯಾಲೆ ಆಣಿ ಮಾಡ್ತೀರಿ. ನಂಗ ವಾಸನಿ ಬರಲಿಕತ್ತದ” ಅಂತ ಎದ್ದ ಕೂತಲು.
” ರ್ರಿ, ನೀವು ಹಿಂದಕೂ ನನ್ನ ಮ್ಯಾಲೆ ಆಣಿ ಮಾಡಿ ಹೇಳಿದ್ದರಿ ಹೌದಲ್ಲ, ನಾ ಒಟ್ಟ ಕುಡದ ಬೆಡರೂಮಗೆ ಬರಂಗಿಲ್ಲಾ ಅಂತ, ಈಗ ಮತ್ತ ಹೆಂಗ ಬಂದರಿ?” ಅಂತ ಗಂಟ ಬಿದ್ಲು. ಏ, ಮಾರಾಯ್ತಿ ಈಗ ಆಗಿದ್ದ ಆಗಿ ಹೋತ ಸುಮ್ಮನ ಮಲ್ಕೊ ಅಂತ ಎಷ್ಟ ತಿಳಿಸಿ ಹೇಳಿದರು ಕೇಳಲಿಲ್ಲಾ, ಮತ್ತು ಗಂಟ ಬಿದ್ಲು. ನಾ ಕಡಿಕೆ ತಲಿಕೆಟ್ಟ ಧೈರ್ಯಾ ಮಾಡಿ
“ಹೌದ, ನಾ ಕುಡದ ಬಂದೇನಿ, ಏನೀಗ? ನನ್ನ ಬಿಟ್ಟ ನಿಮ್ಮಪ್ಪನ ಮನಿಗೆ ಹೋಗೊಕೇನ್? ಹೋಗ” ಅಂದೆ.

“ಯಾಕ, ನಾ ಯಾಕ ನಮ್ಮಪ್ಪನ ಮನಿಗೆ ಹೋಗಬೇಕ? ಹಂಗ ಹೋಗಲಿಕ್ಕೆ ನಿಮ್ಮನ್ನ ಕಟಗೊಂಡ ಬಂದಿಲ್ಲಾ, ಅಗ್ನಿಗೆ ಸಾಕ್ಷಿ ಇಟಗೊಂಡ ನಿಮ್ಮ ಜೋತಿ ಸಪ್ತಪದಿ ತುಳದ ಬಂದೇನಿ, ಹಂಗ ಅಲ್ಲಾ, ನೋಡ್ತೀರ್ರಿ, ನಿಮ್ಮನ್ನ ಏನ ಮಾಡ್ತೇನಿ. ನಿಮ್ಮನ್ನ ವಿಲಿ-ವಿಲಿ ಒದ್ಯಾಡಸಲಿಲ್ಲಾ ಅಂದ್ರ ನನ್ನ ಹೆಸರ ಅಲ್ಲಾ” ಅಂದ್ಲು.
“ಲೇ, ಏನ ಮಾಡ್ಕೋತಿ ಮಾಡ್ಕೋ ಹೋಗ” ಅಂತ ನಾನು ಕುಡದ ನಶೇದಾಗ ಅಂದೆ. ಅಕಿ ಸಿದಾ ನನಗ
“ಇವತ್ತಿನಿಂದ ನೀವ ನನ್ನ ಒಟ್ಟ ಮುಟ್ಟೋಹಂಗ ಇಲ್ಲಾ, ಇನ್ನ ಮ್ಯಾಲೆ ನನಗೂ ನಿಮಗೂ ಯಾವ ಸಂಬಂಧನೂ ಇಲ್ಲಾ, ನಾವ ಬರೇ ಲೋಕದ ದೃಷ್ಟಿ ಒಳಗ ಇಷ್ಟ ಗಂಡಾ ಹೆಂಡತಿ” ಅಂತ ಸೀದಾ ಹಾಸಗಿ ಬಿಟ್ಟ ಎದ್ದ ನನ್ನ ಬುಡಕಿನ ಬೆಡಶೀಟ ಮ್ಯಾಲಿಂದ ರಜಾಯಿ ಕಸಗೊಂಡ ಬಿಟ್ಲು. ನಾ ಅಕಿ ಅವತಾರ ನೋಡಿ ಗಾಬರಿ ಆದೆ.

