ಕಿರಾಣಿ ವಿಶೇಷಾಂಕ

ಮನ್ನೆ ಮಧ್ಯಾಹ್ನ ದುಡದ ಸಾಕಾಗಿ ಬಂದ ದಣೇಯಿನ ಊಟಕ್ಕ ಕೂತಿದ್ದೆ. ಒಂದ ಸರತೆ ಸಾರೂ ಅನ್ನ ಉಂಡ, ಇನ್ನೇನ ಎರಡನೇ ಸರತೆ ಅನ್ನಕ್ಕ ಹುಳಿ ಹಾಕಸಿಗೋಬೇಕು ಅನ್ನೋದರಾಗ ನಮ್ಮವ್ವಾ ಅಡಗಿ ಮನ್ಯಾಗಿಂದ ಒಂದ ಕೈಯಾಗ ಸಾರಿನ ಸೌಟ ಹಿಡಕೊಂಡ “ಪ್ರಶಾಂತಾ, ಹೋದ ತಿಂಗಳದ್ದ ಕಿರಾಣಿ ಸಾಮನದ್ದ ರೊಕ್ಕಾ ೪೮೫೦ ರೂಪಾಯಿ ಕೊಡಬೇಕ, ನಾವ ಅದನ್ನ ಹಂಗ ಬಾಕಿ ಇಟ್ಟ ಮೊನ್ನೆ ಮತ್ತ ಹಬ್ಬದ ಸಾಮಾನ ಉದ್ರಿ ತಂದೇವಿ ” ಅಂತ ಅಂಗಡಿಯವನ ಪರವಾಗಿ ಪೇಮೆಂಟ ಕೇಳಿದ್ಲು. ನಮ್ಮ ಅವ್ವಗ ನಾ ಊಟಕ್ಕ ಕೂತಾಗ ರೊಕ್ಕಾ ಕೇಳೋ ಚಟಾ ಅದ, ಆದರ ನನಗ ಊಟಕ್ಕ ಕೂತಾಗ ಯಾರರ ನಾ ರೊಕ್ಕಾ ಕೊಡೋ ವಿಷಯ ತಗದರ ಭಾಳ ಸಿಟ್ಟ ಬರತದ. ಮೊದ್ಲ ನಾ ಉಣ್ಣೋದ ನಾಲ್ಕ ತುತ್ತ ಅದರಾಗ ರೊಕ್ಕದ ವಿಷಯ ಬಂದರ ಎರಡ ತುತ್ತೂ ಗಂಟಲದಾಗ ಇಳಿಯಂಗಿಲ್ಲಾ.
” ಈಗೇನ್ ನಾ ಕೈತೊಳ್ಕೋಂಡ ರೊಕ್ಕಾ ಕೊಟ್ಟ ಬಂದ ಆಮೇಲೆ ಮಜ್ಜಗಿ ಅನ್ನಾ ಉಣ್ಣಲೋ ,ಏನ ಮಜ್ಜಿಗೆ ಅನ್ನಾ ಉಂಡ ಆಮ್ಯಾಲೆ ಕೊಟ್ಟರ ನಡಿತದೋ? ” ಅಂತ ನಾ ಜೋರ ಮಾಡಿದೆ.
“ಏ ಉಣ್ಣೋ ಮಾರಾಯಾ ಉಣ್ಣ, ನಾ ನಿನಗ ಹೇಳಿದೆ ಇಷ್ಟ. ನಮಗ ಸುಡಗಾಡ ವಯಸ್ಸಾಗೇದ ಆಮೇಲೆ ಮರತ ಬಿಡತೇವಿ ಅಂತ ಈಗ ಹೇಳಿದೆ. ನೀ ಯಾವಾಗರ ಕೊಡಕೋ ,ನಂಗೇನ ಆಗೋದ ಅದ, ಎಷ್ಟ ಅಂದ್ರು ಇದ ನಿಂದ ಸಂಸಾರ ” ಅಂದ್ಲು.
ನಂದ ಸಂಸಾರ ಅಂದರ ಎಲ್ಲಾದಕ್ಕೂ ನಾನ ರೊಕ್ಕಾ ಕೋಡೊಂವಾ ಅಂತ ಅಷ್ಟ, ಮನ್ಯಾಗ ಎಲ್ಲಾ ನಂದ ನಡಿತದ ಅಂತ ಅಲ್ಲಾ ಮತ್ತ.
ಸರಿ ಊಟಾ ಮುಗಿಸಿ ಕೈ ತೊಳ್ಕೋಂಡ ಒರಿಸಿಗೊಳ್ಳಿಕ್ಕೆ ಟಾವೇಲ್ ಹುಡಕಲಿಕತ್ತಿದ್ದೆ, ನಮ್ಮವ್ವಾ ಹಾಳಿ ಕೊಟ್ಲು ” ಇದೇನ್, ಈಗ ಮನ್ಯಾಗೂ ಪೇಪರ್ ನ್ಯಾಪಕೀನ ?” ಅಂದೆ ” ಅಲ್ಲೋ ಇದ ಕಿರಾಣಿ ಸಾಮಾನ ಚೀಟಿ, ನೀ ಯಾವಾಗರ ಕೋಟಗೋ ” ಅಂತ ಕೈಯಾಗ ಚೀಟಿ ತುರ್ಕಿದ್ಲು.
