ಬರೇ ಗೋತ್ರ ಬಿಟ್ಟರ ನಡಿಯಂಗಿಲ್ಲಾ,ವ್ಯಾಕ್ಸಿನ್ ಬಿಡಬೇಕ…

ಮೊನ್ನೆ ಮುಂಜ ಮುಂಜಾನೆ ನಮ್ಮ ರಕ್ಷಕ್ಕ ಫೇಸಬುಕ್ಕಿನಾಗ ಒಂದ ಸ್ಟೇಟಸ್ ಹಾಕಿದ್ಲು. ಹಂಗ ಅಕಿ ಫೇಸಬುಕ್ಕಿನಾಗ ಮೊದ್ಲಿಂದ ಭಾರಿ active, ಒಂಥರಾ ಫೇಸಬುಕನಾಗಿನ ಹೀರೆಮನಷ್ಯಾಳ ಅನ್ನರಿ. ಇನ್ನ ಲಾಕ್ ಡೌನ ಆದಾಗಿಂದಂತೂ ಗಂಡಂದೂ, ಮಗಳದೂ ಇಬ್ಬರದೂ ವರ್ಕ್ ಫ್ರಾಮ್ ಹೋಮ್ ಅಂದ ಮ್ಯಾಲೆ ಅಕಿ ಮತ್ತಿಷ್ಟ ಫ್ರೀ ಆಗಿದ್ಲ. ಅದರಾಗ ಅಕಿ ಫೇಸಬುಕ್ಕಿನಾಗ ಇಷ್ಟ ಮಂದಿಗೆ ಹಚಗೊಂಡಾಳ ಅಂದರ ಅಕಿ ಬೈ ಮಿಸ್ತೇಕ್ ಏನು ಟೈಪ ಮಾಡಲಾರದ ಬರೇ ಫುಲಸ್ಟಾಪ್ ಹಾಕಿ ಪೋಸ್ಟ ಮಾಡಿದರು ಒಂದ ಐವತ್ತ ಮಂದಿ ಅದರಾಗ ಏನೋ ಅರ್ಥ ಅದ ಅಂತ ಕಣ್ಣಮುಚ್ಚಿ ಲೈಕ್ ಮಾಡ್ತಾರ. ಅಲ್ಲಾ ಅವರೇಲ್ಲಾ ಬ್ಲೈಂಡ ಫಾಲೋವರ್ಸ್ ಬಿಡ್ರಿ. ಅಕಿ ಒಂಥರಾ ಫೇಸಬುಕ್ ಸೇಲಿಬ್ರಿಟಿನ ಅನ್ನರಿ.
ಅವತ್ತೀನ ಸ್ಟೇಟಸ್ ಏನಿತ್ತಪಾ ಅಂದರ
’ಕೋವಿಶೀಲ್ಡ ತೊಗೊಂಡವಂಗ ಕೋವ್ಯಾಕ್ಸಿನ್ ತೊಗೊಂಡೊಕಿನ್ ಕೊಡಬಹುದಾ?’ ಅಂತ ಇತ್ತ. ನಾ ಅದನ್ನ ನೋಡಿದವನ ಏನಿಲ್ಲದ ಇಲ್ಲೆ ನಾವ ಕನ್ಯಾ ಇದ್ದ ಮನಿಯವರಿಗೆ ನಮ್ಮ ಹುಡಗನ್ನ ನಿಮ್ಮ ಮನಿಗೆ ಕೊಡಬಹುದಾ ಅಂತ ದಯನಾಸ ಪಡತಿರ್ತೇವಿ ಹಂತಾದರಾಗ ಇಕೇಲ್ಲೇರ ಕನ್ಯಾದವರ ವರಕ್ಕ ಹೂಂ ಅನ್ನಲಿಕ್ಕೆ ಮತ್ತೊಂದ ಕ್ರೈಟೇರಿಯಾ ಜಾಸ್ತಿ ಮಾಡಿಸಿ- ಗಿಡಿಸ್ಯಾಳ ತಡಿ ಅಂತ ಇಮ್ಮಿಡಿಯೇಟ್ ಆಗಿ
