ಈಗ ಒಂದ ಎರಡ ಮೂರ ವರ್ಷದಿಂದ ದಿವಸಾ ಮುಂಜಾನೆ ಗಂಡಾ ಹೆಂಡತಿ ಇಬ್ಬರು ನಮ್ಮ ಪೇಪರ್ ಹಿಡ್ಕೊಂಡ ಆ ಪದಾವಳಿ ತುಂಬೊ ಚಟಾ ಹಚ್ಗೊಂಡೇವಿ. ಹಂಗ ಇಬ್ಬರದೂ ಕನ್ನಡ ಅಷ್ಟಕ್ಕಷ್ಟ, ನಾ ಏನೋ ಒಂದ ನಾಲ್ಕ ಅಕ್ಷರ ಆಡ ಭಾಷೆ ಒಳಗ ಬರದರ ಬರಿತೇನಿ ಇನ್ನ ನಮ್ಮಕಿದ ಅಂತೂ ಮುಗದ ಹೋತ. ಹಿಂಗಾಗಿ ಆ ಪದಾವಳಿ ತುಂಬೋದರಿಂದ ಒಂದ ಸ್ವಲ್ಪ ಕನ್ನಡದ ಜ್ಞಾನ, ಜನರಲ್ ನಾಲೇಜ್ ಜಾಸ್ತಿ ಆಗಲಿ ಅಂತ ನಾ ಅಕಿನ್ನ ಹಿಡ್ಕೊಂಡ ಪದಾವಳಿ ತುಂಬತಿರ್ತೇನಿ. ನಂಗ ಬರಲಾರದ್ದ ಅಕಿಗೆ ಕೇಳಿ ನೀ ಕರೆಕ್ಟ ಹೇಳಿದರ ಒಂದ ಪದಕ್ಕ ಹತ್ತ ರೂಪಾಯಿ ಅಂತ ಅಂದರ ಸಾಕ ಅಕಿ ಮನ್ಯಾಗಿನ ಕೆಲಸಾ-ಬೊಗಸಿ ಬಿಟ್ಟ ಪೇಪರ್ ಹಿಡ್ಕೊಂಡ ಕೂತ ಬಿಡ್ತಾಳ. ನಾನು ಹೋಗಲಿ ಬಿಡ ಹೆಂಡ್ತಿ ಶಾಣ್ಯಾ ಆಗೋದ ದೊಡ್ಡದೊ ಹತ್ತ ರೂಪಾಯಿ ದೊಡ್ಡದೊ ಅಂತ ಅಕಿ ಜೊತಿ ಟೈಮ್ ಪಾಸ್ ಮಾಡ್ತಿತಿರ್ತೇನಿ ಅನ್ನರಿ.
ಮೊನ್ನೆ ಒಂದ ಪದಾವಳಿ ಒಳಗ ’ಹಿರಣ್ಯಕಶಿಪುವಿನ ಸಾಧ್ವಿ ಹೆಂಡ್ತಿ ಹೆಸರು’ ಅಂತ ಮೂರ ಅಕ್ಷರದ್ದ ಪ್ರಶ್ನೆ ಇತ್ತ. ಹಿರಣ್ಯಕಶಿಪು ಗೊತ್ತ, ಅವನ ಮಗಾ ಪ್ರಲ್ಹಾದ ಗೊತ್ತ, ಆದರ ಅವನ ಹೆಂಡ್ತಿ ಬಗ್ಗೆ ಇಷ್ಟ ದಿವಸ ತಲಿಕೆಡಸಿಗೊಂಡಿದ್ದಿಲ್ಲಾ. ನಾ ಅಡಗಿ ಮನ್ಯಾಗ ಇದ್ದ ನಮ್ಮಕಿಗೆ
’ಲೇ…ಹಿರಣ್ಯಕಶಿಪುವಿನ ಹೆಂಡ್ತಿ ಹೆಸರ ಏನ?’ ಅಂದ ಒದರಿ ಕೇಳಿದೆ. ಅಕಿ ಹತ್ತ ರೂಪಾಯಿ ಆಶಾಕ್ಕ ವಿಚಾರ ಮಾಡ್ಲಿಕತ್ತಿದ್ಲು. ಅತ್ತಲಾಗ ದೇವರ ಮನಿ ಒಳಗಿಂದ ನಮ್ಮವ್ವಾ ಒಮ್ಮಿಕ್ಕಲೇ ’ಪ್ರೇರಣಾ’ ಅಂದ್ಲು. ನಾ ’ಹಾಂ’ ಅಂದೆ. ಹಂಗ ನಮ್ಮವ್ವ ದೇವರ ಮನ್ಯಾಗ ದೀಪ ಹಚ್ಚಲಿಕ್ಕೆ ಕಡ್ಡಿಪೆಟಿಗೆ ಸಿಗವಲ್ತ ಅಂತ ಪ್ರೇರಣಾ ಅಂತ ಒದರಿದ್ಲು, ಅಕಿಗೆ ನಾ ಹಿರಣ್ಯಕಶಿಪುವಿನ ಹೆಂಡ್ತಿ ಯಾರ ಅಂತ ಕೇಳಿದ್ದ ಕೇಳಸಿದ್ದಿಲ್ಲಾ. ಆದರ ನಾ ನಮ್ಮವ್ವ ಇಕಿ ಹಿರಣ್ಯಕಶಿಪುವಿನ ಹೆಂಡ್ತಿ ಹೆಸರ ಪ್ರೇರಣಾ ಅಂತ ಹೇಳಿದ್ಲು ಅಂತ ತಿಳ್ಕೊಂಡೆ. ಅಲ್ಲಾ ಹಂಗ ಅದು ಮೂರ ಅಕ್ಷರದ್ದ ಅಲಾ. ಅದರಾಗ ನಮ್ಮವ್ವ ನನಗ ಮಾತ ಮಾತಿಗೆ ’ನೀ ಏನ ಹಿರಣ್ಯಕಶಿಪು ಇದ್ದಂಗ ಇದ್ದಿ, ನಿಂಗೂ ದೇವರು-ದಿಂಡರು ಅಂದರ ಬ್ಯಾಡಾಗೇದ’ ಅಂತ ಬೈದ ಬೈತಿರ್ತಾಳ. ಅತ್ತಲಾಗ ನನ್ನ ಹೆಂಡ್ತಿಗೆ ಹಿರಣ್ಯಕಶಿಪುವಿನ ಹೆಂಡ್ತಿ ಪ್ರೇರಣಾ ಅಂದಿದ್ದಕ್ಕ ಸಿಟ್ಟ ಬಂದಿತ್ತ. ಆದರ ಯಾವಾಗ ಹಿರಣ್ಯಕಶಿಪು ನಾ ಅಂತ ತಿಳದ ಮ್ಯಾಲೆ ಸುಮ್ಮನಾದ್ಲ ಅನ್ನರಿ. ಕಡಿಕೆ ಹಿರಣ್ಯಕಶಿಪುವಿನ ಹೆಂಡ್ತಿ ಕಯಾಧು ಅಂತ ಗೂಗಲ್ ಸರ್ಚ್ ಮಾಡಿ ತಿಳ್ಕೊಂಡ್ವಿ. ಅಲ್ಲಾ ಹಿರಣ್ಯಕಶಿಪು, ಅವನ ಹೆಂಡತಿ ಹೆಸರು ಕಯಾಧು, ಅವರಿಗೆ ನಾಲ್ಕ ಗಂಡ ಇದ್ವು, ನಾಲ್ಕನೇದಂವಾ ಪ್ರಹ್ಲಾದ. ಮ್ಯಾಲೆ ಒಬ್ಬ ಮಗಳೂ ಇದ್ದಳು. ಇಷ್ಟೇಲ್ಲಾ ಮಾಹಿತಿ ಮುಂಜ-ಮುಂಜಾನೆ ಟೈಮ್ ಪಾಸಿಗೆ ಒಂದ ಪದಾವಳಿ ತುಂಬಲಿಕ್ಕೆ ಹೋಗಿ ಗೊತ್ತಾತ. ಅಲ್ಲಾ ಖರೇ ಹೇಳ್ರಿ, ಬಾಜುಕ ನಿಮ್ಮ ಮನೆಯವರ ಇದ್ದರ ಅವರನ ಮುಟ್ಟಿ ಹೇಳ್ರಿ ಇದನ್ನ ಓದೊಕಿಂತ ಮೊದ್ಲ ಎಷ್ಟ ಮಂದಿಗೆ ಹಿರಣ್ಯಕಶಿಪುವಿನ ಹೆಂಡ್ತಿ ಹೆಸರ ಕಯಾಧು ಅಂತ ಗೊತ್ತ ಇತ್ತ?
