ಅಷ್ಟಕ್ಕ ಇಷ್ಟಾದರ ನಿಮ್ಮಜ್ಜನ ಕಷ್ಟಕ್ಕ ಎಷ್ಟ?

ನಾಳೆ, ಮಾರ್ಚ ೧೪ಕ್ಕ ’international maths day’ ಅದ.
ಮೊನ್ನೆ ಈಗಿನ ಗಣಿತಕ್ಕ ಮತ್ತ ನಮ್ಮ ಕಾಲದಾಗಿನ ಗಣಿತಕ್ಕ, ನಾವ ಕಲತಿದ್ದಕ್ಕೂ ಈಗ ಕಲಿತಿರೋದಕ್ಕೂ ಎಷ್ಟ ಫರಕ ಅದ ಅಂತ ಹಂಗ ವಿಚಾರ ಮಾಡಲಿಕತ್ತಿದ್ದೆ. ನಮ್ಮ ಹಳೇ ಕಾಲದ ಗಣಿತ, ಅದನ್ನ ನಮ್ಮ ಅವ್ವಾ-ಅಪ್ಪಾ ಕಲಸೋ ಪದ್ದತಿ ಎಲ್ಲಾ ನೆನಪಾದ್ವು.
ನಾವ ಒಂದೊ ಎರಡೋ ಕಲತಿದ್ದ ನಮ್ಮವ್ವ ಹೇಳಿಕೊಟ್ಟಿದ್ದ
ಒಂದು ಎರಡು ಬಾಳೆಲೆ ಹರಡು,
ಮುರು ನಾಲ್ಕು ಅನ್ನವ ಹಾಕು,
ಐದು ಆರು ಬೇಳೆ ಸಾರು,
ಏಳು ಎಂಟು ಪಲ್ಯೆಕೆ ದಂಟು,
ಒಂಬತ್ತು ಹತ್ತು ಎಲೆ ಮುದರಿತ್ತು
ಒಂದರಿಂದ ಹತ್ತು ಹೀಗಿತ್ತು
ಊಟದ ಆಟವು ಮುಗದಿತ್ತು…………..
ಮುಂದ ಒಂದ ಸರತೆ ಹತ್ತರ ತನಕ ಬಂತು ಅಂತ ಗ್ಯಾರಂಟಿ ಆಗೋ ಪುರಸತ್ತ ಇಲ್ಲದ ನಮ್ಮವ್ವ
ಹತ್ತು-ಹತ್ತು ಇಪ್ಪತ್ತು
ತೋಟಕೆ ಹೋದನು ಸಂಪತ್ತು
ಇಪ್ಪತ್ತು ಹತ್ತು ಮೂವತ್ತು
ಕೈಯಲ್ಲಿ ಒಂದು ಕಲ್ಲಿತ್ತು,
ಮುವತ್ತು ಹತ್ತು ನಲವತ್ತು
ಎದುರಿಗೆ ಮಾವಿನ ಮರವಿತ್ತು,
ನಲವತ್ತು ಹತ್ತು ಐವತ್ತು
ಮರದಲಿ ಕಾಯಿಯು ತುಂಬಿತ್ತು,
ಐವತ್ತು ಹತ್ತು ಅರವತ್ತು,
ಕಲ್ಲನು ಎಸೆದ ಸಂಪತ್ತು,
ಅರವತ್ತು ಹತ್ತು ಎಪ್ಪತ್ತು,
ಕಾಯಿಯು ಟಪಾ ಟಾಪಾ ಉದಿರಿತ್ತು,
ಎಪ್ಪತ್ತು ಹತ್ತು ಎಂಬತ್ತು
ಮಳೆಯ ಕಂಡನು ಸಂಪತ್ತು,
ಎಂಬತ್ತು ಹತ್ತು ತೊಂಬತ್ತು
ಕಾಲುಗಳೆರಡು ನಡುಗಿತ್ತು,
ತೊಂಬತ್ತು ಹತ್ತು ನೂರು
ಮನೆಯನು ತಲುಪಿದ ಸಂಪತ್ತು……………….. ಅಂತ ರಾಗ ಶುರು ಮಾಡೋಕಿ.
