ನೀ ನನ್ನ ಕೇಳಲಾರದ ಯಾ ದೇವರಿಗೂ ಬೇಡ್ಕೊ ಬ್ಯಾಡಾ

ಈಗ ಒಂದ ಹತ್ತ ದಿವಸದ ಹಿಂದ ನನ್ನ ಮಗಂದ ಡಿಪ್ಲೋಮಾ 3rd ಸೆಮಿಸ್ಟರದ್ದ ರಿಸಲ್ಟ ಬಂತ. ಎಲ್ಲಾ ಸಬ್ಜೆಕ್ಟ ಪಾಸ್ ಆಗಿದ್ದಾ ಅದು ಫಸ್ಟಕ್ಲಾಸನಾಗ. ನನ್ನ ಹೆಂಡ್ತಿಗೆ ಹಿಡದೋರ ಇದ್ದಿದ್ದಿಲ್ಲಾ, ಇಡಿ ಓಣಿ ತುಂಬ ಹೇಳಿದ್ದ ಹೇಳಿದ್ದ.
ಅಲ್ಲಾ ಹಂಗ ನನ್ನ ಮಗಾ ಅಂದಮ್ಯಾಲೆ ಫಸ್ಟಕ್ಲಾಸ ಬರಲಾರದ ಏನ ಬಿಡ್ರಿ…ಆದರೂ ಹಡದ ತಾಯಿಗೆ ಒಂದ ಸ್ವಲ್ಪ ಎಕ್ಸ್ಟ್ರಾನ ಖುಶಿ ಆಗಿತ್ತ ಅನ್ನರಿ.
ರಿಸಲ್ಟ ಬಂದ ಎರಡ ದಿವಸ ಆಗಿತ್ತೊ ಇಲ್ಲೊ ಇಕಿ ಒಮ್ಮಿಂದೊಮ್ಮಿಲೆ
“ರ್ರಿ..ಗಂಟಿ ಗಣಪತಿಗೆ ಹೋಗಿ ಬರಬೇಕರಿ” ಅಂದ್ಲು.
“ಅಲ್ಲಲೇ…ಮೊನ್ನೆರ ಸೆಕಂಡ್ ಸೆಮ್ ಪಾಸ ಆದಾಗ ಹೋಗಿದ್ವಿ ಅಲಾ” ಅಂತ ಅಂದರ
“ಅದಕ್ಕರಿ..ಆವಾಗ ಹೋದಾಗ 3rdಸೆಮನೂ ಫಸ್ಟಕ್ಲಾಸ್ ಆದರ ನಾ ಮತ್ತ ಬಂದ ಗಂಟಿ ಕಟ್ಟತೇನಿ ಅಂತ ಬೇಡ್ಕೊಂಡಿದ್ದೆ, ಹಿಂಗಾಗಿ ಒಂದ ತಿಂಗಳದಾಗ ಹೋಗಬೇಕು” ಅಂದ್ಲು.
ನಂಗ ತಲಿ ಕೆಡ್ತ, ನಾ ಅಕಿಗೆ ಸಾವಿರ ಸರತೆ ಹೇಳೇನಿ ’ನೀ ಏನ ದೇವರಿಗೆ ಬೇಡ್ಕೊಳೊದಿತ್ತಂದರ ನನ್ನ ಕೇಳಲಾರದ ಬೇಡ್ಕೊ ಬ್ಯಾಡಾ’ ಅಂತ ಈಗ ಮತ್ತ ಬೇಡ್ಕೊಂಡ ಬಂದಿದ್ಲು.