ಅದಕ್ಕ ನಾ ಹೇಳಿದ್ದ ಈ ಪದಾವಳಿ, ಪದಬಂಧ ಹಂಗ ಸುಮ್ಮ ಸುಮ್ಮನ ಪೇಪರನಾಗ ಕೊಟ್ಟಿರಂಗಿಲ್ಲಾ. ನಾ ಸಣ್ಣಂವ ಇದ್ದಾಗಿಂದ ನೋಡ್ಲಿಕತ್ತೇನಿ ಇವತ್ತಿಗೂ ನಮ್ಮ ಕನ್ನಡ ಪೇಪರ ಒಳಗ ಪದಾವಳಿ ಬರ್ತಾವ. ಒಂದಿಷ್ಟ ಮಂದಿಗಂತು ಅದನ್ನ ತುಂಬಿನ ಮುಂದ ಬಾಕಿ ಪೇಪರ್ ಓದೊ ಚಟಾ ಇರ್ತದ. ಆದರೂ ಇವತ್ತನೂ ಪದಾವಳಿ ಬರ್ತಾವ, ಜನಾ ಅವನ್ನ ತುಂಬತಾರ ಅನ್ನೋದ ನಮ್ಮ ಕನ್ನಡಕ್ಕ ಖುಷಿ ವಿಷಯ ಅನ್ನರಿ. ಇನ್ನ ವಾಪಸ ನಮ್ಮ ದಂಪತ್ತ್ ಪದಾವಳಿಗೆ ಬರ್ತೇನಿ.
ಮುಂದ ಒಂದ ಸರತೆ ಮೂರ ಅಕ್ಷರದ ಬೆಕ್ಕು ಅಂತ ಪದಾವಳಿ ಇವತ್ತ ಆವಾಗ ನಮ್ಮವ್ವ ಸಿರಿಯಸ್ ಆಗಿ ಪ್ರೇರಣಾ ಅಂದ್ಲು. ನಾ ಅಕಿಗೆ ಯಾಕ ನನ್ನ ಹೆಂಡ್ತಿ ಹಿಂದ ಬೆನ್ನ ಹತ್ತಿ ಅಂದರ.
’ಅಯ್ಯ..ಖರೇನ ಛಂದಾಗಿ ನೋಡ ನಿನ್ನ ಹೆಂಡ್ತಿ ಕಣ್ಣ, ಬೆಕ್ಕಿನ ಕಣ್ಣ ಅಕಿವು, ಅದಕ್ಕ ಹೇಳಿದೇಪಾ…ನೀ ಅಂತೂ ಕನ್ಯಾ ಸಿಕ್ಕ ಕೂಡ್ಲೆ ಕಣ್ಣ ಮುಚಗೊಂಡ ಲಗ್ನಾ ಮಾಡ್ಕೊಂಡಿ ನಿಂಗ ಗೊತ್ತಾಗಿಲ್ಲ’ ಅಂತ ಅಂದ್ಲು. ಪುಣ್ಯಾಕ್ಕ ಈ ಡಿಸ್ಕಶನ್ ಆಗಬೇಕಾರ ನನ್ನ ಹೆಂಡ್ತಿ ಇರಲಿಲ್ಲಾ ಅನ್ನರಿ. ಕಡಿಕೆ ’ ಅವ್ವಾ ನೀ ಸುಮ್ಮನ ಕೂಡ ಅಂದ’ ಮೂರ ಅಕ್ಷರದ ಬೆಕ್ಕು – ಮಾರ್ಜಾಲ ಅಂತ ತುಂಬಿದೆ.
