ಯಾರರ ನನ್ನ ಗಂಡಗ ದೃಷ್ಟಿ ತಗಿರೇವಾ?

ಮೊನ್ನೆ ರಾತ್ರಿ ಹನ್ನೊಂದುವರಿ- ಹನ್ನೆರಡ ಆಗಿತ್ತ, ಮೊಬೈಲ ರಿಂಗ ಆತ, ರಿಂಗ ಟೋನ್ ನನ್ನ ಹೆಂಡ್ತಿದ, ನಂಗೇನ ಸಂಬಂಧ ಇಲ್ಲಾ ಅಂತ ನಾ ತಲಿ ಕೆಡಸಿಕೊಳ್ಳಲಿಲ್ಲಾ. ಆದರ ಮೊಬೈಲ್ ಕಂಟಿನ್ಯೂ ರಿಂಗ ಆಗಲಿಕತ್ತ. ಸಿಟ್ಟಿಗೆದ್ದ ಗಡದ್ದ ಮಲ್ಕೊಂಡಿದ್ದ ನನ್ನ ಹೆಂಡ್ತಿಗೆ
“ಏ…ಏಳ ನಿಂಗ್ಯಾರೋ ಫೋನ ಮಾಡ್ಯಾರ ..” ಅಂತ ಎಬಿಸಿದೆ. ಅಕಿ ಧಡಕ್ಕನ್ ಎದ್ದ ಫೊನ್ ತೊಗೊಂಡ
“ಹೆಲೋ..ಹಾಂ….ಹೇಳ..ಹೆಂಗ ಇದ್ದಿ….ಅಲ್ಲ ನಡರಾತ್ರ್ಯಾಗ ಫೋನ ಮಾಡಿಯಲ ನಮ್ಮವ್ವ…ಹೌದಾ?..ok..ok. ಏನಾತ ಹೇಳ…ಹೂಂ…ಅದಕ್ಯಾಕ ಅಷ್ಟ ಗಾಬರಿ ಆಗ್ತಿ ತೊಗೊ….ಏ, ಹುಚ್ಚಿ ಹಂಗ ಮಂದಿ ಯಾಕ ನಿನ್ನ ಗಂಡನ ದೃಷ್ಟಿ ತಗಿತಾರ…..ಹೇ..ಹೇ…ನಾನ ಮುಂಜಾನೆ ನಮ್ಮ ಅತ್ತಿನ್ನ ಕೇಳಿ ವಾಟ್ಸಪ್ ಮಾಡ್ತೇನಿ ತೊಗೊ..ಸರಿ..ಸರಿ…” ಅಂತ ಫೋನ ಇಟ್ಟ ಮಲ್ಕೊಂಡ್ಳು.
ನಾ ಇಲ್ಲೆ ಬಾಯಿ ತಕ್ಕೊಂಡ ಯಾರ ಫೋನ ಅಂತ ಕೇಳಲಿಕ್ಕೆ ಕೂತಂವಾ ಹಂಗ ಕೂತಿದ್ದೆ.
“ಏ, ಯಾರದ ಫೋನ ಲೇ ….” ಅಂತ ಮತ್ತ ಎಬಿಸಿ ಕೇಳಿದರ
“ಏ, ನಿಮ್ಮ ದೋಸ್ತ ರಮ್ಯಾನ ಹೆಂಡ್ತಿರಿ. ಅಕಿ ಗಂಡಗ ಮೂರ ದಿವಸಾತ ಊಟ ಹೋಗವಲ್ತಂತ, ಉಂಡರ ವೈಕ್ ವೈಕ್ ಅಂತಾನಂತ, ಎಷ್ಟ ಡಾಕ್ಟರಗೆ ತೊರಿಸಿದರೂ ಆರಾಮ ಆಗವಲ್ತಾಗೇದಂತ ಅದಕ್ಕ ದೃಷ್ಟಿ ಆಗಿರಬೇಕು ಅಂತ ಯಾರೋ ಹೇಳಿದರಂತ, ಇನ್ನ ಅಕಿಗೆ ಹೆಂಗ ದೃಷ್ಟಿ ತಗಿಬೇಕು ಅಂತ ಗೊತ್ತಿಲ್ಲಾ ಅದಕ್ಕ ಯಾರರ ನನ್ನ ಗಂಡಗ ಆನ್ ಲೈನ ಒಳಗ ದೃಷ್ಟಿ ತಗಿರಿ ಅಂತ ಹೇಳಲಿಕ್ಕೆ ಫೋನ ಮಾಡ್ಯಾಳ” ಅಂತ ಹೇಳಿ ಮತ್ತ ಮಲ್ಕೊಂಡ್ಳು.