ನೋಡ್ರಿ ಇನ್ನೂ ಹೆಂಗ ನೆನಪ ಇಟ್ಟೇವಿ…ಸಣ್ಣ ಹುಡುಗರಿದ್ದಾಗ ತಾಯಿ ಅನ್ನೋಕಿ ಬಾಜುಕ ಮುಚ್ಚುಕಾಯಿ ಕಾಯಿಸ್ಗೊಂಡ ಇಟಗೊಂಡ ಕಲಿಸಿದ್ದನ್ನ ಹೆಂಡ್ತಿ ಲಟ್ಟಣಿ ಹಿಡ್ಕೊಂಡ ನಿಂತರ ಸಾಕ ಪಟಾ ಪಟಾ ಅಂತ ಹೇಳ್ತೇವಿ.
ಅದರಾಗ ನಮ್ಮವ್ವಂತೂ ಮುಂಜಾನೆ ಎದ್ದ ಕೂಡ್ಲೇನ ಮಗ್ಗಿ ಅನಿಸ್ಗೋತ ಎಬಸೋಕಿ, ಹಿಂಗಾಗಿ ನಾವು ನಿದ್ದಿ ಗಣ್ಣಾಗೂ ’ಎರಡ ಒಂದಲೇ ಎರಡ’ ಅಂತ ಎದ್ದವರು. ಇವತ್ತು ಏನರ ಮಲ್ಟಿಪ್ಲೈ ಮಾಡಬೇಕಂದರ ಮನಸ್ಸಿನಾಗ ಕನ್ನಡದಾಗ ’ನಾಲ್ಕ ನಾಲ್ಕಲೇ’ ಅಂತ ವಿಚಾರ ಮಾಡ್ತೇವೆ ಹೊರತು ’ಫೋರ್ ಫೋರಜಾ’ ಅನ್ನಂಗಿಲ್ಲಾ. ಯಾಕಂದರ ನಾವ ಕಲತದ್ದ ಗಣಿತ ಸಹಿತ ಮಾತೃಭಾಷೆ ಕನ್ನಡದಾಗ, ಅದನ್ನ ಕಲಿಸಿದೋಕಿ ’ಮಾತೃದೇವಿ’. ಅದ ನಮ್ಮ ಮೆದಳ ಒಳಗ ಇವತ್ತೂ ಪ್ರಿಂಟ್ ಮಾಡಿದಂಗ ಅದ.
ಇನ್ನ ನಮ್ಮವ್ವ ಹಿಂಗ ಕಲಿಸ್ಯಾಳ ಅಂದ ಮ್ಯಾಲೆ ನಂದ ಮ್ಯಾಥ್ಸ ಛಲೋ ಇತ್ತ ಅಂತ ಬಾಯಿ ಬಿಟ್ಟ ಹೇಳೋದ ಬೇಕಾಗಿಲ್ಲಾ, ಅದರಾಗ ನಮ್ಮವ್ವ-ನಮ್ಮಪ್ಪ ಭಾಳ ಪ್ರ್ಯಾಕ್ಟಿಕಲ್ ಆಗಿ ಹೇಳಿ ಕೊಡ್ತಿದ್ದರು.
ನಂದ ಮಾರ್ಕ್ಸ ಕಾರ್ಡ ಬಂದಾಗ ’ಎಷ್ಟ ಪರ್ಸೆಂಟ್ ಆತು?’ ಅನ್ನೋದನ್ನ ಹೆಂಗ ಲೆಕ್ಕ ಮಾಡ್ಬೇಕು ಅಂತ ನಮ್ಮಪ್ಪ ಅಗದಿ ಛಂದ ಹೇಳಿ ಕೊಟ್ಟಿದ್ದಾ. ಅವಂದ ಒಂದ ಸ್ಟೇಟಮೆಂಟ್ ಇತ್ತ.