ಮೈ ಮ್ಯಾಲೆ ಸ್ಲೀವ್ ಲೆಸ್ ನೈಟೀ, ಅಮವಾಸ್ಸಿ ರಾತ್ರಿಹಂಗ ಟೊಂಕದ ಮಟಾ ಹರಡಿದ ಕಪ್ಪನಿ ಕೂದ್ಲಾ, ನಡರಾತ್ರ್ಯಾಗೂ ಹೋಳೆಯೋ ಸೋಡಾ ಬಾಟ್ಲಿ ಗುಂಡಾದಂತಾ ಎರಡ ತಗದಿದ್ದ ಕಣ್ಣು, ನಂಗ ಫಕ್ಕನ ‘ಯಯಾತಿ ‘ ಒಳಗಿನ ದೇವಯಾನಿ ನೆನೆಪಾಗಿ ಬಿಟ್ಲು. ಎದಿ ಧಸಕ್ಕಂತ. ಸಾಕ್ಷಾತ ದೇವಯಾನಿ ನನ್ನ ಮುಂದ ಬಂದ ನಿಂತಿದ್ಲು, ಆದರ ಇಕಿ ನೋಡಲಿಕ್ಕೆ ಮಾತ್ರ ಪ್ರೇರಣಾ ಇದ್ದಂಗ ಇದ್ದಳು. ಇಕಿ ದೇವಯಾನಿನೋ ಇಲ್ಲಾ ನನ್ನ ಹೆಂಡತಿನೋ ಅನ್ನೊದ ಗೊತ್ತಾಗಲಿಲ್ಲಾ, ಬಹುಶಃ ದೇವಯಾನಿನ ನನ್ನ ಹೆಂಡತಿ ಮೈಯಾಗ ಬಂದಾಳ ಅಂತ ಅನಸಲಿಕತ್ತ, ನಂಗ ಇನ್ನೂ ಹೆದರಕಿ ಆಗಲಿಕತ್ತು. ನಾ ಮಾಡಬಾರದ ತಪ್ಪ ಮಾಡಿ ಬಿಟ್ಟಿದ್ದೆ.

ಅಕಿ ನಮ್ಮ ಫಸ್ಟ ನೈಟ ದಿವಸ ನಾ ಕುಡದ ಬಂದದ್ದ ಗೊತ್ತ ಆದಾಗ ದೊಡ್ಡ ರಂಪಾಟ ಮಾಡಿದ್ದ ನೆನಪಾತು. ನನಗ ಅಕಿ ಆವಾಗ ಹೊರಗ ಹಾಕತೇನಿ ಇಲ್ಲಾ ತಾನ ಹೊರಗ ಹೋಗ್ತೆನಿ ಅಂತ ಹೆದರಿಸಿದ್ಲು. ನಾ ಅಕಿ ಏನರ ಹಂಗ ಮಾಡಿದರ ಇದ್ದದ್ದ ಒಂದ ಸ್ವಲ್ಪ ಮರ್ಯಾದಿನೂ ಫಸ್ಟನೈಟ ದಿವಸನ ಹೊರಗ ಹೋಗ್ತದ ಅಂತ ಹೆದರಿ, ಇನ್ನ ಮುಂದ ಒಟ್ಟ ಕುಡಿಯಂಗಿಲ್ಲಾ, ಹಂಗೇನರ ಕುಡದರು, ಕುಡದ ನಿನ್ನ ಜೊತಿ ಮಲ್ಕೊಳಂಗಿಲ್ಲಾ ಅಂತ ಅಕಿ ಮ್ಯಾಲೆ ಆಣಿ ಮಾಡಿದ್ದೆ. ಅಂದರ ನಾ ಕುಡದಾಗ ಬ್ಯಾರೆಯವರ ಜೊತಿ ಮಲ್ಕೋತಿನಿ ಅಂತಲ್ಲಾ ಮತ್ತ ಕುಡದಾಗ ಬೆಡರೂಮಿಗೆ ಬರಂಗಿಲ್ಲಾ ಅಂತ.