ನಂಗ ರಮ್ಯಾನ ಹೆಂಡ್ತಿ ತನ್ನ ಗಂಡಗ ದೃಷ್ಟಿ ಹತ್ತಿದರ ಮಂದಿಗೆ ’ಯಾರರ online ಒಳಗ ದೃಷ್ಟಿ ತಗಿರಿ’ ಅಂತ ಕೇಳಲಿಕತ್ತಾಳ ಅಂದದ್ದ ಆಶ್ಚರ್ಯ ಆತ, ಅಲ್ಲಾ ಅದಕ್ಕ ಹೇಳೋದ B.Sc ಕಲ್ತವರನ ಮಾಡ್ಕೊಬಾರದ ಅಂತ, ಒಂದು ಪಾಪ ಅವಕ್ಕ ಏನು ಹಳೇ ಪದ್ಧತಿ- ಸಂಪ್ರದಾಯ ಗೊತ್ತ ಇರಂಗಿಲ್ಲಾ ಇನ್ನೊಂದು ಈ ಸಾಲಿ, ಕೆಲಸ ಎಲ್ಲಾ ಆನ್ ಲೈನ್ ನಡದಾವ ಅಂದರ ದೃಷ್ಟಿನೂ ಆನ್ ಲೈನ್ ತಗಿತಾರ ಅಂತ ತಿಳ್ಕೊಂಡಾಳ.
ಮರದಿವಸ ನನ್ನ ಹೆಂಡತಿ ದೃಷ್ಟಿ ಹತ್ತಿದರ ಏನೇನ ಮಾಡಬೇಕ ಅಂತ ನಮ್ಮವನ್ನ ಕೇಳಿ ಅಕಿಗೆ ವಾಟ್ಸಪ್ ಮಾಡಿದ್ಲು. ನಾ ಹಂಗ ಇಕಿ ಏನೇನ ದೃಷ್ಟಿ ತಗಿಯೋ ಮೆಥಡ್ ಬರದಾಳ ಅಂತ ನೋಡಿದರ, ಅದರಾಗ ’ಮೆಣಸಿನಕಾಯಿ, ಸಾಸ್ವಿ ಬೆಂಕಿಯೊಳಗ ಹಾಕೋದ, ಉಪ್ಪ, ಕಸಬರಗಿ, ಚಪ್ಪಲ್ಲಿಲೇ ..ಅದು ಎಡಗಾಲಿನ ಚಪ್ಪಲ್ಲಿಲೇ ಇಳಸೋದ ಅಂದರ ಮೂರ ಸರತೆ ಮಾರಿಗೆ ನೀವಾಳಿಸಿ ಥೂ..ಥೂ..ಅಂತ ಉಗಳೋದ. ನಮ್ಮ ಉಂಡ ತಾಟ ಒಳಗ ಇನ್ನು ಒಂದ ತುತ್ತ ಇರ್ತ ವಾಟಗದಾಗ ಇದ್ದಲಿ ಕೆಂಡಾ ಮಾಡಿ ಡಬ್ಬ ಹಾಕೋದ. ತಾಯಿ ಸೆರಗಲೇ, ತಾಯಿ ಕೂದಲದಲೇ ನಿವಾಳಸೋದ, ಕಡ್ಡಿಗೆ ಹತ್ತಿ ಸುತ್ತಿ ಅದರ ಗೊಂಬಿ ಮಾಡಿ ಸುಡೋದ’ ಅದು ಇದು ಅಂತ ಬರದಿದ್ಲು.
