ಮೊನ್ನೆ ಮುಂಜಾನೆ ಏಳೋ ಪುರಸತ್ತ ಇಲ್ಲದ ಸೀನ್ಯಾನ ಫೊನ ಬಂತ. ನಾ ಫೋನ ಎತ್ತೋದ ತಡಾ ಅಗದಿ ಸಣ್ಣ ಆವಾಜಲೇ
’ಲೇ ಹಿಂದಿನ ದಿವಸನೂ ತೊಗೊಬಾರದು ಮತ್ತ ಅವತ್ತು ತೊಗೊಬಾರದೇನ?’ ಅಂತ ಕೇಳಿದಾ. ಮುಂಜ ಮುಂಜಾನೆ ಇದೆಂತಾ ಕ್ವೆಶನ್ ಅಂತ ನಂಗ ಒಂದೂ ತಿಳಿಲೇ ಇಲ್ಲಾ…
’ಲೇ…ನಿನ್ನೌನ..ಏನ ಹಂಗ ಕೇಳಿದರ, ಏನ ತೊಗೊಬಾರದ ಏನ ಕರೆಕ್ಟ ಹೇಳ….’ ಅಂತ ನಾ ಜೋರ ಮಾಡಿದರ. ಮತ್ತ ಅಂವಾ ಹಗರಕ
’ಲೇ..ಸಿಕ್ಸ್ಟಿ…ನೈಂಟಿಲೇ’ ಅಂತ ಅಂದಾ.
’ಯಾಕ ನೀ ಮತ್ತ ರಕ್ತಾ ಕೊಡೊಂವ ಇದ್ದೀ ಏನ?’ ಅಂತ ಕೇಳಿದೆ.
ಯಾಕಂದರ ಈ ಮಗಗ ರಕ್ತಾ ಕೊಡೊ ಚಟಾ ಇತ್ತ…ಅಲ್ಲಾ ಹಂಗ ರಕ್ತಾ ಕೊಡೊದ ಪುಣ್ಯಾದ್ದ ಕೆಲಸ ಬಿಡ್ರಿ, ತಪ್ಪೇನಿಲ್ಲಾ ಅದರಾಗ ಇವಂದ ಬ್ಲಡ್ ಗ್ರೂಪ್ A ನೆಗೆಟಿವ್ ಇತ್ತ..ಒಂದ ಸ್ವಲ್ಪ ರೇರ್ ಅನ್ನರಿ ಹಿಂಗಾಗಿ ಯಾರ ಎಮರ್ಜನ್ಸಿ ಅಂತ ಕರದರು ಪಾಪ ಉಟ್ಟ ಅರಬಿ ಮ್ಯಾಲೆ ಹೋಗಿ ರಕ್ತಾ ಕೊಟ್ಟ ಬರ್ತಿತ್ತ. ಇಂವಾ ಹಂಗ ವರ್ಷಕ್ಕ ಎರೆಡ ಮೂರ ಸರತೆ ರಕ್ತಾ ಕೊಡೊದಕ್ಕ ಅವರವ್ವ
’ಏ…ನೀ ಹಿಂಗ ರಕ್ತಾ ಕೊಟ್ಕೋತ ಹೊಂಟರ ನಾಳೆ ನಿಂಗ ರಕ್ತ ಕಡಮಿ ಆದರ ಹೆಂಗೋ ಸೀನು’ ಅಂತ ಹೊಟ್ಟಿಬ್ಯಾನಿ ಹಚಗೊಂಡ ಬಿಟ್ಟಿದ್ಲು.
ಪಾಪ ಎಷ್ಟ ಅಂದರು ಹಡದ ತಾಯಿ, ಹಿಂಗ ಮಗಾ ರಕ್ತಾ ದಾನ ಮಾಡ್ಕೋತ ಹೊಂಟರ ಹೆಂಗ ಅಂತ ಚಿಂತಿ ಹತ್ತಿತ್ತ. ಅದರಾಗ ಮನ್ಯಾಗ ಸೊಸಿ ಬ್ಯಾರೆ ಮಗನ ರಕ್ತಾ ಹೀರೋಕಿನ ಸಿಕ್ಕಿದ್ಲು. ಅಲ್ಲಾ ಅದ ಎಲ್ಲಾರ ಮನ್ಯಾಗೂ ಕಾಮನ್ ಬಿಡ್ರಿ.
