ಏನ ಅನ್ನ…ನಿನ್ನ ಗಂಡಾ ಭಾಳ ಪಿಕ್ಯೂಲಿಯರ್ ಇದ್ದಾನ…………

ಇದ ಒಂದ ನಾಲ್ಕ ದಿವಸದ ಹಿಂದಿನ ಮಾತ ಇರಬೇಕ ನಾ ಸಂಜಿಗೆ ಆಫೀಸನಿಂದ ಮನಿಗೆ ಬರೋದರಾಗ ಮನ್ಯಾಗ ನನ್ನ ಹೆಂಡ್ತಿದ ಒಂದ ನಾಲ್ಕ ಖಾಸ್ ಗೇಳ್ತ್ಯಾರ ಬಂದಿದ್ದರ. ಇವತ್ತೇನ ನಮ್ಮ ಮನ್ಯಾಗ ಏನರ ಇವರದ ಕಿಟ್ಟಿ ಪಾರ್ಟಿ ಇಟ್ಗೊಂಡಾರೇನ ಅಂತ ನಾ ವಿಚಾರ ಮಾಡ್ಲಿಕತ್ತೆ. ಅಲ್ಲಾ, ಹಂಗ ಈ ಸುಡಗಾಡ ಕಿಟ್ಟಿ ಪಾರ್ಟಿ ಎಲ್ಲಾ ನನ್ನ ಹೆಂಡ್ತಿಗೆ ಬಗಿ ಹರೆಯಂಗಿಲ್ಲಾ, ಮ್ಯಾಲೆ ಅಕಿಗೆ ತಿಳಿಯಂಗಿಲ್ಲಾ. ಹಿಂಗಾಗಿ ಇಕಿ ಅದ ನಮ್ಮ ಸಂಸ್ಕೃತಿ ಅಲ್ಲಾ ಅಂತ ಅದರ ಉಸಾಬರಿನ ಹೋಗಂಗಿಲ್ಲಾ ಹಂತಾದ ಇವತ್ತ್ಯಾಕ ಇವರೇಲ್ಲಾ ನಮ್ಮನಿಗೆ ಬಂದಾರ ಅಂತ ತಿಳಿಲಿಲ್ಲಾ. ನಾ ಸುಮ್ಮನ ನನ್ನಷ್ಟಕ್ಕ ನಾ ಶೂಜ್ ಕಳದ ತಲಿ ಕೆಳಗ ಮಾರಿ ಮಾಡ್ಕೊಂಡ ನನ್ನ ರೂಮಿಗೆ ಹೋಗಿ ಬಿಟ್ಟೆ. ಅಲ್ಲಾ ಹಂಗ ಪಡಸಲ್ಯಾಗ ನಾಲ್ಕೈದ ಅರೇದ ಹೆಣ್ಣಮಕ್ಕಳ ಇದ್ದರ ನಾ ಅತ್ತಲಾಗ ನೋಡ್ಲಿಕ್ಕೂ ಹೋಗಂಗಿಲ್ಲಾ, ನನ್ನ ಸ್ವಭಾವನ ಹಂಗ ನಿಮಗ ಗೊತ್ತ ಅದ ಅಲಾ. ರೂಮಿಗೆ ಹೋಗಿ ಮಗಳನ ಕರದ ಅವರೇಲ್ಲಾ ಯಾಕ ಬಂದಾರ ಅಂತ ಕೇಳಿದರ
’ಗೊತ್ತಿಲ್ಲ ಪಪ್ಪಾ, ಆದರ ಅವರ ಕೇಕ್ ತೊಗೊಂಡ ಬಂದಾರ ನಿಮ್ಮ ಸಂಬಂಧ ಕಾಯಲಿಕತ್ತಿದ್ದರು’ ಅಂದ್ಲು.
