ಎಲ್ಲಾದರಾಗೂ ಹೆಂಡ್ತಿನ್ನ ಯಾಕ ಕರಕೊಂಡ ಬರ್ತಿ?

ಒಂದ ಆರ ತಿಂಗಳ ಹಿಂದ ಬೆಂಗಳೂರಿಗೆ ಒಂದ ಬುಕ್ ಬಿಡಗಡೆ ಫಂಕ್ಶನಗೆ ಹೋಗಿದ್ದೆ, ಹಂಗ ಅಲ್ಲಿ ಬಂದವರೇಲ್ಲಾ ನನ್ನ ಫಸ್ಟ ಟೈಮ ಭೆಟ್ಟಿ ಆಗಲಿಕತ್ತವರು, ಆದರ ಫೇಸಬುಕ್ಕ ಒಳಗ ಭಾಳ ಕ್ಲೋಸ ಇದ್ದವರು ಹಿಂಗಾಗಿ ಬೆಂಗಳೂರ ತನಕ ಅವರನೇಲ್ಲಾ ಭೆಟ್ಟಿ ಆಗಲಿಕ್ಕಂತ ಹೋದಂಗ ಆಗಿತ್ತ. ನನ್ನ ಭೆಟ್ಟಿ ಆದವರೇಲ್ಲಾ ನನ್ನ ಜೊತಿ ಒಂದ್ಯಾರಡ ಮಾತ ಮಾತಾಡಿದಂಗ ಮಾಡಿ
“ಏನ್ರಿ, ನಿಮ್ಮ ಹೆಂಡತಿನ್ನ ಯಾಕ ಕರಕೊಂಡ ಬಂದಿಲ್ಲಾ” ಅಂತ ಕೇಳೆ ಕೇಳೊರ, ನಂಗರ ನನ್ನಕಿಂತಾ ನನ್ನ ಹೆಂಡತಿನ ಭಾಳ ಪಾಪ್ಯುಲರ ಆಗ್ಯಾಳೇನಪಾ ಅನಸೊ ಹಂಗ ಆಗಿ ಬಿಡ್ತು. ಅದರಾಗ ಒಂದಿಬ್ಬರು
“ಅಲ್ಲರಿ, ಹೆಂಡ್ತಿನ್ನ ನೀವ ಏನ ಸುಡಗಾಡ ಬರದರು ಅದರಾಗ ಹೆಂಡ್ತಿನ್ನ ಕರಕೊಂಡ ಬರತೀರಿ ಅಂದಮ್ಯಾಲೆ ಹಿಂತಾ ಫಂಕ್ಶನಗೆ ಯಾಕ ಕರಕೊಂಡ ಬರಂಗಿಲ್ಲಾ” ಅಂತ ಜೋರ ಮಾಡಿ ಕೇಳಲಿಕತ್ತರು.
ಹಂಗ ನಂಗ ಮದುವಿ-ಮುಂಜವಿಗೆ ಹೋದಾಗ ಇಷ್ಟ ಲಾಸ್ಟಿಗೆ ಅರಿಷಣ-ಕುಂಕಮ ಹಚಗೊಂಡ ಹೋಗಲಿಕ್ಕೆ ನನ್ನ ಜೊತಿ ಯಾರ ಇಲ್ಲದ್ದನ್ನ ನೋಡಿ ’ನೀ ನಿನ್ನ ಹೆಂಡ್ತಿನ್ ಯಾಕ ಬಿಟ್ಟ ಬಂದಿ’ ಅಂತ ಮಂದಿ ಕೇಳ್ತಿದ್ರು, ನಾ ’ಇಲ್ಲಾ ಅಕಿ ಬರೋ ಹಂಗ ಇದ್ದಿದ್ದಿಲ್ಲ’ಅಂತ ಹೇಳಿ ಜಾರಕೊಂಡ ಬಿಡ್ತಿದ್ದೆ. ಆದರ ಇಲ್ಲೆ ಆ ಕಾರಣಾನು ಕೊಡೊ ಹಂಗ ಇದ್ದಿದ್ದಿಲ್ಲಾ. ಅಷ್ಟರಾಗ ಒಂದಿಬ್ಬರ ಬಂದ ತಮ್ಮ ಹೆಂಡ್ತಿನ್ನ ನನಗ ಪರಿಚಯ ಮಾಡಿಸಿ
“ಎಲ್ಲಾ ಲೇಖನದಾಗ ಬರೇ ಹೆಂಡ್ತಿ ಬಗ್ಗೆನ ಬರಿತಾರ ಅಂತ ಹೇಳಿದ್ನೇಲ್ಲಾ, ಇವರ ಅವರು” ಅಂತ ನನ್ನ ಪರಿಚಯ ಮಾಡಿಸಿದರು. ಒಬ್ಬೊರ ಹೆಂಡ್ತಿ ನಂಗ ಡೈರೆಕ್ಟ
“ಏನರಿ ನೀವು ಎಲ್ಲಾ ಲೇಖನದಾಗೂ ಹೆಂಡ್ತಿ ಜೀವಾ ಭಾಳ ತಿಂತಿರಿ, ನಿಮ್ಮ ಹೆಂಡ್ತಿ ಹೆಂಗ ಸುಮ್ಮನ ಕೂಡ್ತಾರ, ಭೆಟ್ಟಿ ಮಾಡಸರಿ ನನಗೊಮ್ಮೆ” ಅಂತ ಬಳಿ ಏರಿಸಿಗೋತ ಕೇಳೆ ಬಿಟ್ಟರು.
