ಕುಟ್ಟವಲಕ್ಕಿ……

ಕೆಂಡಸಂಪಿಗೆ ಒಳಗ ಒಂದ ಪ್ರಹಸನ ಬರಿಲಿಕ್ಕೆ ಶುರು ಮಾಡಿದ್ದ ಇವತ್ತ ಒಂದ ಪುಸ್ತಕ ಆಗೋತನಕ ಬಂದ ಮುಟ್ಟತ, ಕಡಿಕೆ ಮೊನ್ನೆ ಎಪ್ರಿಲ್ 6ಕ್ಕ ಬೆಂಗಳೂರಾಗ ‘ಕುಟ್ಟವಲಕ್ಕಿ’ ಅಂತ ಹೆಸರಿಲಿ ಪುಸ್ತಕನು ಬಿಡುಗಡೆ ಆತು. ಛಂದ ಪುಸ್ತಕದವರ ಈ ನನ್ನ ಪ್ರಹಸನಗಳನ್ನ ಎಲ್ಲಾ ಸೇರಿಸಿಸಿ ಬೈಂಡಿಗ್ ಹಾಕಿ ಒಂದ ಛಂದನ ಪುಸ್ತಕ ತಯಾರ ಮಾಡಿದರು. ಒಂದ ದಿವಸನು ಯಾವ ಪುಸ್ತಕ ಬಿಡುಗಡೆ ಕಾರ್ಯಕ್ರಮನು ನೋಡಲಾರದಂವಾ ಸೀದಾ ನನ್ನ ಪುಸ್ತಕ ಬಿಡುಗಡೆಗೆ ಹೋಗೊ ಹಂಗ ಆತು. ಹಂಗ ನಾನ ಬರದೇನಿ ಅಂತ ಹೋಗಬೇಕಾತ ಬ್ಯಾರೆಯವರದ ಇದ್ದರ ಬರ್ತೇನಿ ಅಂತ ಹೇಳಿ ಕೈ ಕೊಡಬಹುದಿತ್ತ. ಕಡಿಕೆ ಹೆಂಡ್ರು ಮಕ್ಕಳದ್ದ ಗಾಡಿ ಖರ್ಚ ಮೈಮೇಲೆ ಹಾಕ್ಕೊಂಡ ಹೋಗಿ ಬಂದೆ. ಅದರಾಗ ನನ್ನ ಹೆಂಡತಿ, ನೀವ ಬರದಿದ್ದ ಎಲ್ಲಾ ನನ್ನ ಮ್ಯಾಲೆ, ನಾನೂ ಬರ್ತೇನಿ ಅಂತ ಹಟಾ ಹಿಡದಳು. ಹಿಂಗಾಗಿ ಪೂರ್ತಿ ಬಟಾಲಿಯನ್ ತೊಂಗೊಂಡ ಹೋಗಿದ್ದೆ.

ಹಂಗ ನನಗ ಈ ಛಂದ ಪುಸ್ತಕದ ವಸುಧೇಂದ್ರ ಮೊದ್ಲನೇ ಸಲಾ ಭೆಟ್ಟಿ ಆಗಿದ್ದ ನಾ ಗಂಗಾವತಿ ಸಾಹಿತ್ಯ ಸಮ್ಮೇಳನಕ್ಕ ಹೋದಾಗ. ನಮ್ಮ ಬೀದರ ದೇಸಾಯಿರ ನನಗ ಕರಕೊಂಡ ಹೋಗಿ ಪರಿಚಯ ಮಾಡಿಸಿದ್ರು. ಅವರ ನನ್ನ ನೋಡಿ ” ನೀವು ಲಲಿತ ಪ್ರಭಂಧ ಬರಿತಿರಲಾ? “ಅಂತಾ ಕೇಳಿದಾಗ “ನಾ ಅವೆಲ್ಲಾ ನನಗ ಗೊತ್ತಿಲ್ಲರಿ , ಒಟ್ಟ ನಾ ನನ್ನ ಭಾಷೆಯೊಳಗ ಬರಿತೇನಿ ” ಅಂತ ಅಂದಿದ್ದೆ “ಅದೇ ನಾನು ಹೇಳಿದ್ದು , ಚೆನ್ನಾಗಿ ಬರಿತಿರಾ , ಪುಸ್ತಕ ಮಾಡೋಣಾ ” ಅಂತ ಅಂದಿದ್ರು. ನನ್ನ ಜೊತಿ ಇದ್ದ ಪಂಚಭಾಷಾ ನಿಘಂಟು ‘ದೇಸಾಯಿ’ ” ಲೇ ನೀನ್ನೌನ, ನೀ ಬರೆಯೋದಕ್ಕ ಕನ್ನಡದಾಗ ಲಲಿತ ಪ್ರಭಂಧ ಅಂತಾರ ” ಅಂತ ಗಂಟಮಾರಿ ಹಾಕ್ಕೊಂಡ ಅಂದಾ. ನಾ ” ಅವನೌನ, ನಂಗೇನ್ ಗೊತ್ತಲೆ” ಅಂದಿದ್ದೆ. ಮುಂದ ಒಂದ ಎರಡ ತಿಂಗಳ ಆದ ಮ್ಯಾಲೆ ಕಡಿಕೂ ವಸುಧೇಂದ್ರ ಪುಸ್ತಕಾ ಮಾಡಿ ಬಿಡೋಣಾ ಅಂತಾ ಡಿಸೈಡ ಮಾಡಿ ನನಗ ತನ್ನ ಡಿಸಿಜನ್ ಫೇಸಬುಕ್ ಮೆಸೆಜನಾಗ ಕಳಿಸಿದಾ.