ಕೇಕ್ ತೊಗೊಂಡ ಬಂದ ನನ್ನ ಸಂಬಂಧ ಕಾಯಲಿಕತ್ತಾರ ಅಂದದ್ದ ಆಶ್ಚರ್ಯ ಆತ. ಹಂಗ ನಂದು, ನನ್ನ ಹೆಂಡ್ತಿದೂ ಬರ್ಥಡೇ ಮುಗದ ಮೂರ ತಿಂಗಳಾತ, ಅನಿವರ್ಸರಿ ಮುಗದ ಎರೆಡ ತಿಂಗಳಾತ, ಮಗನ ಬರ್ಥಡೇ ಮುಗದ ಒಂದ ತಿಂಗಳ ಆತ .ಇನ್ನ ಮಗಳ ಬರ್ಥಡೇ ಮುಂದಿನವಾರ ಅದ. ಹಂತಾದರಾಗ ಇವರ ಇವತ್ತ ಯಾರದ ಕೇಕ್ ಕಟ್ ಮಾಡ್ಲಿಕತ್ತಾರ ಅಂತ ವಿಚಾರ ಮಾಡ್ಲಿಕತ್ತೆ. ಆಮ್ಯಾಲೆ ಅನಸ್ತ ಬಹುಶಃ ಪ್ರೇರಣಾನ ಗೆಳತಿದ ಯಾವಾಕಿದರ ಬರ್ಥಡೇ ಇರಬೇಕ, ಇನ್ನ ನಮ್ಮ ಮನಿ ಫೊಟೊಜೆನಿಕ್ ಅದ, ಟೆರೆಸ್ ಗಾರ್ಡನ್ ಅದ, ಮ್ಯಾಲೆ ನಾ ಪುಕ್ಕಟ್ಟ ಫೋಟೊ ಹೊಡಿತೇನಿ ಅಂತ ಬಂದಿರಬೇಕ ತೊಗೊ ಅಂತ ಸುಮ್ಮನಾದೆ. ಮುಂದ ಒಂದ ಹತ್ತ ನಿಮಿಷಕ್ಕ ನನ್ನ ಹೆಂಡ್ತಿ ಬಂದ
’ರ್ರಿ..ಒಂದ ಸ್ವಲ್ಪ ಲಗೂನ ಬರ್ರಿ….ಕೇಕ್ ಕಟ್ ಮಾಡಬೇಕ’ ಅಂದ್ಲು
’ಏ..ನಾ ಯಾಕ ನೀವ ಫ್ರೇಂಡ್ಸ ಇಷ್ಟ ಮಾಡ್ಕೋರಿ’ ಅಂತ ನಾ ಅಂದರ
’ಏ..ಕೇಕ್ ನೀವ ಕಟ್ ಮಾಡ್ಬೇಕ …ನಿಮ್ಮ ಸಂಬಂಧ ಆರತಿ ಕೇಕ್ ತೊಗೊಂಡ ಬಂದಾಳ’ ಅಂದ್ಲು.
ನನ್ನ ಸಂಬಂಧ ಅಂದ ಕೂಡ್ಲೆ ನನಗ ಇನ್ನೂ ಆಶ್ಚರ್ಯ ಆತ. ತಲಿ ಕೆಟ್ಟ ಎದಕ್ಕ ಅಂತ ಕೇಳಿದರ ಎಲ್ಲಾರೂ ಸರಪ್ರೈಸ್ ಅಂತ ಕೇಕ್ ತಂದ ನನ್ನ ಮುಂದ ಇಟ್ಟರ.
ಆ ಕೇಕ್ ಮ್ಯಾಲಿಂದ ರಟ್ಟಿನ ಡಬ್ಬಿ ಮುಚ್ಚಳಾ ತಗದ ನೋಡಿದರ ಕೇಕ್ ಮ್ಯಾಲೆ ನಂದೊಂದ ಫೋಟೊ ಹಾಕಿಸಿ
’ಹ್ಯಾಪಿ ಪಿಕ್ಯೂಲಿಯರ್ ಪಿಪಲ್ ಡೇ’ ’ happy peculiar people day’ ಅಂತ ಬರಸಿದ್ದರ. ನನಗ ಇದೇಲ್ಲಿ ಪಿಕ್ಯೂಲಿಯರ್ ಪಿಪಲ್ ಡೇ ತಂದರಲೇ ಇವರ ಅಂತ ಅನಸಲಿಕತ್ತ. ಅದ ಹೋಗಲಿ ಪಿಕ್ಯೂಲಿಯರ್ ಪಿಪಲ್ ಡೇ ಅಂತ ನನ್ನ ಕಡೆ ಯಾಕ ಕೇಕ್ ಮಾಡಸಲಿಕತ್ತಾರ ಅಂತ ತಿಳಿಲಿಲ್ಲಾ.
