ಶ್ರಾವಣದಾಗ ಅಧಿಕ ಬಂದರ ಗೌರಿ ಗತಿ ಏನ್ರಿ?

ಈಗ ಮೂರ ತಿಂಗಳ ಹಿಂದ ಯುಗಾದಿ ಟೈಮ ಒಳಗ ಹೊಸಾ ಪಂಚಾಂಗ ಬಂತ. ಹಂಗ ಯುಗಾದಿ ದಿವಸ ಪಂಚಾಂಗ ಪೂಜಾ ಮಾಡಿ ಒಂದ ಚೂರ ಓದಬೇಕಂತ, ಅದಕ್ಕ ನನ್ನ ಹೆಂಡತಿ ಪಂಚಾಂಗ ಹಿಡ್ಕೊಂಡ ಸೀದಾ ಶ್ರಾವಣ ಮಾಸ ಯಾವಾಗ ಬರ್ತದ, ಈ ಸರತೆ ಎಷ್ಟ ಶುಕ್ರವಾರ ಬಂದಾವ ಅಂತ ನೋಡ್ಲಿದ್ಲು. ಹಂಗ ಅಕಿ ಹೊಸಾ ಪಂಚಾಂಗದಾಗ ಎಲ್ಲಾ ಬಿಟ್ಟ ಶ್ರಾವಣ ಮಾಸಾನ ಯಾಕ ನೋಡಿದ್ಲು ಅಂದರ ಇಕಿಗೆ ಶ್ರಾವಣ ಅಂದರ ಟೆನ್ಶನ್ ಶುರು ಆಗ್ತದ. ಅಲ್ಲಾ ಹಂಗ ನಂಗೂ ಆಗ್ತದ ಬಿಡ್ರಿ. ನಾವ ಸಣ್ಣೋರಿದ್ದಾಗಿಂದ ನಮ್ಮವ್ವ ಶ್ರಾವಣ ಬಂದಾಗೊಮ್ಮೆ ನಮ್ಮ ಕಡೆ ಒದ್ದಿ ಪಂಜಿ ಹಚ್ಚಿಸಿಸಿ ಕೆಲಸಾ ತೊಗೊಂಡಿದ್ದ ನೆನಿಸಿಗೊಂಡರ ಇವತ್ತಿಗೂ ಕಣ್ಣ ಒದ್ದಿ ಆಗ್ತಾವ. ಮಡಿಲೇ ನೀರ ತುಂಬೊದು, ಅರಬಿ ಓಣಾ ಹಾಕೋದ, ಅದನ್ನ ಮುಟ್ಟ ಬ್ಯಾಡಾ- ಇದನ್ನ ಮುಟ್ಟ ಬ್ಯಾಡಾ ಅಂತ ನಮ್ಮವ್ವ ನಮ್ಮ ಜೀವಾ ತಿನ್ನೋದ ಎಲ್ಲಾ ಇವತ್ತಿಗೂ ಶ್ರಾವಣ ಅಂದರ ಸಾಕ ಕನಸಿನಾಗ ಬರ್ತಾವ.
ಏನೊ ಪುಣ್ಯಾಕ್ಕ ಹೆಂಡ್ತಿ ಬಂದ ಮ್ಯಾಲೆ ನಂಗ ಸ್ವಲ್ಪ ಹಗರ ಆಗೇದ ಅನ್ನರಿ ಆದರ ಅಕಿಗೆ ಚಾಲೂ ಆತ.
ಇನ್ನ ಹಂತಾದರಾಗ ನಮ್ಮಕಿ ಕಣ್ಣಿಗೆ ಪಂಚಾಂಗ ಒಳಗ ಈ ಸರತೆ ಶ್ರಾವಣದಾಗ ಅಧಿಕ ಅನ್ನೋದ ಬಿತ್ತ. ತೊಗೊ ಇಕಿ ಏನೋ ಒಂದ ದೊಡ್ಡ ಅನಾಹುತ ಆದೋರಗತೆ
’ಅತ್ಯಾ ಈ ಸರತೆ ಶ್ರಾವಣದಾಗ ಅಧಿಕ ಬಂದದ …ಗೌರಿ ಗತಿ ಏನ್ರೀ? ಅಂತ ಗಾಬರಿ ಆಗಿ ಕೇಳಿದ್ಲ.