ಹಂಗ ನನ್ನ ಪ್ರಹಸನಗಳ ಕುಟ್ಟೊ ಕೆಲಸ ಶುರು ಆತು. ಒಂದ ತಿಂಗಳದಾಗ ಪುಸ್ತಕ ರೇಡಿ ಆಗಿ ಕಡಿಕೆ ಬಿಡುಗಡೆನೂ ಆತ. ಬಿಡುಗಡೆಗೆ ‘ಗಿರೀಶ ಕಾಸರವಳ್ಳಿ, ಮತ್ತ ರಹಮತ್ ತೆರಿಕೇರಿಯವರು ಬಂದಿದ್ದರು. ನಾ ಎರಡ ದಿವಸ ಮೊದ್ಲ ಏನ್ ಅಗದಿ ಲಗ್ನದ ಮನಿಗೆ ಸೌರಸಲಿಕ್ಕೆ ಹೋಗ್ತಾರಲಾ ಹಂಗಹೋಗಿದ್ದೆ. ಹಿಂದಿನ ದಿವಸ ಕಾರ ಮಾಡಕೊಂಡ ಬೆಂಗಳೂರಾಗ ಒಂದಿಷ್ಟ ಮಂದಿ ಮನಿಗೆ ಹೋಗಿ ಭೆಟ್ಟಿ ಕೊಟ್ಟ ಬಂದೆ, ಮರುದಿವಸ ಕಾರ್ಯಕ್ರಮಕ್ಕೊ ಮತ್ತ ಕಾರ ಭಾಡಿಗಿ ತೊಗಂಡ ಹೋದೆ. ನಾ ಎಲ್ಲಾ ಕಡೆ ಕಾರ ತೊಗಂಡ ಹೋಗೊದ ನೋಡಿ ನನ್ನ ತಂಗಿ (ಕಾಕಾನ ಮಗಳು) ಬಹುಶಃ ಪ್ರಕಾಶಕರು ನನಗ ಹೋಗೂ ಬರೋ ಖರ್ಚ ಕೊಟ್ಟ ಮ್ಯಾಲೆ ಕಾರ ಭಾಡಿಗಿನೂ ಕೊಡಲಿಕತ್ತಾರಂತ ತಿಳ್ಕೊಂಡಿದ್ಲು, ಅಲ್ಲಾ ಹಂಗ ಪ್ರಕಾಶಕರು ಖರ್ಚ ಕೊಟ್ಟಿದ್ದರ ನಾ ಏನ್ ಪ್ಲೇನನಾಗ ಹೊಗೋ ಮಗಾನ. ಹಂಗೇಲ್ಲಾ ಪ್ರಕಾಶಕರು ರೊಕ್ಕಾ ಕೊಡಂಗಿಲ್ವಾ, ರಾಯಲ್ಟಿ ಒಂದ ಕರೆಕ್ಟ ಕೊಡತಾರ ಅದ ಲೇಖಕರ ಪುಣ್ಯಾ, ನಿಂಗೇಲ್ಲಾ ಇವು ಗೊತ್ತಾಗಂಗಿಲ್ಲಾ ನೀ ಸುಮ್ಮನೀರು ಅಂತ ಏನ ಅಗದಿ ನಂಗ ಗೊತ್ತಾದೋರ ಗತೆ ಹೇಳಿದೆ.

