ರ್ರೀ…ಫೋನ ಮಾಡಿದವರ ಯಾರ್ರಿ?

ಇದ ಒಂದ ವಾರದ ಹಿಂದಿನ ಮಾತ… ರಾತ್ರಿ ಹನ್ನೊಂದ ಹನ್ನೊಂದುವರಿ ಆಗಿತ್ತ, ಹಿಂಗ ನಿದ್ದಿ ಹತ್ತಲಿಕತ್ತಿತ್ತ ಸಡನ್ ಆಗಿ ಮೊಬೈಲ್ ರಿಂಗ ಆತ. ನನಗ ಮೊದ್ಲs ಮೊಬೈಲ ರಿಂಗ ಆಗಿದ್ದ ಕನಸಿನಾಗೊ ಇಲ್ಲಾ ಖರೇನೊ ಅಂಬೋದ ಕ್ಲೀಯರ್ ಆಗಲಿಲ್ಲ, ಅದರಾಗ ಅದ ನನ್ನ ಮೊಬೈಲದ ರಿಂಗ ಬ್ಯಾರೆ ಆಗಿದ್ದಿಲ್ಲಾ….ಇತ್ತಲಾಗ ಮೊಬೈಲ ಹಂಗ ಕಂಟಿನ್ಯೂ ಹೋಯ್ಕೊಳಿಕತ್ತ…ಆಮ್ಯಾಲೆ ಗೊತ್ತಾತ ಅದ ನನ್ನ ಹೆಂಡತಿ ಮೊಬೈಲ ಅಂತ.

ಅಲ್ಲಾ ’ನಿನ್ನ ಹೆಂಡ್ತಿ ರಿಂಗ ಟೋನ್ ನಿನಗ ಗೊತ್ತಾಗಂಗಿಲ್ಲೇನ’ ಅಂತ ಕೇಳ ಬ್ಯಾಡ್ರಿ ಯಾಕಂದರ ಈ ಹೆಂಡಂದರ ದಿವಸಾ ತಮ್ಮ ಟೋನ್ ಗತೆ ರಿಂಗ್ ಟೋನ್ ಚೆಂಜ್ ಮಾಡ್ತಿರ್ತಾರ….ಹಂಗ ನಂಗ ಬ್ಯಾರೆಯವರ ಹೆಂಡ್ತಿ ರಿಂಗ್ ಟೋನ್ ಆದಾಗ ಒಮ್ಮೊಮ್ಮೆ ನನ್ನ ಹೆಂಡ್ತಿ ರಿಂಗ್ ಟೋನ್ ಗತೆ ಕೇಳಸ್ತದ ಖರೆ ಆದರ ನನ್ನ ಹೆಂಡ್ತಿ ರಿಂಗ್ ಟೋನ್ ಲಗೂನ ಗೊತ್ತಾಗಂಗಿಲ್ಲಾ. ಏನ್ಮಾಡ್ತೀರಿ?

ಇತ್ತಲಾಗ ಫೋನ್ ರಿಂಗ್ ಕಂಟಿನ್ಯೂ ಇತ್ತ…..ನಾ ಅಕಿ ಫೋನ್ ಅಕಿನ ಎದ್ದ ಎತ್ತಲಿ, ಎಲ್ಲೇ ನಾ ಅಕಿ ಫೋನ ಎತ್ತಿ ಅಕಿ ಕಡೆ ಬೈಸಿಗೊಳ್ಳಿ ಬಿಡ ಅಂತ ಬಿಟ್ರ ಅಕಿ ಗಡದ್ದ ಹೊಚಗೊಂಡ ಮಲ್ಕೊಂಡಿದ್ಲು…ಮೊಬೈಲನಾಗ ಬರೇ ನಂಬರ ಇತ್ತ…true caller ಒಳಗ ಬರೇ ಕರ್ನಾಟಕ ಅಂತ ತೊರಸಲಿಕತ್ತಿತ್ತ. ಹಂಗ ನನ್ನ ಹೆಂಡತಿ ನಂಬರ ನಮ್ಮ ಪೈಕಿ ಭಾಳ ಮಂದಿಗೆ ಗೊತ್ತಿಲ್ಲಾ, ಅದ ಏನ ಇದ್ದರು ಅಕಿ ತವರಮನಿಯವರ ಜೊತಿ ಮಾತಾಡಲಿಕ್ಕೆ ಇರೋ ಎಕ್ಸ್ಲೂಸಿವ್ ನಂಬರ. ಹಂತಾದರಾಗ ಅವನೌನ ಈ ನಡರಾತ್ರಿ ಒಳಗ ಯಾರ ಪಾ ಅಕಿಗೆ ಫೋನ ಮಾಡಿದೋರ ಅಂತ ನಾ ಒಂದ ಸಲಾ ಅಕಿ ಪೈಕಿ ಎಲ್ಲಾ ವಯಸ್ಸಾದವರನ ನೆನಸಿಗೊಂಡ ಮನಸ್ಸಿನಾಗ RIP ಅನ್ಕೋತ ಫೋನ ಎತ್ತಿದೆ….

