ಕಾಕು ಕೋಮಾದಾಗ ಹೋದ್ಲು

ಮುಂಜಾನೆ ಹತ್ತುವರಿ ಹನ್ನೊಂದ ಆಗಿತ್ತ ನಮ್ಮ ಕಾಕನ ಮಗಾ ಫೋನ್ ಮಾಡಿದಾ
“ಪ್ರಶಾಂತ, ಅಮ್ಮ ಯಾಕೋ ಇನ್ನೂ ಎದ್ದೇ ಇಲ್ಲೋ, ಎಷ್ಟ ಒದರಿದರು ಏಳವಳ್ಳು, ಹಂಗ ಉಸಿರಾಡಲಿಕತ್ತಾಳ ಆದರ ನೀರ ಗುಜ್ಜಿದರು ಎಚ್ಚರ ಆಗವಲ್ತು” ಅಂದಾ.
“ಅಲ್ಲೇ ಯಾವದರ ಡಾಕ್ಟರಗೆ ಕರದ ತೊರಸಲೇ, ನಿನ್ನೆ ಆಪರೇಶನ್ ಮಾಡಸ್ಬೇಕಾರ ಕೊಟ್ಟದ್ದ ಅನೇಸ್ಥೇಶಿಯಾದ ಇಫೆಕ್ಟ್ ಇರಬಹುದು ತೊಗೊ” ಅಂತ ನಾ ಅಂದೆ.
ನಿನ್ನೆ ಸಂಜಿ ಮುಂದ ಅಂವಾ ಅವರವ್ವಗ ಡೈಲಸಿಸಿ ಮಾಡಸೊ ಸಂಬಂಧ ಒಂದ ಸಣ್ಣ ಆಪರೇಶನ ಮಾಡಿಸಿ ಕೈಗೆ ಫಿಸ್ಟೂಲಾ ಹಾಕಿಸಿಗೊಂಡ ಬಂದಿದ್ದಾ. ಬಹುಶಃ ಡಾಕ್ಟರ ಆವಾಗ ಅಕಿಗೆ ಕೊಟ್ಟಿದ್ದ ಅನೇಸ್ಥೇಶಿಯಾದ ಇಫೆಕ್ಟ್ ಇನ್ನು ಇರಬಹುದು ಅಂತ ನಾ ಸುಮ್ಮನಾದೆ. ಆದರ ಮುಂದ ಒಂದ ಹದಿನೈದ ನಿಮಿಷಕ್ಕ ಮತ್ತ ನಮ್ಮ ತಮ್ಮ ಫೋನ್ ಮಾಡಿದಾ.
“ಇಲ್ಲೆ ಓಣ್ಯಾಗ ಯಾ ಡಾಕ್ಟರ ಸಿಗವಲ್ಲರು, ಫ್ಯಾಮಿಲಿ ಡಾಕ್ಟರಗೆ ಫೋನ್ ಮಾಡಿದ್ದೆ, ಅವರು ಅರ್ಜೆಂಟಾಗಿ ದೊಡ್ಡ ದಾವಾಖಾನಿಗೆ ಕರಕೊಂಡ ಹೋಗ ಅಂದಾರ, ಈಗ ಅರ್ಜೆಂಟ ಆಗಿ ಗಾಡಿ ಬೇಕು” ಅಂದಾ.
“ಲೇ, ನೀ ಪಟ್ಟನ 108ಗೆ ಫೋನ ಮಾಡ, ಅವರ ಹತ್ತ ನಿಮಿಷದಾಗ ಬರತಾರ, ನಾನೂ ಬಂದೆ” ಅಂತ ನನ್ನ ಆಫೀಸ ಕೆಲಸ ಅಷ್ಟಕ್ಕ ವೈಂಡ್ ಅಪ್ ಮಾಡಿ ಇದೇಲ್ಲೋ ವಿಷಯ ಸಿರಿಯಸ್ ಆಗೇದ ಅನಕೊತ್ತ ನಾ ಗಡಿಬಿಡಿ ಮಾಡ್ಕೊಂಡ ಅವರ ಮನಿಗೆ ಹೋದೆ. ಅಷ್ಟರಾಗ 108 ಬಂದ ಅವರ ನಮ್ಮ ಕಾಕುಂದ ಶುಗರ್ ಚೆಕ್ ಮಾಡಿ ಶುಗರ್ ಭಾಳ ಲೊ ಆಗೇದ ಅಂತ ಡೆಕ್ಸ್ಟ್ರೋಸ್ ಏರಸಲಿಕತ್ತಿದ್ದರು.
“ಏನಿಲ್ಲರಿ, ಅವರಿಗೆ ಶುಗರ್ ಲೊ ಆಗಿ ಎಚ್ಚರ ತಪ್ಪೇದ, ಈಗ ದಾವಾಖಾನಿಗೆ ಒಯ್ದ ಶುಗರ ಲೆವೆಲ್ ಮೆಂಟೇನ್ ಮಾಡಿದರ ಎಲ್ಲಾ ಸರಿ ಹೋಗ್ತದ, ಗಾಬರಿ ಆಗಬ್ಯಾಡರಿ” ಅಂತ ಅಂದರು. ನಾವ ಭಡಾ ಭಡಾ ನಮ್ಮ ಕಾಕುನ ಅದ 108ರಾಗ ಹಾಕ್ಕೊಂಡ ದೊಡ್ಡ ದಾವಾಖಾನಿಗೆ ತೊಗಂಡ ಬಂದ್ವಿ. ದಾವಾಖಾನ್ಯಾಗ ಡಾಕ್ಟರ್ ಎಲ್ಲಾ ಚೆಕ್ ಮಾಡಿ ಸೀದಾ ICUಗೆ ಶಿಫ್ಟ ಮಾಡಿ ನಮಗ ಕೌನ್ಸಿಲಿಂಗ ರೂಮಗೆ ಕರದರು.
ರೂಮ್ ಒಳಗ ಡಾಕ್ಟರ್ ತಮ್ಮ ಪರಿಚಯ ಮಾಡ್ಕೊಂಡ, ಪೇಶೆಂಟ್ ಹಿಸ್ಟರಿ ಮತ್ತ ನಮ್ಮ ಫೈನಾನ್ಸಿಯಲ ಹಿಸ್ಟರಿ ತಿಳ್ಕೊಂಡರು. ನನ್ನ ಮಾರಿ ನೋಡಿ ‘ನೀವು ಫೇಸಬುಕನಾಗ ಇದ್ದಿರಲ್ಲಾ, we are friends in facebook’ ಅಂದರು. ನಾ ,ಅಡ್ಡಿಯಿಲ್ಲಾ facebook ದೋಸ್ತರು ಕೆಲಸಕ್ಕ ಬರತಾರ ಅನ್ಕೊಂಡೆ.