’ನಮ್ಮವ್ವಾ ಇದ್ದದ್ದ parameters ಒಳಗ ವರಗೊಳಿಗೆ ಕನ್ಯಾ ಸಿಗವಲು, ನೀ ಹಿರೇಮನಷ್ಯಾಳ ಆಗಿ ಇದ್ದದ್ದ parameters ಕಡಮಿ ಮಾಡೋದ ಬಿಟ್ಟ ಮತ್ತ ಅದಕ್ಕ add ಮಾಡಬ್ಯಾಡ್ವಾ…ನಂಗ ಗಂಡಸ ಮಗಾ ಇದ್ದಾನ. ನಾಡಿ-ನಡಾ, ಗುಣಾ,ಗೋತ್ರ, ನಕ್ಷತ್ರ, ರಾಶಿ, ಗ್ರಹ…ಇದರ ಜೊತಿ ಮತ್ತ ವ್ಯಾಕ್ಸಿನ್ ಒಂದ ಸೇರಸ ಬ್ಯಾಡ್ವಾ. ಮುಂದಿನ ವರ್ಷ ಪಂಚಾಂಗದಾಗ ಅದರ ಬಗ್ಗೆನೂ ಬರದರ ಏನ ಮಾಡೋದ’ ಅಂತ ಕಮೆಂಟ ಬರದೆ.
ಹಂಗ ಬ್ಯಾರೆವರೇಲ್ಲಾ ಭಾರಿ ಭಾರಿ ಕಮೇಂಟ್ಸ ಬರದರ.
ನಮ್ಮ ಜಯಾ
’ ಏ, ಹಂಗೇಲ್ಲಾ ನಡಿತದ ಆದರ ಮದ್ವಿ ಆದಮ್ಯಾಲೆ ಇಬ್ಬರಿಗೂ ಇನ್ನೊಮ್ಮೆ ಪ್ಫೈಜರ್ ವ್ಯಾಕ್ಸಿನ್ ಕೊಟ್ಟ ಶಾಂತಿ ಮಾಡಸಬೇಕು’ ಅಂದಾ. ಅಲ್ಲಾ ಇಲ್ಲೇ ನೋಡಿದರ ನಮಗ ಎರಡನೇ ಡೋಸ ವ್ಯಾಕ್ಸಿನಗೆ OTP ಬರವಲ್ತ, ಪಾಳೆ ಸಿಗವಲ್ತ, Co-Win App ನೋಡಿದರ ಜ್ಯಾಮ ಆಗಲಿಕತ್ತದ ಇಂವಾ ಎಲ್ಲಿ ಮೂರನೇ ಡೋಸ ತಂದಾ ಅಂತ ಸಿಟ್ಟ ಬಂತ. ಅಲ್ಲಾ ಪುಣ್ಯಾಕ್ಕ ಇಬ್ಬರೂ ಪ್ಫೈಜರ್ ಡೋಸ್ ತೊಗೊಂಡಮ್ಯಾಲೆ ಪ್ರಸ್ತಾ ಮಾಡಬೇಕು ಅಂತ ಹೇಳಲಿಲ್ಲಾ.
ನಮ್ಮ ನಾಗು ’ಕೋವೀ ಮತ್ತ ಕೋವ್ಯಾ ಅಂದ ಮ್ಯಾಲೆ ಜೋಡಿ ಸರೀನss ಇರ್ತದ, ಭಾಳ ತಲಿಕೆಡಸಿಗೊಳ್ಳೊದ ಬ್ಯಾಡ ತೊಗೊ’ ಅಂತ ಏನ ’ಕೋವಿ-ಕೋವ್ಯಾ’ ಅವರ ಮನಿ ಅಂಗಳದಾಗ ಆಡೋ ಹುಡಗಾ- ಹುಡಗಿ ಗತೆ ಹೇಳಿದಾ. ಅಲ್ಲಾ ಪುಣ್ಯಾತ್ಮ ವ್ಯಾಕ್ಸಿನ್ ಒಳಗೂ ಸ್ತ್ರೀಲ್ಲಿಂಗ- ಪುಲ್ಲಿಂಗ ನೋಡಲಿಕತ್ತಾನಲಾ. ಇಲ್ಲೆ ನೋಡಿದರ ನಮಗ ಇವತ್ತಿಗೂ ಕೋರೊನಾ ಪುಲ್ಲಿಂಗೊ, ಸ್ತ್ರೀಲಿಂಗೊ ಏನ ನಪುಸಕಲಿಂಗನೋ ಅನ್ನೋದ ಗೊತ್ತಾಗವಲ್ತ.