ಅಕಿ ಮಾತ ಮಾತಿಗೆ ಅವರಪ್ಪನ ಧಮಕಿ ಬ್ಯಾರೆ ಕೊಡ್ತಿದ್ಲು, ನಮ್ಮಪ್ಪ ಸಿಡಕ ಶಿವರಾತ್ರಿ, ಅಸುರರ ಗುರು ವಕ್ಕಣ್ಣ ಶುಕ್ರಾಚಾರಿ ಇದ್ದಂಗ, ನೀವು ಅವನ ಮುಂದ ತೃಣಕ್ಕ ಸಮಾನ ಅಂತಿದ್ಲು. ನಾನು ಅವರಪ್ಪ ಸಿಡಕಿನ ಮನಷ್ಯಾ ಹೋಗಲಿ ಬಿಡ ಅಂತ ಹೆದರಿ ಅಕಿ ಹೇಳಿದಂಗ ಕೇಳ್ತಿದ್ದೆ. ಅವತ್ತ ಕುಡದ ಬೆಡರೂಮಿಗೆ ಬರಂಗಿಲ್ಲಾಂತ ಆಣಿ ಕೊಟ್ಟೊಂವಾ ಇವತ್ತ ಕುಡದ ಬಂದ ಅಕಿ ಕೈಯಾಗ ಸಿಕ್ಕೊಂಡಿದ್ದೆ. ಹೇಳಿ ಕೇಳಿ ಇಕಿನೂ ಸಿಡಕ ಶಿವರಾತ್ರಿ ‘ಇನ್ನ ಮುಂದ ನೀವು ನಂಗ ಒಟ್ಟ್ ಮುಟ್ಟಂಗಿಲ್ಲಾ ಅಂತ ನಿಮ್ಮ ಮ್ಯಾಲೆ ಆಣಿ ಮಾಡಿ ನನಗ ವಚನಾ ಕೊಡ್ರಿ’ ಅಂತ ನನ್ನ ಕಡೆ ವಚನಾ ತೊಗಂಡ ಪಡಸಾಲ್ಯಾಗ ಮಲ್ಕೊಳ್ಳಿಕ್ಕೆ ಹೋಗಿ ಬಿಟ್ಟಳು.

ಇನ್ನ ಮುಂದ ಹೆಂಗಪಾ ಸಂಸಾರ ಅಂತ ನನಗ ಚಿಂತಿ ಹತ್ತಲಿಕತ್ತು. ಅಲ್ಲಾ, ಈಗಾಗಲೆ ಎರಡ ಮಕ್ಕಳಾಗಿ ಬಿಟ್ಟಾವ, ಹದಿನೈದ ವರ್ಷ ಕೂಡಿ ಸಂಸಾರನು ಕಳದೇವಿ, ಇನ್ನೇನ ಮುಟ್ಟಿದರು ಅಷ್ಟ ಮುಟ್ಟಲಿದ್ರೂ ಅಷ್ಟ ಖರೆ ಆದರೂ ಹಂಗ ಹೆಂಡತಿ ಬಿಟ್ಟ ಮಲಗೊ ವಯಸ್ಸೇನ ಅಲ್ಲಲಾ ನಂದು ಅಂತ ಮರಗಲಿಕತ್ತೆ.