ಹಂಗ ನಂಗ ಮತ್ತೊಮ್ಮೆ ಗಂಟಿ ಗಣಪತಿಗೆ ಹೋಗಲಿಕ್ಕೆ ಪ್ರಾಬ್ಲೇಮ್ ಇಲ್ಲಾ ಆದರ ಇಕಿ ಬೇಡ್ಕೊಳೊದ ಬೇಡ್ಕೊಂಡಿದ್ಲು ’ಮಗಂದ ೮೦% ಆದರ ಇಷ್ಟ ಗಂಟಿ ಕಟ್ಟತೇನಿ’ ಅಂತ ಬೇಡ್ಕೊಂಡಿದ್ದರ ಗಾಡಿ-ಖರ್ಚರ ವರ್ಕೌಟ ಆಗ್ತಿತ್ತರಿಪಾ. ಇಕಿ ಅದರಾಗೂ ಶಾಣ್ಯಾತನ ಮಾಡಿ ಫಸ್ಟಕ್ಲಾಸ ಆದರ ಸಾಕ ಅಂತ ಬೇಡ್ಕೊಂಡಿದ್ಲು. ಹಿಂಗಾಗಿ ನಮ್ಮ ಮಗಾ ವರ್ಷಾ ೬೦-೬೫ % ಇಷ್ಟ ಮಾಡ್ತಾನ.
ಅಲ್ಲಾ ಹಿಂತಾ ಘೋರ ಕಲಿಯುಗದಾಗ ದೇವರ ಮ್ಯಾಲೆ ಎಷ್ಟ ಡಿಪೆಂಡ ಇರಬೇಕ ಅಷ್ಟ ಇರಬೇಕ ಅಂತ ಎಷ್ಟ ಹೇಳಿದರು ಕೇಳಂಗಿಲ್ಲಾ.
ಹಿಂಗ ಅಕಿ ನನಗ ಕೇಳಲಾರದ ದೇವರಿಗೆ ಬೇಡ್ಕೊಂಡಿದ್ದರ ಲಿಸ್ಟ ನೋಡಿದರ ನೀವೇನ, ಸಾಕ್ಷಾತ ದೇವರ ಸಹಿತ ಗಾಬರಿ ಆಗ್ತಾನ. ಆದರೂ ಒಂದ ಸಲಾ ಕೇಳ್ರಿ
ಲಗ್ನಾಗಿ ಎರಡ ತಿಂಗಳಾಗಿತ್ತ, ದಣೇಯಿನ ಹನಿಮೂನಗೆ ಹೋಗಿ ದಣಕೊಂಡ ಬಂದಿದ್ದೆ ಇಕಿ ಒಮ್ಮಿಂದೊಮ್ಮೆಲೇ
“ರ್ರಿ..ಒಂದ ಸತ್ಯನಾರಾಯಣ ಪೂಜಾ ಮಾಡಿ ಐದ ದಂಪತ್ತ ಕರಿಬೇಕರಿ” ಅಂದ್ಲು. ನಾ
’ಈಗ್ಯಾಕಲೇ, ಮನ್ನೇನ ಪ್ರಸ್ತ ಆದ ಮರದಿವಸ ಸತ್ಯನಾರಾಯಣ ಪೂಜಾ ಮಾಡೇವಿ ಅಲಾ’ ಅಂತ ಅಂದರ
’ಇಲ್ಲಾ ನಾ ನನ್ನ ಮದುವಿ ಸುಸುತ್ರ ಆದರ ಶ್ರೀಸತ್ಯನಾರಾಯಣ ಪೂಜಾ ಮಾಡಿ ಐದ ದಂಪತ್ತ ಕರದ ಊಟಕ್ಕ ಹಾಕ್ತೇನಿ ಅಂತ ಬೇಡ್ಕೊಂಡಿದ್ದೆ’ ಅಂತ ಅಂದ್ಲು.
