ಕಿಸ್ ಆಫ್ ಕಿಲೋ ಗಟ್ಟಲೇ ಬ್ಯಾಕ್ಟಿರೀಯಾ…..

ಬರೋ ನವೆಂಬರ್ ೨೯ಕ್ಕ ನಮ್ಮ ಬೆಂಗಳೂರಾಗೇನೊ ’ಕಿಸ್ ಆಫ್ ಲವ್ ಡೇ’ ಆಚರಸ್ತಾರಂತ. ನಂಗೂ ಹದಿನಾಲ್ಕ ವರ್ಷದಿಂದ ಅದ ಹೆಂಡತಿ ಅದ ಸಂಸಾರ ಅದ …ಸ್ಸ್…ಸಾಕ ಸಾಕಾಗಿ ಹೋಗೇದ. ಹಂಗರ ಬೆಂಗಳೂರಿಗೆ ಹೋದರ ಒಂದಿಷ್ಟ ವೆರೈಟಿ ಆಫ್ ಕಿಸ್ಸರ್ ಸಿಗ್ತಾವ ತಡಿ ಅಂತ ಒಂದ ವಾರದ ಹಿಂದ ರೇಲ್ವೆ ಸ್ಟೇಶನಗೆ ಟಿಕೇಟ ತಗಸಲಿಕ್ಕೆ ಹೋಗಿದ್ದೆ. ಅಲ್ಲೇ ನೋಡಿದರ ಸಿಕ್ಕಾ ಪಟ್ಟೆ ಪಾಳೆ..ಎಲ್ಲಾ ಹುಬ್ಬಳ್ಳಿ ಹುಡಗರು, ಲಗ್ನ ಆದೋರು ಆಗೋರು ಎಲ್ಲಾರೂ ೨೮ರ ರಾತ್ರಿ ರಾಣಿ ಚೆನ್ನಮ್ಮಾ ಟ್ರೇನಿಗೆ ಬುಕ ಮಾಡಸಲಿಕ್ಕೆ ಬಂದಿದ್ದರು. ನಂಗ ಅದನ್ನ ನೋಡಿ ಏನಪಾ ಇದ ಹುಬ್ಬಳ್ಳಿ ಮಂದಿ ಏನ ಕಿಸ್ ಕಂಡಿಲ್ಲೇನ ಇಲ್ಲಾ ಜೀವನದಾಗ ಒಟ್ಟ ಕಿಸ್ಸ್ ಹೊಡದಿಲ್ಲೇನ ಅನಸಲಿಕತ್ತ. ಇನ್ನ ಹಿಂಗ ಹೂಯ್ಯಿ ಅಂತ ನಮ್ಮ ಮಂದಿ ಹೊಂಟರ ನಮಗ ಟಿಕೇಟರ್ ಎಲ್ಲೆ ಸಿಗಬೇಕ? ನನ್ನ ಪಾಳೆ ಬರೋದರಾಗ ವೇಟಿಂಗ್ ಲಿಸ್ಟ ೬೯ ಬಂತ. ನಾ ಆದರು ಇರಲಿ ಟ್ರೇನನಾಗ ನಿಂತಾದರೂ ಅಡ್ಡಿಯಿಲ್ಲಾ ಒಟ್ಟ ’ಕಿಸ್ ಆಫ್ ಲವ್ ಡೇ’ಕ್ಕ ಬೆಂಗಳೂರಿಗೆ ಹೋಗೊದ ಅಂತ ಡಿಸೈಡ ಮಾಡಿ ಟಿಕೇಟ ತೊಗೊಂಡ ಮನಿಗೆ ಬಂದೆ.