ಹಿಂದ ಇತಿಹಾಸದಾಗ ದೇವಯಾನಿ ತನ್ನ ಗಂಡ ಯಯಾತಿ ಕುಡದ ಬಂದಿದ್ದಕ್ಕ ಹದಿನೆಂಟ ವರ್ಷಗಟ್ಟಲೇ ಅವನ್ನ ಮುಟ್ಟಲಾರದ ಜೀವನಾ ನಡಸಿದ್ದ ನೆನಪಾತ, ಇನ್ನ ಈ ದೇವಯಾನಿ ನನ್ನ ಹೆಂಡತಿ ಮೈಯಾಗ ಬಂದಾಳ ಅಂದರ ಇಕಿನೂ ನನ್ನ ಹದಿನೆಂಟ ವರ್ಷಗಟ್ಟಲೇ ಮುಟ್ಟಂಗಿಲ್ಲಾ ಅಂತ ಗ್ಯಾರಂಟಿ ಆತು. ಅಷ್ಟರಾಗ ನಂಗ ಅರವತ್ತ ವರ್ಷ ಆಗಲಿಕ್ಕೆ ಬಂದಿರತದ ಮುಂದ ಅಕಿ ಮುಟ್ಟಿದರೇನು ಬಿಟ್ಟರೇನು ಅನಸಲಿಕತ್ತು. ಆ ಯಯಾತಿಗೇನೋ ಸೈಡಿಗೆ ಶರ್ಮಿಷ್ಟೆ ಇದ್ದಳು, ಮುಂದ ಅಶೋಕ ವನದಾಗ ಸಾಕಷ್ಟ ದಾಸಿಯರ ಇದ್ದರು. ಅಂವಾ ಅಲ್ಲೆ ದಿವಸಾ ಹಗಲು- ರಾತ್ರಿ ‘ಮಧ್ಯ, ಮೃಗಯೇ ಮತ್ತ ಮೀನಾಕ್ಷಿ’ ಅನ್ಕೋತ ಜೀವನ ಎಂಜಾಯ ಮಾಡಿದಾ. ದೇವಯಾನಿ ತನ್ನ ಹೆಂಡತಿ ಅನ್ನೋದನ್ನ ಮರತ ಬಿಟ್ಟಾ. ಆ ಹಟಮಾರಿ ಹೆಣ್ಣ ದೇವಯಾನಿ ಸಹಿತ ‘ಎಷ್ಟ ಅಂದರೂ ಅಂವಾ ನನ್ನ ಗಂಡಾ, ಕುಡದರ ಕುಡಿವಲ್ನಾಕ’ ಅಂತ ಅಕಿ ಒಂದ ದಿವಸನು ಯಯಾತಿ ಜೊತಿಗೆ ರಾಜಿ ಆಗಲಿಲ್ಲಾ, ಭಾರಿ ಹೆಣ್ಣ ಆ ದೇವಯಾನಿ.

ಆದರ ಈಗ ನನ್ನ ಹಣೇಬರಹ ಏನಪಾ ಅಂತ ವಿಚಾರ ಮಾಡಲಿಕತ್ತೆ. ನಂಗ ಯಾ ಶರ್ಮಿಷ್ಟೆನೂ ಇಲ್ಲಾ, ಯಾ ಅಶೋಕವನದಾಗ ಅನಲಿಮಿಟೆಡ್ ದಾಸಿಯರು ಇಲ್ಲಾ, ಮುಂದ ಹೆಂಗ ಜೀವನಾ ಅಂತ ಚಿಂತಿ ಹತ್ತು. ಇನ್ನ ಹಿಂಗ ಇಕಿ ನಾಳೆ ಅವರಪ್ಪಗೂ ‘ನನ್ನ ಗಂಡ ನನಗ ವಿಶ್ವಾಸ ದ್ರೋಹಾ ಮಾಡಿದಾ, ದಿವಸಾ ಕುಡದ ಬರತಾನ, ಕೊಟ್ಟ ವಚನಾ ಪಾಲಸಲಿಲ್ಲಾ, ಅದಕ್ಕ ಅವನ್ನ ನಾ ಮುಟ್ಟಂಗಿಲ್ಲಾ’ ಅಂತ ಹೇಳಿ, ಅದೊಂದ ಇಶ್ಯು ಮಾಡಿ, ಊರ ಮಂದಿಗೆಲ್ಲಾ ಗೊತ್ತಾಗೊ ಹಂಗ ಮಾಡಿ ಗಿಡ್ಯಾಳ ಅಂತ ಬ್ಯಾರೆ ಹೆದರಕಿ ಬರಲಿಕತ್ತು.