ನಾ ಇದೇಲ್ಲಾ ಏನ ಅಂತ ಕೇಳಲಿಕ್ಕೂ ಅವಕಾಶ ಕೊಡ್ಲಿಲ್ಲಾ, ಕೇಕ್ ಕಟ್ ಮಾಡ್ರಿ ಮಾಮಾ ಅಂತ ಜೋರ್ ಮಾಡ್ಲಿಕತ್ತರ. ಅವರ ಅಷ್ಟ ಫೋರ್ಸ್ ಮಾಡೋದ ನೋಡಿ ನಮ್ಮವ್ವಾ ಸುಮ್ಮನ ಕೂಡಬೇಕ ಬ್ಯಾಡ
‘ಪಾಪ, ಅವ ಅಷ್ಟ ಪ್ರೀತಿಲೇ ಕೇಕ ತೊಗೊಂಡ ಬಂದಾವ ಸುಮ್ಮನ ಕೇಕ್ ಕಟ್ ಮಾಡ’ ಅಂತ ನಂಗ ಜೋರ್ ಮಾಡಿದ್ಲು.
ಪುಣ್ಯಾಕ್ಕ ಅಕಿ ’ಪ್ರೇರಣಾ…ನಿನ್ನ ಗಂಡಗ ಮೊದ್ಲ ಆರತಿ ಮಾಡಿ ಆಮ್ಯಾಲೆ ಕೇಕ್ ಕಟ ಮಾಡಸವಾ’ ಅನ್ನಲಿಲ್ಲಾ. ಅಲ್ಲಾ ನಮ್ಮವ್ವಾ ಹಂತಾ ಪಿಕ್ಯೂಲಿಯರ್ ಹೆಣ್ಣಮಗಳ ಬಿಡ್ರಿ. ಕಡಿಕೆ ಇನ್ನ ಸುಳ್ಳ ಸೀನ್ ಕ್ರಿಯೇಟ್ ಮಾಡೋದ ಬ್ಯಾಡಾ ಅಂತ ಕೇಕ್ ಕಟ್ ಮಾಡಿದೆ. ಆಮ್ಯಾಲೆ ಇದ ಏನ ಹುಚ್ಚುಚಾಕಾರ ಸೆಲೆಬ್ರೇಶನ್ ಅಂತ ಕೇಳಿದರ
ನಮ್ಮಕಿ ಫ್ರೇಂಡ್ ಆರತಿ ಏನ ಇದ್ದಾಳಲಾ ಅಕಿ ಅಮೇರಿಕಾ ರಿಟರ್ನ್, ಅಲ್ಲೇ ಅಮೇರಿಕಾ ಒಳಗ ಪಿಕ್ಯೂಲಿಯರ್ ಪಿಪಲ್ ಡೇ ಅಂತ ಮಾಡ್ತಾರ ಅಂತ. ಅಂದರ ’ವಿಚಿತ್ರ, ವಿಲಕ್ಷಣ, ವಿಶಿಷ್ಟ ವ್ಯಕ್ತಿಗಳ ದಿವಸ’ ಅಂತ.
ಇನ್ನ ನನ್ನ ಹೆಂಡತಿ ಮತ್ತ ಅವರ ಫ್ರೇಂಡ್ಸ್ ದೃಷ್ಟಿ ಒಳಗ ನಾ ಪಿಕ್ಯೂಲಿಯರ್ ಮನಷ್ಯಾ ಅಂತ. ಹಿಂಗಾಗಿ ಇವರೇಲ್ಲಾ ಸೇರಿ ನನ್ನ ಹಿಡದ ಪಿಕ್ಯೂಲಿಯರ್ ಪಿಪಲ್ ಡೇ ಸೆಲೆಬ್ರೇಟ್ ಮಾಡಿದರ ಅನ್ನರಿ.