ನಾ ಮನಿಗೆ ಬರೋ ಪುರಸೊತ್ತ ಇಲ್ಲದ ನನ್ನ ಹೆಂಡತಿ
’ಯಾಕ ಮತ್ತ ಬೆಂಗಳೂರಿಗೆ ಹೊಂಟರಿ?’ಅಂತ ಶುರು ಮಾಡೇ ಬಿಟ್ಟಳು
’ಏ, ನಾ ಯಾಕ ಹೋಗ್ತೇನಿ ಬೆಂಗಳೂರಿಗೆ..ಬುಕ್ ರಿಲೀಸ್ ಅದ ಅದಕ್ಕ ಹೊಂಟೇನಿ’ ಅಂದೇ
’ಯಾರದ ಬುಕ್ಕು, ಯಾ ಬುಕ್ಕು?’ ಅಂತ ಅಕಿದ ಎನ್ಕ್ವೈರಿ ಶುರು ಆತ
ನಾ ಏನ ಹೇಳಬೇಕ ಅಂತ ತಿಳಿಲಾರದ ಭಡಾ ಭಡಾ
’ಏ…ನಮ್ಮ ದೋಸ್ತ ಕಿಸ್ ಆಫ್ ಲವ್ ಡೇ ಅಂತ ಬುಕ್ ಬರದಾನ’ ಅಂದ ಬಿಟ್ಟೆ.
ಹಂಗ ಅಕಿಗೆ ಗೊತ್ತಗೊದು ಅಷ್ಟರಾಗ ಅಂತ ನಂಗ ಗ್ಯಾರಂಟಿ ಇತ್ತ. ಅಕಿ ಮುಂದ
’ಅದ ಏನ ಸುಡಗಾಡ ಹೆಸರ ಇಟ್ಟಾರ ಬುಕ್ಕಿಗೆ, ಹಿಂತಾ ಬುಕ್ ರಿಲೀಸಗೆಲ್ಲಾ ನೀವ್ಯಾಕ ಹೋಗಬೇಕು’ ಅಂತ ನನ್ನ ಶುರು ಮಾಡಿದ್ಲು.
ನಂಗ ಅಕಿಗೆ ಬುಕ್ಕಿನ ಹೆಸರ ಇಷ್ಟ ಹಂಗ ಅದ, ಹಂತಾದ ಏನಿಲ್ಲಾ ಅದರಾಗ ಅಂತ ತಿಳಿಸಿ ಹೇಳೊದರಾಗ ರಗಡ ಆತ.
ಆ ವಿಷಯ ಅಲ್ಲಿಗೆ ಮುಗದಿತ್ತ ಮುಂದ ಎರಡ ದಿವಸ ಬಿಟ್ಟ ಪೇಪರನಾಗ ಆ ’ಕಿಸ್ ಆಫ್ ಲವ್ ಡೇ’ ದ್ದ ಸುದ್ದಿ ಬರಲಿಕತ್ವು. ಅದನ್ನ ಅಪೋಸ್ ಮಾಡೋರು ಅದನ್ನ ಸೆಲೆಬ್ರೇಟ್ ಮಾಡೊರು ಒಟ್ಟಾ ಎಲ್ಲಾ ಲಫಡಾ ಬಗ್ಗೆ ಸುದ್ದಿ ಬರಲಿಕತ್ವು. ಹಂಗ ನನ್ನ ಹೆಂಡತಿ ಪೇಪರ್ ಓದೊಕಿ ಅಲ್ಲಾ ಆದರ ಪೇಪರನಾಗ, ಟಿ.ವಿ. ಒಳಗ ಎಲ್ಲಾ ಸುದ್ದಿ ಕೇಳಿ ಕೇಳಿ ಅಕಿಗೆ ಒಮ್ಮಿಕ್ಕಲೇ ನಾ ಬೆಂಗಳೂರಿಗೆ ಹೊಂಟಿದ್ದ ನೆನಪಾತ.