ನಾ “ಅಲ್ಲರಿ ನಾ ಅಕಿದ ಜೀವಾ ಬರೇ ನನ್ನ ಲೇಖನದಾಗ ಇಷ್ಟ ತಿಂತೇನಿ, ಅಕಿ ಖರೇನ ನನ್ನ ಜೀವಾ ತಿಂತಾಳ ಅದ್ಯಾರಿಗೂ ನಿಮಗ ಗೊತ್ತಾಗಂಗಿಲ್ಲಾ, ಈಗ ನನ್ನ ನೋಡಿದ ಮ್ಯಾಲೆರ ಯಾರ ಯಾರದ ಜೀವಾ ಹಕಿಕತ್ತನಾಗ ತಿಂತಾರ ಅನ್ನೋದ ಗೊತ್ತಾಗತದಲಾ” ಅಂತ ಕೇಳಿದೆ.
ಪಾಪ, ಅವರ ಒಂದ ಸರತೆ ನನ್ನ ಮ್ಯಾಲಿಂದ ಕೆಳತನಕ ನೋಡಿ ಇಂವಾ ಹೇಳೋದ ಖರೆ ಇರಬೇಕ ಬಿಡ ಅಂತ ಸುಮ್ಮನಾಗಿ ಬಿಟ್ಟರು.
ಅಲ್ಲಾ ಹಂಗ ಅಲ್ಲೆ ’ನೀವು ಫೇಸಬುಕ್ಕಿನಾಗ ಏಷ್ಟ್ ದಪ್ಪ ಕಾಣ್ತೀರಿ’ ಅಂತನೂ ಒಂದ ಹತ್ತ ಮಂದಿ ಅಂದರ ಬಿಡ್ರಿ, ಅವರಿಗೆ ನಾ ಊಬಿದರ ಹಾರಿ ಹೊಗೊಹಂಗ ಇದ್ದೇನಿ ಅಂತ ಗೊತ್ತಾಗಿದ್ದ ಅವತ್ತ ನನ್ನ physcially ನೋಡಿದಾಗ, ಏನ್ಮಾಡೋದ ಎಲ್ಲಾ ಅವರವರ ಪ್ರಕೃತಿ. ಬರೇ ಫೇಸಬುಕ್ಕಿನಾಗ ಫೇಸ ನೋಡಿ ಈಡಿ ಮನಷ್ಯಾನ ಪ್ರಕೃತಿನ ಹೆಂಗ ಅಳಿಲಿಕ್ಕೆ ಬರತದ.