“ಹೆಲೋ” ಅಂದೆ…ಅತ್ತಲಾಗಿಂದ
“ಹೆಲೋ…ಯಾರ ಮಾತಾಡೊದರಿ’ಅಂತ ಹೆಣ್ಣ ಧ್ವನಿ
’ಹೆಲೋ ನೀವ ಯಾರ ಮಾತಾಡೊದರಿ…ಫೋನ ಮಾಡಿದವರ ನೀವು’ ಅಂತ ನಾ ನಿದ್ದಿ ಗಣ್ಣಾಗ ಜೋರ ಮಾಡಿ ಅಂದೆ.

’ನನಗ ಸಂಜಿ ಮುಂದ ಈ ನಂಬರಲೇ ಮಿಸ್ ಕಾಲ್ ಬಂದಿದ್ವು, ಅದಕ್ಕ ನಾ ಫೋನ ಮಾಡೇನಿ’ ಅಂತ ಆ ಕಡೆ ಧ್ವನಿ.. ಇತ್ತಲಾಗ ಹಿಂತಾ ಸೆಕ್ಯಾಗ AC ಹಚಗೊಂಡ ತುಂಬ ಹೊತ್ಕೊಂಡ ಗಡದ್ದ ಮಲ್ಕೊಂಡ ನನ್ನ ಹೆಂಡತಿಗೆ ಫೋನ ಒಳಗಿನ ಹೆಣ್ಣ ಧ್ವನಿ ಕೇಳಿ ಕಿವಿ ಶಟದ ನಿಂತ್ವು. ಅದರಾಗ ರಾತ್ರಿ ಬ್ಯಾರೆ, ಸ್ಪೀಕರ ಫೋನ ಇಲ್ಲಾಂದರು ಆ ಕಡೆದ ಹೆಣ್ಣ ಧ್ವನಿ ನಮ್ಮ ಬೆಡರೂಮ್ ತುಂಬ ಕೇಳಲಿಕತ್ತಿತ್ತ. ನಾ ನನ್ನ ಹೆಂಡತಿಗೆ ತಿವದ ಎಬ್ಬಿಸಿ
’ನೀ ಯಾರಿಗರ ಫೋನ ಮಾಡಿದ್ದೇನ? ಯಾರೋ ಫೋನ ಮಾಡ್ಯಾರ ನೋಡ’ ಅಂತ ಕೇಳಿದೆ. ಅಕಿ ನಿದ್ದಿಗಣ್ಣಾಗ

’ನಾ ಯಾರಿಗೂ ಫೋನ ಮಾಡಿಲ್ಲ…ಇದ ನಿಂಬದ ಕೆಲಸ ಇರಬೇಕ’ ಅಂತ ನಂಗ ಜೋರ ಮಾಡಿದ್ಲು…ಅಲ್ಲಾ ಮೊಬೈಲ ಅಕಿದ….ನಾ ಹೆಂಗ ಫೋನ ಮಾಡ್ತೇನಿ ಅಂತೇನಿ…ಒಟ್ಟ ಹೆಣ್ಣಮಕ್ಕಳಿಗೆ ಮಿಸ್ ಕಾಲ ಹೋಗೇದ ತಿರಗಿ ಅವರದ ಫೋನ ಬಂದದ ಅಂದರ ನಾನ ಮಾಡಿರ್ತೇನೇನ್? ಅಲ್ಲಾ ಹಂಗ ಒಂದ ಒಪ್ಪತ್ತ ನಾನ ಕಾಲ್ ಮಾಡೇನಿ ಅಂತ ಇಟ್ಕೊಳ್ರಿ, ಆದರ ಇಕಿ ಫೋನಲೇ ಮಾಡೋ ಅಷ್ಟ ಹುಚ್ಚೇನ ನಾ ….ಕಡಿಕೆ ತಲಿಕೆಟ್ಟ ಫೋನ ಹಿಡಕೊಂಡ
’ನಾವ ಯಾರು ಫೋನ ಮಾಡಿಲ್ಲರಿ’ ಅಂತ ಅಂದೆ…