’ಅಯ್ಯ..ಅದಕ್ಯಾಕ ಅಷ್ಟ ಹೆದರತಿ, ಏನ ಅಧಿಕ ಗೌರಿ ಬ್ಯಾರೆ ಇರ್ತಾಳೇನ? ಹಂಗ ಶ್ರಾವಣದಾಗ ಅಧಿಕ ಬಂದದ್ದ ಇದ ಮೊದ್ಲನೇ ಸಲಾ ಅಲ್ಲಾ ಏನಲ್ಲಾ, ರಗಡ ಸಲಾ ಬಂದದ, ಗೌರಿ ಒಂದ ತಿಂಗಳ ಬದ್ಲಿ ಎರೆಡ ತಿಂಗಳ ಮನ್ಯಾಗ ಇರ್ತಾಳ ತೊಗೊ’ ಅಂತ ಅಗದಿ ಕ್ಯಾಜುವಲ್ ಆಗಿ ಅಂದ್ಲು.
ಮ್ಯಾಲೆ ’ ನಿನ್ನ ಗಂಡಗ ಈ ಸರತೆ ಎರಡ ತಿಂಗಳ ಶ್ರಾವಣಾ ಪಾಲಸಬೇಕ, ಹೊರಗ ಬೇಕಾ-ಬಿಟ್ಟಿ ತಿನ್ನೋದ-ಕುಡಿಯೋದ ಎಲ್ಲಾ ಬಂದ ಅಂತ ಹೇಳ’ ಅಂತ ಬಾಂಬ್ ಹಾಕಿದ್ಲು.
ಹಂಗ ನಮ್ಮ ಮನ್ಯಾಗ ಮೊದ್ಲಿಂದ ಶುಕ್ರ ಗೌರಿ, ಸ್ವರ್ಣಗೌರಿ ಮತ್ತ ಅಷ್ಟಮಿ ಗೌರಿ ಅಂತ ಮೂರೂ ಅವ. ಹಿಂಗಾಗಿ ಅವೇಲ್ಲಾ ಮುಗಿಯೋತನಕ ನಮ್ಮವ್ವನ ಮಡಿ-ಹುಡಿ ಹಾವಳಿ ಇದ್ದದ್ದ. ಇನ್ನ ಮೊದ್ಲಿಂದ ಅಕಿ ಎಲ್ಲಾ ಮಾಡ್ಕೋತ ಬಂದಿದ್ದಕ್ಕ ನಮಗ ಅದೇನ ವಿಶೇಷ ಅನಸಂಗಿಲ್ಲ ಬಿಡ್ರಿ. ಹಂಗ ನಾ
’ಬರ-ಬರತ ನಿಂಗ ವಯಸ್ಸಾತ ಮ್ಯಾಲೆ ನಾನೂ ಕೆಲಸಕ್ಕ ಹೋಗೊಂವಾ ನೀ ದಿನಾ ಒಂದಕ್ಕೂ ಮಡಿನೀರ ತುಂಬ, ಅರಬಿ ಒಣಾ ಹಾಕ ಅಂದರ ಆಗಂಗಿಲ್ಲಾ’ ಅಂತ ಜೋರ್ ಮಾಡಿದ ಮ್ಯಾಲೆ ನಮ್ಮವ್ವ ಗೌರಿ ಕಡಿ ವಾರ ಇಷ್ಟ ಕೂಡಸಲಿಕ್ಕೆ ಶುರು ಮಾಡಿದ್ಲು. ಆದರ ಒಮ್ಮೆ ನನ್ನ ಮದ್ವಿ ಆತ ನೋಡ್ರಿ ಆವಾಗ ಒಂದ ಪುಕ್ಕಟ್ಟ ಮನಿ ಮುತ್ತೈದಿ ಬಂದ್ಲ ತಡಿ ಅಂತ ಮತ್ತ ’ಇದ ನಮ್ಮ ಮನಿ ಪದ್ಧತಿವಾ, ಗೌರಿ ನಾಲ್ಕೂ ವಾರ ಕೂಡಸ್ಬೇಕ, ನೀನು ಎಲ್ಲಾ ಪದ್ಧತಿ ಕಲಕೊ’ ಅಂತ ಶುರು ಹಚ್ಚಿದ್ಲು. ಅದರಾಗ ನಮ್ಮ ಮನ್ಯಾಗ ಬುಧ-ಬೃಹಸ್ಪತಿ ಪೂಜಾ ಬ್ಯಾರೆ ಇತ್ತ, ಬುಧವಾರದಿಂದ ಶನಿವಾರ ತನಕಾ ಮಡಿಲೇ ಅಡಗಿ, ಆರತಿ, ನೈವಿದ್ಯ ಇರ್ತಿತ್ತ.
