ಮೊನ್ನೆ ಮುಂಜಾನೆ ಏಳೋದರಾಗ ನನ್ನ ಮೊಬೈಲದಾಗ ಒಂದ ಹತ್ತ-ಹದಿನೈದ congratulations ಅಂತ message ಬಂದಿದ್ವು. ಅವನೌನ ನನಗ್ಯಾಕ ಎಲ್ಲಾರೂ congrats ಅಂತ sms ಮಾಡ್ಯಾರ್ ಅಂತ ತಿಳಿಲಿಲ್ಲಾ. ನನ್ನ ಹೆಂಡತಿಗೆ “ನಿಂದೇನರ ಮತ್ತ ವಿಶೇಷ ಅದ ಏನ್?” ಅಂತ ಕೇಳಿದೆ, ಯಾಕಂದರ ಬಿಜೇಪಿಗತೆ ಕೆಲವೊಮ್ಮೆ ನಮ್ಮ ಪರಿವಾರದಾಗೂ ಕೋರ್ ಕಮೀಟೀ ಸುದ್ದಿ ಊರ ಮಂದಿಗೆ ಗೊತ್ತಾದ್ರು ಕೋರ್ ಮಂದಿಗೆ ಗೊತ್ತಿರಂಗಿಲ್ಲಾ, ಆದ್ರ ನನ್ನ ಹೆಂಡತಿ “ಏ, ಹೋಗರಿ…ಎಲ್ಲಿ ವಿಶೇಷ, ನಾ ಏನ್ ಬಿಜೇಪಿ ಹೈಕಮಾಂಡಿನ? ನಾಲ್ಕ ವರ್ಷದಾಗ ಮೂರ-ಮೂರ ಮುಖ್ಯಮಂತ್ರಿ ಹುಟ್ಟಿಸಿದಂಗ ಹುಟ್ಟಸಲಿಕ್ಕೆ? ” ಅಂದ್ಲು, ಅದು ಖರೇನ ಬಿಡ ಅನಸ್ತು.
ಹಂಗರ ನನಗೇನರ ಹೊಸಾ ಸರ್ಕಾರ ಬಂದ ಮ್ಯಾಲೆ ಯಾವದರ ಪ್ರಾಧಿಕಾರದ ಅಧ್ಯಕ್ಷ ಮಾಡಿ ಗಿಡ್ಯಾರಿನ ಅಂತ ಪೇಪರನಾಗ ನನ್ನ ಹೆಸರ ಹುಡಿಕ್ಯಾಡಲಿಕತ್ತೆ, ನನ್ನ ಹೆಸರೇನ ಕಾಣಲಿಲ್ಲಾ. ಪೇಪರ ತುಂಬ ಬರೇ ‘ಶೆಟ್ಟರಿಗೆ ಶುಭಾಷಯ’ ಅಂತ ರೊಕ್ಕಾ ಕೊಟ್ಟ ಹಾಕಿಸಿಗೊಂಡವರ ಹೆಸರ ಇಷ್ಟ ಇದ್ವು. ನಾ ಏನ್ ರೊಕ್ಕಾ ಕೊಟ್ಟಿದ್ದಿಲ್ಲ ಹಿಂಗಾಗಿ ಅದರಾಗೂ ನನ್ನ ಹೆಸರ ಇದ್ದಿದ್ದಿಲ್ಲ. ಹಂಗ ರೊಕ್ಕಾ ಕೊಡೊದ ಇತ್ತಂದರ ಬಿಜೇಪ್ಯಾಗ ನಾ ಡೈರೆಕ್ಟ ಮಂತ್ರಿನ ಆಗಬಹುದಿತ್ತ ಬಿಡ್ರಿ.
ಅಲ್ಲಾ, ನಾ ಏನ್ ಯಾ ಪ್ರಾಧಿಕಾರ ಕೇಳಿಲ್ಲ ಖರೇ, ಆದ್ರ ನಾ ಕೇಳಿಲ್ಲಾ ಅಂತ ನನಗ ಕೊಡಬಾರದಂತೇನ ಇಲ್ಲಲಾ? ಬಿಜೇಪಿ ಒಳಗ ಕೆಲವೊಮ್ಮೆ ಒಬ್ಬರನ ಮಾಡಬಾರದು ಅನ್ನೊ ಸಂಕಟಕ್ಕ ಇನ್ನೊಬ್ಬರಿಗೆ ಪಟ್ಟಾ ಕಟ್ಟತಾರ. ಹಿಂದಕ ನಮ್ಮ ಶೆಟ್ಟರ ಕಸರತ್ತ ಮಾಡಿ ಅರವತ್ತ ಶಾಸಕರನ ಹುಡಕೊಂಡ ಬಂದರೂ ಸಂಸದ ಸದಾನಂದ ಗೌಡ್ರಿಗೆ ಕರದ ಪಟ್ಟಾ ಕಟ್ಟಿದ್ದರಲಾ ಹಂಗ ನಂಗೇನರ ಯಾವದರ ನಿಗಮ ಮಂಡಳಿದ ಅಧ್ಯಕ್ಷ ಮಾಡ್ಯಾರೇನೂ ಅಂತ ನೋಡಿದೆ ಇಷ್ಟ.