ಕಾರ್ಯಕ್ರಮದ್ದ ದಿವಸ ಅಗದಿ ಟೈಮ್ ಗಿಂತ ಮುಂಚೆ ಹೋದೆ. ನಾ ಹೋದಾಗ ದಣೆ ಇನ ಕಸಾಹುಡಗಿ, ಸಾರಿಸಿ, ರಂಗೋಲಿ ಹಾಕಲಿಕತ್ತಿದ್ದರು. ಇನ್ನೊಂದ ಹತ್ತ ನಿಮಿಷ ಮೂದ್ಲ ಹೋಗಿದ್ದರ ಬಹುಶಃ ನನ್ನ ಹೆಂಡತಿನ ಕಸಬರಿಗಿ ತೊಗಂಡ ಕಸಾ ಹೋಡದ ಬಿಡತಿದ್ಲು. ಅಕಿಗೆ ದಿವಸಾ ಮನ್ಯಾಗ ಎದ್ದ ಕೊಡ್ಲೇನ ಓಣಿ ಕಸಾ ಹೊಡಿಯೋ ಚಟಾ ಇನ್ನ ಅದರಾಗ ಅಕಿ ಗಂಡನ ಕಾರ್ಯಕ್ರಮ ಅಂದರ ಅಕಿ ಏನ ಇಡಿ ಬೆಂಗಳೂರ ಕಸಾ ಹೊಡಿಯೊ ಪೈಕಿನ. ಟೈಮ್ ಹತ್ತ ಆದರು ಎಣಿಸಿ ಒಂದ ಎಂಟ ಮಂದಿ ಇದ್ದವಿ , ಇದೇನಪಾ ಜನಾ ಏನ ನನ್ನ ಪುಸ್ತಕ ಬಿಡುಗಡೆ ಅಂತ ಬಂದಿಲ್ಲೊ, ಏನ್ ಇಲ್ಲಿ ಜನಾ ಏಳೋದ ಲೇಟಾಗಿಯೋ,ಇಲ್ಲಾ ನಾ ಬರಿಲಿಕ್ಕೆ ಶುರು ಮಾಡಿದ ಮ್ಯಾಲೆ ಜನರಿಗೆ ಸಾಹಿತ್ಯದಾಗ ಇಂಟರೆಸ್ಟ ಉಳಿದಿಲ್ಲೊ ಒಂದು ಗೊತ್ತಾಗಲಿಲ್ಲಾ. ನಾ ಹಿಂಗ ತಲಿಕೆಡಿಸಗೋದರಾಗ ಒಬ್ಬಬ್ಬರ ಹಗರಕ ಬರಲಿಕ್ಕ ಹತ್ತರು. ಎಲ್ಲಾ ನೋಡಲಿಕ್ಕ ಅಗದಿ ಇಟಲೆಕ್ಚೂವಲ್ ಅನಸೊ ಮಂದಿನ ಇದ್ದರು. ಮುಂದ ಒಂದ ಸ್ವಲ್ಪ ಹೊತ್ತಿಗೆ ನಮ್ಮ ಸುಧಾಮೂರ್ತಿಯವರು ಬಂದರು. ಅರೆ ಇವರ ಯಾಕ ಇಲ್ಲೆ ಬಂದ್ರು, ಇವರ ಹೆಸರರ ಕಾರ್ಡನಾಗ ಇಲ್ಲಾ, ಬಹುಶಃ ಎದರಗಿಂದ ರವೀಂದ್ರ ಕಲಾ ಕ್ಷೇತ್ರಕ್ಕ ಹೋಗೊದ ಬದ್ಲಿ ತಪ್ಪಿ ಇಕಡೆ ಬಂದಿರಬೇಕು ಅನ್ಕೋಂಡೆ. ಆದರ ಅದ ಹಂಗಾ ಆಗಿದ್ದಿಲ್ಲಾ, ಅವರು ಕುಟ್ಟವಲಕ್ಕಿಗೆ ಬಂದಿದ್ದರು. ಅಡ್ಡಿ ಇಲ್ಲಾ ದೊಡ್ಡ-ದೊಡ್ಡ ಮಂದಿನೂ ಬರಲಿಕತ್ತಾರ ಅನಸ್ತು. ನನ್ನ ‘ಕುಟ್ಟವಲಕ್ಕಿ’ ಕವರ್ ಪೇಜ ನೋಡಿ ‘ಭಾಳ ಛಂದ ಅದಪಾ’ ಅಂತ ವಸುಧೇಂದ್ರಗ ಹೇಳಿ ನನಗ ಪರಿಚಯ ಆದ ಮ್ಯಾಲೆ ‘ಎಲ್ಲರಿ ನಿಮ್ಮ ಕುಟ್ಟವಲಕ್ಕಿ’ಅಂತ ಕೇಳಿದರು. ಮುಂದ ನಮ್ಮ ಮೂಡಲಮನಿ ಅಜ್ಜಿ ವಿಜಯಾ ಯಕ್ಕುಂಡಿಯವರು, ಲೇಖಕಿ ಉಮಾದೇವಿಯವರು ಬಂದ್ರು. ಅಲ್ಲಾ ಈ ಬುಕ್ಕಿಗೆ ಕುಟ್ಟವಲಕ್ಕಿ ಅಂತ ಹೆಸರ ಇಟ್ಟಿದ್ದಕ್ಕ ಏನಪಾ ಎಲ್ಲಾ ವಯಸ್ಸಾದವರ ಬರಲಿಕ್ಕ ಹತ್ತಾರಲಾ ಅನಸ್ತು. ಸುಮ್ಮನ ‘ಪಿಜ್ಜಾ’ ಇಲ್ಲಾ ‘ಬರ್ಗರ’ ಅಂತ ಇಟ್ಟಿದ್ದರ ವಯಸ್ಸಿಗೆ ಬಂದ ಹುಡುಗಾ-ಹುಡುಗಿಯರು ಬರತಿದ್ದರೋ ಏನೋ ಅನಸಲಿಕತ್ತ. ಹಂಗ ಒಂದ ನಾಲ್ಕ ಐದ ಮಂದಿ ಫೇಸ್ ಬುಕ್ ಫ್ರೆಂಡ್ಸ ಬಂದರು. ಮುಂದ ಅಪರ್ಣಾ ವಸ್ತಾರೆ, ಗಾರ್ಗಿ ಪಂಚಾಂಗಂ ಅವರೆಲ್ಲಾ ಬಂದ್ರು. ಅಡ್ದಿಯಿಲ್ಲಾ ನನ್ನ ವಾರ್ಗಿಯವರು ಬರಲಿಕತ್ತಾರ ಅನಸ್ತು. ವಸು ಕಾರ್ಯಕ್ರಮ ಮಾಡೋ ಅಷ್ಟ ಜನಾ ಸೇರಿದರು ಅಂತ ಕಾರ್ಯಕ್ರಮ ಶುರು ಮಾಡಿದಾ. ಗಾರ್ಗಿ ಪಂಚಾಂಗಂ ಅವರ ಭಾವಗೀತೆಯೊಂದಿಗೆ ಕಾರ್ಯಕ್ರಮ ಶುರು ಆತ. ಅವರ ಇಷ್ಟ ಛಂದ ಹಾಡಿದರಲಾ, ಸುಮ್ಮನ ಈ ಪುಸ್ತಕ ಬಿಡುಗಡೆ ಕಾರ್ಯಕ್ರಮ ರದ್ದ ಮಾಡಿ ಅವರ ಕಡೆಯಿಂದ ಇನ್ನೊಂದ ಎರಡ-ಮೂರ ಹಾಡ ಹಾಡಸಬೇಕಿತ್ತು ಅನಸಲಿಕತ್ತ. ಮುಂದ ಎಲ್ಲಾರಿಗೂ ಪರಿಚಯ ಇದ್ದ ಗಿರೀಶ ಕಾಸರವಳ್ಳಿ ಮತ್ತ ರಹಮತ್ ತರೀಕೆರಿಯವರನ್ನ ಮತ್ತೊಮ್ಮೆ ಪರಿಚಯಿಸಿದರು. ಬಹುಶ: ಅದ ನನ್ನ ಸಂಬಂಧ ಅಂತ ನನಗ ಗ್ಯಾರಂಟಿ ಆತ. ಯಾಕಂದರ ನನಗ ವಸು ಒಂದ ಸರತೆ ‘has giraddi read your work’ ಅಂತ sms ಮಾಡಿದಾಗ ನಂಗ ಗಿರೆಡ್ಡಿ ಅಂದ್ರ ಯಾರು ಅಂತ ಗೊತ್ತ ಇದ್ದಿದ್ದಿಲ್ಲಾ, ನಾ ಅದಕ್ಕ ‘I dont know’ ಅಂತ reply ಮಾಡಿದ್ದೆ. ಅಂವಾ ನನಗ ಗಿರೆಡ್ಡಿ ಅಂದರ ಯಾರು ಅಂತ ಗೊತ್ತಿಲ್ಲಾ ಅಂತ ತಿಳ್ಕೋಂಡನೋ ಇಲ್ಲಾ ಗಿರೆಡ್ಡಿಯವರ ನಾ ಬರದಿದ್ದ ಓದ್ಯಾರೋ ಇಲ್ಲೋ ಅನ್ನೊದ ನನಗ ಗೊತ್ತಿಲ್ಲಾ ಅಂತ ತಿಳ್ಕೋಂಡನೊ ಆ ದೇವರಿಗೆ ಗೊತ್ತ. ಹಿಂಗಾಗಿ ನಾ ಎಲ್ಲರ ಸ್ಟೆಜ್ ಮ್ಯಾಲೆ ಹೋದಾಗ ಗಿರೀಶ ಕಾಸರವಳ್ಳಿ ಇಲ್ಲಾ ರಹಮತ್ ಅವರಿಗೆ ನಿಮ್ಮನ್ನೇಲ್ಲೊ ನೋಡೇನ ಅಲಾ ಅಂತ ಅಂದಗಿಂದೇನ ಅಂತ ನನ್ನ ಸಂಬಂಧ ಪರಿಚಯ ಮಾಡಿಸಿದ್ರು.

ಮುಂದ ನಮ್ಮ ಪುಸ್ತಕ ಬಿಡುಗಡೆ ಅಂದ್ರ ಗಿಫ್ಟ್ ಪ್ಯಾಕ ಮಾಡ ಇಟ್ಟಿದ್ದ ಪುಸ್ತಕ ಬಿಚ್ಚಿ ಕ್ಯಾಮಾರಾ ಮುಂದ ಹಿಡದವಿ. ಆಮೇಲೆ ಜುಗಲ್ ಬಂದಿಯಂತ ಗಿರೀಶ ಕಾಸರವಳ್ಳಿಯವರು, ರೆಹಮತ್ ತೆರಿಕೇರಿಯವರು ಇಬ್ಬರು ಕೂತ ತಮ್ಮ ಸಾಹಿತ್ಯಿಕ ಭಾಷಾದಾಗ ಹರಟಿ ಹೊಡಿಲಿಕತ್ತರು. ನನಗ ಬಾಲವಾಡಿ ಹುಡುಗಾ ಹತ್ತನೆತ್ತಾ ಕ್ಲಾಸಿಗೆ ಹೋಗಿ ಕೂತಂಗ ಅನಸಲಿಕತ್ತು. ಈಗ ಒಂದ ಬುಕ್ ಬರದೆನಲಾ, ಇಷ್ಟ ಲಗೂನ ತಿಳಿಲಿಕ್ಕಿಲ್ಲಾ ಅವರಂಗ ವಯಸ್ಸಾಗಿ ಕೂದಲ ಬೆಳ್ಳಗ ಆದಮ್ಯಾಲೆ ತಿಳದರು ತಿಳಿಬಹುದು ತೊಗೊ ಅಂತ ತೆಲಿಕೆಡಿಸಿಕೊಳ್ಳಲಾರದ ಮುಂದ ಕೂತ ಗೋಣ ಹಾಕ್ಕೊತ ಇದ್ದೆ, ಆದರ ನನ್ನ ಮಕ್ಕಳು ನನ್ನಂಗ ಗೋಣ ಹಾಕಲಿಲ್ಲಾ , ಕಾಲಿಲೇ ಕುರ್ಚಿ ಒದ್ದನೇ, ಮೊಬೈಲನಾಗ ಆಟ ಆಡಿದನೇ, ಒಬ್ಬರಿಗೊಬ್ಬರು ಮಾತಾಡಿದನೇ ಮಾಡಲಿಕತ್ತರು. ಆಜು-ಬಾಜು ಇದ್ದವರು ಶ್…ಶ್ …ಶ್ ಅಂತ ಅಂದ್ರು “ಬುದ್ಧಿ ಎಲ್ಲಿ ಇಟ್ಟಾರ್ರಿ, ಹಿಂತಾ ಕಾರ್ಯಕ್ರಮಕ್ಕ ಹುಡುಗರನ ಕರಕೊಂಡ ಬರತಾರನು” ಅಂತ ಅಂದ್ರು. ನಾ “ಇಲ್ಲ ಏಳ್ರಿ ಅವನೌನ ಅವರಪ್ಪ ಬುಕ್ ಬರದಾನ ಅದಕ್ಕ ಬಂದಾವ” ಅಂತ ಹುಡುಗರನ ಕರಕೊಂಡ ಹೊರಗ ಹೋಗಿ ಉಚ್ಚಿ ಹೋಯಿಸ್ಕೊಂಡ ಬಂದೆ. ಮುಂದ ನನಗ ಮತ್ತ ಸ್ಟೇಜ ಮ್ಯಾಲೆ ಕರದರು. ನನ್ನ ಬಗ್ಗೆ ನಾಲ್ಕ ಮಂದಿ ದೊಡ್ಡವರು, ಸಾಹಿತ್ಯದಾಗ ಜಾಸ್ತಿ ತಿಳಕೊಂಡವರು ಒಂದ ನಾಲ್ಕ ಮಾತಾಡಿದ್ದ ವಿಡೀಯೋ ಸ್ಕ್ರೀನ್ ಮ್ಯಾಲೆ ತೋರಿಸಿದರು, ವಿವೇಕ ಶಾನಬಾಗ್ ,ರಮೇಶ್ ಭಟ್ ,ಗುರುಪ್ರಸಾದ ಕಾಗಿನಲೆ ಇವರೆಲ್ಲಾ ನನ್ನ ಬಗ್ಗೆ ಮಾತಾಡಿದರು. ನಾ ಅವರ ಯಾರದೊ ಬಗ್ಗೆ ಮಾತಾಡಲಿಕತ್ತಾರೇನೋ ಅನ್ನೊರಗತೆ ಕೇಳಿ ಅವರ ಮಾತ ಮುಗದ ಮ್ಯಾಲೆ ಮಂದಿ ಜೊತಿ ಚಪ್ಪಾಳೆ ಹೊಡದೆ. ಮುಂದ ನನ್ನ ಹೆಂಡತಿ ಮಾತಡಲಿಕ್ಕ ಬಂದ್ಲು, ಸ್ಟೇಜ ಮ್ಯಾಲೆ ಅಲ್ಲಾ ಸ್ಕ್ರೀನ್ ಮ್ಯಾಲೆ. ನನ್ನ ಎದಿ ದಸಕ್ಕ ಅಂತು. “ಏ ಇವನೌನ ಈಕಿ ಏನಲೇ ನಾಲ್ಕ ಮಂದಿ ಮುಂದ ಸಾರ್ವಜನಿಕವಾಗಿ ನನ್ನ ಮಾನ ಹರಾಜ ಹಾಕಲಿಕ್ಕೆ ಬಂದಾಳಲಾ, ಈಕಿ ಏನ ಮಾತಾಡತಾಳೋ ಏನೋ ಅಂತ ನಂಗ ಟೆನ್ಯನ್ ಶುರು ಆತ . ಆದರ ಈಕಿ ವಿಡೀಯೋ ಪ್ಲೇ ನ ಆಗಲಿಲ್ಲಾ , ಬರೇ ಈಕಿ ಫೊಟದ ಬಾಜುಕ ಈಕಿ ಹೇಳಿದ್ದ ಅಭಿಪ್ರಾಯದ ಶಬ್ದ ಅಕ್ಷರ ರೂಪದಾಗ ಬಂದ ಹೋದವು. ಯಪ್ಪಾ ದೇವರ ಉಳಕೊಂಡೆ ಅಂತ ಅನಸಿಲಿಕತ್ತ.

