The World is FULL of Married ಕನ್ಯಾಗೊಳು…

ಇದೇನ ವಿಚಿತ್ರ ಟೈಟಲ ಅನಬ್ಯಾಡರಿ, ನಾವ ಕಾಲೇಜ ಕಲಿಬೇಕಾರ ಹಾಲಿವುಡ್ ಒಳಗ ಜ್ಯಾಕಿ ಕಾಲಿನ್ಸ್ ಅಂತ ಒಬ್ಬೋಕಿ ನಾವೇಲ್ಸ್ ರೈಟರ ಇದ್ಲು, ಅಕಿ ಬುಕ್ ಟೈಟಲ್ ಹಿಂಗ ಇರ್ತಿದ್ವು.
The world is full of married men,
The world is full of divorced women,
Hollywood kids,
Hollywood wives…. ಇವೇಲ್ಲಾ ಅಕಿ ಬುಕ್ಸ್ ಟೈಟಲ್ಸ್,

ನಾ ಅದ ರೀತಿ ಈ ಆರ್ಟಿಕಲ್ ಹೆಡ್ಡಿಂಗ್ ’The World is FULL of Married ಕನ್ಯಾಗೊಳು’ ಅಂತ ಇಟ್ಟಿದ್ದ.

ಅಲ್ಲಾ, ನೀ ಕಲಿಬೇಕಾರ ಕಾಲೇಜ ಬುಕ್ಕ ಓದತಿದ್ಯೋ ಇಲ್ಲಾ ಹಾಲಿವುಡ್ ನಾವೇಲ್ಸ್ ಓದತಿದ್ಯೋ ಅಂತ ಬೈ ಬ್ಯಾಡರಿ. ಅದೇನ ಆಗಿತ್ತಂದರ ನಾ ಕಾಲೇಜನಾಗ್ ಇದ್ದಾಗ ನನ್ನ ಇಂಗ್ಲೀಷ್ ಭಾಳ ತುಟ್ಟಿ ಇತ್ತ, ಅದಕ್ಕ ನಮ್ಮ ಲೈಬ್ರರಿಯನ್ ಮಾಳವಾಡ ಸರ್ ಇಂಗ್ಲೀಷ ಮ್ಯಾಗಝಿನ್ಸ್, ನಾವೇಲ್ಸ್ ಓದು, ಇಂಗ್ಲೀಷ್ ಇಂಪ್ರೂವ್ ಆಗ್ತದ ಅಂತ ಹೇಳಿದ್ದರು. ಹಿಂಗಾಗಿ ಹಿಂತಾ ಬುಕ್ ಓದತಿದ್ದೆ. ಅಲ್ಲಾ, ಪಾಪ ಅವರ ಆರ್.ಕೆ. ನಾರಾಯಣ, ವರ್ಡ್ಸವರ್ಥ್, ಶೆಕ್ಸಪೀಯರನ ಬುಕ್ ಓದ ಅಂತ ಹೇಳಿದ್ದರು ಆದರ ನಾ ಹಾಲಿವುಡ್ ರೈಟರ್ಸ್ ಬುಕ್ ಓದತಿದ್ದೆ. ಹಂಗ ಆವಾಗ ನನಗ ಹಾಲಿವುಡ್, ಹಾಲಿವುಡ್ ಮೂವೀಸ್ ಅಂದರ ಭಾರಿ ಲೈಕ್ ಆಗ್ತಿದ್ದವು. ಅದರಾಗ ನಾ ಅಂತೂ ಕೋತಂಬರಿ ಕಾಲೇಜನಾಗ ಕಲಿಬೇಕಾರ ಅಮೃತ ಟಾಕಿಜನಾಗ ವಾರಕ್ಕ ಎರೆಡೆರಡ ಹಾಲಿವುಡ್ ಪಿಕ್ಚರ್ ನೋಡಿ ಪಾಸ್ ಆದಂವಾ. ಅಲ್ಲಾ ಹಂಗ ಪಿಚ್ಚರ ನೋಡಿದ್ದಿಲ್ಲಾಂದರ universityಗೆ rank ಏನ ಬರ್ತಿದ್ದಿಲ್ಲಾ ಆದರ ನನ್ನ ಇಂಗ್ಲೀಷ್ ಇಷ್ಟ ಇಂಪ್ರೂವ್ ಆಗ್ತಿದ್ದಿಲ್ಲಾ.