ಒಮ್ಮೆ ಪತಿ, ವಲ್ಲಭ ಅಂತ ಇತ್ತ. ಅದು ಮೂರ ಅಕ್ಷರದ್ದ ಮತ್ತ. ನಮ್ಮಕಿಗೆ ನನ್ನ ಹೆಸರ ಹೇಳಲಿಕ್ಕೆ ಛಾನ್ಸ ಸಿಕ್ಕತ ತಡಿ ಅಂತ ಭಡಕ್ಕನ ಪ್ರಶಾಂತ ಅಂತ ಅಂದ್ಲು. ನಮ್ಮವ್ವಾ
’ಅದೇನ ಗಂಡನ ಹೆಸರ ಹಂಗ ಹೇಳೋದ, ಛಂದಾಗಿ ಒಗಟ ಹಚ್ಚಿ ಹೇಳ’ ಅಂದ್ಲು. ’ಇಲ್ಲೇ ಒಗಟ ಹಚ್ಚಲಿಕ್ಕೆ ಖಾಲಿ ಜಾಗಾ ಇಲ್ಲಾ ಅಂತ ನಮ್ಮಕಿ.
’ಲೇ…ನಮ್ಮನಿ ಪೇಪರನಾಗ ನಿನ್ನ ಗಂಡನ ಹೆಸರ ಓಕೆ…ಉಳದವರ ಯಾಕ ನನ್ನ ಹೆಸರ ಬರಿತಾರ ಅಂದರು ಅಕಿ ತಲ್ಯಾಗ ಹೋಗಲಿಲ್ಲಾ. ಆಮ್ಯಾಲೆ ನಮ್ಮವ್ವನ ಮೂರ ಅಕ್ಷರದ ಪತಿ ಅಂದರ ರಮಣ ಅಂತ ಹೇಳಿದ್ಲು.
’ರಜನೀಶನನ್ನು ಹೀಗೂ ಹೇಳಬಹುದು’ ಅಂತ ಪದಾವಳಿ ಇತ್ತ. ಇಕಿ ಗಬಕ್ಕನ ಓಶೊ ಅಂದ್ಲು. ನಾ ಹಣಿ ಹಣಿ ಬಡ್ಕೊಳೊದ ಬಾಕಿ ಇತ್ತ. ಅಲ್ಲಾ ಹಂಗ ಅದರಾಗ ಅಕಿದೇನ ತಪ್ಪ ಇದ್ದಿದ್ದಿಲ್ಲ ಬಿಡ್ರಿ ಯಾಕಂದರ ನಾ ಲಗ್ನ ಆದ ಹೊಸ್ತಾಗಿ ಓಶೋನ ಬುಕ್ ಭಾಳ ಓದತಿದ್ದೆ. ಲೇ ರಜನೀಶ ಅಂದರ ರಾತ್ರಿ ರಾಜಾ ಅಂತ ತಿಳಿಸಿ ಹೇಳಿದರ…ರಾತ್ರಿ ರಾಜಾ ಅಂದರ ನಿಮ್ಮ ಹೆಸರ ಬರ್ಕೊರಿ ಅಂದ್ಲು. ಏನ ಮಾಡ್ತೀರಿ. ಇರಲಿ ಅದರ ಕರೆಕ್ಟ ಉತ್ತರ ’ಚಂದ್ರಮಾ’. ನಾ ಮುಂದ ಅಕಿಗೆ ಇಲ್ಲ ನೋಡಿಲ್ಲೇ ನೀ ಹುಚ್ಚುಚಾಕಾರ ನಿಂಗ ತಲ್ಯಾಗ ತಿಳದದ್ದ ಹೇಳಬ್ಯಾಡಾ, ನೀ ಬರದಿದ್ದ ಅಕ್ಷರ ಮತ್ತೊಂದು ಪದಕ್ಕ ಎಡದಿಂದ ಬಲಕ್ಕ ಮೇಲಿಂದ ಕೇಳಕ್ಕ ಹೊಂದತಿರಬೇಕ ಅಂತ ತಿಳಿಸಿ ಹೇಳಿದೆ.