ನಾ ರೊಕ್ಕದ ಹಿರೇತನ ನಮ್ಮನ್ಯಾಗ ಮಾಡಲಿಕತ್ತ ಒಂದ ಇಪ್ಪತ್ತ ವರ್ಷ ಆತ ಆದರ ನಾ ಒಂದ ಸರತೆನೂ ಎದಕ್ಕ ಎಷ್ಟ ಖರ್ಚ ಆತೂ ಅಂತ ತಲಿಕೆಡಿಸಿ ಕೊಂಡವಾ ಅಲ್ಲಾ, ನಮ್ಮವ್ವ ಎಷ್ಟ ಹೇಳತಾಳ ಅಷ್ಟ ದುಡ್ಡ ಕೊಟ್ಟ ಸುಮ್ಮನ ನನ್ನ ಪಾಡಿಗೆ ನಾ ಇದ್ದ ಬಿಡಾಂವ. ಆದರ ತಿಂಗಳಾ ಮೂರ -ಮೂರುವರಿ ಸಾವಿರಕ್ಕ ಮುಗಿಯೋ ಚೀಟಿ ಈ ಸಲಾ ಯಾಕೋ ೪ ರ ಗಡಿ ದಾಟಿತ್ತು. ಒಂದ ರೌಂಡ ಮನ್ಯಾಗ ಯಾವ್ಯಾವ ಸಾಮಾನ ತರಸ್ತಾರ,ಎಷ್ಟೇಷ್ಟ ತರಸ್ತಾರ, ಯಾಕ ತರಸ್ತಾರ ಮತ್ತ ಅವಕ್ಕ ಎಷ್ಟೇಷ್ಟ ರೊಕ್ಕಾ ನೋಡೆ ಬಿಡೋಣ್ ಅಂತ ಚೀಟಿ ತನಿಖೆ ಶುರುಮಾಡಿದೆ. ಚೀಟಿಮ್ಯಾಲೆ ‘ ಪಿ. ಕೆ. ಅಡೂರ – ಬಾಕಿ ೪೮೫೦.೦೦ ರ’ ಅಂತ ಬರದಿದ್ದರು. ಅದರ ಕೆಳಗ ‘ಸಾಮಾನು – ತೂಕ – ರೊಕ್ಕಾ’ ಬರಕೋತ ಹೋಗಿದ್ದರು. ಒಂದ ಪುಟಾ ತುಂಬಿ ಎರಡನೇ ಪುಟದ ಅರ್ಧಕ್ಕ ಟೊಟಲ್ ಕಾಣತು. ಅಲ್ಲೇ ಮತ್ತ ೪೮೫೦ ರೂ ಬಾಕಿ ಅಂತ ಸ್ವಲ್ಪ ತೀಡಿ ದಪ್ಪಗ ಬರದಿದ್ದರು. ಈ ಸಂಸಾರ ಅನ್ನೋದ ಎಷ್ಟ ಸಾಮಾನನಿಂದ ನಡಿತದ ಅನ್ನೋದರ ವಿಶ್ಲೇಷಣೆ ಶುರು ಮಾಡಿದೆ. ಲಿಸ್ಟನಾಗ ಮೂದಲ ನಮ್ಮ ಮಂದಿ ಮೇನ್ ಐಟಮ್- ಅನ್ನ ಬ್ರಹ್ಮ
ಅಕ್ಕಿ- ೨೫ ಕೆಜಿ – ೭೫೦ರೂ.
ದಪ್ಪಕ್ಕಿ, ಸಣ್ಣಕ್ಕಿ, ನಮ್ಮೋಕಿ, ನಿಮ್ಮೋಕಿ ಎಲ್ಲಾ ಕೂಡಿ ತಿಂಗಳಿಗೆ ೨೫ ಕೆ.ಜಿ ನಮ್ಮ ಮನಿಗೆ ಅಷ್ಟ ಬೇಕೆ ಬೇಕ.
