ಕನ್ನಡ ಅಂದರ ಟಂಗ್ ಟ್ವಿಸ್ಟರ್……..

ಮೊನ್ನೆ ಕರ್ನಾಟಕ ರಾಜ್ಯೋತ್ಸವ ಇದ್ದಾಗ ನನ್ನ ಮಗನ ಸಾಲ್ಯಾಗ ಕನ್ನಡದಾಗ ಟಂಗ್ ಟ್ವಿಸ್ಟರ್ ಹೇಳೋ ಕಾಂಪಿಟೇಶನ್ ಇತ್ತ, ಸಾಲ್ಯಾಗ ಕಲಿಯೋ ಹುಡುಗರಿಗೆ ಅಲ್ಲಾ ಅವರ ಅವ್ವಾ-ಅಪ್ಪಗ, ಅಂದರ ನಮ್ಮಂತಾ ಪೇರೆಂಟ್ಸಗೆ. ಅಲ್ಲಾ, ನಾವು ಮಕ್ಕಳನ ಸಾಲಿಗೆ ಅವು ಕಲತ ಶಾಣ್ಯಾ ಆಗಲಿ ಅಂತ ಕಳಸಿದರ ಇತ್ತೀಚಿಗೆ ಸಾಲ್ಯಾಗ ಮಾಸ್ತರ ಹುಡುಗರಿಗಿಂತಾ ಅವರ ಅವ್ವಾ-ಅಪ್ಪಗ ಜಾಸ್ತಿ ಕಾಂಪಿಟೇಶನ್ ಇಡ್ತಾರ, ಏನ ಸಾಲ್ಯೋ ಏನೋ?
ಹಂಗ ಕನ್ನಡಾ ಟಂಗ್ ಟ್ವಿಸ್ಟರ್ ಸ್ಪರ್ಧಾ ಹುಡುಗರಿಗೆ ಇಟ್ಟಿದ್ದರು ನಡಿತಿತ್ತು. ಯಾಕಂದರ ಈಗಿನ ಮಕ್ಕಳಿಗೆ ಕನ್ನಡ ಪುಸ್ತಕ ಕೈಯಾಗ ಕೊಟ್ಟ ಓದು ಅಂದರ ಅಗದಿ ಟಂಗ್ ಟ್ವಿಸ್ಟರ್ ಓದಿದಂಗ ಓದತಾವ. ಕನ್ನಡ ಅಂದರ ಈಗಿನ ಹುಡುಗರಿಗೆಲ್ಲಾ ಫ್ರೆಂಚ್ & ಗ್ರೀಕ್ ಆದಂಗ ಆಗೇದ. ನಮ್ಮ ಮಕ್ಕಳ ಇಂಗ್ಲೀಷದಾಗ ಕಲತರ ಇಷ್ಟ ಶಾಣ್ಯಾರಾಗ್ತಾರ, ಇವತ್ತ ಕಾಂಪಿಟೇಶನ್ ದುನಿಯಾ ಅಂತ ಅವರನ ಇಂಗ್ಲೀಷ ಸಾಲಿಗೆ ಹಾಕಿ ಅವರ ಕನ್ನಡ ಹಾಳ ಮಾಡಿದ್ದ ನಾವ ಅನಸಲಿಕತ್ತದ.
ನಮ್ಮ ಮನ್ಯಾಗಿಂದ ನಾ ಟಂಗ್ ಟ್ವಿಸ್ಟರ್ ಕಾಂಪಿಟೇಶನಗೆ ಹೋಗೊದ ನೊಡಿ ನನ್ನ ಹೆಂಡತಿ
“ರ್ರೀ, ನಾನು ಬರಲೇನ್ರಿ” ಅಂತ ಅಂದ್ಲು. ನಾ ಅಕಿಗೆ
“ಏ, ನೀ ಬಂದ ಏನ ಮಾಡತಿ ನಿಂಗೇನ ಟಂಗ್ ಟ್ವಿಸ್ಟರ್ ಬರತಾವ” ಅಂದೆ
“ಅಯ್ಯ, ನಂಗೇನ ಬರಂಗಿಲ್ಲೇನ, ನಾ ನಿಮ್ಮ ಕಿಂತಾ ಛಲೋ ನಾಲಾಗ್ಯಾಗ ಮಾತ ಹೊಳಸ್ತೇನಿ” ಅಂದ್ಲು. ಹಕ್ಕ್, ನಾಲಗಿ ಒಳಗ ಮಾತ ಹೊಳಸೋದು ಅಂದ್ರ ಟಂಗ್ ಟ್ವಿಸ್ಟರ ಅಂತ, ಏನ್ಮಾಡಬೇಕ ಹಿಂತಾಕಿನ ಕಟಗೊಂಡ
“ಬ್ಯಾಡಾ, ನಿನ್ನಕಿಂತ ನಾ ನಾಲಿಗೆ ಹೊಳಸಲಿಕ್ಕ ಭಾಳ ಶಾಣ್ಯಾ ಇದ್ದೇನಿ” ಅಂತ ಹೇಳಿ ಒಬ್ಬನ ಹೋದೆ.