ಅಲ್ಲಾ, ಹಂಗ ನಮ್ಮಕಿ ಹಗಲಗಲಾ
’ನನ್ನ ಫ್ರೇಂಡ್ಸ ಎಲ್ಲಾ ನನಗ ’ ನಿನ್ನ ಗಂಡ ವಿಚಿತ್ರ ಗಿರಾಕಿ ಇದ್ದಾನ, ಏನೇನರ ಪೇಪರನಾಗ, ಫೇಸಬುಕ್ಕಿನಾಗ ಬರಿತಾನ. ಮಂದಿ ಏನ ಅಂತಾರ ಏನಿಲ್ಲಾ ಅಂತ ತಲಿಕೆಡಸಿಗೊಳ್ಳಂಗಿಲ್ಲಾ ,ತಲ್ಯಾಗ ತಿಳದದ್ದ ಮಾಡ್ತಾನ…ಒಂದ ಟೈಪ್ ಪಿಕ್ಯೂಲಿಯರ್ ಇದ್ದಾನ ನೋಡ’ ಅಂತಾರ’ ಅಂತ ಹೇಳ್ತಿದ್ದಳ. ಆದರ ನಾ ಆವಾಗ ಅಷ್ಟ ತಲಿಕೆಡಸಿಕೊಂಡಿದ್ದಿಲ್ಲಾ. ಅನ್ನೋರಿಗೇನ್? ಏನ್ ಮಾಡಿದರು ಅನ್ನೋರ ಅಂತ ಸುಮ್ಮನಿದ್ದೆ ಆದರ ಒಂದ ದಿವಸ ಹಿಂಗ ನನ್ನ ಹಿಡದ ಪಿಕ್ಯೂಲಿಯರ್ ಪಿಪಲ್ ಡೇ ನ ಮಾಡಿ, ನನ್ನ ಕಡೆನ ಕೇಕ್ ಕಟ್ ಮಾಡಸ್ತಾರ ಅಂತ ನಾ ಅನ್ಕೊಂಡಿದ್ದಿಲ್ಲಾ.
ಕಡಿಕೆ ಆ ಎಲ್ಲಾ ನನ್ನ ಹೆಂಡ್ತಿ ಫ್ರೇಂಡ್ಸ ಸೇರಿ ಕೇಕ್ ನನ್ನ ಕೈಲೇ ಕಟ್ ಮಾಡಿಸಿಸಿ ಮುಂದ ನಮ್ಮವ್ವನ ಕೈಲೇ ಅವಲಕ್ಕಿ ಹಚ್ಚಿಸಿಗೊಂಡ ತಿಂದ ಮಜಾ ಮಾಡಿ ತಮ್ಮ-ತಮ್ಮ ಮನಿ ಹಿಡದರ.
ಆದರೂ ಜಗತ್ತಿನಾಗ ಹೆಂತಿಂತಾ ಪಿಕ್ಯೂಲಿಯರ್ ಮನಷ್ಯಾರ ಇದ್ದಾರ ಅವರದೇಲ್ಲಾ ಬಿಟ್ಟ ಇವರ ನನ್ನ ಕೈಲೇ ಕೇಕ್ ಕಟ ಮಾಡಿಸಿದರಲಾ, ಅದು ಕೇಕ್ ಮ್ಯಾಲೆ ನನ್ನ ಫೋಟೊ ಹಾಕಸಿಸಿ ಅಂತ ಒಂಥರಾ embarassing ಅನಸ್ತ.