’ರ್ರಿ..ನೀವ ಫೋನ ಮಾಡಿದ್ದಕ್ಕ ನಾ ಫೋನ ಮಾಡಿದ್ದ…ಮ್ಯಾಲೆ ಎರಡ ಮೆಸಜ್ ಬ್ಯಾರೆ ಬಂದಾವ… ಯಾರ ನೀವು’ ಅಂತ ನಂಗ ಜೋರ ಮಾಡಿದ್ಲು. ನಾ ಎರಡ ಮೆಸೆಜ್ ಬ್ಯಾರೆ ಹೋಗ್ಯಾವ ಅಂದ ಕೂಡ್ಲೆ ಗಾಬರಿ ಆಗಿ
’ಏನಂತ ಮೆಸೆಜ್ ಬಂದಾವ’ ಅಂತ ಕೇಳಿದೆ
’hi…how are you dear’ ‘ hi, what are you doing dear’ ಅಂತೇಲ್ಲಾ ಮೆಸಜ್ ಬಂದಾವ ನಿಮ್ಮ ನಂಬರಿಂದ’ ಅಂದ್ಲು.

ನನಗ ಇಂಗ್ಲೀಷ್ ಒಳಗ ಮೆಸಜ್ ಹೋಗ್ಯಾವ ಅಂದ ಮ್ಯಾಲೆ ಇದ ನನ್ನ ಹೆಂಡತಿ ಕೆಲಸಲ್ಲಾ ಅಂತ ಖಾತರಿ ಆತ. ಅಲ್ಲಾ, ಯಾಕಂದರ ಪಾಪ ನನ್ನ ಹೆಂಡತಿಗೆ ಮೊಬೈಲ ಒಳಗ ಕನ್ನಡ ಇಂಗ್ಲೀಷ್ ನಾಗ ( ಕಂಗ್ಲೀಷ್) ಸಹಿತ ಬರಿಲಿಕ್ಕೆ ಬರಂಗಿಲ್ಲಾ….ಹಂಗರ ಯಾರ ಮೆಸೆಜ್ ಕಳಸಿರಬೇಕು, ನಾನರ ನನ್ನ ಹೆಂಡತಿ ಮೊಬೈಲ್ ಮುಟ್ಟಂಗಿಲ್ಲಾ ಅಂತ ವಿಚಾರ ಮಾಡ್ಲಿಕತ್ತೆ. ಇತ್ತಲಾಗ ನನ್ನ ಹೆಂಡತಿ ನಿದ್ದಿ ನಾ ಬ್ಯಾರೆ ಹೆಣ್ಣ ಮಕ್ಕಳ ಜೊತಿ ನಡರಾತ್ರಿ ಒಳಗ ಮಾತಾಡೊದ ಕೇಳಿ ಹಾರಿ ಹೋತ..ಅಕಿ ಕಣ್ಣ ಪಿಕಿ ಪಿಕಿ ತಗದ ನಮ್ಮ ಮಾತ ಕೇಳಲಿಕತ್ತಿದ್ಲು. ಕಡಿಕೆ ಅಕಿ ತಲಿಕೆಟ್ಟ ಆ ಫೋನ ಮಾಡಿದೊಕಿಗೆ ’ ಇಷ್ಟ ನಡ ರಾತ್ರಿ ಒಳಗ ನನ್ನ ಗಂಡಗ ಯಾಕ ಫೋನ ಮಾಡಿ, ನಿಂಗ ನನ್ನ ಗಂಡಗ ಏನ ಸಂಬಂಧ’ ಅಂತ ಝಾಡಸಲಿಕ್ಕೆ ನನ್ನ ಕೈಯಾಗಿಂದ ಫೋನ ಕಸಗೊಂಡ್ಲು. ಅಷ್ಟರಾಗ ಅತ್ತಲಾಗ ಏನ ಆತಂದರ ಆ ಫೋನ ಮಾಡಿದೋಕಿ ಗಂಡ ತನ್ನ ಹೆಂಡತಿ ಹಿಂಗ ರಾತ್ರಿ ಬ್ಯಾರೆ ಗಂಡಸರ ಜೊತಿ ಮಾತೊಡದನ್ನ ತಡ್ಕೊಳಿಕ್ಕೆ ಆಗಲಾರದ ಅವನು ಎದ್ದ ಫೋನ ತನ್ನ ಹೆಂಡತಿ ಕಡೆಯಿಂದ ಕಸಗೊಂಡಿದ್ದಾ.