ಇರಲಿ ಈಗ ವಿಷಯಕ್ಕ ಬರ್ತೇನಿ….

ಇದ ಏನ ’The world is full of married ಕನ್ಯಾಗೊಳು’ಅಂತ ಟೈಟಲ್ ಅದ ಅಲಾ ಇದ ನಮ್ಮ ದೋಸ್ತ ಸುಹಾಸನ ಸ್ಟೇಟಮೆಂಟ್, ಅಂವಾ ಹಿಂಗ ಹೇಳಿದ್ದರಾಗ ಭಾಳ ಅರ್ಥ ಅದ.

ಅಂವಂಗ ಈಗ 35-36 ವಯಸ್ಸ, ಇನ್ನು ಲಗ್ನಾಗಿಲ್ಲಾ. ಅದಕ್ಕ ಕಾರಣ ಒಂದು ನಮ್ಮಲ್ಲೇ ಕನ್ಯಾ ಮುಗದಾವ, ಇನ್ನೊಂದ ಇದ್ದ ಕನ್ಯಾ ಹುಬ್ಬಳ್ಳಿ ಧಾರವಾಡ ವರಕ್ಕ ಮಾಡ್ಕೊಳಿಕ್ಕೆ ರೆಡಿ ಇಲ್ಲಾ.

ಇವತ್ತ ನಮ್ಮ ಸಮಾಜದಾಗ ಕನ್ಯಾ ಖಾಲಿ ಆಗಲಿಕ್ಕೆ ಕಾರಣ ನಮ್ಮ-ನಮ್ಮ ಅವ್ವಾ ಅಪ್ಪನ. ಇವರೇನ ೨೫-೩೦ ವರ್ಷದ ಹಿಂದ ಹಡಿಬೇಕಾರ ದೇವರ ಹೆಣ್ಣ ಕೊಡಲಿಕ್ಕೆ ಬಂದಾಗ ’ಬ್ಯಾಡಾ’ ಅಂತ ಬರೇ ಗಂಡ ಹಡದರಲಾ ಅದ ಅವರ ಮಾಡಿದ್ದ ದೊಡ್ಡ ತಪ್ಪ. ಈಗ ಅದ ಗಂಡ ಹುಡಗಗ ಕಟಗೊಳ್ಳಿಕ್ಕೆ ಒಂದ ಕನ್ಯಾ ಹುಡಕ ಅಂತ ಮತ್ತ ಅದ ದೇವರನ ಕೇಳಿದರ ಅಂವಾ ಎಲ್ಲಿಂದ ಸೃಷ್ಟಿ ಮಾಡಬೇಕ? ಅವೇನ್ ಹೈಬ್ರಿಡ್ ತಳಿನ, ಮಳಿ ಬಂತ ಬೆಳಿತ ಅನ್ನಲಿಕ್ಕೆ? ಅದಕ್ಕ ಇವತ್ತ ನಮ್ಮಲ್ಲೇ ಒಂದ ವರಕ್ಕ ಮುಕ್ಕಾಲ ಕನ್ಯಾನು ಹುಟ್ಟವಲ್ವು.