ಅಯ್ಯ..ಅಕಿ ತನ್ನ ಲಗ್ನಾ ಸುಸುತ್ರ ಆಗಲಿ ಅಂತ ಬೇಡ್ಕೊಂಡರ ನಂಗೇನ ಸಂಬಂಧ? ಅಲ್ಲಾ ಹಂಗ ಅಕಿ ಲಗ್ನಾ ಮಾಡ್ಕೊಂಡಿದ್ದ ನನ್ನ ಖರೆ ಆದರ ಬೇಡ್ಕೊಂಡಿದ್ದ ಅಕಿ, ಈಗ ನನ್ನ ಖರ್ಚಿನಾಗ ಮಾಡೋಕಿ ಅಂದರ? ಅದು ಒಂದಲ್ಲಾ ಎರಡಲ್ಲಾ ಐದ ದಂಪತ್ತ, ಮ್ಯಾಲೆ ಎಲ್ಲಾರಿಗೂ ದಕ್ಷಿಣಿ ಬ್ಯಾರೆ…ಅದ ಅಂತೂ ಜಿ.ಎಸ್.ಟಿ ಇದ್ದಂಗ ಬಿಡ್ರಿ.
’ಏ..ನಾಳೆ ಆಷಾಡದಾಗ ನಿಮ್ಮ ತವರ ಮನಿಗೆ ಹೋದಾಗ ಅಲ್ಲೇ ಮಾಡ್ಕೊ’ ಅಂದರ
’ರ್ರಿ..ನಾ ಮದುವಿ ಆಗಿ ಮೂರ ತಿಂಗಳದಾಗ ಮಾಡ್ತೇನಿ’ ಅಂತ ಬೇಡ್ಕೊಂಡಿದ್ದೆ ಅಂದ್ಲು.
ನಂಗ ಏನ ಹೇಳಬೇಕ ತಿಳಿಲಿಲ್ಲಾ, ಅಷ್ಟರಾಗ ನಮ್ಮವ್ವ
“ಅಯ್ಯ, ಅದರಾಗೇನ್ ತೊಗೊ… ಹಂಗ ’ಸತ್ಯನಾರಾಯಣ ಪೂಜಾ’ ಬೇಡ್ಕೊಂಡರ ಬಿಡಲಿಕ್ಕ ಬರತದೇನ’ ಅಂತ ಒಂದ ಸಂಡೇ ಫಿಕ್ಸ್ ಮಾಡಿ ಇತಿ ಶ್ರೀಸತ್ಯನಾರಾಯಣ ಕಥಾ ಪಂಚಮೋಧ್ಯಾಯ: ಅಂತ ಮುಗಿಸೆ ಬಿಟ್ಟರು.
ಅಲ್ಲಾ, ಇಲ್ಲೆ ನಾ ನೋಡಿದರ ಲಕ್ಷ ಗಟ್ಟಲೇ ಸಾಲಾ ಮಾಡಿ ಲಗ್ನಾ ಮಾಡ್ಕೊಂಡ ಮ್ಯಾಲೆ ದೊಡ್ಡಿಸ್ತನಾ ಮಾಡಿ ಹಗಲಗಲಾ ಹೋಗೊದೇನಲ್ಲಾ ಅಂತ ಹದಿನೈದ ಸಾವಿರ ಖರ್ಚ ಮಾಡಿ ಹನಿಮೂನಗೆ ಬ್ಯಾರೆ ಹೋಗಿ ಬಂದಿದ್ದೆ, ನನ್ನ ಪ್ರಾಬ್ಲೇಮ್ ಯಾರ ಕೇಳೊರ?
ಅಲ್ಲಾ ಹಂಗ ನಂದ ಯಾ ದೇವರ ಜೊತಿನೂ ಪರ್ಸನಲ್ ಏನ ಇಲ್ಲಾ ಆದರ ಹಾಸಗಿ ಇದ್ದಷ್ಟ ಕಾಲ ಚಾಚ ಅಂತ ಹೇಳಿದ್ದ ಇದ ದೇವರ ಅಲಾ.
ಮುಂದ ಇಕಿವು ಸಂಸಾರ ಶುರು ಆದ ಕೂಡಲೇ ಆ ದೇವರಿಗೆ ಹಿಂಗ ಬೇಡ್ಕೊಂಡಿದ್ದೆ, ಈ ದೇವರಿಗೆ ಹಿಂಗ ಬೇಡ್ಕೊಂಡಿದ್ದೆ ಅಂತ ಒಂದೊಂದ ಶುರು ಆಗಲಿಕತ್ವು.