’ಅಷ್ಟಕ್ಕ ಇಷ್ಟ ಆದರ ನಿಮ್ಮಜ್ಜನ ಕಷ್ಟಕ್ಕ ಎಷ್ಟ’ ಅಂತ ಅನ್ನೋವಾ.
ಇಲ್ಲೇ ಕಷ್ಟ ಅಂದರ ಈಗಿನ ಸಂಸಾರಿಕ ಕಷ್ಟ ಅಲ್ಲಾ. ಇಲ್ಲೇ ’ಕಷ್ಟ’ ಅಂದರ ನಾವ ರೊಕ್ಕಾ ಕೊಟ್ಟ ದಾಡಿ/ಕಟಿಂಗ ಮಾಡಿಸ್ಗೋತೇವಿ ಅಲಾ ಅದಕ್ಕ ನಮ್ಮ ಕಡೆ ’ಕಷ್ಟಾ’ ಅಂತಿದ್ದರು. ಹಂಗ ನಂಗಂತೂ ದಾಡಿ ಮಾಡ್ಕೊಳೊದು ಇವತ್ತೂ ಕಷ್ಟದ ಕೆಲಸನ ಅನಸ್ತದ, ನಮ್ಮ ದತ್ತಣ್ಣ ಕಾಕಾ ಹಗಲಗಲಾ ಅನ್ನೋವಾ ’ದಿವಸಾ ದಾಡಿ ಮಾಡ್ಕೊಳೊದಕಿಂತಾ ವರ್ಷಕ್ಕೊಂದ ಹಡಿಯೋದ ಛಲೋ’ ಅಂತ…ಅದ ಅಗದಿ ಬೀಜ ಮಾತ.
ಇರಲಿ ಇನ್ನ ನಮ್ಮಪ್ಪನ ಸ್ಟೇಟಮೆಂಟ್ ’ಅಷ್ಟಕ್ಕ ಇಷ್ಟ ಆದರ ಅಜ್ಜನ ಕಷ್ಟಕ್ಕ ಎಷ್ಟ’ರ ಪ್ರಕಾರ ’ಆರನೂರಕ್ಕ ನಾಲ್ಕನೂರಾ ಇಪ್ಪತ್ತ ಬಿದ್ದರ ನೂರಕ್ಕೆ ಎಷ್ಟ’ ಆತ ಮಗನ ಅಂತ ಕೇಳೊಂವಾ. ಮುಂದ ಅವನ ನಾಲ್ಕನೂರಾ ಇಪ್ಪತ್ತ ಗುಣಲೇ ನೂರು ಮಾಡಿ ಅದಕ್ಕ ಆರನೂರಲೇ ಭಾಗಸ ಅನ್ನೋವಾ..ನಾ ಲೆಕ್ಕಾ ಮಾಡಿ ಬರೇ ಎಪ್ಪತ್ತ ಪರ್ಸೆಂಟ್ ಅಂತ ಅಂದರ ’ 420 ಮಾರ್ಕ್ಸ ತೊಗೊಂಡಿ ಮಗನ ಇನ್ನೇಷ್ಟ್ ಆಗಬೇಕ’ ಅಂತ ಬೈತಿದ್ದಾ.
ಹಿಂಗ ನಾವೇಲ್ಲಾ ಗಣಿತ ಕಲ್ತವರ, ಹಂಗ ಕಲ್ತದ್ದ ಕಡಮಿ ಇದ್ದರು ಚೊಕ್ಕ ಕಲ್ತೇವಿ ಮತ್ತ ಇವತ್ತು ನೆನಪ ಇಟ್ಟೇವಿ. ಮುಂದ ನನಗ ವ್ಯವಹಾರ ಜ್ಞಾನ ಬರಲಿ ಅಂತ ನಮ್ಮವ್ವಾ ರೊಕ್ಕಾ ಕೊಟ್ಟ ಅಂಗಡಿಗೆ, ಸಂತಿಗೆ, ಗಿರಣಿಗೆ ಕಳಸೋಕಿ. ನಾ ಅವರ ಅನ್ಕೊಂಡಿದ್ದಕಿಂತಾ ಶಾಣ್ಯಾತನ ಉಪಯೋಗ ಮಾಡಿ ನಮ್ಮವ್ವ ಗಿರಣಿಗೆ ಕಳಸಿದರ ಗಿರಣ್ಯಾಗ ಗೋದಿ ಐದ ಕೆ.ಜಿ ಇದ್ದರ ನಾಲ್ಕ ಕೆ.ಜಿ ಅಂತ ಹೇಳಿ ಅಲ್ಲೆ ರೊಕ್ಕಾ ಹೊಡ್ಕೊತಿದ್ದೆ.