ಮಾತ ಎತ್ತಿದರ ಬರೇ ಅನ್ನಾ ಅನ್ನೋ ಬ್ರಾಹ್ಮಣರ ನಾವ ‘ತುಪ್ಪಾ ಅನ್ನಾ, ತವೀ ಅನ್ನಾ,ಸಾರು ಅನ್ನಾ,ಹುಳಿ ಅನ್ನಾ,ಪಳದೆ ಅನ್ನಾ………ಅಂತ ನೂರಾ ಎಂಟ ಅನ್ನಾ ಉಂಡ ಮತ್ತ ಮರು ದಿವಸ ಆ ಅನ್ನಾ ಉಳಸಿ ಅದನ್ನ ‘ಕಲಸನ್ನಾ’ ಮಾಡಕೊಂಡ ಉಣ್ಣೋರು. ನಮ್ಮ ಅವ್ವಂತೂ ಆ ಅನ್ನಾ ‘ಹಳಸಿದ ಅನ್ನಾ’ ಆಗೋಮಟಾ ಬಿಡೋಕಿನ ಅಲ್ಲಾ. ಯಾವಾಗರ ನಮ್ಮ ದೋಸ್ತರಿಗೆ ಊಟಕ್ಕ ಮನಿಗೆ ಬಾ ಅಂತ ಕರದರ “ನಮ್ಮ ಮನ್ಯಾಗ ರೂಟ್ಟಿ ತಿಂದ ಬರತೇನಲೇ, ನೀವ ಬ್ರಾಹ್ಮಣರ ಬರೇ ಅನ್ನ ಹಾಕಿ ಸಾಯ ಹೋಡಿತಿರಿ ” ಅಂತಾರ. ಅದು ಖರೇನ್, ಆ ಪರಿ ಅನ್ನಾ ಉಣ್ಣೋ ಬ್ರಾಹ್ಮಣರ ನಾವು. ಇನ್ನ ಪ್ರತಿ ತಿಂಗಳ ೨೫ ಕೆಜಿ ಅಕ್ಕಿ ಒಳಗ ಏನರ ಕಡಿಮೆ ಮಾಡಬೇಕಂದರ ಅದ ಅಷ್ಟ ಸರಳ ಇಲ್ಲಾ. ಒಂದ ನಮ್ಮ ಅವ್ವಾ-ಅಪ್ಪಾ ವಯಸ್ಸಾಗೇದ, ತಾವ ತಿಳ್ಕೋಂಡ ವಾರದಾಗ ಮೂರ-ನಾಲ್ಕ ಸರತೆ ಅನ್ನಾ ಬಿಟ್ಟ ಒಪ್ಪತ್ತು, ಉಪವಾಸ ಮಾಡಬೇಕು. ಇಲ್ಲಾ ಅವರಿಗೆ ಡಾಕ್ಟರ್ ನಿಮಗ ಶುಗರ ಆಗೇದ ಇನ್ನ ಅನ್ನಾ ಕಡಿಮೆ ಮಾಡರಿ ಅಂತರ ಹೇಳ್ಬೇಕು. ಹೋಗಲಿ ಬಿಡರಿ ಆಮ್ಯಾಲೇ ನಾ ಅಕ್ಕಿ ರೊಕ್ಕಾ ಉಳಸಲಿಕ್ಕೆ ಹೋಗಿ ಅವಲಕ್ಕಿಗೆ ಇಲ್ಲಾ ಗುಳಗಿಗೆ ಬಡಿಯೋ ಹಂಗ ಆಗಬಾರದು.
ಮುಂದಿನ ಐಟೆಮ್ ತೂಗರಿ ಬ್ಯಾಳಿ… ೭. ಕೆಜಿ – ೫೨೫ ರೂ
ತಿಂಗಳಿಗೆ ೭ ಕೆಜಿ ಅಂತ ಓದಿ ಗಾಬರಿ ಆಗಬ್ಯಾಡ್ರಿ, ನಂಗ ಗೂತ್ತ ಇಷ್ಟರಾಗ ನೀವೆಲ್ಲಾ ಐದ – ಆರ ತಿಂಗಳ ಸಂಸಾರ ಮಾಡ್ತೀರಿ ಅಂತ. ಆದರ ಏನ ಮಾಡೋದ ನಮ್ಮವ್ವಗ ತಿಂಗಳಿಗೆ ಇನ್ನೂ ೩ ಕೆಜಿ ಕೊಡಸಿದರೂ ಕಡಿಮೀನ.
” ಕಾಕು ನೀ ಹುಳಿ ಛಲೋ ಮಾಡತಿ, ನಿನ್ನ ಕೈಯಾಗಿನ ಹುಳಿ ವೈಷ್ಣವರ ಆರಾಧನೆ ಹುಳಿಗಿಂತ ಛಲೋ ಆಗಿರ್ತದ ” ಅಂತ ಯಾರರ ಅಂದಬಿಟ್ಟರ ಸಾಕ, ಒಂದ ಅರ್ಧಾ ಕೆಜಿ ತೋಗರಿ ಬ್ಯಾಳಿ ಬೇಯಿಸಿ ನಂದ ಅರಾಧನೆ ಮಾಡೇ ಬಿಡತಾಳ. ತುಟ್ಟಿಕಾಲ ಬ್ಯಾಳಿ ನೋಡಿ ಬೇಯಸು ಅಂದರ ಕೇಳಂಗಿಲ್ಲಾ. ಒಂದ ತಪ್ಪೇಲಿ ತುಂಬ ಹುಳಿ ಮಳ್ಳಿಸಿ ಇಟ್ಟಳಂದರ ನಮ್ಮಪ್ಪಾ ” ಇಷ್ಟ ಹುಳಿ ಒಳಗ ನಂದ ಲಗ್ನ ಆಗಿತ್ತು” ಅಂತಾನ. ಆಗಿದ್ರು ಆಗಿರಬಹುದು ಬಿಡರಿ, ನಮ್ಮವ್ವ ಅಷ್ಟ ಹುಳಿನ ಮಾಡಿರತಾಳ ಮತ್ತ. ಇನ್ನ ಹುಳಿ ಏನ ನನ್ನಂಗ ತೇಳ್ಳಗರ ಮಾಡತಾಳ? ಇಲ್ಲಾ, ಅಗದಿ ನನ್ನ ಹೆಂಡತಿಗತೆ ಗಟ್ಟಿ ಚೆಂಡ ಮಾಡಿರತಾಳ.