ಹಂಗ ಈಗ ಒಂದ ಹದಿನೈದ ವರ್ಷದ ಹಿಂದ ಒಮ್ಮೆ ಇವಂಗ ಫಸ್ಟ ಟೈಮ್ ರಕ್ತಾ ಕೊಡೊ ಪ್ರಸಂಗ ಬಂದಿತ್ತ. ಆವಾಗ ನಾವ ಒಂದ ನಾಲ್ಕ ದೋಸ್ತರ ವೀಕೆಂಡ್ ಪಾರ್ಟಿ ಅಂತ ಸಾವಜಿ ಖಾನಾವಳಿ ಒಳಗ ಊಟಕ್ಕ ಕೂತಿದ್ವಿ. ಒಮ್ಮಿಕ್ಕಲೇ ವೆಂಕ್ಯಾನ ಫೋನ್ ಬಂತ, ಅವನ ಹೆಂಡ್ತಿ ದಿಂದಾಗ ಇದ್ಲ, ಇವತ್ತ ನಾಳೆ ಅನ್ನೊ ಹಂಗ ಇತ್ತ. ನಾ ಫೋನ್ ಎತ್ತಿದವನ
’ಹೆಣ್ಣೊ ಗಂಡೊ ಅಂತ ಕೇಳಿದೆ….’
’ಲೇ…ಎರಡೂ ಲೇ ಪಾ, ಅವಳಿ-ಜವಳಿ ಅಂತ, ಕೇಸ್ ಕಾಂಪ್ಲಿಕೇಟ್ ಆಗೇದ..ಸಿಜರಿನ್ ಮಾಡ್ಲಿಕತ್ತಾರ, ಅರ್ಜೆಂಟ್ A ನೆಗೆಟಿವ್ ಬ್ಲಡ್ ಬೇಕ. ಫ್ರೆಶ್ ಇದ್ದರ ಛಲೋ ಅಂದಾರ ಡಾಕ್ಟರ’ ಅಂತ ಒಂದ ಉಸಿರಿನಾಗ ಹೇಳಿದಾ. ಅವನೌನ ರಾತ್ರಿ ಹತ್ತ ಹೊಡಿಲಿಕ್ಕೆ ಬಂದಿತ್ತ ಈಗೇಲ್ಲಿ A ನೆಗೆಟಿವ್ ರಕ್ತಾ ಹುಡ್ಕೋದಪಾ, ಅದು ಫ್ರೇಶ್ ಅಂತ ನಂಗ ಚಿಂತಿ ಹತ್ತ. ಅಷ್ಟರಾಗ ಅಲ್ಲೆ ಇದ್ದ ರಾಮ್ಯಾ
’ಲೇ..ಸೀನ್ಯಾಂದ A ನೆಗೆಟಿವ್ ರಕ್ತಲೇ’ ಅಂತ ಒದರಿದಾ….ಸೀನ್ಯಾ ಒಂದ ಸರತೆ ಎದಿ ಒಡ್ಕೊಂಡ ಗಾಬರಿ ಆಗಿ
’ಏ..ನಾ ಒಮ್ಮೇನೂ ರಕ್ತಾ ಕೊಟ್ಟಿಲ್ಲಾ..ನಂಗ ಹೆದರಕಿ ಆಗ್ತದ..ನಾ ಕೊಡಂಗಿಲ್ಲಾ ’ ಅಂತ ಸ್ಪಷ್ಟ ಹೇಳಿದಾ. ನಾ ಅವಂಗ
’ದೋಸ್ತ ರಕ್ತಾ ಕೊಡೋದ ಪುಣ್ಯಾದ್ದ ಕೆಲಸಾ….ಪಾಪ ವೆಂಕ್ಯಾನ ಹೆಂಡ್ತಿದ ಪರಿಸ್ಥಿತಿ ಸಿರಿಯಸ್ ಅದ …ಇದ ಪರಿಸ್ಥಿತಿ ನಿನ್ನ ಹೆಂಡ್ತಿಗೆ ಬಂದಿತ್ತ ಆವಾಗ ನಾವ ಯಾರರ ರಕ್ತಾ ಕೊಡಂಗಿಲ್ಲಾ ಅಂತ ಅಂದಿದ್ದರ ನಿಂಗ ಹೆಂಗ ಅನಸ್ತಿತ್ತ ಒಂದ ಸರತೆ ವಿಚಾರ ಮಾಡ….ಬಾ ಎಲ್ಲಾರೂ ಹೋಗೊಣ, ಅವರೇನ ಭಾಳ ತೊಗೊಳಂಗಿಲ್ಲಾ, ಭಾಳ ಅಂತಂದರ ಒಂದ KF ಟಿನ್ ನಷ್ಟ ತೊಗೊತಾರ, ನೀ ಇವತ್ತ ರಕ್ತಾ ಕೊಡ ನಾಳೆ ವೆಂಕ್ಯಾ ಪಾರ್ಟಿ ಕೋಡ್ತಾನ ಮಗನ’ ಅಂತ ಕನ್ವಿನ್ಸ್ ಮಾಡಿ ಕರಕೊಂಡ ಹೋದೆ.