ಮತ್ತೊಬ್ಬರು ’ಭಟ್ಟರು ಸ್ಪುಟ್ನಿಕ್ V ತೊಗೊಂಡಿದ್ದರ ನಡಿತದ’ ಅಂತ ಅಂದರ ’ಅಡಗಿಯವರ ಆಸ್ಟ್ರಾಝೆನ್ಕಾ ತೊಗೊಂಡಿರಬೇಕು’ ಅಂತ ಇನ್ನೊಬ್ಬರ ಬರದರು. ಅಲ್ಲಾ ಅದ ಹೇಳಿ ಕೇಳಿ ಫೇಸಬುಕ್ ಯಾರ ಬೇಕಾದವರ ಏನ ಬೇಕಾದ ಬರಿಬಹುದು, ಅದರಾಗ ಲಾಕಡೌನ್ ಆದ ಮ್ಯಾಲೆ ಬ್ಯಾರೆ ಕೆಲಸನೂ ಇಲ್ಲಾ, ಖಾಲಿ ಇದ್ದರು ತಲ್ಯಾಗ ತಿಳದಿದ್ದ ಬರಿಲಿಕತ್ತರು.
ಸ್ವಲ್ಪ ಇದ್ದದ್ದರಾಗ ಸೈನ್ಸ್ – ಸಂಸ್ಕೃತಿ ತಿಳದವರ ಒಬ್ಬರು ’ಬರೇ ಗೋತ್ರ ಬಿಟ್ಟರ ನಡಿಯಂಗಿಲ್ಲಾ…ವ್ಯಾಕ್ಸಿನ್ ಬಿಡಬೇಕ. ಹಂಗ ಇಬ್ಬರು ಒಂದ ವ್ಯಾಕ್ಸಿನ್ ತೊಗೊಂಡರ ಏಕ ನಾಡಿ ಆಗ್ತದ ಅದ ನಡಿಯಂಗಿಲ್ಲಾ’ ಅಂತ ಅಗದಿ AC ರೂಮ ಒಳಗ ಮಾಸ್ಕ ಹಾಕ್ಕೊಳಲಾರದ ಸೀತಂಗ ಹೇಳಿದರು. ಅಂದರ ಎಲ್ಲಾರಿಗೂ ವೈರಲ್ ಆಗೊಂಗ ಹೇಳಿದರು.
ಇನ್ನ ಒಬ್ಬೊಂವಾ ’ಹುಡುಗ ಕೋವಿಶೀಲ್ಡ್ ತೊಗೊಂಡರ ಕೋವಿಡನಿಂದ ಬಚಾವ ಆಗಬಹುದು ಆದರ ಮದ್ವಿ ಆದ ಹುಡಗಿಯಿಂದ ಅಂತೂ ಅಲ್ಲಾ, ಹಿಂಗಾಗಿ ಯಾರ ಯಾ ವ್ಯಾಕ್ಸಿನ್ ತೊಗೊಂಡರ ಏನ’ ಅಂತ ಅಗದಿ ಪ್ರ್ಯಾಕ್ಟಿಕಲ್ ಆಗಿ ಹೇಳಿದಾ. ನನಗಂತೂ ಅದ ಅಗದಿ ಬೀಜ ಮಾತ ಅನಸ್ತ.
ಅಲ್ಲಾ ಈಗ ಏನಿಲ್ಲದ ಜನಾ ಒಬ್ಬೊರಿಗೊಬ್ಬರ ಫೋನ ಮಾಡಿದರ ನಿಂಬದ ಕೋವ್ಯಾಕ್ಸಿನ್ನೊ ಇಲ್ಲಾ ಕೋವಿಶೀಲ್ಡೊ ಅಂತ ಕೇಳ್ತಾರ ಇನ್ನ ಸಂಬಂಧ ಬೆಳಸಬೇಕಾರ ಅಗದಿ
’ನೀವು ಸ್ಮಾರ್ತರೋ ಇಲ್ಲಾ ವೈಷ್ಣವರೋ’ ಅಂತ ಕೇಳಿದಂಗ ’ನೀವು ಕೋವ್ಯಾಕ್ಸಿನೋ ಇಲ್ಲಾ ಕೋವಿಶೀಲ್ಡೊ’ ಅಂತ ಕೇಳೆ ಕೇಳ್ತಾರ ತೊಗೊರಿ.