ಅಲ್ಲಾ, ಆ ರಮ್ಯಾನ ಮನ್ಯಾಗ ಗಂಡಾ ಹೆಂಡ್ತಿ ಇಬ್ಬರ ಇರೋರ, ಅತ್ತಿ ಮಾವಾ ಎಂದೋ ಇಕಿ ದೃಷ್ಟಿ ಹತ್ತಿ ಹೋಗಿ ಬಿಟ್ಟಿದ್ದರು. ಇನ್ನ ಪಾಪ ಅಕಿ ದೃಷ್ಟಿ ತಗಿಯೋದ ಯಾರಿಗೆ ಕೇಳ್ಬೇಕಂತ ಇದ್ದದ್ದರಾಗ ಸಂಪ್ರದಾಯಸ್ತ ಒಂಬತ್ತವಾರಿ ಹೆಣ್ಣಮಗಳ ಅಂದರ ನನ್ನ ಹೆಂಡ್ತಿ ಅಂತ ಇಕಿಗೆ ಫೋನ ಮಾಡಿದ್ಲು. ಅಕಿ ದೃಷ್ಟಿ ಒಳಗ ನಮ್ಮಕಿ ಪ್ರೊಫೆಶನಲ್ ದೃಷ್ಟಿ ತಗಿಯೋಕಿ ಕಂಡಂಗ ಕಂಡ್ಲೋ ಏನೊ?
ನಂಗ ನನ್ನ ಹೆಂಡತಿ ಬರದಿದ್ದನ್ನ ಓದಬೇಕಾರ ನನ್ನ ಮದ್ವಿ ಆದ ಹೋಸ್ತಾಗಿ ನನಗ ದೃಷ್ಟಿ ಹತ್ತಿದ್ದು, ಆವಾಗ ನಮ್ಮವ್ವಾ, ನನ್ನ ಹೆಂಡತಿ ಕೂಡಿ ದೃಷ್ಟಿ ತಗದದ್ದು ಎಲ್ಲಾ ನೆನಪಾತು.
ಅದ ಏನ ಆಗಿತ್ತಂದರ ನಂಗ ಮದುವಿ ಆದ ಹೋಸ್ದಾಗಿ ಊಟನ ಹೋಗ್ತಿದ್ದಿಲ್ಲಾ, ಏನ ತಿಂದರು ವೈಕ್..ವೈಕ್ ಅಂತಿದ್ದೆ. ಎಲ್ಲಾರೂ ’ಏನಪಾ ಲಗ್ನ ಆಗಿ ಒಂದ ತಿಂಗಳಾಗಿಲ್ಲಾ, ನಿಂಗ ಎರಡರಾಗ ಬಿತ್ತೇನ’ ಅಂತ ಕಾಡಸಲಿಕತ್ತರು. ನಮ್ಮವ್ವ ಆವಾಗ ’ನನ್ನ ಕೂಸಿಗೆ ದೃಷ್ಟಿ ಹತ್ತೇದ’ ಅಂತ ಪಾಪ ವಾರಾನ ಗಟ್ಟಲೇ ನನ್ನ ದೃಷ್ಟಿ ತಗದಿದ್ದ ತಗದಿದ್ದ.