“ನೋಡ್ರಿ, ಅವರು ಲೊ ಶುಗರ ಆಗಿ ಕೋಮಾದಾಗ ಹೋಗಿರಬಹುದು. ಹಿಂಗ ಲೊ ಶುಗರ for longtime ಆಗಿತ್ತಂದರ ಹಿಪೋಗ್ಲೇಸಿಮಿಯಾ ಆಗಿರತದ. ಅದರಾಗ ಅವರದು ಕಿಡ್ನಿನೂ ವರ್ಕ ಆಗಲಿಕತ್ತಿದ್ದಿಲ್ಲಾ ಹಿಂಗಾಗಿ ದೇಹದಾಗ ಯುರಿಯಾ ಜಾಸ್ತಿ ಆಗಿ ಯುರೆಮಿಕ್ ಆಗೀನೂ ಕೋಮಾದಾಗ ಹೋಗಿರಬಹುದು. ಈಗ ಮೊದ್ಲ ಒಂದ ನಾಲ್ಕ ತಾಸ ಅವರದ ಶುಗರ್ ಲೆವೆಲ್ ಮೆಂಟೇನ್ ಮಾಡಿ ನೋಡೋಣ, ಏನರ ಇಂಪ್ರೂವಮೆಂಟ್ ಕಂಡರ ಛಲೋ ಇಲ್ಲಾಂದರ ಬೇಕಾರ ಬ್ರೇನ್ ಸ್ಕ್ಯಾನ ಮಾಡಿನೂ ನೋಡೋಣ. ಹಂಗ ಬೇಕಾರ ಡೈಲಸಿಸ್ ಮಾಡಿ ದೇಹದಾಗಿನ ಯುರೀಯಾ ಕಡಿಮಿ ಮಾಡಿನೂ ನೋಡೋಣ. ಯಾವದಕ್ಕೂ ಈಗ ಏನು ಹೇಳಲಿಕ್ಕೆ ಬರಂಗಿಲ್ಲಾ, ಸಂಜೀತನಕಾ ಕಾದ ನೋಡೋಣ” ಅಂತ ಒಂದ ಉಸಿರನಾಗ ಹೇಳಿ ಹೋಗಿ ಬಿಟ್ಟರು.
ಅಲ್ಲಿ ತನಕ ನಾ ನಮ್ಮ ಕಾಕೂಗ ಎಚ್ಚರಿಲ್ಲಾಂತ ಅನ್ಕೊಂಡಿದ್ದನೇ ಹೊರತು ಕೋಮಾದಾಗ ಹೋಗ್ಯಾಳ ಅಂತ ಅನ್ಕೊಂಡಿದ್ದಿಲ್ಲಾ. ಯಾರರ ಕೋಮಾದಾಗ ಹೋದರು ಅಂದರ ಅವರ ಹೋದಂಗ ಅಂತ ತಿಳ್ಕೊಂಡವ ನಾನು. ನಿನ್ನೆ ರಾತ್ರಿ ಉಂಡ ಮಲ್ಕೊಂಡ ನಮ್ಮ ಕಾಕು ಮುಂಜಾನೆ ಏಳೋದರಾಗ ಕೋಮಾದಾಗ ಹೋಗ್ಯಾಳ ಅಂದರ ನಂಬಲಿಕ್ಕೆ ಆಗಲಿಲ್ಲಾ……..
ಮುಂದ ದಾವಾಖಾನ್ಯಾಗ ನಮ್ಮ ಪ್ರಹಸನ ಶುರು ಆತ ನೋಡ್ರಿ. ಕಾಕು ICUದಾಗ ನಾವ ಹೊರಗ ಕಟ್ಟಿಮ್ಯಾಲೆ. ತಾಸ-ತಾಸಿಗೊಮ್ಮೆ ಒಳಗ ಹೋಗಿ ಕಾಕುಗ ಕಾಲ, ಕೈ ಚೂಟಿ, ಕಾಕು-ಕಾಕು ಅಂತ ಹೋಯ್ಕೊಂಡ, ಅಕಿಗೆ ಎಚ್ಚರ ಬರಲಿಕತ್ತದೇನು ಅಂತ ನೋಡಿ ನೋಡಿ ಸಾಕಾತು. ಅಕಿದ ಶುಗರ್ ಲೆವೆಲ್ ಮೆಂಟೇನ್ ಮಾಡೋದೇನ್ ಮತ್ತ ಹಾಯ್ ಶುಗರ್ ಆಗಿ ಇನ್ಸುಲಿನ್ ಕೊಡಲಿಕತ್ತರು ಅಕಿ ಏನ್ ಕೋಮಾದಾಗಿಂದ ಏಳಲಿಲ್ಲಾ. ಕಡಿಕೆ ಸಂಜಿಮುಂದ ಬ್ರೇನ್ ಸ್ಕ್ಯಾನಿಂಗ್ ಮಾಡಿಸಿದರ ಬರೆ brain found ಅಂತ ಬಂತ ಹೊರತು ಬ್ಯಾರೆ ಏನು ಪ್ರಾಬ್ಲೇಮ್ ಇರಲಿಲ್ಲಾ. ಆವಾಗ ಡಾಕ್ಟರ ಇದು hypoglycemia ಇಲ್ಲಾ uremic case, ಇನ್ನ ಡೈಲಸಿಸ್ ಒಂದ ಮಾಡೀ ನೋಡೋಣ. ಹಂಗೇನರ ಯುರೇಮಿಕ್ ಇದ್ದರ ಡೈಲಸಿಸ್ ಮಾಡಿದಮ್ಯಾಲೆ ಎಚ್ಚರ ಬಂದರ ಬರಬಹುದು ಇಲ್ಲಾಂದರ ಇದ ಹಿಪೊಗ್ಲೇಸಿಮಿಯಾನ ಗ್ಯಾರಂಟೀ, ಆವಾಗ ಏನು ಮಾಡಲಿಕ್ಕೆ ಆಗಂಗಿಲ್ಲಾ, then it is matter of days ಅಂತ ಅಗದಿ ಮಾರಿ ಮ್ಯಾಲೆ ಹೊಡದಂಗ ಹೇಳಿ ಬಿಟ್ಟರು. ನಮಗ ಏನಮಾಡಬೇಕು ತಿಳಿಲಾರದಂಗ ಆಗಿಬಿಡ್ತು.