ಇಲ್ಲಾ ಇದು ಹಿಂಗಾದರ ಖಡ್ಡಿ ಇದ್ದದ್ದ ಗುಡ್ಡ ಆಗ್ತದ ಏನ ಆಗಲಿ ನನ್ನ ದೇವಯಾನಿದ ತಪ್ಪಾತಂತ ಕೈಕಾಲ ಹಿಡಕೊಂಡ ಅಕಿ ಕಡೆಯಿಂದ ವಚನಾ ಹಿಂದ ತಗಿಸಿ ವಳತ ಅನಸಬೇಕು ಅಂತ ನಾ ಹೊರಗ ದಿವಾನದ ಮ್ಯಾಲೆ ಮಲ್ಕೊಂಡ ದೇವಯಾನಿ ಕಡೇ ಹೋಗಿ ಎಬಿಸಿ
“ನಂದ ತಪ್ಪಾತ, ಇನ್ನೊಮ್ಮೆ ಕುಡದ ಬರಂಗಿಲ್ಲಾ, ನೀ ಸಿಟ್ಟಿಗೇಳ ಬ್ಯಾಡ. ಪ್ಲೀಸ್ ನೀ ಸಿಟ್ಟಿಗೇಳ ಬ್ಯಾಡ, ಹಂಗ ಮುಟ್ಟಬ್ಯಾಡ ಅಂತ ಅನ್ನಬ್ಯಾಡ, ಮುಟ್ಟಬ್ಯಾಡ ಅಂತ ಅನ್ನಬ್ಯಾಡ, ನಂಗ ನಿನ್ನ ಬಿಟ್ಟರ ಬ್ಯಾರೆ ಯಾರ ಇದ್ದಾರ ಹೇಳ ಮುಟ್ಟಲಿಕ್ಕೆ” ಅಂತ ಜೊರಾಗಿ ಒದರಲಿಕತ್ತೆ…………………..

“ರ್ರಿ, ಏನಾತರಿ ನಿಮಗ ಒಮ್ಮಿಂದೊಮ್ಮಿಲೆ. ನಾ ಎಲ್ಲೆ ಸಿಟ್ಟಿಗೆದ್ದೇನಿ, ಸಾಕಾಗಿತ್ತ ಅಂತ ‘ಈಗ ಸುಮ್ಮನ ಕೈ ತಗದ ಮಕ್ಕೋರಿ, ಮುಟ್ಟಬ್ಯಾಡರಿ’ ಅಂದೆ ಇಷ್ಟ” ಅಂತ ನನ್ನ ಹೆಂಡತಿ ಕಣ್ಣ ತಿಕ್ಕೋತ ಎದ್ಲು. ನಂಗೂ ಸಡಕ್ಕನ ಎಚ್ಚರಾತ. ಬಾಜೂಕ ಮಲ್ಕೊಂಡೋಕಿ ನನ್ನ ಹೆಂಡತಿ ಪ್ರೇರಣಾನ ಇದ್ಲು, ದೇವಯಾನಿ ಏನ ಇರಲಿಲ್ಲಾ. ಅಕಿ ಎದ್ದ ಪಡಸಾಲಿಗೂ ಹೋಗಿರಲಿಲ್ಲಾ. ಅಕಿ ಮೈಯಾಗ ಯಾವ ದೇವಯಾನಿನು ಬಂದಿರಲಿಲ್ಲಾ, ಅಲ್ಲಾ ಖರೇ ಹೇಳ್ಬೇಕಂದರ ಇಕಿನs ಮಂದಿ ಮೈಯಾಗ ಬರೊ ಹಂಗ ಇದ್ದಾಳ ಇಕಿ ಮೈಯಾಗ ಯಾರಿಗೆ ಬರಲಿಕ್ಕೆ ಧೈರ್ಯ ಬರಬೇಕ ಬಿಡ್ರಿ. ಹಂಗರ ನಂಗ ಇಷ್ಟೋತನಕ ಬಿದ್ದಿದ್ದ ದೇವಯಾನಿದ ಕೆಟ್ಟ ಕನಸು ಅಂತ ಮನಸ್ಸಿಗೆ ಸಮಾಧಾನ ಆತು. ಅಪ್ಪಾ, ಅವನೌನ ಹೆಂತಾ ಕನಸ ಬಿದ್ದಿತ್ತಪಾ, ಈ ಪೌರಾಣಿಕ ಬುಕ್ ಓದಿದರ ಹಿಂತಾ ಹಣೇಬರಹನ, ಅದರಾಗಿನ ಕಥಿ ಅಗದಿ ಕಣ್ಣಿಗೆ ಕಟ್ಟಿದಂಗ ಆಗ್ತಾವ. ಪುಣ್ಯಾಕ ಕನಸಿನಾಗ ಶರ್ಮಿಷ್ಟೆ ಬಂದಿದ್ದಿಲ್ಲಾ, ಎಲ್ಲರ ಆಮ್ಯಾಲೆ ನಾ ನನ್ನ ಹೆಂಡತಿ ಕೊರಳಾಗ ಕೈಹಾಕಿ ‘ಶಮಾ, ಶಮಾ’ ಅಂತ ಅಂದಿದ್ದರ ಇಕಿ ಮೈಮ್ಯಾಲೆ ಆವಾಗ ಖರೇನ ದೇವಯಾನಿ ಬಂದ ಇಕಿ ಎದ್ದ ನನಗ ಬೂಟಲೇ ಹೋಡಿತಿದ್ಲು ಅಂತ ಅನ್ಕೊಂಡ ನನ್ನ ಹೆಂಡತಿನ ಗಟ್ಟೆ ಹಿಡಕೊಂಡ ಮಲ್ಕೊಂಡೆ.