ಅಲ್ಲೆ ಸಾಲ್ಯಾಗ ಕಾಂಪಿಟೇಶನ್ ಶುರು ಆತ, ಹಂಗ ಒಬ್ಬಬ್ಬರ ಪೇರೆಂಟ್ಸನ್ನ ಎಬಿಸಿ ನಿಮಗ ತಿಳದದ್ದ ಟಂಗ್ ಟ್ವಿಸ್ಟರ್ ಹೇಳ್ರಿ ಅಂತ ಅಂದ್ರು.
ಮೊದ್ಲ ಒಬ್ಬರ ದಾಡಿ ಬಿಟಗೊಂಡ ಬಂದವರ ಎದ್ದ
“ಇಷ್ಟಕ್ಕ ಅಷ್ಟ ಕಷ್ಟ ಆದರ ಮುಂದ ಕಷ್ಟ ಕಾಲದಾಗ ನಮ್ಮ ‘ಕಷ್ಟ’ಕ್ಕ ಎಷ್ಟ ಕಷ್ಟ?” ಅಂದರು.
ಇದರಾಗ ಎರಡನೇ ‘ಕಷ್ಟ’ದ ಅರ್ಥ ‘ಗಡ್ಡಾ’ ಅಥವಾ ‘ದಾಡಿ’ ಅಂತ, ನಮ್ಮಕಡೆ ದಾಡಿ ಮಾಡ್ಕೋಳೊದಕ್ಕ ‘ಕಷ್ಟಾ’ಮಾಡ್ಕೋಳುದು ಅಂತಾರ.
ಮುಂದ ಮತ್ತೊಬ್ಬಂವಾ ಎದ್ದ,
“ನಾರಿ, ನಿನ್ನ ನಾಯಿ ಮರಿ ಕರಿ. ಅದು ನನ್ನ ಕರಿ ನಾಯಿಮರಿ ಮಾರಿ ನೆಕ್ಕಲಿಕತ್ತದ” ಅಂದಾ, ಅಂವಾ ದಿವಸಾ ಬಾಜು ಮನಿ ಆಂಟೀ ಜೊತಿ ಇಬ್ಬರದು ನಾಯಿ ಮರಿ ತೊಗಂಡ ವಾಕಿಂಗ ಹೋಗ್ತಿದ್ದಾ.
ಆಮ್ಯಾಲೆ ಒಬ್ಬರ ವಯಸ್ಸಾದವರ ಎದ್ದರು
“ಮಣ್ಣಾಗಿನ ಹಣ್ಣು ಹಣ್ಣಾಗಿದೆ ಹೆಣ್ಣೆ, ಅದಕಿಲ್ಲಾ ಹುಣ್ಣು, ಹೆಣ್ಣೆ ತಗದನೋಡು ನೀ ಕಣ್ಣು” ಅಂತ ಅಗದಿ ತಮ್ಮಗತೆ ಹಣ್ಣಾಗಿದ್ದ ಮಾತ ಹೇಳಿದರು.
ಮುಂದ ನಮ್ಮ ಹಿಂದಿನ ಮನಿ ಹಲೀಮಾ ಬೇಗಮ್ ಎದ್ದ ನಿಂತಳು. ಅರೇ ಈಕಿ ಯಾವಾಗ ಕನ್ನಡ ಕಲತಲು ಅಂತ ವಿಚಾರ ಮಾಡೋದರಾಗ
” ನಂಬುದಕ್ಕೆ ಕಂಡಾ ಬರಂಗಿಲ್ಲಾ, ನಂಬದು ಉರ್ದುಮೆ ಹೆಳ್ತೈತಿ, ಮಾಫ್ ಕರನಾ” ಅಂತ ಭಡಾ ಭಡಾ
” ಸಮಜ ಸಮಜ ಕೆ ಸಮಜ ಕೊ ಸಮಜೊ.
ಸಮಜ ಸಮಜನಾ ಭಿ ಎಕ್ ಸಮಜ ಹೈ,
ಜೊ ಲಾಖ ಸಮಜಾನೆ ಪರ ನ ಸಮಜೆ,
ಮೆರಿ ಸಮಜ ಮೆ ವೊ ನಾ ಸಮಜ ಹೈ” ಅಂದ್ಲು.
ಅವನೌನ ಮಂದಿ ಶಾಯರಿ ಅಂತ ತಿಳ್ಕೋಂಡ ವ್ಹಾ.ವ್ಹಾ ಅಂದರು. ಹಿಂದಿನಿಂದ ಅವರ ಪೈಕಿ ಒಂದಿಬ್ಬರು ‘ಇರ್ಷಾದ, ಇರ್ಷಾದ’ ಅಂತ ಒದರಿದರು.