ನಾ ಅಂತೂ ಕಾಕು ಕೋಮಾದಾಗ ಹೋಗ್ಯಾಳ ಅಂದಾಗ ಅರ್ಧ ಆಶಾ ಬಿಟ್ಟಿದ್ದೆ, ಇನ್ನ ಹಿಂಗ ಹೇಳಿದ ಮ್ಯಾಲೆ ಪೂರ್ತಿ ಆಶಾ ಬಿಟ್ಟ ಬಿಟ್ಟೆ. ನಾವೇನೋ ಆಶಾ ಬಿಟ್ವಿ ಖರೆ ಆದರ ನಮ್ಮ ಕಾಕು ಬಿಡಬೇಕಲಾ? ಒಂದು ಅಕಿ ಕೋಮಾ ಬಿಡಬೇಕು ಇಲ್ಲಾ ಜೀವಾ ಬಿಡಬೇಕು. ಹಂಗ ಕೋಮಾದಿಂದ ಹೊರಗ ಬರೋ ಚಾನ್ಸ್ ಕಡಿಮಿ ಅಂದಮ್ಯಾಲೆ ಇನ್ನ ಅಕಿ ಜೀವಾ ಬಿಡೋ ತನಕಾ ನಾವ ದಾವಖಾನಿ ಕಟ್ಟಿ ಬಿಡೋಹಂಗ ಇದ್ದಿದ್ದಿಲ್ಲಾ.
ಮುಂದ ನಮ್ಮ ಕಾಕು ಜೀವಂತ ಇದ್ದಾಗ ಬಂದ ಮಾತಾಡಸಲಾರದ ಮಂದೇಲ್ಲಾ ಅಕಿ ಕೋಮಾದಾಗ ಹೋದಮ್ಯಾಲೆ ದಾವಾಖಾನಿಗೆ ಬಂದ ಬಂದ ಹೋದರು. ನಾವ ಬಂದವರಿಗೆಲ್ಲಾ ಕೋಮಾದಾಗ ಹೆಂಗ ಹೋದ್ಲು ಅಂತ ಕಥಿ ಹೇಳಿ ಹೇಳಿ ಸಾಕಾಗಿ ನಾವ ಕೋಮಾದಾಗ ಹೋಗೊದೊಂದ ಬಾಕಿ ಉಳದಿತ್ತ. ಹಿಂಗ ಬಂದವರನ ಕಟ್ಟಿಮ್ಯಾಲೆ ಹೆಂಗ ಕೂಡಸೋದು ಅಂತ ಕರಕೊಂಡ ಹೊಟೇಲಿಗೆ ಹೋಗಿ ಚಹಾ ಕುಡಿಸಿ-ಕುಡಿಸಿ ಕಳಸಿದ್ವಿ. ದಾವಾಖಾನಿ ಒಳಗ ಇಷ್ಟ ಅಲ್ಲಾ ಹೊಟೇಲನಾಗೂ ಉದ್ರಿ ಹೇಳಿದ್ವಿ. ಈ ಕಡೆ ಒಂದ ಬಿಟ್ಟ ಎರಡ ಡೈಲಸಿಸ್ ಮಾಡಿಸಿ ಯುರೀಯಾ ಇಳಿಸಿದರು ಕಾಕುನ ಕೋಮಾ ಇಳಿಲಿಲ್ಲಾ. AC ICUದಾಗ ನಮ್ಮ ಅಕಿ ಗಡದ್ದ ಮಲ್ಕೊಂಡರ ಹೊರಗ ಮಳ್ಯಾಗ ನಾವು ಬಿಲ್ಲ ಕೊಟ್ಟ ಕೊಟ್ಟ ಬೆವತಿದ್ವಿ. ಅಷ್ಟರಾಗ ನಮ್ಮವು ಎರಡ debit card insufficient fund ಅಂತ ಕೈ ಕೊಟ್ಟ credit card ಅನ್ನೊ ventilatorಗೆ ಕೈ ಹಚ್ಚಿದ್ವಿ.
ಇನ್ನ ಮುಂದ ಹೆಂಗ ಅಂತ ಡಾಕ್ಟರಗೆ ಕೇಳಿದರ, ಅವರು you decide ಅಂದರು. ಮನಿಗೆ ಕರಕೊಂಡ ಹೋಗ್ತಿದ್ದರ ಹೋಗರಿ. ಆದರ ಮನ್ಯಾಗ 24ತಾಸ ನರ್ಸಿಂಗ ಬೇಕು, ಅದರಾಗ ಅವರದ ಸದ್ಯೇದ ಪರಿಸ್ಥಿತಿ ನೋಡಿದರ she may not pull for more days ಅಂದರು. ನಮಗ ಧರ್ಮ ಸಂಕಟ ಶುರು ಆತು, ಮನಿಗೆ ಕರಕೊಂಡ ಹೋಗ್ತೀಯಾ ಮನ್ಯಾಗ ಮಾಡೋರಿಲ್ಲಾ. ಇಲ್ಲೇ ICUದಾಗ ಇಡ್ತೀಯಾ ದಿವಸಕ್ಕ 10-12 ಸಾವಿರ ಬಡಿಬೇಕು. ಅದು ಎಷ್ಟ ದಿವಸತನಕಾ ಅಂತ ಗೊತ್ತಿಲ್ಲಾ.
ಕಡಿಕೆ ಡಾಕ್ಟರ ಜೊತಿ ಡಿಸ್ಕಸ್ ಮಾಡಿ withhold the further medical treatment ಅಂತ ಬರದ ಕೊಟ್ಟ ಕಾಕುನ್ನ ICUದಿಂದ ಜನರಲ್ ವಾರ್ಡಗೆ ಶಿಫ್ಟ್ ಮಾಡಿಸಿದ್ವಿ. ಡಾಕ್ಟರ್ ಭಾಳ ಕ್ಲೀಯರ್ ಆಗಿ ಹೇಳಿದ್ದರು you can withhold the further treatment but you can’t withdraw the treatment ಅಂತ. ಹಂಗ withdraw ಮಾಡ್ಕೋಳದ ಇತ್ತಂದರ ನೀವು ಪೇಶೆಂಟs withdraw ಮಾಡ್ಕೊಂಡ ಮನಿಗೆ ಹೋಗರಿ ಅಂತ ಹೇಳಿದ್ದರು. ಅಂದರ ಅಕಿಗೆ ಈಗಾಗಲೇ ಕೊಡ್ತಾ ಇರೋ ಟ್ರೀಟಮೆಂಟನಾಗ ನಾವು ಕಡಿಮೆ ಮಾಡಂಗಿಲ್ಲಾ ಆದರ ನೀವ ಬರದ ಕೊಟ್ಟರ ನಾವ ಪೇಶೆಂಟಗ ಮುಂದ ಕೊಡಬಹುದಾದ ಟ್ರೀಟಮೆಂಟನ್ನ ಸ್ಟಾಪ್ ಮಾಡಬಹುದು ಅಂತ. ಇನ್ನ ಯಾ ಟ್ರೀಟಮೆಂಟ್ ಕೊಟ್ಟರು ಅಕಿ ಕೋಮಾ ಬಿಟ್ಟ ಬರೋದಂತೂ ಗ್ಯಾರಂಟೀ ಇದ್ದಿದ್ದಿಲ್ಲಾ, ಆದ್ರ ಅಕಿ ಇರೋಮಟಾ ಕೊಡ್ತೀರೊ ಟ್ರೀಟಮೆಂಟ್ ಬಿಡೋಹಂಗನೂ ಇದ್ದಿದ್ದಿಲ್ಲಾ.