ಹಿಂಗಾಗಿ ನನ್ನ ಹೆಂಡ್ತಿ ಶ್ರಾವಣ ಅಂದರ ಸಾಕ ಹೆದರಿ ಬಿಡ್ತಿದ್ಲು. ನಮ್ಮವ್ವ ಹಿರೇ ಸೊಸಿ ಇದ್ದಿ ಅಂತ ಮುಂದ ನಿಂತ ಎಲ್ಲಾ ಪದ್ಧತಿ ಮಾಡ್ಸೋಕಿ, ಅದರಾಗ ಮಡಿ ನೈಟಿ ಮ್ಯಾಲೆ ಮಡಿನೀರ ತುಂಬಸೋದ, ಒಂದ ಕೊಡಾ, ತಂಬಗಿ ಇಂದ ಹಿಡದ ಕೊಳಗಾ, ಪಾತೇಲಿ ತನಕಾ ಎಲ್ಲಾದರಾಗೂ ಮಡಿನೀರ ತುಂಬಸೋಕಿ ಏನರ ಅಂದರ
’ಒಂದ ವಾರತನಕಾ ಬೇಕವಾ, ನಳಾ ಬರೋದ ವಾರಕ್ಕೊಮ್ಮೆ….ಅಕಸ್ಮಾತ ನಳಾ ಬರೋದ ಹೆಚ್ಚು ಕಡಮಿ ಆದರ’ ಅಂತ ಎರಡ ಕೊಡಾ ಹೆಚ್ಚಗಿನ ನೀರ ತುಂಬಸ್ತಿದ್ಲು. ಮುಂದ ಆ ಮಡಿ ನೀರ ಕಾಯೋದ ಒಂದ ದೊಡ್ಡ ಕೆಲಸ. ನನ್ನ ಹೆಂಡ್ತಿಗಂತೂ ಶ್ರಾವಣಾ ಯಾವಾಗ ಮುಗದೋದ ಅಂತ ಆಗಿ ಬಿಡ್ತಿತ್ತ. ಗೌರಿ ಸಂಬಂಧ ಅಲ್ಲಾ, ನಮ್ಮವ್ವನ ಸಂಬಂಧ.
ನನ್ನ ಮದ್ವಿ ಆಗಿ ಮುಂದ ಒಂದ-ಎರಡ ವರ್ಷಕ್ಕ ನನ್ನ ಹೆಂಡ್ತಿ ಹಣೇಬರಹಕ್ಕ ಅಧಿಕ ಮಾಸ ಶ್ರಾವಣದಾಗ ಬಂದ ಬಿಡ್ತ. ಅತ್ಯಾ ಈ ಸರತೆ ಶ್ರಾವಣದಾಗ ಅಧಿಕ ಬಂದದರಿ ಗೌರಿ ಗತಿ ಏನ? ಎಷ್ಟ ತಿಂಗಳ ಕೂಡಸಬೇಕ ಅಂತ ಅಗದಿ ಗಾಬರಿ ಆಗಿ ಕೇಳಿದ್ಲು. ನಮ್ಮವ್ವಗ ಅಕಿ ಟೆನ್ಶನ್ ತೊಗೊಂಡಿದ್ದ ಗೊತ್ತಾತ. ಇಕಿ ಅಕಿಗೆ ಮುದ್ದಾಮ್ ಕಾಡಸಲಿಕ್ಕೆ
’ಶ್ರಾವಣದಾಗ ಅಧಿಕ ಬಂದರ ಏನ್ಮಾಡ್ಲಿಕ್ಕೆ ಬರಂಗಿಲ್ಲವಾ ವರ್ಷಾ ನಾಲ್ಕ ವಾರ ಪೂಜಾ ಇರ್ತಿತ್ತ, ಈ ವರ್ಷ ಎಂಟ ವಾರ ಪೂಜಾ ಮಾಡ್ಬೇಕ ತೊಗೊ’ ಅಂತ ಅಂದ ಬಿಟ್ಟಳು. ನನ್ನ ಹೆಂಡ್ತಿಗೆ ಎದಿ ಧಸಕ್ಕ ಅಂತ. ಒಂದ ತಿಂಗಳ ಶ್ರಾವಣದಾಗ ವಾರಕ್ಕ ನಾಲ್ಕ ಸರತೆ ಮಡಿಲೇ ಅಡಗಿ ಮಾಡೋದರಾಗ ಸಾಕ ಸಾಕಾಗಿ ಹೋಗಿರ್ತಿತ್ತ ಇನ್ನ ಅದನ್ನ ಅಧಿಕ ಅಂದರ ಡಬಲ್ ಮಾಡಬೇಕಲಾ ಅಂತ ಹೊಟಿಬ್ಯಾನಿನ ಹಚಗೊಂಡ್ಲ ಅನ್ನರಿ.