ಮುಂದ ಒಂದ ವರ್ಷ ದಾಟಿತ್ತೊ ಇಲ್ಲೊ ನಮ್ಮ ತಂಗಿದ ಮದ್ವಿ ಗೊತ್ತಾತ ಆವಾಗ
“ರ್ರಿ..ಬನಶಂಕರಿಗೆ ಹೋಗಿ ಕಾಯಿ ಒಡಿಸಿಗೊಂಡ ಬರಬೇಕು” ಅಂತ ನಿಂತ್ಲು. ನಾ ’ಈಗ ಯಾಕವಾ, ಮೊನ್ನೆರ ಬನಶಂಕರಿ ನವರಾತ್ರಿಗೆ ಹೋಗಿ ಬಂದೇವಲಾ’ ಅಂದರ. ’ಇಲ್ಲಾ ನಾ ನನ್ನ ಲಗ್ನಾಗಿ ಎರಡ ವರ್ಷದಾಗ ಪ್ರತಿಮಾಂದ ಫಿಕ್ಸ ಆದರ ಬನಶಂಕರಿಗೆ ಕಾಯಿ ಒಡಸ್ತೇನಿ ಅಂತ ಬೇಡ್ಕೊಂಡಿದ್ದೆ’ಅಂದ್ಲು.
ಅಲ್ಲಾ ಇಕಿಗೆ ಪಾಪ ನಮ್ಮ ತಂಗಿ ಏನ ತ್ರಾಸ ಕೊಟ್ಟಿದ್ಲು ಅಂತೇನಿ, ಅದ ನೋಡಿದರ ಪಾಪ ಭಾಭಿ,ಭಾಭಿ ಅಂತ ಹಚಗೊಂಡರ ಇಕಿ ತಾ ಬರೋ ಪುರಸತ್ತ ಇಲ್ಲದ ಅಕಿನ್ನ ಅಟ್ಟೋ ಪ್ಲ್ಯಾನ ಮಾಡಿ ಸಾಲದ್ದಕ್ಕ ಆ ಬನಶಂಕರಿಗೆ ಸುಪಾರಿ ಕೊಟ್ಟ ಅಕಿನ್ನ ಅಟ್ಟಲಿಕ್ಕೆ ರೆಡಿ ಮಾಡಿದ್ಲು.
’ಅಲ್ಲಾ, ಅಕಿದ ಲಗ್ನ ಆದಮ್ಯಾಲೆ ಅಕಿನ್ನು ದಂಪತ್ ಸಹಿತ ಕರಕೊಂಡ ಹೋದರಾತ ತೊಗೊ’ ಅಂತ ಅಂದರ
’ಏ, ಅದ ಭಾಳ ಲೇಟ್ ಆಗ್ತದ, ಹಂಗ ಒಮ್ಮೆ ಬೇಡ್ಕೊಂಡ ಮ್ಯಾಲೆ ಭಾಳ ದಿವಸ ಬಿಡಬಾರದ’ ಅಂತ ಗಂಟ ಬಿದ್ಲು. ಇನ್ನ ನಮ್ಮವ್ವ ’ಕುಲದೇವರ ತೊಗೊ ಒಂದ ಸರತೆ ಬಿಟ್ಟ ಹತ್ತ ಸರತೆ ಹೋದರು ತಪ್ಪ ಇಲ್ಲಾ, ಹಂಗ ನಂದಾ ದೀಪಕ್ಕ ಒಂದ ಸಾವಿರ ರೂಪಾಯಿ ಕೊಟ್ಟ ಬರ್ರಿ, ಮದ್ವಿ ಸುಸುತ್ರ ಆದಮ್ಯಾಲೆ ಸೀರಿ ಉಡಿ ತುಂಬತೇವಿ ಅಂತ ಬೇಡ್ಕೊಂಡ ಬರ್ರಿ’ ಅಂತ ಬ್ಯಾರೆ ಹೇಳಿದ್ಲು.