ಇನ್ನ ಹುಬ್ಬಳ್ಳಿ-ಧಾರವಾಡ ವರಗಳೊದ್ದ ಮತ್ತೊಂದ ಸಮಸ್ಯೆ ಅಂದರ ನಮ್ಮ ಕಡೆ ಕನ್ಯಾಕ್ಕ ಹುಬ್ಬಳ್ಳಿ-ಧಾರವಾಡದಾಗಿನ ಲೋಕಲ್ ವರಾ ಬ್ಯಾಡ್ರಿಪಾ, ಅಲ್ಲಾ ಹಂಗ ಈ ಸಮಸ್ಯೆ ಇಡೀ ಉತ್ತರ ಕರ್ನಾಟಕದ ವರಗೊಳದ್ದ ಬಿಡ್ರಿ. ಇಲ್ಲೆ ನಾವು ತಿಂಗಳಿಗೆ ೧೫-೨೦ ಸಾವಿರ ಗಳಸಿದರೂ ನಮ್ಮ ಕನ್ಯಾಗೊಳಿಗೆ ಬೆಂಗಳೂರ, ಮೈಸೂರ್ ಕಡೆದ ವರಾನ ಬೇಕ್ರಿ. ಏನ ನಮ್ಮ ಕಡೆ ಹುಡಗರಿಗೆ ಲಗೂನ ಮಕ್ಕಳಾಗಂಗಿಲ್ಲೋ, ಇಲ್ಲಾ ಹುಬ್ಬಳ್ಳಿ ಧಾರವಾಡ ವರಗೊಳಿಗೆ ಸಂಸಾರ ಮಾಡಲಿಕ್ಕೆ ಬರೊಂಗಿಲ್ಲೋ ಆ ಕನ್ಯಾಗೊಳಿಗೆ ಗೊತ್ತ. ಅಲ್ಲಾ ಹುಬ್ಬಳ್ಳಿ ಧಾರವಾಡದ ಕನ್ಯಾ ದೂರ ಉಳಿತ ಪಿ.ಬಿ ರೋಡ ಮ್ಯಾಲಿನ ಶಿಗ್ಗಾಂವ, ಸೌಂಶಿ ಕನ್ಯಾ ಸಹಿತ ಇವತ್ತ ಬೆಂಗಳೂರ ಕಡೇದ ವರಾನ ಬೇಕ ಅಂತಾವ.

ಅಲ್ಲಾ ಹಂಗ ನಿಮಗೊತ್ತಿರಲಿ ಇವತ್ತ ನಮ್ಮ ರಾಜ್ಯದ್ದ ’ ನಾರ್ಮಲ್ ಡಿಲೇವರಿ vs ಸಿಜರಿನ್ ಡಿಲೇವರಿ’ statistics ಕಂಪೇರ ಮಾಡಿದರ ಹುಬ್ಬಳ್ಳಿ-ಧಾರವಾಡದ ನಾರ್ಮಲ್ ಡಿಲೇವರಿ ಪರ್ಸೆಂಟೇಜ್ ಬೆಂಗಳೂರಕಿಂತಾ ಜಾಸ್ತಿ ಅದ. ’ಲೇ.. ಮಗನ… ನಿಮ್ಮ ಕಡೆ BRTS work ನಡದದ ಅದಕ್ಕ ನಾರ್ಮಲ್ ಡಿಲೇವರಿ ಜಾಸ್ತಿ ಆಗ್ತಾವ’ ಅಂತ ಅನಬ್ಯಾಡ್ರಿ ಮತ್ತ…ಅ ವಿಷಯ ಬ್ಯಾರೆ.

ಇನ್ನ, ಇವತ್ತ ಹುಬ್ಬಳ್ಳಿ-ಧಾರವಾಡದ ಗಂಡಾ ಆರ ಗಂಟೆಕ್ಕ ಆಫೀಸ ಬಿಟ್ಟರ ಆರು ಇಪ್ಪತ್ತಕ್ಕ ಮನ್ಯಾಗ ಇರತಾನ.