ಹಂಗ ಅಕಸ್ಮಾತ ನಮ್ಮ ಕಾಕೂಗ ಏನರ ವೆಂಟಿಲೇಟರ್ ಹಚ್ಚೊ ಪ್ರಸಂಗ ಬಂದರ ಹಚ್ಚೋದ ಬ್ಯಾಡ ಅಂತನೂ ಹೇಳಿದ್ವಿ. ವೆಂಟಿಲೇಟರ್ ಹಚ್ಚೊದರಿಂದ ಅಕಿ ಕೋಮಾಕ್ಕ ಏನ ಫರಕ ಬಿಳ್ತಿದ್ದಿಲ್ಲಾ, ಅದರಾಗ ಡಾಕ್ಟರ ಒಮ್ಮೆ ವೆಂಟಿಲೇಟರ್ ಹಚ್ಚಿದರ ಅದನ್ನ ಮತ್ತ ತಗಿಯಂಗಿಲ್ಲಾ. ಜೀವ ಹೋಗೊತನಕ ಕಂಟಿನ್ಯೂ ಅಂತಾರ, ಇನ್ನ ವೆಂಟಿಲೇಟರ್ ಹಚ್ಚಿದರ ಹೋಗೊ ಜೀವನು ಲಗೂನ ಹೋಗಂಗಿಲ್ಲಾ, ಹಿಂಗಾಗಿ ವೆಂಟಿಲೇಟರ ಉಸಾಬರಿನ ಬ್ಯಾಡ ಏನಿಲ್ಲದ ಈಗ ರಗಡ ಖರ್ಚ್ ಮಾಡೇವಿ ಅಂತ ಬಿಟ್ಟ ಬಿಟ್ವಿ. ಪುಣ್ಯಾಕ್ಕ ಆ ಪ್ರಸಂಗನು ಬರಲಿಲ್ಲಾ, ಬರೆ oxygen ಮ್ಯಾಲೆ ಜನರಲ್ ವಾರ್ಡನಾಗ ನಮ್ಮ ಕಾಕೂ ದಿವಸಾ ದೂಕಲಿತ್ಲು. ನಾವ ಮಾತ್ರ ಅಕಿ ICUದಾಗ ಇದ್ದಾಗೂ ಕಟ್ಟಿ ಮ್ಯಾಲೆ ಇದ್ವಿ, ವಾರ್ಡಿಗೆ ಬಂದರು ಕಟ್ಟಿ ಮ್ಯಾಲೆ ಇದ್ವಿ. ಅಕಿ ವಾರ್ಡಿಗೆ ಬರೊದರಾಗ ನಮ್ಮ ಕಿಸೆಯೆಲ್ಲಾ ಖಾಲಿ ಆಗಿ ಕಿಸೇದಾಗ free oxygen ಆಡಲಿಕ್ಕತ್ತಿತ್ತು.
ಕೇಳಿದವರಿಗೆಲ್ಲಾ ‘ಕಾಕು ಕೋಮಾದಾಗ ಹೋಗ್ಯಾಳ’ ಅನ್ನೋದ ನಮಗ ಕಾಮನ್ ಆಗಿಬಿಟ್ಟಿತ್ತು. ಖರೆ ಹೇಳ್ಬೇಕಂದರ ಇನ್ನ ಇಕಿ ಕೋಮಾದಾಗಿಂದ ಯಾವಾಗ ಹೋಗ್ತಾಳ ಅಂತ ದಾರಿ ಕಾಯ್ಕೋತ ಕೂತಿದ್ವಿ. ಅದರಾಗ ಒಂದಿಷ್ಟ ಮಂದಿ ಮಾತಡಸಲಿಕ್ಕೆ ಬಂದವರು ಈ ಕೋಮಾದಾಗ ಹೋದವರ ಬಗ್ಗೆ ಒಂದೊಂದ ಕಥಿ ಹೇಳಿ ನಮಗ ಹೆದರಸಲಿಕತ್ತರು. ನಾವರ ಇವತ್ತ ನಾಳೆ ಅಂತ ದಾರಿ ಕಾಯಲಿಕತ್ತರ ಬಂದ ಮಂದಿ ವರ್ಷಾನ ಗಟ್ಟಲೆ ಕೋಮಾಕ್ಕ ಹೋಗಿ ಎದ್ದವರದು, ಮೂರ-ಮೂರ ತಿಂಗಳ ಕೋಮಾದಾಗ ಇದ್ದ ಆಮ್ಯಾಲೆ ಎದ್ದ ಮತ್ತೊಂದ ಹಡದವರದು, ಹನ್ನೊಂದ ವರ್ಷಗಟ್ಟಲೇ ಕೋಮಾದಾಗ ಇದ್ದ ಆಮ್ಯಾಲೆ ತೀರಕೊಂಡವರದು, ಹಿಂತಾವ ನೂರಾ ಎಂಟ ಕಥಿ ಹೇಳಿ ನಮಗ ಮತ್ತಿಷ್ಟ ಟೇನ್ಶನ್ ಮಾಡಲಿಕತ್ತರು.
ಕಡಿಕೆ ಒಂದ ದಿವಸ ಮುಂಜಾನೆ facebook ಡಾಕ್ಟರ ನನ್ನ ಕರದ her condition is detoriating, it is matter of few hours ಅಂತ ಹೇಳಿ ಧೈರ್ಯ ಕೊಟ್ಟರು. ಪುಣ್ಯಾಕ್ಕ ಅದ ಶುಕ್ರವಾರ ಇತ್ತ. ಮುಂದ ಎರಡ ದಿವಸ ವೀಕೇಂಡ ರಜಾ, ಛಲೋ ಆತ ತೊಗೊ ಅಂತ ನಾ ಭಡಾ ಭಡಾ ಎಲ್ಲಾರಿಗೂ ಫೋನ್ ಮಾಡಿ ಹೇಳ್ಬಿಟ್ಟೆ, ಅದರಾಗ ನಮ್ಮ ಬಳಗದವರೇಲ್ಲಾ ನಾ ಫೋನ ಮಾಡಿದಾಗ ಒಮ್ಮೆ ಭಾಳ ಹೆದರಕೋತ ಫೋನ ತೊಗೊತಿದ್ದರು, ನಾ ಎಲ್ಲೆ ಕೆಟ್ಟ ಸುದ್ದಿ ಹೇಳ್ತೇನೋ ಅಂತ.