ಮುಂದ ನಂಗ ಒಮ್ಮಿಂದೊಮ್ಮಿಲೇ ಮಾತಾಡ ಬರ್ರೀ ಅಂತ ಕರದ ಬಿಟ್ರು, ಹಂಗ ನಾ ಇಷ್ಟ ದೊಡ್ಡ ಸ್ಟೇಜ ಮ್ಯಾಲೆ ಮಾತಾಡಿದ್ದ ಮೊದಲನೇ ಸಲಾ, ಅದರಾಗ ನಾ ಮಾತಾಡೋದರ ಏನ ಅದ. ನಾ ಮಾತಾಡಿದಂಗ ಪುಸ್ತಕದಾಗ ಬರದೇನಿ, ಬುಕ್ ತೊಗೊಂಡ ಓದಿದ್ರ ಮುಗದ ಹೋಗ್ತಿತ್ತ ಅನಸ್ತು. ಸರಿ ಇನ್ನ ಹೆಸರ ಒದರಿದ ಮ್ಯಾಲೆ ಮಾತಾಡಬೇಕಲಾ, ಎದ್ದ ಹೋದೆ ” ಎಲ್ಲರಿಗೂ ನಮಸ್ಕಾರ ,ಒಂದ ಸರತೆ ಬೀದರೊಳಗ ನಮ್ಮ ಬಹಾದ್ದೂರ ದೇಸಾಯಿಗೆ ‘ಆಡೂರವರನ ನಮ್ಮ ಬೀದರ ಸಾಹಿತ್ಯ ಸಮ್ಮೇಳನಕ್ಕ ಕರಸೋಣೆನ್ರ’ ಅಂತ ಯಾರೋ ಕೇಳಿದರಂತ ಅದಕ್ಕ ದೇಸಾಯರ ‘ತಡಿರಿ ಮೂದ್ಲ ಆ ಮಗಾ ಒಂದ ಸಾಹಿತ್ಯ ಸಮ್ಮೇಳನಕ್ಕ ಹೋಗ್ಯರ ಬರಲಿ ಆಮ್ಯಾಲೇ ಬೇಕಾರ ನೀವ ಕರಿಸಿರ’ ಅಂತ ಅಂದನಂತ. ಹಂಗ ಇವತ್ತ ಈ ವಸುಧೇಂಧ್ರ ಬುಕ್ ಮಾಡೋಕ್ಕಿಂತ ಮೊದ್ಲ ಏನರ ಜರಕರತಾ ನಮ್ಮ ದೇಸಾಯಿಗೆ ” ನಾ ಆಡೂರಂದ ಪುಸ್ತಕ ಮಾಡಬೇಕಂತ ಮಾಡೇನಿ ಹೆಂಗ ಅಂತ ಕೇಳಿದ್ದರ ಆವಾಗೂ ನಮ್ಮ ದೇಸಾಯಿ’ ತಡಿ ವಸು , ಮೊದ್ಲ ಅಂವಾ ಒಂದ ಯಾರದರ ಮಂದಿದ ಬುಕ್ ಬಿಡುಗಡೆ ಕಾರ್ಯಕ್ರಮಕ್ಕ ಹೋಗಿ ಬರಲಿ, ಆಮ್ಯಾಲೆ ಬೇಕಾರ ಅವಂದ ಪುಸ್ತಕ ಮಾಡೊವಂತಿ ಅಂತ ಹೇಳ್ತಿದ್ದಾ . ಆದ್ರ ಇವತ್ತ ವಸು ಅವನ್ನ ಕೇಳಲಾರದ ಪುಸ್ತಕ ಮಾಡಿದಾ ಅಂತ ಇವತ್ತ ನಾವೆಲ್ಲಾ ಈ ಕಾರ್ಯಕ್ರಮಕ್ಕ ಬಂದೇವಿ. ಹಂಗ ಖರೇ ಕೇಳಿದರ ನಾ ಅಲ್ಲೇ ಹಿಂದ ಲಾಸ್ಟ ಲೈನನಾಗ ಕೂಡಬೇಕಿತ್ತು ,ಆದ್ರ ತಪ್ಪಿ ಇವತ್ತ ಸ್ಟೇಜ ಮ್ಯಾಲೆ ಬಂದೇನಿ. ಅದಕ್ಕ ನಾ ಈ ಛಂದ ಪುಸ್ತಕದವರಿಗೆ ಧನ್ಯವಾದ ಅರ್ಪಿಸ್ತೇನಿ. ಇನ್ನ ನನ್ನ ಪುಸ್ತಕದ ಹೆಸರ “ಕುಟ್ಟವಲಕ್ಕಿ ” ಅಂತ ಯಾಕ ಇಟ್ಟೇನಿ ಅಂದ್ರ ನಮ್ಮಂದಿ ಒಳಗ ಯಾರರ ಮನಿಗೆ ಬಂದಾಗ ಅವಲಕ್ಕಿ ಕೊಟ್ಟ ‘ತೊಗೋಳ್ರಿ..