ಅಲ್ಲೇ ಪಾಪ ವೆಂಕ್ಯಾನ ಹೆಂಡ್ತಿ ಕಂಡಿಶನ್ ಕ್ರಿಟಿಕಲ್ ಇತ್ತ, ಹೆಡ್ ನರ್ಸ್ ಇವಂದ ರಕ್ತಾ ತೊಗೊರಿ ಅನ್ನೋದ ತಡಾ ಭಡಾ ಭಡಾ ಪೈಪ್ ಹಚ್ಚೆ ಬಿಟ್ಟಳು. ಮುಂದ ವೆಂಕ್ಯಾನ ಹೆಂಡ್ತಿದ ಅವಳಿ-ಜವಳಿ ಡೆಲೇವರಿ ಆತ, ಕೂಸಗೊಳು ಬಾಣಂತಿ ಎಲ್ಲಾ ಆರಾಮ ಅಂತ ಕನಫರ್ಮ್ ಆದ ಮ್ಯಾಲೆ ನಾವ ಅಲ್ಲಿಂದ ಹೋದ್ವಿ.
ಮರದಿವಸ ಮುಂಜಾನೆ ನಮ್ಮ ಸರ್ಕಲ್ ಒಳಗ ವೆಂಕ್ಯಾನ ಹೆಂಡ್ತಿ ಅವಳಿ ಜವಳಿ ಹಡದದ್ದಕಿಂತಾ ಜಾಸ್ತಿ ಸೀನ್ಯಾ ರಕ್ತಾ ಕೊಟ್ಟದ್ದ ವೈರಲ್ ಆತ. ಯಾಕಂದರ ಈ ಮಗಾ ಜೀವನದಾಗ ಫಸ್ಟ ಟೈಮ್ ರಕ್ತಾ ಕೊಟ್ಟಿದ್ದನಲಾ. ಮರದಿವಸ ವೆಂಕ್ಯಾಗ ಅವಳಿ-ಜವಳಿ ಹುಟ್ಟಿದ್ದ ಪಾರ್ಟಿ ಒಳಗ ಆ ಸುದ್ದಿ ಇನ್ನೊಬ್ಬ ದೋಸ್ತ ಸಂದೀಪಗ ಗೊತ್ತ ಆತ. ಅಂವಾ ಕಲತಿದ್ದ ಡಾಕ್ಟರಕಿ, ಆ ಮಗಾ ಸುಮ್ಮನ ಕೂಡಬೇಕ ಬ್ಯಾಡ
’ಲೇ..ಏನ ಹುಚ್ಚ ಇದ್ದಂಗ ಇದ್ದೀರಿ, ಕುಡದ ಮನಷ್ಯಾನ ಕರಕೊಂಡ ಹೋಗಿ ರಕ್ತಾ ಕೊಡಸೀರಿ…ರಕ್ತಾ ಕೊಡೊಕಿಂತ ಮೂರ ದಿವಸ ಮುಂಚೆ ಒಟ್ಟ ಕುಡಿಬಾರದ, ರಕ್ತದಾಗ ಅಲ್ಕೋಹಾಲ್ ಮೂರ ದಿವಸ ತನಕಾ ಇರ್ತದ’ ಅಂತ ನಮಗ ಕೊರಿಲಿಕತ್ತಾ.