ಸಂಜಿ ತನಕ ಅಂದರ ಇಬ್ಬರು ಹೆಣ್ಣ ಮಕ್ಕಳು,ಅಳಿಯಂದರು, ಮಗಾ, ಸೊಸಿ, ಮೊಮ್ಮಕ್ಕಳು ಎಲ್ಲಾರೂ ಸೇರಿ ದಾವಾಖಾನಿ ಕಟ್ಟಿ ಮ್ಯಾಲೆ get together ಶುರು ಮಾಡಿದ್ವಿ. ನಮಗೇಲ್ಲಾ ಭಾಳ ಅರ್ಜೆಂಟ ಇತ್ತ, ಹಂಗ ನಾವ ಅನ್ಕೊಂಡಂಗ ಸಂಡೇ ಒಳಗ ಎಲ್ಲಾ ಮುಗದ ಬಿಟ್ಟರ ಮುಂದ ರಜಾ ತೊಗೊಳದ ಬರಂಗಿಲ್ಲಾ ಅಂತ ದಾರಿ ಕಾಯಿಲಿಕತ್ತಿದ್ವಿ. ಆದ್ರ ನಮ್ಮ ಕಾಕೂಗ ಅರ್ಜೆಂಟ್ ಇದ್ದಿದ್ದಿಲ್ಲಾ, ಅಕಿ ದಿವಸಕ್ಕ ಎರಡ-ಮೂರ ಸಾವಿರ ರೂಪಾಯಿ ಖರ್ಚ ಮಾಡಿಸಿಗೋತ oxygen ಜಕ್ಕೋತ ಜನರಲ ವಾರ್ಡನಾಗ ತನಗೇನೂ ಈ ಖರ್ಚ್ ಸಂಬಂಧ ಇಲ್ಲಾ ಅನ್ನೋರಗತೆ ಕೋಮಾದಾಗ ಆರಾಮ ಇದ್ಲು. ಬ್ಯಾರೆ ಊರಿಂದ ಬಂದವರು ಎರಡ ದಿವಸ ಕಾದ ಕಾದ ಕಡಿಕೆ ತಲಿಕೆಟ್ಟ ‘ಬಂದ ದಾರಿಗೆ ಸುಂಕ ಇಲ್ಲಾ’ ಅಂತ ಸಂಡೇ ತಮ್ಮ ಊರಿಗೆ ವಾಪಸ ಹೋದರು. ಇನ್ನ ಹಂಗೇನರ ಹೆಚ್ಚು ಕಡಿಮೆ ಆದರ ನಮಗ ಮತ್ತ ಅಷ್ಟ ದೂರದಿಂದ ಬರಲಿಕ್ಕೆ ಆಗಂಗಿಲ್ಲಾ, ನೀವ ಎಲ್ಲಾ ಮಾಡಿ ಮುಗಿಸಿಬಿಡರಿ ಅಂತ ನಮಗ power of funeral ಕೊಟ್ಟ ಹೋಗಿ ಬಿಟ್ಟರು.
ಮುಂದ ಒಂದ ಎರಡ ದಿವಸಾದ ಮ್ಯಾಲೆ ಡಾಕ್ಟರಗೆ ಹೇಳಿ oxygen ತಗದ ನೋಡ್ರಿ ಅಂದೆ. ಜೀವ ಹೋಗ್ತೊದು ಇಲ್ಲೊ ನೋಡಲಿಕ್ಕೆ ಅಲ್ಲಾ, oxygen ಇಲ್ಲದನ ಅಕಿ ಇರತಾಳೊ ಇಲ್ಲೊ ನೋಡಲಿಕ್ಕೆ. ಹಂಗ oxygen ತಗದರು ಅಕಿಗೇನ ಫರಕ ಬೀಳಲಿಲ್ಲಾ. ಅದರ ನಮಗ ಫರಕ ಬಿತ್ತ. ತಾಸಿಗೆ ನೂರ ರೂಪಾಯಿ, ದಿವಸಕ್ಕ ಎರೆಡುವರಿ ಸಾವಿರ ರೂಪಾಯಿ ಉಳಿತ. ನಾವೇಲ್ಲಾ ದಿವಸಾ ಪುಗಶೆಟ್ಟೆ ಇಷ್ಟ oxygen ತೊಗೊತೇವಿ ನಮಗ ಅದರದ ಕಿಮ್ಮತ್ತ ಗೊತ್ತಿರಂಗಿಲ್ಲಾ ಅನಸ್ತು.
ಇತ್ತಲಾಗ ನಂಬದ ಕಟ್ಟಿಮ್ಯಾಲೆ ಕೂತ ಉಳದ ಪೇಶಂಟ್ಸದ್ದ ಊರ ಉಸಾಬರಿ ಮಾಡೋದ ಹಂಗ ಮುಂದವರದಿತ್ತ. ಏನಿಲ್ಲಾಂದರು ನಮ್ಮ ಕಣ್ಣ ಮುಂದ ಬಂದ ಅಡ್ಮಿಟ್ ಆಗಿದ್ದ ಒಂದ ಏಳ-ಏಂಟ ಪೇಶಂಟ ಗೊಟಕ ಅಂದಿದ್ವು, ICUದಾಗ ನಮ್ಮ ಕಾಕೂನ ಆಜು-ಬಾಜು ಇದ್ದಿದ್ವು ಒಂದ್ಯಾರಡ ಮ್ಯಾಲೆ ಹೋಗಿದ್ವು ಒಂದ್ಯಾರಡ ಮನಿಗೆ ಹೋಗಿದ್ವು. ಉಳದ ಪೇಶಂಟಿನ ಪೈಕಿಯವರ “ನಿಮ್ಮ ಪೈಕಿ ಯಾರಿಗೆ ಏನ ಆಗೇದ?” ಅಂತ ಕೇಳಿದಾಗೊಮ್ಮೆ ಅವರಿಗೆ ನಮ್ಮ ಕಥಿ ಹೇಳ್ತಿದ್ವಿ, ಅವರ ಅದನ್ನ ಕೇಳಿ ಪಾಪ ಅಂತ ಭಾಳ ಮರಗರೋ. ಅದ ಹಿಂಗಾತಲಾ ನಮ್ಮನ್ನ ಭೆಟ್ಟಿ ಆಗಲಿಕ್ಕೆ ಬರೋರ ಭಾಳ ಕೆಟ್ಟ ಅನಿಸಿಗೊಂಡ ಮಾತಾಡತಿದ್ದರ ಹೊರತು ನಮಗಂತೂ ನಮ್ಮ ಕಾಕೂ ಕೋಮಾದಾಗ ಹೋಗ್ಯಾಳ ಅನ್ನೋದ ದಡ್ಡ ಬಿದ್ದ ಹೋಗಿತ್ತ.