ಒಂದ ಸರತೆ ಗಿರಣಿಯವಂಗ ನನ್ನ ಮ್ಯಾಲೆ ಡೌಟ ಬಂದ
“ಲೇ…ನಾಲ್ಕ ಕೆ.ಜಿ ಗೋದಿ ಅಂತಿ…ನಂಗ್ಯಾಕೋ ಐದ ಕೆ.ಜಿ ಅನಸಲಿಕತ್ತದ’ ಅಂತ ಅಂದಾ, ನಾ ಅದಕ್ಕ.
“ಏ, ನಂಗ ಐದ ಕೆ.ಜಿ ಎತ್ತಲಿಕ್ಕೆ ಆಗಂಗಿಲ್ಲಾಂತ ನಮ್ಮವ್ವ ನಾಲ್ಕ ಕೆ.ಜಿ ಕಳಿಸ್ಯಾಳೊ…ನನ್ನ ಮ್ಯಾಲೆ ವಿಶ್ವಾಸ ಇಲ್ಲೇನ?’ ಅಂತ ಅವಂಗ ಜೋರ ಮಾಡಿದ್ದೆ. ಆ ಮಗಾ ಮುಂದ ಇನ್ನು ಅರ್ಧಾ ಕೆ.ಜಿ ಹಿಟ್ಟ ಗಿರಣಿ ಮಶಿನ್ಯಾಗ ಇರ್ತ ನಮ್ಮ ಡಬ್ಬಿ ಎತ್ತಿ ಬಿಡ್ತಿದ್ದಾ. ನಾ ’ಏ, ಇನ್ನೂ ನಮ್ಮ ಹಿಟ್ಟ ಅದ ತಡಿ’ ಅಂದರ ’ಯಾಕ ನನ್ನ ಮ್ಯಾಲೆ ವಿಶ್ವಾಸ ಇಲ್ಲೇನ’ ಅಂತ ನಂಗ ವಾಪಸ ಅಂದಿದ್ದಾ.
ನಾ ಎಂಟಣೇ ಒಂದ ರೂಪಾಯಿ ಹೊಡ್ಕೊಳಿಕ್ಕೆ ಅರ್ಧಾ ಕೆ.ಜಿ. ಹಿಟ್ಟ ಗಿರಣಿಗೆ ಹಾಕಸೋದರಾಗ ಸುಳ್ಳ ಹೇಳಿದರ ಆ ಮಗಾ ಸೀದಾ ಅರ್ಧಾ ಕೆ.ಜಿ ಡೈರೆಕ್ಟ ಹಿಟ್ಟ ಹೊಡಿತಿದ್ದಾ. ನಮ್ಮವ್ವ ನಾ ಗಿರಣಿಗೆ ಹೋಗಿ ಬಂದಾಗೊಮ್ಮೆ
’ಅವನ ಹೇಣಾ ಎತ್ತಲಿ ಎಷ್ಟ ಹಿಟ್ಟ ಹೊಡ್ಕೊಂಡಾನ ನೋಡ…ನೆಕ್ಸ್ಟಟೈಮ ನಾನ ಹೋಗ್ತೇನಿ’ ಅಂತಿದ್ಲು.