ಒಮ್ಮೆ ಅರವತ್ತು ವರ್ಷಗಳು ಪೂರ್ಣಗೊಂಡ ಸಂದರ್ಧದಲ್ಲಿ ಏರ್ಪಡಿಸುವ ಸಮಾರಂಭ (4) ಪದಾವಳಿಗೆ ವರ್ಷಾಂತಕ ಅಂತ ಅಂದ್ಲು. ಏ ನಮ್ಮವ್ವಾ ಅದ ಷಷ್ಟಿಪೂರ್ತಿ ಅಂತ ಹೇಳಿದೆ. ಏನ್ಮಾಡ್ತೀರಿ ಹಿಂತಾವರಿಗೆ?
ಒಂದ ಸರತೆ ಚಟದ ಸಮಾನಾರ್ಥಕ ಪದ ಎರೆಡ ಅಕ್ಷರ ಅಂತ ಇತ್ತ. ಒಂದ ಹೊಡ್ತಕ್ಕ ’ ಆಡ್ಯಾ’ ಅಂದ್ಲು. ನಾ ಆತ್ಮಹತ್ಯೆ ಮಾಡ್ಕೊಳೊದ ಒಂದ ಬಾಕಿ ಇತ್ತ. ಯಾಕ ಅಂತ ಕೇಳಿದರ. ನಿಮಗೇನ ಚಟಾ ಕಡಮಿ ಅವ ಏನ. ನೀವ ಹೇಳ್ತಿರಲಾ, ಆಡ ಮುಟ್ಟಲಾರದ್ದ ತೊಪ್ಪಲ ಇಲ್ಲಾ ಆಡ್ಯಾ ಮಾಡಲಾರದ ಚಟಾ ಇಲ್ಲಾ ಅಂತ ಅದಕ್ಕ ಹೇಳಿದೆ ಅಂದ್ಲು.
ಏ ನಮ್ಮವ್ವಾ ಅದ ಆಡ್ಯಾ ಅಲ್ಲಾ ಗೀಳು ಅಂತ ತಿಳಿಸಿ ಹೇಳಿದೆ.
ಅತ್ಯುತ್ತಮ ಔಷಧಿ, ರೋಗಕ್ಕೆ ಸೂಕ್ತ ಪರಿಹಾರ (4) ಅಂತ ಪದಾವಳಿ ಇತ್ತ. ಅದಕ್ಕ ನಮ್ಮಕಿ ’ಮಧ್ಯಪಾನ’ ಅಂತ ಅಂದ್ಲು. ಏ ರಾಮಬಾಣ ಕರೆಕ್ಟ ಉತ್ತರ, ಏನೇನರ ಹೇಳ್ತಿ ಅಲಾ ಅಂತ ನಾ ಅಂದರ, ನೀವ ಮತ್ತ ’ ಸರ್ವ ರೋಗಕ್ಕೂ ಸರಾಯಿ ಮದ್ದು’ ಅಂತಿರ್ತೀರಿ ಅಂತ ನನಗ ಜೋರ ಮಾಡಿದ್ಲು.
ಹತ್ತು ತಲೆಯ ರಾವಣನ ಒಂದು ಹೆಸರು(4) – ನಮ್ಮಕಿ ದಶರಥ ಅಂದ್ಲು. ಅಲ್ಲೇ ಟಿ.ವಿ ಮುಂದ ಭಗವದ್ಗೀತಾ ಓದ್ಲಿಕತ್ತಿದ್ದ ನಮ್ಮವ್ವಾ ಹಣಿ ಬಡ್ಕೊಂಡ
’ಏ ನಮ್ಮವ್ವಾ….ದಶರಥ ರಾಮನ ಅಪ್ಪ…ಹತ್ತ ತಲಿ ರಾವಣ ಅಂದರ ದಶಕಂಠ’ ಅಂತ ಜೋರ ಮಾಡಿ ನನ್ನ ಮಾರಿ ನೋಡಿದ್ಲು. ಆ ನಮ್ಮವ್ವನ ನೋಟದಾಗ ’ ಅದಕ್ಕ ಹೇಳಿದ್ದ ಮಗನ ಕಲ್ತಕಿನ್ನ ಲಗ್ನಾ ಮಾಡ್ಕೊಬೇಕು’ ಅಂತ ಬರದದ್ದ ಸ್ಪಷ್ಟ ಕಾಣಸ್ತ.