’ರ್ರೀ…ಖರೇ ಹೇಳ್ರಿ ನೀವ ಬೆಂಗಳೂರಿಗೆ ಯಾಕ ಹೊಂಟೀರಿ’ ಅಂತ ಮತ್ತ ರಾಗಾ ಶುರು ಮಾಡಿದ್ಲು. ಅಕಿಗೆ ನಾ ಬುಕ್ ರಿಲೀಸಗೆ ಹೊಂಟೇನಿ ಅಂತ ಎಷ್ಟ ಕನ್ವಿನ್ಸ್ ಮಾಡಿದರು ಅಕಿ ಏನ ಕನ್ವಿನ್ಸ್ ಆಗಲಿಲ್ಲಾ. ಅದರಾಗ ನಾ ಹುಚ್ಚರಂಗ ಬುಕ್ ಹೆಸರ ’ಕಿಸ್ ಆಫ್ ಲವ್ ಡೇ’ ಅಂತ ಬ್ಯಾರೆ ಹೇಳಿ ತಪ್ಪ ಮಾಡಿ ಬಿಟ್ಟಿದ್ದೆ.
ತೊಗೊ ಅಕಿಗೆ ನಾ ’ಕಿಸ್ ಆಫ್ ಲವ್ ಡೇ’ ಕ್ಕ ಬೆಂಗಳೂರಿಗೆ ಹೊಂಟೇನಿ ಅಂತ ಕನಫರ್ಮ ಆಗಿ ಮನ್ಯಾಗ ದೊಡ್ಡ ರಾಮಾಯಣ ಮಾಡಿ ನಮ್ಮವ್ವನ ತನಕ ಸುದ್ದಿ ಹೋಗಿ ಅಕಿ ಕಡಿಕೆ ತಲಿ ಕೆಟ್ಟ
’ಬಂಗಾರದಂತಾ ಹೆಂಡತಿ ಇದ್ದಾಳ ಮನ್ಯಾಗ, ಅಕಿ ಏನ ಕಡಿಮೆ ಮಾಡ್ಯಾಳ ನಿನಗ, ಬುದ್ಧಿ ಎಲ್ಲೆ ಇಟ್ಟಿ..ಅಲ್ಲಾ..ಲಗ್ನ ಆಗಿ ಹದಿನಾಲ್ಕ ವರ್ಷ ಆಗಲಿಕ್ಕೆ ಬಂತ…..ಎದಿ ಉದ್ದ ಮಗಾ ಬಂದಾನ, ಒಂದ ಚೂರರ ತಿಳಿತದ ಇಲ್ಲೊ ನಿನಗ…ನೋಡಿದವರ ಏನ ತಿಳ್ಕೊಬೇಕು’ ಹಂಗ ಹಿಂಗ ಅಂತ ಅಕಿ ತನ್ನ ಮಹಾಭಾರತ ಶುರು ಮಾಡಿದಳು.
ಅಷ್ಟರಾಗ ನನ್ನ ಹೆಂಡತಿ ಎಲ್ಲೆ ಓದಿದ್ಲೋ ಏನೋ ಒಮ್ಮಿಂದೊಮ್ಮಿಲೆ
’ರ್ರಿ, ಹತ್ತ ಸೆಕೆಂಡದ್ದ ಒಂದ ಕಿಸ್ ಒಳಗ ಒಂದ ಕೆ.ಜಿ ಬ್ಯಾಕ್ಟೇರಿಯಾ ಟ್ರಾನ್ಸಫರ್ ಆಗತಾವಂತ…ಏನಿಲ್ಲದ ಅಸಿಡಿಟಿ ಅಸಿಡಿಟಿ ಅಂತ ಸಾಯತಿರ್ತೀರಿ..ಏನ್ಮಾಡ್ತೀರಿ ನೋಡ್ರಿ’ ಅಂತ ಸಿಟ್ಟಲೇ ಅಂದ್ಲು.
ಹಕ್ಕ್..ಇಕಿ ಎಲ್ಲಿ ಸುದ್ದಿ ತಂದಳು, ಯಾವಾಗಿಂದ ಹಿಂತಾ ಸುದ್ದಿ ಓದ್ಲಿಕತ್ಲು ಅಂತ ನಂಗ ಖರೇನ ಗಾಬರಿ ಆತು.
’ಲೇ ನಿನಗ್ಯಾರ ಹೇಳಿದರ ಇದನ್ನ..ಏನೇನರ ಮಾತಾಡ ಬ್ಯಾಡ..ಒಳತ ಅನ್ನು’ ಅಂತ ನಾ ಅಂದರ ನನ್ನ ಮಾರಿ ಮ್ಯಾಲೆ ಸೀದಾ ಯಾವದೋ ಒಂದ ಇಂಗ್ಲೀಷ ಪೇಪರ ತಂದ ಒಗದ್ಲು. ಅದನ್ನ ತಗದ ನೋಡಿದ್ರ ಅದರಾಗ ಒಂದ ಆರ್ಟಿಕಲ್ ಹೆಡ್ಡಿಂಗ್ A single 10-second kiss can transfer 80 million bacteria ಅಂತ ಇತ್ತ.
ನಾ ಇದೇನ ಭಾರಿ ಇಂಟರೆಸ್ಟಿಂಗ ಟಾಪಿಕ್ ಅದಲಾ ಅಂತ ಪೂರ್ತಿ ಆರ್ಟಿಕಲ್ ಓದಲಿಕತ್ತೆ. ಅದರಾಗಿನ ಮಜಾ ಸುದ್ದಿ ಕೇಳ್ರಿ ಇಲ್ಲೆ.
ಡಚ್ ವಿಜ್ಞಾನಿಗಳ ಪ್ರಕಾರ ದಿವಸಕ್ಕ ಒಂಬತ್ತ ಸರತೆ ಕಿಸ್ ಕೊಡೊರ ಬ್ಯಾಕ್ಟಿರೀಯಾ ಜೋತಿ ಜೊಲ್ಲಾಗಿರೊ ಬಗ್ಸ(salivary bugs) ಅಂದರ ಕ್ರಿಮಿ ಕೀಟಾ ಸಹಿತ ಶೇರ ಮಾಡ್ಕೋತಾರಂತ….ಯಾ…ಥೂ…ಅಲ್ಲಾ ನಂಬದೇನ ಬಿಡ್ರಿ ವಾರಕ್ಕ ಒಂಬತ್ತ ಕಿಸ್ಸು ಆಗಂಗಿಲ್ಲಾ ಆ ಮಾತ ಬ್ಯಾರೆ.
ಮುಂದಿಂದ ಕೇಳ್ರಿ. ಹಂಗ ಹುಡಗಿ/ ಹೆಂಡತಿ ಒಬ್ಬೊಕಿ ಇದ್ದರು ಅಕಿ ಬಾಯಿ ಒಳಗ ಈ ಬ್ಯಾಕ್ಟಿರೀಯಾ ಏಳನೂರ ಥರದ್ವು ಇರ್ತಾವಂತ. ಮತ್ತ ಇವು ಭಾಳ ಸರಳ ಒಂದ ಬಾಯಿಯಿಂದ ಮತ್ತೊಂದ ಬಾಯಿಗೆ ಕಿಸ್ ಹೊಡದಾಗ ಟ್ರಾನ್ಸಫರ ಆಗ್ತಾವಂತ.
ಇನ್ನ ಅಗದಿ ಕಡಮಿ ಟೈಮ ಒಳಗ ಭಾಳಷ್ಟ ಬ್ಯಾಕ್ಟಿರಿಯಾ ಟ್ರಾನ್ಸಫರ್ ಆಗಬೇಕ ಅಂದರ ಫ್ರೆಂಚ್ ಕಿಸ್ ಹೊಡಿಬೇಕಂತ.
ಅಲ್ಲಾ, ಇದೇನ ಸೈಂಟಿಸ್ಟ್ಸ ತಮಗ ಕಿಸ್ ಹೊಡಿಲಿಕ್ಕೆ ಟೈಮ ಇಲ್ಲಾ ಅಂತ ಹೇಳಿ ಕಿಸ್ ಹೊಡಿಯೋರನ ಕಂಡ ಹೊಟ್ಟಿ ಕಿಚ್ಚ್ ಪಟ್ಟ ರಿಪೋರ್ಟ ಕೊಟ್ಟದ್ದಲ್ಲ ಮತ್ತ. ಸೈಂಟಿಸ್ಟ್ಸ ಈ ಕಿಸ್ ಕೊಡೊ ವಾಲೆಂಟರ್ಸ್ ನಾಲಿಗೆ ಮತ್ತ ಜೊಲ್ಲಿನ ಸ್ಯಾಂಪಲ್ ತೊಗೊಂಡ ಟೆಸ್ಟ ಮಾಡಿ ಹೇಳ್ಯಾರ.