ಬರೇ ತೊಗರಿ ಬ್ಯಾಳಿ ಮ್ಯಾಲೇ ಸಂಸಾರ ಮುಗಿಸ್ಯಾಳಿನೂ ಅಂತ ನೋಡಿದ್ರ ಅದೂ ಇಲ್ಲಾ, ಲಿಸ್ಟನಾಗ ಹೆಸರಬ್ಯಾಳಿ , ಕಡ್ಲಿಬ್ಯಾಳಿ , ಮಡಿಕೆ , ಅಲಸಂದಿ , ಪುಟಾಣಿ , ಶೇಂಗಾ, ಗೋದಿ, ಜೋಳಾ……………… ಇವು ಏಲ್ಲಾ ಕೆಜಿಗಟ್ಟಲೆ ಅವ. ನಾ ಲಗ್ನಾ ಮಾಡ್ಕೋಬೇಕಾರ ನಮ್ಮವ್ವಗ ಒಂದ ಹತ್ತ ಸರತೆ ಹೇಳಿದೆ ‘ಯಾವದರ ಹಳ್ಯಾಗಿಂದ ಹೊಲಾ-ಮನಿ ಇದ್ದದ್ದ ‘ಹೆಣ್ಣಾಳ’ ಮಾಡ್ಕೊಂಡರಾತು, ಮನಿಗೆ ವರ್ಷಾ ಕಾಳು – ಕಡಿನರ ಬೀಗರ ಕಳಸ್ತಾರ’ ಅಂತ. ಆದ್ರ ನಮ್ಮವ್ವ ನನ್ನ ಮಾತ ಕೇಳಲಾರದ ಮನ್ಯಾಗ ಕೆಲಸಾ-ಬೊಗಸಿ ಬಂದರ ಸಾಕೂ ಅಂತ ‘ಮನಿ ಗೆಲಸದಾಕಿ’ನ ನನಗ ಗಂಟ ಹಾಕಿದ್ಲು. ಈಗ ನೋಡ್ರಿ ನಮ್ಮ ಮಾವನ ಮನಿ ಇಂದ ಒಂದ ಮುಷ್ಟಿ ಖಾರಪುಡಿ ಸಹಿತ ಬರಂಗಿಲ್ಲಾ.ಎನೋ ಅವರ ಮಗಳ ಆವಾಗ ಇವಾಗ ಬೆಲ್ಲಾ ಕೊಡತಾಳ ಅಂತ ನಾನೂ ಸುಮ್ಮನ ಇದ್ದೇನಿ……….ಇರಲಿ.
ಇನ್ನೊಂದ ಮೇನ್ ಬ್ಯಾಳಿ ಮರತಿದ್ದೆ…… ಉದ್ದಿನ ಬ್ಯಾಳಿ….. ತಿಂಗಳಿಗೆ ೪ ಕೆಜಿ ……೩೨೦ ರೂ
” ಇಷ್ಟ ಯಾಕ? ” ಅಂತ ನಮ್ಮವ್ವನ ಕೇಳೋಹಂಗ ಇಲ್ಲಾ. ಯಾಕಂದರ ನನ್ನ ಮಗಗ ವಾರಕ್ಕ ಎರಡ ಸಲಾ ಇಡ್ಲಿ ಬೇಕ. ಇಡ್ಲಿ ಮಾಡಿದಾಗ ಒಮ್ಮೆ ಮೂರೂ ಹೊತ್ತ, ಮೂದಲಿನ ಒಂದ ಒಬ್ಬಿ ಅವಂಗ (ಒಂದ ಒಬ್ಬಿ ಅಂದರ ೧೨ ಇಡ್ಲಿ). ಇನ್ನ ಎರಡ ಒಬ್ಬಿ ಒಳಗ ಉಳದವರ ಎಲ್ಲಾರೂ ತಿನ್ನ ಬೇಕು. ಏನೋ ಸಣ್ಣಾಂವ ಇದ್ದಾಗ ಅದು -ಇದು ತಿಂದರ ಆರೋಗ್ಯ ಕೆಡತದ ಅಂತ ಹೋದಲ್ಲೆ-ಬಂದಲ್ಲೆ ಎಲ್ಲಾ ಇಡ್ಲಿ ತಿನ್ನಿಸ್ತಿದ್ದವಿ, ಈಗ ಅವಂಗ ಅದ ಒಂದ ಕೆಟ್ಟ ಚಟಾ ಆಗಿ ಹೋಗೆದ. ಇನ್ನ ಇಡ್ಲಿ ಮಾಡಿದ್ದ ದಿವಸ ಹಿಟ್ಟ ಉಳಿದಿರತದ ಇಲ್ಲಾ ಮನ್ಯಾಗ ಮುದ್ದಾಂ ಉಳಿಸಿ ಮರುದಿವಸ ದೋಸೆ ಮಾಡತಾರ. ಮತ್ತೂ ಇನ್ನೂ ಹಿಟ್ಟ ಉಳದರ ಅದು ಅದರ ಮರುದಿವಸ ‘ಫಡ್’ ಅಂದರ ಗುಣಪಂಗಳ ಆಗತದ. ಹಂಗ ನೋಡಿದ್ರ ತಿಂಗಳಿಗೆ ೪ ಕೆಜಿ ಉದ್ದಿನ ಬ್ಯಾಳಿ ಭಾಳ ಕಡಿಮಿನ ಅನ್ನರಿ.