ನನ್ನ ಹೆಂಡತಿ ಅಂವಾ ಇನ್ನು ಹೆಲೊ ಅನ್ನೊಕ್ಕಿಂತ ಮೊದ್ಲ
’ಏ, ಯಾರ ನೀ ಇಷ್ಟ ರಾತ್ರಿ ಫೋನ ಮಾಡಿ…ನನ್ನ ಗಂಡನ ಜೊತಿ ಮಾತಾಡಲಿಕತ್ತಿ, ಅದು ನನ್ನ ನಂಬರಗೆ..ಎಷ್ಟ ಧೈರ್ಯಾ ನಿಂದ’ ಅಂತ ಒಂದ ಉಸಿರನಾಗ ಜೋರ ಮಾಡ್ಲಿಕತ್ಲು…ಅತ್ತಲಾಗಿಂದ ಒಮ್ಮಿಂದೊಮ್ಮೆಲೆ ಗಂಡಸ ಧ್ವನಿ ಸೀದಾ..’ನಿಮ್ಮ ಗಂಡ ನನ್ನ ಹೆಂಡತಿಗೆ ಯಾಕ ಮಿಸ್ ಕಾಲ್ ಕೊಡಬೇಕು, ಮ್ಯಾಲೆ ಮೆಸೆಜ್ ಬ್ಯಾರೆ ಕಳಿಸ್ಯಾನ.. ನಿಮ್ಮ ಗಂಡನ್ನ ಕೇಳ್ರಿ ಮೊದ್ಲ” ಅಂತ ಜೋರ ಮಾಡಲಿಕತ್ತಾ.’ಏ ಇದ ನನ್ನ ಗಂಡನ ಮೊಬೈಲ ಅಲ್ಲಾ, ನನ್ನ ಮೊಬೈಲ, ನಾ ಯಾಕ ಎಲ್ಲಾ ಬಿಟ್ಟ ನಿಮ್ಮ ಹೆಂಡತಿಗೆ ಮಿಸ್ ಕಾಲ್ ಕೊಡ್ಲಿ ’ ಅಂತ ಇಕಿ ವರಟ ಹರಿಲಿಕತ್ಲು..ತೊಗೊ ಅವರಿಬ್ಬರದು ಹಿಂಗ ಸ್ಟಾರ್ಟ್ ಆತ…