ಒಂದ ಕೆಟ್ಟ ದೇವಯಾನಿ ಕನಸ ನಡರಾತ್ರ್ಯಾಗ ಬೆವರ ಬರೋಹಂಗ ಮಾಡಿ ಕುಡದದ್ದ ಎಲ್ಲಾ ಇಳಿಯೋ ಹಂಗ ಮಾಡ್ತು.
ಅನ್ನಂಗ ಯಾರಿಗೆ ಈ ಯಯಾತಿ ಮತ್ತ ದೇವಯಾನಿ ಗೊತ್ತಿಲ್ಲಾ, ಅವರಿಗೆ ಬ್ರೀಫ್ ಆಗಿ ಅವರದ ಪರಿಚಯ ಮಾಡಸ್ತೇನಿ.

ಯಯಾತಿ ಅಂತ ಹಿಂದ ಇತಿಹಾಸದಾಗ ಹಸ್ತಿನಾಪುರದ ರಾಜಾ ಇದ್ದಾ, ಅವನ ಹೆಂಡತಿ ದೇವಯಾನಿ. ಅಕಿ ಅಪ್ಪಾ ಅಸುರರ ಗುರು ಶುಕ್ರಾಚಾರಿ. ಇನ್ನ ಅಕಿ ಹೆಂತಾ ಹೆಣ್ಣು, ಅಕಿ ಸ್ವಭಾವ ಹೆಂತಾದು ಅನ್ನೋದ ಅಂತು ನಿಮಗ ನನ್ನ ಕನಸಿನಾಗ ಬ್ರೀಫ್ ಆಗಿ ಹೇಳೆ ಹೇಳೇನಿ. ಶರ್ಮಿಷ್ಟೆ ದೇವಯಾನಿ ಗೆಳತಿ ಆದರ ದೇವಯಾನಿ ಅಕಿನ್ನ ತನ್ನ ದಾಸಿ ಮಾಡ್ಕೊಂಡ ಗಂಡನ ಮನಿಗೆ ಕರಕೊಂಡ ಹೋಗಿದ್ಲು.