ಇನ್ನ ಹೆಂಡ್ತಿ ’ನಳಾ ಬಂದದ ನೀರ ತುಂಬ ಬರ್ರಿ’ ಅಂತ ಫೋನ ಮಾಡಿದರ ಸಾಕ ಬಾಸ್ ಗೇ ಹೇಳಿ
“ನೀರ ತುಂಬಿ ಬರ್ತೇನಿ” ಅಂತ ಮನಿಗೆ ಹೋಗೆ ಬಿಡ್ತಾನ, ಅಲ್ಲಾ ನಮ್ಮಲ್ಲೇ ಹತ್ತ ದಿವಸಕ್ಕೊಮ್ಮೆ ನಳಾ ಬರೋದ ಎಲ್ಲಾರಿಗೂ ಗೊತ್ತಲಾ.

ಇನ್ನ ಗಂಡಾ ರೇಶನ್ನಾಗ ಅಕ್ಕಿ-ಎಣ್ಣಿ ಕೊಡೊರಿದ್ದಾರ ಅಂದರ ಆಫೀಸ ಟೈಮ ಒಳಗ ಹೋಗಿ ಪಾಳೆ ಹಚ್ಚತಾನ…ಹಿಂಗ ನೂರಾ ಎಂಟ ಸಂಸಾರಿಕ ಕೆಲಸಾ ನಮ್ಮ ಗಂಡಂದರ ಹುಬ್ಬಳ್ಳಿ-ಧಾರವಾಡದೊಳಗ ಆಫೀಸ್ ಟೈಮನಾಗ ಮಾಡ್ತಾರ.

ಇದೇಲ್ಲಾ ಬೆಂಗಳೂರ ಹುಡುಗರನ ಲಗ್ನಾ ಮಾಡ್ಕೊಂಡ್ರ ಸಾಧ್ಯನಾ? ಅಲ್ಲೇ ನಳಾ ಬಂದ್ರ ಮನಿಗೆ ಬರೋದ ದೂರ‍ ಉಳಿತ, ಯಾರರ ಸಾಯಿತೇನಿ ನೀರ ಬಿಡ ಬಾ ಅಂತ ಅಂದರ ಸಹಿತ ಅಂವಾ ಟ್ರಾಫಿಕನಾಗ ಪಾರಾಗಿ ಮನಿಗೆ ಬರೋದರಾಗ ಅವರ ಸತ್ತ ಸ್ವರ್ಗಾ ಸೇರಿರತಾರ.

ಹೋಗಲಿ ಬಿಡ್ರಿ ಹಿಂಗ ಹುಬ್ಬಳ್ಳಿ ಮತ್ತ rest of the ಹುಬ್ಬಳ್ಳಿ ಕಂಪೇರ ಮಾಡ್ಕೋತ ಹೋದರ ಮುಗಿಲರಾದ್ದ ಕಥಿ.

ಇನ್ನ ನಮ್ಮ ಸುಹಾಸ ’the world is full of…..’ ಅಂತ ಯಾಕ ಹೇಳಿದಾ ಅಂದರ, ನಮ್ಮ ಹುಬ್ಬಳ್ಳಿ-ಧಾರವಾಡ ಮಂದಿಗೆ ಹುಬ್ಬಳ್ಳಿ-ಧಾರವಾಡನ ಅವರ ಜಗತ್ತ. Hubli-Dharwad is world for us, ನಾವ ಇಲ್ಲೇ ಹುಟ್ಟಿ, ಇಲ್ಲೇ ಬೆಳದ, ಮುಂದ ಇಲ್ಲೇ ಸಾಯೋರ.

ಇನ್ನ ಈ ’……married ಕನ್ಯಾ’ದ್ದ ಲಾಜಿಕ್ ಏನಂದರ ’ಯಾವಾಗ ಕನ್ಯಾ ಲಗ್ನ ಆಗದಿದ್ದರೂ ನಮಗ ಹುಬ್ಬಳ್ಳಿ ಧಾರವಾಡದ ವರಾ ಬ್ಯಾಡಾ’ ಅಂತಾವ ಅಂದರ ಅವು ನಮ್ಮ ಪಾಲಿಗೆ ಕನ್ಯಾನ ಅಲ್ಲ, ಹಿಂಗಾಗಿ ಅವು ನಮಗ married ಇದ್ದಂಗ ಅಂತ ನಮ್ಮ ಸುಹಾಸನ ಲೆಕ್ಕಾ….ಅಗದಿ ಒಪ್ಪೊ ಮಾತ….ಏನೋ ಪುಣ್ಯಾ ಅಂವಾ ’ನಮ್ಮ ಕಡೆ ಕನ್ಯಾ ಇದ್ದರು ಸತ್ತಂಗ’ ಅಂತ ಅಂದಿಲ್ಲಾ.