ಇತ್ತಲಾಗ ನಾ ನನ್ನ ಹೆಂಡತಿ ಅವನ ಜೊತಿ ಏನ ಮಾತಾಡ್ತಾಳಂತ, ಅತ್ತಲಾಗ ಅವನ ಹೆಂಡ್ತಿ ಅಂವಾ ನನ್ನ ಹೆಂಡತಿ ಜೊತಿ ಏನ ಮಾತಾಡ್ತಾನ ಅಂತ ಕಿವಿ ಹಿಗ್ಗಿಸಿಕೊಂಡ ಕೂತ್ವಿ….ಕಡಿಕೆ ಆ ಮನಷ್ಯಾ ನನ್ನ ಹೆಂಡತಿ ಮಾತಾಡೋ ಧಾತಿ ನೋಡಿ ’ಇಕಿ ಜೊತಿ ಏನ ವರಟ ಹಚ್ಚೋದ’ ಅಂತ ಸೀದಾ ನಿಮ್ಮ ಮನೆಯವರಿಗೆ ಫೋನ ಕೊಡ್ರಿ…ನಿಮ್ಮ ಜೊತಿ ಏನ ಮಾತಾಡೋದ ಅಂತ ಅಂದ ಬಿಟ್ಟಾ..ನಂಗು ಅದ ಬೇಕಾಗಿತ್ತ ನನ್ನ ಹೆಂಡ್ತಿ ಕಡೆಯಿಂದ ಫೋನ ಇಸ್ಗೊಂಡ ದೊಡ್ಡಿಸ್ತನಾ ಮಾಡಿ
’ನನ್ನ ಹೆಂಡ್ತಿ ಜೊತಿ ಏನ ಮಾತಾಡ್ತಿ..ನನ್ನ ಜೊತಿ ಮಾತಾಡ’ ಅಂದೆ, ಅವಂದ ಪಿತ್ತ ನೆತ್ತಿಗೇರತ
’ಏ, ನೀ ನನ್ನ ಹೆಂಡ್ತಿಗೆ ಮಿಸ್ ಕಾಲ್ ಕೊಟ್ಟ ಮತ್ತ ನಂಗ ಜೋರ್ ಮಾಡ್ತಿ ಅಲಾ’ ಅಂತ ಅಂವಾ ನನಗ ಅಂದಾ.

’ಏ, ಯಾರ ನೀ…ನನಗೇನ ತಲಿ ಕೆಟ್ಟದೇನ ಎಲ್ಲಾ ಬಿಟ್ಟ ನಿನ್ನ ಹೆಂಡತಿಗೆ ಫೋನ ಮಾಡಲಿಕ್ಕೆ, ಅದು ನನ್ನ ಹೆಂಡತಿ ನಂಬರಲೇ..ನಂಗೇನ ಅಷ್ಟ ಧಡ್ಡ ಸೂಳೆಮಗಾ ಅಂತ ತಿಳ್ಕೊಂಡಿ ಏನ್” ಅಂತ ನಾ ಸೀದಾ ನಮ್ಮ ಸೆಟ್ಲಮೆಂಟ್ ಭಾಷಾದಾಗ ಅಂದೆ. ಅದಕ್ಕ ಅಂವಾ
’ಏ, ಹಿಂಗ ಹೆಣ್ಣ ಮಕ್ಕಳ ಫೋನಿಗೆ ಮಿಸ್ ಕಾಲ್ ಕೊಡೊದು, ಮೆಸೆಜ್ ಕಳಸೊದು ಮಾಡ್ತಿ..ತಿಳಿಯಂಗಿಲ್ಲ, ಮ್ಯಾಲೆ ಹೊಲಸ ಹೊಲಸ ಮಾತಾಡ್ತಿ..ನಿನ್ನೌನ ಪೋಲಿಸ್ ಕಂಪ್ಲೆಂಟ್ ಕೊಡ್ತೇನಿ ನೋಡ ನೀ ಯಾರಂತ ಹೇಳಲಿಲ್ಲಾ ಅಂದರ’ ಅಂತ ಅಂವಾ ತನ್ನ ಮಾತೃ ಭಾಷಾದಾಗ ಸ್ಟಾರ್ಟ ಮಾಡಿದಾ.