ಒಬ್ಬ ಮಾಸ್ತರ ಎದ್ದ ‘please say tongue twisters in kannada only’ ಅಂತ ಹೇಳಿದರು. ಹೇಳಿ ಕೇಳಿ ಇಂಗ್ಲೀಷ್ ಸಾಲಿ ಮಾಸ್ತರ, ಇಂಗ್ಲೀಷನಾಗ ಹೇಳಿದಾ.
ಮುಂದ ಒಬ್ಬ ರಸಿಕ ಪ್ರೇಮಿ ಎದ್ದ
“ಹಳ್ಳಿ ಮಳ್ಳಿ ಭಾಳ ಕುಳ್ಳಿ ಅಕಿ ಮಾರಿ ಮ್ಯಾಲೆ ನೀರಿನ ಗುಳ್ಳಿ,
ಹಳ್ಳಿ ಮಳ್ಳಿ ಭಾಳ ಕಳ್ಳಿ ಅಕಿ ಮನಸ ಹಗಲಕಾಯಿ ಬಳ್ಳಿ” ಅಂತ ಅಂದಾ.
ಅಷ್ಟರಾಗ ಒಂದ ಹುಡಗ ಎದ್ದ ನಮ್ಮಪ್ಪ ಬಂದಿಲ್ಲಾ ಅವನ ಬದ್ಲಿ ನಾನ ಹೇಳ್ತೇನಿ ಅಂತ ಎದ್ದ
” ವಾಟ್ ಏನು ಬಟ್ ಆದರೆ ಟೆಲ್ ಹೇಳು ಮಂಕಿಸನ್ ಮಂಗ್ಯಾನ ಮಗನೆ” ಅಂದಾ. ಹುಡುಗರೇಲ್ಲಾ ಚಪ್ಪಾಳಿ ಹೊಡದರ. ನಂಗ ಇದೇಲ್ಲಿ ಟಂಗ ಟ್ವಿಸ್ಟರಪಾ ಅನಸ್ತ, ಅಷ್ಟರಾಗ ನಂದ ಪಾಳೆ ಬಂತ. ನಾ ಎದ್ದ
“ಕೆಸರಿನೊಳ್ ಕಮಲ, ಕಮಲದೊಳ್ ಕಲಹ, ಕೆಸರಿನೊಳ್ ಕಮಲದ ಕಲಹ….
ಕಲಹದೊಳ್ ಕಮಲ,ಕಮಲದೊಳ್ ಕೆಸರ, ಕೆಸರಿನೊಳ್ ಕೇಸರಿ ಕಮಲ…..”
ಅಂತ ಪಾಲಿಟಿಕಲ್ ಟಂಗ್ ಟ್ವಿಸ್ಟರ್ ಹೇಳಿದೆ.
ಈ ಕಾಂಪಿಟೇಶನಗೆ ಜಡ್ಜ್ ಆಗಿದ್ದ ಒಬ್ಬ ಮಾಸ್ತರ ಭಡಾ ಭಡಾ ಎದ್ದ ನಂಗ ‘yours is the best tongue twister’ ಅಂತ ನನ್ನ ಕರದ ಮೊದಲನೇ ಬಹುಮಾನ ಕೊಟ್ಟ ಮನಿಗೆ ಕಳಸಿ ಬಿಟ್ಟರು.
ಆಮ್ಯಾಲೆ ಗೊತ್ತಾತ, ಪಾಪ ಆ ಮಾಸ್ತರ ಹೆಂಡತಿ ಯಾವದೋ ದೂರನಿ ಹಳ್ಳ್ಯಾಗ ಸರ್ಕಾರಿ ಸಾಲ್ಯಾಗ ಟೀಚರ ಇದ್ದಾಳಂತ, ಬಿಜೆಪಿ ಸರ್ಕಾರ ಬಂದಾಗಿಂದ ರೊಕ್ಕಾ ಕೊಟ್ಟರೂ ಅಕಿದ ಟ್ರಾನ್ಸಫರ ಮಾಡವಲ್ಲರಂತ. ಹಿಂಗಾಗಿ ಆ ಮಾಸ್ತರಗ ಬಿಜೆಪಿ ಮ್ಯಾಲೆ ಭಾಳ ಸಿಟ್ಟ ಇತ್ತ, ಅದಕ್ಕ ಅಂವಾ ನನ್ನ ಟಂಗ್ ಟ್ವಿಸ್ಟರಗೆ ಫಸ್ಟ ಪ್ರೈಸ ಕೊಟ್ಟ ಬಿಟ್ಟಾ. ಏನ್ಮಾಡ್ತೀರಿ?

Leave a Reply

Your email address will not be published.

This site uses Akismet to reduce spam. Learn how your comment data is processed.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