ಹಿಂಗ ಟೆಸ್ಟ ಮಾಡಿ ಅವರ ಕಂಡ ಹಿಡದಿದ್ದ ಏನಪಾ ಅಂದರ ಹತ್ತ ಸೆಕೆಂಡ ಕಿಸ್ಸ ಒಳಗ ೮೦ ಮಿಲಿಯನ್ ಅಂದರ ನನ್ನ ಹೆಂಡತಿ ಪ್ರಕಾರ ಕೇಜಿ ಗಟ್ಟಲೇ ಬ್ಯಾಕ್ಟಿರೀಯಾ ಬಾಯಿಂದ ಬಾಯಿಗೆ ಟ್ರಾನ್ಸಫರ ಆಗ್ತಾವ ಅನ್ನೊದು.
ಅಲ್ಲಾ ನಾ ಸುಳ್ಳ ಸುಳ್ಳ ನಿಮಗ ಹೆದರಸಲಿಕ್ಕೆ ಬರದೇನಿ ಅನ್ನೋರ ಬೇಕಾರ ಅಮಸ್ಟರ್ಡಾಮಕ್ಕ ಹೋಗಿ ಅಲ್ಲೇ ಮ್ಯೂಸಿಯಮ್ ಒಳಗ ಒಂದ Kiss-o-meter ಅದ ಅಲ್ಲೆ ಕಿಸ್ ಹೊಡದ ನೋಡರಿ ಎಷ್ಟ ಮಿಲಿಯನ್ ಬ್ಯಾಕ್ಟಿರೀಯಾ ಟ್ರಾನ್ಸಫರ ಆಗ್ತಾವ ನಿಮ್ಮ ಬಾಯಿಂದ ಅಂತ.
ನಾ ಅಷ್ಟ ಸಿರಿಯಸ್ ಆಗಿ ಇದನ್ನ ಓದಿ ಮುಗಸೋದಕ್ಕ ನನ್ನ ಹೆಂಡತಿ
’ಅಷ್ಟ್ಯಾಕ ಒಮ್ಮಿಕ್ಕಲೇ ಸಿರಿಯಸ್ ಆದ್ರಿ…ನೋಡ್ರಿ ಇದನ್ನ ಓದಿದಮ್ಯಾಲೇರ ಹೋಗಬೇಕ ಅನಸಿದರ ಹೋಗಿ ಬರ್ರಿ’ ಅಂದ್ಲು
’ಲೇ..ನಾ ಹೋಗೊದಕ್ಕ ಹೆದರಲಿಕತ್ತಿಲ್ಲಾ, ಆದರ ನಂಗ ಈಗಾಗಲೇ ಹದಿನಾಲ್ಕ ಹದಿನೈದ ವರ್ಷದಾಗ ಎಷ್ಟ ಟನ್ ಬ್ಯಾಕ್ಟೇರಿಯಾ ಒಳಗ ಬಂದಾವೋ ಅಂತ ವಿಚಾರ ಮಾಡಲಿಕತ್ತೇನಿ’ ಅಂದೆ.
ಅಕಿ ಸಿಟ್ಟಿಗೆದ್ದ ಪೇಪರ ಕಸಗೊಂಡ ನನ್ನ ಮಾರಿಗೆ ಹೊಡದ
ಬ್ಯಾಕ್ಟಿರೀಯಾ ಏನ ಬರೇ ಹೆಂಡತಿ ಇಂದ ಗಂಡಗ ಬರ್ತಾವಂತ ಏನ ಸೈಂಟಿಸ್ಟ್ಸ ಹೇಳಿಲ್ಲಾ ಅವು ಟು ವೇ, ಗಂಡನಿಂದನೂ ಹೆಂಡ್ತಿಗೆ ಬಂದಿರ್ತಾವ ತೊಗೊರಿ’ ಅಂತ ಬೈದ ಹೋದ್ಲು.