ಏ ಅವನೌನ ಇವನು ನಮ್ಮ ಪೈಕಿನ ತೊಗೊ ಅಂತ ಇಬ್ಬರು ಹುಬ್ಬಳ್ಳಿ ಭಾಷಾದಾಗ ಜೋರ ಶುರು ಹಚಗೊಂಡವಿ..ಇಬ್ಬರು ಯಾರ ನೀ ಫೋನ ಮಾಡಿದಂವಾ ಅಂತ ಕೇಳೋದ ಆತ ಖರೆ ಇಬ್ಬರು ನಾವ ಯಾರ ಅಂತ ಹೇಳಲಿಲ್ಲಾ….ನೀವು ಯಾರು, ನೀ ಯಾರು ಇಂದ ಹಿಡದ ಕಡಿಕೆ ನೀ ಯಾರಲೇ ನಿನ್ನೌನ ಬಂತ ಖರೆ ಆದರ ನಾವ ಯಾರಂತ ಇಬ್ಬರು ಹೇಳಲಿಲ್ಲಾ. ಅಷ್ಟರಾಗ ನನ್ನ ಹೆಂಡತಿ ಅಂವಾ ಪೋಲಿಸ್ ಕಂಪ್ಲೇಂಟ್ ಕೊಡ್ತೇನಿ ಅಂದದ್ದ ನೆನಪಾಗಿ ಏಗ್ದಮ್ ನಿಚ್ಚಳ ಆದ್ಲು…..ಅಕಿಗೆ ಒಮ್ಮಿಂದೊಮ್ಮಿಲೆ ಏನ ನೆನಪಾತೊ ಏನೋ ಧಡಕ್ಕನ ….
’ರ್ರಿ…ಅವರ ಮಗಾ ಬೆನಕಾ ಸ್ಕೂಲಿಗೆ ಹೋಗ್ತಾನೇನ್ ಕೇಳ್ರಿ’ಅಂದ್ಲು…ನಾ ಆ ಮನಷ್ಯಾಗ ಕೇಳಿದೆ…ಅಂವಾ ಹೌದ ಅಂದಾ…ನನ್ನ ಹೆಂಡತಿ ಹಣಿ ಹಣಿ ಬಡ್ಕೊಂಡ್ಲು….

’ಸಂಜಿ ಮುಂದ ಪ್ರಥಮ ತಮ್ಮ ದೋಸ್ತಗ ಫೋನ ಮಾಡ್ತೇನಿ ಅಂತ ನನ್ನ ಫೋನ ಇಸ್ಗೊಂಡಿದ್ದಾ. ಇದ ಅವರದ ಫೋನ ಇರಬೇಕ ತೊಗೊರಿ’ ಅಂತ ಅಂದ್ಲು.
ನಾ ಆಮ್ಯಾಲೆ ಅವಂಗ ಸಮಾಧಾನದ್ಲೆ ಎಲ್ಲಾ ಸರಿಯಾಗಿ ತಿಳಿಸಿ ’ಇದ ನಿಮ್ಮ ಮಗನ ದೋಸ್ತ ಪ್ರಥಮನ ಅವ್ವನ ಮೊಬೈಲು..ನಮ್ಮ ಮಗಾ ಸಂಜಿ ಮುಂದ ಅವರವ್ವನ ಮೊಬೈಲ ತೊಗೊಂಡ ನಿಮ್ಮ ಮಗನ ನಂಬರ ಅಂತ ನಿಮ್ಮ ಮನೆಯವರ ಫೋನಿಗೆ ಫೋನ ಮಾಡ್ಯಾನ ನೀವ ಯಾರು ಎತ್ತಿಲ್ಲಾ, ಅದಕ್ಕ ಆಮ್ಯಾಲೆ ಮೆಸೆಜ್ ಕಳಿಸ್ಯಾನ’ ಅಂತೇಲ್ಲಾ ತಿಳಿಸಿ ಹೇಳಿದೆ. ಆ ಮನಷ್ಯಾಗ ನಾ ಹೇಳಿದ್ದರ ಮ್ಯಾಲೆ ವಿಶ್ವಾಸ ಇರಲಿಲ್ಲಾ ಕಡಿಕೆ ಅಂವಾ ಮಲ್ಕೊಂಡಿದ್ದ ತನ್ನ ಮಗನ ಒದ್ದ ಎಬಿಸಿ ಅವಂಗ ಪ್ರಥಮ ಅಂತ ದೋಸ್ತ ಇದ್ದಾನೋ ಇಲ್ಲೊ ಅನ್ನೊದನ್ನ ಕನಫರ್ಮ ಮಾಡ್ಕೊಂಡ ಆಮ್ಯಾಲೆ ’ಇನ್ನೊಮ್ಮೆ ನಿನ್ನ ಮಗಗ ನನ್ನ ಮಗಗ ಫೋನ್ ಮಾಡೋದಿದ್ರ ನಿನ್ನ ಮೊಬೈಲಲೇ ನಂಗ ಫೋನ ಮಾಡಂತ ಹೇಳ…ನನ್ನ ಹೆಂಡತಿ ಫೋನ ಉಸಾಬರಿ ಬರಬ್ಯಾಡ… good night’ ಅಂತ ಹೇಳಿ ಫೋನ ಇಟ್ಟಾ.