’ಲೇ…ನಿನ್ನೌನ ಇದ ಎಮರ್ಜನ್ಸಿ, ಅಕಿಗೆ ಬ್ಯಾನಿ ಹತ್ತಿದ್ದ ಮೂರ ತಾಸಿನ ಹಿಂದ ನಾವ ಹೆಂಗ ಮೂರ ದಿವಸ ಮೊದ್ಲ ಅಲ್ಕೋಹಾಲ್ ಬಿಡ್ಲಿಕ್ಕೆ ಬರ್ತದ ಒಂದ ಸ್ವಲ್ಪ ಕಾಮನ್ ಸೆನ್ಸ್ ಯೂಜ್ ಮಾಡ’ ಅಂತ ಸೀನ್ಯಾ.
’ಹೋಗ್ಲಿ ಬಿಡ ಆಗಿದ್ದ ಆಗಿ ಹೋತ ಇನ್ನ ಮುಂದ ರಕ್ತಾ ಕೊಡಬೇಕಾರ ಲಕ್ಷಾ ಇಟಗೋ ಮಗನ್, ಆಮ್ಯಾಲೆ ರಕ್ತಾ ಕೊಟ್ಟ ಮೂರ ದಿವಸನೂ ಅಲ್ಕೊಹಾಲ್ ಕುಡಿಬಾರದ’ ಅಂತ ಅವನ ಗ್ಲಾಸ್ ಒಳಗಿನ ಬೀಯರ್ ಅಷ್ಟು ತನ್ನ ಗ್ಲಾಸಿಗೆ ಸುರಕೊಂಡಾ.
ಸೀನ್ಯಾಗ ನೋಡಿದರ ನಾವ ಪಾರ್ಟಿ ಕೊಡ್ತೇವಿ, ವೆಂಕ್ಯಾ ಪಾರ್ಟಿ ಕೊಡ್ತಾನ ಅಂತ ಹೇಳಿನ ರಕ್ತಾ ಕೊಡಲಿಕ್ಕೆ ಹೂಂ ಅನಸಿದ್ವಿ, ಈ ಮಗಾ ಸಂದೀಪ ಅದರಾಗ ಕಲ್ಲ ಹಾಕಿದಾ.
ಅಲ್ಲಾ ಹಂಗ ನನ್ನ ಪ್ರಕಾರ ರಕ್ತಾ ಕೊಡೊಕಿಂತಾ ಒಂದ ದಿವಸ ಮೊದ್ಲ, ರಕ್ತಾ ಕೊಟ್ಟ ಆದಮ್ಯಾಲೆ ಒಂದ ದಿವಸ ತೊಗೊಬಾರದು, ತೊಗೊಂಡ್ರ ನಮಗ dehydration ಆಗ್ತದ ಇಷ್ಟ.. ರಕ್ತಾ ತೊಗೊಂಡೊರಿಗೆ ಏನ ಕಿಕ್ ಬರಂಗಿಲ್ಲಾ. ಏನ ಸುಡಗಾಡು ಆಗಂಗಿಲ್ಲಾ.
ಹಂಗ ಎಮರ್ಜನ್ಸಿ ಏನ ಹೇಳಲಿಕ್ಕೆ ಬರಂಗಿಲ್ಲಾ, ಮತ್ತ ಇನ್ನ ಎಮರ್ಜನ್ಸಿ ಬಂದ ರಕ್ತಾ ಕೊಡೊ ಪ್ರಸಂಗ ಬಂದರ, ನನ್ನ ಬ್ಲಡ್ ಗ್ರೂಪ್ ಭಾಳ ರೇರ್ ಅದ ಯಾರಿಗರ ಹೆಲ್ಪ್ ಆಗ್ತದ ಅಂತ ಅನ್ಕೊತ ಕೂತರ ನಮ್ಮ ಸ್ವಂತ ಜೀವನ ಸಾಲ್ಟ & ಸ್ವೀಟ್ ಲೈಮ್ ಜ್ಯೂಸ ಆಗ್ತದ ಇಷ್ಟ.