ಅಲ್ಲೆ ದಾವಾಖಾನ್ಯಾಗ ಇನ್ನೊಂದ ದೇಸಾಯಿ ಅಂತ ಅಗದಿ ಸ್ವತಂತ್ರ್ಯ ಪೂರ್ವದಾಗ ಹುಟ್ಟಿದ್ದ ಪೇಶಂಟ ಬಂದಿತ್ತ, ಅವರದ ಕಂಡೀಶನ್ ನಮ್ಮ ಕಾಕೂನ ಹಂಗ ಇತ್ತ, ವೆಂಟಿಲೇಟರ್ ಹಚ್ಚಿ ಇಟ್ಟ ಬಿಟ್ಟಿದ್ದರು. ವೆಂಟಿಲೇಟರ್ ತಗದರ ಗೋವಿಂದಾ. ಅವರ ಪೈಕಿ ಮಂದಿನೂ ಪಾರ್ಕಿಂಗ ಲಾಟನಾಗ ಕಾರನಾಗ ಕೂತ ನಮ್ಮಂಗ ಕಾಯಲಿಕತ್ತಿದ್ದರು. ಡಾಕ್ಟರ ಮಾತ್ರ ಅವರ ಎಷ್ಟ ಕೈಕಾಲ ಹಿಡಕೊಂಡರು ವೆಂಟಿಲೇಟರ್ ತಗಿಲಿಕ್ಕೆ ತಯಾರಿದ್ದಿದ್ದಿಲ್ಲಾ, ಅಜ್ಜರ ಮನಿ ಮಂದಿ ಸಂಕಟಾ ಅರ್ಥಾ ಮಾಡ್ಕೋಳಿಕತ್ತಿದ್ದಿಲ್ಲಾ, ಪಾಪ ಅವರು ನಮ್ಮಂಗ ಧರ್ಮಸಂಕಟದಾಗ ಸಿಕ್ಕೊಂಡಿದ್ದರು. ಅವರಿಗೆ ನಮಗ ಫರಕ ಅಂದ್ರ ಅವರದ ಪುಣಾ ಬೆಂಗಳೂರ ನ್ಯಾಶನಲ್ ಹಾಯವೇಕ್ಕ ಹೊಂದಿ ಕೂರಿಗೆ ಗಟ್ಟಲೇ ಆಸ್ತಿ ಇತ್ತ ನಂಬದ ಇದ್ದಿದ್ದಿಲ್ಲಾ ಅಷ್ಟ. ಆದರೂ ಅವರಿಗೆ ನಮಕಿಂತಾ ಅವಸರ ಇತ್ತ. ಕಡಿಕೆ ಅವರಿಗೆ ನಾ ‘withhold the medical treatment ಅಂತ ಲೆಟರ್ ಬರದಕೊಡ್ರಿ’ ಅಂತ idea ಕೊಟ್ಟ ಆ ಅಜ್ಜನ್ನ ನಮ್ಮ ಕಾಕುನ ಜೊತಿ ಜೆನರಲ್ ವಾರ್ಡಗೆ ಶಿಫ್ಟ ಮಾಡಿಸಿದೆ.
ಅವರಿಗೆ ವೆಂಟಿಲೇಟರ್ ತಗದರ ಭಾಳಂದ್ರ ಒಂದೆರಡ ತಾಸ ಇಷ್ಟ ಅಂತ ಡಾಕ್ಟರ್ ಹೇಳಿದ್ದರಂತ. ಆದರ ಅವರಿಗೆ ಗೊತ್ತಿದ್ದಿಲ್ಲಾ ನಮಗ ಡಾಕ್ಟರ matter of few hours ಅಂತ ಹೇಳಿ ಒಂದ ವಾರ ಆತ ಅಂತ. ಅವರ ಪೈಕಿ ಮಂದಿ ಜನರಲ್ ವಾರ್ಡನಾಗ ಅಜ್ಜನ ಪಲ್ಲಂಗದ ಸುತ್ತ ಭಾಗಿರಥೀ ಗಿಂಡಿ ಹಿಡಕೊಂಡ ಪಾಳೆ ಪ್ರಕಾರ ಪ್ರದಕ್ಷೀಣಿ ಹಾಕಲಿಕತ್ತರು, ಅದರಾಗ ಬ್ಯಾರೆ ಅವರು ಅವತ್ತ ಮೂಹೂರ್ತ ಛಲೋ ಅದ ಅಂತ ಕೇಳ್ಕೊಂಡ ಬಂದ ವೆಂಟಿಲೇಟರ್ ತಗಸಿದ್ದರು. ಆದರ ಇತ್ತಲಾಗ ಅಜ್ಜಾ ನೋಡಿದರ ಸಂಜೀತನಕಾ ಅಂದರ ಮೂರ ವಾಟಗ ಗಂಜಿ ಗುಟಕರಿಸಿ ಗಡದ್ದ ಇದ್ದಾ.
ಅಜ್ಜನ ಮಗಗ ಭಾಳ ಟೇನ್ಶನ್ ಶುರು ಆತ. ಅಕಸ್ಮಾತ ಅವರಪ್ಪ ಏನರ ಮರುದಿವಸತನಕ ಜೀವಾ ಹಿಡದರ ಈ ಮಗಾ ಸಾಯಿತಿದ್ದಾ, ಯಾಕಂದರ ಭಟ್ಟರು ಅವಂಗ
“ಮುಂದ ಮೂರ ದಿವಸ ಮೂಹೂರ್ತ ಸರಿ ಇಲ್ಲಾ, ಹಂಗೇನರ ನಿಮ್ಮಪ್ಪ ಆವಾಗ ಸತ್ತರ ನೀ ಮೂರ ತಿಂಗಳ ಮನಿ ಖಾಲಿ ಮಾಡ್ಬೇಕು” ಅಂತ ಹೇಳಿದ್ದರು.
ಇಲ್ಲೆ ರಾತ್ರಿ ಎಂಟಾದರು ಅವರಪ್ಪಂದೇನ ಅವತ್ತ ಹೋಗೊ ಹಂಗ ಕಾಣಲಿಲ್ಲಾ. ನಾ ಆ ಮಗನ ಸೈಡಗೆ ಕರದ
“ನೀ ಒಂದ ಕೆಲಸಾ ಮಾಡ, ಡಾಕ್ಟರಗೆ ಮತ್ತ ರಿಕ್ವೆಸ್ಟ ಮಾಡ್ಕೋಂಡ ವೆಂಟಿಲೇಟರ್ ಹಚ್ಚಿಸಿಬಿಡ, ಮೂರ ದಿವಸಾದ ಮ್ಯಾಲೆ ಮತ್ತ ತಗಸೊಂತಿ” ಅಂತ ಹೇಳಿದೆ. ಅಂವಾ ತಲಿಕೆಟ್ಟ
“ಏ, ಹೋಗಲಿ ಬಿಡೋ ಮಾರಾಯಾ, ಒಂದ ಸರತೆ ಡಾಕ್ಟರ ಕೈಕಾಲ ಹಿಡದ ವೆಂಟಿಲೇಟರ್ ತಗಸೋದರಾಗ ಕುರಿ- ಕೋಣ ಬಿದ್ದದ, ಇನ್ನೇನರ ಮತ್ತ ವೆಂಟಿಲೇಟರ್ ಹಚ್ಚಂದರ ಡಾಕ್ಟರ ನಂಗ ಹಿಡದ ವೆಂಟಿಲೇಟರ್ ಹಚ್ಚತಾನ” ಅಂದಾ.