ಏನ್ಮಾಡ್ತೀರಿ….ಅಲ್ಲಾ…ನಾ ನನ್ನ ಹೆಂಡತಿ ಫೋನ ಉಸಾಬರಿನ ಹೋಗಂಗಿಲ್ಲಾ ಇವನ ಹೆಂಡ್ತಿ ಫೋನ ಉಸಾಬರಿ ಯಾಕ ಬೇಕ್ರಿಪ್ಪಾ…. ಆದರೂ ಏನ ಅನ್ರಿ ಈ ಹೆಂಡಂದರಿಗೆ ಫೊನ ಕೊಡಸಬಾರದು, ಸುಮ್ಮನ ಫೊನ ಇಟಗೊಳಿಕ್ಕೆ ಬರಂಗಿಲ್ಲಾ ಅದನ್ನ ಮಕ್ಕಳ ಕೈಯಾಗ ಕೊಡ್ತಾರ, ಮಕ್ಕಳ ಅದನ್ನ misuse ಮಾಡ್ಕೊಂಡ ಮನಿ ಮಂದಿಗೆ ಹೇಳಂಗನು ಇಲ್ಲಾ…ಮ್ಯಾಲೆ ದೊಡ್ಡಿಸ್ತನ ಮಾಡಲಿಕ್ಕೆ ತಮ್ಮವ್ವನ ಫೋನ್ ನಂಬರ್ ತಂಬದ ಅನ್ನೋರಗತೆ ದೋಸ್ತರಿಗೆಲ್ಲಾ ಕೊಟ್ಟಿರ್ತಾರ… ಆಮ್ಯಾಲೆ ಹಂಗ ಗಂಡಂದರ ಏನರ by chance ಹೆಂಡತಿ ಫೋನ ತೊಗೊಂಡ ಇಕಿ ಯಾರಿಗೆ ಫೋನ ಮಾಡಿದ್ಲು, ಇಕಿಗೆ ಯಾರವು ಫೋನ ಬಂದಿದ್ವು ಅಂತ time passಗೆ ನೋಡಿದರ ಒಂದಿಷ್ಟ unknown ನಂಬರ ಇರ್ತಾವ…ಆಮ್ಯಾಲೆ ಅದರದೊಂದ ಟೆನ್ಶನ್…ಆ ನಂಬರ ಯಾರದು ಅಂತ ಪತ್ತೆ ಹಚ್ಚಿ ಯಾಕ ಫೋನ ಮಾಡಿದ್ದಿ, ಯಾಕ ಫೋನ ಮಾಡಿದ್ದರು ಅಂತ ಕಟ್ಟಿಗೆ ಹಚ್ಚೊತನಕ ಮನಸ್ಸಿಗೆ ಸಮಾಧಾನ ಇರಂಗಿಲ್ಲಾ… ಏನ ಸಂಸಾರನೋ ಏನೋ?

ಅಲ್ಲಾ ಏನೊ ನನ್ನ ಪುಣ್ಯಾ ಆ ಪ್ರಥಮನ ದೋಸ್ತ ಗಂಡ ಹುಡಗಾ ಇದ್ದಾ ಛಲೋ ಆತ, ಹಂಗ ಅಕಿ ಏನರ ಹುಡಗಿ ಇದ್ದಳು ಅಂದರ ಹೊಸಾ ಇಶ್ಯು ಸ್ಟಾರ್ಟ್ ಆಗ್ತಿತ್ತ. ಪುಣ್ಯಾಕ್ಕ ಅದ ಅಲ್ಲಿಗೆ ಮುಗಿತ. ಅನ್ನಂಗ ಇಷ್ಟೇಲ್ಲಾ ಮುಗದರು ಅಂವಾ ಏನ ತಾ ಯಾರು ಅಂತ ಹೇಳಲಿಲ್ಲಾ, ನಾ ಯಾರು ಅಂತ ಕೇಳಲಿಲ್ಲಾ…ಮುಂಜಾನೆ ಎದ್ದ ಪ್ರಥಮನ ಕೇಳಿದ ಮ್ಯಾಲೆ ಗೊತ್ತಾತು ಅಂವಾ ಯಾರ ಅಂತ….

Leave a Reply

Your email address will not be published. Required fields are marked *

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