ನಮ್ಮವ್ವಾ ’ಏ ನೀ ಏನ ಕಾಳಜಿ ಮಾಡಬ್ಯಾಡ ನಾ ಇದ್ದೇನಿ, ಮ್ಯಾಲಿಂದ ಎಲ್ಲಾ ನಾ ಮಾಡಿ ಕೊಡ್ತೇನಿ ತೊಗೊ’ ಅಂತ ಅಂದರ
’ನೀವೇನ ಮ್ಯಾಲಿಂದ ಅಂದರ ಸವತಿಕಾಯಿ ಕೊಚ್ಚಿ ಕೊಡ್ತಿರಿ, ಕಾಳು ಬ್ಯಾಳಿ ಆರಿಸಿ ಕೊಡ್ತಿರಿ, ಕಾಯಿಪಲ್ಯ ಹೆಚ್ಚಿ ಕೊಡ್ತಿರಿ ಆದರ ಮಡಿ ನೀರ ತುಂಬೋದ, ಮಡಿ ಅಡಗಿ ಮಾಡೋದ ಎಲ್ಲಾ ನಾ ಒಬ್ಬೊಕಿನ ಮಾಡಬೇಕಲಾ, ಮಡಿಲೇ ಇನ್ನೊಬ್ಬರ ಯಾರ ಇರ್ತಾರ ಹೆಲ್ಪಿಗೆ’ ಅಂದ್ಲು…
’ಅಯ್ಯ ನಮ್ಮವ್ವಾ ಮಡಿಲೇ ಅಡಗಿ ಮಾಡ್ಲಿಕ್ಕೆ ಅಷ್ಟ ತ್ರಾಸ ಆಗ್ತದ ಅಂದರ ಹೇಳ, ಬೇಕಾರ ಪ್ರಶಾಂತಗ ಇನ್ನೊಂದ ಲಗ್ನಾ ಮಾಡ್ತೇನಿ, ನಿಂಗೂ ಒಂದ ಸವತಿ ಬಂದರ ಎಲ್ಲಾದಕ್ಕೂ ಸವಡ ಆಗ್ತದ’ ಅಂದ ಬಿಟ್ಲು. ಅಕಿ ತಲಿ ಗಿರ್ರ್ ಅಂದ ಹೋತ. ಮುಂದ ಅಕಿ ಏನ ಮಾತಾಡ್ಲಿಲ್ಲಾ. ಕಡಿಕೆ ಶ್ರಾವಣ ಬಂತ, ಅದ ನಿಜ ಶ್ರಾವಣ. ವಟಾ ವಟಾ ಅನ್ಕೋತ ನಾಲ್ಕ ವಾರ ಮುಗಿಸಿದ್ಲು ಮುಂದ ಅಧಿಕ ಶ್ರಾವಣ ಶುರು ಆತ. ಇಕಿ ಯಥಾ ಪ್ರಕಾರ ನಳಾ ಬರೋದಕ್ಕ ಮತ್ತ ಪಾಪ ವದ್ದಿ ನೈಟಿ ಮ್ಯಾಲೆ ಮುಂದಿನ ವಾರಕ್ಕ ತಾಸ ಗಟ್ಟಲೇ ಕೆಳಗಿಂದ ನೀರ ಹೊತ್ತ ಮಡಿನೀರ ತುಂಬಿದ್ಲು. ನಮ್ಮವ್ವ ಇದನ್ನೇಲ್ಲಾ ನೋಡ್ಕೊತ ಸುಮ್ಮನಿದ್ಲು. ಕಡಿಕೆ ಅಕಿ ಮಡಿನೀರ ಎಲ್ಲಾ ತುಂಬಿ ಡ್ರೆಸ್ ಚೇಂಜ್ ಮಾಡಿ ಬಂದ ಮ್ಯಾಲೆ
’ಮಡಿ ನೀರ ಯಾಕ ತುಂಬಿದಿ, ಶ್ರಾವಣ ಮುಗಿತ…..ಭಾದ್ರಪದಾ ಇನ್ನೂ ಒಂದ ತಿಂಗಳ ಬಿಟ್ಟ ಅದ ಅಲಾ’ ಅಂತ ಅಂದ್ಲು.
’ಮತ್ತ ಶ್ರಾವಣ ಅಧಿಕ ಬಂದಿದ್ದಕ್ಕ ಕಂಟಿನ್ಯೂ ಅದ ಅಲಾ’ ಅಂತ ನಮ್ಮಕಿ ಅಂದ್ಲು.