ತೊಗೊ, ಇಕಿ ಇಲ್ಲೆ ಇದ್ದಲ್ಲೇ ಬೇಡ್ಕೊಂಡರ ನಮ್ಮವ್ವ ಬೇಡ್ಕೊಳಿಕ್ಕೂ ಅಲ್ಲೇ ಹೋಗಿ ಬೇಡ್ಕೊರಿ ಅಂತ ಕಳಸೋಕಿ.
ಇನ್ನ ಇಕಿವು ಲೋಕಲ್ ದೇವರಿಗೆ ಸಣ್ಣ ಪುಟ್ಟ ಬೇಡ್ಕೊಳೊವು ತಿಂಗಳಿಗೆ ಒಂದಿಷ್ಟ ಇದ್ದ ಇರ್ತಿದ್ದವು.
’ತಮ್ಮನ ಲಗ್ನದ ಡೇಟ ಕಿಂತ ಮೊದ್ಲ ಡೇಟ್ ಆಗಿ ಹೋದರ ಕಾಯಿ ಒಡಸ್ತೇನಿ…ಯಾಕಂದರ ನಾನ ಕಳಸಗಿತ್ತಿ’
’ನಮ್ಮ ಮನೆಯವರ ವೀಕೆಂಡಿಗೊಮ್ಮೆ ಹೊರಗ ಹೋಗದ ಬಿಟ್ಟರ ರವಿನಗರ ಗಣಪ್ಪಗ ತುಪ್ಪದ ದೀಪಾ ಹಚ್ಚತೇನಿ’
’ಗೌರಿ ಕೂಡಸೋಕಿಂತ ಮೊದ್ಲ ನಳಾ ಬಂದ ಮಡಿ ನೀರ ತುಂಬೊ ಹಂಗ ಆಗ್ಲಿವಾ ದೇವರ…ನಿಂಗ ಒಂದ ದಿವಸ ಎಕ್ಸ್ಟ್ರಾ ಹೂರ್ಣದ ಆರತಿ ಮಾಡ್ತೇನಿ’…..
’ನಮ್ಮ ಮನೇಯವರ ಪಗಾರ ಈ ವರ್ಷ ೧೫% ಏರಿದರ ಅದರಾಗಿನ ೫% ಸಾಯಿಬಾಬಾನ ಹುಂಡಿಗೆ ಹಾಕ್ತೇನಿ’ ಅಂತ
ಭಾರಿ ಮಜಾ ಮಜಾ ಬೇಡ್ಕೊಳೊಕಿ…..ನಂಗಂತೂ ಜೀವ ಸಾಕ ಸಾಕಾಗಿ ಹೋಗಿತ್ತ.
ಯಾವಾಗ ಇಕಿ ಒಂದನೇದ ಕ್ಯಾರಿಂಗ್ ಆದ್ಲಲಾ ಆವಾಗ ಮತ್ತ ದೊಡ್ಡ ಲೇವಲಗೆ ಹೊಂಟಳು.