ಅದಿರಲಿ, ಈ ಮಂದಿ ನನಗ್ಯಾಕ congratsಅಂತ message ಕಳಿಸ್ಯಾರ ಅಂತ ತಲಿಕೆಟ್ಟ ಒಂದಿಬ್ಬರಿಗೆ ಫೋನ ಮಾಡಿ ಕೇಳಿದ್ರ “ಏನ್ರಿ, ನಿಮ್ಮ ಶೆಟ್ಟರು ಮುಖ್ಯಮಂತ್ರಿ ಆಗ್ಯಾರ, ಕಡಿಕೂ ಉತ್ತರ ಕರ್ನಾಟಕದ ಮಂದಿ ಮುಖ್ಯಮಂತ್ರಿ ಗಾದಿ ಏರಿದರಿ” ಅಂದರು. ಓಹೋ, ಇವರೇಲ್ಲಾ ನಂಗ message ಕಳಸಿದ್ದ ನಮ್ಮ ಶೆಟ್ಟರ ಮುಖ್ಯ ಮಂತ್ರಿ ಆಗಿದ್ದಕ್ಕ ಅಂತ ಗೊತ್ತಾತ. ಇರಲಿ, ಬಿಜೇಪಿ ಹಾಸಗಿ ಹಿಡದರು ನಮ್ಮ ಶೆಟ್ಟರ ಗಾದಿ ಏರಿದರಲಾ ಅದು ಭಾಳ ಸಂತೋಷದ ವಿಷಯನ ಅನಸ್ತು.
ಮುಂದ ಒಂದ ಹತ್ತ ನಿಮಿಷಕ್ಕ ನಮ್ಮ ಶಿರಾಳಕೊಪ್ಪದಿಂದ ನಮ್ಮ ಮಾವ ಫೋನ ಮಾಡಿದಾ, ಅಂವಾ ಅಗದೀ ಖಾಸ ಯಡಿಯೂರಪ್ಪನ ಮನಷ್ಯಾ “ಏನಲೇ, ಕಡಿಕೂ ನಿಮ್ಮ ಶೆಟ್ಟರ ಮುಖ್ಯಮಂತ್ರಿ ಆದರೆನಲೇ” ಅಂದಾ
“ಹೌದಪಾ, ಯಾಕ ನಿಮಗ ತ್ರಾಸ ಆತೇನ?” ಅಂದೆ.
“ಏ ಮಗನ, ಹಂಗೇನ ಇಲ್ಲಲೇ, ಮುಖ್ಯಮಂತ್ರಿ ಅಂತ ಶೆಟ್ಟರನ notify ಮಾಡಿದೋರ ನಮ್ಮ ಯಡಿಯೂರಪ್ಪನವರ ಅಲಾ” ಅಂದಾ.
“ಏ, ಹೌದಪಾ, ಹಿಂದ ಸದಾನಂದ ಗೌಡ್ರಿಗೆ notify ಮಾಡಿ ಇವತ್ತ ಅವರನ denotify ಮಾಡಿದವರು ಅವರ ಅಲಾ?” ಅಂದೆ.
“ಏ, ಅದೇಲ್ಲಾ ರಾಜಕೀಯ ನಿಂಗ ತಿಳಿಯಂಗಿಲ್ಲಾ, ನೀ ಇನ್ನೂ ಸಣ್ಣಂವ ಇದ್ದಿ ತೊಗೊ” ಅಂದಾ.
“ನಿಮ್ಮ ಈ ಸುಡಗಾಡ ರಾಜಕೀಯ ನಂಗ ತಿಳಿಯೋದು ಬ್ಯಾಡಾ, ಒಟ್ಟ ನಮ್ಮ ಶೆಟ್ಟರ ಮುಖ್ಯಮಂತ್ರಿ ಆದರಲಾ ಅಷ್ಟ ಸಾಕ” ಅಂದೆ.
“ಇರಲಿ ಮಗನ, ಭಾಳ ಹಾರಡಬ್ಯಾಡ ‘ಆಷಾಡದಾಗಿನ ಅಧಿಕಾರ ಬ್ಯಾಸಗ್ಯಾಗ ಬ್ಯಾನಿ ತಿಂತದ’ ಅಂತಾರ, ಭಾಳಂದ್ರ ಒಂಬತ್ತ ತಿಂಗಳ ಇಷ್ಟ ನಿಮ್ಮ ಶೆಟ್ಟರ ಅಧಿಕಾರ” ಅಂದಾ.
ಅಲ್ಲಾ, ಶೆಟ್ಟರಿಗೆ ಜೀವನದಾಗ ಒಟ್ಟ ಒಂದಸಲಾ ಮುಖ್ಯಮಂತ್ರಿ ಆದ್ರ ಸಾಕಾಗೇದ, ಅವನೌನ ಆಷಾಡ ಏನು, ಪಕ್ಷಮಾಸ ಏನು ಅಂತ ನಾ ಅವಂಗ
“ನೋಡಪಾ, ದಿನಾ ತುಂಬಿದ ಮ್ಯಾಲೆ ಎಲ್ಲಾರಿಗೂ ಬ್ಯಾನಿ ಹತ್ತೋವ, ನೀವು ಶೆಟ್ಟರಿಗೆ ಮೊದ್ಲ ಮುಖ್ಯಮಂತ್ರಿ ಬಯಕಿ ತಿರಿಸಿಗೊಳ್ಳಿಕ್ಕೆರ ಬಿಡ್ರಿ, ಮತ್ತೇಲ್ಲರ ಅವರ ಅಧಿಕಾರ ನಾಲ್ಕರಾಗ- ಆರರಾಗ abortion ಮಾಡಿ ತಗಿಸಿ-ಗಿಗಸಿರಿ. ಹೇಳಲಿಕ್ಕೆ ಬರಂಗಿಲ್ಲಾ ಮೊದ್ಲ ಯಡಿಯೂರಪ್ಪನ ಮಂದಿ ನೀವು” ಅಂತ ಫೋನ ಇಟ್ಟೆ.
ಅಲ್ಲಾ, ಅಕಸ್ಮಾತ ಹಂಗೇನರ ಈ ಸರತೆನೂ ಮತ್ತ ಭಿನ್ನಮತ ಮಾಡಿ ಶೆಟ್ಟರನ ತಗದರ ಮುಂದ ಇಲೇಕ್ಷನ್ನದಾಗ ಜನಾ ಬಿಜೇಪಿಗೆ family planning ಮಾಡಿ ಬಿಡ್ತಾರ ಇಷ್ಟ.
ಒಂದಂತು ಖರೇ, ನಮಗೇನೋ ಇವತ್ತ ನಮ್ಮ ಶೆಟ್ಟರ ಮುಖ್ಯಮಂತ್ರಿ ಆಗ್ಯಾರಂತ ಖುಶಿ ಇರಬಹುದು. ಆದ್ರ ಇದು ಎಷ್ಟ ದಿವಸ? ಇವತ್ತಿಲ್ಲಾ ನಾಳೆ ಇಲೇಕ್ಷನ್ ಬಂದ ಬರತದ, ಆವಾಗ ಮತ್ತ ಶೆಟ್ಟರ ಮುಖ್ಯಮಂತ್ರಿ ಆಗ್ತಾರ? ಇವರ ಮುಖ್ಯಮಂತ್ರಿ ಆಗೋದ ದೂರ ಉಳಿತ ಮತ್ತ ಬಿಜೇಪಿ ಅಧಿಕಾರಕ್ಕರ ಬರತದಾ?
ಅದಕ್ಕ, ಸುಮ್ಮನ ನಾನು ಶೆಟ್ಟರಿಗೆ ಯಾವದರ ನಿಗಮ ಮಂಡಳಿ ಅಧ್ಯಕ್ಷ ಮಾಡ್ರಿ ಅಂತ ಈಗ ಕೇಳಿ ಬಿಡ್ತೇನಿ, ಅವರ ಮುಂದ ಎಷ್ಟ ದಿವಸ C.M.ಇರತಾರೊ ಅವರಿಗೆ ಗ್ಯಾರಂಟೀ ಇಲ್ಲಾ.
” ಶೆಟ್ಟರ ಮತ್ತೇಲ್ಲೆರ ನೀವು, ನಾ ಯಡಿಯೂರಪ್ಪನ ಒಂದ ಮಾತ ಕೇಳಿ ಮಾಡ್ತೇನಿ ಅಂದ-ಗಿಂದಿರಿ, ಈಗ ನೀವ ಮುಖ್ಯಮಂತ್ರಿ, ಬೇಕಾದ ಆಗವಲ್ತಾಕ ಶೆಡ್ ಹೊಡದ ನಿಲ್ಲರಿ.