ಒಮ್ಮೆ ಈತ ಚರಣದಾಸ ಅಂತ ಒಂದ ಪದಾವಳಿ ಇತ್ತ. ನಮ್ಮಕಿ ಪತಿರಾಯ ಅಂತ ಬರೀರಿ ಅಂದ್ಲು. ಏ ಅದ ಐದ ಅಕ್ಷರದ್ದ ಅಂದರ ’ಹಿಂದ ಶ್ರೀ ಹಚ್ಗೋರಿ’ ಅಂದ್ಲು. ಮುಂದ ಒಂದ ಸರತೆ ’ತನ್ನ ಇಚ್ಛೆಯಿಂದ ಸೇವೆಮಾಡುವವನು – ತುಂಬಾ ವಿಧೇಯನಾಗಿರುವವನು ಅಂತ ಪದಾವಳಿ ಬಂದಾಗೂ ಶ್ರೀಪತಿರಾಯನ ಉತ್ತರ ಅಂತ ಅಂದ್ಲು. ಹಂಗ ಅಕಿ ಹೇಳಿದ್ದರಾಗ ತಪ್ಪ ಇಲ್ಲ ತೊಗೊ ನಮ್ಮ ಗಂಡಂದರ ಹಣೇಬರಹನ ಇಷ್ಟ ಅಂತ ಸುಮ್ಮನಾದೆ ಅನ್ನರಿ.
ಇರಲಿ ಹಂಗ ಈ ಪದಾವಳಿ ಎಷ್ಟೋ ಮಂದಿ ಟೈಮ್ ಪಾಸ್ ಅಂತ ತಿಳ್ಕೊಂಡ ತುಂಬಿದರು ಅದರಿಂದ ಒಂದ ಸ್ವಲ್ಪ ಬುದ್ಧಿನೂ ಜಾಸ್ತಿ ಆಗ್ತದ ಅನ್ನೋದ ಅಂತೂ ಸುಳ್ಳ ಅಲ್ಲಾ, ಇನ್ನ ಎರೆಡ ದಿವಸಕ್ಕ ನಮ್ಮ ಕರ್ನಾಟಕ ರಾಜ್ಯೋತ್ಸವ ಬರ್ತದ. ನಮ್ಮ ಕನ್ನಡದ ಪದಾವಳಿ ಅವಿರತವಾಗಿ ಬರಲಿ ಅಂತ ಆಶೀಸೋಣ.
ನಿಮಗೇಲ್ಲಾ ಕನ್ನಡ ರಾಜ್ಯೋತ್ಸವ ಶುಭಾಶಯ.
ಭಾಳ ಮಜಾ ಬಂತು. ಮುಂದಿನ ಸರೆ ಬೆಕ್ಕು ಶಬ್ದಕ್ಕ ಮೂರು ಅಕ್ಷರದ ಶಬ್ದ ಬೇಕಾದರ “ಬಿಡಾಲ” ಅಂತ ನೆನಪು ಇಟಗೋ.
ರಾವಣಗ ದಶಕಂಠ ಶಬ್ದ ಕರೆಕ್ಟ್. ಆದರ ಅವನ ಚಿತ್ರದಾಗ ಹತ್ತು ತಲಿ ಕಾಣಿಸ್ತಾವ. ಹತ್ತು ಕುತಿಗಿ ಎಂದೂ ಕಂಡಿಲ್ಲಾ…