ಆದರ ನಂಗ ಹಿಂಗ ’ನೀ ಯಾಕ ಬರೇ ಹೆಂಡ್ತಿ ಬಗ್ಗೇನ ಬರೀತಿ’ ’ಎಲ್ಲಾ ವಿಷಯದಾಗೂ ಯಾಕ ಹೆಂಡ್ತಿನ್ನ ಕರಕೊಂಡ ಬರ್ತಿ’ ಅಂತ ಏನಿಲ್ಲಾಂದರು ಒಂದ ಐವತ್ತ-ಅರವತ್ತ ಮಂದಿ ಇಲ್ಲಿ ತನಕ ಕೇಳ್ಯಾರ, ಹಂಗ ನಾ ಅವರಿಗೆಲ್ಲಾ ಒರಲ್ಲಿ ಕ್ಲ್ಯಾರಿಫಿಕೇಶನ್ ಕೊಟ್ಟ ಕೊಟ್ಟೇನಿ. ಆದರ ಒಂದ ಸಲಾ, ಒನ್ಸ್ ಫಾರ್ ಆಲ್ ರೈಟಿಂಗ ಒಳಗೂ ಕ್ಲೀಯರ್ ಮಾಡಿ ಬಿಡಬೇಕು ಅಂತ ಈ ವಿಷಯ ಇವತ್ತ ತಗದಿದ್ದು.
ಇವತ್ತ ಜನಾ ತಮ್ಮ ಪ್ರಬಂಧದ ಒಳಗ, ಕಥಿ, ಕಾದಂಬರಿ ಒಳಗ ಕಾಲ್ಪನಿಕ ಪಾತ್ರಗಳನ್ನ ಸೃಷ್ಟಿ ಮಾಡಿ ಬರೀತಾರ, ಆ ಪಾತ್ರಗಳು ಆ ಆ ಕಥಿಗೆ, ಪ್ರಬಂಧಕ್ಕ ಸಂಬಂಧ ಪಟ್ಟದ್ವು ಇರ್ತಾವ. ಹಂಗ ನನ್ನ ಪ್ರಹಸನದೊಳಗ ನಾನು, ನನ್ನ ಹೆಂಡತಿ ಅನ್ನೋವು ಕೇವಲ ಕಾಲ್ಪನಿಕ ಪಾತ್ರಗಳು ಮಾತ್ರ. ನಾನೂ ಯಾವದೊ ಥರ್ಡ ಪಾರ್ಟಿ ರೆಫೆರೆನ್ಸ ಕೊಟ್ಟ ’ಪುಟ್ಯಾ- ಪುಟ್ಯಾನ ಹೆಂಡ್ತಿ’ ’ಅಪ್ಪಿ- ಅಪ್ಪಿ ಹೆಂಡತಿ’ ಅಂತನೂ ಲೇಖನದಾಗ ಬರಿಬಹುದಿತ್ತ, ಆದರ ಹಂಗs ಯಾಕ ಬರಿಬೇಕು? ಪ್ರತಿಯೊಂದ ಲೇಖನದಾಗೂ ಒಂದ ಒಂದ ಹೊಸಾ ಹೆಂಡತಿ ಹುಟ್ಟಿಸಿಗೊಂಡ ಹೋಗೊದಕಿಂತ ಇದ್ದ ಒಂದ ಖಾಸ ಹೆಂಡ್ತಿನ್ನ ಯಾಕ ನನ್ನ ಎಲ್ಲಾ ಲೇಖನದಾಗ ತೊಗೊಬಾರದು ಅಂತ ನನ್ನ ವಿಚಾರ. ಹಿಂಗಾಗಿ ನಾ ನನ್ನ ಹೆಂಡತಿನ್ನ ನನ್ನ ಪ್ರಹಸನದಾಗ ಭಾಳ ಬಳಸೋದು.
ನನ್ನ ಲೇಖನದಾಗ ಹೆಂಡ್ತಿ ಅನ್ನೊಕಿ ಸಾಂದರ್ಭಿಕ ಹೆಂಡ್ತಿ, ಇನ್ನ ಪ್ರತಿಯೊಂದ ಪ್ರಹಸನ ಸಂದರ್ಭದೊಳಗ ಒಂದೊಂದ ಹೆಂಡ್ತಿ ಎಲ್ಲೆ ಹುಟ್ಟಸೋದ ಅಂತ ಇದ್ದ ಒಂದ ಹೆಂಡ್ತಿನ್ನ ಎಲ್ಲಾ ಸಂದರ್ಭದಾಗ ಹಿಡಕೊಂಡ ಬರ್ತೇನಿ ಇಷ್ಟ.