ಬಹುಶಃ ಅವರಪ್ಪಗ ಕಡಿಕೂ ಇವರ ತ್ರಾಸ ನೋಡಲಿಕ್ಕೆ ಆಗಲಿಲ್ಲಾ ಕಾಣ್ತದ, ರಾತ್ರಿ 9.30ಕ್ಕ ಅಳಿಯಾಗ ಬಿಲ್ ಸೆಟ್ಲ್ ಮಾಡಸಂತ ಕಣ್ಣ ಸನ್ನಿ ಮಾಡಿ ಕಣ್ಣ ಮುಚ್ಚಿ ಬಿಟ್ಟಾ.
ಮುಂದ ಮೂರ ದಿವಸ ಬಿಟ್ಟ ಆ ಮಗಾ ಅಪ್ಪನ ಅರ್ಥಿ ಬಿಟ್ಟ ಬಂದ “ನಿಂಬದ ಎಲ್ಲಿಗೆ ಬಂತಪಾ, ನಿಮ್ಮವ್ವ ಹೆಂಗ ಇದ್ದಾಳ?” ಅಂತ ನನ್ನ ತಮ್ಮಗ ಫೊನ್ ಮಾಡಿದಾ. ಅಂವಾ ಕೇಳಿದ್ದ ಒಂಥರಾ ‘ನಿಮ್ಮವ್ವ ಇನ್ನೂ ಇದ್ದಾಳೇನ?’ ಅಂತ ಕೇಳಿದಂಗ ಇತ್ತ.
ಇತ್ತಲಾಗ ನಮ್ಮ ಕಾಕು oxygen ಇಲ್ಲದ ಅಂದರ ಹಂಗ ಅಲ್ಲಾ, ಕೊಂಡದ್ದ oxygen ಇಲ್ಲದ ದಿವಸಾ ದೂಕಲಿಕತ್ತಿದ್ಲು, ದೇಹದ ಸ್ಥಿತಿ ಕೆಡಕೋತ ಹೋತ. ಒಂದಿಬ್ಬರು ಗಂಗಾಜಲಾ ಬಿಡರಿ ಹಂಗ ಆರಾಮ ಆಗೊದಿತ್ತಂದರ ಆಗತದ ಇಲ್ಲಾ ದೇಹಕ್ಕ ಮುಕ್ತಿನರ ಸಿಗತದ ಅಂತ ಹೇಳಿದರು. ನಮಗು ಅಕಿ ಸಂಕಟಾಪಡೋದ ನೋಡಲಿಕ್ಕೆ ಆಗವಲ್ತಾಗಿತ್ತು. ತೊಗೊ ಮರುದಿವಸ ಪೂರ್ತಿ ಗಂಗಾಜಲದಾಗ ಗಂಜಿ ಮಾಡಿಸಿ ಮೂರ ಹೊತ್ತ ಹಾಕಿದ್ವಿ, ಆದರೂ ಎನ ಫರಕ ಬೀಳಲಿಲ್ಲಾ. ಮತ್ತಾ ಯಾರೋ ಆಕಳಾ ದಾನ ಕೊಡಬೇಕ ಅಂತ ಹೇಳಿದರು. ಯಪ್ಪಾ ಆಕಳಾ ದಾನ ಕೊಡದಕಿಂತಾ ದಾವಾಖಾನಿ ಖರ್ಚ ಕಡಿಮೆ ಅಂತ ಸುಮ್ಮನಾದವಿ. ಅಕಿ ಏನ ಮನಸ್ಸಿನಾಗ ಇಟಗೊಂಡ ಕೋಮಾದಾಗ ಹೋಗ್ಯಾಳೋ ಅಂತ ಮಕ್ಕಳನ್ನ ಕರದ ಕಾಕುನ ಕಿವ್ಯಾಗ ಹೇಳಿಸಿದ್ವಿ,
ನಮ್ಮ ತಮ್ಮ ‘ನೀ ಇಲ್ಲದ್ದ ಕಾಲಕ್ಕೂ ಅಕ್ಕಂದಿರನ ಕರಿಸಿ ವರ್ಷಕ್ಕೊಮ್ಮೆ ಸೀರಿ ಜಂಪರ್ ಕೊಡ್ತೇನಿ’ ಅಂತಾ ಹೇಳಿದಾ, ಅವನ ಹೆಂಡತಿ ‘ನಾ ನಿಮ್ಮಗನ ಬಗ್ಗೆ ಕಾಳಜಿ ತೊಗೊತೇನಿ, ನೀವೇನ ಕಾಳಜಿ ಮಾಡಬ್ಯಾಡರಿ, ನಿಶ್ಚಿಂತಿಯಿಂದ ಕಣ್ಣಮುಚ್ಚರಿ’ ಅಂತ ಹೇಳಿದ್ಲು. ಹೆಣ್ಣ ಮಕ್ಕಳ ಬಂದ ‘ನೀ ಇಲ್ಲದಿದ್ದರು ನಾವ ತವರ ಮನಿಗೆ ಬಂದ ಹಿರೇತನ ಮಾಡಿ ಹೋಗ್ತೇವಿ’ ಅಂತ ಅಂದರು.