ಫಸ್ಟನೈಟ ದಿವಸ ಯಯಾತಿ ಕುಡದ ಹೋದಾಗ ದೇವಯಾನಿ ಸಿಟ್ಟಿಗೆದ್ದ ಇನ್ನ ಮುಂದ ಒಟ್ಟ ಕುಡದಾಗ ಬೆಡರೂಮಿಗೆ ಬರಬ್ಯಾಡ ಅಂತ ವಚನಾ ತೊಗೊಂಡಿದ್ಲು.

ಇತ್ತಲಾಗ ಯಯಾತಿಗು-ಶರ್ಮಿಷ್ಟೆಗು ಸಂಬಂಧ ಬೆಳದ್ವು. ಅದು ದೇವಯಾನಿಗೂ ಸಂಶಯ ಬರಲಿಕತ್ತು. ಆದರ ಒಂದ ಸರತೆ ಯಯಾತಿ ಇಬ್ಬಿಬ್ಬರನ ಸಂಭಾಳಸೋ ಟೆನ್ಶನದಾಗ ಕುಡದ ಶಯನ ಗೃಹಕ್ಕ ಹೋಗಿದ್ದ ತಪ್ಪಿಗೆ ದೇವಯಾನಿ ಯಯಾತಿಗೆ ‘ನಂಗ ಒಟ್ಟ ಇನ್ನ ಮುಟ್ಟಬ್ಯಾಡ’ ಅಂತ ಆಣಿ ತೊಗಂಡ ಬಿಟ್ಲು. ಮುಂದ ಹದಿನೆಂಟ ವರ್ಷಗಟ್ಟಲೇ ಅಂವಾ ಹೆಂಡತಿನ ಮುಟ್ಟಲಾರದ ಬಿಟ್ಟ ಇರಬೇಕಾತು.

ಇತ್ತಲಾಗ ಕಟಗೊಂಡ ಹೆಂಡತಿ ಮುಟ್ಟಬ್ಯಾಡ ಅಂದಮ್ಯಾಲೆ ಯಯಾತಿಗೆ ಶರ್ಮಿಷ್ಟೆ ಒಬ್ಬಕಿನ ಗತಿ ಆದ್ಲು. ಅದ ದೇವಯಾನಿಗೆ ಗೊತ್ತಾದ ಮ್ಯಾಲೆ ಅಕಿ ಕೆಂಡಾಕಾರಿ ಶರ್ಮಿಷ್ಟೆಯನ್ನ ಕೊಲ್ಲಲಿಕ್ಕೆ ಹೊಂಟಿದ್ಲು. ಆವಾಗ ಯಯಾತಿ ಶರ್ಮಿಷ್ಟೆಯನ್ನ ಹಸ್ತಿನಾಪುರ ಬಿಟ್ಟ ಕಾಡಿಗೆ ಕಳಸಿದಾ. ಪಾಪ, ಯಯಾತಿ ಹಣೇಬರಹ ನೋಡ್ರಿ ಕಟಗೊಂಡ ಹೆಂಡತಿ ಮುಟ್ಟಬ್ಯಾಡ ಅಂದ್ಲು, ಇಟಗೊಂಡಕಿನ ಕಾಡಿಗೆ ಕಳಸಬೇಕಾತು. ಅಕಿ ಜೊತಿನೂ ಬದುಕಲಿಕ್ಕೆ ಹೆಂಡತಿ ಬಿಡಲಿಲ್ಲಾ. ಏನೋ ಅವನ ಪುಣ್ಯಾ ಅಶೋಕವನದಾಗ ಅವಂಗ ಮುಂದ ಜೀವನದ ಎಲ್ಲಾ ದೈಹಿಕ ಸುಖ ಸಿಕ್ತು, ಆದರ ಮಾನಸಿಕ ಸುಖ ಸಿಗಲಿಲ್ಲಾ. ಹದಿನೆಂಟ ವರ್ಷದ ಮ್ಯಾಲೆ ಶುಕ್ರಾಚಾರಿ ಬಂದ ತನ್ನ ಮಗಳ ದೇವಯಾನಿ ಸಂಸಾರ ಸರಿ ಮಾಡಿದಾ. ಸರಿ ಮಾಡಿದಾ ಅಂದ್ರ ಏನ್? ಇನ್ನ ಮುಂದ ತನ್ನ ಅಳಿಯಾ ಯಾರನು ಕಟಗೊಳಲಾರದಂಗ, ಇಟಗೊಳಲಾರದಂಗ ಅವಂಗ ಶಾಪಾ ಕೊಟ್ಟ ಸಣ್ಣ ವಯಸ್ಸಿನಾಗ ಮುದಕನ್ನ ಮಾಡಿ ಬಿಟ್ಟಾ….ಮುಂದ ಅದೊಂದ ದೊಡ್ಡ ಕಥಿ…ಅದ ಸದ್ಯೇಕ ಬ್ಯಾಡ.