ಹಂಗ ನಾ ’ನಾನು, ನನ್ನ ಹೆಂಡತಿ’ ಅಂತ ಪಾತ್ರಗಳನ್ನ ಸೃಷ್ಟಿ ಮಾಡಿ ಬರದರ ಆ ಲೇಖನ ನನಗ ಮತ್ತ ಓದೊರಿಗೆ ಇಬ್ಬರಿಗೂ ಭಾಳ ಆತ್ಮೀಯ ಆಗ್ತದ ಅನ್ನೊದ ನನ್ನ ವಿಚಾರ. ಹಂಗ ನನ್ನ ಪ್ರಹಸನಗಳು-ಪ್ರಬಂಧಗಳು ಕಾಲ್ಪನಿಕ ಅಂದ ಮ್ಯಾಲೆ, ಆ ಪಾತ್ರಗಳು ಕಾಲ್ಪನಿಕನ. ಇದಾರಗ ಯಾರು ತಪ್ಪ ತಿಳ್ಕೋಳೊ ಪ್ರಸಂಗ ಬರಂಗಿಲ್ಲಾ, ಮತ್ತ ಇದನ್ನ ಪರ್ಸನಲ್ ಆಗಿ ತೊಗೊಳೊ ಅವಶ್ಯಕತೆನ ಇರಂಗಿಲ್ಲಾ. ಅಲ್ಲಾ ಹಂಗ ಪರ್ಸನಲ್ಲಾಗಿ ತೊಗೊಳೊದು, ಅದರ ಬಗ್ಗೆ ತಪ್ಪ ತಿಳ್ಕೋಳೊದು ಎಲ್ಲಾ ನನ್ನ ಹೆಂಡತಿಗೆ ಬಿಟ್ಟ ವಿಷಯ ಮಂದಿ ಹೆಂಡಂದರ ಯಾಕ ತಲಿಕೆಡಸಿಗೊಬೇಕು ಅದಕ್ಕ? ಆಮ್ಯಾಲೆ ಮಂದಿ ’ನೀ ಹಿಂಗ ನಿನ್ನ ಹೆಂಡ್ತಿ ಮ್ಯಾಲೆ ಬರೇಯೋದ ತಪ್ಪ’ ’ನೀ ಲೇಖನದಾಗ ನಿನ್ನ ಹೆಂಡತಿಗೆ ಇನ್ಸಲ್ಟ ಮಾಡಿ ಬರಿತಿ’, ’ನೀ ಹೆಂಡದರ ವಿರೋಧಿ ಇದ್ದಿ’ ಅಂತ ಅನ್ಕೊಳೊದ ತಪ್ಪ ಅಂತ ನನಗ ಅನಸ್ತದ, ಯಾಕಂದರ ಯಾವಾಗ ನನ್ನ ಪ್ರಹಸನನ ಕಾಲ್ಪನಿಕ ಅಂದ ಮ್ಯಾಲೆ ಅದರಾಗಿನ ನನ್ನ ಹೆಂಡತಿ ಪಾತ್ರನೂ ಕಾಲ್ಪನಿಕನ ಅಲಾ?
ಅಲ್ಲಾ ಹಂಗ ಜೀವಂತ ಇರೋ ಹೆಂಡ್ತಿನ್ನ ಕಾಲ್ಪನಿಕ ಅಂತ ಅನ್ನೋದ ತಪ್ಪ ಖರೆ, ಆದ್ರ ಇಲ್ಲೆ ಹೆಂಡ್ತಿ ಪಾತ್ರ ಕಾಲ್ಪನಿಕ.
ಆದರೂ ಒಂದಿಷ್ಟ ಜನಾ ’ನಿನ್ನ ಹೆಂಡತಿ ಹೆಂಗ ಸುಮ್ಮನ ಬಿಟ್ಟಾಳ, ಅಕಿ ಏನ ಅನ್ನಂಗಿಲ್ಲೇನ್’ ಅಂತೇಲ್ಲಾ ಮಾತಾಡ್ತಾರ. ಅರೆ, ನಾ ನನ್ನ ಹೆಂಡತಿ ಬಗ್ಗೆ ಬರದರ ಮಂದಿದ ಏನ ಗಂಟ ಹೋಗ್ತದೊ ಆ ದೇವರಿಗೆ ಗೊತ್ತ.
