ಭಾಜಪಾಡಳಿತದ ಕೊನೆಯ ದಿನಗಳು…..

(ಕರ್ನಾಟಕದಲ್ಲಿ ಭಾಜಪಾಡಳಿತ ನಡೆಯುತ್ತಿರುವ ಸಂದರ್ಭದಲ್ಲಿ)…
ಮೊನ್ನೆ ಮಟಾ -ಮಟಾ ಮಧ್ಯಾಹ್ನ ದುರ್ಗದಬೈಲಾಗ ದುರ್ವಾಸ ಮುನಿಗಳು ಕಂಡರು, ಒಂದ ಲಂಡ ಬರ್ಮೋಡಾದ ಮ್ಯಾಲೆ ಓಂ ಅಂತ ಬರದಿದ್ದ ಕೇಸರಿ ಟಿ–ಶರ್ಟ ಹಾಕ್ಕೊಂಡ ಸಂತ್ಯಾಗ ಲಿಂಬೆ ಹಣ್ಣು, ಹಸಿಮೆಣಸಿನ ಕಾಯಿ ಆರಸಲಿಕತ್ತಿದ್ದರು. ಅವರ ಆಕಾರ ನೋಡಿದ್ರ ಸದಾನಂದ ಗೌಡ್ರದ ಮಲ್ಪೆ ‘ರೇವ್’ ಪಾರ್ಟಿ ಮುಗಿಸಿಕೊಂಡ ಬಂದಂಗ ಕಾಣತಿತ್ತು. ನಾಡದ ಅಮವಾಸ್ಯೆಲಾ, ಬಹುಶಃ ನಮ್ಮ ವಿಧಾನಸೌಧಕ್ಕ ದೃಷ್ಟಿ ಬೀಳಬಾರದು ಅಂತ ಮಾಟಾ-ಮಂತ್ರಾ ಮಾಡಲಿಕ್ಕೆ ಬಂದಿರಬೇಕು ಅನ್ಕೊಂಡೆ.

ನಂಗ ಈ ಮನಷ್ಯಾನ ಹುಬ್ಬಾಳ್ಯಾಗ ನೋಡಿ ಹೆದರಕಿನ ಆತು. ಮೊದ್ಲ ಈ ಮನಷ್ಯಾ ಸಿಡಕ ಶಿವರಾತ್ರಿ, ಅದು ನಮ್ಮ ಮಂತ್ರಿಗಳ ಮೈಯಾಗ, ವಿಧಾನಸೌಧದಾಗ ‘ಕಲಿ’ ಹೊಕ್ಕಂಡ ‘ಕೇಕೀ’ ಹೊಡಿಬೇಕಾರ ನಮ್ಮ ರಾಜ್ಯಕ್ಕ ಬಂದಾರ ಅಂದರ ಬಹುಶಃ ನಮ್ಮ ಸರ್ಕಾರದ್ದ ಆಯುಷ್ಯ ತುಂಬಿ ಬಂದದ ಅನಸಿಲಿಕತ್ತ. ಯಾಕಂದರ ಈ ದುರ್ವಾಸರದ ಸ್ವಭಾವ ಹೇಳಲಿಕ್ಕ ಬರಂಗಿಲ್ಲಾ. ಹಿಂದ ದ್ವಾಪರ ಯುಗದಾಗ ಪಾಪ ಕೃಷ್ಣನ ಮಕ್ಕಳ ಕುಡದ ನಶೆ ಒಳಗ ಮಶ್ಕೀರಿ ಮಾಡಿದಾಗ ಅವರಿಗೆ ಶಾಪಾ ಕೊಟ್ಟ ಈಡಿ ‘ಕೃಷ್ಣಾವತಾರನ’ ‘ದಿ ಎಂಡ್’ ಮಾಡಿ, ’ಕಲಿಯುಗ ಕಮಿಂಗ್ ಸೂನ್’ ಅಂತ ಘೋಷಣಾ ಮಾಡಿದವರು. ಇನ್ನ ನಮ್ಮ ಮಂತ್ರಿಗಳೆಲ್ಲಾ ಮಣ್ಣಿನ ಮಕ್ಕಳು, ದುರ್ವಾಸರ ಜೊತಿ ಏನರ ಮಂಗ್ಯಾನಾಟಾ ಮಾಡಬೇಕು, ಆಮ್ಯಾಲೆ ಒಂದ ಹೋಗಿ – ಇನ್ನೊಂದ ಆಗಿ ಎಲ್ಲರ ಈ ಮನಷ್ಯಾ ನಮ್ಮ ಸರ್ಕಾರಕ್ಕ ಶಾಪಾ ಕೊಟ್ಟ , ಸರ್ಕಾರನ ‘ದಿ ಎಂಡ್’ ಮಾಡಿ- ಗಿಡ್ಯಾರ ಅಂತ ಹೆದರಿಕೆ ಆತ.