ನಾ ಇಷ್ಟ ಓದಿದ ಮ್ಯಾಲೇನೂ ಏನ ಬೆಂಗಳೂರಿಗೆ ಹೋಗಿ ’ಕಿಸ್ ಆಫ್ ಲವ್ ಡೇ’ ಆಚರಸೋದ ಬಿಡ ಅಂತ ಈಗ ವೇಟಿಂಗ ಲಿಸ್ಟ ಟಿಕೇಟ್ ಕ್ಯಾನ್ಸಲ್ ಮಾಡಸಲಕ್ಕಿ ಹೊಂಟೇನಿ.
ಆದ್ರೂ ಒಂದ ಸಿರಿಯಸ್ ವಿಷಯ ಹೇಳ್ತೇನಿ. ಈ ಸುಡಗಾಡ ’ಕಿಸ್ ಆಫ್ ಲವ್ ಡೇ’ ಅದು, ಇದು ನಮ್ಮ ಸಂಸ್ಕೃತಿ ಅಂತೂ ಅಲ್ಲಾ, ಆದರೂ ನಾವ ಭಾಳ ಮಾಡರ್ನ ನಮಗ ಸಂಸ್ಕೃತಿ – ಸಂಪ್ರದಾಯನ ಇಲ್ಲಾ ಅನ್ನೋರ at least ಒಂದ ವಿಷಯ ತಲ್ಯಾಗ ಇಟಗೋರಿ ’A kiss can transfer 80 million bacteria’ ಅಂತ.
ಏನೋ ದೊಡ್ಡಿಸ್ತನಾ ಬಡಿಲಿಕ್ಕೆ ಹೋಗಿ ಒಂದ ಕಿಸ್ ಹೊಡಿಯೋದ ಇರಲಿ ಎಲ್ಲೇರ ಬ್ಯಾಕ್ಟಿರೀಯಾ ಜೋತಿ ಜೊಲ್ಲಾಗಿರೊ ಬಗ್ಸ(salivary bugs) ಯಾಕ ಶೇರ ಮಾಡ್ಕೋತೀರಿ.
ನೋಡ್ರಿ ನಿಮ್ಮ ಮನಸ್ಸ, ನಿಮ್ಮ ಬಾಯಿ…ಆದರ ಕೇಜಿ ಗಟ್ಟಲೇ ಬ್ಯಾಕ್ಟಿರೀಯಾ ಸಾಕೋರ ಯಾರು ಅದನ್ನ ವಿಚಾರ ಮಾಡ್ರಿ.
ಅನ್ನಂಗ ಇನ್ನೊಂದ important ವಿಷಯ ಹೇಳೊದ ಮರತೆ ೮೦ ಮಿಲ್ಲಿಯನ ಬ್ಯಾಕ್ಟಿರೀಯಾದ್ದ ತೂಕ ಒಂದ ಕೇಜಿ ಇರ್ತದ ಅಂತ ಕಂಡ ಹಿಡದೋಕಿ ನನ್ನ ಹೆಂಡತಿ.
(this article is scientifically supported by the article in bbc.http://www.bbc.com/news/health-30055646)

One thought on “ಕಿಸ್ ಆಫ್ ಕಿಲೋ ಗಟ್ಟಲೇ ಬ್ಯಾಕ್ಟಿರೀಯಾ…..

  1. ಭಾರಿ ಮಸ್ತದ…ನಗಚಾಟಿಗಿ ಒಳಗ ವಿಜ್ಞಾನದ ಮಹತ್ವದ ಮಾಹಿತಿ ಅದ

Leave a Reply

Your email address will not be published.

This site uses Akismet to reduce spam. Learn how your comment data is processed.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