ಇಬ್ಬರೂ ಒಂದ ತೊಗೊಂಡಿದ್ದರ ಸಗೋತ್ರ ಆಗ್ತದ ಅಂತ ಅನ್ನೋರ ಅಂದರು.
ಹಂಗ ಇಬ್ಬರದೂ ಬ್ಯಾರೆ ಬ್ಯಾರೆ ವ್ಯಾಕ್ಸಿನ್ ಇತ್ತಂದರ ಇಬ್ಬರನೂ ಮದ್ವಿ ಆದಮ್ಯಾಲೆ ಹದಿನೈದ ದಿವಸ ಕ್ವಾರೆಂಟೈನ್ ಮಾಡ್ಬೇಕ ಅಂತ ಇನ್ನೊಬ್ಬರ ಅಂದರು. ಅಲ್ಲಾ ಹೆಂಗಿದ್ದರೂ ಹನಿಮೂನಗೆ ಹೋಗೆ ಹೋಗ್ತಾರ, ಅದ ಕ್ವಾರೆಂಟೈನ್ ಇದ್ದಂಗ ಬಿಡ್ರಿ.
ನಮ್ಮ ರಕ್ಷಕ್ಕ ಫೇಸಬುಕ್ ಸ್ಟೇಟಸ್ ಹಾಕಿ ಸುಮ್ಮನ ಕೂಡಬೇಕಿಲ್ಲ, ದೊಡ್ಡಿಸ್ತನ ಮಾಡಿ ಪ್ರಾಣೇಶ ಆಚಾರ್ಯಗೆ ಫೋನ ಮಾಡಿ
’ಕೋವಿಶೀಲ್ಡ ತೊಗೊಂಡವರಿಗೆ ಕೋವ್ಯಾಕ್ಸಿನ್ ತೊಗೊಂಡೊಕಿನ್ ಕೊಡಬಹುದಾ?’ ಅಂತ ಅವರನೂ ಕೇಳಿದ್ಲಂತ. ಅವರ ಸಿಟ್ಟಿಗೆದ್ದ
’ಉತ್ತಾರಾಧಿ ಮಠದ ಪಂಚಾಂಗದಾಗ ಅಂತು ಕೊಟ್ಟಿಲ್ಲಾ, ರಾಯರ ಮಠದ ಪಂಚಾಗ ನೋಡಿ ಹೇಳ್ತಿನಿ’ ಅಂತ ಬೈದರು.
ಅಕಿ ಎಲ್ಲೇರ ಇನ್ನ ನನಗ ಕೇಳಿಗೀಳ್ಯಾಳ ಅಂತ ನಾ ಮೊದ್ಲ ’ಏ…ನನಗೇನ ಕೇಳಬ್ಯಾಡ್ವಾ, ನಾವ ಶೃಂಗೇರಿ ಮಠದ ಪಂಚಾಂಗದವರ’ ಅಂತ ಹೇಳಿ ಬಿಟ್ಟೆ.
ಅಲ್ಲಾ ಅದ ಏನೋ ಅಂತಾರಲಾ ’ ಉದ್ಯೋಗ ಇಲ್ಲದ ವರ್ಕ್ ಫ್ರಾಮ್ ಹೋಮ್ ಗಂಡಾ ಹೆಂಡ್ತಿ ತಲ್ಯಾಗಿನ ಹೇನ ಒರದಿದ್ದನಂತ’ ಹಂಗ ನಮ್ಮ ಮಂದಿಗೆ ಬ್ಯಾರೆ ಕೆಲಸ ಇದ್ದಿದ್ದಿಲ್ಲಾ, ಒಬ್ಬೊಬ್ಬೊಂವಾ ಒಂದೊಂದ ಸಜೆಶನ್ ಅಕಿ ಫೇಸ ಬುಕ್ಕ ಸ್ಟೇಟಸಗೆ ಕಮೆಂಟ್ ಕೊಟಗೋತ ಕೂತರ. ಅಲ್ಲಾ ಹಂಗ ಅಷ್ಟ ಅಕಿ ಪೋಸ್ಟ ಫಾಲೊ ಮಾಡಿದೆ ಅಂತ ಇವತ್ತ ಈ ಪ್ರಹಸನ ಬರದೆ ಬಿಡ್ರಿ.