ಆದರೂ ಒಂದ ಸಲಾ ಈ ವಿಷಯದಾಗ ಸ್ಪಷ್ಟನೇ ಕೊಡೊಣು ಅಂತ ಈ ವಿಶೇಷ ಲೇಖನಾ ಬರದಿದ್ದ. ಹಂಗ ನಾ ಇವತ್ತ ಇಷ್ಟ ಬರೀಲಿಕ್ಕೆ ಕಾರಣ ಅಂದ್ರನ ನನ್ನ ಹೆಂಡತಿ ಪಾತ್ರ, ಬಹುಶಃ ಮತ್ತೊಬ್ಬರ ಹೆಂಡ್ತಿ ಅಥವಾ ಥರ್ಡ ಪಾರ್ಟಿ ರೆಫರೆನ್ಸ್ ಇಟಗೊಂಡ ಬರದಿದ್ದರ ಇಷ್ಟ ಬರಿತಿದ್ದೇನೋ ಇಲ್ಲೊ ಗೊತ್ತಿಲ್ಲಾ, ಆದರ ಇವತ್ತ ಏನಿಲ್ಲಾಂದರೂ ಒಂದ ನೂರ ಲೇಖನಾ ನಾ ಬರದೇನಿ ಅದಕ್ಕೇಲ್ಲಾ ಪ್ರೇರಣೆನ ಹೆಂಡ್ತಿ ಅನ್ನೊ ಪಾತ್ರ. ಅನ್ನಂಗ ನನ್ನ ಹೆಂಡ್ತಿ ಹೆಸರನೂ ಪ್ರೇರಣಾ..ಏನ co-incidence ನೋಡ್ರಿ. ನನಗ ಹೆಂಡ್ತಿನ ಪ್ರೇರಣಾ, ನನ್ನ ಹೆಂಡ್ತಿನೂ ಪ್ರೇರಣಾ.
ಇನ್ನ ಮುಂದ ಆದರು ನನ್ನ ಲೇಖನದಾಗ ’ನನ್ನ ಹೆಂಡ್ತಿ’ ಅಂತ ಅನ್ನೊ ಶಬ್ದ ಬಂದರ ಅದು ಕಾಲ್ಪನಿಕ ಪಾತ್ರ, ಈ ಹೆಂಡ್ತಿ ಸಾಂದರ್ಭಿಕ ಮಾತ್ರ ಖರೆ ಖರೇನ ಅವನ ಹೆಂಡ್ತಿ ಏನ ಅಂವಾ ಬರದಂಗ ಇಲ್ಲಾ ಅಂತ ತಿಳ್ಕೊಂಡ ಓದರಿ. ಸುಳ್ಳ ಅಂವಾ ಭಾಳ ಪರ್ಸನಲ್ ಬರಿತಾನ ಅಂತ ಅನ್ಕೋಳಿಕ್ಕೆ ಹೋಗಬ್ಯಾಡರಿ. ಇದ ಒಂಥರಾ ನನ್ನ ಎಲ್ಲಾ ಹಿಂದ ಬರದ ಲೇಖನಗಳಿಗೆ ಮತ್ತ ಮುಂದ ಬರುವ ಲೇಖನಗಳಿಗೆ ಡಿಸ್ಕ್ಲೇಮರ ಆರ್ಟಿಕಲ್ ಅಂತ ತಿಳ್ಕೊರಿ.
disclaimer- for using my wife in my articles… 🙂

One thought on “ಎಲ್ಲಾದರಾಗೂ ಹೆಂಡ್ತಿನ್ನ ಯಾಕ ಕರಕೊಂಡ ಬರ್ತಿ?

  1. ಕೆಳಗಿನ ಪ್ಯಾರಾ ಮಸ್ತ ಅನಸಿ ನಗು ಬಂದ್ರಿ…
    “ನನ್ನ ಲೇಖನದಾಗ ಹೆಂಡ್ತಿ ಅನ್ನೊಕಿ ಸಾಂದರ್ಭಿಕ ಹೆಂಡ್ತಿ, ಇನ್ನ ಪ್ರತಿಯೊಂದ ಪ್ರಹಸನ ಸಂದರ್ಭದೊಳಗ ಒಂದೊಂದ ಹೆಂಡ್ತಿ ಎಲ್ಲೆ ಹುಟ್ಟಸೋದ ಅಂತ ಇದ್ದ ಒಂದ ಹೆಂಡ್ತಿನ್ನ ಎಲ್ಲಾ ಸಂದರ್ಭದಾಗ ಹಿಡಕೊಂಡ ಬರ್ತೇನಿ ಇಷ್ಟ.”

Leave a Reply

Your email address will not be published. Required fields are marked *

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