ಅಲ್ಲಾ ಹಂಗ ನಾ ಪರ್ಸನಲಿ ಹಿಂತಾವಕೇಲ್ಲಾ ತಲಿಗೆಡಸಿಕೊಳ್ಳಿಕೆ ಹೋಗಂಗಿಲ್ಲಾ, ಮ್ಯಾಲೆ ಹಂಗ ನನ್ನ ಬ್ಲಡ್ ಗ್ರೂಪ್ ಏನ ನನ್ನ ಪರ್ಸಾನಲಿಟಿ ಗತೆ ರೇರ್ ಇಲ್ಲಾ…
ನಂದ A ಪೊಸಿಟಿವ್, ಯಾರ ಕರದರು, ಯಾವಾಗ ಕರದರು ಹೂಂ ನ… ಎತಗೊಂಡವರ ಬಗಲಾಗಿನ ಕೂಸ ಅಂತಾರಲಾ ಹಂಗ ನಾ ಕರಕೊಂಡ ಹೋಗೊರ ಬ್ರ್ಯಾಂಡ್ ಮನಷ್ಯಾ..
ಅದ ಬೇಕ ಇದ ಬೇಕ ಒಟ್ಟ ಅನ್ನಂಗಿಲ್ಲಾ.
ಇನ್ನ ಮತ್ತ ವಾಪಸ ಸೀನ್ಯಾನ ಫೋನಗೆ ಬರೋಣ…
ಅಂವಾ ’ಲೇ ಹಿಂದಿನ ದಿವಸನೂ ತೊಗೊಬಾರದು ಮತ್ತ ಅವತ್ತನೂ ತೊಗೊಬಾರದೇನ?’ ಅಂತ ಕೇಳಿದಾಗ ನಾ ಈ ಮಗಾ ಮತ್ತ ರಕ್ತಾ ಕೊಡ್ತಿರಬೇಕ ಅಂತ ’ಯಾಕ ನೀ ಮತ್ತ ರಕ್ತಾ ಕೊಡೊಂವ ಇದ್ದೀ ಏನ?’ ಅಂತ ಕೇಳಿದೆ. ಅದಕ್ಕ ಅಂವಾ ’ಲೇ…ಇಲ್ಲಲೇ..ರಕ್ತಾ ಕೊಡಬೇಕಾರ ಯಾವಾಗ ತೊಗೊಬೇಕ ಯಾವಾಗ ಇಲ್ಲಾ ಎಲ್ಲಾ ಗೊತ್ತ ಅದ ನನಗ. ನಾಳೆ ನಮ್ಮಪ್ಪನ ಶ್ರಾದ್ಧ ಅದ, ಇದ ಮೊದ್ಲನೇ ಶ್ರಾದ್ಧ, ಹೋದ ವರ್ಷ ವರ್ಷಾಂತಕ ಇತ್ತ ಆವಾಗ ಮನಿ ತುಂಬ ಮಂದಿ ಇದ್ದರು. ಇದ ಹಂಗ ನಾ ಮಾಡ್ಲಿಕ್ಕತ್ತಿದ್ದ ಮೊದ್ಲನೇ ಶ್ರಾದ್ಧ. ಮತ್ತ ಶ್ರಾದ್ಧದ ಹಿಂದಿನ ದಿವಸ ಮತ್ತ ಶ್ರಾದ್ಧ ಮಾಡಿದ್ದ ದಿವಸ ರಾತ್ರಿ ಊಟಾ ಮಾಡಬಾರದು, ಮುಸರಿ ತಿನಬಾರದು ಅಂತ ಆಚಾರ್ಯರ ಹೇಳಿದರು ಇನ್ನ ಅವರಿಗೆ ಹೆಂಗ ಅಲ್ಕೋಹಾಲ್ ಮುಸರಿ ಒಳಗ ಬರತದೊ ಇಲ್ಲೋ ಅಂತ ಕೇಳಲಿಕ್ಕೆ ಬರತದಪಾ, ಅದಕ್ಕ ನಿಂಗ ಕೇಳಿದೆ, ಹಿಂತಾದರಾಗೇಲ್ಲಾ ನೀನ ಶಾಣ್ಯಾ ಅಲಾ’ ಅಂದಾ.