ಇನ್ನೊಂದ ಮಜಾ ಕೇಳ್ರಿಲ್ಲೇ ಒಬ್ಬರ ಹೀರೆಮನಷ್ಯಾರ ಅಗದಿ ಸೀರಿಯಸ್ ಆಗಿ ಹುಡಗಾ- ಹುಡಗಿ ಯಾ ವ್ಯಾಕ್ಸಿನ್ ತೊಗೊಂಡರು ಅನ್ನೋದ ಇಂಪಾರ್ಟೆಂಟ್ ಅಲ್ಲಾ ಒಟ್ಟ ಇಬ್ಬರು ಕೋವರ್ಜಿನ್ ಇದ್ದರ ಸಾಕ ಅಂದರು, ನಾ ಗಾಬರಿ ಆಗಿ ಇದೇಲ್ಲಿ ವರ್ಡ ಬಂತಪಾ ಅಂತ
’sir, can you explain covirgin meaning, please’ ಅಂದರ
’ಏ, ನಾ ಹೇಳಿದ್ದ ಒಟ್ಟ ಹುಡಗಾ ಹುಡಗಿಗೇ ಈ ಮೊದ್ಲ ಕೋರೊನಾ ಪಾಸಿಟಿವ್ ಬಂದಿದ್ದಿಲ್ಲಾ ಅಂದರ ಆತಪಾ, ಅದಕ್ಕ ಕೋವರ್ಜಿನ್ ಅಂತಾರ’ ಅಂತ ನಕ್ಕರ.
ನಾ ಹಣಿ-ಹಣಿ ಬಡ್ಕೊಂಡೆ.
ಈಗ ನಮ್ಮ ಪೈಕಿ ಕನ್ಯಾ ಕಡಮಿ ಆಗಿದ್ದಕ್ಕ ಒಟ್ಟ ಕನ್ಯಾ ಇದ್ದರ ಸಾಕ, ಕುಂಡ್ಲಿ- ಗೋತ್ರ- ಜಾತಿ ಏನ ನೋಡದ ಬ್ಯಾಡ ಅಂತೇವಲಾ ಹಂಗ ಸುಮ್ಮನ ಯಾವದರ ವ್ಯಾಕ್ಸಿನ್ ಇರವಲ್ತಾಕ ಲಗ್ನ ಆದರ ಸಾಕ ಅಂತ ಅನಸ್ತದ.