ಹಂಗ ನನ್ನ ಹೆಂಡತಿಗೆ ಆ ಪರಿ ದೃಷ್ಟಿ ತೆಗೆಯೋದ ಗೊತ್ತ ಇದ್ದಿದ್ದಿಲ್ಲಾ ಹಿಂಗಾಗಿ ಅಕಿ ನಮ್ಮವ್ವನ ಜೊತಿ ಅಸಿಸ್ಟಂಟ್ ದೃಷ್ಟಿ ತಗಿಯೋಕಿ ಆಗಿ ಮುಂದ ಬಂದ ನಿಲ್ಲೋಕಿ. ನಂಗರ ನಮ್ಮವ್ವ ಕೈಯಾಗ ಕಸಬರಗಿ ಹಿಡಕೊಂಡ ನಿಂತಾಗ ಹೆಂಡತಿ ಎದರಿಗೆ ನಿಂತರ ಒಂಥರಾ ಆಗ್ತಿತ್ತ, ನಾ
” ಏ, ನೀ ಸೈಡಿಗೆ ಸರಿ,..ಎಲ್ಲೇರ ನಂಗ ನಿಂದ ದೃಷ್ಟಿ ಹತ್ತಿ ಗಿತ್ತತ್ತ’ ಅಂತಿದ್ದೆ. ಅಕಿ
“ಅಯ್ಯ…ಏನ ಭಾಳ ದೃಷ್ಟಿ ಹತ್ತೋಹಂಗ ಇದ್ದೀರಿ ಬಿಡ್ರಿ…ನೋಡ್ಲಿಕ್ಕೆ ನೀವ ದೃಷ್ಟಿ ಗೊಂಬಿ ಇದ್ದಂಗ ಇದ್ದೀರಿ’ ಅಂತ ನಂಗ ಅಸಂಯ್ಯ ಮಾಡ್ತಿದ್ಲು.
ಅದನ್ನ ಕೇಳಿ ನಮ್ಮವ್ವನ ಹೆತ್ತ ಕರಳಿಗೆ ತಡ್ಕೋಳಿಕ್ಕೆ ಆಗ್ತಿದ್ದಿಲ್ಲಾ. ಅಕಿ
“ಯಾಕವಾ..ನನ್ನ ಮಗಗ ಹಂತಾದೇನಾಗೇದ. ಅವಂಗ ದೃಷ್ಟಿ ಹತ್ತಬಾರದಂತ ನಿನ್ನ ಅವನ್ನ ಕೊರಳಿಗೆ ಕಟ್ಟಿದ್ದ” ಅಂತಿದ್ಲು. ತೊಗೊ ಆಮ್ಯಾಲೆ ಅತ್ತಿ-ಸೊಸಿದ ಚಲೂ.
ಪಾಪ ನಮ್ಮವ್ವ ಒಂದೊಂದ ದಿವಸ ಒಂದೊಂದ ಥರಾ ದೃಷ್ಟಿ ತಗಿಯೋಕಿ. ಹಂಗ ಅಕಿ ಎರಡ ಮೂರ ದಿವಸ ದೃಷ್ಟಿ ತಗದರೂ ನಂದೇನ ಬಯಕಿ ನಿಲ್ಲಲಿಲ್ಲಾ ಅಂದಕೂಡಲೇ ನನ್ನ ಹೆಂಡ್ತಿ ತಾನ ಒಂದ ಉದಿನಕಡ್ದಿ ಕಡ್ಡಿ ತೊಗೊಂಡ ಅದಕ್ಕ ಹತ್ತಿ ಸಿಗಲಿಲ್ಲಾ ಅಂತ ಕಾಟನ್ ವೇಸ್ಟ ಸುತ್ತಿ ಗೊಂಬಿ ಮಾಡಿ ಸುಡಲಿಕ್ಕೆ ಹತ್ತಿದ್ಲು. ಅದನ್ನ ನೋಡಿ ನಮ್ಮವ್ವ
’ಏ, ಒಂದ ಸ್ವಲ್ಪ ಕಡ್ಡಿನರ ದಪ್ಪಂದ ತೊಗೊ’ ಅಂದರ
’ಅಯ್ಯ.. ನಿಮ್ಮ ಮಗಾ ಇರೋದ ಕಡ್ಡಿ ಪೈಲ್ವಾನ ತೊಗೊರಿ, ಅವರಷ್ಟ ದಪ್ಪನಿ ಕಡ್ದಿನ ತೊಗೊಂಡೇನಿ ಸುಮ್ಮನಿರ್ರಿ’ ಅಂತ ನಮ್ಮವ್ವಗ ಜೋರ ಮಾಡಿದ್ಲು.