ಹಾಂ…..ಇನ್ನ ಮುಂದಿನ ಐಟಮ್, ಬ್ರಾಹ್ಮಣರ ಪಿತ್ರಾರ್ಜಿತ ದಿನಸಿ, ಅವಲಕ್ಕಿ…..
ಅವಲಕ್ಕಿ ಒಳಗ ಮೂರ ನಮೂನಿರಿಪಾ. ಮಿಡಿಯಮ್ , ಪೇಪರ ಮತ್ತ ಇನ್ನೊಂದ ಧಪ್ಪ ಅವಲಕ್ಕಿ.
ಪೇಪರ ಅವಲಕ್ಕಿಲೇ ಬರೇ ಹಚ್ಚಿದ ಅವಲಕ್ಕಿ ಮಾಡಿ ‘ಮನಿ ಮಗಳ ತವರ ಮನಿಗೆ’ ಬಂದಾಗ ಒಮ್ಮೆ ಅಂದರ ಹದಿನೈದ ದಿವಸಕ್ಕ ಒಂದ ಸರತೆ ಎರಡ ಕೆಜಿ ಕೊಟ್ಟ ಕಳಸಲಿಕ್ಕೆ. ಯಾಕಂದರ ತವರಮನಿ ಅವಲಕ್ಕಿ,ಅದೂ ಅವ್ವನ ಕೈಯಾಗ ಹಚ್ಚಿದ್ದ ಅವಲಕ್ಕಿ ಭಾಳ ರುಚಿ ಇರತದ ಅಂತ, ಹೀಂಗಾಗಿ ತಿಂಗಳಿಗೆ ಒಂದ ನಾಲ್ಕ ಕೆಜಿ ಮನಿ ಮಗಳಿಗೆ. ಅದರ ಜೊತಿ ‘ಚಟ್ನೀ ಪುಡಿ, ಮಸಾಲಿ ಪುಡಿ , ಮೆಂತೆ ಹಿಟ್ಟ, ಒಂದ ಮೂರ ನಾಲ್ಕ ತರಹದ ಉಪ್ಪಿನ ಕಾಯಿ’ ಫ್ರೀ ಮತ್ತ. ‘ಪಾಪ ಅಕಿ ಎಷ್ಟ ಒಯ್ದಾಳು, ಮನಿ ಮಗಳ- ಹೊರಗಿನೋಕಿ ಏನ ಅಲ್ಲಲಾ!’ , ಅವರವ್ವ ಇರೋ ಮಟಾ ಒಯ್ತಾಳ, ಒಯ್ಯಲಿ.
ಇನ್ನ ಮಿಡಿಯಮ್ ಅವಲಕ್ಕಿ- ಏಕಾದಶಿ, ಒಪ್ಪತ್ತ,ಉಪವಾಸ, ಶ್ರಾದ್ಧದ ಹಿಂದಿನ ದಿವಸ ರಾತ್ರಿ, ಶ್ರಾದ್ಧ ಮಾಡಿದ್ದ ದಿವಸ ರಾತ್ರಿ ತಿನ್ನಲಿಕ್ಕೆ. ತಿಂಗಳಿಗೆ ಒಂದ-ಎರಡ ಕಿಲೋ ಸಾಕ, ನೀವ ಯಾರರ ತಿಂಡಿ ವೇಳ್ಯಾದಾಗ ಮನಿಗೆ ಬಂದರ ಇದ ಅವಲಕ್ಕಿ ಮತ್ತ.