ಹಿಂಗಾಗಿ ಈ ಪ್ರಹಸನದ ಹೆಡ್ಡಿಂಗ The world is full of married ಕನ್ಯಾಗೋಳು’ ಅಂತ ಇಟ್ಟಿದ್ದ….

ಆದ್ರೂ ನಾ ಸಿರಿಯಸ್ ಆಗಿ ಹೇಳ್ತೇನಿ ಯಾರರ ಹುಬ್ಬಳ್ಳಿ-ಧಾರವಾಡ ವರಗೊಳನ ಲೈಟ ತೊಗೊಂಡ್ರ ನೋಡ್ರಿ ಮತ್ತ……….
’ಏನ್ಮಾಡ್ತೀ?’….ಅಂತ ಕೇಳ್ತಿರೇನ್?

ಏನ್ಮಾಡ್ತೇವಿ? ಹಿಂಗ ನಮ್ಮ ಲೋಕಲ್ ವರಕ್ಕ ಕನ್ಯಾ ಕೊಡಲಿಲ್ಲಾ ಅಂದರ ಆ ತಾಯಿ ’ಮಹದಾಯಿ ಆಣಿ’ ಮಾಡಿ ಹೇಳ್ತೇನಿ ಉತ್ತರ ಕರ್ನಾಟಕ ಬ್ಯಾರೆ ರಾಜ್ಯ ಮಾಡಿ, ಹೊರಗಿನ ವರಗೊಳ ನಮ್ಮ ಕನ್ಯಾ ಮುಟ್ಟಲಾರದಂಗ, ನಮ್ಮ ಕನ್ಯಾಗೊಳ ಉತ್ತರ ಕರ್ನಾಟಕದ ಬಾರ್ಡರ್ ದಾಟಿ ಹೋಗಲಾರದಂಗ ಲಕ್ಷಣ ರೇಖಾ ಹಾಕಿ ಬಿಡ್ತೇವಿ …..ನೆನಪಿಡ್ರಿ.

ಇನ್ನ…ಇಲ್ಲೇ ನಮ್ಮ ಹುಬ್ಬಳ್ಳಿ ಧಾರವಾಡದಾಗ ಹುಟ್ಟಿ, ಬೆಳದ, ಕಲತ ದೊಡ್ಡವರಾಗಿ ಇವತ್ತ ಬೆಂಗಳೂರ- ಮೈಸೂರಾಗ ಸೆಟ್ಲ್ ಆಗಿ ಮತ್ತ ನಮ್ಮ ಹುಬ್ಬಳ್ಳಿ ಧಾರವಾಡಕ್ಕ ಹೆಸರ ಇಡ್ತಾರಲಾ ಅವರಿಗೇನ ಅಂತೂ ಏನ ಮಾಡಬೇಕ ಅಂತೇನಿ. ಅಲ್ಲಾ…ಇವರಿಗೆ ನಮ್ಮ ಹುಬ್ಬಳ್ಳಿ-ಧಾರವಾಡದ ಮಿಶ್ರಾ ಫೇಡೆ, ಭಿಲ್ಲೇನ ಘಾಟೆ, ಹುಸೇನ್ ಚುರಮರಿ, ಗುರಸಿದ್ದನ ದೊಸಿ, ಸ್ವಾಮಿ ಗಿರಮಿಟ್ಟ ಬೇಕ ಆದರ ಇಲ್ಲಿ ವರಾ ಬ್ಯಾಡಾ?