ಅಲ್ಲಾ, ಇದ ಕಲಿಯುಗಾ ಬಿಡ್ರಿ, ಯಾರಪ್ಪನ ಶಾಪಾನೂ ನಡೆಯಂಗಿಲ್ಲಾ ಅಂತ ಧೈರ್ಯಾ ಮಾಡಿ
” ನಮಸ್ಕಾರ್ರಿ ಗುರುಗಳ, ಏನ್ ದೂರ ಬಂದಿರಿ?” ಅಂತ ಕೇಳೆ ಬಿಟ್ಟೆ. ಅವರು ಲಿಂಬೆ ಹಣ್ಣ ಆರಸಿಲಿಕತ್ತವರು ತಲಿ ಮ್ಯಾಲೆ ಎತ್ತಿ, ಕಣ್ಣ ಕಿಸದ
“ಏ ವತ್ಸಾ, ಇಲ್ಲೇ ಶಿವರಾತ್ರಿಗೆ ಸಿದ್ದಾರೂಡ ಮಠದ ಜಾತ್ರಿಗೆ ಬಂದೇನಿ ” ಅಂದರು,ಅವರ ವತ್ಸಾ ಅಂದದ್ದು ‘ಲೇ ಮಗನ’ ಅಂದಂಗ ಅನಸ್ತು.
ಅಲ್ಲಾ, ಈ ಮನುಷ್ಯಾ ಏನೋ ವಿಶೇಷ ಕಾರಣ ಇಲ್ಲದ ಹುಬ್ಬಳ್ಳಿ ಕಡೆ ಹಾಯೋರ ಅಲ್ಲಾ, ಇದರಾಗ ಎನೋ ರಾಜಕೀಯ ಇರಬೇಕು. ಪಾಪಾ ನಮ್ಮ ಯಡಿಯೂರಪ್ಪಾರದ ಮೊದ್ಲ ಟೈಮ ಸರಿಯಿಲ್ಲಾ, ಇನ್ನ ‘ಶೆಟ್ಟರ’ ಉರಾಗ ದುರ್ವಾಸರ ಬಂದಾರಂದರ ಮುಗದ ಹೋತ, ಸಾಕ್ಷಾತ ಶ್ರಿರಾಮುಲು ಬಂದು ಇವರನ್ನ ಗಾಡ್ಯಾಗ ಹಾಕ್ಕೊಂಡ ಯಾವದರ ಬೀಚ್ ರಿಸಾರ್ಟಗೆ ಕರಕೊಂಡ ಹೋಗಿ “ಇಲ್ಲೇ, ನೀವ ದಂಡ್ಯಾಗ ತಪಸ್ಸ ಮಾಡ್ತಿರ್ರಿ, ನಾವ ಹೇಳೊ ತನಕಾ ಈ ಸರ್ಕಾರದ ಉಸಾಬರಿಗೆ ಬರಬ್ಯಾಡರಿ ” ಅಂತ ಬಿಟ್ಟ ಬಂದರು ಬಂದ್ರ ಅನಸಿಲಿಕತ್ತ. ನಾ ಇವರ ಬಂದಿದ್ದ ಖರೇ ಹಕಿಕತ್ ತಿಳ್ಕೊಳ್ಳಿಕ್ಕೆ ಅಂತ ಕಾಲ ಕೆದರಿ  “ಗುರುಗಳ, ಮೊನ್ನೇನ ನಮಗ ರಾಮ-ರಾಜ್ಯ ಬೇಕಂತ ಜನಾ ಹೊಸಾ ಸರ್ಕಾರ ಆರಿಸಿ ತಂದಾರ, ನೀವು ಅದಕ್ಕೆಲ್ಲರ ಶಾಪಾ ಕೊಟ್ಟ ಬಿಳಿಸಿ-ಗಿಳಿಸಿರಿ ಮತ್ತ ” ಅಂತ ಅಂದ ಬಿಟ್ಟೆ. ತೊಗೊ ದುರ್ವಾಸ ಮುನಿಗಳು ಸಿಟ್ಟಿಲೇ  “ಲೇ ಮಗನ…..ಎಲ್ಲಿ ರಾಮ ರಾಜ್ಯಲೇ, ಎಲ್ಲೆ ನೋಡಿದಲ್ಲೆ ಭ್ರಷ್ಟಾಚಾರ, ವ್ಯಭಿಚಾರ,ಅತ್ಯಾಚಾರ, ಅನಾಚಾರ, ರೇಣುಕಾಚಾರ್ಯಾ ತುಂಬಿ ತುಳ್ಕ್ಯಾಡಲಿಕ್ಕತ್ತದ. ಅಲ್ಲಲೇ, ನಾ ಕೃಷ್ಣಾವತಾರದಾಗ ಯಾದವರು ಹಿಂಗ ಹುಚ್ಚುಚಾಕಾರ ಮಾಡಿದ್ದಕ್ಕ ಹೌದಲ್ಲೋ ಕೃಷ್ಣನ ಮಗಗ ಶಾಪಾ ಕೊಟ್ಟ ಅವನ ಹೊಟ್ಯಾಗಿಂದ ಒನಕೆ ಹಡಸಿ, ಆ ಒನಕೆ ಇಂದನ ಅವರ ಕುಲಾ ನಾಶಾ ಮಾಡಸಿದ್ದು ?” ಅಂದ್ರು.