ಇಷ್ಟೇಲ್ಲಾ ಮಾಡಿದರು ನನಗೇನ ವೈಕ್ ವೈಕ್ ಕಡಮಿ ಆಗಲಿಲ್ಲಾ, ಕಡಿಕೆ ನಮ್ಮಕಿ ತಲಿ ಕೆಟ್ಟ
“ಅಲ್ಲಾ ಒಂದ ಸಲಾ ಸ್ಕ್ಯಾನಿಂಗ ಮಾಡಸ್ತಿರೇನ ನೋಡ್ರಿ” ಅಂತ ಅಂದ್ಲು.
“ಲೇ…ಹುಚ್ಚಿ ದೃಷ್ಟಿ ಹತ್ತಿದರ ದೇಹದ ಯಾ ಪಾರ್ಟ ಸ್ಕ್ಯಾನ ಮಾಡಸಬೇಕ? ಸುಮ್ಮನ ಕೂಡ” ಅಂತ ಬೈದೆ.
ಅಲ್ಲಾ, ಲಗ್ನಾಗಿ ದೀಡ ತಿಂಗಳಾಗಿಲ್ಲಾ, ನಾ ಸ್ಕ್ಯಾನಿಂಗಗೆ ಹೋದರ ಜನಾ ಏನ ತಿಳ್ಕೊತಾರರಿ?
ಇತ್ತಲಾಗ ನಮ್ಮವ್ವ, ನನ್ನ ಹೆಂಡ್ತಿದ ದಿವಸಾ ಒಂದಿಲ್ಲಾ ಒಂದ ದೃಷ್ಟಿ ತಗಿಯೋದ ನಡದಿತ್ತ, ಅಗದಿ ದೃಷ್ಟಿ ಹತ್ತೊಷ್ಟ ದೃಷ್ಟಿ ತಗದರ ಬಿಡ್ರಿ ಪಾಪ. ಹಂಗ ಚಪ್ಪಲ್ಲಿಲೇ, ಕಸಬರಗಿಲೇ ನಮ್ಮವ್ವನ ಕಡೆ ದೃಷ್ಟಿ ತಗಿಸಿಗೊಬೇಕಾರ ಏನ ಅನಸಂಗಿಲ್ಲಾ ಆದರ ಅದ ಹೆಂಡ್ತಿ ಎದರಿಗೆ ಕಸಬರಗಿ, ಚಪ್ಪಲ್ ಹಿಡಕೊಂಡ ನಿಂತರ ಹೆಂಗ ಅನಸಂಗಿಲ್ಲಾ? ಅದರಾಗ ನಂಬದ ಹೊಸ್ದಾಗಿ ಲಗ್ನಾ, ಏನಿಲ್ಲದ ಆಜು ಬಾಜು ಮನಿಯವರ ನಮ್ಮನಿ ಖಿಡಕ್ಯಾಗ ಕಣ್ಣ ಹಾಕೋರ ಇನ್ನ ಅವರ ಕಣ್ಣಿಗೆ ಇಕಿ ಹಿಂಗ ಕಸಬರಗಿ, ಚಪ್ಪಲ್ ಹಿಡಕೊಂಡ ನನ್ನ ಮುಂದ ನಿಂತಿದ್ದ ಕಂಡರ ಮುಗದಹೋತ. ಇಡಿ ಓಣಿ ಎಲ್ಲಾ ಟ್ರೆಂಡ್ ಆಗೋ ಆಟ.