ನಮ್ಮೂರು, ನಾವು ಹುಟ್ಟಿದ್ದ ಊರು, ನಾವ ಬೆಳದ ಊರು ಅಂತ ಅಭಿಮಾನ ಇರಬೇಕ್ರಿ..

ಅನ್ನಂಗ ಇನ್ನೊಂದ ಹೇಳೊದ ಮರತೆ. ನನಗ ಈ ವರ-ಕನ್ಯಾದ ವಿಷಯದೊಳಗ ಎಲ್ಲಾದರಕಿಂತಾ ಕೆಟ್ಟ ಅನಿಸಿದ್ದ ಏನ ಗೊತ್ತಿನ್ರಿ?

ನಂಗ ಇನ್ನೂ ನೆನಪದ ಅವತ್ತ ಗುರವಾರ ಜುಲೈ 2, 2009. ನಾನು ನನ್ನ ಹೆಂಡತಿ ಸಾಯಿಬಾಬಾನ ಗುಡಿಗೆ ಹೋಗಿ ಪ್ರದಕ್ಷಿಣಿ ಹಾಕಿ ಬರೋದಕ್ಕ ಎದರಿಗೆ ಒಂದಿಷ್ಟ ದೋಸ್ತರು ಅಗದಿ ಕುಣಕೋತ ಬರಲಿಕತ್ತಿದ್ದರು.

“ಏನಪಾ..ಏನ ವಿಶೇಷ ಯಾರಿಗರ ಕನ್ಯಾ ಸಿಕ್ತೇನ್ ಮತ್ತ?” ಅಂತ ನಾ ಕೇಳಿದರ

“ಇನ್ನ ಕನ್ಯಾ ಯಾಕ ಬೇಕ ಅಣ್ಣಾ?” ಅಂತ ಒಬ್ಬಂವ ಅಂದಾ, ಇನ್ನೊಬ್ಬಂವಾ

“ಏ, ನಿಂಗ ಸುದ್ದಿ ಗೊತ್ತಿಲ್ಲೇನ” ಅಂತ ನಂಗs ಕೇಳಿದಾ.

ಹಂತಾದ ಏನ ಆಗೇದರಲೇ ಬಾಯಿ ಬಿಟ್ಟ ಹೇಳರಿ ಅಂತ ಕೇಳಿದರ
“ಅಣ್ಣಾ, ಇವತ್ತ ಬೆಳಿಗ್ಗೆ ದಿಲ್ಲಿ ಹೈಕೋರ್ಟನಾಗ ‘ಹೊಮೊ ಸೆಕ್ಸೂವಲಿಟಿ’ಗೆ ಜೈ ಅಂದಾರ, ಇನ್ನ ಮುಂದ ಸಲಿಂಗ ಮದುವಿ ಗೈರ ಕಾನೂನ ಅಲ್ಲಾ ಅಂತ ಡಿಸಿಜನ್ ಕೊಟ್ಟಾರ” ಅಂತ ನನ್ನ ಬಾಯಾಗ ಕಲಸಕ್ಕರಿ ಹಾಕಿ ಹೋಗಿ ಬಿಟ್ಟಾ.

ನಾ ಖರೆ ಹೇಳ್ತೇನಿ ನಂಗ ಏನ ಮಾತಾಡಬೇಕ ತಿಳಿಲಾರದಂಗಾಗಿ ಎದಿ ತುಂಬಿ ಬಂತ. ಬಾಜುಕ ಇದ್ದ ಹೆಂಡ್ತಿ ಹೆಗಲ ಹಿಡಕೊಂಡ ಸಮಾಧಾನ ಮಾಡ್ಕೊಂಡ ಮನಸ್ಸಿನಾಗ ಟಚ್ ವುಡ್ ಅಂದ ಅಲ್ಲಿಂದ ಮನಿಗೆ ಹಾದಿ ಹಿಡದಿದ್ದೆ.

Leave a Reply

Your email address will not be published.

This site uses Akismet to reduce spam. Learn how your comment data is processed.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