’ನಾರ್ಮಲ್ ಡಿಲೇವರಿ ಆದರ ಹಂಗ ಮಾಡ್ತೇನಿ’ ಒಂದ ದೇವರಿಗೆ ಬೇಡ್ಕೊಂಡಿದ್ಲು
’ನಾರ್ಮಲ್ಲೋ ಸಿಜರಿನ್ನೊ ಒಟ್ಟ ಸುಸುತ್ರ ಆದರ ಸಾಕ’ ಅಂತ ಮತ್ತೊಂದ ದೇವರಿಗೆ
’ದೇವರ ಹೆಣ್ಣ ಆದರ ನಿಂಗೊಂದ ಸೀರಿ ಉಡಸ್ತೇನಿ’ ಅಂತ ಹೆಣ್ಣ ದೇವರಿಗೆ
’ದೇವರ ಒಂದನೇದ ಗಂಡ ಆದರ ನಿಂಗ ಬುತ್ತಿ ಪೂಜಿ ಮಾಡಸ್ತೇನಿ’ ಅಂತ ಗಂಡ ದೇವರಿಗೆ…………
ಹಿಂಗ ಒಂದಿಲ್ಲಾ ಒಂದಕ್ಕ ಬೇಡ್ಕೊಂಡಿದ್ದ ಬೇಡ್ಕೊಂಡಿದ್ದ. ಅಲ್ಲಾ ಇಷ್ಟರಾಗ ಒಂದಿಲ್ಲಾ ಒಂದ ಆಗೋದ ಗ್ಯಾರಂಟೀ ಇದ್ದ ಇತ್ತ.
ಖರೇ ಹೇಳ್ಬೇಕಂದರ ನನ್ನ ಜೀವನ ಅನ್ನೋದ ’ಅಕಿ ಬೇಡ್ಕೊಳೊದ ನಾ ಅನುಭವಸೋದ’ ಆಗಿ ಬಿಟ್ಟದ.
ಎಷ್ಟ ಸರತೆ ’…ನೀ ನನ್ನ ಕೇಳಲಾರದ ಯಾ ದೇವರಿಗೂ ಬೇಡ್ಕೊ ಬ್ಯಾಡ’ ಅಂದರೂ ಅಕಿ ಏನ ನನ್ನ ಮಾತ ಕೇಳಂಗಿಲ್ಲಾ.
ಅಲ್ಲಾ, ಅಕಿ ’ನಮ್ಮ ಮನಿಯವರ ನನ್ನ ಮಾತ ಕೇಳಿದ್ರ ನಾ ನಿಂಗ ಏನರ ಕೋಡ್ತೇನಿ’ ಅಂತನೂ ಯಾವದರ ದೇವರಿಗೆ ಬೇಡ್ಕೊಂಡಾಳೋ ಏನೊ ಆ ದೇವರಿಗೆ ಗೊತ್ತ, ನಾ ಇಷ್ಟ ಅಕಿಗೆ ಬೈದರೂ ಮತ್ತ ಅಕಿ ಹೇಳಿದಂಗ ಕೇಳ್ತೇನಿ.
ಹಂಗ ಈಗ ನೀವು ಈ ಪ್ರಹಸನ ಓದಿ ಲೈಕ ಮಾಡಿಲಿಲ್ಲಾ ಅಂದರ ನಡೆಯಂಗಿಲ್ಲಾ, ಯಾಕಂದರ ನನ್ನ ಹೆಂಡ್ತಿ ನಿನ್ನೆ ಬನಶಂಕರಿ ಜಾತ್ರಿಗೆ ಹೋದಾಗ
’ತಾಯಿ ಶಾಕಾಂಬರಿ…ನಮ್ಮ ಮನೆಯವರ ಏನ ಬರದರು ಜನಾ ಅದನ್ನ ಓದಿ ಲೈಕ್ ಮಾಡ್ಲಿ’ ಅಂತ ಬೇಡ್ಕೊಂಡಾಳ. ಹಿಂಗಾಗಿ ಲೈಕ ಮಾಡಿ ನಾಲ್ಕ ಮಂದಿ ಜೊತಿ ಹಂಚಗೊಂಡ ಬನಶಂಕರಿ ಪುಣ್ಯಾ ಕಟ್ಗೊರಿ.
ಅಕಿ ಹರಕಿ ಏನ ಇರವಲ್ತಾಕ ಅದನ್ನ ತೀರಸೊಂವ ನಾ, ನೀವೇನ ಗಾಬರಿ ಆಗಬ್ಯಾಡರಿ

Leave a Reply

Your email address will not be published. Required fields are marked *

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