ಅಲ್ಲಾ, ಹಂಗ ಒಂದಿಷ್ಟ ಮಂದಿ ಇತ್ತೀಚಿಗೆ ನಮ್ಮ ಕಡೆ ಎಂಗೇಜಮೆಂಟ್ ಆದ ಕೂಡ್ಲೇನ ಮದ್ವಿ ರೆಜಿಸ್ಟ್ರೇಶನ್ ಮಾಡಸಿಬಿಡ್ತಾರ ಮುಂದ ಹುಡಗಿಗೆ ವಿಸಾ ಲಗೂನ ಸಿಗ್ಲಿ ಅಂತ. ಇನ್ನ ಮುಂದ ಆ ಮದ್ವಿ ರೆಜಿಸ್ಟ್ರೇಶನ್ ಜೊತಿ ವ್ಯಾಕ್ಸಿನಗೂ ರೆಜಿಸ್ಟ್ರೇಶನ್ ಮಾಡಿಸಿ ಬಿಟ್ಟರ ಮದ್ವಿ ಟೈಮ ತನಕಾ ವ್ಯಾಕ್ಸಿನ್ ಸಿಕ್ಕ ಸಿಗ್ತದ.ಅದರಾಗ ನಮ್ಮ ಹುಡುಗರ ಹಣೆಬರಹ ಇವತ್ತ ಹೆಂಗ ಆಗೇದ ಅಂದರ ಈ ವಾಕ್ಸಿನ್ ಸಹಿತ ಮದ್ವಿಗೆ ಹುಡುಗಿ ಹುಡುಕಿದಂಗ ಆಗೇದ, ಮೊದ್ಲ ಸಿಗಬೇಕಾರ ತೊಗೊರಿಪಾ ಅಂದರ ತೊಗೊಳಿಲ್ಲಾ, ಈಗ ತೊಗೊಬೇಕ ಅಂದರ ವ್ಯಾಕ್ಸಿನ್ ಸಿಗವಲ್ತ. ಅದರಾಗ ಇನ್ನೊಂದ ವಿಚಿತ್ರ ಅಂದರ ಒಂದ ಕಡೆ ನಮ್ಮ ಹುಡುಗರು ನಲವತ್ತೈದರ ಹತ್ತರ ಬಂದಾವ ಅಂತ ಕನ್ಯಾ ಸಿಗವಲ್ವು, ಇಲ್ಲೇ ನೋಡಿದರ ನಲವತ್ತೈದ ಇನ್ನೂ ದಾಟಿಲ್ಲಾ ಅಂತ ವ್ಯಾಕ್ಸಿನ ಕೊಡವಲ್ಲರ. ಏನ್ಮಾಡ್ತೀರಿ?
ನೋಡ್ರಿ ಹೆಂಗ ನಮ್ಮಕ್ಕ ಟೈಮ್-ಪಾಸ್ ಗೆ ಹಾಕಿದ್ದ ಒಂದ ಫೇಸಬುಕ್ ಸ್ಟೇಟಸ್ ಒಂದ ಪ್ರಹಸನನ ಬರಸತ.
ಇರಲಿ, jokes apart ಯಾರ ಯಾರ ವಾಕ್ಸಿನ್ ತೊಗೊಂಡಿಲ್ಲಾ, ದಯವಿಟ್ಟ ತೊಗೊರಿ. ಯಾವದ ತೊಗೊಂಡ್ರು ನಡಿತದ, ಅದರಾಗ ಏನ ಹಿಂತಾ ಗೋತ್ರದವರ ಹಿಂತಾದ ತೊಗೊಬೇಕು ಅಂತ ಏನ ಇಲ್ಲಾ. ಆದರ ಒಂದನೇದ ಕೋವಿಶೀಲ್ಡ್ ತೊಗೊಂಡಿದ್ದರ ಎರಡನೇದು ಕೋವಿಶೀಲ್ಡ್ ತೊಗೊಬೇಕ ಇಷ್ಟ. ಅಲ್ಲಾ ಕೋರೊನಾ ಕಾಟಕ್ಕ ಅಲ್ಲದಿದ್ದರೂ ಎಲ್ಲೆ ನಮ್ಮ ರಕ್ಷಕ್ಕ ಹೇಳಿದಂಗ ನಾಳೆ ಕನ್ಯಾ ಕೋಡೋರ ಏನ ಕಲತಿ ತಮ್ಮಾ ಅಂದ ಮುಂದ ಯಾ ವ್ಯಾಕ್ಸಿನ್ ತೊಗೊಂಡಿ ಸರ್ಟಿಫಿಕೇಟ ತೊರಸ ಅಂದರ ಏನ್ಮಾಡ್ತೀರಿ? ಅಲ್ಲಾ ಹಂಗ ಸರ್ಟಿಫಿಕೇಟ್ ಲಗ್ನಾ ಆಗೋರಿಗೆ ಇಷ್ಟ ಅಪ್ಲಿಕೇಬಲ್ ಇರಬಹುದು ಆದರ ವ್ಯಾಕ್ಸಿನ್ ಮಾತ್ರ ಎಲ್ಲಾರೂ ತೊಗೊಳಬೇಕ ಬಿಡ್ರಿ.

Leave a Reply

Your email address will not be published.

This site uses Akismet to reduce spam. Learn how your comment data is processed.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