ಯಾರ ಏನ ಹೇಳಿದರು ನಮ್ಮ ಕಾಕು ಏನ ಕಿವಿ ಮ್ಯಾಲೆ ಹಾಕೋಳಿಲ್ಲಾ. ಕಡಿಕೆ ಒಂದ ದಿವಸ it is matter of few hours ಅಂತ ಹೇಳಿದ್ದ facebook ಡಾಕ್ಟರ ನನ್ನ ಕರದ i am sorry, she is still holding on ಅಂತ ಕೆಟ್ಟ ಅನಿಸಿಗೊಂಡ ಹೇಳಿ ಮುಂದ ಏನ ಮಾಡೋರು ಅಂತ ನನ್ನ ಕೇಳಿದರು. ಅವರ ಹೇಳಿದ್ದ we did our best ಅನ್ನೊಂಗ ಇತ್ತ. ನಾವು ಡಾಕ್ಟರನ ನೆಚ್ಚಿ ಖರ್ಚ ಮಾಡೋ ಅಷ್ಟ ಮಾಡಿದ್ವಿ, ಇನ್ನ ಮುಂದ ಖರ್ಚ ಮಾಡಬೇಕಂದರ ಏನರ ವತ್ತಿ ಇಡಬೇಕಾಗತಿತ್ತ. ನಾ ಭಡಾ ಭಡಾ ತಲಿಕೆಟ್ಟ ’ನಾವ ಮನಿಗೆ ತೊಗೊಂಡ ಹೋಗ್ತೇವಿ’ ಅಂದ ಬಿಟ್ಟೆ. ಡಾಕ್ಟರ ಒಂದ ಮಾತಿಗೆ most sensible decision ಅಂದ ಬಿಟ್ಟರು. ಕಡಿಕೆ ಮರುದಿವಸ ಲೆಕ್ಕಾ ಸೆಟ್ಲ್ ಮಾಡಿ ಕಾಕುನ ಕೋಮಾದಾಗ ಮನಿಗೆ ಕರಕೊಂಡ ಹೋಗಿ ಬಿಟ್ವಿ. ಅದರಾಗ ಮಂದಿ ನಮಗ ಕೋಮಾದಾಗ ವರ್ಷಾನಗಟ್ಟಲೇ ಇರತಾರಂತ ಬ್ಯಾರೆ ಹೆದರಿಸಿದ್ದರು. ಹಿಂಗಾಗಿ ನಾವ ದಾವಾಖಾನಿ ಒಳಗ ಎಷ್ಟ ದಿವಸಂತ ಇಡಬೇಕು? ಅಕಸ್ಮಾತ ಅಕಿ ಮನಸ್ಸಿನಾಗ ಮನ್ಯಾಗ ಜೀವ ಬಿಡೋದ ಇತ್ತಂದರ ಯಾರ ಬ್ಯಾಡ ಅಂತಾರ ಅಂತ ಮನಿಗೆ ಕರಕೊಂಡ ಬಂದ ಬಿಟ್ವಿ. ನಮ್ಮ ಕಾಕು ಹಂಗs ಕೋಮಾದಾಗ ಉಳದ ಬಿಟ್ಟಳು………
………ಇಲ್ಲಿಗೆ ನಮ್ಮ ದಾವಾಖಾನಿ ಪ್ರಹಸನ ಮುಗಿತ.
ಹಂಗ ನಾ ನಮ್ಮ ಕಾಕು ಕೋಮಾದಾಗ ಹೋಗಿದ್ದ ಒಂದ ಪ್ರಹಸನ ಮಾಡಿ ಬರದಿದ್ದು ಸರಿ ಅನಸಲಿಕ್ಕಿಲ್ಲಾ. ಆದ್ರ ನನಗ ಆ ಒಂದ ತಿಂಗಳದಾಗ ಜೀವನದ ಬಗ್ಗೆ ಜಿಗೂಪ್ಸೆ ಬಂದ ಬಿಟ್ಟಿತ್ತ. ಕಾಕುನ್ನ 108ರಾಗ ಕರಕೊಂಡ ಬಂದಾಗ, ಅಕಿದ ಶುಗರ್ ಲೆವೇಲ್ ಮೆಂಟೇನ ಮಾಡಬೇಕಾರ, ಡೈಲಸಿಸ್ ಮಾಡಸಬೇಕಾರ, ಮುಂದ ಅಕಿ ಹಿಪೊಗ್ಲೇಸಿಮಿಯಾ ಆಗಿ ಕೋಮಾದಾಗ ಹೋಗ್ಯಾಳ್ there is no hope ಅಂತ ಡಾಕ್ಟರ್ ಹೇಳಿದಾಗ, ಹೆಂಗ ನಮ್ಮ ಭಾವನೆಗಳು ಚೇಂಜ್ ಆಕ್ಕೊತ ಹೋದ್ವು? ಎಷ್ಟ ಮಾನಸಿಕ ಧ್ವಂಧದೊಳಗ ತೊಳಲಾಡಿದ್ವಿ?…..ಮುಂದ ಅಕಿ ಇನ್ನ ಕೋಮಾದಾಗ ಹೋಗೊಕಿ, ಯಾವುದೇ ಕ್ಷಣ ಅಕೀಯ ಕೊನೇಯ ಕ್ಷಣ ಆಗಬಹುದು ಅಂತ ಗೊತ್ತಾದ ಮ್ಯಾಲೆ ಆ ಕೊನೇಯ ಕ್ಷಣದ ಕ್ಷಣಗಣನೆ ಮಾಡ್ಕೋತ ವಾರಾಗಟ್ಟಲೇ ಹೆಂಗ ಕಳದ್ವಿ. ಆವಾಗ ಮನಸ್ಸ ಎಷ್ಟ ನಿರ್ಲಿಪ್ತ ಆಗಿಬಿಟ್ಟಿತ್ತ, ನಾವ ಎಷ್ಟ ಪ್ರ್ಯಾಕ್ಟಿಕಲ್ ಆಗಿ ಬಿಟ್ವಿ, ಅದು ಸರೀನೊ ತಪ್ಪೋ ಯಾರಿಗೆ ಗೊತ್ತ. ಆದರ ಒಂದ ಅಂತೂ ಖರೆ ಸಂಧರ್ಭ ನಮ್ಮ ಮನಸ್ಸಿನ ಮ್ಯಾಲೆ ಮತ್ತು ಭಾವನೆಗಳನ್ನ ಮೀರಿ ತನ್ನ ಹಿಡಿತವನ್ನ ಸಾಧಸಿ ಬಿಟ್ಟಿತ್ತು. ನಾವು ಭಾಳ ಸರಳವಾಗಿ ಬಂದವರಿಗೆಲ್ಲಾ ‘ನಮ್ಮ ಕಾಕು ಕೋಮಾದಾಗ ಹೋದ್ಲು’ ಅಂತ ಹೇಳೊ ಅಷ್ಟ ನಿಷ್ಠುರ, ನಿರ್ಲಿಪ್ತ ಆಗಿ ಬಿಟ್ವಿ. ಕಾಕು ಕೋಮಾದಾಗ ಹೋದ್ಲೋ ಇಲ್ಲಾ ಇವತ್ತ ಇರೋ ನಮ್ಮ ಜೀವನನ ಒಂದ ಕೋಮಾನೋ ಒಂದು ತಿಳಿಲಾರದಂಗ ಆಗಿ ಹೋಗೇದ.
life is illusion ಅಂತಾರಲಾ ಅದ ಸುಳ್ಳಲ್ಲಾ ಅನಸ್ತದ. ಇವತ್ತ ಇದ್ದ ಮನಷ್ಯಾ ನಾಳೇ ಇರತಾನ ಅಂತ ಹೇಳಲಿಕ್ಕೆ ಬರಂಗಿಲ್ಲಾ. life is so uncertain and unpredictable.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