ಹಂಗ ನಮ್ಮ ಅತ್ತಿ ಮನಿಕಡೆದವರು, ಪ್ರೇರಣಾನ ಫ್ರೇಂಡ್ಸ ಎಲ್ಲಾ ’ ನಿನ್ನ ಗಂಡ ಭಾರಿ ವಿಚಿತ್ರ ಇದ್ದಾನ ತೊಗೊ’ ಅಂತ ಅನ್ನಲಿಕತ್ತ ಏನಿಲ್ಲಾಂದರೂ ಒಂದ 23 ವರ್ಷ ಆತ ಅನ್ನರಿ. ಯಾವಾಗ ನಂದ ನಿಶ್ಚಯ ಆಗಿ ಅವರಿಗೆ ನನ್ನ ಸ್ವಭಾವ ಗೊತ್ತಾತ ಅವಾಗಿಂದ ಅವರೇಲ್ಲಾ ನನಗ ‘ very peculiar man’ ಅಂತ ಅನ್ಕೊಂಡಾರ. ಅವರ ನನಗ ವಿಚಿತ್ರ, ವಿಲಕ್ಷಣ ಅಂತ ಹೇಳಿ ಪಿಕ್ಯೂಲಿಯರ್ ಅಂತಾರ ನಾ ಅದನ್ನ ’ನಾ ವಿಶಿಷ್ಟ ವ್ಯಕ್ತಿ ಇದ್ದೇನಿ ಅದಕ್ಕ ಹಂಗ ಅಂತಾರ ಬಿಡ’ ಅಂತ ತಲಿಗೆಡಸಿಕೊಳ್ಳಿಕ್ಕೆ ಹೋಗಿಲ್ಲಾ.
ಮದ್ವಿ ಫಿಕ್ಸ್ ಆದ ಹೊಸ್ತಾಗಿ ನನ್ನ ಹೆಂಡ್ತಿಗೂ ಹೆಂತಾ ವಿಚಿತ್ರ ಇದ್ದಾನ ಇಂವಾ ಅಂತ ಅನಸ್ತಿತ್ತ. ಆದರ ಏನ್ಮಾಡೋದ ಎಂಗೇಜಮೆಂಟ್ ಆಗಿ ಬಿಟ್ಟಿತ್ತ. ಹಂಗ ಆವಾಗ ಇನ್ನೂ ಕನ್ಯಾಕ್ಕ ಅಷ್ಟ ಡಿಮಾಂಡ್ ಇದ್ದಿದ್ದಿಲ್ಲಾ ಮ್ಯಾಲೆ ಒಮ್ಮೆ ಎಂಗೇಜಮೆಂಟ್ ಆದ ಮ್ಯಾಲೆ ಹುಡುಗಿ ’ ಹುಡುಗ ನನಗ ಲೈಕ್ ಇಲ್ಲಾ, ಭಾರಿ ಪಿಕ್ಯೂಲಿಯರ್ ಇದ್ದಾನ’ ಅಂತ ಮದ್ವಿ ಮುರಕೊಳೊದ ಛಂದ ಕಾಣ್ತಿದ್ದಿಲ್ಲಾ ಅನ್ನರಿ.
ಹಿಂಗಾಗಿ ಒಟ್ಟ ಏನೋ ಪಾಲಿಗೆ ಬಂದಿದ್ದ ಪಂಚಾಮೃತ ಅಂತ ಮಾಡ್ಕೊಂಡ್ಳು ಮುಂದ ಸಂಸಾರ ಸಾಗಿದಂದ ಸಾಗಿದಂಗ ಅಕಿಗೆ ’ ವಿಚಿತ್ರ ಅನಿಸಿದ್ದ ಗಂಡ ವಿಶಿಷ್ಟ ಅನಸಲಿಕತ್ತಾ. ಆದರ ಒಂದ ಸಲಾ ನಮ್ಮ ಅತ್ತಿ ಮನೆ ಕಡೆದವರ, ಅಕಿ ಫ್ರೇಂಡ್ಸ ಪಿಕ್ಯೂಲಿಯರ್ ಮನಷ್ಯಾ ಅಂತ ಇಟ್ಟ ಹೆಸರ ಏನ ಹೋಗಲಿಲ್ಲಾ, ಅಮ್ಯಾಲೆ ನಾನೂ ಅದರ ಬಗ್ಗೆ ಭಾಳ ತಲಿಗೆಡಸ್ಗೊಂಡಿದ್ದಿಲ್ಲಾ. ಇವತ್ತ ಅದು ’ಪಿಕ್ಯೂಲಿಯರ್ ಮನಷ್ಯಾ’ ಅಂತ ನನ್ನ ಹಿಡದ ಕೇಕ್ ಕಟ್ ಮಾಡಸೋ ಲೇವಲಗೆ ಬಂತ ಅನ್ನರಿ.