ಅವಲಕ್ಕಿ,ಸುದಾಮ ಒಲ್ಲೆ ಅನ್ನಬಾರದು’ ಅಂತಾರ. ಹಂಗ ನೀವೆಲ್ಲಾ ನನ್ನ ‘ಕುಟ್ಟವಲಕ್ಕಿ’ ಪುಸ್ತಕನ ‘ಸುದಾಮ’ ಅಂತ ತೊಗೊಂಡ ಓದ್ರಿ ” ಅಂತ ಹೇಳಿದೆ. ತಿಳದವರು ಒಂದ ನಾಲ್ಕ ಮಂದಿ ನಕ್ಕರು, ಉಳದವರ ಬರೆ ಚಪ್ಪಾಳಿ ಹೊಡದರು. ಅಲ್ಲಿಗೆ ನನ್ನ ಸ್ಟೇಜ್ ಮ್ಯಾಲಿನ ಪಾತ್ರ ಮುಗದಂಗ ಆತು. ಅಂತು ಗೆದ್ದಂಗ ಆತು, ಒಂದ ಬಾಥರೂಮ್ ಬ್ರೆಕ್ ತೊಗಂಡರಾತು ಅಂತ ಎದ್ದ ಹೊರಗ ಬಂದೆ. ನನ್ನ ಹಿಂದ ನನ್ನ ಸಂಬಂಧ ಕಾರ್ಯಕ್ರಮಕ್ಕ ಬಂದವರ ಒಂದ ಹತ್ತ ಮಂದಿ ಎದ್ದ ಹೊರಗ ಬಂದ್ರು. ನಾ ‘ಸುದಾಮ’ಒಲ್ಲೆ ಅನಬ್ಯಾಡ್ರಿ ಅಂತ ಅಂದಿದ್ದಕ್ಕ ಬುಕ್ಕ್ ಖರೀದಿ ಮಾಡ್ಕೊಂಡ ಬಂದ ನನ್ನ ಕಡೆ ಸಹಿ ಮಾಡಿಸಿಗೊಂಡರು. ನಾ ಜೀವನದಾಗ ಮೊದ್ಲನೇ ಸಲಾ ಕನ್ನಡದಾಗ ಸಹಿ ಮಾಡಿದ್ದು. ಖರೆ ಹೇಳ್ಬೇಕಂದ್ರ ಪುಸ್ತಕದಾಗ ಸಹಿ ಮಾಡಬೇಕಾರ ಏನ ಬರದ ಸಹಿ ಮಾಡಬೇಕು ಅಂತನೂ ಗೊತ್ತಿದ್ದಿಲ್ಲಾ, ಸುಮ್ಮನ ಎಲ್ಲಾರಿಗೂ ಪ್ರೀತಿಯಿಂದ ‘ಪ್ರಶಾಂತ ಅಡೂರ’ ಅಂತ ಸಹಿ ಮಾಡಿ ಕೊಟ್ಟೆ. ಹಂಗ ಏನಿಲ್ಲಾ ಅಂದರು ಒಂದ 20-30 ಸಹಿ ಮಾಡಿದೆ. ಅಡ್ಡಿ ಇಲ್ಲಾ ವಸುಗ ಬೊಣಗಿ ಛಲೋ ಆತು ಅನಸ್ತು. ಮುಂದ ಅಲ್ಲೆ ಒಂದ ತುತ್ತ ಪಲಾವು-ಮೂಸರು ಅನ್ನ ಉಂಡ ನಮ್ಮ ತಂಗಿ ಮನಿ ಹಾದಿ ಹಿಡಿದೆ. ಊಟಕ್ಕ ನಿಂತಾಗ ಮಾತಾಡ್ತ-ಮಾತಾಡ್ತ ರಹಮತ್ ತೆರಿಕೇರಿಯವರು ‘ಹಂಗ ನಿಮಗೇನ ಎಲ್ಲಾ ಸಾಹಿತಿಗಳು, ಅವರ ಸಾಹಿತ್ಯ ಎಲ್ಲಾ ಗೊತ್ತ ಇರಬೇಕಂತ ಏನಿಲ್ಲಾ , ನೀವು ಬರಿತಿರ್ರಿ, ಮುಂದ ಎಲ್ಲಾ ಗೊತ್ತಾಗತದ ‘ಅಂತ ಧೈರ್ಯಾ ತುಂಬಿ ಸ್ವಾಂತನ ಹೇಳಿದ್ರು. ಆದ್ರೂ ನಂಗ ಒಂಥರಾ ‘ಬೇಗಾನಾ ಶಾದಿಮೇ…. ಅಬ್ದುಲ್ಲಾ ದಿವಾನ’ ಅನ್ನೊ ಹಂಗ ಆಗಿತ್ತು. ಒಟ್ಟ ಪುಸ್ತಕ ಬಿಡುಗಡೆ ಮುಗಿತಲಾ ಸಾಕ ನಡಿ ಇನ್ನ ಭಾಳ ತಲಿಕೆಡಿಸಿಗೊಳ್ಳದ ಬ್ಯಾಡ, ಇನ್ನ ಆ ಬುಕ್ಕ್ ಮಾರೋದ ವಸುನ ಜವಾಬ್ದಾರಿ ಅಂತ ಕಾರ ಹತ್ತಿ ಮನಿಗೆ ಹೊಂಟಿದ್ದೆ ಅಷ್ಟರಾಗ ನಮ್ಮ ದೇಸಾಯಿ ನನಗ ರಾಯಲ್ಟೀ ಚೆಕ್ ಕೊಟ್ಟಿದ್ದ ನೋಡಿ ” ಮತ್ತೇನಲೆ ಮಗನ ಹತ್ತಸಾವಿರ ರೂಪಾಯಿ ಹೊಡದಿ,ಏನ ಮಾಡೊಂವಾ ಅದನ್ನ?” ಅಂತ ಕೇಳಿದಾ. ” ಏ, ನಾ ಇದಕ್ಕ ಇನ್ನೊಂದ ಐದ ಸಾವಿರ ರೂಪಾಯಿ ಕೈಲೆ ಹಾಕಿ ನಮ್ಮಪ್ಪಂದ ಒಂದ ಕಣ್ಣಿಂದ ಪರಿ ತಗಸ್ತೇನಿ, ನಮ್ಮಪ್ಪನು ನನ್ನ ಪುಸ್ತಕ ಓದವಲ್ನಾಕ” ಅಂದೆ. ” ಲೇ, ಹಂಗರ ಇನ್ನೊಂದ ಕಣ್ಣಿಂದ ಪರಿ ತಗಸಲಿಕ್ಕೆ ವಸು ನಿಂದ ಇನ್ನೊಂದ ಪುಸ್ತಕ ಮಾಡಬೇಕೇನಪಾ?” ಅಂತ ಕೇಳಿದಾ ” ಹಂಗೇನಿಲ್ಲಾ, ‘ನಂದ ವಯಸ್ಸಾಗೇದ, ಸುಳ್ಳ ಯಾಕ ಡೆಡ್ ಇನ್ವೆಸ್ಟಮೆಂಟ್ ಮಾಡತಿ,ಒಂದ ಕಣ್ಣ ಸಾಕ ತೊಗೊ’ ಅಂತ ನಮ್ಮಪ್ಪ ಹೆಳ್ಯಾನ” ಅಂದೆ…..

ಇರಲಿ, ಹಿಂಗ ಕೆಂಡಸಂಪಿಗೆಯಿಂದ ಶುರು ಆಗಿದ್ದ ನನ್ನ ಪ್ರಹಸನಗಳು ‘ಕುಟ್ಟವಲಕ್ಕಿ’ ಮಟಾ ಬಂದ ಮುಟ್ಟಿದ್ವು. ಇದರಾಗ ಕೆಂಡಸಂಪಿಗೆ ಓದುವ ನಿಮ್ಮೇಲ್ಲಾರದು ಕೈವಾಡ ಭಾಳ ಅದ. ನೀವು ಅವತ್ತ ಹುರದುಂಬಿಸಿದ್ದಕ್ಕ ನಾ ಬರ್ಕೋತ ಹೋಗಿ, ಈಗ ನೀವು ಪುಸ್ತಕ ಖರೀದಿ ಮಾಡೋ ಹಂಗ ಆತು. ನಿಮ್ಮೆಲ್ಲರಿಗೂ ನನ್ನ ಹೃತ್ಪೂರಕ ಧನ್ಯವಾದ.

ಹಂಗ ‘ಕುಟ್ಟವಲಕ್ಕಿ’ ಒಳಗ ಎಲ್ಲಾ ಕೆಂಡಸಂಪಿಗೆ ಪ್ರಹಸನನ ಅವ ಅಂತ ನಿವೇಲ್ಲರ ಬುಕ್ಕ್ ತೊಗೊಳೊದ ಬಿಟ್ಟ ಗಿಟ್ಟಿರಿ. ಅದರಾಗ ಒಂದೆರಡ ನಿಮಗೂ ತೋರಿಸಲಾರದ್ದ ಆರ್ಟಿಕಲ್ ಬರದೇನಿ, ಹಂಗ ಕಡಿಕೆ ಮುನ್ನಡಿನರ ಓದಲಿಕ್ಕ ತೊಗೊಳ್ರಿ. ಪುಸ್ತಕ ನೀವ ಕೊಂಡ ತೊಗಂಡರ ‘ಛಂದ ಪುಸ್ತಕ’ದವರಿಗೆ ಛಂದ ಅನಸ್ತದ. ಮುಂದ ಅವರು ಖುಶ್ ಆಗಿ ಇನ್ನೊಮ್ಮೆ ಪ್ರಿಂಟ ಮಾಡಿದರು ಮಾಡಬಹುದು. ಅದಕ್ಕ ನನ್ನ ‘ಕುಟ್ಟವಲಕ್ಕಿ’ಸುದಾಮಾ ಅಂತ ತೊಗೊಂಡ ಹೊಟ್ಯಾಗ ಹಾಕೋರಿ ಅಂತ ನಿಮಗೆಲ್ಲಾ ಇನ್ನೊಮ್ಮೆ ವಂದಿಸಿ ಈ ಪುಸ್ತಕ ಬಿಡುಗಡೆ ಪ್ರಹಸನಕ್ಕ ಇತಿಶ್ರೀ ಹಾಡ್ತೇನಿ……….. ಅನ್ನಂಗ ಇನ್ನೊಂದ ಹೇಳೋದ ಮರತೆ, ಹೋದವಾರದ ‘ಅಂಕಿತ top 10 ಕನ್ನಡ ಪುಸ್ತಕ’ ದಾಗ ನಾ ಲಾಸ್ಟ ಇದ್ದೇನಿ….ನೀವು ಮನಸ ಮಾಡಿದ್ರ ನಾ ಮುಂದ ಹೋಗ್ತೇನಿ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