ನಾ ಅವರ ಮಾತ ಅರ್ಧಕ್ಕ ತಡದ
” ನಿಂಬದು ಆ ಒನಕೆದೂ ಎಲ್ಲಾ ಕೃಷ್ಣಾವತರಕ್ಕ ಮುಗಿತು. ಕಲಿಯುಗದಾಗ ಏನ ನಡೆಂಗಿಲ್ಲಾ” ಅಂದೆ. ಅವರು ಸೀದಾ ಹುಬ್ಬಳ್ಳಿ ಭಾಷದಾಗ
“ಲೇ, ನಿನ್ನೌನ….. ನೀವೇಲ್ಲಾ ಆ ಕೃಷ್ಣನ ಮಕ್ಕಳು-ಮೊಮ್ಮಕ್ಕಳ ವಂಶಸ್ಥರಲೇ, ಕೃಷ್ಣವತಾರದಾಗಿನ ಆ ಒಂದ ಒನಕೆ ಚೂರ ತಂದ ಯಾರೊ ನಿಮ್ಮ ಪೂರ್ವಜರು ಇಲ್ಲೇ ಬಳ್ಳಾರಿ ಒಳಗ ಹುಗದಿದ್ದರು. ಅದು ಈಗ ಬೆಳದ ಗುಡ್ಡ ಗಟ್ಟಲೇ ‘ಗಣಿ’ ಆಗಿ ಅದನ್ನ ನೀವು ಕಳುವಿಲೇ ಮಾರಕೊಂಡ ತಿಂದ ಅದರ ಸಂಬಂಧ ಅಧಿಕಾರಕ್ಕ ಜಗಳಾಡಿ- ಹೋಡದಾಡಿ ಸಾಯಿಲಿಕತ್ತಿರಿ. ಆವಾಗ ಯಾದವರೆಲ್ಲಾ ಕುಲಗೆಟ್ಟ ಆ ಒನಕೆ ಜೊಂಡಲೇನ ಹೊಡದಾಡಿ- ಬಡದಾಡಿ ತಮ್ಮ ಕುಲ ನಾಶ ಮಾಡ್ಕೋಂಡಂಗ ಇವತ್ತ ಕಲಿಯುಗದಾಗನೂ ಅದ ಒಂದ ಒನಕೆ ತುಂಡ ಅಂದರ ‘ಗಣಿ’ಸಂಬಂಧ ನೀವೇಲ್ಲಾ ಕಚ್ಚಾಡಿ ಅಧಿಕಾರ ಕಳ್ಕೋತಿರಿ, ಆವಾಗ ನನ್ನ ಶಾಪಾ ಕಂಪ್ಲೀಟ ಆಗೋದು ” ಅಂತ ದುರ್ವಾಸರು ಇನ್ನೋಮ್ಮೆ ಗುಡಗಿ, ಬ್ರಾಡವೇದೋಳಗ ‘ಹುಸೇನ್’ ಚುರಮರಿ ತಿನ್ನಲಿಕ್ಕೆ ಹೋದರು.

ಅಂತು ‘ಕೃಷ್ಣಾವತಾರದ ಕೊನೆ’ಗಾಣಿಸಿದ ಇವರು ನಮ್ಮ ರಾಜ್ಯದಾಗಿನ ‘ಭಾಜಪಾಡಳಿತಕ್ಕೂ’ನಾಂದಿ ಹಾಡೆ ಬಿಡತಾರ. ಇವರು ‘ ಕಾಂಗ್ರೇಸ್’ ಪೈಕಿ, ‘ಭಾರದ್ವಾಜ’ಗೋತ್ರದವರು ಅಂತ ಗ್ಯಾರಂಟೀ ಆತು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