ಕಡಿಕೆ ನಾ ತಲಿಕೆಟ್ಟ ಇದ ದೃಷ್ಟಿ-ಗಿಷ್ಟಿ ಏನಲ್ಲ ತಡಿ ಅಂತ ಸೀದಾ ಹೆಂಡ್ತಿನ್ನ ಕರಕೊಂಡ ಬೈಕೋಡಿ ಡಾಕ್ಟರ ಕಡೆ ಹೋದೆ. ಅವರು ನನ್ನ ಕಥಿ ಕೇಳಿ
’ಏನಿಲ್ಲಾ ನಿಮಗ anxiety related ಅಸಿಡಿಟಿ ಆಗೇದ ಏನ ಚಿಂತಿ ಮಾಡಬ್ಯಾಡ್ರಿ’ ಅಂತ ಇಂಜೆಕ್ಷನ್ ಮಾಡಿ ನನ್ನ ಹೆಂಡತಿಗೆ ತಮ್ಮ ಕಿಸೆದಾಗಿಂದ ತಮ್ಮ ಹೆಂಡ್ತಿ ಕಾರ್ಡ ಕೊಟ್ಟ
“ನಿಮಗೇನರ ವೈಕ್ ….ವೈಕ್..ಅನಿಸಿ ಊಟ ಸೇರಲಾರದಂಗ ಆದರ ನಮ್ಮ ಮನೇಯವರ ಕಡೆ ಬರ್ರಿ..ನಮ್ಮ ಮನೇಯವರ ಗೈನಾಕೊಲೊಜಿಸ್ಟ” ಅಂತ ಹೇಳಿ ಕಳಸಿದರು.
ಹಂಗ ನಂಗ ಆವಾಗ ಆಗಿದ್ದ ಅಸಿಡಿಟಿ. ನಂಗ ಮೊದ್ಲಿಂದ anxiety related acidity ಪ್ರಾಬ್ಲೇಮ್… ಅದರಾಗ ಹೊಸ್ತಾಗಿ ಲಗ್ನಾ, ಮ್ಯಾಲೆ ಒಂದನೇದ, ಹೊಸಾ ಹೆಂಡ್ತಿ ಹಿಂಗಾಗಿ anxiety ಸಹಜ.
ಮುಂದ ಒಂದ ಎರಡ ದಿವಸಕ್ಕ ನಂದ ವೈಕ್..ವೈಕ್ ಕಡಮಿ ಆತ ಆದರ ಆಮ್ಯಾಲೆ ಎರಡ ತಿಂಗಳಿಗೆ ಆ ಡಾಕ್ಟರ ಅಡ್ಡಬಾಯಿ ಹಾಕಿದಂಗ ನನ್ನ ಹೆಂಡತಿಗೆ ಸ್ಟಾರ್ಟ ಆತ ಆ ಮಾತ ಬ್ಯಾರೆ.
ಹಂಗ ಇವತ್ತಿಗೆ ನಮ್ಮಿಬ್ಬರದೂ ಲಗ್ನ ಆಗಿ ಕರೆಕ್ಟ ೨೦ ವರ್ಷ ಆತ. ಈ ಇಪ್ಪತ್ತ ವರ್ಷ ಅಗದಿ ದೃಷ್ಟಿ ಹತ್ತೊಹಂಗ ನನ್ನ ಹೆಂಡ್ತಿ ಸಂಸಾರ ಮಾಡ್ಯಾಳ ಬಿಡ್ರಿ ಸುಳ್ಳ ಯಾಕ ಹೇಳ್ಬೇಕ.
ಇನ್ನ ನನ್ನ ಇಪ್ಪತ್ತ ವರ್ಷದ ಅನುಭವ ಏನಿಲ್ಲಾಂದರು ಒಂದ ಎರಡನೂರ ಪ್ರಹಸನದಾಗ ಬರದೇನಿ ಮ್ಯಾಲೆ ಈ ವರ್ಷದ ಅನಿವರ್ಸರಿ, ಈ ಆರ್ಟಿಕಲ್ ಎರಡೂ ಅಕಿಗೆ ಡೆಡಿಕೇಟ್ ಮಾಡೇನಿ.
ಇನ್ನ ನಿಂಬದೇಲ್ಲಾ ಆಶೀರ್ವಾದ, ಶುಭಾಶಯ ಇದ್ದರ ಇದ ಹಿಂಗ ಕಂಟಿನ್ಯೂ ಆಗಕೋತ ಇರತದ, ನನ್ನ ಅನುಭವ ನೀವ ಓದ್ಕೋತ ಇರ್ತಿರಿ ಅಂತ ಅನ್ಕೊಂಡೇನಿ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