ನಂಗ ಯಯಾತಿ ಒಳಗ ಓದಿದ್ದ ಒಂದ ವಿಷಯ ಭಾಳ ಮನಸ್ಸಿಗೆ ನಾಟತ
‘ಜಗತ್ತಿನಾಗ ಮೂರ ವಿಷಯ ಸತ್ಯ ‘ಮಧ್ಯ-ಮೃಗಯೇ ( ಬೇಟೆ)-ಮೀನಾಕ್ಷಿ ( ಹೆಣ್ಣಿನ ಸಹವಾಸ).’ ಈ ಮೂರರ ಸಹವಾಸದಾಗ ಮನುಷ್ಯ ಅಂದರ ‘ಗಂಡಸ,’ ಅದರಾಗೂ ‘ಗಂಡಾ’ ಅನ್ನೋವಾ ತನ್ನ ಎಲ್ಲಾ ದುಃಖ ಮರತ ಬಿಡ್ತಾನ. ಅದರಾಗ ಹೆಣ್ಣಿನ ಸಹವಾಸ ಅಂತೂ ಕುಡದ ಬೇಟೆ ಆಡಿದಂಗ’ ಅಂತ.

ಆದರ ಈ ಕಲಿಯುಗದಾಗ ಯಾರ ಯಾರನ ಬೇಟೆ ಆಡಲಿಕತ್ತಾರೊ ಆ ಕಲಿಗೆ ಗೊತ್ತ. ನನಗ ಅನಸ್ತದ ಇವತ್ತ ಈ ಮೀನಾಕ್ಷಿ ( ಹೆಣ್ಣಿನ ) ಕೈಯಾಗ ಗಂಡನ ಮೃಗಯೇ (ಬೇಟೆ) ಸಿಕ್ಕಂಗ ಸಿಕ್ಕ ಬದಕಲಿಕ್ಕೆ ಆವಾಗ ಇವಾಗ ಮಧ್ಯವನ್ನ ಆಶ್ರಿಸತಾನ ಅಂತ.

ಆದ್ರೂ ಒಂದ ಕೆಟ್ಟ ಕನಸ ನನ್ನ ತಳಾ- ಬುಡಾನ ಅಳಗ್ಯಾಡಸಿ ಬಿಡ್ತು. ಏನೋ ನನ್ನ ಪುಣ್ಯಾ ನಡರಾತ್ರ್ಯಾಗ ಬಿದ್ದಿತ್ತ, ಹಂಗೇನರ ನಸೀಕಲೇ ಕನಸ ಬಿದ್ದಿದ್ದರ ಅವು ಖರೇ ಆಗ್ತಾವ ಅಂತ ಕೇಳಿದ್ದೆ.

ಅಲ್ಲಾ, ಹಂಗ ಯಯಾತಿಗತೆ ಲೈಫ್ ಎಂಜಾಯ್ ಮಾಡಲಿಕ್ಕೂ ಪಡದ ಬರಬೇಕ ತೊಗೊರಿ, ಅದ ಎಲ್ಲಾರ ಹಣೇಬರಹದಾಗ ಬರದಿರಂಗಿಲ್ಲಾ.

Leave a Reply

Your email address will not be published.

This site uses Akismet to reduce spam. Learn how your comment data is processed.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