ನಂಗ ಒಮ್ಮಿಕ್ಕಲೇ ಏನ ಹೇಳಬೇಕ ತಿಳಿಲಿಲ್ಲಾ. ಈ ಪ್ರಶ್ನೆ ಒಂದ ಆರ ವರ್ಷದ ಹಿಂದ ನಂಗೂ ಬಂದಿತ್ತ, ನನ್ನ ಹೆಂಡ್ತಿ ನಾಳೆ ನಿಮ್ಮಪ್ಪನ ಶ್ರಾದ್ಧ ರಾತ್ರಿ ಹೊರಗ ಹೋಗಂಗಿಲ್ಲಾ, ಮುಸರಿ ತಿನ್ನಂಗಿಲ್ಲಾ ಅಂತೇಲ್ಲಾ ತಾಕಿತ ಮಾಡಿದಾಗ ನಂದು ಅಕಿದೂ ಜೋರ ಅರ್ಗ್ಯೂಮೆಂಟ್ ಆಗಿ ಕಡಿಕೆ ಅಕಿಗೆ ನಾ ಅಲ್ಕೋಹಾಲ್ ಮುಸರಿ ಅಲ್ಲಾ ಅಂತ ಸೈಂಟಿಫಿಕಲಿ & ರಿಲಿಜಿಯಸಲಿ ಪ್ರೂವ್ ಮಾಡಿದ್ದೆ.. ಆದರ ತೊಗೊಳಿಲ್ಲಾ ಆ ಮಾತ ಬ್ಯಾರೆ.
ನಾ ಸೀನ್ಯಾಗ ನನ್ನ ಪ್ರಕಾರ ಅಲ್ಕೊಹಾಲ್ ನಡಿತದಪಾ, ಹಂಗ ಶ್ರಾದ್ಧದ ದಿವಸ ಒಬ್ಬ ಭಟ್ಟರನ ಕೂಡಸ್ತಾರ, ನೀ ಹಿಂದಿನ ದಿವಸನು ಒಬ್ಬ ಭಟ್ಟರನ ಕೂಡಸ ಅಂದರ ನನ್ನ ಕರಕೊಂಡ ಹೋದರು ತಪ್ಪ ಇಲ್ಲಾ ಅಂತ ತಿಳಿಸಿ ಹೇಳಿದೆ. ಅಲ್ಲಾ ಹಿರೇಮನಷ್ಯಾ ಆಗಿ ಅಷ್ಟು ಮಾಡಲಿಲ್ಲಾ ಅಂದರ ಹೆಂಗ?
ಅಲ್ಲಾ ನೀವ ಇದೇಲ್ಲಾ ಕಥಿ ಓದಿ ನಾವೇನ ದಿವಸಾ ತೊಗೊಳೊರ ಅಂತ ತಿಳ್ಕೊಬ್ಯಾಡ್ರಿ ಮತ್ತ…ಹಂಗ ಸುಮ್ಮನ ಮಾತಿಗೆ ಹೇಳಿದೆ ಇಷ್ಟ. ಆದರ ಒಂದ ಮಜಾ ಅಂದರ ಈ ಹಿಂದಿನ ದಿವಸನು ತೊಗೊಬಾರದು ಮತ್ತ ಅವತ್ತೂ ತೊಗೊಬಾರದು ಅನ್ನೋದ ಬರೇ ರಕ್ತಾ ಕೊಡಬೇಕಾರ ಇಷ್ಟ ಅಲ್ಲಾ ಶ್ರಾದ್ಧ ಮಾಡೋರಿಗೂ ಅಪ್ಲೈ ಆಗ್ತದ ಅಂತ ನಾಲ್ಕ ಮಂದಿಗೆ ಗೊತ್ತ ಆಗ್ಲಿ ಅಂತ ಇಷ್ಟ ಬರಿಬೇಕಾತ ಅಂತ ಅನ್ನರಿ.