ಇನ್ನ ದಪ್ಪ ಅವಲಕ್ಕಿಲೆ ‘ನಳಾ ಬಂದಾಗ ತೊಯಿಸಿದ್ದ ಅವಲಕ್ಕಿ’ ಮಾಡತಾರ. ಇದ ಅಲ್ಲದ ದಪ್ಪ ಅವಲಕ್ಕಿನ ಹಚ್ಚಿ ಆಮೇಲೆ ಕುಟ್ಟಿ “ಕುಟ್ಟ ಅವಲಕ್ಕಿ” ಅಂತ ಹಲ್ಲ ಇಲ್ಲದವರ ಸಂಬಂಧ ಮಾಡತಾರಲಾ ಅದ ನಮ್ಮಜ್ಜಿ ಮನಿಗೆ. ಪಾಪಾ ನಮ್ಮ ಮಾಮಿಗೆ ಅವಲಕ್ಕಿ ಮಾಡಿ ಕುಟ್ಟಲಿಕ್ಕ ಟೈಮ್ ಇಲ್ಲಾ ಹೀಂಗಾಗಿ ನಮ್ಮವ್ವ ತಿಂಗಳಾ ಒಂದ ಎರಡ ಕಿಲೋ ಅವಲಕ್ಕಿ ಮಾಡಿ ಅವರವ್ವಗ ಕುಟ್ಟಿ ಕೊಡತಾಳ. ಅದರಾಗ ನಮ್ಮಜ್ಜಿ ವಾರದಾಗ ನಾಲ್ಕ ದಿವಸ ಒಪ್ಪತ್ತ ಮಾಡತಾಳ. ಪಾಪ, ಬರೇ ಕುಟ್ಟವಲಕ್ಕಿ ಮ್ಯಾಲೇ ಜೀವನಾ ಕುಂಟಸಿಗೋತ ಹೊಂಟಾಳ.
ನಾನೂ ನೋಡಿ-ನೋಡಿ ತಲಿಕೆಟ್ಟ ಒಂದಸಲಾ “ನಂಬದೇನ ಭತ್ತದ ಗದ್ದೆ ಅದನೋ? ಏನ ಅವಲಕ್ಕಿ ಭಟ್ಟಿ ಅದನೋ? ” ಅಂತ ನಮ್ಮವ್ವನ ಕೇಳಿದರ “ಅವಲಕ್ಕಿ- ಸುದಾಮ, ಹಂಗೇಲ್ಲಾ ಅನ್ನ ಬ್ಯಾಡಾ, ನಿಮ್ಮಜ್ಜಿರ ಇನ್ನ ಎಷ್ಟ ವರ್ಷ ಇರತಾಳ ” ಅಂತಾಳ.
ಹೀಂಗಾಗಿ ನಮ್ಮಪ್ಪನ ಹೆಸರು ‘ಕೃಷ್ಣಾ’ ಅಂತ ಇದ್ದರೂ ನಾ ಇನ್ನೂ ಸುದಾಮನ ಆಗಿ ಉಳದದ್ದು. ನಮ್ಮವ್ವ ಹೀಂಗ ಖರ್ಚ ಮಾಡ್ಕೋತಿದ್ದರ ಅಕಿ ಇರೋಮಟಾ ನಾ ಸುದಾಮನ ಆ ಮಾತ ಬ್ಯಾರೆ.
ಇರಲಿ ಮುಂದಿನ ಸಾಮಾನ -ರವಾ
ಬಾಂಬೆರವಾ , ಚರೋಟಿರವಾ , ಕೆಸರಿ ರವಾ , ಇಡ್ಲಿ ರವಾ ……ರವಾದಾಗ ಇಷ್ಟ ಥರಾ ಅನ್ನೋದ ಇವತ್ತ ಗೊತ್ತಾತ. ನನಗ ಮೆತ್ತಗ ಮುದ್ದಿಗತೆ ಇರೋ ಉಪ್ಪಿಟ್ಟ ಬೇಕ, ಅದಕ್ಕೊಂದ ರವಾ. ನನ್ನ ಹೆಂಡತಿಗೆ ಮೂದಲ ಸರ್ಕಾರಿ ಸಾಲ್ಯಾಗ ಕೊಡತಿದ್ದರಲಾ ಗೊಂಜಾಳ ಉಪ್ಪಿಟ್ಟ, ಹಂತಾ ಉದರಂದ ಉಪ್ಪಿಟ್ಟ ಬೇಕ, ಅದಕ್ಕೊಂದ ರವಾ. ಇನ್ನ ಉಳದವರಿಗೆ ಒಂದ ರವಾ. ಜೀವನ ರವಾ -ರವಾ ಅನ್ನೋಷ್ಟ ರವಾ.
ಇನ್ನ ಸ್ವಲ್ಪ ನನ್ನ ಲೆವಲಗಿಂತಾ ಮ್ಯಾಲಿನ ಐಟಮ್ಸ್ – ಗೋಡಂಬಿ, ದ್ರಾಕ್ಷಿ , ಯಾಲಕ್ಕಿ , ತುಪ್ಪ , ಒಣಾ ಕೊಬ್ಬರಿ , ಕಸಕಸಿ , ಬದಾಮಿ , ಕೇರಬೀಜಾ , ಪಿಸ್ತಾ…..
” ಯಾರರ ಹಡದಾರನ ಮನ್ಯಾಗ? ಬಾಣಂತನದ ಸಾಮಾನ ತರಸಿರಿ ಅಲಾ ” ಅಂದೆ.
” ಇಲ್ಲಾ, ಈ ಸಲಾ ದೀಪಾವಳಿ ಫರಾಳಕ್ಕ ಅಂಟಿನ ಉಂಡಿ ಮಾಡೇನಿ ” ಅಂತ ನನ್ನ ಹೆಂಡತಿ ಒದರಿದ್ಲು.