’ಏ..ಹುಚ್ಚಿ ಅದ ನಿಜ ಶ್ರಾವಣ ಅಲ್ಲಾ, ಅಧಿಕ ಶ್ರಾವಣ….ಒಂದ ತಿಂಗಳ ಗೌರಿ ಮಾಡನಾಗ ಗಪ್ ಕೂಡ್ತಾಳ, ಅಕಿಗೇನ ಪೂಜಿ ಪುನಸ್ತಾರ ಇಲ್ಲಾ ಏನಿಲ್ಲಾ……ನನ್ನ ಒಂದ ಮಾತ ಕೇಳಿ ಮಡಿನೀರ ತುಂಬ ಬೇಕ ಇಲ್ಲ’ ಅಂತ ಅಂದ ಬಿಟ್ಲು.
ನಮ್ಮಕಿಗೆ ಪಿತ್ತ ನೆತ್ತಿಗೇರತ
’ಅಲ್ಲರಿ ಮತ್ತ ನಾ ಶ್ರಾವಣ ಶುರು ಆಗೋಕಿಂತ ಮುಂಚೆ ಕೇಳಿದಾಗ ಗೌರಿ ಎರಡ ತಿಂಗಳ ಇಲ್ಲೇ ಇರ್ತಾಳ, ಎಂಟ ವಾರ ಮಡಿಲೆ ಅಡಿಗೆ ನೈವಿದ್ಯ ಅಂತ ಹೇಳಿದವರ ನೀವ ಅಲಾ ಅಂದ್ಲು.
’ಅಯ್ಯ ಹುಚ್ಚಿ..ನಾ ಹಂಗ ಚಾಷ್ಟಿಗೆ ಹೇಳಿದ್ದೆ ನೀ ಖರೇ ತಿಳ್ಕೊಂಡರ ನಾ ಏನ ಮಾಡ್ಲಿ. ಮಡಿ ನೀರ ತುಂಬಿದರ ತಪ್ಪೇನಿಲ್ಲ ತೊಗೊ ನಾಳೆ ಅದ ನೀರಲೇ ಪಾನಿ ಪುರಿ ಮಾಡ, ನಂಗೂ ತಿಂಗಾಳನ ಗಟ್ಟಲೇ ಹಬ್ಬದ ಊಟಾ ಉಂಡ ಉಂಡ ಬಾಯಿ ಕೆಟ್ಟ ಹೋಗೇದ’ ಅಂದ್ಲು. ಏನ್ಮಾಡ್ತೀರಿ
ಇನ್ನ ಈ ವರ್ಷ ಮತ್ತ ಶ್ರಾವಣದಾಗ ಅಧಿಕ ಬಂದದ ಅಂದ ಕೂಡ್ಲೆ ನಮ್ಮಕಿ ನಮ್ಮವ್ವನ ಹಿಡ್ಕೊಂಡ ನೀವು ಕರೆಕ್ಟ್ ಆಗಿ ಸಿರಿಯಸ್ ಆಗಿ ಹೇಳ್ರಿ ಈ ಸರತೆ ಯಾವಾಗ ಗೌರಿ ಕೂಡ್ಸೊದ ಅಂತ ಗಂಟ ಬಿದ್ಲು. ಅಕಿ ಟೆನ್ಶನ್ ನೋಡಿ ನಮ್ಮವ್ವ
’ಏ..ನಮ್ಮವ್ವಾ ಈ ಸರತೆ ಮೊದ್ಲ ಅಧಿಕ ಶ್ರಾವಣ ಬರ್ತದ ಆಮ್ಯಾಲೆ ನಿಜ ಶ್ರಾವಣ ಬರ್ತದ. ನಿಜ ಶ್ರಾವಣದಾಗ ಗೌರಿ ಕುಡ್ಸೋದ ತೊಗೊ, ನೀ ಟೇನ್ಶನ್ ತೊಗೊ ಬ್ಯಾಡ’ ಅಂತ ತಿಳಿಸಿ ಹೇಳಿದ್ಲು.
ಅಲ್ಲಾ ಹಂಗ ನಿಮಗೂ ಗೊತ್ತಿರಲಿ ಅಂತ ಅಧಿಕ ಮಾಸ ಬರೋಕಿಂತ ಎರೆಡ ದಿವಸ ಮೊದ್ಲ ಹೇಳೇನಿ. ಇನ್ನ ಶ್ರಾವಣ ಪಾಲಸೋರ ಮಾತ್ರ ಎರೆಡೂ ತಿಂಗಳು ಬಾಯಿ ಕಟ್ಟಬೇಕ ಅಂತ.

Leave a Reply

Your email address will not be published.

This site uses Akismet to reduce spam. Learn how your comment data is processed.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