ಅಲ್ಲಾ, ಹಂಗ ಮಂದಿ ನನಗ ಪಿಕ್ಯೂಲಿಯರ್ ಅನ್ನಲಿಕ್ಕೆ ಏನ ಕಾರಣ? ನಾ ನನಗ ತಿಳಿದದ್ದ ಮಾಡ್ತೇನಿ, ತಿಳದದ್ದ ಬರಿತೇನಿ, ತಿಳದಂಗ ಇರ್ತೇನಿ. ಮಂದಿ ಮುಲಾಜ ಹಿಡಿಯಂಗಿಲ್ಲಾ. I live out of the box and I enjoy my bloody life. ನೀ ಹಿಂಗ ಇರಬೇಕ, ಅದನ್ನ ಮಾಡ್ಬೇಕ, ಹಿಂತಾದ ಬರಿಬೇಕ ಅನ್ನೋ ಜಗತ್ತಿನ ನಾರ್ಮ್ಸ ಏನ ಅವ ಅಲಾ ಅವನ್ನ ನಾ ಭಾಳ ತಲಿಕೇಡಸಿಗೊಳ್ಳಿಕ್ಕೆ ಹೊಗಂಗಿಲ್ಲಾ. ನನ್ನ ಪ್ರಕಾರ being peculiar is negative tag ಅಲ್ಲಾ it is a badge of honor, because being different takes a courageous, adventurous, and inquisitive nature.
ಇರಲಿ ನಾ ಇಷ್ಟ ಪರ್ಟಿಕ್ಯೂಲರ್ ಆಗಿ ಪಿಕ್ಯೂಲಿಯರ್ ಅನ್ನೊದರ ಬಗ್ಗೆ ಈಗ ಹೇಳಲಿಕ್ಕೆ ಕಾರಣ ಅಂದರ ನಾಲ್ಕ ದಿವಸದ ಹಿಂದ, ಜನೇವರಿ ಹತ್ತನೇ ತಾರೀಕಿಗೆ ಮತ್ತ ಪಿಕ್ಯೂಲಿಯರ್ ಪಿಪಲ್ ಡೇ ಇತ್ತ. ಇನ್ನ ಮೊದ್ಲ ಹೇಳಿದರ ಎಲ್ಲೇ ನೀವು ನನಗ ವಿಶ್ ಮಾಡಿ-ಗಿಡಿರಿ ಅಂತ event ಮುಗದ ಮ್ಯಾಲೆ ಹೇಳಿದೆ ಇಷ್ಟ.

One thought on “ಏನ ಅನ್ನ…ನಿನ್ನ ಗಂಡಾ ಭಾಳ ಪಿಕ್ಯೂಲಿಯರ್ ಇದ್ದಾನ…………

  1. ತುಂಬಾನೇ ಚೆನ್ನಾಗಿದೆ ಸರ್ ನಿಮ್ಮ ಆರ್ಟಿಕಲ್. ಮೊದಲು ನಾನು ಇಸ್ಟ್ ಪಟ್ಟದ್ದು ನಿಮ್ಮ ಸರಳ ಉತ್ತರ ಕನ್ನಡ ಭಾಷೆ. ನೀವು ಸದಾ ಬರೀತಾ ಹೋಗಿ. ನಾವೆಲ್ಲ ನಿಮ್ಮನ್ನು ಎನ್ಕರೇಜ್ ಮಾಡ್ತಾ ಇರುತ್ತೇವೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