ಒಂದ ಸಲಾ ಅಕಿ ಮಾರಿ, ಒಂದ ಸಲಾ ಅಕಿ ಟೊಂಕಾ ನೋಡಿದೆ. ಮನ್ನೇರ ಟೊಂಕ ಗಟ್ಟಿ ಇತ್ತ ಆದರೂ ಯಾಕ ಅಂಟಿನ ಉಂಡಿ ಮಾಡ್ಯಾಳ ಗೊತ್ತಾಗಲಿಲ್ಲಾ. ಬಹುಶಃ ಅಕಿಗೆ ನಂದ ಟೊಂಕ ಗಟ್ಟಿ ಇಲ್ಲಾ ಅನಸಿರಬೇಕು ಅನಸ್ತು. ಇರಲಿ ಇನ್ನೋಂದ ಸ್ವಲ್ಪ ಟೊಂಕ ಗಟ್ಟಿ ಆದರು ತಪ್ಪ ಏನ ಇಲ್ಲಾ, ಹೆಂಗಿದ್ದರು ಅಕಿದ ಆಪರೇಶನ್ ಆಗೇದ.
ಹೀಂಗ ಲಿಸ್ಟ ಮ್ಯಾಲೆ ಮುಂದ ಕಣ್ಣ ಹಾಯಿಸ್ಗೋತ ಹೊಂಟೆ. ನಮ್ಮ ಅತ್ತಿ ಮನಿಯವರ ಕಡೆದ ಭೂಮದ ಸಾಮಾನ ಯಲ್ಲಾ ಒಂದ ಕಡೆ ಇದ್ದವು. ಇಂಗು, ಮೆಂತೆ , ಸಾಸವಿ , ಯಳ್ಳು , ಹರಳಉಪ್ಪ , ಕುಟ್ಟಿದ ಉಪ್ಪು , ಹುಣಸೆ ಹಣ್ಣು , ಖಾರಪುಡಿ , ಜೀರಗಿ , ಹವಿಜಾ , ಡಾಂಬರ ಗುಳಿಗಿ , ಫಿನೈಲ್ , ಆಸಿಡ್….. ಯಲ್ಲಾ ಅವರವರ ಅವಶ್ಯಕತೆ ಇದ್ದಷ್ಟ ಇದ್ದವು. ಇನ್ನ ಇದರ ಬಗ್ಗೆ ಏನರ ಅಂದ ನನ್ನ ಹೆಂಡತಿ ಕಡೆ ತೀವಿಸಿ ಗೊಳ್ಳೋದ ಬ್ಯಾಡಾ.
ಮುಂದಿನ ಐಟಮ್ ಗೆ ಬಂದೆ……..ಯಲ್ಲಾ ನನ್ನ ಹೆಂಡತಿ ಆಸ್ತಿ ಸಾಮಾನ – ಸಬೀನಾ , ಡೆಟಾಲ್ ಸೋಪು , ರಿನ್ ಬಿಗ್ , ಟೈಡ ಪೌಡರ , ವಿಮ್ ಬಿಗ್, ಶ್ಯಾಂಪೂ…..ಸುಟ್ಟು ಸುಡಗಾಡ ಸಾಮಾನ ಎಲ್ಲಾ ಇದ್ದವು. ಇದರಾಗ ಏನ ಮೀನಾ ಮೇಷಾ ಮಾಡಲಿಕ್ಕ ಬರಂಗಿಲ್ಲಾ , ಇವೆಲ್ಲಾ ಇರೋವ. ಅರೇ ಇದೇನ ‘ಪ್ಯಾಂಪರ್ಸ್’ ೫೦ ರದ ಒಂದ ಬಂಡಲ್ !
“ಏ ಇಷ್ಟ ಪ್ಯಾಂಪರ್ಸ್ ಯಾಕ, ಮತ್ತ ಯಾರಾರ ಪ್ಯಾಂಪರ್ಸ್ ಹಾಕೋತಾರ ಮನ್ಯಾಗ?” ಅಂತ ನನ್ನ ಹೆಂಡತಿನ ಒದರಿದೆ.
“ರೀ ಮತ್ತ ಯಾರ ಹಾಕೋತಾರ, ನಿಮ್ಮ ತಲಿ, ಎಲ್ಲಾ ನಿಮ್ಮ ಮಗಳದ್ವ , ಒಮ್ಮೇ ತೋಗಂಡರ ಸೋವಿ ಬಿಳತದ ಅಂತ ದೂಡ್ಡ ಬಂಡಲ್ ತಂದೇನಿ ” ಅಂದ್ಲು. ಅಡ್ಡಿಯಿಲ್ಲಾ ಒಂದ ಸ್ವಲ್ಪರ ಮನಿ ಬಗ್ಗೆ ಕಾಳಜಿ ಮಾಡತಾಳಲಾ ಅಂತ ಸಮಾಧಾನ ಪಟ್ಟೆ .