ಹಿಂಗ ನಾ ಸಂತಿಗೆ ಹೋದಾಗ, ಕಿರಾಣಿ ಸಾಮಾನ ತರಲಿಕ್ಕೆ ಹೋದಾಗ ರೊಕ್ಕಾ ಹೊಡ್ಕೊಂಡ ಹೊಡ್ಕೊಂಡ ಕಾಲೇಜ ಕಲತಿದ್ದ. ಅಲ್ಲಾ ಹನಿ ಹನಿ ಕೂಡಿದರ ಹಳ್ಳ ಅಂತ ಕಲಿಸ್ದೋಕಿನೂ ನಮ್ಮವ್ವನ ಅಲಾ.
ಹಂಗ ಈಗ ಅದನ್ನ ನನ್ನ ಹೆಂಡ್ತಿ ಮಾಡ್ತಾಳ. ಅದರ ಅಕಿ ಹನಿ ಅಂದರ ಮಿನಿಮಮ್ ಒಂದ ನೂರರ ನೋಟ, ಅದರಾಗ ನಂಗ ರೊಕ್ಕಾ ಎಣಿಸಿ ಕೊಡೊ ಪದ್ದತಿ ಗೊತ್ತಿಲ್ಲಾ ’ಎಷ್ಟ ಅವ ನೋಡ’ ಅಂತ ಕೈಯಾಗ ಕೊಟ್ಟ ಬಿಟ್ಟರ ಮುಗಿತ.ಅಲ್ಲಾ ಪಾಪ ಅಕಿನರ ಯಾರಿಗೆ ಖರ್ಚ ಮಾಡೋದು, ನನ್ನ ಸಂಸಾರಕ್ಕನ ಅಲಾ ಅಂತ ಸುಮ್ಮನಿರ್ತೇನಿ ಬಿಡ್ರಿ.
ಅನ್ನಂಗ ಇನ್ನೊಂದ ಹೇಳೋದ ಮರತೆ ಹಂಗ international maths day ದಿವಸ ’ಪೈ’ಡೇ ನೂ ಸೆಲೆಬ್ರೇಟ ಮಾಡ್ತಾರ…ಪೈ ಡೇ ಅಂದರ ನಮ್ಮ ಗೋಕರ್ಣ, ಶಿರ್ಶಿಕಡೆ ಪೈ ಅಲ್ಲಾ, i am talking about mathematical constant ‘pi’ (π)…ಅದಕ್ಕ Archimedes’ constant ಅಂತನೂ ಕರಿತಾರ.
ಹಂಗ ನಾ ಕಾಡಸಿದ್ದೇಶ್ವರ ಆರ್ಟ್ಸ ಹಾಗೂ ಎಚ್.ಎಸ್. ಕೋತಂಬರಿ ಸೈನ್ಸ ಕಾಲೇಜನಾಗ ’ಕರ್ನಾಟಕ ಸಂಘದ’ ಸೆಕ್ರೆಟರಿ ಇದ್ದಾಗ ಹಿರೇಮಠ ಸರ ಹೇಳಿದರಂತ ಈ ’ಪೈ ಡೇ’ ಸೆಲೆಬ್ರೇಟ್ ಮಾಡ್ಲಿಕ್ಕೆ ಹೊಂಟಾಗ ಒಂದಿಷ್ಟ ಆರ್ಟ್ಸ್ ಸ್ಟುಡೆಂಟ್ಸ ಅದಕ್ಕ oppose ಮಾಡಿದ್ದರು.
“ವೈ ಪೈ ಡೇ.. ವೈ ನಾಟ ‘ ಉಳ್ಳಾಗಡ್ಡಿ ಡೇ’. ನಿಂಗ ಯಾರದ ಬೇಕ ಅವರದ ಡೇ ಮಾಡ್ತಿ ಏನ ಮಗನ, ನಾಳೆ ನಾ ಉಳ್ಳಾಗಡ್ಡಿ ಡೇ ಮಾಡೋಣ ಅಂತೇನಿ, ಮಾಡ್ತಿ ಏನ? ” ಅಂತ ಒಬ್ಬೊಂವ ಅಂದರ ಇನ್ನೊಬ್ಬಂವ
“ಹೌದ..ಹೌದ..ಇವತ್ತ ಪೈ ಡೇ ಮಾಡತಿ, ಅಂವಾ ಉಳ್ಳಾಗಡ್ಡಿ ಡೇ ಮಾಡೋಣ ಅಂತಾನ ಆಮ್ಯಾಲೆ ನಾ ಲಿಂಬಿಕಾಯಿ ಡೇ ಮಾಡೋಣ ಅಂತೇನಿ…. ನೆಕ್ಸ್ಟ ಯಾರರ ಮೆಣಸಿನಕಾಯಿ ಡೇ ಮಾಡೋಣ” ಅಂತಾರ ಅಂತೇಲ್ಲಾ ದೊಡ್ಡ ಇಶ್ಯು ಮಾಡಿದ್ದರು. ಅಲ್ಲಾ ಹಂಗ ಅದರಾಗ ಅವರದೇನ ತಪ್ಪ ಇದ್ದಿದ್ದಿಲ್ಲಾ ಅವರ ನಾ ಪೈ ಡೇ ಮಾಡೋಣ ಅಂದಕೂಡ್ಲೆ ಅವರ ನಮ್ಮ ಕೆಮಿಸ್ಟ್ರಿ ಸರ್ ಒಬ್ಬರ ಪೈ ಅಂತ ಇದ್ದರು ನಾ ಅವರದ ಡೇ ಮಾಡ್ಲಿಕತ್ತೇನಿ ಅಂತ ತಿಳ್ಕೊಂಡಿದ್ದರು, ಹಿಂಗಾಗಿ ಅವರ ತಮ್ಮ ಹಿಸ್ಟರಿ ಉಳ್ಳಾಗಡ್ದಿ ಸರ್, ಜಾಗ್ರಫಿ ಲಿಂಬಿಕಾಯಿ ಸರ್, ಎಕಾನಾಮಿಕ್ಸ ಮೆಣಸಿನಕಾಯಿ ಸರ್ ಇವರದೇಲ್ಲಾ ಯಾಕ ಡೇ ಮಾಡಬಾರದು ಅಂತ ಲಾಜಿಕ… ನಾ ಆಮ್ಯಾಲೆ ಅವರಿಗೆ ತಿಳಿಸಿ ಹೇಳಿ ಪೈ ಡೇ ಮಾಡಿದೆ ಆ ಮಾತ ಬ್ಯಾರೆ.
ಹಂಗ ಇಷ್ಟೇಲ್ಲಾ ಕಲತರು ಇವತ್ತ ಸಂಸಾರ ಹತ್ತಿ ಇಪ್ಪತ್ತ ವರ್ಷದ ಮ್ಯಾಲೆ ನಮ್ಮ ಹಣೇಬರಹ
’ಮಡದಿಗೆ ತಕ್ಕ ಗಳಿಸಲಾರೆ,
ಕೊಡಸಿದ ಸೀರೆ ಮಡಚಲಾರೆ
ಜೊಂಯ್ ಜೊಟಕ್….’
ಅನ್ನೊ ಲೇವಲಗೆನ ನಿಂತದ.
ಇರಲಿ.. ನಾಳೆ international maths day and pi day ಅಂತ ನೆನಪಾಗಿ ಇಷ್ಟೇಲ್ಲಾ ಬರಿಬೇಕಾತ.

2 thoughts on “ಅಷ್ಟಕ್ಕ ಇಷ್ಟಾದರ ನಿಮ್ಮಜ್ಜನ ಕಷ್ಟಕ್ಕ ಎಷ್ಟ?

  1. Asali..! palli..! nivu. khattarnak vishayada bagge EXPLAIN madthiri. Fida aagini naa.
    sir. iam a standup comedian(Ega shuru hachchini sir). nimma article valaginda kaddu comedy performance madthini sir. hangantha heli stage myale nimmahesaru thogalde irlla sir.

Leave a Reply

Your email address will not be published.

This site uses Akismet to reduce spam. Learn how your comment data is processed.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