ಅನ್ನಂಗ ಎಣ್ಣಿ ಒಂದ ಮರತಿದ್ದೆ,
ಶೇಂಗಾ ಎಣ್ಣಿ – ೮ ಕೆಜಿ- ೭೫೦ ರೂ
ಸಂಸಾರ ಅನ್ನೋ ಒಗ್ಗರಣಿಗೆ ಎಣ್ಣಿ ಇಲ್ಲಾಂದರ ಹೆಂಗ. ಆ ಎಣ್ಣಿ ಅಲ್ಲರಿಪಾ, ಮನ್ಯಾಗ ಆಡಿಗಿಗೆ ಉಪಯೋಗ ಮಾಡ್ತಾರಲಾ ಅದು. ಹಬ್ಬದ ದಿವಸ ಏನೇನ ವಿಚಾರ ಮಾಡ್ತೀರಿ. ಮತ್ತೇಲ್ಲರ ದೀಪಾವಳಿ ಫರಾಳದಾಗಿನ ಚಕ್ಕಲಿ, ಕೊಡಬಳಿ ಹಿಡಕೊಂಡ ಎಣ್ಣಿ ತೊಗಳಿಕ್ಕೆ ಹೋಗಿ – ಗೀಗಿರಿ. ಇನ್ನ ಒಂದ ವಾರ ಆ ಎಣ್ಣಿ ಬಗ್ಗೆ ಮರತ ಬಿಡರಿ. ನಮ್ಮವ್ವಾ ಮನ್ಯಾಗ ನಮ್ಮೇಲ್ಲಾರದು ಜೀವನ ಕರಿಲಿಕ್ಕೆ ಇಷ್ಟ ಎಣ್ಣಿ ಬೇಕ ಮತ್ತ. ಪುಣ್ಯಾಕ್ಕ ಡಾಲ್ಡಾದಾಗ ಕರೆಂಗಿಲ್ಲಲಾ ಸಾಕು, ಅದರಾಗ ಈ ಸರತೆ ದೀಪಾವಳಿ ಬ್ಯಾರೆ, ಏನ ಮಾಡಲಿಕ್ಕೆ ಬರಂಗಿಲ್ಲಾ.
ಲಿಸ್ಟ ಒಳಗಿನ ಐಟೆಮ್ ಲಗ-ಭಗ ಎಲ್ಲಾ ಮುಗದಂಗ ಆದವು. ಯಾವುದು ಅನಾವಶ್ಯಕ ಸಾಮಾನ ಇಲ್ಲಾ ನಾ ಇಷ್ಟೋತ್ತನಕ ಹಬ್ಬದ ದಿವಸ ಇದೆಲ್ಲಾದರ ಬಗ್ಗೆ ತಲಿಕೆಡಿಸಿಕೊಂಡದ್ದ ಅನಾವಶ್ಯಕ ಅನಸ್ತು. ಸುಮ್ಮನ ಬಾಯಿ ಮುಚಗೊಂಡ ೪೮೫೦ ರೂ ಕೊಟ್ಟಿದ್ದರ ನಂದು ಸ್ವಲ್ಪ ಟೈಮ್ ಉಳಿತಿತ್ತು, ನಿಂಬದು ಈ ಪ್ರಹಸನ ಓದೋದು ತಪ್ಪತಿತ್ತು.
ಏನ ಹಬ್ಬದ ದಿವಸ ಹೇಂತಾ ಲೇಖನಾ ಬರದಾರ ಅಂತ ಬೇಜಾರ ಆಗ ಬ್ಯಾಡರಿ. ಬರೆ ಮಡಿ, ಮೈಲಗಿ, ಕಡಿಗಿ, ಬಾಣಂತನ, ಗ್ರಹಣ ಅಂತ ಬರಕೋತ ಕೂತರ ಸಂಸಾರಕ್ಕ ಎಷ್ಟ ಸಾಮಾನ ಬೇಕಾಗತಾವ ಅಂತ ಗೊತ್ತ ಆಗತಿದ್ದಿಲ್ಲಾ. ಇನ್ನ ದೀಪಾವಳಿ ಫರಾಳಕ್ಕ ನಿಮ್ಮನ್ನ ಕರಿ ಬೇಕು ಅಂತಿದ್ದೆ ಆದರ ಹೋಗಲಿ ಬಿಡರಿ,ಮದ್ಲ ತುಟ್ಟಿಕಾಲ ಬ್ಯಾರೆ. ಮತ್ತ ನಾ ಕರದೆ ಅಂತ ನೀವ ನನ್ನ ಕರೆಯೋರು, ಸುಮ್ಮನ ನಿಮಗೂ ತ್ರಾಸ.
ಈ ಕಿರಾಣಿ ಲೇಖನಾ ‘ದೀಪಾವಳಿ ವಿಶೇಷಾಂಕ’ ಅಂತ ಓದರಿ.
ನಿಮಗೇಲ್ಲಾ ದೀಪಾವಳಿ ಶುಭಾಷಯಗಳು.

Leave a Reply

Your email address will not be published.

This site uses Akismet to reduce spam. Learn how your comment data is processed.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